Saturday, 20 April, 2024

ಇಸ್ಕೀ ಚೀನಾಕೀ ನಾಕ್

Share post

ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ, ಕರ್ಮದ್ದು ಈ ಕರೋನಾ ಕಾಲದಲ್ಲಿ ಶೀತ-ಕೆಮ್ಮಿಗೆ ಹೆದರುವಂಗಾಗೋಯ್ತು. ಇಸ್ಕೀ ಚೀನಾಕೀ ಆಂಖ್….

 

ನನಗೂ, ನನ್ನ ಸಂಪಿಗೆಯಂತಿಲ್ಲದ ನಾಸಿಕಕ್ಕೂ ಸ್ವಲ್ಪ ಅಷ್ಟಕ್ಕಷ್ಟೇ. ಕಾಲೇಜಲ್ಲಿದ್ದಾಗ ಯಾರೋ ದೋಸ್ತು ಒಂದ್ಸಲ “ರಾಘು ಮೂಗು ಪಕೋಡಾ ಮೂಗು” ಅಂತಾ ಅಂದಿದ್ದನ್ನ ನನ್ನ ನಾಸಿಕ ತಪ್ಪಾಗಿ ಅರ್ಥೈಸಿಕೊಂಡು, “ನಿನ್ ಫ್ರೆಂಡ್ಸೆಲ್ಲಾ ಹೀಗೇ, ಲೋಫರ್ರುಗಳು ಅಂತಾ ಬೈದು” ಟೇನೇಜ್ ಗರ್ಲ್ಫ್ರೆಂಡ್ ತರಹಾ ನನ್ನ ಮೇಲೆ ಕೋಪ ಮಾಡ್ಕಂಡಿದೆ. ಶತ್ರುವಿನ ಶತ್ರು ನನಗೆ ಮಿತ್ರ ಅನ್ನೋ ತಂತ್ರವನ್ನನುಸರಿಸಿ ಈ ನನ್ನ ಮೂಗು, ಆ ಕಾಲೇಜು ಸಮಯದಿಂದಲೂ ನನ್ನ ಕೋಪಕ್ಕೆ ತನ್ನ ತುದಿಯಲ್ಲೇ ಮನೆಮಾಡಿಕೊಟ್ಟು ಸೇಡು ತೀರಿಸಿಕೊಳ್ತಿದೆ. ಈ ತಂತ್ರಕ್ಕೆ ಸಿಟ್ಟಾದ(!) ನಾನು “ಈ ಮೂಗಿನ ಮನೆಹಾಳಾಗ, ಇದಕ್ಕೆ ಬರಬಾರ್ದು ಬರ, ಇದರ ಮೂತಿ ಸೊಟ್ಟಗಾಗ” ಅಂತಾ ಬೈಕೊಂಡಿದ್ದು ದೇವರು ಕೇಳಿಸ್ಕೊಂಡು ತಥಾಸ್ತು ಅಂದ್ನೋ ಏನೋಪ್ಪ. ಸೆಕೆಂಡು ಪಿಯುನಲ್ಲಿ ನಿಧಾನಕ್ಕೆ ಸೊಟ್ಟಗಾಗೋಕೆ ಶುರುವಾಗಿದ್ದು (ಅಥವಾ ನನ್ನ ಗಮನಕ್ಕೆ ಬಂದದ್ದು) ಎರಡೇ ವರ್ಷದಲ್ಲಿ ಉಸಿರಾಡೋಕೆ ಕಷ್ಟವಾಗುವಷ್ಟು ತೀವ್ರವಾಗಿತ್ತು. ಈ ಸಿಟ್ಟಿನಲ್ಲೇ 1998ರಲ್ಲಿ ಎನ್ನಾರ್ಪುರಕ್ಕೆ ಹೋಗಿ, ಮೂಗಿನ ತುದಿಯನ್ನಲ್ಲದಿದ್ದರೂ, ಎಡಮೂಗಿನ ಹೊಳ್ಳೆಯೊಳಕ್ಕೆ ಅಡ್ಡವಾಗಿದ್ದ ಊತವನ್ನು ಕುಯ್ಸಿಕೊಂಡು ಬಂದೆ. ಓರೆಯಾಗಿದ್ದ ಸೆಪ್ಟಮ್ಮಿಗೂ ಸ್ವಲ್ಪ ಕಿಸುಳಿ ಹೊಡೆದ್ರು. ಆಗ ಬುದ್ದಿಬಂತು ನೋಡಿ ಮೂಗಿಗೆ. ಆ ಮೇಲೆ ಸುಮಾರು ಐದಾರುವರ್ಷ ಜೀವದ ಗೆಳೆಯರಲ್ಲದಿದ್ದರೂ, ನಾನೂ ನನ್ನ ಮೂಗೂ ಹಾಯ್-ಬಾಯ್ ದೋಸ್ತುಗಳಾಗಿದ್ವಿ.

 

2005ರಲ್ಲಿ ದೆಹಲಿಗೆ ಹೋದಮೇಲೆ ಅಲ್ಲಿನ ಗಾಳಿಗೋ, ಶೀತಕ್ಕೋ, ಅಥವಾ ನನ್ನ ವಯಸ್ಸಿನ ಪರಿಣಾವಕ್ಕೋ ಏನೋ ಗೊತ್ತಿಲ್ಲ ಮೂಗಿನ inflammation ತೀರಾ ಕಾಮನ್ನಾಗಿತು. ಸ್ವಲ್ಪ ದೂಳಿದ್ರೆ ಸಾಕು ಮೂಗು, “ಉಸಿರಾಟ ರೋಖೋ” ಚಳುವಳಿಗೆ ಕೂರ್ತಿತ್ತು. ಅಲ್ಲಿನ ಡಾಕ್ಟರುಗಳು ಸಿಟ್ರಜೀನ್ ಟ್ಯಾಬ್ಲೆಟ್ ತಗಳ್ಳಿ, ದೂಳು ಕಮ್ಮಿಯಿರುವ ಹಾಗೆ ನೋಡ್ಕಳ್ಳಿ ಅಂದ್ರು ಅಷ್ಟೇ. 2008ರಲ್ಲಿ ಬೆಂಗಳೂರಿಗೆ ಬಂದಿಳಿದ ಮೇಲೆ ಇಲ್ಲಿನ ಡಾಕುಟ್ರುಗಳು “ನಿಮಗೆ ಪೋಲನ್ ಅಲರ್ಜಿಯಿದೆ, ಇದಕ್ಕೆ ಏನೂ ಮಾಡೋಕಾಗಲ್ಲ. ಅದೂ ಅಲ್ದೇ ನಿಮ್ಮ ಸೆಪ್ಟಮ್ ಕೂಡಾ ಕಮ್ಯೂನಿಸ್ಟರ ಬಾಲದಂತೆಯೇ ಮತ್ತೆ ಸೊಟ್ಟಗಾಗಿದೆ. ಮನುಷ್ಯನಿಗೆ ಸುಮಾರು ಮೂವತ್ತೈದು ನಲವತ್ತು ಆಗುವವರೆಗೂ ಸೆಪ್ಟಮ್ಮಿನಲ್ಲಿ ಬೆಳವಣಿಗೆ ಇರುತ್ತೆ. ಹಾಗಾಗಿ ಇದಕ್ಕೆ ಈಗಲೇ ಕಿಸುಳಿ ಹೊಡೆದರೂ ಉಪಯೋಗವಿಲ್ಲ” ಅಂತಾ ಘೋಷಿಸಿ, “ಆಗಾಗ ಆಂಟಿ ಹಿಸ್ಟಮೀನ್ ತಗೊಳ್ತಾ ಇರಿ. ನಿಮ್ಮ ಬ್ಲಾಕಾಗಿರೋ ಮೂಗು ವೈಟಾಗದಿದ್ದರೂ, ಉಸಿರಾಟಕ್ಕೆ ಸಹಾಯವಾಗುವಷ್ಟು ಅನ್-ಬ್ಲಾಕ್ ಆಗುತ್ತೆ” ಅಂತಾ ಸಲಹೆಕೊಟ್ಟರು. ಬರೀ ಒಂದ್ನಾಕೈಸು ವರ್ಷ ದೋಸ್ತಿ ನಿಭಾಯಿಸಿ, ಮತ್ತೆ ದ್ರೋಹ ಬಗೆದ ಮೂಗಿನ ಬಗ್ಗೆ ಬೇಸರಗೊಂಡು ನಾನು ಸೋನಿಯಾಳ ಅಡಿಯಾಳಾದ ಮನಮೋಹನನಂತೆ ಮೂಗನಾಗಿ ಬಂದೆ.

 

2010ರಲ್ಲಿ ದುಬಾಯಿಗೆ ಬಂದಮೇಲೆ ಇಲ್ಲಿನ ವಾತಾವರಣಕ್ಕೆ ಸಂತೋಷಪಟ್ಟ ಮೂಗು ನನ್ನ ಮೇಲೆ ಕರುಣೆ ತೋರಿತ್ತು. ನಾನೆಲ್ಲಿ ಹೋದರೂ ನನಗಿಂತಾ ಅರ್ಧ ಸೆಕೆಂಡು ಮೊದಲೇ ಅಲ್ಲಿಗೆ ತಲುಪಿ, ನನಗಿಂತಾ ಅರ್ಧ ಇಂಚು ಮುಂದೆಯೇ ನಿಂತು ಜಗತ್ತೆಲ್ಲಾ ನೋಡಿಕೊಂಡು ಖುಶಿಯಾಗಿತ್ತು. ಊರಸುತ್ತೆಲ್ಲಾ ಮರಳುಗಾಡೇ ಇದ್ದರೂ ನಯಾಪೈಸೆ ಡಸ್ಟ್ ಅಲರ್ಜಿ ಆಗಲಿಲ್ಲ. ಆಗಾಗ ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ತೊಂದರೆ ಕೊಡ್ತಿತ್ತಷ್ಟೇ. 2015ರಲ್ಲಿ ಅದು ಏನಾಯ್ತೋ ಗೊತ್ತಿಲ್ಲ. ಮತ್ತದೇ ಹಳೇ ಕಥೆ. ಎಡಮೂಗಿಂದ ಉಸಿರಾಟ ಆಡೋಕೆ ಕಷ್ಟ ಶುರುವಾಯ್ತು. ನಿಧಾನಕ್ಕೆ ಎಡಮೂಗು ಸಂಪೂರ್ಣ ಬಂದ್ ಆಗೋಯ್ತು. ರಾತ್ರಿ ನಿದ್ದೆಯ ಹೊತ್ತು ಹೊರಳಾಡುವಂತೆಯೂ ಇಲ್ಲ. ಅಪ್ಪಿತಪ್ಪಿ ಬಲಬದಿಗೆ ತಿರುಗಿ ಮಲಗಿದರೆ ಮೂಗೊಳಗಿನ ನೀರೆಲ್ಲಾ ಬಲಬದಿಗಿಳಿದು ಸೈನಸ್ ಬಂದ್ ಆಗಿ, ಎಡಬಲ ಎರಡೂ ಮುಚ್ಚಿಹೋಗಿ ಉಸಿರುಕಟ್ಟಿ, ಯಾರೋ ಕೊಲ್ತಾ ಇದ್ದಾರೇನೋ ಅಂತನಿಸಿ ದಬಕ್ಕೆಂದು ಎಚ್ಚರಾಗೋದು. ಮತ್ತೆ ಎಡಬದಿಗೆ ಹೊರಳಿ ಮಲಗು. ಇದೇ ರೊಟೀನ್ ಆಗೋಯ್ತು. ನನ್ನ ತೂಕ ಆಗ ಸುಮಾರು 92-93 ಇದ್ದದ್ದರಿಂದ ಒಂದೇ ಬದಿಗೆ ಮಲಗೀ ಮಲಗೀ ಎಡಬದಿಯ ಸೊಂಟದಲ್ಲಿ ನೋವು ಶುರುವಾಯ್ತು. “ಅಪ್ಪ-ಅಮ್ಮ ಜಗಳದಲಿ ಕೂಸು ಬಡವಾಯ್ತು” ಹಾಡಿನಂತೆ, ನಾನು-ನನ್ನ ಮೂಗಿನ ಜಗಳದಲ್ಲಿ ಸೊಂಟಕ್ಕೆ ಅಳುವಾಯ್ತು.

 

ಗೆಳೆಯದೊಂದಿಗೆ ಶೀಷಾಕ್ಕೆ ಹೋದಾಗ ಮೂಗಲ್ಲಿ ಹೊಗೆ ಬಿಡೋಕೆ ಹೋದ್ರೆ ಬರೀ ಬಲಹೊಳ್ಳೆಯಿಂದ ಮಾತ್ರ ಹೊರ ಬರೋದು!! ಹೊಸಾದಾಗಿ ಯಾರೇ ಫ್ರೆಂಡ್ಸ್ ಸಿಕ್ಕಿದ್ರೂ “ನಿಮಗೊಂದು ಮ್ಯಾಜಿಕ್ ತೋರಿಸ್ತೀನಿ, ನೀವು ಇದನ್ನು ಮಾಡಬಲ್ಲಿರಾ?” ಅಂತಾ ಪ್ರಶ್ನೆ ಹಾಕೋದು, ಬಲಹೊಳ್ಳೆಯಿಂದ ಮಾತ್ರ ಹೊಗೆ ಬಿಡೋದು. ಅವರಿಗೆ ಮಂಡೆಪೂರ್ತಿ ಕೆಟ್ಟುಹೋಗಿ ಹೆಂಗೆ ಮಾಡ್ದೆ ಹೆಂಗೆ ಮಾಡ್ದೆ ಮಾರಾಯ ನಮಗೂ ಕಲಿಸು ಅಂತಾ ಕೇಳೋದು. ನಾನು ಸ್ಕೋಪ್ ತಗಳ್ಳೋದು. ಒಟ್ನಲ್ಲಿ ಈ ಕಪಿಚೇಷ್ಟೆಯಿಂದಾಗಿ ನನಗೆ ಸುಮಾರು ಜನ ಹೊಸಾ ಪ್ರೆಂಡ್ಸು ಸಿಗೋಕೆ ಈ ಮೂಗು ಕಾರಣವಾಯ್ತು. ಆಪರೇಷನ್ ಮಾಡಿಸಿಬಿಡುವ ಅಂದ್ರೆ ದುಬೈನಲ್ಲೊಂದು ಟೆಕ್ನಿಕಲ್ ಪ್ರಾಬ್ಲಮ್ ಎದುರಾಯ್ತು. ಅದೇನೆಂದರೆ ಮೂಗಿನ ಸರ್ಜರಿ, ಇಲ್ಲಿನ ನಿಯಮಗಳ ಪ್ರಕಾರ ಸೌಂದರ್ಯವರ್ಧನಾ ಸರ್ಜರಿಗಳಿಡಿಯಲ್ಲಿ ದಾಖಲಾಗಿದೆಯಂತೆ. ನಾನಿರೋ ಮುಸುಡಿಯ ಚಂದಕ್ಕೆ ಅದೇನು ಸೌಂದರ್ಯವರ್ಧನೆಯಾದೀತು? ವರ್ಧನೆಯೂ ಬೇಡ, ಬದನೆಕಾಯಿಯೂ ಬೇಡ, ಉಸಿರಾಡಿ ಬದುಕೋಕೊಂದು ದಾರಿಮಾಡಿಕೊಡಿ, ಬೇಕಾದ್ರೆ ಸ್ಬಲ್ಪ ಎಕ್ಸ್ಟ್ರಾ ಮೂಗು ಕುಯ್ದು ಸೌಂದರ್ಯ ನಯಾಪೈಸೆಯೂ ವರ್ಧನೆಯಾಗದಂತೆ ಕುರೂಪಿಯಾಗಿಸಿಯಾದರೂ ಸರಿ ಅಂತಾ ಪರಿಪರಿಯಾಗಿ ಬೇಡಿಕೊಂಡರೂ ಉಪಯೋಗವಾಗಲಿಲ್ಲ. ಹಂಗಾಗಿ ನನ್ನ ಮೂಗಾಪರೇಷನ್ನಿನ ಅರ್ಜಿ ದುಬೈನ ಇನ್ಸ್ಯೂರೆನ್ಸ್ ಕಂಪನಿಗಳ ಕಿವಿಗೆ ಬೀಳದೇ ನನ್ನದು (ಮಲೆಯಾಳಿಗಳು ಹೇಳುವಂತೆ) ಮೂಗರೋಧನೆಯಾಗಿತ್ತು 🤣. ದುಡ್ಡುಕೊಟ್ಟು ಮಾಡಿಸೋಣ ಅಂದ್ರೆ ಮಣಗಟ್ಟಲೇ ಹಣಸುರೀಬೇಕು. ನಾನೇನು ಶಿಲ್ಪಾಶೆಟ್ಟಿಯೇ ದುಡ್ಡುಕೊಟ್ಟು ಮೂಗು ಕುಯ್ಸಿಕೊಳ್ಳೋಕೆ? ನನ್ನ ಮೂಗು ಕುಯ್ದಿಟ್ಟುಕೊಂಡು ನನಗೇ ಹಣಕೊಡುವಂತಿದ್ದರೆ ಹೂಂ ಅನ್ನಬಹುದಿತ್ತು. ಮೂಗೂ ಕೊಟ್ಟು ಹಣವೂ ಕೊಡೋಕೆ ನನಗೇನು ತಿಕ್ಕಲಾ, ನೀವೇ ಹೇಳಿ? ಭಾರತದಲ್ಲಿ ಬಂದು ಮಾಡಿಕೊಳ್ಳೋಣ ಅಂದ್ರೆ ಕನಿಷ್ಟ ಎರಡು ವಾರದ ರಜೆಬೇಕು. ಹೀಗೆಲ್ಲಾ ಆಗಿ ಮೂಗಿನ ಕೋಪಾಯಣ ಮುಗಿದೇ ಇರಲಿಲ್ಲ.

 

2018ರಲ್ಲಿ ಒಬ್ರು ಪ್ರಳಯಾಂತಕ ಡಾಕ್ಟ್ರು ಸಿಕ್ಕು, ನಿಮಗೆ ಕೇವಲ DNS (Deviated Nasal Septum) ಮಾತ್ರವಲ್ಲ, #Rhinitis ಕೂಡಾ ಇದೆ. ಯಾಕೆ ನಿಮಗಿದ್ದನ್ನ ಹಳೇ ಡಾಕ್ಟ್ರುಗಳು ಹೇಳಿಲ್ವೋ ಗೊತ್ತಿಲ್ಲ. ಡೋಂಟ್ವರಿ ನಾನಿದನ್ನ ಮೆಡಿಕಲ್ ಕೇಸ್ ಮಾಡ್ತೀನಿ ಅನ್ನೋ ಚಾಲೆಂಜು ತಗಂಡು, ನನ್ನ ಮೂಗಿನ ಎಕ್ಸ್-ರೇ, ಸೊಂಟದ ಎಕ್ಸ್ರೇ, ಆರ್ತೋಪೆಡಿಕ್ ಅಡ್ವೈಸ್ ಎಲ್ಲಾ ತಗಂಡು ಆರುತಿಂಗಳು ತ್ರಿವಿಕ್ರಮನ ಹೋರಾಟ ಮಾಡಿ, ಕನ್ಸ್ಯೂಮರ್ ಕೋರ್ಟಿಗೂ ಅಪ್ಲಿಕೇಷನ್ ಹಾಕಿಸಿ, ಆ ಪಕೋಡ ಶೇಪಿನ ಮೂಗಿಗಾಗಿ ಅಲ್ಲದಿದ್ದರೂ, ಪಾಪ ಆ ಚೆಂದದ ಸೊಂಟಕ್ಕಾಗಿಯಾದರೂ ಅಪ್ರೂವಲ್ ಕೊಡಿ ಅಂತೆಲ್ಲಾ ಲಾ-ಪಾಯಿಂಟ್ ಹಾಕಿ ಅಪ್ರೂವಲ್ ಗಳಿಸಿಯೇ ಬಿಟ್ಟರು. ನನ್ನ ಮುಖಸೌಂದರ್ಯಕ್ಕೆ (!?) ಸ್ವಲ್ಪವೂ ಕುತ್ತುಬರದಂತೆ (🤣) ಬೇಲೂರಿನ ಶಿಲ್ಪಕಲಾ ಸೂಕ್ಷತೆಯ ಲೆವೆಲ್ಲಿನಲ್ಲೇ ಮೂಗಿನ ಒಳಭಾಗವನ್ನು ಕೆತ್ತಿ, ಸ್ಯಾಂಡ್ಪೇಪರ್ ಹಾಕಿ ಉಜ್ಜಿ ಪಾಲಿಶ್ ಹೊಡೆದು ಎರಡು ದಿನ ಆಸ್ಪತ್ರೆಯಲ್ಲಿಟ್ಟುಕೊಂಡು 37,000 ದಿರ್ಹಮ್ ಬಿಲ್ ಮಾಡಿ ಇನ್ಶ್ಯೂರೆನ್ಸ್ ಕಂಪನಿಗೆ ಮೂರು ಪ್ಲಸ್ ಒಂದು ನಾಮ ಹಾಕಿ, ನಾನು ಬರೀ 180 ದಿರ್ಹಮ್ ಕಟ್ಟುವಂತೆ ಮಾಡಿ ಮನೆಗೆ ಕಳಿಸಿದರು. ಅದಾದ ಮೇಲೆ ನಾನು ಮತ್ತು ನನ್ನ ಮೂಗಿನ ನಡುವೆ ಶಾಂತಿಸಂಧಾನ ನಡೆದು ಎಲ್ಲವೂ ಸರಿಯಾಗಿತ್ತು. ಈ ರಾಘು-ಮೂಗು ಜಗಳದಲ್ಲಿ ಹಾಸ್ಟೇಜ್ ಆಗಿದ್ದ ಸೊಂಟವೂ ಬಿಡುಗಡೆಹೊಂದಿ ಸಂತೋಷವಾಗಿತ್ತು. ಆದರೆ ಡಾಕುಟ್ರು ಹೇಳಿದ್ರು “ನೋಡಿಪ್ಪಾ ನಿಮ್ಮ DNS ನಾನು ಸ್ವಲ್ಪಮಟ್ಟಿಗೆ ಸರಿಪಡಿಸಿದ್ದೇನೆ. ಆದರೆ ರೈನೈಟಿಸ್’ಗೆ ಯಾವುದೇ ಮದ್ದಿಲ್ಲ. ದೂಳು ಮಾಲಿನ್ಯದಿಂದ ದೂರವಿರಿ ಅಷ್ಟೇ” ಅಂತಾ ಹೇಳಿಕಳಿಸಿದ್ದರು. ಅದಾದ ಮೇಲೆ ಎರಡು ವರ್ಷ ಎಲ್ಲವೂ ಚಂದಚಂದವಾಗಿತ್ತು. ಜೀವನ ಈವಾ ಮೆಂಡಿಸ್ಸಳ ದಂತಸೌಂದರ್ಯದಂತೆ ಒಪ್ಪಓರಣವಾಗಿತ್ತು.

 

ಈ ಕಳೆದ ಡಿಸೆಂಬರಿನಲ್ಲಿ ಹೊಸಾದೊಂದು ಮನೆಗೆ ಬಂದೆ. ಜನವರಿ-ಫೆಬ್ರವರಿ-ಮಾರ್ಚಿಯಲ್ಲಿ ನಾನು ರಷ್ಯಾದಲ್ಲಿದ್ದದ್ದರಿಂದ ಏನೂ ತೊಂದರೆ ಕಂಡುಬರಲಿಲ್ಲ. ಮಾರ್ಚ್ ಕೊನೆಯಲ್ಲಿ ಕೊರೋನಾ ಕಾರಣದಿಂದಾಗಿ ದುಬೈಗೆ ತಾತ್ಕಾಲಿಕವಾಗಿ ವಾಪಾಸುಬಂದೆ. ಈ ಮನೆಯ ವಾಸ್ತುದೋಷವೋ, ಅದು ಇರುವ ಏರಿಯಾದಲ್ಲಿ ಗ್ರೀನರಿ ಹೆಚ್ಚಿರೋದಕ್ಕೋ, ಏಸಿ ಡಕ್ಟಿನ ಆಯಸ್ಸೋ ಏನೋ ಒಂದು ಸರಿಯಾಗಿರದೆ ಮತ್ತೆ ಮೊನ್ನೆ ಮಾರ್ಚಿಯಿಂದ ನಾಸಿಕಾಧ್ಯಾಯ ಮತ್ತೆ ಪ್ರಾರಂಭವಾಗಿದೆ. ಅದೂ ಸಣ್ಣಪುಟ್ಟ ಮಟ್ಟಕ್ಕಲ್ಲ, ತೀರಾ ವಿಷಮಕ್ಕೇ ಹೋಗುತ್ತದೆ. ಒಂದೆರಡು ಗಂಟೆಯೊಳಗೇ ರಣರಣ ಸೀನುಗಳು, ತೀರಾ ಅತಿಯಾದ post nasal drop, ಉಸಿರಾಟಕ್ಕೆ ತೀರಾ ಕಷ್ಟವಾಗುವ/ಯಾರೋ ಎದೆಯ ಮೇಲೆ ಕೂತಂತ ಭಾವನೆ, ಎದೆಯಲ್ಲಿ ಸ್ವಲ್ಪ ಉರಿಯಾದಂತೆ ಭಾಸವಾಗುವುದು ಹೀಗೆಲ್ಲಾ. ವಾರಕ್ಕೆರಡುಮೂರು ಸಿಟ್ರಝೀನ್ ಮಾತ್ರ ತಗಂಡು ಕೂರೋದಾಗಿದೆ. ಮಾತ್ರೆಯಿಲ್ಲ ಅಂದರೆ ದಿನವೂ ಕಷಾಯ, ಎರಡು ಗಂಟೆಗೊಮ್ಮೆ ಬಿಸಿನೀರು ಇಂತಹದ್ದು ಬೇಕೇಬೇಕು.ಇಷ್ಟೆಲ್ಲಾ ಯಾಕೆ ಕೊರೆದೆ ಅಂದರೆ, ಕರ್ಮಕ್ಕೆ ಈ ಕೊರೋನಾಕಾಲಕ್ಕೆ ಸರಿಯಾಗಿ ನನ್ನ ಈ ತೊಂದರೆ ಶುರುವಾಗಿ, ಶೀತವೇನಾದ್ರೂ ಇಳಿಯದಿದ್ರೆ ಕೆಮ್ಮು ಒಂದೇ ದಿನಕ್ಕೆ ನಿಲ್ಲದಿದ್ರೆ…..ಕೊರೋನಾ ಇರಬಹುದೇ ಎಂಬ ಅನುಮಾನ ಬಂದು ಬೆನ್ನುಹುರಿಯಲ್ಲಿ ಚಳುಕು ಶುರುವಾಗುತ್ತದೆ. ಮನೆಯಲ್ಲಿ ನಾನು ಮಾತ್ರವಲ್ಲದೇ ಇನ್ನೂ ಮೂರುಜನ ಇದ್ದಾರೆ. ಸುಖಾಸುಮ್ಮನೇ ಅವ್ರಿಗ್ಯಾಕೆ ದಾಟಿಸಬೇಕು ಅನ್ನೋ ಭಾವನೆ ಬೇರೆ. ಎರಡಲ್ಲ ಮೂರು ಬಾರಿ ಸರ್ಕಾರಕ್ಕೆ ತಿಳಿಸಿಯಾಯ್ತು. ಅವರು ವಿಡೀಯೋ ಕಾನ್ಫರೆನ್ಸು ಮಾಡಿ “ನಿಮಗೆ ಇದುಂಟಾ, ಇದುಂಟಾ, ಅದುಂಟಾ” ಅಂತೆಲ್ಲಾ ಛಪ್ಪನ್ನೈವತ್ತಾರು ಪ್ರಶ್ನೆ ಕೇಳಿ “ನಿಮಗೆ ಕೊರೋನಾವೂ ಇಲ್ಲ, ಪಿಂಡವೂ ಇಲ್ಲ. ಆರೋಗ್ಯ ಇಲಾಖೆಯ ರೆಕಾರ್ಡುಗಳ ಪ್ರಕಾರ ನಿಮಗೆ ರೈನೈಟಿಸ್ ಇದೆ. ಬೇಸಿಗೆಯಾದ್ದರಿಂದ ಇದು ಅದರದ್ದೇ ತೊಂದರೆ. ಇದೊಂದೆರಡು ಮಾತ್ರೆ ತಗಂಡು ಸುಮ್ಮನೆ ಮನೆಯಲ್ಲೇ ಇರಿ. ಜ್ವರ, ಎರಡು ಮೂರುದಿನದವರೆಗೂ ನಿಲ್ಲದ ಕೆಮ್ಮು ಹೀಗಿದ್ದೇನಾದರೂ ಇದ್ದರೆ ಮಾತ್ರ ಕಾಲ್ ಮಾಡಿ” ಅಂದಾಯ್ತು.

 

ಕರೋನಾ ಇಲ್ಲ ಅಂತಾ ಅವರು ಸಾರಿ ಸಾರಿ ಹೇಳಿದರೂ, ಈ ಮರ್ಯಾದೆಗೆಟ್ಟ ಮೂಗಿನ ದೆಸೆಯಿಂದ ಮನಸ್ಸಿನ ಮೂಲೆಯಲ್ಲಿ ಅದೇನೋ ಅನುಮಾನ. ನಮ್ಮನೆಯವರಿಗಾದ್ರೆ ನನ್ನ ಶೀತದ ಕೇಸು ಗೊತ್ತಿದೆ. ಆದರೆ ಹೊರಗೆಲ್ಲಾದ್ರೂ ಹೋದಾಗ ಸೀನಿದ್ರೂ ಕೆಮ್ಮಿದ್ರೂ ಜನ ಅನುಮಾನದಿಂದ ನೋಡ್ತಾರೆ. ಅದೂ ನಾನು ಒಂದ್ಸಲ ಎರಡು ಸಲ ಸೀನ್ತೀನಾ? ಇಲ್ಲ. ಶುರುವಾದ್ರೆ ಕನಿಷ್ಟ ಹದಿನೈದಿಪ್ಪತ್ತು ಸೀನುಗಳು. ಸೀದಾ ಕೆಂಪುಕೋಟೆಯ ಮೇಲೆ ಮೋದಿ ಧ್ವಜಾರೋಹಣ ಮಾಡಿದಾಗ ಕೊಡುವ ಇಕ್ಕೀಸ್ ತೋಪೋಂಕೀ ಸಲಾಮೀಯೇ. ಜನ ಸಲಾಮ್ ಸಲಾಮ್ ಹೊಡೆದು ಎಸ್ಕೇಪಾಗ್ತಾರೆ. ಒಂದೇ ಮೂಗಲ್ಲಿ ಹೊಗೆ ಬಿಟ್ಟು ಫ್ರೆಂಡ್ಸ್ ಮಾಡ್ಕೊಳ್ಳೋಣ ಅಂದ್ರೆ ಶೀಷಾ ಬಾರುಗಳೆಲ್ಲಾ ಬಂದ್ ಆಗಿ ಐದು ತಿಂಗಳಾಗ್ತಾ ಬಂತು 😞 😞

#ಯಾರಿಗ್ಹೇಳೋಣಾನಮ್ಮಪ್ರಾಬ್ಲಮ್ಮು

 

ನೇತಿ, ಸ್ಟೀಮು, ಮೂಗಿಗೆ ಎಣ್ಣೆ ಎಲ್ಲಾ ಸಜೆಸ್ಟ್ ಮಾಡಬೇಡಿ. ಅದೆಲ್ಲಾ ಮಾಡಿಯಾಗಿದೆ. ಯಾವುದಕ್ಕೂ ಬಗ್ಗದೇ ಗ್ಲೆನ್ಮಾರ್ಕಿನವರಿಗೂ, ಕಜೆಯವರಿಗೂ ಒಂದೇರೀತಿಯಲ್ಲಿ ಒಗಟಾಗಿರುವ, ಬಿಡಿಸಲಾಗದ ನನ್ನ ಅನುನಾಸಿಕ ಸಂಧಿಯ ಕಥೆಯಿದು.

 

ಒಟ್ನಲ್ಲಿ ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ, ಕರ್ಮದ್ದು ಈ ಕರೋನಾ ಕಾಲದಲ್ಲಿ ಶೀತ-ಕೆಮ್ಮಿಗೆ ಹೆದರುವಂಗಾಗೋಯ್ತು. ಇಸ್ಕೀ ಚೀನಾಕೀ ಆಂಖ್….ನಹೀ ನಹೀ ನಾಕ್!

0 comments on “ಇಸ್ಕೀ ಚೀನಾಕೀ ನಾಕ್

Leave a Reply

Your email address will not be published. Required fields are marked *