Wednesday, 27 March, 2024

ಲಾಕ್ಡೌನ್ ಕಾಲದಲ್ಲಿ ರಿಲಾಕ್ಸ್ ಅಲ್ಲ, ರೀಬೂಟ್ ಆಗಿ.

Share post

“ಈ ಲಾಕ್ಡೌನ್ ಸಮಯದಲ್ಲಿ ನೀವು ಯಾವುದೇ ಹೊಸರುಚಿ ಮಾಡದೇ, ಯಾವುದೇ ಪುಸ್ತಕ ಓದದೇ, ಯಾವುದೇ ಹೊಸಾ ಕೌಶಲ್ಯ ಕಲಿಯದೇ, ಯಾವುದೇ ಸೀರೀಸ್/ಸಿನಿಮಾ ನೋಡಿ ಹೊಸಾ ಪಾಠ ಕಲಿಯದೇ ಇದ್ದರೂ ಪರವಾಗಿಲ್ಲ. ಇದು ಲಾಕ್ಡೌನ್ ಅಷ್ಟೇ, ಯಾವುದೇ ರೇಸ್ ಅಲ್ಲ. ಲಾಕ್ಡೌನ್ ಅನ್ನು ಕೆಲಜನರು ಕಾಂಪಿಟಿಷನ್ ಆಗಿಸಿಕೊಂಡು ಬಿಟ್ಟಿದ್ದಾರೆ” ಅನ್ನುವ ಕೆಲವು ಪೋಸ್ಟರುಗಳನ್ನ ನೋಡಿದೆ.

 

ಒಮ್ಮುಖವಾಗಿ ಚಲಿಸುವ ಸಮಯದ ಹಳಿಯ ಮೇಲೆ ಓಡುವ ಈ ಜೀವನವನ್ನು ನಾವು ರೇಸ್ ಆಗಿಸಿಕೊಂಡಿದ್ದೇವೆ, ಹೌದು. ಆದರೆ ಈ ನಮ್ಮ ಜೀವನದ ಜೀವನದ ರೇಸ್ ನಮ್ಮ ಕೆಲ ತಪ್ಪು ನಿರ್ಧಾರಗಳ ಫಲವೂ ಆಗಿರಬಹುದು. ತಿಂಗಳಕೊನೆಯಲ್ಲಿ ಸಂಬಳ ಸಿಗುತ್ತೆ ಎನ್ನುವ ಒಂದೇ ಕಾರಣಕ್ಕಾಗಿ ಬೆಳೆಗ್ಗೆಯೆದ್ದು ಇಷ್ಟವಿಲ್ಲದಿದ್ದರೂ ತಮ್ಮನ್ನು ತಾವೇ ಆಫೀನೆಡೆಗೆ ದೂಡಿಕೊಳ್ಳುವ ಜನರು ನಮ್ಮ ನಡುವೆಯೇ ಎಷ್ಟಿಲ್ಲ! ಎಷ್ಟು ಜನ ತನಗಿಷ್ಟವಾದ ಒಂದು ಕೆಲಸ ಮಾಡಬೇಕೆಂದರೂ ಸಮಯಸಿಗದಷ್ಟು ತಮ್ಮನ್ನು ತಾವು ಬ್ಯುಸಿ ಮಾಡಿಕೊಂಡಿಲ್ಲ! ಹೈಸ್ಕೂಲ್ ಕಾಲದಲ್ಲೊಮ್ಮೆ ಓದಿದ್ದ ಆ ಕಾದಂಬರಿಯನ್ನು ಇನ್ನೊಮ್ಮೆ ಓದಬೇಕು. ಇಂಜಿನಿಯರಿಂಗ್ ಕಾಲದ ದಿನಗಳಲ್ಲಿ ಹಾಸ್ಟೆಲ್ ಸ್ನೇಹಿತರೊಂದಿಗೆ ಚಾರಣ ಹೋಗಿದ್ದಾಗ ನಾನೇ ಮಾಡಿಳಿಸಿದ್ದ ಚಿಕನ್ ಸುಕ್ಕಾವನ್ನು ಎಲ್ಲರೂ ಎಷ್ಟು ಚಪ್ಪರಿಸಿದ್ದರು. ಆಮೇಲೆ ಒಮ್ಮೆ ಕೂಡ ಅದನ್ನು ಮಾಡಲೇ ಇಲ್ಲ. ಒಮ್ಮೆಯಾದರೂ ಪ್ರಯತ್ನಿಸಬೇಕು. 2014ರಲ್ಲಿ ಏನೋ ಚಾಲೆಂಜ್ ಕಟ್ಟಿ ಮೂವತ್ತು ಬಸ್ಕಿ ಹೊಡೆದಿದ್ದೆ. ಆಮೇಲೆ ಅದನ್ನು ಮ್ಯಾಚ್ ಮಾಡಲು ಆಗಲೇ ಇಲ್ಲ, ಬರೀ ವಾರಕ್ಕಾರು ದಿನ ಕೆಲಸವೇ ಆಯ್ತು, ಉಳಿದೊಂದು ನಿದ್ದೆ ಮಾಡೋದಾಯ್ತು…..ಹೀಗೆಲ್ಲ ಅಂದುಕೊಂಡುವರು ನಮ್ಮಲೇ ಎಷ್ಟು ಜನರಿಲ್ಲ!!

 

ನನ್ನ ಪ್ರಕಾರ, ಕೊರೋನಾ ನಮಗೆ ಈ ರೇಸಿನಿಂದ ಉಸ್ಸಪ್ಪಾ ಅಂತಾ ಉಸಿರೆಳೆದುಕೊಳ್ಳುವ ಒಂದು ಅತ್ಯದ್ಭುತ ಅವಕಾಶವನ್ನೊದಗಿಸಿದೆ. ಖಾಯಿಲೆ ಬಂದವರನ್ನು ಉಪಚರಿಸುವ, ಯಾರಿಗೂ ಯಾವುದೇ ಸೇವೆ ಮಾಡುವ ಅಗತ್ಯವಿಲ್ಲದೇ ಸುಮ್ಮನೇ ಮನೆಯಲ್ಲಿ ಕೂತು ಜಗತ್ತಿಗೆ ಸಹಾಯಮಾಡಬಹುದಾದ ಸಮಯವಿದು. ಈ ಸಮಯದಲ್ಲಿ ನಿಮನ್ನು ನೀವೇ ಸಂತಸಪಡಿಸಿಕೊಳ್ಳಲಿಲ್ಲ, ಯಾವುದೋ ಒಂದು ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿಲ್ಲ, ಹೊಸದೊಂದು ವಿಷಯ ಕಲಿಯದೇ ನಿಮ್ಮನ್ನು ನೀವು upgrade ಮಾಡಿಕೊಳ್ಳಲಿಲ್ಲ, ಜಂಜಾಟದ ಜೀವನದಲ್ಲಿ ಕಳೆದುಹೋದ ನಿಮ್ಮ ಆ ಹಳೆಯ ಸ್ವಂತಿಕೆಯನ್ನು ಕಂಡುಕೊಳ್ಳಲಿಲ್ಲ ಎಂದಾದರೆ……ಈ ಕೊರೋನಾ ಲಾಕ್ಡೌನ್ ಕಾಲವನ್ನು ಮಾತ್ರವಲ್ಲ ಅತ್ಯಮೂಲ್ಯ ಜೀವನವನ್ನೇ ನಾವು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಎಂದರ್ಥ.

 

ಬೇಸರವಾಗಿ ಮನೆಯಲ್ಲಿ ಕೂತಜನರು ಸೀರೆ ಚಾಲೆಂಜು, ಪಂಚೆ ಚಾಲೆಂಜು ಮಾಡಿಕೊಳ್ಳುವುದು ಹೇಗೆ ಮನೋಲ್ಲಾಸದ ಒಂದು ವಿಧಾನವೋ, ಹಾಗೆಯೇ ವಾರಕ್ಕೊಂದು ಪುಸ್ತಕ ಓದುವುದೂ, ನೋಡದೇ ಬಿಟ್ಟ ಅದೊಂದು ಒಳ್ಳೆಯ ಫಿಲಂ ಅಥವಾ ಸೀರೀಸ್ ನೋಡುವುದೂ, ಅಮ್ಮನ ಕೈರುಚಿಯನ್ನು ಸ್ವಪ್ರಯೋಗ ಮಾಡಿ ಒಂದು ಪದಾರ್ಥ ಕಲಿಯುವುದೂ ನಿಮ್ಮನ್ನು ನೀವು ಕ್ರಿಯಾಶೀಲವಾಗಿಟ್ಟುಕೊಳ್ಳಲು ಒಂದೊಳ್ಳೆಯ ವಿಧಾನ. ಅದರಲ್ಲಿ ಯಾವ ತಪ್ಪೂ ಇಲ್ಲ. Infact, ಇಂತಹದೊಂದಾದರೂ ಪ್ರಯೋಗ ಮಾಡದೇ, ವಾರಕ್ಕೆರಡು ಬಾರಿಯಾದರೂ ಮೈದಂಡಿಸದೇ ಸುಮ್ಮನೇ ಇಡೀ ಲಾಕ್ಡೌನ್ ಕಾಲವನ್ನು ಬರೀ ಹರಟೆ ಗೌಜುಗಳಲ್ಲೇ ಕಳೆದರೆ ಅದಂತೂ ಕೈಗೆ ಸಿಕ್ಕ ಈ ಬಿಡುವಿನ ಸಮಯದ ಕ್ರಿಮಿನಲ್ ವೇಸ್ಟೇಜು. ಇಂತಹ ಸೃಜನಶೀಲ ಪ್ರಯೋಗಗಳು ನಮ್ಮ ಮನಸ್ಸಿಗೂ ಮುದವೀಯುವಬಲ್ಲವು. ನಿನ್ನೆ ರಾತ್ರಿಯ ಊಟದ ನಂತರ ಉಳಿದ ಅನ್ನಕ್ಕೆ ಬೆಳಗೆದ್ದು ಒಂದು ಒಗ್ಗರಣೆ ಕೊಡಲು ಸರಿಯಾಗಿ ಕಲಿತರೂ ಸಹ ಅದು ಏನೋ ಒಂದು ಸಣ್ಣ ಯಶಸ್ಸಿನ ಪ್ರಜ್ಞೆ ಕೊಡಬಲ್ಲದು. ಎಷ್ಟೋ ವೆಬ್ಸೈಟುಗಳು ಸಾಮಾನ್ಯವಾಗಿ ದುಡ್ಡುಪೀಕುವ ಬಹಳಷ್ಟು ಕೋರ್ಸುಗಳನ್ನು ಈ ಕಾಲದಲ್ಲಿ ಉಚಿತವಾಗಿ ಕೊಟ್ಟು ಔದಾರ್ಯ ಮೆರೆಯುತ್ತಿವೆ. ಸಾಮಾನ್ಯಗಾಗಿ ನಮ್ಮ ಜನರು ‘ಲಾಭಕೋರರು’ ಎಂದು ಜರಿಯುವ ಎಷ್ಟೋ ಕ್ಯಾಪಿಟಲಿಸ್ಟುಗಳು ಕೊರೋನಾ ಕಾಲದಲ್ಲಿ ತಮ್ಮ ಲಾಭವನ್ನು ಬದಿಗಿಟ್ಟು ಹಲವಾರು ರೀತಿಯ ಆಫರುಗಳನ್ನು ಕೊಟ್ಟಿದ್ದಾರೆ. ಅವನ್ನು ಬಳಸಿಕೊಂಡು ಹೊಸ ಸ್ಕಿಲ್’ಗಳನ್ನು ಕಲಿಯಬಹುದು. ಅಥವಾ ಈಗಿರುವ ನಿಮ್ಮ ಕೌಶಲ್ಯಗಳಲ್ಲೇ ಪಾರಂಗತೆ (ಹಾಗೊಂದು ಪದವಿದ್ದರೆ) ಸಾಧಿಸಬಹುದು. ಕಳೆದು ಹೋಗಿದ್ದ ನಿಮ್ಮ ಹಳೆಯ ಕೆಲ ಚಟುವಟಿಕೆಗಳನ್ನು ಇನ್ನೊಮ್ಮೆ ಯತ್ನಿಸಿ ನಿಮ್ಮನ್ನು ನೋವು reboot ಮಾಡಿಕೊಳ್ಳಲು ಇದು ಸಕಾಲ.

 

ನಾನಂತೂ ಹತ್ತು ಹಲವು ಹೊಸರುಚಿಗಳನ್ನು ಕಲಿತೆ. ಮತ್ತೆ ಮತ್ತೆ ಪ್ರಯೋಗಿಸಿ ಅದನ್ನು perfect ಮಾಡಿಕೊಂಡೆ. ಹತ್ತಾರು ಸೀರೀಸುಗಳನ್ನು ಮುಗಿಸಿದೆ. ಅರವತ್ತಕ್ಕೂ ಹೆಚ್ಚು ಚಿತ್ರಗಳನ್ನು ನೋಡಿದೆ. ಮೂರು ಪುಸ್ತಕಗಳನ್ನು ಮುಗಿಸಿದೆ. ಲಿಂಕ್ಡಿನ್.ಕಾಂ ನಲ್ಲಿ ಎರಡು ಕೋರ್ಸುಗಳನ್ನು ಮುಗಿಸಿದೆ. #ರಾಘವಾಂಕಣ ಕ್ಕೆ ಹತ್ತಕ್ಕೂ ಹೆಚ್ಚು ಲೇಖನಗಳನ್ನು ಬರೆದಿಟ್ಟುಕೊಂಡೆ. ಫಿಟ್ನೆಸ್ ಬಗ್ಗೆ ಮಾತ್ರ ಅಂದುಕೊಂಡಷ್ಟು ಸಾಧಿಸಲಾಗಲಿಲ್ಲ. ತೂಕ ಇಳಿಸಲಿಲ್ಲವಾದರೂ ಲಾಕ್ಡೌನ್ಗೆ ಮೊದಲಿದ್ದಷ್ಟೇ ತೂಕ ಉಳಿಸಿಕೊಂಡಿದ್ದೀನಿ. ಮಸಲ್-ಮಾಸ್ 5% ಹೆಚ್ಚಿಸಿಕೊಂಡೆ. ಕೊಚ್ಚಿಕೊಳ್ತಾ ಇಲ್ಲ. ಹೆಮ್ಮೆಯಿಂದಲೇ ಹೇಳ್ಕೊಳ್ತಾ ಇದ್ದೀನಿ. ಸಿಕ್ಕ ಈ ಬಿಡುವಿನ ಸಮಯವನ್ನೂ ಸರಿಯಾಗಿ ಉಪಯೋಗಿಸಿಕೊಳ್ಳದವರು ನಾವಾದರೆ, ಲಾಕ್ಡೌನ್ ಮುಗಿದ ನಂತರ “If you don’t try, you will definitely lose” ಅಂತಲೋ, “Life is like ice cream, taste it before it melts” ಅಂತಲೋ, ಲೈಫ್ ಇಸ್ ದಿಸ್ ಲೈಫ್ ಈಸ್ ದಟ್ ಅಂತೆಲ್ಲಾ ಜೀವನದ ಬಗ್ಗೆ ಹಳಸಲು ಮೋಟೀವೇಷನ್ ಕೋಟ್’ಗಳನ್ನು ಹಂಚಿಕೊಳ್ಳುವ ಯಾವ ನೈತಿಕ ಹಕ್ಕೂ ಇರುವುದಿಲ್ಲ. ಅದೂ ಅಲ್ಲದೇ ಈ ಸಮಯ ಸಿಕ್ಕಿರುವುದೇ ಇದಕ್ಕಾಗಿ ಅನ್ನುವುದು ನನ್ನ ಅಭಿಪ್ರಾಯ.

 

ನೀವೇನು ಹೊಸದಾಗಿ ಕಲಿತಿರಿ? ಹೇಗಿತ್ತು ನಿಮ್ಮ ಲಾಕ್ಡೌನ್ ಅನುಭವ?

0 comments on “ಲಾಕ್ಡೌನ್ ಕಾಲದಲ್ಲಿ ರಿಲಾಕ್ಸ್ ಅಲ್ಲ, ರೀಬೂಟ್ ಆಗಿ.

Leave a Reply

Your email address will not be published. Required fields are marked *