Tuesday, 27 February, 2024

ಜಗದೋದ್ಧಾರಕ ಜಿಪುಣರ ಕಥೆಗಳು – ಭಾಗ 2

Share post

ನನ್ನ ಹಿಂದಿನ ಅಂಕಣದಲ್ಲಿ, ಕಂಪನಿಗಳು ಲಾಭ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದ ಕೆಲವು ವಿಷಯಗಳ ಬಗ್ಗೆ ಬರೆದಿದ್ದೆ. ವ್ಯವಹಾರ ಲೋಕದಲ್ಲಿ ಇವನ್ನು ಜಿಪುಣತನ ಅನ್ನಲಿಕ್ಕಾಗುವುದಿಲ್ಲ. ಯಾಕೆಂದರೆ ಇವು ಬರೀ ಒಂದೆರಡು ಡಾಲರ್ ಉಳಿಸುವ ಉಪಾಯಗಳಲ್ಲ. ಬದಲಿಗೆ ಕೋಟ್ಯಾಂತರ ಡಾಲರ್ ಉಳಿಸುವ ನಿಟ್ಟಿನಲ್ಲಿ ನೆರವಾದ ಹೆಜ್ಜೆಗಳು. ಇವು ಯಾರೋ ಒಬ್ಬ ಸುಮ್ಮನೇ ಮಧ್ಯಾಹ್ನದೂಟಕ್ಕೆ ಕೂತಾಗ ಟೀಮಿಗೆ ಕೊಟ್ಟ ಸಲಹೆಗಳಲ್ಲ. ನೂರಾರುಘಂಟೆಗಳ ಸಂಶೋಧನೆ ಮತ್ತು ಗ್ರಾಹಕರ ಪ್ರತಿಕ್ರಿಯೆಗಳನ್ನು ಬುದ್ಧಿವಂತಿಕೆಯಿಂದ ವಿಶ್ಲೇಷಿಸಿ ಕಂಡುಬಂದ ಮುಖ್ಯಾಂಶಗಳನ್ನು ಮತ್ತೆ ಮತ್ತೆ ಚರ್ಚಿಸಿ, ಆ ಕಾರ್ಯವಿಧಾನವನ್ನು ಹೇಗೆ ಉತ್ತಮಗೊಳಿಸುವುದು ಎಂದು ತಲೆಕೆಡಿಸಿಕೊಂಡ ನಂತರ ಬಂದ ನಿರ್ಧಾರಗಳ ಫಲಿತಾಂಶವೇ ಈ ಉಪಕ್ರಮಗಳು. ಈ ಜಿಪುಣತನದ ಹಿಂದೆ ಅಪಾರ ಶ್ರಮ ಮತ್ತು ಬುದ್ಧಿವಂತಿಕೆ ಎರಡೂ ಇರುತ್ತವೆ ಎಂಬುದನ್ನು ನಾವು ಸದಾ ಗಮನದಲ್ಲಿರಿಸಿಕೊಳ್ಳಬೇಕು.

 

ಇವನ್ನು ವ್ಯವಹಾರದ ಭಾಷೆಯಲ್ಲಿ ಸ್ಟ್ರಾಟಜಿ ಎನ್ನುತ್ತಾರೆ. ಕನ್ನಡದಲ್ಲಿ ಇದಕ್ಕೆ ಸೂಕ್ತ ಸಮಾನಾರ್ಥಕ ಪದ “ತಂತ್ರ”. ಹೌದು, ಎಲ್ಲಾರೀತಿಯಲ್ಲೂ ವಿಷಯವೊಂದನ್ನು ಅಧ್ಯಯನ ಮಾಡಿ, ಸರಿಯಾದ ಸಮಯಕ್ಕೆ ಕಾದು, ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಈ ಪ್ರಕ್ರಿಯೆ ತಂತ್ರವೇ ಸರಿ. ಎಷ್ಟೋ ಬಾರಿ ಉಪಾಯವೊಂದನ್ನು ಇಂದೇ ಕಾರ್ಯಗತಗೊಳಿಸುವ ಅವಕಾಶವಿದ್ದರೂ, ಬುದ್ಧಿವಂತ ವ್ಯವಹಾರಜ್ಞಾನಿ ತನ್ನ ಪ್ರತಿಸ್ಪರ್ಧಿಗಳು ಮೊದಲ ಹೆಜ್ಜೆಯಿಡುವ ತನಕವೋ ಅಥವಾ ಸುಸ್ತಾಗುವವರೆಗೋ ಕಾದು ನಂತರ ತನ್ನ ತಂತ್ರವನ್ನು ಹೊರತರುತ್ತಾನೆ. ಈ ಸ್ಟ್ರಾಟಜಿ ಎಂಬ ಪದ ಕೇಳಿದಕೂಡಲೇ ಕೆಲವರಿಗೆ ಓಹೋ ಇದು ಪಶ್ಚಿಮದ ಪದ. ಅಲ್ಲಿಯ ಕಂಪನಿಗಳೇ ಈ ರೀತಿಯ ತಂತ್ರಗಳನ್ನು ಬಳಸಿ ಗೆದ್ದಿರುವುದು ಹಾಗೂ ಆ ದೇಶ ಮತ್ತವರ ಕಂಪನಿಗಳು ಮುಂದುವರೆದಿರುವುದು. ಹಾಗಾಗಿ ಪಶ್ಚಿಮದವರೇ ಸ್ಟ್ರಾಟಜಿಯಲ್ಲಿ ಮುಂದೆ ಅಂತಾ ಎಂದೆನಿಸಬಹುದು. ಕೆಲವರ ಸುಪ್ತಪ್ರಜ್ಞೆಯಲ್ಲಿ ಪಶ್ಚಿಮದವರೇ ಬುದ್ಧಿವಂತರೂ ಎಂಬ ಅನಿಸಿಕೆಯೂ ಉಂಟು. ಇದು ನೂರಾರು ವರ್ಷ ನಮ್ಮನ್ನು ಆಳಿ, ನೀವು ಆಳಿಸಿಕೊಳ್ಳಲಿಕ್ಕೇ ಯೋಗ್ಯರು ಎಂದು ಹೇಳಿ ಹೇಳಿ ನಮ್ಮ ಮನಸ್ಸಿನಲ್ಲಿ ಬಿಳಿಯರು ತುಂಬಿದ ವಸಾಹತು ಮನಸ್ಥಿತಿಯ ಒಂದು ಭಾಗವೂ ಹೌದು. ಇದೇ ಕಾರಣಕ್ಕೆ ಇವತ್ತಿಗೂ ನಮಗೆ ನಮ್ಮ ಭಗವದ್ಗೀತೆಯಿಂದಾ ಆಯುರ್ವೇದದವರೆಗಿನ ಹಿತ್ತಲ ಮದ್ದುಗಳನ್ನು ಪಶ್ಚಿಮದವರು ಉಲ್ಲೇಖಿಸಿದರೇ ನಮಗೆ ಅದು ಶ್ರೇಷ್ಠ ಎಂದೆನಿಸುವುದು. ಬಾಬಾ ರಾಮದೇವ್ ಅಥವಾ ಕಂಚಿ ಆಚಾರ್ಯ ಹೇಳಿದರೆ “ಅದೇ ಗೊಡ್ಡು ಪುರಾಣ”, ಓಪನ್ಹೈಮರ್ ಅಥವಾ ಟಾಮ್-ಕ್ರೂಸ್ ಹೇಳಿದರೆ “ಅಬ್ಬಾ ಎಂತಾ ವಿದ್ವತ್ಪೂರ್ಣ ಮಾತು!” ಎಂದೆನಿಸುವುದು.

 

ಆದರೆ ನೆನಪಿರಲಿ, ಜಗತ್ತಿಗೆ ತಂತ್ರಗಳನ್ನು ಕಲಿಸುವುದರಲ್ಲಿ ನಾವು, ಅಂದರೆ ಭಾರತೀಯರು, ಯಾವತ್ತೂ ಹಿಂದೆ ಬಿದ್ದಿಲ್ಲ. “ಪಂಚತಂತ್ರ”ಗಳನ್ನು ಕ್ರಿಸ್ತ ಹುಟ್ಟುವುದಕ್ಕಿಂತಾ ಮೂರು ಶತಮಾನ ಮೊದಲೇ ಜಗತ್ತಿಗೆ ಕೊಟ್ಟಿದ್ದು ಇದೇ ಭಾರತ. ವಿಷ್ಣುಶರ್ಮರು ಕಥೆಗಳ ರೂಪದಲ್ಲಿ ಕೊಟ್ಟ ಮಿತ್ರ-ಭೇದ, ಮಿತ್ರ-ಸಂಪ್ರಾಪ್ತಿ, ಕಾಕೋಲುಕಿಯಮ್, ಲಬ್ಧಪ್ರಣಾಶಮ್, ಅಪರೀಕ್ಷಿತಕಾರಕಮ್ ಎಂಬ ಈ ಐದು ತಂತ್ರಗಳು ಅಂದಿನ ಕಾಲಕ್ಕೆ ನೀತಿಶಾಸ್ತ್ರ ಮತ್ತು ಸಾಮಾಜಿಕ/ನೈತಿಕ ಕಲಿಕೆಗೆ ಸೀಮಿತವಾಗಿದ್ದರೂ, ಇವುಗಳನ್ನು ಇಂದಿನ ಮನಃಶಾಸ್ತ್ರದ ಪರಿಮಿತಿಯಲ್ಲೂ ಬಹಳ ಚೆನ್ನಾಗಿ ಬಳಸಬಹುದಾಗಿದೆ. ಚಾಣಾಕ್ಯನ ಅರ್ಥಶಾಸ್ತ್ರವಂತೂ ತಂತ್ರಗಾರಿಕೆಯ ಬಗ್ಗೆ ಬರೆದ ಗ್ರಂಥಗಳಲ್ಲಿ ಅತ್ಯುನ್ನತವಾದದ್ದು ಎಂಬುದರಲ್ಲಿ ಸಂದೇಹವೇ ಇಲ್ಲ. ವ್ಯವಹಾರ ಕ್ಷೇತ್ರಗಳಲ್ಲೂ ನಮ್ಮವರ ತಂತ್ರಗಾರಿಕೆಗಳು ಅತ್ಯುನ್ನತವೇ ಆಗಿದ್ದರೂ, ಅವಕ್ಕೆ ಹೆಚ್ಚಿನ ಜನ ಖ್ಯಾತಿ ಸಿಕ್ಕಿಲ್ಲವಷ್ಟೇ. ಮತ್ತಿದರದಲ್ಲಿ ಪಶ್ಚಿಮದ ಮಾಧ್ಯಮಗಳ ಪಾಲೂ ಇದೆ. ಪಶ್ಚಿಮ ಎಂದಿಗೂ ಭಾರತದ ಉತ್ಪನ್ನಗಳನ್ನು ಉತ್ತಮವಾದದ್ದು ಎಂದು ಒಪ್ಪಿಕೊಳ್ಳಲೇ ಇಲ್ಲ. ಇಂದಿಗೂ ಆ ಮೂದಲಿಕೆ ಮುಂದುವರೆದಿದೆ. ಇಸ್ರೋದ ಸಾಧನೆಗಳು, ಲ್ಯಾಂಡ್-ರೋವರ್ ಮತ್ತು ಟೆಟ್ಲೀಗಳನ್ನೇ ಕೊಂಡುಕೊಂಡ ಟಾಟಾ, ಜಗತ್ತಿನಲ್ಲೇ ಹೆಚ್ಚಿನ ಸ್ಟೀಲ್ ಉತ್ಪಾದಿಸುವ ಮಿತ್ತಲ್, ಸಾಫ್ಟ್ವೇರ್ ಅಂದರೆ ಬೆಂಗಳೂರು ಎಂಬ ಹೆಸರುಗಳ ನಡುವೆಯೂ ಅವರ ಜರಿಯುವಿಕೆ, ಅಪಹಾಸ್ಯ ಮುಂದುವರಿದೇ ಇದೆ. ಅತ್ಯುತ್ತಮವಾದದ್ದೆಲ್ಲಾ ಅಮೇರಿಕಾ ಮತ್ತು ಯೂರೋಪಿನಿಂದಲೇ ಬರುತ್ತದೆ, ತಂತ್ರಗಾರಿಕೆಯೆಂದರೆ ಪಶ್ಚಿಮವೇ ಎಂಬ ಬಾವುಟವನ್ನವರು ಹಾರಿಸುತ್ತಲೇ ಇದ್ದಾರೆ. ಹಾರಿಸಲಿ ಬಿಡಿ, ಹಗ್ಗ ತುಂಡರಿಸುವ ಸಮಯ ದೂರವೇನಿಲ್ಲ.

ಭಾರತೀಯರ ಕಂಪನಿಗಳ ತಂತ್ರಗಾರಿಕೆಯ, ಅದರಲ್ಲೂ ಕಂಪನಿಯ ಲಾಭಹೆಚ್ಚಿಸುವ ತಂತ್ರಗಾರಿಕೆಯ ಕಥೆಗಳು ಬೇಕಾದಷ್ಟಿವೆ. ಭಾರತೀಯರ ಜಿಪುಣತನ ಮಜವಾಗಿಯೂ ಇರುತ್ತವೆ. ಇಳಿಜಾರಿನಲ್ಲಿ ಎಂಜಿನ್ ಆಫ್ ಮಾಡಿಕೊಂಡು ಅಥವಾ ನ್ಯೂಟ್ರಲ್ಲಿನಲ್ಲಿ ಹೋಗಿ ಪೆಟ್ರೋಲ್ ಉಳಿಸೋದು. ಪಕ್ಕದಮನೆಯರ ಹತ್ರ ನ್ಯೂಸ್-ಪೇಪರ್ ವೆಚ್ಚವನ್ನು 50-50 ಹಂಚಿಕೊಳ್ಳೋದು, ಮನೆಗೆ ಬಣ್ಣಬಳಿಯುವಾಗ ತಂದ ಪೇಂಟ್ ಡಬ್ಬಗಳನ್ನು ಬಕೀಟಾಗಿ ಬಳಸೋದು, ಒಂದು ಸಲ ಟೀ ಮಾಡಿಯಾದ ಮೇಲೆ ಸೋಸಣಿಗೆಯಲ್ಲಿ ಉಳಿದ ಟೀಪುಡಿಯನ್ನ ಬಿಸಾಡೋ ಬದಲು ಇನ್ನೊಂದೆರಡು ಸಲ ಬಳಸೋದು, ರಿಕ್ಷಾ ಬದಲಿಗೆ ಊರಲ್ಲಿರುವ ಟ್ರಾಕ್ಟರಿಗೋ ಟಿಲ್ಲರಿಗೋ ಎರಡು ಸೀಟು ಕೂರಿಸಿ ಹೈವೇಯಿಂದ ಹಳ್ಳಿಯವರೆಗೆ ಬಾಡಿಗೆ ಓಡಿಸೋದು, ಹೀಗೆ ಸೀಮಿತ ಸಂಪನ್ಮೂಲಗಳನ್ನೇ ಅಸಾಂಪ್ರದಾಯಿಕ ವಿಧಾನಗಳ ಮೂಲಕ ಬಳಸಿಕೊಂಡು ಹೊಸರೀತಿಯ ಪರಿಹಾರಗಳನ್ನು ಕಂಡುಕೊಳ್ಳುವ ಈ ಸಾಮರ್ಥ್ಯ ಇದೆಯಲ್ಲಾ, ಇದು ಭಾರತೀಯರ ಜೀನುಗಳಲ್ಲೇ ಬಂದಿದೆ. ಇದು ಬರೀ ಹಣವುಳಿಸುವ ಧೋರಣೆಯನ್ನಷ್ಟೇ ಅಲ್ಲ, ಜನಸಂಖ್ಯಾಸ್ಪೋಟದಿಂದ ಕಂಗೆಟ್ಟ ಭಾರತೀಯರ “ಇದ್ದುದ್ದರಲ್ಲೇ ಹೊಂದಿಕೊಂಡು ಹೋಗುವ ಸ್ವಭಾವ”ವನ್ನೂ ನಿರೂಪಿಸುತ್ತದೆ. ಚತುರತೆ, ಸೃಜನಶೀಲತೆ ಮತ್ತು ಹೊಂದಾಣಿಕೆಯ ತ್ರಿಕೋನವಾದ ಈ ಇಂಡಿಯನ್ ಜುಗಾಡ್ ಎಂಬ ಪರಿಕಲ್ಪನೆ, ನಮ್ಮ ಜೀವನದ ವಿವಿಧ ಅಂಶಗಳಲ್ಲಿ ಕಂಡುಬರುವ ಸ್ಥಿತಿಸ್ಥಾಪಕತ್ವ ಮತ್ತು ಹೊಸತನಕ್ಕಾಗಿ ತುಡಿಯುವ ಮನೋಭಾವವನ್ನು ತೋರಿಸುತ್ತದೆ.

“ಇಂಡಿಯನ್ ಜುಗಾಡ್”

ಇದನ್ನೇ ಈಗ ದೊಡ್ಡಮಟ್ಟದಲ್ಲಿ, ಎಂದರೆ ಜುಗಾಡ್’ನಿಂದ ಸ್ಟ್ರಾಟಜಿ ಮಟ್ಟಕ್ಕೂ, ಸಣ್ಣಕೆಲಸದಿಂದ ಕೈಗಾರಿಕೆಗೂ ಕೊಂಡೊಯ್ಯೋಣ ಬನ್ನಿ. ಕಾರ್ಖಾನೆ ಅಂದಕೂಡಲೇ ನಮಗೆ ಮೊದಲು ಮನಸ್ಸಿನಲ್ಲಿ ಮೂಡೋದು ಶಾಖ ಅಲ್ಲವೇ. ಒಂದು ಬಿಸಿಯಾದ ದೊಡ್ಡ ರೂಮು, ಮತ್ತದರ ಶಾಖದಲ್ಲಿ ಬೆವರುತ್ತಿರುವ ಕಾರ್ಮಿಕರನ್ನು ಊಹಿಸಿಕೊಳ್ಳದೇ ನಮ್ಮ ಕಾರ್ಖಾನೆಯ ಕಲ್ಪನೆ ಪೂರ್ತಿಯಾಗುವುದೇ ಇಲ್ಲ. ಮತ್ತದು ಕಾರ್ಖಾನೆಯ ವಿಚಾರದಲ್ಲಿ ನಿಜ ಕೂಡಾ. ಇವತ್ತಿಗೂ ಕಾರ್ಖಾನೆಗಳೆಂದರೆ ಬಿಸಿಗಾಳಿಯ ಕೂಪಗಳೇ. ಆ ಶಾಖವನ್ನು ಇಳಿಸಲಿಕ್ಕೆ ಬೇರೆಬೇರೆ ಹಂತದಲ್ಲಿ ಹೀಟ್ ರಿಕವರಿ ಯೂನಿಟ್ಟುಗಳಿರುತ್ತವೆ. ಒಂದೋ ತಂಪುಗಾಳಿ ಅಥವಾ ತಂಪುನೀರನ್ನು ಬಳಸಿ ಶಾಖವನ್ನು ಕಡಿಮೆ ಮಾಡಲಾಗುತ್ತದೆ. ಭಾರತದ ಪ್ರಮುಖ ಉಕ್ಕಿನ ತಯಾರಕರಲ್ಲಿ ಒಂದಾದ ಟಾಟಾ ಸ್ಟೀಲ್, 1990ರ ದಶಕದಲ್ಲಿ ತನ್ನ ಹೀಟ್ ರಿಕವರಿ ಯೂನಿಟ್ಟುಗಳನ ವಿನ್ಯಾಸವನ್ನು ಬದಲಿಸಿ, ಕೇವಲ ನೀರನ್ನು ತಂಪಾಗಿಸುವ ಕೆಲಸಕ್ಕೆ ಬಳಸಿಲಾರಂಭಿಸಿದರು. ಶಾಖದೊಂದಿಗೆ ನೀರಿನ ಮಾತುಕತೆಯಲ್ಲಿ ಆವಿ ಹುಟ್ಟಲೇಬೇಕಲ್ಲ. ಈ ಆವಿಯನ್ನು ಸುಮ್ಮನೇ ವಾತಾವರಣಕ್ಕೆ ಬಿಡುವ ಬದಲು, ಇದನ್ನು ಇನ್ನೊಂದು ಯೂನಿಟ್ಟಿನೆಡೆಗೆ ಕಳಿಸಿ, ಆ ಹಾದಿಯಲ್ಲಿ ಟರ್ಬೈನುಗಳನ್ನಿಟ್ಟು ವಿದ್ಯುತ್ ಉತ್ಪಾದಿಸಲು ಬಳಸಿಕೊಂಡರು. ಹೀಗೆ, ಪೋಲಾಗುತ್ತಿದ್ದ ಶಾಖವನ್ನು ಸೆರೆಹಿಡಿಯುವುದಷ್ಟೇ ಅಲ್ಲದೇ ಅದನ್ನು ಮರುಬಳಕೆ ಮಾಡುವ ಮೂಲಕ, ಟಾಟಾ ಸ್ಟೀಲ್ ತನ್ನ ಶಕ್ತಿಯ ಬಳಕೆ ಮತ್ತದಕ್ಕೆ ಸಂಬಂಧಿತ ವೆಚ್ಚಗಳನ್ನು ಗಣನೀಯವಾಗಿ ಕಡಿಮೆಗೊಳಿಸಿತು. ಟಾಟಾ ಇದನ್ನು ಕೇವಲ ಉಳಿತಾಯ ಎಂದಷ್ಟೇ ಬಿಂಬಿಸದೇ, ಮಾಲಿನ್ಯ ಕಡಿಮೆಗೊಳಿಸುವ ಮೂಲಕ ಪರಿಸರದೆಡೆಗಿನ ತನ್ನ ಕೊಡುಗೆ ಎಂದೂ ಪರಿಗಣಿಸಿ, ಈ ವ್ಯವಸ್ಥೆಯನ್ನು ಉತ್ತಮಗೊಳಿಸುವ ಆಲೋಚನೆಯನ್ನೂ ಮತ್ತು ಪರಿಸರಸಂಬಂಧೀ ಕೊಡುಗೆಗಳನ್ನೂ ಮುಂದಿನ ವರ್ಷದ ಗುರಿಗಳಲ್ಲಿ ಸೇರಿಸಿಕೊಂಡಿತು.

 

2010ರಲ್ಲಿ, ಗುಜರಾತ್‌ನ ಅರವಿಂದ್ ಲಿಮಿಟೆಡ್ ಜವಳಿ ಕಾರ್ಖಾನೆಯು ತನ್ನ ಮಗ್ಗ ಮತ್ತು ಹೊಲಿಗೆ ಮಶೀನುಗಳಿಗೆ, ವಿದ್ಯುತ್ಚಕ್ತಿಯಿಂದ ಚಲಿಸುವ ಮೋಟರುಗಳನ್ನು ಬಳಸುವ ಬದಲು, ಬೃಹತ್ ಏರ್ ಕಂಪ್ರೆಸರ್ ಅನ್ನು ಸ್ಥಾಪಿಸಿ, ಈ ಏರ್ ಕಂಪ್ರೆಸರಿನಿಂದ ಮೂಲಕ ಸಿಗುವ ಹೆಚ್ಚುಒತ್ತಡದ ಗಾಳಿಯನ್ನು, ತಮ್ಮ ಯಂತ್ರೋಪಕರಣಗಳ ಚಲನೆಯನ್ನು ನಿಯಂತ್ರಿಸಲು ಬಳಸಲಾರಂಭಿಸಿದರು. ಈ ಹೊಸಾವಿಧಾನವು ಅವರ ವಿದ್ಯುತ್ ಬಳಕೆಯನ್ನು ಎಷ್ಟೋಪಟ್ಟು ಕಡಿಮೆಗೊಳಿಸಿತು. ಅದೂ ಕೂಡಾ ತಮ್ಮ ಉತ್ಪಾದನೆಯಲ್ಲಿ ಯಾವುದೇ ರೀತಿಯ ಕೊರತೆಯಿಲ್ಲದಂತೆ! ಗೋದ್ರೇಜ್ ಗ್ರೂಪ್, 2004ರಲ್ಲಿ ತನ್ನೆಲ್ಲಾ ವಿವಿಧ ವ್ಯವಹಾರಗಳಲ್ಲಿ, ಆಫೀಸು ಕಾರ್ಖಾನೆಗಳಲ್ಲಿ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಬೇರೆ ಬೇರೆ ರೀತಿಯ ತಂತ್ರಗಳನ್ನು ಜಾರಿಗೆ ತಂದಿತು. ಆಫೀಸು, ಕಾರ್ಖಾನೆಗಳಲ್ಲಿದ್ದ ಹಳೆಯ ಬಲ್ಬುಗಳನ್ನು ಹೆಚ್ಚಿನ ಉಳಿತಾಯ ಸಾಮರ್ಥ್ಯ ಹೊಂದಿದ ಬಲ್ಬುಗಳಿಂದ ಬದಲಾಯಿಸುವುದರಿಂದ ಹಿಡಿದು, ಸಿಕ್ಸ್ ಸಿಗ್ಮಾ, ಬ್ಯಾಲೆನ್ಸ್ ಸ್ಕೋರ್-ಕಾರ್ಡ್ ಮತ್ತು ಲೀನ್ ನಿರ್ವಹಣಾತಂತ್ರಗಳ ಅನುಸ್ಥಾಪನೆಯೊಂದಿಗೆ ಇಡೀ ಕಂಪನಿಯನ್ನೇ ಹೊಸದೊಂದು ಆಡಳಿತಯುಗಕ್ಕೆ ತಂದುನಿಲ್ಲಿಸಿದರು. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿದ್ದು ಮಾತ್ರವಲ್ಲದೇ, ಉತ್ಪಾದನಾ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಅಥವಾ ಉತ್ತಮಗೊಳಿಸುವ ನಿಟ್ಟಿನಲ್ಲೂ ಬಹಳಷ್ಟು ಯೋಜನೆಗಳು ಜಾರಿಗೆಬಂದವು.

 

ಐಟಿಸಿಯವರ ಹೋಟೆಲುಗಳು ಯಾರಿಗೇ ತಾನೇ ಗೊತ್ತಿಲ್ಲ. ಭಾರತೀಯಶೈಲಿಯ ಆತಿಥ್ಯಕ್ಕೆ ಹೆಸರುವಾಸಿಯಾದ ಐಟಿಸಿ ತನ್ನ ತ್ಯಾಜ್ಯ ನಿರ್ವಹಣೆಯ ಮೇಲೆ ಗಮನವನ್ನು ಕೇಂದ್ರೀಕರಿಸುವ ಮೂಲಕ, ಕಂಪನಿಯ ಲಾಭ ಹೆಚ್ಚು ಮಾಡಿದ್ದು ಮಾತ್ರವಲ್ಲದೇ, ದೇಶದ ಅತ್ಯಂತ ಹೆಚ್ಚು ಪರಿಸರಸ್ನೇಹಿ ಹೋಟೆಲ್ ಗ್ರೂಪ್ ಎಂದೂ ಹೆಸರುಪಡೆಯಿತು. ಮೊದಲನೆಯದಾಗಿ ಪ್ಲಾಸ್ಟಿಕ್ ಬಳಕೆಯನ್ನು ಸರಿಸುಮಾರು 80% ಕಡಿಮೆ ಮಾಡಿದ ಐಟಿಸಿ, ತನ್ನ ಸರಬರಾಜು ಕಂಪನಿಗಳಿಗೂ ಪ್ಲಾಸ್ಟಿಕ್ ಬಳಕಯನ್ನು ನಿಷೇಧಿಸಿತು. ತನಗೆ ತರಕಾರಿ, ಹಣ್ಣು, ಸೋಪು ಪೂರೈಸುತ್ತಿದ್ದ ಕಂಪನಿಗಳಿಗೆ “ಎಲ್ಲವೂ ಮರುಬಳಸಬಹುದಾದ ಕಾಗದದ ಡಬ್ಬಗಳಲ್ಲೇ ಬರಬೇಕು” ಎಂದು ಆದೇಶಿಸಿತು. ಬಳಕೆಯಾಗದೇ ಉಳಿದ ಆಹಾರಪದಾರ್ಥಗಳನ್ನು ಬಳಸಿ, ತನ್ನದೇ ಸಾವಯವ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಿ ಗೊಬ್ಬರ ತಯಾರಿಸಿತು. ಮೀಥೇನ್ ಪ್ಲಾಂಟುಗಳನ್ನು ಸ್ಥಾಪಿಸಿ, ವಿದ್ಯುತ್ತನ್ನೂ ತಯಾರಿಸಿತು. ಭಾರತದಲ್ಲೇ ಮೊದಲಬಾರಿಗೆ, ಹೋಟೆಲ್ ಸಂಸ್ಥೆಯೊಂದು “ನಾವು ಘನತ್ಯಾಜ್ಯವನ್ನು ಉತ್ಪಾದಿಸುವುದೇ ಇಲ್ಲ” ಎಂಬ ನೀತಿಯನ್ನು ಪಾಲಿಸಿ ತೋರಿಸಿತು. ಈ ತಂತ್ರಗಳು ಐಟಿಸಿಯ ತ್ಯಾಜ್ಯ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಿದ್ದಲ್ಲದೆ, ತನ್ನ ಹೊಟೇಲ್‌ಗಳನ್ನು ಪರಿಸರ ಪ್ರಜ್ಞೆಯ ಬ್ರ್ಯಾಂಡ್‌ ಆಗಿಯೂ ಬದಲಾಯಿಸಿತು. ಬೆಂಗಳೂರಿನಲ್ಲಿರುವ ಐಟಿಸಿ ಗಾರ್ಡೇನಿಯಾ ಭಾರತದ ಮೊತ್ತಮೊದಲ LEED ಪ್ಲಾಟಿನಂ ಪ್ರಮಾಣಪತ್ರ ಪಡೆದ ಹೋಟೆಲ್.

 

ಪಾಲಿಸಿದಾರರಿಗೆ ಅಂಚೆಯಮೂಲಕ ಸೂಚನೆಗಳನ್ನು ಕಳಿಸುತ್ತಿದ್ದ ಎಲ್ಲೈಸಿ, ಅಂಚೆಯಿಂದ ಮೊಬೈಲ್ ಸಂದೇಶದೆಡೆಗೆ ಕಾಲಿಟ್ಟು, ಅಂಚೆಯ ಸ್ಟ್ಯಾಂಪಿನ ಖರ್ಚಿನಲ್ಲೇ ಕೋಟ್ಯಂತರ ರೂಪಾಯಿ ಉಳಿಸಿತು. ಓಲಾ, ತನ್ನ ಶೈಶವಾವಸ್ಥೆಯಲ್ಲಿ ಗ್ರಾಹಕರನ್ನೇ ಜಾಹೀರಾತು ಮಾಧ್ಯಮವಾಗಿ ಬಳಸಿಕೊಂಡು, ಡಿಸ್ಕೌಂಡ್ ಕೋಡ್’ಗಳ ಮೂಲಕ ಹೆಚ್ಚೆಚ್ಚು ಜನರನ್ನು ತಲುಪಿತು, ಹಾಗೂ ಜಾಹೀರಾತು ವೆಚ್ಚವನ್ನು ಕಡಿಮೆಗೊಳಿಸಿಕೊಂಡಿತು. ಬರೇ ಹೋಟೆಲುಗಳ ಮೇಲೆ ಅವಲಂಬಿತವಾಗದೇ, ತನಗೆ ಬೇಕಾದ ಜಾಗಗಳಲ್ಲಿ ತಾನೇ ಕ್ಲೌಡ್ ಕಿಚನ್ನುಗಳನ್ನು ಸ್ಥಾಪಿಸಿಕೊಂಡು, ಜೊಮ್ಯಾಟೋ ತನ್ನ ನಿರ್ವಹಣಾ ವೆಚ್ಚವನ್ನು ಕಡಿಮೆಮಾಡಿ, ಹೆಚ್ಚು ಲಾಭಗಳಿಸಿತು.

 

ಭಾರತೀಯರ ಯುಕ್ತಿಗಳ ಬಗ್ಗೆ ಬರೆದರೆ ಇನ್ನೊಂದು ಲೇಖನವನ್ನೂ ಬರೆಯಬಹುದು ಹಾಗೂ ಈ ಎಲ್ಲಾ ಉದಾಹರಣೆಗಳು ಭಾರತೀಯ ಕಂಪನಿಗಳ ಸಾಮರ್ಥ್ಯವನ್ನೂ, ಭಾರತೀಯರೂ ತಂತ್ರಗಾರಿಕೆಯಲ್ಲಿ ನಿಪುಣರು ಎಂಬುದನ್ನೂ ಎತ್ತಿ ತೋರಿಸುತ್ತವೆ. ಮುಂದಿನ ಮತ್ತು ಕೊನೆಯ ಭಾಗದಲ್ಲಿ, ಕೇವಲ ತನ್ನ ಉದ್ಯೋಗಿಸಂಬಂಧೀ ವೆಚ್ಚಗಳನ್ನಷ್ಟೇ ಯುಕ್ತಿಯಿಂದ ನಿಭಾಯಿಸಿ, ಲಾಭಗಳಿಸಿದ ಕಂಪನಿಗಳ ಬಗ್ಗೆ ತಿಳಿದುಕೊಳ್ಳೋಣ.

0 comments on “ಜಗದೋದ್ಧಾರಕ ಜಿಪುಣರ ಕಥೆಗಳು – ಭಾಗ 2

Leave a Reply

Your email address will not be published. Required fields are marked *