
2020ರ ಜನವರಿ-ಫೆಬ್ರವರಿ-ಮಾರ್ಚಿಯಲ್ಲಿ ರಷ್ಯಾದಲ್ಲಿದ್ದ ನಾನು ಕೊರೋನಾ ಶುರುವಾಗಿ ಬಾರ್ಡರ್ ಎಲ್ಲಾ ಬಂದ್ ಆಗ್ತಿದೆ ಅಂತಾ ಗೊತ್ತಾದಾಗ, ಮೊದಲ ಫೈಟಿನಲ್ಲೇ ದುಬೈಗೆ ವಾಪಾಸ್ ಬಂದೆ. ನಂದು ಹೇಗಿದ್ರೂ ರಷ್ಯಾದ್ದು ಸಲಹೆಗಾರನ ಕೆಲಸವಾದ್ದರಿಂದ, ಪ್ರತೀಮೂರು ವಾರಕ್ಕೊಮ್ಮೆ ದುಬೈಗೆ ಹಾರುವ ಸ್ವಾತಂತ್ರ್ಯವನ್ನು ಉಳಿಸುಕೊಂಡೇ ಹೊಸಕೆಲಸಕ್ಕೆ ಕೈಹಾಕಿದ್ದೆ. ಪವಿಯ ಕೆಲಸಗಳೆಲ್ಲಾ ಇಲ್ಲೇ ಇರೋದು. ಅದೂ ಅಲ್ದೇ ಅವಳಿಗೆ ಚಳಿದೇಶಗಳು ಅಂದ್ರೆ ಅಷ್ಟಕ್ಕಷ್ಟೇ. ಕುಹೂಗೆ ಕೂಡಾ ನನ್ನ ಒಂದೆರಡು ವರ್ಷದ ತಾತ್ಕಾಲಿಕ ಅಸೈನ್ಮೆಂಟಿಗಾಗಿ ರಷ್ಯಾವೆಂಬ ಹೊಸಜಾಗದ ತೀರಾ ಕನ್ಫ್ಯೂಷನ್ ಬೇಡ ಅಂತೇಳಿ, ಅವರಿಬ್ರೂ ಇಲ್ಲೇ ಉಳಿಯುವ ಪ್ಲಾನ್ ಮಾಡಿದ್ದು. ಒಟ್ಟಿನಲ್ಲಿ ಲಾಕ್ಡೌನ್ ಸಮಯಕ್ಕೆ ಎಲ್ಲರೂ ಒಟ್ಟಿಗಿರುವಂಗಾಯ್ತು.
ಒಂದು ರೀತಿಯಲ್ಲಿ ಇಲ್ಲಿಗೆ ಬಂದು ತುಂಬಾ ಒಳ್ಳೆಯ ಕೆಲಸ ಮಾಡಿದೆ. ಯಾಕೆಂದರೆ ಯುಎಇ (ಹಾಗೂ ಇನ್ನಿತರ ಕೆಲ ಅರಬ್ ರಾಷ್ಟ್ರಗಳು) ಕೊರೋನಾವನ್ನು ನಿಭಾಯಿಸುತ್ತಿರುವ ರೀತಿ ಮೆಚ್ಚಬೇಕಾದದ್ದು. ಪುಟಿನ್ನನಂತಾ ಪುಟಿನ್ನನೇ ಮಂಡೆಬಿಸಿಯಿಂದಾ ಕೂತಿರುವಾಗ, ಶೇಖ್ ಮೊಹಮ್ಮದ್ ಅವರ ಟೀಮ್ ಇದನ್ನು ನಿಭಾಯಿಸಿದ ರೀತಿ ಸಕ್ಕತ್. ಇಲ್ಲಿನ ಸರ್ಕಾರೀ ನಿರ್ಧಾರಗಳಿಗೆ ಜನರನ್ನು ಕೇಳಿ ಮಸಾಲೆ ಅರೆಯುವ ಅಗತ್ಯ ಇಲ್ಲದಿರುವಿದರಿಂದ, ಹಾಗೂ ಯಾಕೆ ಈ ನಿರ್ಧಾರ ತಗೊಂಡೆ ಅಂತಾ ಆಮೇಲೆ ಜನರಿಗೆ ವಿವರಿಸಿ ಅವರನ್ನು ಮೆಚ್ಚಿಸಬೇಕಾದ ಅಗತ್ಯವಿಲ್ಲದಿರೋದ್ರಿಂದ, ನಿರ್ಧಾರಗಳು ಬೇಗ ನಡೆಯುತ್ತವೆ. Chain of command ಸುಲಭವಾಗಿ ಅರ್ಥವಾಗುವಂತಿರುವುದರಿಂದ ಹಾಗೂ ಅದನ್ನು ಪಾಲಿಸುವ ಯಾರಿಗೂ ಸಹ ತಮ್ಮ ಬಾಸ್ ಒಬ್ಬನನ್ನು ಬಿಟ್ಟು (ತನಗೆ ಕೆಲಸ ಕೊಡಿಸಿದ ಅದ್ಯಾವುದೋ ಪಾರ್ಟಿಯ ಅಧ್ಯಕ್ಷರಿಗೆ ನಿಯತ್ತು ತೋರಿಸುವ) ಬೇರೆಯವರಿಗೆ ಬೆಣ್ಣೆ ಹಚ್ಚುವ ಅಗತ್ಯವಿಲ್ಲದಿರುವುದರಿಂದ ಕೆಲಸಗಳು ಸುಲಭ. ನಿರ್ಧಾರಗಳು ಸ್ವಲ್ಪ ಕಹಿಯಾಗಿದ್ದರೂ, ಪರಿಣಾಮಕಾರಿಯಾಗಿದ್ದರೆ ಸಾಕು ಎಂಬ ಮನಸ್ಥಿತಿಯೊಂದಿಗೆ ಕಾರ್ಯರೂಪಕ್ಕಿಳಿಯಲ್ಪಡುತ್ತವೆ.
ಈಗ ನೋಡಿ, ಕೊರೋನಾ ಶುರುವಾದಾಗ, ಪಾಸಿಟಿವ್ ಬಂದ ಎಲ್ಲರನ್ನೂ ಆಸ್ಪತ್ರೆಗಳಿಗೆ ಸೇರಿಸುತ್ತಿದ್ದಿದ್ದರಿಂದ ಇಲ್ಲಿ ದುಬೈನ World Trade Centerನಲ್ಲಿ (ಬೆಂಗಳೂರಿನ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದ ತರಹದ್ದೇ ದೊಡ್ಡ arena) ಸಾವಿರ ಹಾಸಿಗೆಗಳ ತಾತ್ಕಲಿಕ ಆಸ್ಪತ್ರೆ ನಿರ್ಮಿಸಲಾಗಿತ್ತು. ಆಸ್ಪತ್ರೆಗಳೂ ಕೊರೋನಾ ಕೇಸುಗಳಿಂದ ತುಂಬಿತುಳುಕುತ್ತಿದ್ದವು. ಮೊನ್ನೆ ಅಲ್ಲಿದ್ದ ಕಟ್ಟಕಡೆಯ ಕೋವಿಡ್ ಸೋಂಕಿತ ವ್ಯಕ್ತಿ ನಿರ್ಗಮಿಸಿದ್ದಾರೆ. ಸರ್ಕಾರ ಆ ಆಸ್ಪತ್ರೆಯನ್ನು ಬಂದ್ ಮಾಡುವ ಲೆಕ್ಕಾಚಾರದಲ್ಲಿದೆ. ಹಾಗಂತಾ ಇವತ್ತು ದುಬೈನಲ್ಲಿ ಕೋವಿಡ್ ಕೇಸುಗಳೇ ಇಲ್ಲ ಅಂತಲ್ಲ. ದಿನವೂ 400-500 ಕೇಸುಗಳು ಬರ್ತಾನೇ ಇವೆ. ಅಂದರೆ ಜನಸಂಖ್ಯಾವಾರು ಲೆಕ್ಕದಲ್ಲಿ ಬೆಂಗಳೂರಿಗಿಂತಾ ಹೆಚ್ಚೇ ಕೇಸುಗಳು ಬರ್ತಿವೆ. ಬೆಂಗಳೂರಿನ ಅಂದಾಜು ಜನಸಂಖ್ಯೆ 12.3 ಮಿಲಿಯನ್, ದುಬೈನ ಅಂದಾಜು ಜನಸಂಖ್ಯೆ 3 ಮಿಲಿಯನ್. ಆದರೂ ದುಬೈ ಕೋವಿಡ್ ವಿಚಾರದಲ್ಲಿ ಸ್ವಲ್ಪ ಆಕ್ರಮಣಕಾರಿ (aggressive) ತಂತ್ರ ಅನುಸರಿಸುತ್ತಿದೆ. ಇನ್ನುಮುಂದೆ ಬರುವ ಎಲ್ಲಾ ಕೇಸುಗಳಿಗೆ ಆಸ್ಪತ್ರೆಯಲ್ಲಲ್ಲದೇ, ಮನೆಯಲ್ಲೇ ಕ್ಯಾರಂಟೈನ್ ಅಂತಾ ಘೋಷಿಸಿದೆ. ಇದರಿಂದ ಆಸ್ಪತ್ರೆಗಳ ಮೇಲಿನ ಹೊರೆ ಕಮ್ಮಿಯಾಗುತ್ತಿದೆ. ತೀರಾ ಗಂಭೀರ ಕೋವಿಡ್ ಕೇಸುಗಳಿಗೆ, ಹಾಗೂ ಬೇರೆ ಅನಾರೋಗ್ಯದ ಕೇಸುಗಳಿಗೆ ಜಾಗಖಾಲಿಯಿಡಲು ಸಹಕಾರಿಯಾಗುತ್ತಿದೆ. ವೆಂಟಿಲೇಟರ್ ಹಾಗೂ ವೈದ್ಯರ ತೀವ್ರನಿಗಾದ ಅಗತ್ಯವಿರುವವರಿಗೆ ಮಾತ್ರ ಆಸ್ಪತ್ರೆ ಅಂತಾ ಹೇಳಿಯಾಗಿದೆ.
ಮನೆಯಲ್ಲಿ ಕ್ವಾರಂಟೈನ್’ಗೂ ಕೂಡಾ ನಿಯಮಗಳಿಗೆ. ಪ್ರತೀ ಸೋಂಕಿತನಿಗೆ/ಸೋಂಕಿತೆಗೆ ಮನೆಯಲ್ಲಿ ಪ್ರತ್ಯೇಕವಾದ ಕೋಣೆ ಇರಬೇಕು. ನಿಮ್ಮ ಫೋನಿನಲ್ಲಿ ಅದೊಂದು ಸರ್ಕಾರೀ ಆಪ್ (ಆರೋಗ್ಯ ಸೇತುವಿನಂತದ್ದು) ಇನ್ಸ್ಟಾಲ್ ಮಾಡಿಕೊಳ್ಳಲೇ ಬೇಕು. ಎರಡುದಿನಕ್ಕೊಮ್ಮೆ ವಿಡಿಯೋ ಕಾನ್ಫರೆನ್ಸಿನಲ್ಲಿ ವೈದ್ಯರಿಗೆ ಅಪ್ಡೇಟ್ ತಿಳಿಸಲೇಬೇಕು. ಸಣ್ಣ ಮನೆಯಿದ್ದು, ಹೆಚ್ಚಿನ ಜನರಿದ್ದು, ಮನೆಯಲ್ಲಿ ಎಲ್ಲರಿಗೂ ಪ್ರತ್ಯೇಕ ಕೋಣೆಯಿಲ್ಲ ಅಂತಾದರೆ ನೀವು ಆಶ್ರಯಕ್ಕಾಗಿ ಸರ್ಕಾರವನ್ನು ಕೋರಿಕೊಳ್ಳಬಹುದು. ಈಗ ಹೇಗಿದ್ದರೂ ಟೂರಿಸ್ಟ್ ಸೀಸನ್ ಅಲ್ಲ. ಸೀಸನ್ ಇದ್ದರೂ ಕೂಡಾ, ಗಡಿ ಬಂದ್ ಆಗಿರುವುದರಿಂದ ಯಾರೂ ಬರುವಂತಿಲ್ಲ. ಇಲ್ಲಿನ ಗಡಿಗಳು ಓಪನ್ ಆದರೂ ಕೊರೋನಾ ಹೆದರಿಕೆಯಿಂದ ಅಥವಾ ಆ ದೇಶದ ಗಡಿಗಳು ತೆರೆದಿಲ್ಲವಾದ್ದರಿಂದ ಜನರು ಸಧ್ಯಕ್ಕೆ ಬರುವುದು ಡೌಟೇ. ಹೀಗಾಗಿ ಖಾಲಿಬಿದ್ದಿರುವ ಹತ್ತಾರು ಹೋಟೆಲುಗಳನ್ನು ಸರ್ಕಾರ ಗುರುತಿಸಿ ಅಲ್ಲಿ ಕ್ವಾರಂಟೈನ್’ಗೆ ಸವಲತ್ತುಗಳನ್ನು ಒದಗಿಸುತ್ತಿದೆ. Ofcourse, ಇದು ಪುಕ್ಕಟೆಯಲ್ಲ. ಆರ್ಥಿಕವಾಗಿ ಸಬಲರಿರುವರಿಗಾಗಿ ಮಾತ್ರ. ನಿಮ್ಮಲ್ಲಿ ಹಣವಿಲ್ಲ ಅಂತಾದರೆ ಮೇಲೆ ಹೇಳಿದ WTC ಆಸ್ಪತ್ರೆಯಲ್ಲಿ ಜಾಗ ಒದಗಿಸಲಾಗುತ್ತದೆ. ಅಲ್ಲಿ ಜಾಗವಿಲ್ಲದಿದ್ದರೆ ನೀವು ಸ್ವಯಂಸೇವಕ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ವಿನಂತಿಸಿಕೊಂಡು ಹಣ ಸಹಾಯ ಕೋರಬಹುದು. ಸರ್ಕಾರದ ಬಳಿ ನಿಮ್ಮ ವರಮಾನದ ಲೆಕ್ಕಾಚಾರ, ನೀವಿಲ್ಲಿ ಒಬ್ಬರೇ ಇದ್ದೀರೋ ಹೆಂಡತಿಮಕ್ಕಳೊಂದಿಗಿದ್ದೀರೋ, ನಿಮ್ಮದು ಸ್ವಂತ ಮನೆಯೋ/ಬಾಡಿಗೆ ಮನೆಯೋ/ಎರಡು ಅಲ್ಲದ ಶೇರಿಂಗೋ ಮುಂತಾದ ಮಾಹಿತಿಯೆಲ್ಲಾ ಮೊದಲೇ ಇರುವುದರಿಂದ, ಯಾರಿಗೆ ಉಚಿತ ಆಸ್ಪತ್ರೆಯ ಅಗತ್ಯವಿದೆ, ಯಾರು ಹಣಕೊಟ್ಟು ಇರಬಲ್ಲರು ಅಂತಾ ಕಂಡುಹಿಡಿಯುವುದು ಕಷ್ಟವೇನಲ್ಲ.
ನನಗಿಷ್ಟವಾದ ಒಂದು ಅಂಶವೆಂದರೆ, ಸರ್ಕಾರದ ಈ ಕೆಲಸಕ್ಕೆ ಆಸರೆಯಾಗಿ ಬಹಳಷ್ಟು ಖಾಸಗೀ ಸಂಸ್ಥೆಗಳು ತಾವಾಗಿಯೇ ಹೆಗಲುಕೊಟ್ಟಿದ್ದು. ಎಷ್ಟೋ ಹೋಟೆಲುಗಳು ತಾವಾಗಿಯೇ ತಮ್ಮ chainನ ಒಂದು ಹೋಟೆಲನ್ನು (ಹೆಚ್ಚಿನವು city centerನಿಂದ ಹೊರಗಿರುವಂತವು) ಇದಕ್ಕಾಗಿಯೇ ಮೀಸಲಿಟ್ಟು ಸರ್ಕಾರಕ್ಕೆ “ಸೋಂಕಿತರಿಗೆ ಇರಲಿಕ್ಕೆ ಜಾಗಬೇಕಾದರೆ ಇಲ್ಲಿಗೆ ಕಳಿಸಿ. ತೀರಾ ರನ್ನಿಂಗ್ ಕಾಸ್ಟ್’ನಲ್ಲಿ ಅವರಿಗೆ ನಾವು ಸೂರು ಕೊಡುತ್ತೇವೆ” ಅಂತಾ ಹೇಳಿದ್ದು. ಒಂದು ರಿಯಲ್ ಎಸ್ಟೇಟ್ ಕಂಪನಿಯಂತೂ, ಮಾರ್ಚಿನಲ್ಲಿ ಕೆಲಸಮುಗಿದಿದ್ದ ತನ್ನದೊಂದು 150 ಅಪಾರ್ಟ್ಮೆಂಟುಗಳ ಪ್ರಾಜೆಕ್ಟ್ ಒಂದನ್ನು ಬೇಗ ಬೇಗ ಬೇಸಿಕ್ ಫಿಟ್-ಔಟ್ ಮಾಡಿಸಿ (ಏಸಿ, ಲೈಟು, ಶವರ್, ಹಾಸಿಗೆ) ಸರ್ಕಾರಕ್ಕೆ ನಯಾಪೈಸೆ ಬಾಡಿಗೆ/ಖರ್ಚು ಕೇಳದೆ ಕೊಡಲು ಮುಂದಾಯ್ತು. ಬರೀ ಕ್ಯಾರಂಟೈನ್ ಅಷ್ಟೇ ಬೇಕಾಗಿದ್ದವರಿಗೆ, ದಿನದಲ್ಲೊಮ್ಮೆ ಡಾಕ್ಟರರ ಚೆಕಪ್ ಬೇಕಾಗಿದ್ದವರಿಗೆ ಇದು ಬೆಸ್ಟ್ ಅಲ್ಲವೇ? ಬೇರೆ ಆರೋಗ್ಯವಂತ ಜನರಿಂದ ದೂರವಿರಿಸಿ ಅವರಿಗೆ ಹರಡದಂತೆಯೂ ತಡೆಯುವಲ್ಲಿ ಇದು ಮಹತ್ವದ ಹೆಜ್ಜೆ. ಎಲ್ಲರೂ ತಮ್ಮದೊಂದು ಅಳಿಲುಸೇವೆ ಸಲ್ಲಿಸಲು ತಯಾರಾಗುವುದು ದೇಶದ ಸ್ವಾಸ್ಥ್ಯದ ಕುರುಹೂ ಹೌದು. ಝಕಾತ್ ಅನ್ನೋದು ಖಡ್ಡಾಯವಾಗಿರುವ ಇಸ್ಲಾಂನಲ್ಲಿ ಇದೂ ಒಂತರಾ ಸೇವೆಯೇ. ಅದೂ ಅಲ್ಲದೇ ಈದ್ ಸಮಯದಲ್ಲಿ ಕೊಟ್ಟ ಈ ಕೊಡುಗೆ ಹೆಚ್ಚಿನ ಪುಣ್ಯ ಕೊಡುತ್ತದಂತೆ. ಅದೇನೇ ಇರಲಿ, ನಮ್ಮ ದೇವಸ್ಥಾನಗಳ ಅನ್ನದಾನ, ಛತ್ರಗಳಿದ್ದಂತೆ ಧರ್ಮದ ಈ ಭಾಗಗಳೂ, ಇಂತಹ ಸಮಯದಲ್ಲಿ ಮಾನವೀಯತೆಯೆಡೆಗೆ ಸಹಕರಿಸುವುದನ್ನು ನೋಡಲು ಚಂದ. ನನಗೇ ಗೊತ್ತಿರುವ ಭಾರತೀಯ ವ್ಯವಹಾರಸ್ಥರೊಬ್ಬರು ಖಾಲಿಯಿದ್ದ ತಮ್ಮ ಹದಿನೇಳು ಪ್ಲಾಟುಗಳನ್ನು ಕೋವಿಡ್ ಕಾಲದಲ್ಲಿ ಕೆಲಸ ಕಳೆದುಕೊಂಡವರಿಗಾಗಿಯೇ ಮೂರುತಿಂಗಳು ಫ್ರೀಯಾಗಿ ಕೊಟ್ಟಿದ್ದಾರೆ. ಸುಮಾರು ನೂರುಜನರ ಸೂರಿಗೆ ಕಾರಣರಾಗಿದ್ದಾರೆ. ಮೂರ್ಖರೆಂದು ನಾವು ನಗುವ ಸರ್ದಾರ್ಜೀಗಳ ಮಾನವೀಯತೆಯ ಸಾಲ ನಾವೆಂದಿಗೂ ತೀರಿಸಲಾರೆವು. ಜುಗ್ಗರೆಂದು ನಾವು ತಮಾಷೆಮಾಡುವ ಸಿಂಧಿಗಳು ಸಂಧಿಕಾಲದಲ್ಲಿ ಮಾಡಿರುವ ಕೆಲಸಗಳನ್ನು ನೋಡಿ ಎಂತವರೂ ಮೂಕರಾಗಬೇಕು.
ದುಬೈನಲ್ಲಿ ಮೊದಲೇ ಎಲ್ಲದಕ್ಕೂ ಫೈನು. ಮೆಟ್ರೋದಲ್ಲಿ ತಿಂದರೆ, ಕುಡಿದರೆ ಫೈನು. ಮಾಲುಗಳಲ್ಲಿ ಫೈರ್ ಅಲಾರ್ಮ್ ಎಸ್ಕಲೇಟರುಗಳ ಎಮರ್ಜೆನ್ಸಿ ಬಟನ್ ಒತ್ತಿದರೆ ಫೈನು. ಉಗಿದರೆ, ಸಿಗರೇಟು ಸೇದಿ ಕಂಡಕಂಡಲ್ಲಿ ಬಿಸಾಕಿದರೆ, ತಿಂದರೆ, ತಿಂದುಳಿದದ್ದನ್ನು ಬಿಸಾಕಿದರೂ ಫೈನು. ಈ ಕಾಲದಲ್ಲೂ ಅದೇನು ಕಮ್ಮಿಯಾಗಿಲ್ಲ. ಫೈನಿನ ಮೊತ್ತ ಹೆಚ್ಚೇ ಆಗಿದೆ. ಮಾಸ್ಕ್ ಹಾಕವದರಿಗೆ ಫೈನು, ಕಾರಿನಲ್ಲಿ ಮೂರಕ್ಕಿಂತಾ ಹೆಚ್ಚು ಜನರಿದ್ದರೆ ಫೈನು. ಆಫೀಸುಗಳು 100% ಮಟ್ಟದಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಆಫೀಸಿನಲ್ಲಿ ಸೀಟುಗಳ ನಡುವೆ ಎರಡು ಮೀಟರ್ ಅಂತರ, ಸ್ಯಾನಿಟೈಜರ್ ಇಲ್ಲದಿದ್ದರೆ ಫೈನು. ಸ್ಯಾನಿಟೈಜರ್ ಅಂತೂ ಬಿಡಿ ಜಲಪಾತದಂತೆ ಧುಮುಕುತ್ತಿದೆ. ನನಗಂತೂ ಇಡೀ ದುಬೈನ ಗಾಳಿಯಲ್ಲಿ ಒಂತರಾ ಸ್ಯಾನಿಟೈಜರಿನ ನಶೆಯಿದೆಯೇನೋ ಅನಿಸುವುದುಂಟು. ಮನೆಯಲ್ಲಿ ಯಾರನ್ನದರೂ ಕರೆದು ಪಾರ್ಟಿ ಮಾಡಿದರೆ, ಪಾರ್ಟಿಗೆ ಬಂದವನಿಗೆ 3,000 ದಿರ್ಹಮ್, ಕರೆದವನಿಗೆ 10,000 ದಿರ್ಹಮ್ (2 ಲಕ್ಷ ರೂಪಾಯಿ) ಫೈನು. ಒಟ್ಟಿನಲ್ಲಿ ಫೈನೋ ಫೈನು. ಏಪ್ರಿಲ್ ಮೇ ತಿಂಗಳಲ್ಲಿ ಲಾಕ್ಡೌನ್ ಇದ್ದಾಗ, ರಸ್ತೆಯಲ್ಲಿದ್ದ ಸ್ಪೀಡ್ ಕ್ಯಾಮರಗಳನ್ನೂ ಕೂಡಾ ಸರ್ಕಾರ ವಾಹನಗಳನ್ನು ಗುರುತಿಸುವುದಕ್ಕಾಗಿ ಬಳಸಿಕೊಂಡು (ನೀವು ಗಂಟೆಗೆ ಹತ್ತು ಕಿಮೀ ವೇಗದಲ್ಲಿ ಹೋದರೂ ಫ್ಲಾಷ್ ಬೀಳುತ್ತಿತ್ತು) ಅದಕ್ಕೂ ಜನರಿಗೆ “ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿರಿ ಅಂದ್ರೆ ಹೊರಗೆಬಂದಿದ್ದೀರಾ” ಅಂತಾ ಉಗಿದು ಫೈನ್ ಹಾಕಿದೆ. ಹೊರಗೆ ಬರಬೇಕಾದರೆ ಮೊದಲೇ ಸರ್ಕಾರೀ ವೆಬ್ಸೈಟಿನಲ್ಲಿ ಅಪ್ಲೈ ಮಾಡಿ, ಕಾರ್ ಬಳಸುವುದಾದರೆ ಅದರ ನಂಬರ್ ಅನ್ನೂ ತೋರಿಸಿ, ಅನುಮತಿ ಪಡೆದು ಬರಬೇಕು ಎಂಬ ನಿಯಮವಿದ್ದಿದ್ದರಿಂದ, ಯಾವ ಕಾರು ಯಾವ ಹೊತ್ತಿಗೆ ರಸ್ತೆಯ ಮೇಲಿರಬೇಕು ಯಾವುದು ಮನೆಯಲ್ಲಿರಬೇಕು ಎಂಬ ಲೆಕ್ಕವೂ ಸರ್ಕಾರಕ್ಕೆ ಇತ್ತು. ಹಾಗಾಗಿ ಫೈನ್ ಹಾಕುವುದು ಸುಲಭ. ತಂತ್ರಜ್ಞಾನವನ್ನೂ ಕಾಮನ್-ಸೆನ್ಸನ್ನೂ ಜೊತೆಜೊತೆಗೆ ಬಳಸಿ ಇಂತಹ ಸಮಸ್ಯೆಗಳನ್ನು ನಿಭಾಯಿಸುವುದಿದೆಯಲ್ಲಾ ಅದು ಕಷ್ಟವಲ್ಲ ಅನ್ನೋದನ್ನ ದುಬೈ ಎಷ್ಟೋ ಬಾರಿ ನಿರೂಪಿಸಿದೆ.
ಹಾಗಾದರೆ ಭಾರತದಲ್ಲಿ ಯಾಕೆ ಇವೆಲ್ಲಾ ಸಾಧ್ಯವಿಲ್ಲ? ನನಗೆ ಗೊತ್ತಿದ್ದಂತೆ (ಮತ್ತು ನಾನು ಆಗಾಗ ಹೇಳುತ್ತಿರುವಂತೆ) ನಾವು ಅಗತ್ಯಕ್ಕಿಂತಾ ಹೆಚ್ಚು ಡೆಮಾಕ್ರಾಟಿಕ್. ಜನರನ್ನು ಮೆಚ್ಚಿಸಬೇಕಾದ ಸರ್ಕಾರಗಳು. ಹೂಸಿದ್ದು ಹೇತದ್ದಕ್ಕೆಲ್ಲಾ ಜನಾಭಿಪ್ರಾಯ ಕೇಳುವ ಮಾಧ್ಯಮಗಳು. ಎಲ್ಲದ್ದನ್ನೂ ಟೀಕಿಸುವ, ಆದರೆ ನಯಾಪೈಸೆ ನಿಯಮಪಾಲನೆ ಮಾಡದ ಬೇಜಾವಾಬ್ದಾರಿ ತಿಕ್ಕಲು ಪ್ರಜೆಗಳು. ಈ ಮೂರು ಕೆಟ್ಟ ಎಲಿಮೆಂಟುಗಳ ವಿಷಪೂರಿತ ಕಾಂಬಿನೇಷನ್ ನನ್ನ ಹೆಮ್ಮೆಯ ದೇಶ. ಅದಕ್ಕೆ ಸರಿಯಾಗಿ ನಮ್ಮ ಜನರ ನೈತಿಕತೆಯ ದಿಕ್ಸೂಚಿಯಂತೂ ನಾರಾಯಣ ಸಾಫಲ್ಯರ ಮಕ್ಕಳ ಹೆಸರಿನಂತೆಯೇ ನಿಗೂಢ. ಯಾವಾಗ ಎಲ್ಲಿ ಹಣ ಮಾಡಬೇಕು, ಎಲ್ಲಿ ಸಡಿಲಬಿಟ್ಟು ಸಹಾಯ ಮಾಡಬೇಕು ಎನ್ನುವ ಕನಿಷ್ಟ ಸಹೃದಯತೆಯೂ ಇಲ್ಲದ ನಾಚಿಕೆಗೇಡಿನ ಜನರು ನಮ್ಮವರು. ರಾಜಕಾರಣಿಗಳಿಂದ ಹಿಡಿದು ಕಟ್ಟಕಡೆಯ ಪ್ರಜೆಯವರೆಗೆ, ಈ ಕೋವಿಡ್ ಸಮಯದಲ್ಲೂ ಸಹ “ಈಗ ಹೀಗೆ ಮಾಡಿದರೆ ನಾನೆಷ್ಟು ಹಣ ಮಾಡಿಕೊಳ್ಳಲು ಸಾಧ್ಯ” ಎಂಬುದನ್ನು ಯೋಚಿಸಿಯೇ ಮುಂದುವರೆಯುತ್ತಾನೆ. ಟಾಟಾ ಸಂಸ್ಥೆಯೊಂದನ್ನು ಬಿಟ್ಟು ಬೇರೆ ಎಷ್ಟು ಹೋಟೆಲುಗಳು ಜಾಗಕೊಡಲು ಮುಂದೆಬಂದವು ಹೇಳಿ? ಬೆಳ್ಳಂದೂರು ಕೆರೆಗೆ ಬೆಂಕಿಬಿದ್ದಾಗ “ನನ್ನ ದೆಸೆಯಿಂದಲೇ ಈ ಊರು ವಿಷಪೂರಿತವಾದದ್ದು” ಎಂದರಿತು ಬೆಂಗಳೂರು ಬಿಡದವರು, ಈಗ “ತಿಂಗಳಿಗೆ ಇಷ್ಟು ಹಣದಲ್ಲಿ ಬದುಕಲಿಕ್ಕೆ ಆಗುತ್ತಿಲ್ಲ. ಅಲ್ಲಾದರೆ ಆರಾಮಾಗಿರಬಹುದು” ಎಂಬ ಕಾರಣಕ್ಕೆ ಮಾತ್ರ ಊರಿಗೆ ಹೊರಡುತ್ತಾನೆ. ಇಲ್ಲಿರುವುದು, ಅಲ್ಲಿಗೆ ಹೋಗುವುದು ಎಲ್ಲವೂ ನಮ್ಮ ಜನರಿಗೆ ಖರ್ಚು-ವೆಚ್ಚದ ಲೆಕ್ಕಾಚಾರ
ಅಲ್ಲಿಯ ಭಾರತೀಯನೇ ಇಲ್ಲಿರುವುದೂ ಸಹ. ಅಲ್ಲಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವ. ಆದರೂ ಅವ ಬೇರೆ ಇವ ಬೇರೆ ನೋಡಿ!
“ಐಸಾ ದೇಶ್ ಹೈ ಮೇರಾ”. ಇವೆರಡೂ ನನ್ನ ದೇಶಗಳೇ. ಅವುಗಳ ಎಲ್ಲಾ ಓರೆಕೋರೆಗಳೊಂದಿಗೆ, ಎಲ್ಲಾ ತಪ್ಪುಒಪ್ಪುಗಳೊಂದಿಗೆ ಅವು ನನ್ನದೇ. ಜನರ ಬಗ್ಗೆ ಇದೇ ಮಾತನ್ನು ಹೇಳಲಾರೆ ಅಷ್ಟೇ