Tuesday, 19 March, 2024

“ಕಲ್ಲಾದರೆ ನಾನು…..ಆಕಾಶದೀಪವು ನೀನು”

Share post

ನೀವು ಆಗಾಗ ಸಾಮಾನ್ಯವಾಗಿ ಅತ್ಯುತ್ತಮ ವ್ಯಕ್ತಿತ್ವವನ್ನು ಗುರುತಿಸುವಾಗ, “ಮೇರುಸಮಾನರಾದ” “ಮೇರು ಪ್ರಾಯರಾದ” “ಮೇರು ಪರ್ವತದಂತಾ ವ್ಯಕ್ತಿತ್ವ” ಮೊದಲಾದ ವಿಶೇಷಣಗಳ ಬಳಕೆಯನ್ನು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಕರ್ನಾಟಸಂಗೀತಪ್ರಿಯರಿಗೆ ಶಾಮಾಶಾಸ್ತ್ರಿಗಳು ಜಗನ್ಮಾತೆ ಪಾರ್ವತಿಯನ್ನು ‘ಸುಮೇರು ಮಧ್ಯ ನಿಲಯೇ’ ಎಂದು ಕರೆದಿರುವುದು ನೆನಪಿರಬಹುದು. ಪಾರ್ವತಿ ಪರ್ವತ ರಾಜ ಹಿಮಾಲಯನ ಮಗಳಾದ್ದರಿಂದ, ಇದೇ ಕಾರಣಕ್ಕೇ ಮೇರು ಪರ್ವತ ಹಿಮಾಲಯ ಪರ್ವತಗಳಲ್ಲಿ ಎಲ್ಲೋ ಇದೆ ಎಂಬ ನಂಬಿಕೆ ಕೆಲವರು ಇಟ್ಟಿರುವುದನ್ನೂ ನೀವು ಕಾಣಬಹುದು. ತ್ಯಾಗರಾಜರು ಶ್ರೀರಾಮನ ಪರಾಕ್ರಮವನ್ನು, ಅವನ ಧೀರ ನಿಲುವನ್ನೂ ವರ್ಣಿಸುತ್ತಾ ‘ಮೇರು ಸಮಾನ ಧೀರ, ವರದ ರಘು ವೀರ’ ಎನ್ನುತ್ತಾ ಮೇರುಪರ್ವತಕ್ಕೆ ಹೋಲಿಸಿರುವುದೂ ಗೊತ್ತಿರಬಹುದು. ಹೀಗೆ, ಆಕಾಶದೆತ್ತರದ ವ್ಯಕ್ತಿತ್ವಗಳನ್ನು ವಿವರಿಸುವಾಗ ಮೇರುಪರ್ವತವೇ ನಮಗೆ ಸುಲಭದ ಉದಾಹರಣೆ.

ಆಕಾಶದಿಂದ, ಧರೆಗಿಳಿದ ರಂಭೆ

ಇವಳೇ ಇವಳೇ ಚಂದನದ ಗೊಂಬೆ

ಚೆಲುವಾದ ಗೊಂಬೆ, ಚಂದನದಾ ಗೊಂಬೆ

ಹಾಗಾದರೆ ಏನೀ ಮೇರುಪರ್ವತ? ಅದೆಲ್ಲಿದೆ? ಅಂತರ್ಜಾಲವನ್ನು ನೋಡಿದರೆ, ನಿಮಗೆ ಮೇರು ಪರ್ವತ ಟಾಂಜಾನಿಯಾದಿಂದ ಟಿಬೆಟ್ ವರೆಗೆ, ಹಿಮಾಲಯದಿಂದ ಮಧ್ಯ ಏಷ್ಯಾ ವರೆಗೆ ಎಲ್ಲೆಲ್ಲೋ ಕಾಣಸಿಗುತ್ತೆ. ಕಾಶ್ಮೀರದಲ್ಲಿರುವ ಪಾಮಿರ್ ಪರ್ವತಗಳನ್ನೂ ಮೇರು ಪರ್ವತವೆಂದು ಭಾವಿಸಲಾಗುತ್ತದೆ. ಕೈಲಾಸ ಪರ್ವತವನ್ನೇ ಮೇರು ಪರ್ವತವೆಂದೂ ಗುರುತಿಸಲಾಗುತ್ತದೆ. ಇನ್ನು ಕೆಲ ಪುರಾಣಗಳಲ್ಲಿ ಭೂಮಿಯನ್ನೇ ತನ್ನ ಬೆನ್ನಮೇಲೆ ಎತ್ತಿಹಿಡಿದಿರುವ ಕೂರ್ಮವೇ ಮೇರುಪರ್ವತವೆಂದೂ ಹೇಳಲಾಗುತ್ತದೆ. ಅದೂ ಅಲ್ಲದೇ ಈ ಪರ್ವದ ಉಲ್ಲೇಖ ಹಿಂದೂಧರ್ಮದಲ್ಲಿ ಮಾತ್ರವಲ್ಲದೇ, ಜೈನ, ಬೌದ್ಧ, ಟಿಬೇಟಿಯನ್ ಮತ್ತು ಜಾವಾನೀಸ್ ಪುರಾಣಗಳಲ್ಲೂ ಇದೆ. ಆದರೆ ಎಲ್ಲೂ ಸಹ ಈ ಪರ್ವತದ ಬಗ್ಗೆ ಭೌಗೋಳಿಕ ಉಲ್ಲೇಖವಿಲ್ಲ. ಯಾಕೆ ಹೀಗೆ? ಯಾಕೆಂದರೆ ಇಲ್ಲಿ ಪರ್ವತ ಎಂಬುದು ಕೇವಲ ಅಲಂಕಾರಿಕ ಶಬ್ದ. ಸಾಮಾನ್ಯವಾಗಿ ಯಾರೂ ಏರಲಾಗದ ಎತ್ತರವನ್ನು ಸೂಚಿಸಲಿಕ್ಕಾಗಿ ಮೇರುಪರ್ವತದ ಉದಾಹರಣೆಯನ್ನು ಕೊಡಲಾಗುತ್ತದೆ. ಅದೊಂದು ಸೌಂದರ್ಯರೂಪಕವಷ್ಟೇ.

ಎಂತಾ ಸೌಂದರ್ಯ ನೋಡು

ನಮ್ಮ ಕರುನಾಡ ಬೀಡು

ಗಂಧದ ಗೂಡಿದು, ಕಲೆಗಳ ತೌರಿದು

ಕನ್ನಡ ನಾಡಿದು, ಚಿನ್ನದಾ ಮಣ್ಣಿದು

ಅಭಿಯಂತರಿಕೆಯಲ್ಲಿ ಸರ್ ಎಂವಿ, ವಿಜ್ಞಾನದಲ್ಲಿ ಸಿವಿ ರಾಮನ್, ಕನ್ನಡ ಸಾಹಿತ್ಯದಲ್ಲಿ ಕುವೆಂಪು ಡಿವಿಜಿ, ಭಾರತದ ಕ್ಷಿಪಣಿ ತಂತ್ರಜ್ಞಾನದಲ್ಲಿ “ಡಾ| ಆವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ”, ಸೇವೆಯಲ್ಲಿ ಸಿದ್ದಗಂಗಾ ಶ್ರೀಗಳು, ನಟನಾ ರಂಗದಲ್ಲಿ ರಾಜ್ ಕುಮಾರ್, ಗಾಯನ ಲೋಕದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ…..ಈ ಹೆಸರುಗಳನ್ನು ಕೇಳಿದಾಗ ನಿಮಗೆ ಆ ಕ್ಷೇತ್ರದಲ್ಲಿ ಅದಕ್ಕೆ ಸರಿಸಮಾನವಾದ ಇನ್ನೊಂದು ಹೆಸರು ಸಿಗುವುದು ಕಷ್ಟ. ಆ ಕಾರಣಕ್ಕಾಗಿ ಆಯಾ ಕ್ಷೇತ್ರಗಳಲ್ಲಿ ಅವರೇ ಮೇರುಪರ್ವತಗಳು. ಈ ಹೆಸರುಗಳನ್ನು ಕೇಳಿದಾಗ ನಿಮಗೆ ಯಾವುದೇ ಅನುಮಾನವಿಲ್ಲದೇ ಪಕ್ಕನೇ ಅರಿವಾಗುತ್ತದೆ ಯಾಕೆ ಅವರು ಮೇರುಪರ್ವತಸಮಾನರು ಅಂತಾ. ಅವರನ್ನು, ಅವರ ಘನತೆಯನ್ನು ನಿಮಗೆ ವಿವರಿಸಲು ನೀವು ಅವರ ವ್ಯಕ್ತಿತ್ವದೆಡಿಗೆ ಒಂದು ನೋಟ ಬೀರಿದರೆ ಸಾಕು.

ನೋಟದಾಗೆ ನಗೆಯಾ ಮೀಟಿ

ಮೋಜಿನಾಗೇ ಎಲ್ಲೆಯ ದಾಟಿ

ಮೋಡಿಯಾ ಮಾಡಿದೋಳಾ ಪರಸಂಗ ಐತೆ

ಮೋಹಾವಾ ತೋರಿದೋಳಾ ಪರಸಂಗ ಐತೆ

ಕಳೆದವಾರ ನಾವು ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂಬ ಮೇರುಪರ್ವತವನ್ನು ಭೌತಿಕವಾಗಿ ಕಳೆದುಕೊಂಡಿದ್ದೇವೆ. ನನಗೆ ಅವರ ವ್ಯಕ್ತಿಚಿತ್ರಣ ಬರೆಯುವ ಉಮೇದಾಗಲೀ, ಪಾಂಡಿತ್ಯವಾಗಲೀ ಇಲ್ಲ. ಅದು ಬಿಡಿ ಅವರ ಬಗ್ಗೆ ಹೆಚ್ಚೇನೂ ತಿಳಿದೂ ಕೂಡಾ ಇಲ್ಲ. ನಾನು ಮಾತ್ರವಲ್ಲ, ಅವರು ಬದುಕಿದ್ದಷ್ಟು ದಿನ ಎಸ್.ಪಿ.ಬಿಯವರ ಬಗ್ಗೆ ತೀರಾ ವೈಯುಕ್ತಿಕವಾದ ವಿವರಗಳಾಗಲೀ, ಅವರ ಆಸಕ್ತಿ, ಸಾಧನೆಗಳನ್ನೆಲ್ಲಾ ತೀರಾ ಹೆಕ್ಕಿ ಹೆಕ್ಕಿ ನಮ್ಮಲ್ಲಿ ಯಾರೂ ತಿಳಿಯಹೋಗಲಿಲ್ಲ. ಅವರ ಸಂಸ್ಕೃತಪ್ರೀತಿ, ವೇದಗಳ ಬಗೆಗಿದ್ದ ಒಲವು, ಅವರ ದೈವಭಕ್ತಿ ಎಲ್ಲವೂ ತೀರಾ ಖಾಸಗಿಯಾಗಿಯೇ ಉಳಿದಿದ್ದವು. ಅವರ ಹೆಂಡತಿಯ ಹೆಸರು ಸಾವಿತ್ರಿ ಅಂತಲೂ, ಮಕ್ಕಳ ಹೆಸರು ಪಲ್ಲವಿ ಮತ್ತು ಚರಣ್ ಅಂತಲೂ ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ (ಹೌದು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿದ ಗಾಯನಕ್ಕೆ ತಕ್ಕಂತೆ ಮೊದಲ ಮಗಳಿಗೆ ಪಲ್ಲವಿ ಅಂತಲೂ, ಎರಡನೆಯವನಾಗಿ ಬಂದ ಮಗನಿಗೆ ಚರಣ ಅಂತಲೂ ಹೆಸರಿಟ್ಟಿದ್ದು ಎಸ್ಪಿ). ಯಾಕೆಂದರೆ ನಮಗೆ ಅವರ ಹಾಡಿನ ಮಾಂತ್ರಿಕತೆಯ ಮುಂದೆ ಅವೆಲ್ಲಾ ಗೌಣವಾಗಿದ್ದ ವಿಚಾರಗಳು. ಎಸ್ಪಿಬಿ ಅಂದಕೂಡಲೇ ಮನಸ್ಸಿನಲ್ಲಿ ಹರಿದುಬರುವುದು ಅವರು ಹಾಡಿದ ನಿಮ್ಮ ಮೆಚ್ಚಿನ ಗೀತೆ, ಜೊತೆಗೆ ಅವರ ಅಳಿಸಲಾಗ ನಗುವಿನ ಗುಂಡುಮುಖ.

ನಗುವ ನಯನ ಮಧುರ ಮೌನ

ಮಿಡಿವ ಹೃದಯ ಇರೆ ಮಾತೇಕೆ

ಹೊಸ ಭಾಷೆ ಇದು, ರಸ ಕಾವ್ಯವಿದು

ಇದ ಹಾಡಲು ಕವಿ ಬೇಕೆ?

ಐವತ್ತು ವರ್ಷದ ವೃತ್ತಿಜೀವನದಲ್ಲಿ ಎಸ್ಪಿಬಿಯವರು ಇದುವರೆಗೆ ಸುಮಾರು ಹದಿನಾರು ಭಾಷೆಗಳಲ್ಲಿ ಹಾಡಿರುವ ಒಟ್ಟು ಹಾಡುಗಳ ಸಂಖ್ಯೆ ಸುಮಾರು 42,000ಕ್ಕೂ ಹೆಚ್ಚಂತೆ. ಒಂದು ಹಾಡಿಗೆ ಸರಾಸರಿ ನಾಲ್ಕುನಿಮಿಷವೆಂದು ಹಿಡಿದರೂ, ಅವರು ಹಾಡಿರುವ ಹಾಡುಗಳೆಲ್ಲವನ್ನೂ ಕೇಳಿ ಮುಗಿಸಲಿಕ್ಕೆ ಊಟ ತಿಂಡಿ ನಿದ್ದೆ ಬಿಟ್ಟು ಕೇಳಿದರೂ 14 ತಿಂಗಳು ಬೇಕಾಗುತ್ತದೆ. ಒಂದೇ ದಿನ ಬೆಳಿಗ್ಗೆ ಒಂಬತ್ತರಿಂದ ಸಂಜೆ ಒಂಬತ್ತರ ಒಳಗೆ ಒಟ್ಟು 21 ಹಾಡುಗಳನ್ನು ರೆಕಾರ್ಡ್ ಮಾಡಿರುವ ಅಪರೂಪದ ಸಾಧನೆಯೂ ಅವರ ಹೆಸರಲ್ಲಿದೆ. ಅಂಕಿಅಂಶಗಳನ್ನು ಬದಿಗಿಟ್ಟರೂ ಸಹ, ದಕ್ಷಿಣಭಾರತದ ಯಾವುದೇ ಸಂಗೀತಪ್ರಿಯನ ಜೀವನದಲ್ಲಿ ಎಸ್ಪಿಬಿಯವರ ಹಾಡು ಕೇಳದ ದಿನವೇ ಇರಲಿಕ್ಕಿಲ್ಲ. ಅಷ್ಟರಮಟ್ಟಿಗೆ ಎಸ್ಪಿಬಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಜೀವ. ಮುಂದಿನ ಗೀತೆ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ದನಿಯಲ್ಲಿ ಎಂಬ ಆಕಾಶವಾಣಿಯ ವಾಕ್ಯಗಳು ಎಂದಿಗೂ ನಿಮ್ಮ ಮನಸ್ಸನ್ನು ಬಿಟ್ಟು ಹೋಗುವುದೇ ಇಲ್ಲ.

ನೀರಬಿಟ್ಟು ನೆಲದಮೇಲೆ ದೋಣಿ ಸಾಗದು

ನೆಲವಬಿಟ್ಟು ನೀರ ಮೇಲೆ ಬಂಡಿ ಹೋಗದು

ನಿನ್ನಬಿಟ್ಟು ನನ್ನ ನನ್ನ ಬಿಟ್ಟು ನಿನ್ನ

ಜೀವನಾ ಸಾಗದು.. ಜೀವನಾ ಸಾಗದು

ಬರೀ ಗಾಯನಕ್ಕೆ ಮಾತ್ರವಲ್ಲ. ಎಸ್ಪಿ ಸಕಲಕಲಾವಲ್ಲಭ. ನಟನೆ ಅವರಿಗಿಷ್ಟವಾದ ಇನ್ನೊಂದು ರಂಗವಾಗಿತ್ತು. ನಾನು ನೋಡಿದ ಅವರ ಕೊನೆ ಚಿತ್ರ ಮಿಥುನಂ. ಬುಚ್ಚಿಲಕ್ಷ್ಮಿಯ ಜೊತೆ ಅಪ್ಪಾದಾಸುವಾಗಿ ಗಂಡಹೆಂಡತಿಯರಿದ್ದರೆ ಹೀಗಿರಬೇಕು ಎನಿಸುವ ಅವರ ನಟನೆ ಕಣ್ಣಂಚಲ್ಲಿ ನೀರುಮೂಡಿಸುವುದು ಖಂಡಿತಾ. ಮನ್ಮಧಲೀಲಾ ಚಿತ್ರದ ಮೂಲಕ ಹಿನ್ನೆಲೆ ಧ್ವನಿ ನೀಡುವ ಮೂಲಕ ಪ್ರಾರಂಭವಾದ ಡಬ್ಬಿಂಗ್ ವೃತ್ತಿಯಲ್ಲಿ ರಜನಿಕಾಂತ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಕಮಲ್ ಹಾಸನ್, ಭಾಗ್ಯರಾಜ್, ಮೋಹನ್, ಅನಿಲ್ ಕಪೂರ್, ಗಿರೀಶ್ ಕಾರ್ನಾಡ್, ಜೈಮಿನಿ ಗಣೇಶನ್, ಅರ್ಜುನ್ ಸರ್ಜಾ, ನಾಗೇಶ್, ಕಾರ್ತಿಕ್, ಮತ್ತು ರಘುವರನ್ ಸೇರಿದಂತೆ ವಿವಿಧ ಕಲಾವಿದರ ಧ್ವನಿಯಾಗಿ ನಿಂತು ಕಾಮನಬಿಲ್ಲಿನಂತೆ ರಂಜಿಸಿದವರು.

ನಡೆದಾಡೋ ಕಾಮನಬಿಲ್ಲೇಹರಿದಾಡೊ ಮುಗಿಲಿನಮಿಂಚೇ

ತುಳುಕಾಡೊ ಬಾನಿನ ಚೆಲುವೆಭುವಿಗಿಳಿದ ಹುಣ್ಣಿಮೆ ಹೊನಲೇ

ನೀನೆಂದಿಗೂ ನನ್ನ ಬಾಳಿಗೆಆನಂದದಾ ಅರುಣ ರಾಗ

ಅರುಣ ರಾಗಅರುಣ ರಾಗ

ಎಸ್ಪಿಯವರು ನಮಗೆ ಇನ್ನೂ ಹೆಚ್ಚು ಆತ್ಮೀಯವಾಗಲಿಕ್ಕೆ ಕಾರಣ ಅವರ ಗಾಯನಲೋಕದಿಂದಾಚೆಗಿದ್ದ ಅವರ ಕೆಲ ವೈಯುಕ್ತಿಕ ಗುಣಗಳು. ಸದಾ ನಿಷ್ಕಲ್ಮಷ ನಗುವಿನಿಂದ ಕಂಗೊಳಿಸುತ್ತಿದ ಅವರ ಮುಖ, ಪಾಡುತಾ ತೀಯಗಾ, ಸ್ವರಾಭಿಷೇಕಂ, ಎದೆ ತುಂಬಿ ಹಾಡಿದೆನು ಮುಂತಾದ ಕಾರ್ಯಕ್ರಮದಲ್ಲಿ ಅವರು ಗಾಯಕರನ್ನು ತಿದ್ದುತ್ತಿದ್ದ ರೀತಿ, ಅದೆಷ್ಟೇ ಭಾಷೆಯಲ್ಲಿ ಹಾಡಿದರೂ ಅವೆಲ್ಲಾ ಭಾಷೆಗಳನ್ನು ಏಕರೂಪವಾಗಿ ಪ್ರೀತಿಸುತ್ತಿದ್ದ ವೃತ್ತಿಪರತೆ, ಎಂದಿಗೂ ಜನಪ್ರಿಯತೆಗಾಗಲೀ ವೈಯುಕ್ತಿಕ ಹಮ್ಮಿಗಾಗಲೀ ಹಾತೊರೆಯುತ್ತಾ ಹೇಳಿಕೆಗಳನ್ನು ಕೊಡದೇ, ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಬದುಕಿದ ಆ ತುಂಬುಜೀವನ ಎಲ್ಲರಿಗೂ ದಕ್ಕುವಂತದ್ದಲ್ಲ. ಅಷ್ಟೆಲ್ಲಾ ಸಾಧನೆಮಾಡಿದ್ದರೂ “ಈಗಲೂ ಸ್ಟೇಜ್ ಮೇಲೆ ಹಾಡುವಾಗ ಭಯಪಡ್ತೀನಿ, ಕಾರಿನಲ್ಲಿ ಬರುವಾಗಲೂ ರಿಹರ್ಸಲ್ ಮಾಡಿಕೊಳ್ತಾ ಬರ್ತೀನಿ” ಎನ್ನುವ ಮುಗ್ದನಗುವಿನ ಆ ವಿನಯ ಭೂಮಿತೂಕದ ಮನುಷ್ಯರಿಗಷ್ಟೇ ಸಾಧ್ಯ. ಅವೆಲ್ಲಾ ಇನ್ನು ನೆನಪಷ್ಟೇ.

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತು, ಆನಂದದಿಂದ
ಸಿಂಧೂರ ಬಿಂದು, ನಗಲಮ್ಮ ಎಂದೂ
ಎಂದೆಂದು ಇರಲಮ್ಮ ಈ ದಿವ್ಯ ಬಂಧ

ಭರ್ತೃಹರಿಯ ಮಾತುಗಳಲ್ಲಿ ಹೇಳುವುದಾದರೆ “ಜಯಂತಿ ತೇ ಸುಕೃತಿನೋ ರಸಸಿದ್ಧಾಃ ಕವೀಶ್ವರಾಃ, ನಾಸ್ತಿ ಯೇಷಾಂ ಯಶಃಕಾಯೇ ಜರಾಮರಣಜಂ ಭಯಂ”. ಯಾರ ಯಶಸ್ಸು ಎಂಬ ದೇಹಕ್ಕೆ ಹುಟ್ಟುಸಾವೆಂಬ ಭಯವು ಇಲ್ಲವೊ ಅಂತಹ ದೇಹವನ್ನು ಹೊಂದಿದ ನವರಸಗಳನ್ನು ಬಳಸುವುದರಲ್ಲಿ ಸಿದ್ಧಹಸ್ತರಾದ, ಒಳ್ಳೆಯ ಕೃತಿಗಳನ್ನು ರಚಿಸಿದ ಕವಿಶ್ರೇಷ್ಠರಿಗೆ ಜಯವಾಗಲಿ. ಶತಕತ್ರಯದಲ್ಲಿ ಕವಿಗಳ ಕುರಿತು ಮಾತ್ರ ಅರ್ಥೈಸಲಾಗಿದೆ. ಇದನ್ನೇ ಬೇರೆ ರೀತಿಯಲ್ಲಿಯೂ ಅರ್ಥೈಸಬಹುದು, ರಸಸಿದ್ಧರು ಎಂದರೆ ವೈದ್ಯರುರು, ಸುಕೃತಿನಃ ಎಂದರೆ ಒಳ್ಳೆಯ ಕೆಲಸಮಾಡಿದವರು. ತನ್ನ ಧ್ವನಿಯ ಮೂಲಕ ಆ ಹಾಡಿನ ಸಾಹಿತ್ಯಕ್ಕೆ, ಅದನ್ನು ನಟಿಸಿದ ಕಲಾವಿದರಿಗೆ, ಅವರಿದ್ದ ಆ ದೃಶ್ಯಕ್ಕೆ, ಆ ಕಥೆಗೆ ಜೀವತುಂಬಿದ ಈ ಮಹಾನ್ ಗಾಯಕನ ಸ್ಥಾನವನ್ನು ತುಂಬಲು ಇನ್ಯಾರಿಂದಲೂ ಸಾಧ್ಯವಿಲ್ಲವೆಂಬುದು ಖಂಡಿತಾ ಅತಿಶಯೋಕ್ತಿಯಲ್ಲ. ಮೇರುಪರ್ವತವೇ ನನ್ನ ಹೆಸರಿಗೆ ಅನ್ವರ್ಥ ಸಿಕ್ಕಿತೆಂದು ಸಂತೋಷಪಡುವ ವ್ಯಕ್ತಿತ್ವದ ಎಸ್ಪಿ ನಮ್ಮನ್ನಗಲಿದರೂ ಅಗಲದ ಚೇತನ. ರಫಿ, ಕಿಶೋರ್’ರನ್ನು ಉತ್ತರದವರು ಹಚ್ಚಿಕೊಂಡರೀತಿಯನ್ನು ನೋಡಿ, ದಕ್ಷಿಣದಲ್ಲೂ ಹೀಗೆ ಸಾಧ್ಯವಾಗಬಹುದೇ ಎಂಬ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಬಂದದ್ದು ಎಸ್ಪಿಬಿ. ಅದ್ಯಾವ ಮಾಯವೋ, ಅದ್ಯಾವ ಮೋಹವೋ ಗೊತ್ತಿಲ್ಲ….ಎಸ್ಪಿಬಿಯನ್ನು ಮರೆಯಲು ಸಾಧ್ಯವೇ ಇಲ್ಲ.

ತೇರೇ ಮೇರೆ ಬೀಚ್ ಮೈ

ಕೈಸಾ ಹೈ ಯೇ ಬಂಧನ್ ಅಂಜಾನಾ

 

(ಬೇರೆ ಬೇರೆ ಮೂಲಗಳಿಂದ ಪಡೆದ ಈ ಕೆಳಗಿನ ಚಿತ್ರಗಳ ಎಲ್ಲಾ ಹಕ್ಕುಗಳು ಅವುಗಳ ಮೂಲ ಮಾಲೀಕರಿಗೆ ಸೇರಿರುತ್ತವೆ. ಎಸ್ಪಿಬಿಯವರ ನಮನಗೌರವಕ್ಕಾಗಿ ಇಲ್ಲಿ ಬಳಸಿಕೊಳ್ಳಲಾಗಿದೆಯಷ್ಟೇ.

ಈ ಚಿತ್ರಗಳ ಮೂಲ ಹಕ್ಕುಸ್ವಾಮ್ಯ ಹೊಂದಿರುವವರು ನೀವಾಗಿದ್ದು, ಇಲ್ಲಿನ ಬಳಕೆಯ ಬಗ್ಗೆ ನಿಮಗೆ ತಕರಾರಿದ್ದಲ್ಲಿ ದಯವಿಟ್ಟು ತಿಳಿಸಿ. ಆ ಚಿತ್ರಗಳನ್ನು ತೆಗೆಯಲಾಗುವುದು.)

0 comments on ““ಕಲ್ಲಾದರೆ ನಾನು…..ಆಕಾಶದೀಪವು ನೀನು”

Leave a Reply

Your email address will not be published. Required fields are marked *