Tuesday, 27 February, 2024

ಜಗದೋದ್ಧಾರಕ ಜಿಪುಣರ ಕಥೆಗಳು – ಭಾಗ 1

Share post

ನಿಮ್ಮ ಪ್ರಕಾರ ಕಂಪನಿಯೊಂದರ ಮೂಲ ಉದ್ದೇಶವೇನಿರಬಹುದು? ನೀವು ಕೆಲಸ ಮಾಡುವ ಕಂಪನಿಯಿರಬಹುದು, ಅಥವಾ ಮಾರುಕಟ್ಟೆಯಲ್ಲಿ ನೋಡುವ ಬೇರೆ ಕಂಪನಿಗಳಿರಬಹುದು. ಅದರ ಮೂಲ ಮತ್ತು ಅಂತಿಮ ಉದ್ದೇಶವೇನು? ಕಂಪನಿಗಳಿಗೆ ವಿಷನ್ ಮತ್ತು ಮಿಷನ್ ಸ್ಟೇಟ್ಮೆಂಟುಗಳಿರುತ್ತೆ ಅನ್ನೋದನ್ನ ನೀವು ಓದಿರ್ತೀರಿ. ಕೆಲಕಂಪನಿಗಳಿಗೆ ತಮ್ಮ ವಲಯದೊಳಗೆ ಜಗತ್ತಿನಲ್ಲೇ ಅತ್ಯುತ್ತಮ ಕಂಪನಿಯಾಗುವ ವಿಷನ್ ಸ್ಟೇಟ್ಮೆಂಟ್ ಇರುತ್ತೆ. ಇನ್ನು ಕೆಲಕಂಪನಿಗಳಿಗೆ ಜನರ ಜೀವನಮಟ್ಟವನ್ನು ಸುಧಾರಿಸೋದು, ಬೇರೆ ಕಂಪನಿಗಳಿಗೆ ಜಗತ್ತನ್ನು ಉದ್ದರಿಸೋದು ವಿಷನ್ ಆಗಿರುತ್ತೆ. ಈಗಂತೂ ಸ್ಟಾರ್ಟಪ್ಪುಗಳ ಸಂಸ್ಥಾಪಕರುಗಳ ಭಾಷಣ, ಅವರ ವಿಷನ್ನುಗಳನ್ನ ಕೇಳಿದ್ರೆ “ಆಹಾ! ಜಗತ್ತನ್ನೇ ಉದ್ಧರಿಸಲು ಬಂದಿರುವ ಮಹಾನ್ ಮಾನವರಿವರು” ಎಂದೆನಿಸದೇ ಇರಲಾರದು. ಆದರೆ ಒಂದು ನೆನಪಿರಲಿ, ಪ್ರತಿಯೊಂದು ಕಂಪನಿಯ ಮೂಲ ಮತ್ತು ಅಂತಿಮ ಉದ್ದೇಶ ತನ್ನ ಸ್ಥಾಪಕರು ಮತ್ತು ಶೇರ್-ಹೋಲ್ಡರುಗಳಿಗೆ ಹಣ ಮಾಡುವುದಷ್ಟೇ. ತಂತ್ರಜ್ಞಾನ ಅಭಿವೃದ್ಧಿ, ಜೀವನ ಮಟ್ಟ ಸುಧಾರಣೆ, ಜಗದೋದ್ಧಾರ ಎಲ್ಲ ವ್ಯವಹಾರದ ಉಪ-ಉತ್ಪನ್ನಗಳಷ್ಟೇ. ಯಾವ ಫಾರ್ಮಾ ಕಂಪನಿಗೂ ಜಗತ್ತಿನ ರೋಗಗಳನ್ನು ನಿರ್ಮೂಲ ಮಾಡುವ ವಿಷನ್ ಇಲ್ಲ. ವಾಸ್ತವದಲ್ಲಿ ಎಲ್ಲಾ ರೋಗಗಳು ನಿರ್ಮೂಲನೆಯಾದರೆ ಅವರಿಗೆ ಕೆಲಸವೇ ಇರಲ್ಲ. ಯಾವ ಆಪಲ್, ಮೈಕ್ರೋಸಾಫ್ಟಿಗೂ ಜನರ ಜೀವನಮಟ್ಟ ಸುಧಾರಿಸುವ ಉದ್ದೇಶ ಇಲ್ಲ. ಯಾವ ಸುಧಾರಣೆಯಿಂದ ಹಣ ಬರುತ್ತೆ ಅಂತಾ ಅವರಿಗೆ ಗೊತ್ತಿದೆಯೋ, ಅದನ್ನೇ ಸುಧಾರಣೆ ಅಂತಾ ನಮಗೆ ನಂಬಿಸಲಾಗಿದೆ ಅಷ್ಟೇ.

 

ಹಾಗಾದರೆ ಲಾಭ ಮಾಡೋದು ಹೇಗೆ? ಇದಕ್ಕೆ ಹಲವಾರು ದಾರಿಗಳಿವೆ. ಪ್ರತಿಸ್ಪರ್ಧಿಗಳಿಗಿಂತಾ ಒಳ್ಳೆಯ ಉತ್ಪನ್ನವನ್ನು ಕೊಟ್ಟು, ಸ್ವಲ್ಪವೇ ಹೆಚ್ಚು ಬೆಲೆಗೆ ಮಾರೋದು ಒಂದು ದಾರಿಯಾದ್ರೆ, ಬೆಲೆ ಕಡಿಮೆಯಿಟ್ಟು ಹೆಚ್ಚು ಉತ್ಪನ್ನಗಳನ್ನು ಮಾರೋದು ಇನ್ನೊಂದು ದಾರಿ. ಮೊದಲನೆಯದರಲ್ಲಿ ಕ್ವಾಲಿಟಿ (ಗುಣಮಟ್ಟ) ಮುಖ್ಯವಾದರೆ, ಎರಡನೆಯದರಲ್ಲಿ ಕ್ವಾಂಟಿಟಿ (ಪ್ರಮಾಣ) ಮುಖ್ಯವಾಗುತ್ತದೆ. ಇವೆರಡೂ ತಂತ್ರಗಳಲ್ಲಿ ಯಾವುದು ನನ್ನ ದಾರಿ ಎನ್ನುವುದನ್ನು ಕಂಪನಿಯೊಂದು ತನ್ನ ಪ್ರಾರಂಭದ ಹಂತದಲ್ಲೇ ನಿರ್ಧರಿಸಬೇಕಾಗುತ್ತದೆ. ಈ ತಂತ್ರಗಳನ್ನು ಬಳಸಿ ಒಂದು ಸಲ ಮಾರುಕಟ್ಟೆಯಲ್ಲಿ ಸ್ವಾಮ್ಯ ಸಾಧಿಸಿದಮೇಲೆ, ಈ ಎರಡೇ ತಂತ್ರಗಳು ಸಾಕಾಗುವುದಿಲ್ಲ. ಬೇರೆ-ಬೇರೆ ದತ್ತಾಂಶಗಳ ಆಧಾರದ ಮೇಲೆ, ಬೇರೆ-ಬೇರೆ ಲಾಭದಾಯಕ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಈ ಹಣ ಉಳಿಸುವ ತಂತ್ರಗಳನ್ನು ಕಂಡುಹಿಡಿಯುವುದಕ್ಕಾಗಿಯೇ, ಕಂಪನಿಗಳು ಹಣ ಖರ್ಚು ಮಾಡುತ್ತವೆ. ಸಾವಿರಾರು ರೀತಿಯ ದತ್ತಾಂಶಗಳನ್ನು ತರಿಸಿಕೊಂಡು, ಅದನ್ನು ನೂರು ರೀತಿಯ ಮಸೂರಗಳಲ್ಲಿ ನೋಡಿ, ಯಾವುದನ್ನು ಎಷ್ಟು ನಿಯಂತ್ರಿಸಿದರೆ ಎಲ್ಲಿ ಲಾಭ ಹೆಚ್ಚಾಗುತ್ತದೆ ಎಂಬುದನ್ನು ಕಂಡುಹಿಡಿಯುತ್ತಾರೆ. ಈಗೀಗ ಈ ರೀತಿಯ ಡೇಟಾಮಾಡೆಲ್ಲುಗಳನ್ನು ರಚಿಸುವ, ಅನಾಲಿಸಿಸ್ ಮಾಡುವ, ಡೇಟಾ ಸೈಂಟಿಸ್ಟುಗಳಿಗೆ ಭಾರೀ ಬೇಡಿಕೆಯಿದೆ. ಕಳೆದ ಐವತ್ತು ವರ್ಷಗಳಲ್ಲಿ ಬೇರೆ-ಬೇರೆ ಕಂಪನಿಗಳು ಬೇರೆ-ಬೇರೆ ರೀತಿಯ ತಂತ್ರಗಳನ್ನು ಬಳಸಿ, ಖರ್ಚು ಕಡಿಮೆ ಮಾಡಿವೆ. ದುಡ್ಡುಳಿಸುವುದು ಎಂದರೆ ಜಿಪುಣತಯೇ ಆಗಬೇಕಿಲ್ಲ. ಎಷ್ಟೋ ಕಡೆ ವ್ಯವಹಾರದಲ್ಲಿ ಖರ್ಚು ಉಳಿಸಿ, ಲಾಭ ಹೆಚ್ಚುವ ಮಾಡುವ ತಂತ್ರಗಳಿಂದಾಗಿ ಜನಸಾಮಾನ್ಯರ ಜೀವನಮಟ್ಟವನ್ನೂ ಸುಧಾರಿಸುವ ಹೊಸ ಪರಿಕಲ್ಪನೆಗಳೂ ಸಿಕ್ಕಿವೆ.

 

ನಾಗರೀಕ ವಿಮಾನಯಾನ ಜಗತ್ತಿನ ಅತ್ಯಂತ ದುಬಾರಿ ವ್ಯವಹಾರಗಳಲ್ಲೊಂದು. ಸಾವಿರಾರು ರೀತಿಯ ಖರ್ಚಿನ ಬಾಬ್ತುಗಳಿರುವ ಈ ವ್ಯವಹಾರದಲ್ಲಿ ಒಂದೇ ಒಂದು ಸಣ್ಣ ಬದಲಾವಣೆಯೂ ಅತೀದೊಡ್ಡ ಪರಿಣಾಮಗಳನ್ನು ತರಬಹುದು. 1980ರಲ್ಲಿ “ಅಮೆರಿಕನ್ ಏರ್ಲೈನ್” ಸಂಸ್ಥೆ, ತನ್ನ ವಿಮಾನಗಳ ಫಸ್ಟ್-ಕ್ಲಾಸಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಬಡಿಸಲಾಗುತ್ತಿದ್ದ ಸಲಾಡ್’ನಿಂದ ಒಂದೇ ಒಂದು ಆಲಿವ್ ಅನ್ನು ಕಡಿಮೆ ಮಾಡಿ ವರ್ಷಕ್ಕೆ ಸುಮಾರು ನಲವತ್ತು ಸಾವಿರ ಡಾಲರ್ ಉಳಿಸಿತ್ತು. ಅತೀ ಸಣ್ಣದೆಂಬಂತೆ ತೋರುವ ಈ ಖರ್ಚನ್ನು ಇಳಿಸುವುದರ ಮೂಲಕ ಲಾಭತರುವ, ಅರ್ಥಶಾಸ್ತ್ರದ ಮಾರ್ಜಿನಲ್ ಕಾಸ್ಟ್ ಪರಿಕಲ್ಪನೆಯ ಮಹತ್ವವನ್ನು ತೋರಿಸಲಿಕ್ಕೆ ಈ ಉದಾಹರಣೆ ಅತ್ಯಂತ ಸೂಕ್ತವಾದದ್ದು. ಅಮೇರಿಕನ್ ರೀಟೇಲ್ ದೈತ್ಯ ವಾಲ್-ಮಾರ್ಟ್ “ಕ್ರಾಸ್-ಡಾಕಿಂಗ್” ಎಂಬ ಪರಿಕಲ್ಪನೆಯನ್ನು ಬಳಸಿ, ತನ್ನ ವಿತರಣಾ ಕೇಂದ್ರಗಳಲ್ಲಿ ದಾಸ್ತಾನು ಸಂಗ್ರಹಿಸುವ ಬದಲು, ಉತ್ಪನ್ನಗಳನ್ನು ಸರಬರಾಜುದಾರರ ಟ್ರಕ್‌ಗಳಿಂದ, ನೇರವಾಗಿ ವಿತರಣೆಗಾಗಿ ಹೋಗಲು ತಯಾರಾಗಿ ನಿಂತಿರುವ ಟ್ರಕ್‌ಗಳಿಗೆ ವರ್ಗಾಯಿಸಲಾರಂಭಿಸಿತು. ಇದರಿಂದ ಗೋದಾಮಿನ ಅಗತ್ಯವನ್ನೇ ತೆಗೆದುಹಾಕುವ ಮೂಲಕ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ, ವಾಲ್‌ಮಾರ್ಟ್ ಗಮನಾರ್ಹವಾದ ಉಳಿತಾಯವನ್ನು ಸಾಧಿಸಿತು. ಕ್ರಾಸ್-ಡಾಕಿಂಗಿಗೂ ಮುನ್ನವೇ ಜಪಾನೀಯರು, ವಿಶೇಷವಾಗಿ ಟೊಯೋಟಾ ಕಂಪನಿ, ಇದನ್ನು ಜಸ್ಟ್-ಇನ್-ಟೈಮ್ ಎಂಬ ಕಲ್ಪನೆಯ ಮೂಲಕ ರಣಗಾತ್ರದ ಗೋದಾಮುಗಳ ಅಗತ್ಯವನ್ನೇ ತೆಗೆದುಹಾಕಿ, ತನ್ನ ವಾಹನಗಳ ತಯಾರಿಕೆಗೆ ಬೇಕಾದ ಎಲ್ಲಾ ಬಿಡಿಭಾಗಗಳೂ ಸರಬರಾಜುದಾರರಿಂದ ಸಮಯಕ್ಕೆ ಸರಿಯಾಗಿ, ಅಂದರೆ ಆ ವಾಹನದ ತಯಾರಿಕೆ ಫ್ಯಾಕ್ಟರಿಯೊಳಗೆ ನಡೆಯುತಿದ್ದಾಗಲೇ ಬಂದಿಳಿದು, ಟ್ರಕ್ಕಿನಿಂದ ಇಳಿದ ಭಾಗ ಸೀದಾ ಫ್ಯಾಕ್ಟರಿಯ ಅಸೆಂಬ್ಲಿಲೈನಿಗೆ ತಲುಪಿ, ತಾನು ಸೇರಬೇಕಾದ ವಾಹನಕ್ಕೆ ಸೇರುವಂತೆ ಮಾಡಿತ್ತು. ಆದರೆ ರೀಟೈಲ್ ವ್ಯವಹಾರದಲ್ಲಿ ಇದು ಸಾಧ್ಯವಾಗಿರಲಿಲ್ಲ. ಅದರಲ್ಲೂ ವಾಲ್-ಮಾರ್ಟ್’ನಂತಹ ದೈತ್ಯ ಇದನ್ನು ಸಾಧಿಸಿ, ಲಾಭಗಳಿಸಿದ್ದು ಮಹತ್ವದ ವಿಚಾರವೇ ಸರಿ. ಪ್ರಾಕ್ಟರ್ ಅಂಡ್ ಗ್ಯಾಂಬಲ್(P&G) 1990ರಲ್ಲಿ ಅಸಾಂಪ್ರದಾಯಿಕ ಪ್ರಯೋಗವೊಂದನ್ನು ಮಾಡಿತು. ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ವೆಚ್ಚವನ್ನು ಕಡಿಮೆ ಮಾಡಲು, P&G ತನ್ನ ಸರಬರಾಜುದಾರರನ್ನು ತನ್ನ ರೀಸಚ್ ಅಂಡ್ ಡೆವಲಪ್ಮೆಂಟ್ ವಿಭಾಗದೊಳಗೇ ಕರೆದುಕೂರಿಸಿ ವಿಶಿಷ್ಟ ಪಾಲುದಾರಿಕೆಯನ್ನು ರೂಪಿಸಿತು. ಸಾಮಾನ್ಯವಾಗಿ ಯಾವ ಕಂಪನಿಯೂ R&D ಸೆಂಟರುಗಳೊಳಗೆ ಹೊರಗಿನವರನ್ನು ಬಿಟ್ಟುಕೊಳ್ಳುವುದಿಲ್ಲ. “ಕನೆಕ್ಟ್+ಡೆವಲಪ್” ಎಂಬ ಈ ಪ್ರಯೋಗದಡಿ P&G ತನ್ನ R&D ವೆಚ್ಚಗಳನ್ನು ಕಡಿಮೆ ಮಾಡುವುದಲ್ಲದೆ, ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿ, ಪರಸ್ಪರ ಪ್ರಯೋಜನಕಾರಿ ಸಂಬಂಧಗಳನ್ನು ಸೃಷ್ಟಿಸಿಕೊಂಡಿತ್ತು.

ಅಮೇರಿಕನ್ ಕೊರಿಯರ್ ದೈತ್ಯ ಯೂಪಿಎಸ್, ತಮ್ಮ ಡೆಲಿವರಿ ಟ್ರಕ್‌ಗಳಿಗೆ “ಬಲ ತಿರುವು ಮಾತ್ರ (Right Turn Only)” ಎಂಬ ನೀತಿಯನ್ನು ಪಾಲಿಸುತ್ತದೆ. ಅಮೇರಿಕಾದಲ್ಲಿ ಟ್ರಾಫಿಕ್ ಸಿಗ್ನಲ್ ಇರುವಲ್ಲಿ, ಬಲಗಡೆ ತಿರುಗಲಿಕ್ಕೆ ಸಿಗ್ನಲ್ಲಿಗಾಗಿ ಕಾಯುವ ಅಗತ್ಯವಿಲ್ಲವಾದ್ದರಿಂದ, ಟ್ರಕ್ ಹೋಗುವ ದಾರಿಯಲ್ಲಿ ಸಿಗ್ನಲ್ಲುಗಳಲ್ಲಿ ಡ್ರೈವರುಗಳು ನೇರ ಅಥವಾ ಎಡಗಡೆ ಹೋಗಲಿಕ್ಕೆ ಕಾಯುತ್ತಾ ನಿಷ್ಕ್ರಿಯವಾಗಿ ನಿಲ್ಲುವ ಬದಲು, ಬಲತಿರುವುಗಳನ್ನಷ್ಟೇ ತೆಗೆದುಕೊಳ್ಳುತ್ತಾ ಸದಾ ಹೋಗುತ್ತಲೇ ಇರುವಂತೆ ರೂಟ್ ಪ್ಲಾನಿಂಗ್ ಮಾಡಿ, ತನ್ನ ಡ್ರೈವರುಗಳು ಆದಷ್ಟು ಬೇಗ ವಸ್ತುಗಳನ್ನು ತಲುಪಿಸುವುದೂ ಅಲ್ಲದೇ, ಇಂಧನ ಬಳಕೆಯನ್ನೂ ಗಣನೀಯವಾಗಿ ಕಡಿಮೆಗೊಳಿಸುವಲ್ಲಿ ಯಶಸ್ವಿಯಾಯ್ತು. ಇತ್ತೀಚಿನ ಆಫೀಸುಗಳಲ್ಲಿ ಜನರಿಲ್ಲದ ಜಾಗಗಳಲ್ಲಿ ಲೈಟುಗಳು ತಾನಾಗಿಯೇ ಆಫ್ ಆಗುವುದನ್ನು ನೀವು ನೋಡಿರಬಹುದು. ಸೆನ್ಸರುಗಳನ್ನು ಬಳಸಿ ವಿದ್ಯುತ್ ಉಳಿಸುವ ಈ ಉಪಾಯಕ್ಕೆ ಮೂಲಕಾರಣವಾದದ್ದು ಯಾಹೂ! ಕಂಪನಿಯ “Turn Off The Lights” ಎಂಬ ಉಪಾಯ. ಇಪ್ಪತ್ತನಾಲ್ಕೂ ಗಂಟೆ ಕೆಲಸನಡೆಯುತ್ತಿದ್ದ ತನ್ನ ಆಫೀಸುಗಳ ವಿದ್ಯುತ್ ಬಳಕೆಯನ್ನು ಇಳಿಸುವ ಉಪಾಯ ಮಾಡಿದ ಯಾಹೂ!, ತನ್ನ ಕೆಲ ಉದ್ಯೋಗಿಗಳಿಗೆ ನೇರಳೆ ಬಣ್ಣದ ಟೋಪಿಯೊಂದನ್ನು ಹಾಕಿಕೊಂಡು “ನಿಮ್ಮ ಕೆಲಸ ಮುಗಿಸಿ ಹೋಗುವ ಮುನ್ನ, ಆಫೀಸಲ್ಲಿ ಬೇರೆ ಯಾರೂ ಇಲ್ಲವಾದಲ್ಲಿ, ಲೈಟ್ ಆಫ್ ಮಾಡಿ ಹೋಗಿ” ಎಂದು ಸಾರುವ ಕೆಲಸವನ್ನು ಕೊಟ್ಟಿತು. ಮೂರೇ ವರ್ಷದಲ್ಲಿ, ನಿಧಾನಕ್ಕೆ ಈ ಸಾರುವ ಟೋಪಿಗಳಿಲ್ಲದೆಯೂ ಜನರು ಮೀಟಿಂಗ್ ಮುಗಿದಮೇಲೆ ಮೀಟಿಂಗ್ ರೂಮುಗಳಲ್ಲಿ, ವರ್ಕ್-ಪ್ಲೇಸುಗಳಲ್ಲಿ ದೀಪಗಳನ್ನು ಆರಿಸುವ ಅಭ್ಯಾಸ ಬೆಳೆಸಿಕೊಂಡರು. ಇದರಿಂದ ತನ್ನ ಕಾರ್ಯಾಚರಣೆಯ ವೆಚ್ಚದಲ್ಲಿ 2% ಉಳಿತಾಯವಾಯ್ತೆಂದು ಯಾಹೂ! ಹೇಳಿತ್ತು.

 

 

ವೆಂಡಿಂಗ್ ಮಶೀನುಗಳು ಎಲ್ಲರಿಗೂ ಗೊತ್ತು. ಆದರೆ ಕೋಕಾ-ಕೋಲಾ ಸಿಂಗಾಪುರದಲ್ಲಿ ರಿವರ್ಸ್ ವೆಂಡಿಂಗ್ ಮೆಷಿನ್‌ ಎಂಬ ಕಲ್ಪನೆಯನ್ನು ಪ್ರಯೋಗಿಸಿ, ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಿದ ಗ್ರಾಹಕರಿಗೆ ರಿಯಾಯಿತಿಯನ್ನೂ, ಉಡುಗೊರೆಗಳನ್ನೂ ನೀಡಿ, ಮರುಬಳಕೆಯನ್ನು ಉತ್ತೇಜಿಸಿದ್ದಲ್ಲದೇ, ತನ್ನ ತ್ಯಾಜ್ಯನಿರ್ವಹಣಾವೆಚ್ಚವನ್ನೂ ಕಡಿಮೆ ಮಾಡಿಕೊಂಡಿತ್ತು. ಪ್ರಪಂಚಕ್ಕೇ ಕಾಫಿಕುಡಿಸುವ ಜವಾಬ್ದಾರಿಹೊತ್ತಿರುವ ಸ್ಟಾರ್‌ಬಕ್ಸ್, “ನಾವು ನಿಮಗೆ ಕಾಫಿ ಕಪ್ ಕೊಡುವ ಬದಲು, ಮರುಬಳಸಬಲ್ಲ ನಿಮ್ಮದೇ ಕಪ್ ಒಂದನ್ನು ತಂದರೆ, ನಿಮ್ಮ ಆರ್ಡರಿನ ಮೇಲೆ ರಿಯಾಯಿತಿ ನೀಡಲಾಗುತ್ತದೆ” ಎಂಬ Bring Your Own Cup ಯೋಜನೆಯ ಮೂಲಕ ತನ್ನ ಪೇಪರ್ ಕಪ್ ವೆಚ್ಚ, ಪ್ಯಾಕೇಜಿಂಗ್ ವೆಚ್ಚಗಳನ್ನು ಕಡಿಮೆ ಮಾಡಿದ್ದಲ್ಲದೇ, ನೀರಿನ ಬಳಕೆ, ತ್ಯಾಜ್ಯನಿರ್ವಹಣಾವೆಚ್ಚವನ್ನು ಗಣನೀಯವಾಗಿ ಕಡಿಮೆಗೊಳಿಸಿಕೊಂಡಿತ್ತು. ತೊಂದರೆಬಂದಾಗ ಆಕಾಶವೇ ಮೈಮೇಲೆ ಬಿದ್ದಂತೆ ಗಾಬರಿಬಿದ್ದು ರಿಪೇರಿ ಮಾಡುವುದನ್ನು ತಪ್ಪಿಸಲು, ನೆಟ್‌ಫ್ಲಿಕ್ಸ್ ತಾನಾಗಿಯೇ ರೂಪಿಸಿದ Chaos Monkey ಎಂಬ ಪ್ರೋಗ್ರಾಂ ಮೂಲಕ, ಯಾದೃಚ್ಛಿಕವಾಗಿ ತನ್ನ ಒಂದೆರಡು ವರ್ಚುವಲ್ ಸರ್ವರ್‌ಗಳನ್ನು ಸ್ಥಗಿತಗೊಳಿಸುತ್ತದೆ. ಈ ಚಟುವಟಿಕೆಯ ಮೂಲಕ ಕಂಪನಿಯು ತನ್ನ ಸರ್ವರ್ ನೆಟ್ವರ್ಕಿನ ಸ್ಥಿತಿಸ್ಥಾಪಕತ್ವವನ್ನು ಪರೀಕ್ಷಿಸಿ, ತನ್ನ ದೌರ್ಬಲ್ಯಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿಕೊಂಡು, ಜಗತ್ತಿನ ಯಾವ ಭಾಗದಲ್ಲಿ ಯಾವ ಗ್ರಾಹಕರಿಗೆ ಸಣ್ಣಮಟ್ಟದಲ್ಲಿ ತೊಂದರೆಯಾಯ್ತು ಎಂಬುದನ್ನು ಗುರುತಿಸಿಕೊಂಡು, ತನ್ನ ಸಂಪನ್ಮೂಲ ಹಂಚಿಕೆಯನ್ನು ಉತ್ತಮಗೊಳಿಸಿಕೊಳ್ಳುತ್ತಾ ಬಂದಿದೆ. ಏರ್‌ಲೈನ್‌ಗಳು ಮತ್ತು ಉಬರ್’ನಂತಹ ರೈಡ್-ಶೇರ್ ಆಪ್’ಗಳು ಡೈನಾಮಿಕ್ ಪ್ರೈಸಿಂಗ್ ಅಲ್ಗಾರಿದಮ್‌ಗಳನ್ನು ಬಳಸಿಕೊಂಡು, ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ತಮ್ಮ ಸೇವೆಯ ಬೆಲೆಗಳನ್ನು ಹೆಚ್ಚಿಸುವ ಮತ್ತು ಇಳಿಸುವ ಮೂಲಕ ಲಾಭವನ್ನು ಹೆಚ್ಚಿಸಿಕೊಳ್ಳುತ್ತವೆ. ಈ ತಂತ್ರದಿಂದಾಗಿ ಬೇಡಿಕೆ ಕಡಿಮೆಯಿರುವ ಅವಧಿಯಲ್ಲಾಗುವ ನಷ್ಟಗಳೂ ಹಾಗೂ ತ್ಯಾಜ್ಯ ವೆಚ್ಚಗಳೂ ಸರಿದೂಗುತ್ತವೆ. ಬಿಎಂಟಿಸಿ ಕೂಡಾ ಇಂತಹುದೊಂದು ಪ್ರಯೋಗವನ್ನು 2000ರ ದಶಕದಲ್ಲಿ ಮಾಡಿ, ಕಾರಣಾಂತರಗಳಿಂದಾಗಿ ಅದನ್ನು ಮುಂದುವರಿಸಲಿಲ್ಲ ಎಂದು ಕೇಳಲ್ಪಟ್ಟಿದ್ದೇನೆ. IBM ಮತ್ತು ಟೆಸ್ಲಾದಂತಹ ಕಂಪನಿಗಳು ಓಪನ್ ಸೋರ್ಸ್ ತಂತ್ರಜ್ಞಾನಗಳು ಮತ್ತು ಸಹಯೋಗಗಳ ಮೂಲಕ, ಏಕಸ್ವಾಮ್ಯವನ್ನು ತಡೆಗಟ್ಟುವುದೂ ಅಲ್ಲದೇ, ತಮ್ಮ ಸಂಪನ್ಮೂಲಗಳು, ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚಗಳನ್ನು ಹಂಚಿಕೊಳ್ಳುವ ಮೂಲಕ ಬಾಹ್ಯ ಪರಿಣತಿಯನ್ನು ಹೆಚ್ಚಿಸಿ, ಜೊತೆಗೇ ಪ್ರಾಡಕ್ಟ್ ಡೆವಲಪ್ಮೆಂಟ್ ವೆಚ್ಚಗಳನ್ನೂ ಕಡಿಮೆ ಮಾಡಿಕೊಂಡಿವೆ. ಅಮೇರಿಕದ ಕೆಲವು ಕೃಷಿ ಉತ್ಸಾಹಿಗಳು “Rent-A-Chicken” ಎಂಬ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದ್ದಾರೆ. ಯಾರಿಗಾದರೂ ಸ್ವಲ್ಪ ಸಮಯಕ್ಕೆ ಮೊಟ್ಟೆಯ ಉತ್ಪಾದನೆ ಮಾಡುವ ಹುಮ್ಮಸ್ಸಿದ್ದರೆ, ಅವರಿಗೆ ಕೋಳಿಗಳನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಕೊಟ್ಟು, ಅವರು ಕೋಳಿಗೂಡು ಮತ್ತು ಆಹಾರಕ್ಕೆಲ್ಲಾ ದೀರ್ಘಕಾಲೀನ ಹೂಡಿಕೆ ಮಾಡುವ ಅಗತ್ಯವಿಲ್ಲದೇ ತಾಜಾ ಮೊಟ್ಟೆಗಳನ್ನು ಪಡೆದು, ಇವರು ದೈತ್ಯಗಾತ್ರದ ಕೋಳಿಗೂಡುಗಳ ಮೇಲಿನ ಅವಲಂಬನೆಗಳನ್ನು ಕಡಿಮೆಮಾಡಿಕೊಂಡು ತನ್ನ ಕೋಳಿಗಳನ್ನು ತನಗೆ ಬೇಕಾದಾಗ ಮರಳಿಪಡೆದು, ಎರಡೂ ಕಡೆಯವರು ಲಾಭಗಳಿಸುವಂತೆ ನೋಡಿಕೊಳ್ಳುತ್ತಿದ್ದಾರೆ.

 

ಮಾರ್ಜಿನಲ್ ಕಾಸ್ಟ್, ಜಸ್ಟ್-ಇನ್-ಟೈಮ್ ಇನ್ವೆಂಟರಿ ಮ್ಯಾನೇಜ್ಮೆಂಟ್, ಟ್ರಾನ್ಸ್ಯಾಕ್ಷನ್ ಕಾಸ್ಟ್ ಎಕಾನಾಮಿಕ್ಸ್ ಮತ್ತು ಕಾಸ್ಟ್ ಲೀಡರ್ಶಿಪ್’ನಂತಹ ಆರ್ಥಿಕ ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಕಂಪನಿಗಳು ಪರಿಣಾಮಕಾರಿಯಾದ ಉಳಿತಾಯ ಉಪಾಯಗಳನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿವೆ. Out Of the Box ಯೋಚನೆಗಳ ಮೂಲಕ ಮತ್ತು ಅನನ್ಯ ತಂತ್ರಗಳನ್ನು ಅನ್ವೇಷಿಸುವ ಮೂಲಕ, ಸಂಸ್ಥೆಗಳು ಸಂಪನ್ಮೂಲಗಳ ಬಳಕೆ ಹೆಚ್ಚಿಸಿಕೊಂಡು, ತ್ಯಾಜ್ಯವನ್ನು ಕಡಿಮೆ ಮಾಡಬಹುದು ಮತ್ತು ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸಬಹುದು ಎಂಬುದನ್ನು ಈ ಉದಾಹರಣೆಗಳು ನಿರೂಪಿಸಿವೆ.

 

ಮುಂದಿನ ಲೇಖನದಲ್ಲಿ, ಭಾರತದ ಕಂಪನಿಗಳಲ್ಲಿ ನಡೆದ ಇಂತಹ ಕೆಲವು ಪ್ರಯೋಗಗಳ ಬಗ್ಗೆ, ಮತ್ತವುಗಳ ಸಫಲತೆಯ ಬಗ್ಗೆ ತಿಳಿದುಕೊಳ್ಳೋಣ.

0 comments on “ಜಗದೋದ್ಧಾರಕ ಜಿಪುಣರ ಕಥೆಗಳು – ಭಾಗ 1

Leave a Reply

Your email address will not be published. Required fields are marked *