Wednesday, 17 April, 2024

“ನಡುಬಳಸಿ ಹಿಡಿದು ನಿಮ್ಮ ಜೀವ ಉಳಿಸಿದ ನಿಲ್ಸ್ ಬೋಹ್ಲಿನ್”

Share post

ಜಗತ್ತಿನಲ್ಲಿ ಬೇರೆಯವರ ಜೀವ ಉಳಿಸಿದವರ ಲೆಕ್ಕ ಹಾಕಿದರೆ, ಅತೀ ಹೆಚ್ಚು ಜೀವಗಳನ್ನುಳಿಸಿದ ಮಹಾನುಭಾವ ಯಾರಿರಬಹುದು? ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಷ್ಟವೇ. ಯಾಕೆಂದರೆ ಮಾನವ ಇತಿಹಾಸದಲ್ಲಿ ಬೇರೆ ಬೇರೆ ವ್ಯಕ್ತಿಗಳು ತಮ್ಮದೇ ಆದ ರೀತಿಯಲ್ಲಿ ನೂರಾರು ಜೀವಗಳನ್ನು ಉಳಿಸಿ, ಮನುಕುಲದ ಉಳಿವಿಗೆ ಹಾಗೂ ಮುನ್ನಡೆಗೆ ಕಾರಣರಾಗಿದ್ದಾರೆ.

ಮೈಕೇಲ್ ಹೊಲ್ಲಾರ್ಡ್ ಎಂಬ ಫ್ರೆಂಚ್ ಗೂಡಾಚಾರಿ, ಜರ್ಮನ್ನರು ಅತೀರಹಸ್ಯವಾದ ಜಾಗಗಳಲ್ಲಿ ಉಡಾವಣಾವೇದಿಕೆಗಳನ್ನು ರಚಿಸಿ, ತಮ್ಮ ಭಯಾನಕ V1 ರಾಕೆಟ್ಟುಗಳನ್ನು ಲಂಡನ್ನಿನೆಡೆಗೆ ಮುಖಮಾಡಿಸಿ ನಿಲ್ಲಿಸಿದ್ದನ್ನು ಕಂಡುಹಿಡಿದು ಮಿತ್ರರಾಷ್ಟ್ರಗಳಿಗೆ ತಿಳಿಸಿದ್ದರಿಂದ, ಸುಮಾರು 10 ಲಕ್ಷ ಲಂಡನ್ ವಾಸಿಗಳ ಜೀವವುಳಿದು, ಹೊಲ್ಲಾರ್ಡನಿಗೆ “ಲಂಡನ್ನನ್ನು ರಕ್ಷಿಸಿದವ” ಎಂಬ ಗೌರವ ಕೊಡಲಾಯ್ತು. ಜೇಮ್ಸ್ ಹ್ಯಾರಿಸನ್ ಎಂಬ ಆಸ್ಟ್ರೇಲಿಯಾದ ಪ್ರಜೆಯ ರಕ್ತದಲ್ಲಿ Rho(D) ಇಮ್ಯುನೋ ಗ್ಲೋಬುಲಿನ್ (ರೋಗನಿರೋಧಕ ಶಕ್ತಿಯನ್ನು ದೃಡಪಡಿಸುವ, ರಕ್ತದ ಒಂದು ಘಟಕ) ಎಂಬ antibody ಮೂಲಸ್ವರೂಪದಲ್ಲಿ ಲಭ್ಯವಿತ್ತು. ಇದುವರೆಗೂ ಒಂದು ಸಾವಿರಕ್ಕಿಂತಾ ಹೆಚ್ಚು ಬಾರಿ ರಕ್ತದಾನ ಮಾಡಿ ಜೇಮ್ಸ್ ಜಗತ್ತಿನಾದ್ಯಂತ ಇಪ್ಪತ್ತು ಮಿಲಿಯನ್ನಿಗೂ ಹೆಚ್ಚು ಹಸುಗೂಸುಗಳ ಜೀವ ಉಳಿಸಿದ್ದಾನೆ. ಪೆನಿಸಿಲಿನ್ ಕಂಡುಹಿಡಿದ ಅಲೆಕ್ಸಾಂಡರ್ ಫ್ಲೆಮಿಂಗ್ ಹೆಸರು ಯಾರು ತಾನೇ ಮರೆಯಲು ಸಾಧ್ಯ. ಅತೀ ಹೆಚ್ಚು ಜನರ ಜೀವವುಳಿಸಿದ ಪಟ್ಟಿಯಲ್ಲಿ ಅವರ ಹೆಸರು ಇರಲೇಬೇಕು. ದಡಾರ, ಮಂಪ್ಸ್, ಹೆಪಟೈಟಿಸ್ ಎ ಮತ್ತು ಬಿ, ಸಿಡುಬು, ಮೆನಿಂಜೈಟಿಸ್, ನ್ಯುಮೋನಿಯಾ ಮತ್ತು ಹೆಮೋಫಿಲಸ್ ಇನ್ಫ್ಲುಯೆಂಜಾ ಮುಂತಾದ 40ಕ್ಕೂ ಹೆಚ್ಚು ಖಾಯಿಲೆಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ಅಮೆರಿಕಾದ ಸೂಕ್ಷ್ಮಜೀವಶಾಸ್ತ್ರಜ್ಞ ಮಾರಿಸ್ ಹಿಲ್ಮನ್ ಕೂಡಾ ಮನುಕುಲದ ಪ್ರಥಮವಂದಿತರಲ್ಲೊಬ್ಬರಾಗಬೇಕು. 20ನೇ ಶತಮಾನದಲ್ಲಿ ವೈದ್ಯಕೀಯವಿಜ್ಞಾನದ ಮೂಲಕ ಹೆಚ್ಚಿನ ಜೀವಗಳನ್ನು ಉಳಿಸಿದ ಕೀರ್ತಿ ಹಿಲ್ಮನ್‌ಗೆ ಸಲ್ಲುತ್ತದೆ.

ಆದರೆ ಎಲ್ಲರಿಗಿಂತ ಹೆಚ್ಚು ಮಾನವಜೀವಗಳನ್ನು ಉಳಿಸಿದ ವ್ಯಕ್ತಿ ನಾರ್ಮನ್ ಬೊರ್ಲಾಗ್ ಎಂದು ಹೇಳಲಾಗುತ್ತದೆ. ಮನುಕುಲಕ್ಕೆ ಅವರ ಕೊಡುಗೆ ಏನೆಂದು ಕೇಳುತ್ತೀರಾ? ಬೊರ್ಲಾಗ್ ತನ್ನ ಪ್ರಯೋಗಗಳಿಂದ 1950 ಮತ್ತು 60ರ ದಶಕದಲ್ಲಿ ಕೃಷಿಉತ್ಪಾದಕತೆಯಲ್ಲಿ ಅಗಾಧರೀತಿಯ ಸುಧಾರಣೆ ತಂದು ಅದನ್ನು ಜಗತ್ತಿನಾದ್ಯಂತ ಹರಡಿ ಹಸಿರು ಕ್ರಾಂತಿಯ ಪಿತಾಮಹ ಎನಿಸಿಕೊಂಡರು. ಹೀಗೆ ಜಗತ್ತಿನ ಕೋಟ್ಯಾಂತರ ಜನರ ಹಸಿವೆ ನೀಗಿಸಿದ ಹಾಗೂ ಹಸಿವಿನಿಂದ ಸಾಯುವುದನ್ನು ತಪ್ಪಿಸಿದ್ದರಿಂದ ಅವರನ್ನು ‘ಅತೀ ಹೆಚ್ಚು ಜನರ ಜೀವವುಳಿಸಿದ ವ್ಯಕ್ತಿ’ ಎನ್ನಲಾಗುತ್ತದೆ. ಈ ಸಾಧನೆಗೆ 1970ರಲ್ಲಿ ಬೊರ್ಲಾಗ್ ನೊಬೆಲ್ ಶಾಂತಿಪ್ರಶಸ್ತಿಯನ್ನೂ ಪಡೆದರು.

ಎಲ್ಲೂ ಹೆಸರೇ ಹೇಳಿಕೊಳ್ಳದೇ, ತನ್ನ ಆವಿಷ್ಕಾರವನ್ನು ಹಣಕ್ಕಾಗಿ ಮಾರಿಕೊಳ್ಳದೇ, ವರ್ಷಕ್ಕೆ ಲಕ್ಷಾಂತರ ಜನರ ಜೀವಉಳಿಸುತ್ತಿರುವ ಪುಣ್ಯಾತ್ಮನ ಬಗ್ಗೆ ನಿಮಗೆ ಗೊತ್ತಿದೆಯೇ? ಜಗತ್ತಿನಾದ್ಯಂತ ವರ್ಷಕ್ಕೆ ಅದೆಷ್ಟೋ ಲಕ್ಷ ಗಂಭೀರ ರಸ್ತೆ ಅಪಘಾತಗಳು ನಡೆಯುತ್ತವೆ. ಅದರಲ್ಲಿ ಜೀವಕಳೆದುಕೊಂಡವರಲ್ಲಿ 60%ಕ್ಕೂ ಹೆಚ್ಚಿನಜನ ಸೀಟ್-ಬೆಲ್ಟ್ ಧರಿಸಿರುವುದಿಲ್ಲ. ಒಂದುವೇಳೆ ಇವರುಗಳು ಸೀಟ್-ಬೆಲ್ಟ್ ಧರಿಸಿದ್ದಿದ್ದರೆ ಅವರ ಜೀವ ಉಳಿಯುತ್ತಿತ್ತು ಎಂದು ಅಂಕಿಅಂಶಗಳು ಹೇಳುತ್ತವೆ. ಮಾತ್ರವಲ್ಲ, ಈ ರಸ್ತೆಅಪಘಾತಗಳಲ್ಲಿ ಬದುಕುಳಿದವರನ್ನು ಪ್ರಶ್ನಿಸಿದಾಗ ಅವರೆಲ್ಲರೂ ಹೇಳಿದ್ದು “ನಾನು ಸೀಟ್-ಬೆಲ್ಟ್ ಧರಿಸಿದ್ದರಿಂದಲೇ ಇವತ್ತು ಬದುಕಿರುವುದು” ಅಂತಾ. ಇಂದಿನ ಕಾರುಗಳನ್ನು ಬಳಸಲಾಗುವ Three Point Seatbelt ಕಾರು ಅಪಘಾತದ ಸಮಯದಲ್ಲಿ ಸಾವು ಮತ್ತು ನೋವುಗಳನ್ನು ತಡೆಗಟ್ಟುವ ಮೂಲಕ ಜಗತ್ತನ್ನು ಆಮೂಲಾಗ್ರವಾಗಿ ಬದಲಾಯಿಸಿತು. ಅಮೇರಿಕದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಮಂಡಳಿ ಈ ಸೀಟ್-ಬೆಲ್ಟ್ ಕೇವಲ ಅಮೇರಿಕದಲ್ಲೇ ವರ್ಷಕ್ಕೆ ಕನಿಷ್ಟ 15,000 ಜೀವಗಳನ್ನು ಉಳಿಸುತ್ತದೆ ಎಂದು ಹೇಳುತ್ತದೆ. ಇದರ ವಿನ್ಯಾಸಕಾರನಾದ ನಿಲ್ಸ್ ಬೋಹ್ಲಿನ್, ಆಧುನಿಕ ಜಗತ್ತಿನಲ್ಲಿ ಅತೀಹೆಚ್ಚು ಜೀವಗಳನ್ನುಳಿಸಿದ ಸಾಧಕರ ಪಟ್ಟಿಯಲ್ಲಿ ಇರಲೇಬೇಕಾದ ಹೆಸರು.

1958ರವರೆಗೆ ಕಾರುಗಳಲ್ಲಿ ಕೇವಲ ಸೊಂಟವನ್ನು ಬಳಸಿಹಿಡಿಯುವ ಟೂ ಪಾಯಿಂಟ್ ಸೀಟ್-ಬೆಲ್ಟ್’ಗಳಿದ್ದವು. ಇದು ಚಾಲಕನನ್ನು ಹಿಡಿದಿಡುತ್ತಿತ್ತಾದರೂ, ಆತನ ತಲೆಯನ್ನು ಮುಂದಿನ ಗಾಜಿಗೆ ಬಡಿಯದಿರುವಂತೆ ತಡೆಯುವಲ್ಲಿ ವಿಫಲವಾಗುತ್ತಿತ್ತು. 1959ರಲ್ಲಿ ವೋಲ್ವೋ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನಿಲ್ಸ್ ಬೋಹ್ಲಿನ್ ಈ ಸೀಟ್-ಬೆಲ್ಟ್ ವಿನ್ಯಾಸದಲ್ಲಿ ಸಣ್ಣದೊಂದು ಬದಲಾವಣೆ ತಂದು V ಆಕಾರದ ತ್ರೀ-ಪಾಯಿಂಟ್ ಸೇಫ್ಟಿ ಬೆಲ್ಟ್ ಅನ್ನು ಕಂಡುಹಿಡಿದ. ಅಂದಿನಿಂದ ಇಂದಿನವರೆಗೆ, ಬೋಹ್ಲಿನ್‌ನ ಬೆಲ್ಟ್ ಹಲವುಲಕ್ಷ ಜೀವಗಳನ್ನು ಉಳಿಸಿದೆ ಮತ್ತು ಅನೇಕ ಮಿಲಿಯನ್‌ಗಲೇ ಅಪಘಾತಗಳಲ್ಲಿ ಗಾಯಗಳ ತೀವ್ರತೆಯನ್ನು ಕಡಿಮೆ ಮಾಡಿದೆ. ಮೋಟಾರುಕಾರಿನ 120 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸುರಕ್ಷತಾ ಸಾಧನವಾಗಿ ಈ ಥ್ರೀ ಪಾಯಿಂಟ್ ಸೀಟ್-ಬೆಲ್ಟ್ ಗುರುತಿಸಲ್ಪಟ್ಟಿದೆ. ಜರ್ಮನ್ ಪೇಟೆಂಟ್ ರಿಜಿಸ್ಟರ್ 1885ರಿಂದ 1985ರ ನಡುವೆ, ಮಾನವಜೀವನವನ್ನು ಉತ್ತಮಗೊಳಿಸಿದ ಎಂಟು ಪೇಟೆಂಟುಗಳಲ್ಲಿ ಬೋಹ್ಲಿನ್’ನ ಸೀಟ್-ಬೆಲ್ಟ್ ಅನ್ನೂ ಗುರುತಿಸಿದ್ದಾರೆ. ಬೋಹ್ಲಿನ್ ಈ ಗೌರವವನ್ನು ಬೆಂಜ್, ಎಡಿಸನ್ ಮತ್ತು ಡೀಸೆಲ್ ಮುಂತಾದ ದಿಗ್ಗಜರೊಂದಿಗೆ ಹಂಚಿಕೊಂಡಿದ್ದಾರೆ.

ಎಂಜಿನಿಯರ್ ನಿಲ್ಸ್ ಇವಾರ್ ಬೋಹ್ಲಿನ್ 1920ರಲ್ಲಿ ಸ್ವೀಡನ್ನಿನ ಹರ್ನ್ಯೂಸಾಂಡ್’ಎಂಬಲ್ಲಿ ಜನಿಸಿದ. ತನ್ನ ವೃತ್ತಿಜೀವನವನ್ನು 1942ರಲ್ಲಿ Svenska Aeroplan Aktiebolaget (SAAB) ಕಂಪನಿಯಲ್ಲಿ ವಿಮಾನದ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ. 1955ರಲ್ಲಿ ಪೈಲಟ್ಟುಗಳನ್ನು ಅಪಾಯದ ಸಂದರ್ಭಗಳಲ್ಲಿ ವಿಮಾನದಿಂದ ಹೊರಗೆಸೆಯಬಲ್ಲ ಕವಣೆ ಆಸನಗಳ ಅಭಿವೃದ್ಧಿ ಮತ್ತಿತರ ಸುರಕ್ಷತಾ ಸಾಧನಗಳಿಗೆ ಆತನನ್ನು ಜವಾಬ್ದಾರನನ್ನಾಗಿ ಮಾಡಲಾಯಿತು. ವಿಪರ್ಯಾಸವೆಂದರೆ, ಬೋಲಿನ್’ನ ಆಸಕ್ತಿ ಮನುಷ್ಯರನ್ನು ಹೊರಗೆಸೆಯುವುದಕ್ಕಿಂತಾ ಸಾಧ್ಯವಾದಷ್ಟೂ ಒಳಗಡೆಯೇ ಸುರಕ್ಷಿತವಾಗಿರಿಸಿಕೊಳ್ಳುವುದರಲ್ಲಿತ್ತು. ಇದರಿಂದಾಗಿ SAAB ಕಂಪನಿಯ ಕಾರುಗಳ ನಿರ್ಮಾಣವಿಭಾಗದಲ್ಲಿ ಸ್ವಲ್ಪ ಸಮಯ ತನ್ನ ಆಲೋಚನೆಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಪಡೆದ. 1958ರಲ್ಲಿ ಬೋಹ್ಲಿನ್’ನನ್ನು ಸಮ್ಮೇಳನವೊಂದರಲ್ಲಿ ಭೇಟಿಮಾಡಿದ ವೋಲ್ವೋದ ಅಂದಿನ ಅಧ್ಯಕ್ಷ ಗುನ್ನಾರ್ ಎಂಗೆಲ್ಲೌ, ತಮ್ಮಕಂಪನಿಯ ಸುರಕ್ಷತಾ ಎಂಜಿನಿಯರ್ ಆಗಿ ನೇಮಕ ಮಾಡಿಕೊಂಡರು.

1950ರ ದಶಕದ ಉತ್ತರಾರ್ಧದಲ್ಲಿ, ವೋಲ್ವೋ ತನ್ನ ಕಾರಿನ ಚಾಲಕರನ್ನು ಅಪಘಾತದ ಸಮಯದಲ್ಲಿ ರಕ್ಷಿಸಲು ಹಲವಾರು ಸುರಕ್ಷತಾ ಪರಿಹಾರಗಳನ್ನು ಅಭಿವೃದ್ಧಿಪಡಿಸಿತ್ತು. ಅಪಘಾತದ ಪರಿಣಾಮಗಳ ತೀವ್ರತೆಯನ್ನು ಕಡಿಮೆ ಮಾಡುವುದಕ್ಕಾಗಿ ತನ್ನ ಕಾರುಗಳಲ್ಲಿ ಕೊಲ್ಯಾಪ್ಸಬಲ್ ಸ್ಟೀರಿಂಗ್ ಕಾಲಮ್, ಚಾಲಕನ ಮುಂದಿರುವ ಡ್ಯಾಶ್‌ಬೋರ್ಡ್’ಗೆ ಅರೆಮೆದುವಾದ ಪ್ಯಾಡಿಂಗ್ ಮತ್ತು ಮುಂದಿನ ಆಸನಗಳಲ್ಲಿ ಹೆಗಲಿನಿಂದ ಸೊಂಟದೆಡೆಗೆ ಬರುವಂತ ಡಯಾಗನಲ್ ಟೂ-ಪಾಯಿಂಟ್ ಬೆಲ್ಟ್‌ಮುಂತಾದ ಆಧುನಿಕ ಆಲೋಚನೆಗಳನ್ನು ಜಾರಿಗೆ ತಂದಿತ್ತು ಹಾಗೂ ತನ್ನೆಲ್ಲಾ ಕಾರುಗಳಲ್ಲಿ ಈ ಸಾಧನಗಳನ್ನು ಕಡ್ಡಾಯಗೊಳಿಸಿತ್ತು. ಆದರೂ ಕಂಪನಿಯ ಅಧ್ಯಕ್ಷರಿಗೆ ಈ ಡಯಾಗನಲ್ ಬೆಲ್ಟ್ ಬಗ್ಗೆ ಸಂಪೂರ್ಣ ತೃಪ್ತಿಯಿರಲಿಲ್ಲ. ಕಾರಣ, ಈ ಬೆಲ್ಟಿನ ಬಕಲ್ ಅನ್ನು ಚಾಲಕನ ಪಕ್ಕೆಲುಬಿನ ಎತ್ತರದಲ್ಲಿ ಇರಿಸಲಾಗಿತ್ತು. ಈ ವಿನ್ಯಾಸ ದೇಹದ ಮೃದು ಅಂಗಗಳನ್ನು ರಕ್ಷಿಸುವ ಬದಲು ಹಾನಿಗೊಳಿಸುತ್ತಿತ್ತು. ವೋಲ್ವೋ ಅಧ್ಯಕ್ಷ ಎಂಗೆಲ್ಲೌ ಅವರ ಕುಟುಂಬದಲ್ಲೇ ರಸ್ತೆ ಅಪಘಾತಗಳಿಂದ ಮರಣಹೊಂದಿದ ಹಲವಾರು ನೋವಿನಕಥೆಗಳಿದ್ದದ್ದರಿಂದ ಅದೂ ಸಹ ಎರಡು-ಪಾಯಿಂಟ್ ಬೆಲ್ಟ್ನಲ್ಲಿನ ನ್ಯೂನತೆಗಳಿಂದಾಗಿಯೇ ಸಂಬಂಧಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ, ಬೊಹ್ಲಿನ್’ಗೆ ಇದಕ್ಕೊಂದು ಉತ್ತಮ ಪರ್ಯಾಯವನ್ನು ಅಭಿವೃದ್ಧಿಪಡಿಸಲು ಆದೇಶ ನೀಡಿದರು.

ದೇಹದ ಮೇಲಿನ ಮತ್ತು ಕೆಳಗಿನ ಭಾಗಗಳನ್ನು ಸಮವಾಗಿ ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂಬ ದೃಷ್ಟಿಕೋನದಿಂದ ಕೆಲಸ ಪ್ರಾರಂಭಿಸಿದ ಬೋಹ್ಲಿನ್ ಶೀಘ್ರದಲ್ಲೇ, ಒಂದು ಬೆಲ್ಟ್ ಎದೆಯ ಉದ್ದಕ್ಕೂ ಮತ್ತು ಇನ್ನೊಂದು ಸೊಂಟಕ್ಕೂ ಅಡ್ಡಲಾಗಿರುವಂತೆ ಬರಬೇಕೆಂದು ವಿನ್ಯಾಸಗೊಳಿಸಿದ. ಆದರೆ ಬೆಲ್ಟ್ ಅನ್ನು ಕೇವಲ ಒಂದು ಕೈಯಿಂದ ಬಳಸಲಾಗುವಂತೆ ಹಾಗೂ ಸರಳ ಮತ್ತು ಪರಿಣಾಮಕಾರಿಯಾಗಿರುಂತೆ ಪರಿಹಾರವನ್ನು ರಚಿಸುವುದು ಆತನ ಮುಂದಿದ್ದ ದೊಡ್ಡ ಸವಾಲಾಗಿತ್ತು. ಪೈಲಟ್ಟುಗಳಿಗೆ Y ಆಕಾರದ ಬೆಲ್ಟ್ ಮತ್ತು ಎಜೆಕ್ಷನ್ ಆಸನಗಳನ್ನು ಅಭಿವೃದ್ಧಿಪಡಿಸಿದ್ದ ಕೌಶಲ್ಯಗಳನ್ನು ಬಳಸಿಕೊಂಡು ಬೋಹ್ಲಿನ್ ಸುಮಾರು ಒಂದು ವರ್ಷ ಈ ಸೀಟ್-ಬೆಲ್ಟ್ ವಿನ್ಯಾಸದ ಮೇಲೆ ಕೆಲಸ ಮಾಡಿದ. ಕಾರು ಅಪಘಾತದಲ್ಲಿ ಚಾಲಕನನ್ನು ಸುರಕ್ಷಿತವಾಗಿರಿಸುವುದರತ್ತ ಗಮನವಿಟ್ಟು ನೂರಾರು ರೀತಿಯ ಪ್ರಯೋಗಗಳ ನಂತರ ಆತನ ಅತ್ಯಂತ ಸರಳ ಹಾಗೂ ಅತ್ಯಂತ ಪರಿಣಾಮಕಾರಿ 3-ಪಾಯಿಂಟ್ ಬೆಲ್ಟ್ ಉದಯಿಸಿತು. ಬೋಹ್ಲಿನ್ ತಮ್ಮ ಆವಿಷ್ಕಾರದ ಕೊನೆಯ ವಿನ್ಯಾಸವನ್ನು ವೋಲ್ವೋಗೆ 1959ರಲ್ಲಿ ಪರಿಚಯಿಸಿದ ಮತ್ತು ಅದರ ಮೊದಲ ಪೇಟೆಂಟ್ ಕೂಡಾ ಪಡೆದ (ಸಂಖ್ಯೆ 3,043,625).

ಹಲವಾರು ಪೇಟೆಂಟುಗಳಿಗೆ ಅರ್ಜಿ ಹಾಕುತ್ತಿದ್ದ ವೋಲ್ವೋ, ಬೇರೆಲ್ಲಾ ಕಂಪನಿಗಳಂತೆ ಹೆಚ್ಚಿನವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತಿತ್ತು. ಈ ಬೆಲ್ಟ್ ವಿನ್ಯಾಸದ ಪೇಟೆಂಟ್ ಬಗ್ಗೆ ಬೋಹ್ಲಿನ್ ಬಳಿ ಮಾತನಾಡಿದಾಗ ಬೋಹ್ಲಿನ್ ತಕ್ಷಣವೇ ವೋಲ್ವೋ ಅಧ್ಯಕ್ಷನೊಂದಿಗೆ ಮಾತನಾಡಿ, ಚಾಲಕರ ಜೀವಉಳಿಸಬಲ್ಲ ಈ ತಂತ್ರಜ್ಞಾನ ಜಗತ್ತಿನೆಲ್ಲೆಡೆ ಸುಲಭವಾಗಿ ದೊರೆಯಬೇಕು ಎಂದು ಕೇಳಿಕೊಂಡ. ಇಂದಿಗೂ ಸಹ ಚಾಲಕನ ಸುರಕ್ಷತೆಗೆ ಅತ್ಯಂತ ಮಹತ್ವ ಕೊಡುವ ವೋಲ್ವೋ ಕಂಪನಿ ಆತನ ಬೇಡಿಕೆಯನ್ನು ಪುರಸ್ಕರಿಸಿ ಎಲ್ಲಾ ಕಾರು ತಯಾರಕರೊಂದಿಗೆ ಪೇಟೆಂಟ್ ಮತ್ತು ಬೆಲ್ಟ್ ವಿನ್ಯಾಸವನ್ನು ಹಂಚಿಕೊಂಡಿತು. ಈ ರೀತಿ ಅತ್ಯಂತ ಪರಿಣಾಮಕಾರಿಯಾದ ಈ ಥ್ರೀ-ಪಾಯಿಂಟ್ ವಿನ್ಯಾಸ ಮತ್ತದರ ಪ್ರಯೋಜನಗಳು ಶೀಘ್ರದಲ್ಲೇ ಪ್ರಪಂಚದಾದ್ಯಂತ ಹರಡಿತು.

ಆರಂಭದಲ್ಲಿ ನಾರ್ಡಿಕ್ ಮಾರುಕಟ್ಟೆಗಳಲ್ಲಿ ಗ್ರಾಹಕರು ಈ ಬೆಲ್ಟುಗಳನ್ನು, ಮೈಪೂರ್ತಿ ಬಳಸುತ್ತೆ ಅನ್ನೋ ಕಾರಣಕ್ಕೆ ವಿರೋಧಿಸಿದ್ದರಂತೆ. 1963ರಲ್ಲಿ ವೋಲ್ವೋ ಅಮೇರಿಕಾ ಮತ್ತಿತರ ಮಾರುಕಟ್ಟೆಗಳಲ್ಲಿ ಥ್ರೀ-ಪಾಯಿಂಟ್ ಬೆಲ್ಟ್ ಅನ್ನು ಪರಿಚಯಿಸಿದ ಮರುಕ್ಷಣವೇ ಸೂಪರ್ ಹಿಟ್ ಎನಿಸಿಕೊಂಡಿತು ಹಾಗೂ ಜಗತ್ತಿನಾದ್ಯಂತ ಜನಪ್ರಿಯವಾಯಿತು. ಇವತ್ತು ಎಲ್ಲಾ ಆಸನಗಳಲ್ಲಿ ಥ್ರೀ-ಪಾಯಿಂಟ್ ಬೆಲ್ಟ್ ಇಲ್ಲದ ಕಾರುಗಳೇ ಇಲ್ಲ ಎನ್ನುವಷ್ಟು ಸರ್ವೇಸಾಮಾನ್ಯವಾಗಿದೆ.

ಇಂತಹುದೇ ಹಲವು ಆವಿಷ್ಕಾರಗಳಿಂದ ತನ್ನ ವೃತ್ತಿಜೀವನದಲ್ಲಿ ಮೇಲೇರಿದ ಬೋಹ್ಲಿನ್ 1969 ರಲ್ಲಿ ವೋಲ್ವೋ ಕೇಂದ್ರ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥನೂ ಆಗಿ, 1985ರಲ್ಲಿ ನಿವೃತ್ತಿಯನ್ನೂ ಹೊಂದಿದ. ವೋಲ್ವೋದಲ್ಲಿದ್ದಷ್ಟೂ ಸಮಯ, ಬೋಹ್ಲಿನ್ ಕಂಪನಿಯ ಸುರಕ್ಷತಾ ತಂತ್ರಜ್ಞಾನಗಳನ್ನು ಸುಧಾರಿಸುತ್ತಲೇ ಇದ್ದ. 1970ರ ದಶಕದಲ್ಲಿ ಆತ ಅಭಿವೃದ್ಧಿಪಡಿಸಿ ಪೇಟೆಂಟ್ ಪಡೆದ, ವಿಶ್ವಕ್ಕೆ ಮೊದಲಬಾರಿಗೆ ವೋಲ್ವೋ ಪರಿಚಯಿಸಿದ SIPS – Side Impact Protection System ಇವತ್ತು ಪ್ರಸಿದ್ಧ ತಂತ್ರಜ್ಞಾನಗಳಲ್ಲೊಂದು.

1974ರಲ್ಲಿ Ralph Isbrandt Automotive Safety Engineering ಪ್ರಶಸ್ತಿಪಡೆದ, 1989ರಲ್ಲಿ Hall of Fame for Safety and Health ಸೇರಿಸಲ್ಪಟ್ಟ, 1995ರಲ್ಲಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಎಂಜಿನಿಯರಿಂಗ್’ನಿಂದ ಚಿನ್ನದ ಪದಕವನ್ನು ಪಡೆದ ಮತ್ತು 1999ರಲ್ಲಿ ಆಟೋಮೋಟಿವ್ ಹಾಲ್ ಆಫ್ ಫೇಮ್‌ಗೆ ಸೇರಿಸಲ್ಪಟ್ಟ, ಮತ್ತು ಮರಣೋತ್ತರವಾಗಿ National Inventors Hall of Fameಗೆ ಸೇರಿಸಲ್ಪಟ್ಟ ನಿಲ್ಸ್ ಬೋಹ್ಲಿನ್ ಲಕ್ಷಾಂತರ ಜನರ ಜೀವಉಳಿಸುವುದಕ್ಕೆ ಕಾರಣನಾದ ಹಾಗೂ ಅಂತಹದುದ್ದೊಂದು ಕೆಲಸಕ್ಕೆ ಯಾವ ಲಾಭವನ್ನೂ ಬಯಸದ ಮಹಾತ್ಮ. ಜಗತ್ತಿನಾದ್ಯಂತ ಅಪಘಾತಕ್ಕೊಳಗಾದ ಎಷ್ಟೋ ಜನ ತನ್ನ ಜೀವಉಳಿದದ್ದು ಈತನ ಆವಿಷ್ಕಾರದಿಂದ ಎಂದು ತಿಳಿದು ಅವನೊಂದಿಗೆ ವೈಯಕ್ತಿಕವಾಗಿ ಸಂಪರ್ಕಿಸಿ ಧನ್ಯವಾದ ತಿಳಿಸಿದ್ದರಂತೆ. ಇಂತಹ ಸ್ಮರಣೀಯ ಎಂಜಿನಿಯರ್ ಬೋಹ್ಲಿನ್’ನ ಪುಣ್ಯತಿಥಿ ಇವತ್ತು, ಸೆಪ್ಟೆಂಬರ್ 21. 2002ರಲ್ಲಿ, ತನ್ನ 82ನೇ ವಯಸ್ಸಿನಲ್ಲಿ ಬೋಹ್ಲಿನ್ ಪಾರ್ಶ್ವವಾಯುವಿಗೊಳಗಾಗಿ ಮರಣಹೊಂದಿದ. ಮುಂದಿನ ಬಾರಿ ಕಾರಿನಲ್ಲಿ ಕೂತು ಸೀಟ್-ಬೆಲ್ಟ್ ಧರಿಸುವಾಗ ಅವನನ್ನೊಮ್ಮೆ ನೆನೆಸಿಕೊಳ್ಳಿ, ಅವನಿಗೊಂದು ಧನ್ಯವಾದ ತಿಳಿಸಿ.

 

ಹೆಚ್ಚಿನ ಓದು:

https://en.wikipedia.org/wiki/Michel_Hollard
https://en.wikipedia.org/wiki/James_Harrison_(blood_donor)
https://en.wikipedia.org/wiki/Alexander_Fleming
https://en.wikipedia.org/wiki/Maurice_Hilleman
https://en.wikipedia.org/wiki/Norman_Borlaug
https://en.wikipedia.org/wiki/Nils_Bohlin

0 comments on ““ನಡುಬಳಸಿ ಹಿಡಿದು ನಿಮ್ಮ ಜೀವ ಉಳಿಸಿದ ನಿಲ್ಸ್ ಬೋಹ್ಲಿನ್”

Leave a Reply

Your email address will not be published. Required fields are marked *