Wednesday, 28 February, 2024

ಪರಿಸರಕ್ಕೆ ಕೊಡುಗೆ ಕೊಡಲು, ಪರಿಸರವಾದಿಯೇ ಆಗಬೇಕಿಲ್ಲ

Share post

2010ರಲ್ಲಿ ನಾನು ನಮ್ಮ ಕಂಪನಿಯ ಏರೋಸ್ಪೇಸ್ ಟೀಮ್’ನಲ್ಲಿ HR ಆಗಿದ್ದೆ. ಎಪ್ಪತ್ತು ಜನರ ಸಣ್ಣ ಟೀಮು, ಆದ್ರೆ ರೋಲ್ಸ್-ರಾಯ್ಸ್ ಮತ್ತು ಏರ್ಬಸ್ಸಿಂದ ಬಹಳಾ ದೊಡ್ಡ ಸರ್ಟಿಫಿಕೇಷನ್ ಆರ್ಡರ್ ಸಿಕ್ಕಿತ್ತು. ಟೀಮ್ ಡಬಲ್ ಆಗುವ ಅಗತ್ಯವಿತ್ತು. ಹೊಸಾ ಗ್ರಾಜುಯೇಟುಗಳನ್ನ ಹೈರ್ ಮಾಡೋಕೆ ತಿರುಗಾಡ್ತಾ ಇದ್ವಿ. ಲೀಡ್ಸ್ ಯೂನಿವರ್ಸಿಟಿಯಲ್ಲಿದ್ವಿ. ನನ್ನ ಜೊತೆಯಲ್ಲಿದ್ದ ಏರೋಸ್ಪೇಸ್ ಚೀಫ್ ಎಂಜಿನಿಯರ್ ಆಂಡಿ ಮಹಾನ್ ಫೈರ್ ಬ್ರಾಂಡ್. ಆಸ್ಸೀ, ನೋ ನಾನ್ಸೆನ್ಸ್ ಮನುಷ್ಯ. ಇಂಟರ್ವ್ಯೂಗಳಲ್ಲಿ ಕ್ಯಾಂಡಿಡೇಟ್ ತೀರಾ ಮೂರ್ಖತನದ ಉತ್ತರ ಕೊಟ್ರೆ, “ರಾಘವ್ ಯೂ ಕಂಟಿನ್ಯೂ, ಐ ವಿಲ್ ಬಿ ಬ್ಯಾಕ್” ಅಂತಾ ಎದ್ದೋಗೋನು, ವಾಪಾಸ್ ಬರ್ತಾ ಇರ್ಲಿಲ್ಲ. ಹಾಗೆ ಹೇಳಿ ಹೋದ ಅಂದ್ರೆ ಈ ಕ್ಯಾಂಡಿಡೇಟು ಉಪ್ಯೋಗಿಲ್ಲ, ರಿಜೆಕ್ಟು ಅಂತಲೇ ಅರ್ಥ. ಈ ರೀತಿ ಎದ್ದೋಗಬೇಡಯ್ಯಾ ಅಂತಾ ಹೇಳಿದರೆ “ರಾಘವ್, ಆತ ಟೈಂ ವೇಸ್ಟ್ ಕ್ಯಾಂಡಿಡೇಟ್. ಅವನಿಗೆ ಗೆಟೌಟ್ ಅಂದ್ರೆ ಕ್ಯಾಂಡಿಡೇಟ್ ಎಕ್ಸ್ಪೀರಿಯನ್ಸು ಹಾಳಾಗುತ್ತೆ, ನಾನು ಎಮೋಷನಲ್ ಇಂಟೆಲಿಜೆನ್ಸು ಬೆಳೆಸ್ಕೊಳ್ಬೇಕು ಅಂತೆಲ್ಲಾ ಹೇಳಿ ನೀನು ನನಗೇ ನೋಟೀಸ್ ಕಳಿಸ್ತೀಯ. ನನ್ನಿಂದ ಬೈಸಿಕೊಂಡವನೂ ಹರಾಸ್ಮೆಂಟ್ ಅಂತಾ ಕೇಸ್ ಹಾಕಿದ್ರೂ ಹಾಕ್ದ್ನೇ. ಬದಲಿಗೆ ನಾನೇ ಎದ್ದೋಗಿ ಬಿಟ್ರೆ ಎಲ್ಲಾ ಕೂಲ್ ಆಗಿರುತ್ತೆ ಅಂತಿದ್ದ. ಅವನೊಟ್ಟಿಗೆ ಮೀಟಿಂಗಿಗೆ ಇಂಟರ್ವ್ಯೂಗೆ ಕೂರೋದು ಅಂದ್ರೆ ಕಂಕುಳಲ್ಲಿ ಟೈಂ ಬಾಂಬ್ ಇಟ್ಕೊಂಡು ಕೂತಂಗೆ. ಅದೂ ಅಲ್ದೇ ಆ ಬಾಂಬಿನ ಟೈಮರ್ ಆನ್ ಆಗಿದೆ ಅಂತಾ ಗೊತ್ತಿರೋದು ನನಗೊಬ್ಬನಿಗೇ! ಭಯಂಕರ ಸ್ಟ್ರೆಸ್. ಈ ಸ್ಟ್ರೆಸ್ಸಿನಿಂದಾಗಿ ನಾನೇನಾದ್ರೂ ನೂರು-ನೂರಾಹತ್ತು ವರ್ಷಕ್ಕಿಂತಾ ಮೊದಲೇ ಸತ್ರೆ, ಅದರಲ್ಲಿ ನಿನ್ನದೇ 20% ಕಾಂಟ್ರಿಬ್ಯೂಷನ್ ಕಣಪ್ಪಾ ಆಂಡಿ ಅಂತಾ ತಮಾಷೆ ಮಾಡ್ತಾ ಇದ್ದೆ.

 

ಲೀಡ್ಸ್’ನಲ್ಲಿ ಹುಡುಗನೊಬ್ಬನ ಟೆಕ್ನಿಕಲೀ ತುಂಬಾ ಚೆನ್ನಾಗಿ ಉತ್ತರಗಳನ್ನೆಲ್ಲಾ ಕೊಟ್ಟ, ಆಪ್ಟಿಟ್ಯೂಡ್ ಟೆಸ್ಟಿನ ಸ್ಕೋರುಗಳೂ ಚೆನ್ನಾಗಿಯೇ ಇದ್ದವು. ಕೊನೆಯಲ್ಲಿ, “ನಿನ್ನ ಬಗ್ಗೆ ರೆಸ್ಯೂಮೆಯಲ್ಲಿ ಇಲ್ಲದೇ ಇರುವ ಒಂದು ವಿಚಾರ ಹೇಳು” ಅಂತಾ ಕೇಳಿದಾಗ, “ಒಂದು, ನಾನು ಬಹಳಾ ಇಕೋ ಪ್ರೆಂಡ್ಲೀ ಮನುಷ್ಯ. ಎರಡು, ನೀವು ಆಫರ್ ಕೊಟ್ರೂ ನಾನು ತಗಳಲ್ಲ, ನನಗೆ ಗ್ರೀನ್ ಪೀಸ್ ಇಂದ ಆಫರ್ ಇದೆ. ಅದಕ್ಕೇ ಹೋಗ್ತೀನಿ” ಅಂದಿದ್ದ. ತಕ್ಷಣ ಆಂಡಿಯ ಕಾಲು ಕುಣಿಯೋಕೆ ಶುರುವಾಯ್ತು. ಅಂದ್ರೆ ಆ ಬಾಂಬಿನ ಟೈಮರ್ ಆನ್ ಆಯ್ತು ಅಂತಾ ಅರ್ಥ. ನಾವು ಯೂನಿ ಕ್ಯಾಂಪಸ್ಸಿನಲ್ಲಿದ್ದರಿಂದ ಆಂಡಿ ಎದ್ದು ಹೊರಗೆ ಹೋಗುವ ಹಾಗೂ ಇರಲಿಲ್ಲ. ನಾನು “ಮತ್ಯಾಕೆ ಇಂಟರ್ವ್ಯೂನಲ್ಲಿ ಕೂತಿದ್ದೀಯಪ್ಪಾ ಹೊರಡು” ಅಂತಾ ಮನಸ್ಸಿಗೆ ಬಂದದ್ದನ್ನ ತಡೆದು ಹಿಡ್ಕೊಂಡು, ನೀನು ಇಕೋ ಪ್ರೆಂಡ್ಲಿ ಹೇಗೆ ಅಂತಾ ಸ್ವಲ್ಪ ವಿವರ ಕೊಡು ಅಂತಾ ಕೇಳಿದೆ. “ಕಾಲೇಜು/ಹೋಟೆಲ್ಲು/ಮನೆಯಲ್ಲಿ ವಾಷ್ರೂಮಲ್ಲಿ ನೀರು ಬಳಸಿಯಾದ ಮೇಲೆ ಯಾವತ್ತೂ ಟಿಷ್ಯೂ ಬಳಸಲ್ಲ. ಟವಲ್ಲೇ ಬಳಸೋದು” ಅಂದ. “ಇದರಿಂದ ಏನಾಗುತ್ತೆ?” ಅಂತಾ ಆಂಡಿ ಕೇಳಿದ್ದಕ್ಕೆ ನಮ್ ಹುಡುಗ “ನನ್ನ ದೇಶದಲ್ಲಿ ಪ್ರತೀವರ್ಷ ಉಪಯೋಗಿಸಲ್ಪಪಡುವ ಟಿಷ್ಯೂ ಪೇಫರ್ ಇಷ್ಟು ಟನ್. ಇದಕ್ಕೆ ಇಷ್ಟೆಲ್ಲಾ ಮರ ಕಡಿಯಬೇಕಾಗುತ್ತೆ, ಇದರಿಂದ ಪರಿಸರಕ್ಕೆ ಇಷ್ಟು ಆಕ್ಸಿಜನ್ ನಷ್ಟ, ಪ್ಲಸ್ ಅದರ ತಯಾರಿಕೆಯಲ್ಲಿ ಇಷ್ಟೆಲ್ಲಾ CO2 ಹುಟ್ಟುತ್ತೆ. ಜಗತ್ತಿನ ಕಾರ್ಬನ್ ಫುಟ್ ಪ್ರಿಂಟನ್ನೆಲ್ಲಾ ಕಮ್ಮಿ ಮಾಡೋಕೆ ಸಹಾಯ ಮಾಡ್ತಿರೋದು ಗ್ರೀನ್ ಪೀನ್, ನಾನು ಅವರನ್ನ ಸೇರ್ಕೊಂಡು ಜಗತ್ತಿನ ಒಳ್ಳೆಯ ಭವಿಷ್ಯಕ್ಕೆ ಸಹಾಯ ಮಾಡ್ತೀನಿ ಇಲ್ಲಿ ಈ ಇಂಟರ್ವ್ಯೂಗೆ ಸುಮ್ಮನೇ ಕರಿಯರ್ ಕೌನ್ಸಿಲರ್ ಒತ್ತಾಯಕ್ಕೆ ಬಂದಿದ್ದೀನಿ.” ಅಂತಾ ಉದ್ದುದ್ದಕ್ಕೆ ಅಂಕಿ ಅಂಶ ಕೊಟ್ಟ.

 

ಮೊದಲೇ ನಿಮ್ಮ ಆಫರ್ ಬಂದರೂ ತಗಳಲ್ಲ ಅಂದದ್ದಕ್ಕೇ ಆಂಡಿ ಕೆಂಪಾಗಿದ್ದ. ಈ ಉತ್ತರ ಬಂದತಕ್ಷಣವೇ ಇನ್ನೂ ಸ್ವಲ್ಪ ಕೆಂಪಾಗಿ “ನೋಡು ಗುರೂ, ಕಾಲೇಜು ಹುಡುಗ ಅನ್ನೋ ಕಾರಣಕ್ಕೆ ಸಮಾಧಾನದಿಂದ ಹೇಳ್ತಾ ಇದ್ದೀನಿ. ಮೂರ್ನಾಲ್ಕು ವರ್ಷ ಎಕ್ಸ್ಪೀರಿಯನ್ಸ್ ಇರೋ ಎಂಜಿನಿಯರ್ ಆಗಿದ್ದಿದ್ರೆ ಗೆಟೌಟ್ ಅಂತಿದ್ದೆ. ಗೊತ್ತಿಲ್ಲದೇ ಲಿಬರಲ್ ಆಗುವುದಕ್ಕಿಂತಾ, ಗೊತ್ತಿದ್ದು ಮಾಡುವ ಯಾವುದೇ ಪ್ರೊಡಕ್ಟಿವ್ ಕೆಲಸ ಅದು ಇಂಜಿನಿಯರಿಂಗ್, ಹೋಟೆಲ್ ನಡೆಸೋದು, ವ್ಯವಸಾಯ, ಸೇಲ್ಸ್ಮ್ಯಾನ್ ಮುಂತಾದ ಕೆಲಸಗಳು ಯಾವುದೇ ಇರಲಿ ಅದು ನೂರು ಪಟ್ಟು ದೊಡ್ಡದು. ಯಾವ ಗ್ರೀನ್ ಪೀಸ್ ಜಗತ್ತಿನ ಕಾರ್ಬನ್ ಫುಟ್ ಪ್ರಿಂಟ್ ಕಡಿಮೆ ಮಾಡುತ್ತೆ ಅಂತಾ ನೀನು ನಂಬಿಕೊಂಡಿದ್ದೀಯೋ ಅವರದ್ದೇ ನೆಟ್ ಕಾರ್ಬನ್ ಫುಟ್ ಪ್ರಿಂಟ್ ಸಿಕ್ಕಾಪಟ್ಟೆ ಪಾಸಿಟಿವ್ ಇದೆ. ಅದೂ ಕೂಡಾ ಅವರು ಯಾವುದೇ ಬ್ಯುಸಿನೆಸ್ ನಡೆಸದೇ, ಬರೀ ಪ್ರೊಟೆಸ್ಟ್ ಮಾಡಿಕೊಂಡು ಕೂತು. So just imagine! ನೀನು ಅದೇನೋ ಟಿಷ್ಯೂ ಬಳಸದೇ ಕಾರ್ಬನ್ ಫುಟ್ ಪ್ರಿಂಟ್ ಕಡಿಮೆ ಮಾಡ್ತೀನಿ ಅಂದೆಯಲ್ಲಾ, ನನ್ನ ಕಂಪನಿಗೆ ಸೇರಿ ಒಂದು ಪ್ಲೇನಿನ ರೆಕ್ಕೆಯದ್ದೋ, ಲ್ಯಾಂಡಿಂಗ್ ಗೇರಿನದ್ದೋ ವಿನ್ಯಾಸ ಅಭಿವೃದ್ಧಿಗೆ ಸಹಾಯ ಮಾಡಿ ವಿಮಾನದ ತೂಕವನ್ನ ಐವತ್ತು ಕೇಜಿ ಇಳಿಸಿದ್ರೆ, ಅಥವಾ ಇಡೀ ವಿಮಾನವನ್ನೇ ಹೆಚ್ಚು ಫ್ಯುಯೆಲ್ ಎಫಿಷಿಯೆಂಟ್ ಮಾಡಿದ್ರೆ, ಜನರ ಜೀವನವನ್ನು ಹಸನು ಮಾಡುವುದರ ಜೊತೆಗೇ, ನೀನು ಜೀವನವಿಡೀ ಗ್ರೀನ್ ಪೀಸಿನಲ್ಲಿ ಸೇರ್ಕೊಂಡು ಅದೆಷ್ಟು ಕಾರ್ಬನ್ ಫುಟ್ ಪ್ರಿಂಟ್ ಕಡಿಮೆ ಮಾಡ್ತಿಯೋ, ಅದರ ಮೂರುಪಟ್ಟು ಒಂದೇ ವರ್ಷದಲ್ಲಿ ಕಡಿಮೆ ಮಾಡಬಹುದು. ಹಿಂದಿಲ್ಲ ಮುಂದಿಲ್ಲ ಕಾರ್ಬನ್ ಫುಟ್ ಪ್ರಿಂಟ್ ಕಡಿಮೆ ಮಾಡ್ತಾರಂತೆ, ಮೈ ಫುಟ್. ಪ್ಲೀಸ್ ಲೀವ್, ಗುಡ್ ಲಕ್ ವಿತ್ ಗ್ರೀನ್ ಪೀಸ್” ಅಂದ.

 

ಆಂಡಿಯ ಮಾತು ಒಂದೇ ಕ್ಷಣದಲ್ಲಿ ನನ್ನ ಯೋಚನೆಯನ್ನೇ ಪಟಕ್ಕಂತಾ ಬದಲಾಯಿಸಿತು. ಜೆಟ್ಟುಗಳೆಂದರೆ ಭಯಾನಕ ಕಾರ್ಬನ್ ಡೈ ಆಕ್ಸೈಡ್ ಉಗುಳುವ ದೈತ್ಯ ಹಕ್ಕಿಗಳು ಅಂತಾ ಅಂದಿನವರೆಗೂ ಅಂದುಕೊಂಡಿದ್ದ ನನಗೆ ಆಂಡಿಯ ಮಾತುಗಳು ಸಣ್ಣದೊಂದು ಶಾಕ್ ಕೊಟ್ಟವು. ಅವತ್ತಿನ ಬಿಯರ್ ಸೆಷನ್ನಿನಲ್ಲಿ ಆಂಡಿ ಮತ್ತವನ ಟೀಮ್ ಹೇಗೆ ವಿಮಾನಗಳು ಕಳೆದ ಐವತ್ತು ವರ್ಷದಲ್ಲಿ ಸುಮಾರು 70-75% ಕಡಿಮೆ ಇಂಧನ ಸುಡುವುದನ್ನು ಕಲಿತಿವೆ ಅಂತಾ ಪೂರ್ತಿ ವಿವರಿಸಿತು. 75% is huge! Biger than what you and I can imagine! ನಾವು ಅಂತರ್ದಹನ ಎಂಜಿನ್ ಕಂಡುಹಿಡಿದಾಗಲಿಂದ ಇಲ್ಲಿಯವರೆಗೆ ಲೆಕ್ಕ ಹಾಕಿದರೆ, ನಾವು ಇವತ್ತು ಮಿಲಿಯನ್ನುಗಟ್ಟಲೇ ಕಾರು-ಬೈಕು-ಟ್ರಾಕ್ಟರ್-ಹಡಗು-ವಿಮಾನಗಳಿಂದ ಒಂದು ದಶಕದಲ್ಲಿ ಸುಡುತ್ತಿರುವ ಇಂಧನಕ್ಕಿಂತಾ ಹೆಚ್ಚು ಇಂಧನವನ್ನ ಮೊದಲ ಐವತ್ತು ವರ್ಷಗಳ ಕಾಲದಲ್ಲಿ ಪ್ರತೀ ವರ್ಷವೂ ಸುಡುತ್ತಿದ್ದೆವು. ಆದರೆ ಮನುಷ್ಯ ಅದನ್ನೆಲ್ಲಾ ಸತತ ಪ್ರಯತ್ನಗಳಿಂದ ಹೇಗೆ ಇವನ್ನೆಲ್ಲಾ ಅಭಿವೃದ್ಧಿಪಡಿಸಿದ್ದಾನೆ ಹಾಗೂ ಅವುಗಳ ಮಲಿನಕಾರೀ ಅಂಶಗಳನ್ನ ಹೇಗೆ ಮೂಗುದಾರ ಹಾಕಿ ಅಂಕುಶಹಾಕಿ ಹಿಡಿದಿಟ್ಟಿದ್ದಾನೆ ಅನ್ನುವ ಸುಂದರ ಚರ್ಚೆ ಇವತ್ತಿಗೂ ನನಗೆ ನೆನಪಿದೆ. ನಾವೇನಾದರೂ ಆ ಪ್ರಯತ್ನಗಳನ್ನು ಮಾಡದೇ 1960ರಲ್ಲಿ ಇದ್ದಹಾಗೇ ಇದ್ದಿದ್ದರೆ ಜಗತ್ತು 2000ದ ಹೊತ್ತಿಗೆಲ್ಲಾ ಬದುಕಲು ಅಸಾಧ್ಯವಾಗಿ ಸ್ಮಶಾನವಾಗುವ ಮೊದಲ ಹಂತ ತಲುಪಿಯಾಗುತ್ತಿತ್ತು ಎಂಬ ತೀರ್ಮಾನವನ್ನೂ ಆ ದುಂಡುಮೇಜಿನ ಚರ್ಚೆಯಲ್ಲಿ ಪಾಸ್ ಮಾಡಿದೆವು. ಜೊತೆಗೇ ಇವೆಲ್ಲಾ ಖಾಸಗೀ ಕಂಪನಿಗಳಿಂದ ಆಗುತ್ತಿರುವ ಇನಿಷಿಯೇಟಿವ್ವುಗಳೇ ಹೊರತು, ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿದ ಉದಾಹರಣೆಗಳೂ ತೀರಾ ಕಡಿಮೆ, ಎನರ್ಜಿ ಉತ್ಪಾದನೆಯ ವಿಚಾರದಲ್ಲೂ, ಖಾಸಗೀ ಕಂಪನಿಗಳು ತಾವಾಗಿಯೇ ತಂದ ಅಭಿವೃದ್ಧಿಗಳನ್ನ ನೋಡಿಯಷ್ಟೇ ಸರ್ಕಾರಗಳು ಅವನ್ನೂ ಮಾಡಲು ಹೊರಟಿದ್ದು. ಈ ವಿಚಾರದಲ್ಲಿ ಸರ್ಕಾರಗಳು ಖಾಸಗೀ ಕಂಪನಿಗಳಿಗಿಂತಾ ಶತಮಾನಗಳೇ ಹಿಂದೆವೆ ಎಂಬ ಬೈಗುಳಗಳನ್ನೂ ಕೊಟ್ಟೆವು.

 

I am big fan of people who do something for the environment. ಎಲ್ಲರೂ ಪರಿಸರದ ಅಭಿವೃದ್ಧಿಗೆ ಅವರವರದ್ದೇ ರೀತಿಯಲ್ಲಿ ಕೊಡುಗೆ ಕೊಡಬಲ್ಲವರು. ಕೆಲವರು ಎಲೆಕ್ಟ್ರಿಕ್ಕೋ, ಸಣ್ಣ ಕಾರೋ ಓಡಿಸಿ, ಇನ್ನು ಕೆಲವರು ಮೆಟ್ರೋ ಬಳಸಿಯೋ, ಇನ್ನು ಕೆಲವರು ತಮ್ಮ ಅಂಗಡಿಯಲ್ಲಿ ಎಲ್ಇಡಿ ಲೈಟ್ ಬಳಸಿಯೋ ಹೀಗೆ ಸಣ್ಣಪುಟ್ಟ ಕೊಡುಗೆಗಳೂ ದೊಡ್ಡ ಸಹಾಯ ಮಾಡಬಲ್ಲರು. ಸರ್ಕಾರಗಳೂ ಇದಕ್ಕೆ ಹೆಚ್ಚಿನ ಒತ್ತು ಕೊಡಬೇಕು ಹಾಗೂ ಜನರಿಗೆ ಈ ನಿಟ್ಟಿನಲ್ಲಿ ಸಹಾಯ ಮಾಡಬೇಕು. ಇವತ್ತಿನ ದಿನದಲ್ಲಿ ಪರಿಸರಕ್ಕೆ ಕೊಡುಗೆ ಕೊಡಲಿಕ್ಕೆ ಜನರು ತಯಾರಿದ್ದರೂ, ಅದಕ್ಕೆ ನೂರಕ್ಕೆ ನೂರು ಸಾಥ್ ಕೊಡುತ್ತಿರುವ ಸರ್ಕಾರಗಳು ಕೆಲವೇ ಕೆಲವು. ನನ್ನ ಪ್ರಕಾರ ಇದು ದೇಶದ ಮಟ್ಟದಲ್ಲಿ ಅಲ್ಲ, ಮುನಿಸಿಪಾಲಿಟಿ ಹಂತದಲ್ಲಿ ಆಗಬೇಕಾದ ಕೆಲಸ. ಜೊತೆಗೆ ನಾವು ತಂತ್ರಜ್ಞಾನವನ್ನು ಹೆಚ್ಚೆಚ್ಚು ಈ ನಿಟ್ಟಿನಲ್ಲಿ ಬಳಸಿಕೊಂಡು, ಕೇವಲ ಸ್ಟ್ರಾಟಜೀ ಲವೆಲ್ಲಿನಲ್ಲ, ಬದಲಿಗೆ ಸಾಮಾನ್ಯ ಮನುಷ್ಯನ ಮಟ್ಟದಲ್ಲೂ ಅವನಿಗೆ ಪರಿಸರದೆಡೆಗೆ ಅವನ ಕೊಡುಗೆ ಸಧ್ಯಕ್ಕೆ ಏನಿದೆ, ಅದನ್ನು ಉತ್ತಮಗೊಳಿಸಲು ಅವನು ಏನು ಮಾಡಬಹುದು ಎಂಬುದನ್ನು ತಿಳಿಸಬೇಕು. ಆಗಲೇ ನಾನೂ ನೀವು ಟೊಂಕಕಟ್ಟಿ ನಿಲ್ಲಲು ಸಾಧ್ಯ. ಇಲ್ಲವಾದಲ್ಲಿ ಸರ್ಕಾರ ಏನೋ ಒಂದು ಮಾಡುತ್ತೆ ಬಿಡ್ರೀ ಅಂತಾ ಸುಮ್ನೆ ಕೂರ್ತೀವಿ.

 

ದುಬೈನಲ್ಲಿ ನಮ್ಮ ಕಾರುಗಳು ವರ್ಷಕ್ಕೊಂದು ಬಾರಿ ರೀ-ರಿಜಿಸ್ಟ್ರೇಷನ್ ಆಗಬೇಕು. ಇಲ್ಲಿ ಪೋಲೀಸರು ನಿಲ್ಲಿಸಿ ಫೈನ್ ಹಾಕುವುದಿಲ್ಲ. ಬದಲಿಗೆ ಸ್ಪೀಡ್ ಕ್ಯಾಮರಾಗಳು ಫ್ಲಾಶ್ ಹೊಡೆದು ನಮ್ಮದೊಂದು ಟ್ರಾಫಿಕ್ ಫೈಲ್ ಅಕೌಂಟಿಗೆ ಲೆಕ್ಕ ಬರೆದಿಟ್ಟಿರುತ್ತವೆ. ಪಾರ್ಕಿಂಗ್ ಫೈನುಗಳೂ, ಆಕ್ಸಿಡೆಂಟ್ ಆದ ಲೆಕ್ಕಾಚಾರಗಳೂ, ನಡುವೆ ಜಾಗ ಬಿಡದೇ ಮುಂದಿನ ಕಾರಿನ ಅಂಡಿಗಂಟಿಕೊಂಡು ಗಾಡಿ ಓಡಿಸಿದ್ದರೆ ಬರೋ ಫೈನು, ಕಾರು ಕ್ಲೀನ್ ಮಾಡದೇ ಪದರಗಟ್ಟಲೇ ಧೂಳಿದ್ದರೆ ಅದಕ್ಕೆ ಬರೋ ಫೈನು, ಬ್ಲಾಕ್ ಪಾಯಿಂಟುಗಳು ಎಲ್ಲ ಚಿತ್ರಗುಪ್ತನ ಲೆಕ್ಕಗಳೂ ಅಲ್ಲೇ ಇರುತ್ವೆ. ವರ್ಷಕ್ಕೊಮ್ಮೆ ರೀ-ರಿಜಿಸ್ಟ್ರೇಷನ್ ಸಮಯದಲ್ಲಿ ಕಟ್ಟಿದರಾಯ್ತು. ಅದನ್ನು ಕಟ್ಟುವಾಗ ನಮ್ಮದೇ ಕಾರ್ಡ್ ಬಳಸಿ, ಬ್ಯಾಂಕುಗಳು EMI ಕೊಡ್ತೀನಿ ಅಂತಲೂ ಪುಸಲಾಯಿಸ್ತಾರೆ. ಕೆಲವು ಸಲ ಸರ್ಕಾರಗಳು ಈದ್ ತಿಂಗಳಲ್ಲಿ ಕಟ್ಟಿದರೆ 50% ಕಡಿತ ಅಂತೆಲ್ಲಾ ಆಫರ್ ಕೊಡುವುದೂ ಉಂಟು. (ಈ ಸಲ ನನ್ನದು 5500 ಧಿರ್ಹಮ್ ಫೈನ್ ಆ ಫೈನಿಗೆ ನಾಲೆಡ್ಜ್ ಫೀ, ಇನ್ನೊವೇಷನ್ ಫೀ, ರಿಜಿಸ್ಟ್ರೇಷನ್ ಫೀ, ಇನ್ಶೂರೆನ್ಸ್, ವ್ಯಾಟ್ ಎಲ್ಲಾ ಸೇರಿ 6500 ಆಯ್ತು ಈ ವರ್ಷ ಕಡವುಳೇ ಕಾಪಾಡಪ್ಪಾ).

 

ಈ ರೀ-ರಿಜಿಸ್ಟ್ರೇಷನ್ ಸಮಯದಲ್ಲಿ ಕಾರನ್ನೊಮ್ಮೆ ಚೆಕ್ ಮಾಡಿ, ಈ ಕಾರು ಚಾಲಕನಿಗಾಗಲೀ, ಪ್ರಯಾಣಿಕನಿಗಾಗಲೀ, ಪಾದಚಾರಿಗಳಿಗಾಗಲೀ ಅಪಾಯತರದಂತೆ ರಸ್ತೆಯಲ್ಲಿ ಓಡಲುಯೋಗ್ಯವೇ ಅಂತೆಲ್ಲಾ ಚೆಕ್ ಮಾಡಲಾಗುತ್ತದೆ. ಟೈರ್ ಮಧ್ಯದ ಸಾಲುಗಳ ಆಳ, ಬ್ರೇಕ್ ಡಿಸ್ಕ್, ಹೊರಸೂಸುವ ಹೊಗೆಯ ಮಟ್ಟ, ವೈಪರ್ ಮುಂತಾಗಿ ಇಪ್ಪತ್ತು ಇಪ್ಪತ್ತೈದು ಪಾಯಿಂಟುಗಳನ್ನು ಚೆಕ್ ಮಾಡಿ ಒಂದು ಸರ್ಟಿಫಿಕೇಟ್ ಕೊಡಲಾಗುತ್ತದೆ. ನನಗೆ ಈ ಸರ್ಟಿಫಿಕೇಟಿನಲ್ಲಿ ಅವರು ಕೊಡುವ ಕೆಲ ಡೇಟಾ ತುಂಬಾ ಇಷ್ಟ. ನನ್ನ ಕಾರು ಎಷ್ಟು ಕಿಲೋಮೀಟರ್ ಓಡಿದೆ, ಪ್ರತೀಬಾರಿ ಪೆಟ್ರೋಲ್ ಹಾಕುವಾಗ ಕಾರ್ ನಂಬರನ್ನು ಬಂಕ್’ನ ಸ್ಟಾಫ್ ನೋಟ್ ಮಾಡಿಕೊಳ್ಳುತ್ತಾರಾದ್ದರಿಂದ ವರ್ಷಕ್ಕೆ ಎಷ್ಟು ಲೀಟರ್ ಪೆಟ್ರೋಲ್ ತುಂಬಿಸಿದೆ, ಅದಕ್ಕೆಷ್ಟು ಖರ್ಚು ಮಾಡಿದೆ ಅಂತಲೂ, ಜೊತೆಗೆ ಕಳೆದ ವರ್ಷ ನನ್ನ ಕಾರು ಎಷ್ಟು ಕಾರ್ಬನ್ನನ್ನು ವಾತಾವರಣಕ್ಕೆ ಕಕ್ಕಿದೆ ಅಂತಲೂ ಹೇಳುತ್ತಾರೆ. ಮಾತ್ರವಲ್ಲ, ಉಳಿದವರಿಗೆ ಹೋಲಿಸಿದರೆ ಈ ಕಕ್ಕುವಿಕೆಯಲ್ಲಿ ನನ್ನ ಕಾರು ಯಾವ ರೇಟಿಂಗಿನಲ್ಲಿದೆ ಅನ್ನೋದನ್ನೂ ಹೇಳ್ತಾರೆ. ಎಂಟು ಟನ್ನಿಗಿಂತಾ ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡಲು ಬೇಕಾದ ಸಲಹೆಗಳೂ ಈ-ಮೈಲಿನಲ್ಲಿ ಬರುತ್ತವೆ. ಸ್ಪೀಡ್ ಕಡಿಮೆ ಮಾಡಿ, 95 ಅಥವಾ 98 ಪೆಟ್ರೋಲೇ ಹಾಕಿ, ಕಾರನ್ನು ಕಾಲಕಾಲಕ್ಕೆ ಸರ್ವೀಸ್ ಮಾಡಿಸಿ ಅಂತೆಲ್ಲಾ ಗಿಣಿಪಾಠ ಹೇಳುತ್ತಾರೆ.

ಕಾರಿಗೆ ಮಾತ್ರವಲ್ಲ, ನಿಮ್ಮ ಕರೆಂಟ್ ಬಿಲ್ಲಿನಲ್ಲೂ ಪ್ರತೀ ತಿಂಗಳೂ ಇದೆಲ್ಲಾ ಡೇಟಾ ಕೊಡುತ್ತಾರೆ. ಕರೆಂಟ್ ಮತ್ತು ನೀರಿನ ಬಳಕೆ ಕಡಿಮೆ ಮಾಡಲು ಏನು ಮಾಡಬಹುದು ಅಂತಾ ಹೇಳ್ತಾರೆ. ಕಡಿಮೆ ಬಳಸಿದವರಿಗೆ ಆಗಾಗ ಬಹುಮಾನವೂ ಕೊಡುವುದುಂಟು.

ತಂತ್ರಜ್ಞಾನ ಇದ್ದರೆ ಸಾಲದು, ಅದನ್ನು ಸಾಮಾನ್ಯ ಜನರ ಜೀವನ ಹಸನು ಮಾಡುವಂತೆ ಬಳಸುವ ದೂರದರ್ಶಿತ್ವವಿರುವ ನಾಯಕ/ಸರ್ಕಾರ ಇರಬೇಕು. ದುಬೈನ ಶೇಖ್’ನನ್ನ ಸುಮ್ಮನೇ “CEO ಶೇಖ್” ಅಂತಾ ಕರೆಯುವುದಿಲ್ಲ ಮತ್ತೆ. ಆತ ಇಡೀ ದೇಶವನ್ನ ಕಂಪನಿಯಂತೆ ನಡೆಸುವ ಈ ರೀತಿಗೆ ಕರೆಯುತ್ತಾರೆ. Ofcourse, ಈ ಸರ್ಟಿಫಿಕೇಟ್ ಕೊಟ್ಟ ರಸ್ತೆ ಮತ್ತು ಸಾರಿಗೆ ನಿಗಮ, ಅದರೊಟ್ಟಿಗೆ ನೀರು ಮತ್ತು ಕರೆಂಟ್ ಸರಬರಾಜು ನಿಗಮ ಎರಡೂ ಕೂಡಾ ಈ ಶೇಖ್’ನ ಮಗ, ಮುಂದಿನ ಶೇಖ್ ಆಗಲಿರುವನ ಕೈಯಲ್ಲಿದೆ. ಆತನಂತೂ ತಂತ್ರಜ್ಞಾನದ ವಿಚಾರಕ್ಕೆ ಬಂದರೆ ಮುಂದಿನದೇ ಲವೆಲ್ಲು. ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಟ್ಯಾಕ್ಸಿಗಳು, ಸೆಗ್ವೇಗಳು, ಮೆಟ್ರೋ ಸ್ಟೇಷನ್ ಹೊರಗೆ ಬಾಡಿಗೆಗೆ ಪಡೆದು ಮನೆಯವರೆಗೆ ತಲುಪಲು ಎಲೆಕ್ಟ್ರಿಕ್ ಸ್ಕೂಟರುಗಳು, ಸೈಕಲ್ಲುಗಳು, ಮನೆಯಲ್ಲಿ ನೀರು ಅಥವಾ ಕರೆಂಟು ಪೋಲಾಗುತ್ತಿದ್ದರೆ ನಿಮ್ಮ ಫೋನಿಗೇ ಬರುವ ಆಟೋಮೇಟೆಡ್ ಮೆಸೇಜು ಮತ್ತು ಕಾಲುಗಳು…..ಹೊಸ ಹೊಸಾ ಐಡಿಯಾ ತರ್ತಾನೇ ಇರ್ತಾನೆ. ದುಬೈ Inc.,ಯ ಮುಂದಿನ ಸಿಇಓ ಅವನೇ.

 

ಜಗತ್ತು ಮುಂದಿನ ಹತ್ತುವರ್ಷದಲ್ಲಿ ಹೇಗಿರುತ್ತೆ ಅನ್ನೋದರ ಹತ್ತು ಹಲವು ಉದಾಹರಣೆ ಕೊಡುವ ದುಬೈ……ಸೂಪರ್.

0 comments on “ಪರಿಸರಕ್ಕೆ ಕೊಡುಗೆ ಕೊಡಲು, ಪರಿಸರವಾದಿಯೇ ಆಗಬೇಕಿಲ್ಲ

Leave a Reply

Your email address will not be published. Required fields are marked *