Tuesday, 27 February, 2024

ದಾಂಪತ್ಯಕ್ಕೂ, ಸಾಂಗತ್ಯಕ್ಕೂ ಒಟ್ಟಿಗೇ ಅರ್ಥ ಕೊಡಬಲ್ಲವ ಒಬ್ಬನೇ ಒಬ್ಬ…..ಕೃಷ್ಣ.

Share post

ಅವ ರುಕ್ಮಿಣಿಗೂ ಕೃಷ್ಣನಾದ. ರಾಧೆಗೂ ಕೃಷ್ಣನಾದ. ರುಕ್ಮಿಣಿಯನ್ನು, ಅವಳ ಬಯಕೆಗಳನ್ನೂ, ರುಕ್ಮಿಣಿಯೊಂದಿಗಿನ ಕೃಷ್ಣನನ್ನು ಹೋಗೋ ಅರ್ಥೈಸಿಕೊಂಡುಬಿಡಬಹುದು. ಯಾಕೆಂದರೆ ನಾವೆಲ್ಲರೂ ರುಕ್ಮಿಣಿಯ ಕೃಷ್ಣರೇ. ಆದರೆ ರಾಧಾಕೃಷ್ಣನನ್ನು ಅರ್ಥೈಸಿಕೊಳ್ಳುವಾಗ ಹೆಚ್ಚಿನ ಹಿಡಿತಬೇಕು, ಜಗತ್ತು ಅರ್ಥವಾಗಬೇಕು, ಸಂಬಂಧಗಳು ಮನಸ್ಸನ್ನು ತಾಕಬೇಕು. ಇಲ್ಲವಾದಲ್ಲಿ ಕೈಲಾಗದತನವನ್ನೋ, ಲಂಪಟತನವನ್ನೋ ಸಮರ್ಥಿಸಿಕೊಂಡಂತಾಗುತ್ತದೆ.

 

ಕೃಷ್ಣ ಎಂದರೆ ಏನೋ ಸೆಳೆತ, ಸಂಭ್ರಮ, ಗದ್ದಲ, ಸಂತೋಷ, ಆತ್ಮೀಯತೆ, ನಮ್ಮವನೆಂಬ ವ್ಯಾಮೋಹ ನಮ್ಮನ್ನು ಸಹಜವಾಗಿ ಆವರಿಸುತ್ತದೆ. ಶೋಷಿತರ ಪಕ್ಷ ಪಾತಿಯಾಗಿ, ಸಮಷ್ಟಿಯ ಸುಖವನ್ನು ಬಯಸಿದ ಶ್ರೀಕೃಷ್ಣ ನಮ್ಮವನೇ. ಇಡೀ ಜಗತ್ತು ಕೃಷ್ಣನ ಸ್ನೇಹಕ್ಕೆ, ಪ್ರೀತಿಗೆ, ಕೃಪೆಗೆ, ಅವನ ನಗುವಿಗೆ, ವರಕ್ಕೆ ಕಾಯುತ್ತದೆ. ಕೇಳಿದವರಿಗೆ ಕೃಷ್ಣ ಯಾವತ್ತೂ ಇಲ್ಲವೆನ್ನಲಿಲ್ಲ, ಇಲ್ಲವೆನ್ನುವುದೂ ಇಲ್ಲ. ಕಾದವರೆಲ್ಲರನ್ನೂ ನಿರಾಸೆಗೊಳಿಸದೇ ಅವರು ಬಯಸಿದ್ದರಲ್ಲಿ ಏನೋ ಒಂದನ್ನು ಕೊಟ್ಟ. ಎಲ್ಲರೂ ಅವನಿಗಾಗಿ ಕಾದವರೇ. ಪ್ರತಿಯೊಬ್ಬ ತಾಯಿಗೂ ಕೃಷ್ಣನಂಥ ಮಗು ಬೇಕು, ಆ ಮಗುವಿನ ಕೈಯಲ್ಲೊಂದು ಕೊಳಲು, ತಲೆಗೊಂದು ನವಿಲುಗರಿ ಇಟ್ಟು ಅವಳೇ ಯಶೋದೆಯಾಗುತ್ತಾಳೆ. ಜಗತ್ತಿನ ಅರ್ಧ ಹೆಣ್ಣುಗಳಿಗೆ ರಾಧೆಯಾಗುವ ತವಕ, ತನ್ನ ಕೃಷ್ಣನ ಮುರಳಿನಾದ ಎಲ್ಲಿಂದಲಾದರೂ ಕೇಳೀತಾ ಎಂದು ಕಿವಿ ಆನಿಸುತ್ತಾಳೆ. ಇನ್ನರ್ಧ ಹೆಂಗಸರಿಗೆ ರುಕ್ಮಿಣಿಯಾಗಿ ಕೃಷ್ಣನಂತವನೇ ಹುಡುಗನೊಬ್ಬ ಜೀವನಪೂರ್ತಿ ತನಗಾಗಿಯೇ ಸಿಗಬಾರದೇ ಎಂಬ ಬಯಕೆ, ಅವನ ತುಂಟತನಕ್ಕೆ ನಾಚುವ ಕನವರಿಕೆ. ಬದುಕಿನ ಕಷ್ಟಗಳಿಂದ ಬಸವಳಿದ, ಸೋಲಿನ ಸುಳಿಯಲ್ಲಿ ಸಿಕ್ಕಿ ಉಸಿರುಗಟ್ಟಿದ ನಮ್ಮಂತಹಾ ಕುಚೇಲರಿಗೆ ಸ್ನೇಹಿತನಾಗಿ ಕೃಷ್ಣನೊಬ್ಬ ಒಲಿದುಬರಬಾರದೇ ಎಂಬ ಕಾತುರ. ಅವನೊಬ್ಬನಿದ್ದರೆ ಯಾವತ್ತೂ ಜೀವಂತಿಕೆ ತುಂಬಿ ತುಳುಕುತ್ತದೆ ಎಂಬ ನಂಬಿಕೆ. ಎಲ್ಲರೂ ಅವನಿಗಾಗಿ ಕಾಯುವವರೇ.

 

ಕೃಷ್ಣ ಯಾರಿಗಾದರೂ ಕಾದನೇ? ಆತ ಬಹುಷಃ ಕಾದದ್ದು ರಾಧೆಯೊಬ್ಬಳಿಗೇ. ನಿಜಕ್ಕೂ ಆಳವಾಗಿ ಪ್ರೀತಿಸಿದ್ದು ರಾಧೆಯೊಬ್ಬಳನ್ನೇ. ಕೊನೆಯಬಾರಿ ಆತ ಕೊಳಲು ನುಡಿಸಿದ್ದೂ ರಾಧೆಗಾಗಿಯೇ. ಎಲ್ಲರನ್ನೂ ಸಮ್ಮೋಹಿಸಿದ ಕೃಷ್ಣನನ್ನೂ ಸಮ್ಮೋಹಿಸಿದಳು ರಾಧೆಯೊಬ್ಬಳೇ. ಅದೊಂದು ಎಂತ ಪ್ರೀತಿಯೋ ಗೊತ್ತಿಲ್ಲ. ಗೊತ್ತಿಲ್ಲದಾಗಿಯೇ ಉಳಿದಷ್ಟೂ ಅರ್ಥವಾಗುವಂತದ್ದು, ಅರ್ಥವಾದಷ್ಟೂ ಅರ್ಥದಿಂದ ಹೊರಗುಳಿಯುವಂತದ್ದು. ಆ ಪ್ರೀತಿ ಸದಾಕಾಲ ಸುಖಕೊಟ್ಟದ್ದೂ ಏನಲ್ಲ, ಏಳುಬೀಳುಗಳ ಆಗರವೇ. ಆದರೂ ಅದೇನು ಪುಣ್ಯ ಮಾಡಿದ್ದಳೋ ಆಕೆ, ಆಕೆಯ ಕಥೆ, ಕಷ್ಟ, ಕಟ್ಟುಪಾಡುಗಳು ಎನ್ನವನ್ನೂ ಎದುರಿಸಿ ರಾಧೆಯ ಜೊತೆಗೆ ನಿಂತ ಆತ. ಅಂತದ್ದೊಂದು ಜೀವ ಸಿಗಲಿಕ್ಕೆ ಹೆಣ್ಣಾಗಲೀ ಗಂಡಾಗಲೀ ನಿಜಕ್ಕೂ ಪುಣ್ಯ ಮಾಡಿರಲೇಬೇಕು ಅಲ್ಲವೇ! ಇನ್ನೇನು ಸಿಕ್ಕ, ನನಗಾಗಿಯೇ ಸಿಕ್ಕ ಎಂದೆನಿಸುವಷ್ಟರಲ್ಲೇ ಕೃಷ್ಣ ಹೊರಟು ನಿಂತ. ರಾಧೆಗಾಗಿ ಕೊನೆಯ ಬಾರಿ ಕೊಳಲು ನುಡಿಸಿ, ಕೊಳಲನ್ನು ಅವಳ ಕೈಗಿಟ್ಟು ವೃಂದಾವನದಿಂದ ಹೋದವ ಮರಳಿ ಬಾರಲೇ ಇಲ್ಲ. ಆಕೆಯೂ ಅಷ್ಟೆ ಮತ್ಯಾವತ್ತೂ ಕೃಷ್ಣನ ಬೆನ್ನು ಹತ್ತಿ ಹೋಗಲಿಲ್ಲ.

 

ನಾಲ್ಕುಕ್ಷಣಕ್ಕೆ ಹುಟ್ಟಿಕೊಳ್ಳುವ ಪ್ರೀತಿಯೆಂಬುದು ಬದುಕಿನ ಎಲ್ಲಸಾಧನೆಯ ದಾರಿಗಳನ್ನು ಮುಚ್ಚಿಟ್ಟು, ಪ್ರೀತಿಯೇ ಸಾಧನೆ ಎಂದು ಬೀಗುವ ಮನೋಸ್ಥಿತಿಗಳಿಗೆ, “ಪ್ರೀತಿ ಬದುಕಿನ ಒಂದು ಭಾಗವಷ್ಟೆ, ಅಮರ ಮಧುರ ನೆನಪಷ್ಟೆ. ಸಾಧನೆಯ ದಾರಿಯೇ ಮುಖ್ಯ” ಎಂದು ತೋರಿಸಿಕೊಟ್ಟ ಕೃಷ್ಣ.

 

ಪ್ರೀತಿಯೆಂಬುದು ಒಂದೇ ಜೀವನಕಾಲದಲ್ಲಿ ಪೂರ್ತಿಯಾಗಿ ತನ್ನದೂ ಆಗಬಹುದು, ತನ್ನದಲ್ಲದೇ ಆಗಿಹೋಗಬಹುದು, ಹಂಚಿಕೊಂಡದ್ದೂ ಆಗಬಹುದು, ಗಣನೀಯವೂ ಆಗಬಹುದು, ಗೌಣವೂ ಆಗಬಹುದು, ಸಂಪೂರ್ಣ ಸ್ವಯಂ-ಪ್ರೇಮವೂ ಆಗಬಹುದು ಎಂಬುದನ್ನು ತೋರಿಸಿಕೊಟ್ಟಳು ರಾಧೆ.

 

ರಾಧೆ ಕೃಷ್ಣನನ್ನು ಮೋಹಿಸಿದಳು, ಪೂಜಿಸಿದಳು, ತನ್ನವನಾಗಲೀ ಎಂದು ಬಯಸಿದಳು. ಸಿಕ್ಕಾಗ ಸಂತೋಷದಿಂದ ಅರ್ಪಿಸಿಕೊಂಡಳು, ಅರೆಕ್ಷಣವೂ ಬಿಡದೇ ಅವನೊಂದಿಗೆ ಕಳೆದಳು. ಆದರೆ ತನ್ನವನೇ ಆಗಬೇಕು, ತನ್ನೊಂದಿಗೇ ಇರಬೇಕು ಎಂದು ರಚ್ಚೆಹಿದಿದು ಕೂರಲಿಲ್ಲ. ಜಗತ್ತು ಮುಂದುವರೆಯುಬೇಕು ಹಾಗೂ ಮುಂದುವರೆಯುತ್ತದೆ ಎಂಬುದು ಅವಳಿಗೆ ತಿಳಿದಿತ್ತು. ಕೃಷ್ಣ ಎಷ್ಟು ನನ್ನವನೋ, ಅಷ್ಟೇ ಜಗತ್ತಿಗೂ ಸೇರಿದವನು ಬೇಕಾದವನು ಎಂದು ಅರಿತಳು. ಕೃಷ್ಣನನ್ನು ಬಿಟ್ಟುಕೊಟ್ಟೂ ಸಂಪೂರ್ಣವಾಗಿ ತನ್ನವನನ್ನಾಗಿಸಿಕೊಂಡಳು.

 

ಹಾಗೆಯೇ ನಾವು ರಾಧೆಯಾದರೆ ಮಾತ್ರವೇ, ನಮಗೆ ನಮ್ಮ ಕೃಷ್ಣ ಸಿಗಲು ಸಾಧ್ಯ.

ಕೃಷ್ಣನಿಲ್ಲದೇ ಹೋದರೆ, ರಾಧೆಯ ಕಥೆಯೇ ಇಲ್ಲವಾಗುತ್ತದೆ. ಹಾಗೆಯೇ, ರಾಧೆಯ ಕಥೆಯ ಉದಾಹರಣೆ ಕೊಡದೇ ಕೃಷ್ಣನನ್ನು ನೀವು ಸಂಪೂರ್ಣವಾಗಿ ಬಣ್ಣಿಸಲಾರಿರಿ.

 

ರಾಧಾ-ಕೃಷ್ಣರೆಂಬುದು ಅರ್ಧನಾರೀಶ್ವರರಂತೆಯೇ ಅಪೂರ್ಣ-ಪರಿಪೂರ್ಣ.

One comment on “ದಾಂಪತ್ಯಕ್ಕೂ, ಸಾಂಗತ್ಯಕ್ಕೂ ಒಟ್ಟಿಗೇ ಅರ್ಥ ಕೊಡಬಲ್ಲವ ಒಬ್ಬನೇ ಒಬ್ಬ…..ಕೃಷ್ಣ.

Smita

ಪ್ರೀತಿ ಅನನ್ಯ ಪ್ರೀತಿಯು ಮಾನ್ಯ ಪ್ರೀತಿ ಇಲ್ಲದೇ ಜಗ ಶೂನ್ಯ
Unconditional love

Reply

Leave a Reply

Your email address will not be published. Required fields are marked *