Friday, 26 April, 2024

ದೇಹಕ್ಕೆ ತಂಪುಕೊಡುವ ಅಸ್ಸಾಂ ಚಹಾತೋಟಕ್ಕೆ ಬೆಂಕಿಯಿಟ್ಟವರ್ಯಾರು

Share post

ಹಿಂದಿನ ಅಂಕಣಗಳಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಬಗ್ಗೆ ತಿಳಿದಾಗಿದೆ. ಇವೆರಡರ ಬಗ್ಗೆ ದೇಶವ್ಯಾಪಿ ಚರ್ಚೆಗಳಾಗಿವೆ, ಪರ-ವಿರೋಧದ ರ್ಯಾಲಿಗಳೂ ನಡೆದಿವೆ. ಕೆಲವೆಡೆ ಗಲಭೆಗಳೂ ಆಗಿವೆ. ಯಥಾಪ್ರಕಾರ ಹೆಚ್ಚಿನ ಎಲ್ಲಾ ಗಲಭೆಗಳೂ ವಿಷಯಗಳನ್ನು ಅರ್ಧಂಬರ್ಧ ತಿಳಿದವರಿಂದಲೀ ನಡೆದಿರೋದು. “ಪೌರತ್ವ ಕಾಯ್ದೆ ಹೊರಗಿನಿಂದ ಬಂದವರಿಗೆ ಪೌರತ್ವ ಕೊಡುತ್ತದೆಯೇ ಹೊರತು ಭಾರತದಲ್ಲಿ ಇರುವ ಯಾರಿಗೂ ಇದರಿಂದ ನಷ್ಟವಿಲ್ಲ” ಎಂಬಮಾತು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇನ್ನು ಎನ್‌ಆರ್‌ಸಿ ಎಂಬುದು ಇನ್ನೂ ಅನುಷ್ಟಾನಕ್ಕೇ ಬಂದಿಲ್ಲ. ಆದರೂ ನಮ್ಮ ಜನರಿಗೆ ಅದರ ಬಗ್ಗೆ ವಿರೋಧ. ಹೋಗಲಿ ವಿರೋಧವಿರುವುದು ಯಾವ ಕಾರಣಕ್ಕೆ ಅಂತಾ ಕೇಳಿದರೆ ಅಸ್ಸಾಂನಲ್ಲಿ ಸರ್ಕಾರ ಜಾರಿಗೊಳಿಸಿದ ಎನ್‌ಆರ್‌ಸಿಯ ಉದಾಹರಣೆ ಕೊಟ್ಟು 1971ರ ಪೌರತ್ವ ದಾಖಲೆಯನ್ನ ನಮ್ಮಜ್ಜ ಅಪ್ಪ ಎಲ್ಲಿಂದ ತರ್ತಾರೆ?” ಅನ್ನುವ ಪ್ರಶ್ನೆಯನ್ನೇ ಉತ್ತರವಾಗಿ ಕೊಡೋಕೆ ಪ್ರಯತ್ನಿಸ್ತಾರೆ. ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿ ಜಾರಿಯನ್ನೇ ಇಡೀ ದೇಶಕ್ಕೆ ಹಿಂದುಮುಂದಿಲ್ಲದೇ ಅನ್ವಯಿಸುವ ಇವರ ವಾದದಲ್ಲಿರುವ ಅತಾರ್ಕಿಕತೆಯನ್ನು ಇವರಿಗೆ ತೋರಿಸುವವರಾದರೂ ಯಾರು?

ಅಸ್ಸಾಂನಲ್ಲಿ ಕಳೆದ ಕೆಲದಿನಗಳಿಂದ ನಡೆದ ಗಲಭೆ ಕೇವಲ ಸಿಎಎ ಮತ್ತು ಎನ್‌ಆರ್‌ಸಿ ಗಳಿಗಾಗಿಯಲ್ಲ. ಅದು ದೊಡ್ಡಮಟ್ಟಕ್ಕೇರಿದ್ದು ಸಂಸತ್ತಿನಲ್ಲಿ ಪೌರತ್ವದ ಬಿಲ್ ಪಾಸ್ ಆದ ಕೆಲದಿನಗಳನಂತರ ಹೌದು. ಅದಕ್ಕೆ ಆ ಮಸೂದೆಯೊಂದೇ ಕಾರಣವಲ್ಲ. ಅಸ್ಸಾಂ ಅನ್ನು ಪಕ್ಕದರಾಜ್ಯ ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್ಸಿನ ರಾಜಕಾರಣಿಗಳು ತಮ್ಮ ವಿಷಕಾರಲು ಬಳಸಿಕೊಳ್ಳುತ್ತಿರುವುದು ಹೊಸವಿಷಯವೇನಲ್ಲ. ಮೊನ್ನೆ ನಡೆದದ್ದೂ ಅದೇ. ಬಂಗಾಳದ ರಾಜಕಾರಣಿಗಳಿಗೆ ಅಸ್ಸಾಂ ಒಂದು ಪ್ರಯೋಗಶಾಲೆ. ಈಶಾನ್ಯದ ಆ ರಾಜ್ಯದಲ್ಲಿ ವೋಟ್ ಬ್ಯಾಂಕಿಗಾಗಿ ಬಂಗಾಳಿ ರಾಜಕಾರಣಿಗಳ ಬಹುದೊಡ್ಡ ಬಂಡವಾಳ ಹೂಡಿಕೆಯಿದೆ. ಇದೇನು ಅಂತಾ ಸ್ವಲ್ಪ ಅರ್ಥೈಸಿಕೊಳ್ಳೋಣ.

ಅಸ್ಸಾಮಿನ ತೊಂದರೆ ಬರೀ ಅಸ್ಸಾ ರಾಜ್ಯದ ವಿಚಾರದಲ್ಲಿಲ್ಲ. ಬರೀ ಹಿಂದೂ ಅಥವಾ ಮುಸ್ಲಿಂ ವಿಚಾರದಲ್ಲಿಲ್ಲ. ಕೇವಲ ಭಾರತೀಯ ಅಥವಾ ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿಲ್ಲ. ಅಥವಾ 1971ರ ಇಸವಿಯಲ್ಲೂ ಇಲ್ಲ. ತೊಂದರೆಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು 1947ರವರೆಗೂ ಹೋಗಿಬರಬೇಕಾಗುತ್ತದೆ. 1919ರಲ್ಲಿ ಅಂಗ್ಲೋ-ಆಪ್ಘನ್ ಒಪ್ಪಂದದ ಪ್ರಕಾರ ಖೈಬರ್ ಕಣಿವೆಯಿಂದಾಚೆಗೆ ಅಫ್ಘಾನೀಸ್ಥಾನ ಎಂಬ ದೇಶ ಉದಯಿಸಿತು. 1937ರಲ್ಲಿ ಬ್ರಿಟೀಷ್ ಸರ್ಕಾರ ಬರ್ಮಾವನ್ನು ಭಾರತದಿಂದ ಬೇರ್ಪಡಿಸಿ ಪ್ರತ್ಯೇಕ ವಸಾಹತು ಎಂದು ಘೋಷಿಸಿತು. ಈ ಖೈಬರ್ ಕಣಿವೆಯಿಂದ ಬರ್ಮಾ ನಡುವೆ ಉಳಿದ ಪ್ರದೇಶವೇ, ‘ಬ್ರಿಟೀಶ್ ಇಂಡಿಯಾ’. 1947ರಲ್ಲಿ ಬ್ರಿಟೀಷ್ ಸರ್ಕಾರ ಅವಸರದಲ್ಲಿ ಭಾರತ ವಿಭಜನೆ ಮಾಡಿದಾಗ ಪಾಕಿಸ್ಥಾನ, ಭಾರತ, ಪೂರ್ವಪಾಕಿಸ್ಥಾನ ಎಂಬ ಮೂರುಭಾಗಗಳು ಉದಯಿಸಿದವು. ಪಂಜಾಬ್ ಮತ್ತು ಬಂಗಾಳದಲ್ಲಿ ಹಿಂದೂ ಮುಸ್ಲಿಮ್ ಸಿಕ್ಕರು ಸಮಾನ ಸಂಖ್ಯೆಯಲ್ಲಿದ್ದರಿಂದ ಈ ಪ್ರಾಂತ್ಯಗಳನ್ನು ಭಾರತ ಮತ್ತು ಪಾಕಿಸ್ಥಾನ ಸಮಾನವಾಗಿ ಹಂಚಿಕೊಳ್ಳುವುದು ಎಂದು ನಿರ್ಧಾರವಾಯ್ತು. ಈ ಕಾರಣಕ್ಕಾಗಿಯೇ ಭಾರತದ ಪಾಲಿಗೆ ಬಂದ ಬಂಗಾಳ ಭೌಗೋಳಿಕವಾಗಿ ಪೂರ್ವದಲ್ಲಿದ್ದರೂ ಸಹ “ಪಶ್ಚಿಮಬಂಗಾಳ”ವಾಗಿದ್ದು. ಈ ಅತಾರ್ಕಿಕ ಮತ್ತು ಅವಸರದ ವಿಭಜನೆಯಿಂದ ನಡೆದ ಸಾವುನೋವುಗಳನ್ನು ಬದಿಗಿಟ್ಟು ಉಳಿದ ಘಟನೆಗಳನ್ನು ಅವಲೋಕಿಸಿ ನೋಡಿ. ಪಂಜಾಬಿನಲ್ಲೇನೋ ಪರಿಸ್ಥಿತಿ ಬೇಗ ತಹಬಂದಿಗೆ ಬಂದರೂ ಸಹ, ಪೂರ್ವದಲ್ಲಿ ಕಥೆ ಬೇರೆಯದೇ ಇತ್ತು. ಪೂರ್ವಪಾಕಿಸ್ಥಾನ-ಬಂಗಾಳದಲ್ಲಿ ವಿಭಜನೆಯಸಮಯದಲ್ಲಿ ನಡೆದ ಸಾವುನೋವಿನ ಸಂಖ್ಯೆ ತೌಲನಿಕವಾಗಿ ಅಷ್ಟೇನೂ ದೊಡ್ಡವಿರಲಿಲ್ಲ. ಯಾಕೆಂದರೆ ಪೂರ್ವದಲ್ಲಿ ಹಿಂದೂ-ಮುಸ್ಲಿಂ ಎಂಬ ಬೇಧ ಅಷ್ಟೇನೂ ದೊಡ್ಡದಿರಲಿಲ್ಲ. ಅಲ್ಲಿನ ಜನರೆಲ್ಲರೂ ಬಂಗಾಳೀ ಸಂಸ್ಕೃತಿಯಿಂದ ಹೆಚ್ಚು ಗಾಡವಾಗಿ ಬೆಸೆದಿದ್ದರು. ಇವತ್ತಿಗೂ ನೀವು ನೋಡಬಹುದು, ಇಡೀ ಭಾರತದ ಸಂಸ್ಕೃತಿಗೂ ಬಂಗಾಳಿ ಸಂಸ್ಕೃತಿಗೂ ಬಹಳಷ್ಟು ವ್ಯತ್ಯಾಸವಿದೆ. ಭಾಷೆ, ಊಟ, ಸಂಗೀತ, ನೃತ್ಯ, ಸಾಹಿತ್ಯ ಎಲ್ಲದರಲ್ಲಿಯೂ ಸಹ ಬಂಗಾಳ ಸ್ವಲ್ಪ ಬೇರೆಯಾಗಿಯೇ ನಿಲ್ಲುತ್ತದೆ. ಇಂತಹ ಪ್ರದೇಶದಲ್ಲಿ ಸೃಷಿಯಾದ ಪೂರ್ವಪಾಕಿಸ್ಥಾನ ಬೌಗೋಳಿಕವಾಗಿ ತನ್ನ ತಾಯ್ನಾಡಿನಿಂದ ದೂರವಿದ್ದಿದ್ದರಿಂದ ಪಾಕಿಸ್ಥಾನದ ನಿಯಮಾವಳಿಗಳು ಅಲ್ಲಿ ಎಂದಿಗೂ ನೂರಕ್ಕೆ ನೂರು ಲಾಗೂ ಆಗಲೇ ಇಲ್ಲ. ಹಿಂದೂ ಮುಸ್ಲಿಂ ಎಂಬ ಬೇಧಭಾವವಿಲ್ಲದೇ ಬಹಳಷ್ಟು ಜನರು ಬಂಗಾಳ, ಪೂರ್ವಪಾಕಿಸ್ಥಾನ ಮತ್ತು ಎರಡಕ್ಕೂ ಹೊಂದಿಕೊಂಡಿದ್ದ ಅಸ್ಸಾಮ್ ನಡುವಿನ ಗಡಿಯಲ್ಲಿ ಆಚೀಚೆ ಸುಲಭವಾಗಿ ಓಡಾಡಿಕೊಂಡೇ ಇದ್ದರು. ಭಾರತದ ಬೇಹುಗಾರಿಕಾ ಇಲಾಖೆಗೂ ಇದು ಬೇಕಿತ್ತು. ಪಾಕಿಸ್ಥಾನ ಎರಡೂ ಕಡೆ ಬಗಲಮುಳ್ಳಾಗುವುದು ಭಾರತಕ್ಕೆ ಬೇಕಿರಲಿಲ್ಲ. ಪೂರ್ವಪಾಕಿಸ್ಥಾನದಲ್ಲಿ ಪ್ರತ್ಯೇಕತಾ ಹೋರಾಟಕ್ಕೆ ಭಾರತ ಮೊದಲಿಂದಲೂ ಹಣ ಮದ್ದು೦ಗುಂಡುಗಳನ್ನು ಕೊಟ್ಟು ಪ್ರೇರೇಪಿಸುತ್ತಲೇ ಇತ್ತು.

1971ರಲ್ಲಿ ಬಾಂಗ್ಲಾದೇಶ ಸೃಷ್ಟಿಯಾಯ್ತು. ಭಾರತ ಸರ್ಕಾರ ಮತ್ತು RAWಕ್ಕೆ ತಾನು ಮಾಡಿದ ತಪ್ಪೊಂಡರ ಅರಿವು ಆಗ ಆಯ್ತು. 1947 ಮತ್ತು 71ರ ನಡುವೆ ಜನ ಅದೆಷ್ಟು ಸುಲಭವಾಗಿ ಓಡಾಡಿಕೊಂಡಿದ್ದರೆಂದರೆ ಬಂಗ್ಲಾದೇಶದ ಮೂರನೇ ಒಂದರಷ್ಟು ಜನ ಬಂಗಾಳ ಮತ್ತು ಅಸ್ಸಾಂನಲ್ಲಿ (ಹಾಗೂ ಇನ್ನೂ ಕೆಲವು ಈಶಾನ್ಯದ ರಾಜ್ಯಗಳಲ್ಲಿ) ಮನೆಕಟ್ಟಿಕೊಂಡು ವ್ಯಾಪಾರ ವ್ಯವಹಾರ ನಡೆಸಿಕೊಂಡು, ಎಷ್ಟೋ ಕಡೆ ಎರಡು ಕಡೆ ತೆರಿಗೆಯನ್ನೂ ಪಾವತಿಸಿ ಹೆಚ್ಚೂಕಮ್ಮಿ ಎರಡೂ ದೇಶದ ನಾಗರಿಕರೇ ಆಗಿದ್ದರು. ಫಲವತ್ತಾದ ಪೂರ್ವಪಾಕಿಸ್ಥಾನದಲ್ಲಿ ಬೆಳೆದ ಹತ್ತಿ, ಅಕ್ಕಿ, ಬೇಳೆಗಳನ್ನು ಭಾರತದ ಮುಖ್ಯಭೂಮಿಯಿಂದ ದೂರವಿದ್ದ ಈಶಾನ್ಯ ರಾಜ್ಯಗಳಲ್ಲಿ ಮಾರಲು, ಈಶಾನ್ಯದಿಂದ ಚಹಾ ಖರೀದಿಸಿ ಜಗತ್ತಿನೆಲ್ಲೆಡೆ ಮಾರಲು ಬ್ರಹ್ಮಪುತ್ರ ನದಿ ಇವರಿಗೆ ದೊಡ್ಡ ಅವಕಾಶವನ್ನೊದಗಿಸಿತ್ತು. ಅದನ್ನು ಸದುಪಯೋಗಪಡಿಸಿಕೊಂಡು ಇವರುಗಳು ಶ್ರೀಮಂತರಾಗಿಯೂ, ಹಣದ ಪ್ರಭಾವದಿಂದ ಸಬಲರಾಗಿಯೂ ಬೆಳೆದರು. ಇತಿಹಾಸದ ಎಲ್ಲಾ ವ್ಯಾಪಾರೀ ಕೊಡುಕೊಳ್ಳುವಿಕೆಯಂತೆ, ಈ ಜನರು ತಮ್ಮೊಂದಿಗೆ ತಮ್ಮ ಜನರನ್ನೂ ಕರೆತಂದರು, ಹೋದಲ್ಲೆಲ್ಲಾ ತಮ್ಮ ವಠಾರಗಳನ್ನು ಕಟ್ಟಿ ನೆಲೆಸಿದರು. ಇಂತವರು 1971ರಲ್ಲಿ ಎಲ್ಲಿ ಹೋಗುವುದೆಂದೇ ತಿಳಿಯದೆ ಗೊಂದಲಕ್ಕೊಳಗಾದರು. 1947ರಲ್ಲಿ ಪಂಜಾಬಿನಲ್ಲಿ ನಡೆದ ಹಿಂಸಾಚಾರಗಳು ಈಗ ಪಶ್ಚಿಮಬಂಗಾಳದಲ್ಲಿ ಪುನರಾವರ್ತನೆಯಾಯ್ತು. ಭಾರತದ ಜೀವನ ಹೆಚ್ಚು ಶಾಂತಿಯುತ ಎಂದರಿತ ಹೆಚ್ಚಿನವರು ಭಾರತದಲ್ಲೇ ಉಳಿದುಕೊಳ್ಳಲು ನಿರ್ಧರಿಸಿದರು.

ಬಂಗಾಳಿ ಭಾಷೆಯಿಂದ, ಬಂಗಾಳಿ ಸಂಸ್ಕೃತಿಯಿಂದ ಬೆಸೆದಿದ್ದ ಪಶ್ಚಿಮ ಬಂಗಾಳದಲ್ಲೇನೋ ಇವರಿಗೆ ಹೆಚ್ಚಿನ ತೊಂದರೆಯಾಗಲಿಲ್ಲ. ಆದರೆ ಸಾಂಸ್ಕೃತಿವಾಗಿ ಸೂಕ್ಷ್ಮವಾಗಿದ್ದ ಈಶಾನ್ಯರಾಜ್ಯಗಳಲ್ಲಿ ಇವರು ನಿಧಾನಕ್ಕೆ “ಹೊರಗಿನವರಾ”ದರು. ಆದರೆ ಕಳೆದ 23ವರ್ಷಗಳಿಂದ ವ್ಯಾಪಾರ ನಡೆಸಿ ಪ್ರಭಾವಿಗಳಾಗಿದ್ದ ಇವರು ತಮ್ಮ ಇರುವಿಕೆಯನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲೂ ತಯಾರಿರಲಿಲ್ಲ. ಈ ತಿಕ್ಕಾಟ ಬಹಳಷ್ಟು ರಾಜ್ಯಗಳ ಮೂಲನಿವಾಸಿಗಳಲ್ಲಿ ಈ “ಹೊರಗಿನವರ” ಬಗ್ಗೆ ಅಸಹನೆಯನ್ನು ಮೂಡಿಸಿತು. ಇದನ್ನು ತಣ್ಣಗಾಗಿಸಲು ಭಾರತಸರ್ಕಾರ ಮತ್ತು ಈಶಾನ್ಯರಾಜ್ಯಗಳು ತಮ್ಮ ಮೂಲನಿವಾಸಿಗಳ ಹಕ್ಕುಗಳನ್ನುಳಿಸಿಕೊಳ್ಳಲು ಕಾಯ್ದೆ ಮತ್ತು ಒಪ್ಪಂದಗಳನ್ನು ಜಾರಿಗೊಳಿಸಿದವು. ಇಂತಹ ಒಪ್ಪಂದಗಳಲ್ಲೊಂದು ಅಸ್ಸಾಂ ಅಕಾರ್ಡ್.

ಅಸ್ಸಾಂನಲ್ಲಿ ಮತ್ತು ಉಳಿದ ಈಶಾನ್ಯ ರಾಜ್ಯಗಳಲ್ಲಿ ಪ್ರಾರಂಭವಾಗಿರುವ ಉಗ್ರ ಪ್ರತಿಭಟನೆಗಳನ್ನು ಅರ್ಥ ಮಾಡಿಕೊಳ್ಳಲು ಅಸ್ಸಾಂ ಅಕಾರ್ಡ್ ಅಥವಾ ಹೊಂದಾಣಿಕೆಯನ್ನು ಅರ್ಥ ಮಾಡಿಕೊಳ್ಳಬೇಕು. ತಮ್ಮ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ವೈಶಿಷ್ಟ್ಯಗಳನ್ನು ಕಾಪಾಡಿಕೊಳ್ಳುವ ಕಾರಣಕ್ಕಾಗಿ 1979ರಿಂದ – 1985ರವರೆಗೆ ಅಸ್ಸಾಂನಲ್ಲಿ ನಡೆದ ಆಂದೋಲನ ಪರಿಣಾಮವಾಗಿ, ಆಗಸ್ಟ್ 15, 1985ರಲ್ಲಿ ಅಸ್ಸಾಂ ಅಕಾರ್ಡ್ ಗೆ ಕೇಂದ್ರ ಸರ್ಕಾರ ಮತ್ತು ಅಸ್ಸಾಂ ವಿದ್ಯಾರ್ಥಿ ಯೂನಿಯನ್ ಮತ್ತು ಅಸ್ಸಾಂ ಗಣ ಸಂಗ್ರಾಮ ಪರಿಷತ್ತುಗಳು ಸಹಿ ಹಾಕುತ್ತವೆ. ಅದರ ಪ್ರಕಾರ, 25 ಮಾರ್ಚ್, 1971ಕ್ಕೂ ಮುಂಚೆ ಅಸ್ಸಾಂ ಪ್ರವೇಶಿಸಿದ ವಲಸಿಗರಿಗೆ ಕೆಲವು ನಿಬಂಧನೆಗಳ ಆಧಾರದ ಮೇಲೆ ಪೌರತ್ವವನ್ನು ಕೊಡುವ ಒಪ್ಪಂದವಾಯ್ತು. ಈ ಒಪ್ಪಂದ ರಾಜಕೀಯವಾಗಿ ಒಪ್ಪಿಗೆಪಡೆದರೂ ಮೂಲನಿವಾಸಿಗಳಲ್ಲಿ ಇದರ ಬಗ್ಗೆ ಅಸಹನೆ ಇದ್ದೇ ಇದೆ. ಇದರ ಜೊತೆಗೆ, ಬಂಗಾಳಿಗಳಿಗೊಂದು ಮೂಲಭೂತ ಸಮಸ್ಯೆಯಿದೆ. ಬಂಗಾಲಿಗಳೊಂದಿಗೆ ಒಡನಾಟವಿರುವವರಿಗೆ ಇದರ ಇಣುಕುನೋಟ ಸಿಕ್ಕಿರುತ್ತದೆ. ಅದೇನೆಂದರೆ ಬೇರೆ ಸಂಸ್ಕೃತಿ, ಭಾಷೆಗಳ ಬಗ್ಗೆ ಅವರಿಗೊಂದಷ್ಟು ತಿರಸ್ಕಾರವಿದೆ. ಅವರಿಗೆ ತಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿದವರಿಗಿಂತ ಮೇಲ್ಮಟ್ಟದ್ದು ಎಂಬುದೊಂದು ಸುಪ್ತವಾದ ಪ್ರತಿಷ್ಟಾಮನೋಭಾವವಿದೆ ಎಂಬುದನ್ನು ಬಂಗಾಳಿಗಳನ್ನು ತಿಳಿದ ಯಾರೂ ಅಲ್ಲಗಳೆಲಾರರು. ನಾವು ತಮಿಳರ ಭಾಷಾಭಿಮಾನ ಸಂಸ್ಕೃತಿಅಭಿಮಾನದ ಬಗ್ಗೆ ಎಷ್ಟು ತಿಳಿದಿಕೊಂಡಿದ್ದೇವೆಯೋ, ಅದಕ್ಕಿಂತಲೂ ಹೆಚ್ಚು ಬಂಗಾಳಿಗಳ ಅಭಿಮಾನ. ಬೆಂಗಳೂರಿನಲ್ಲಿ ಬಂಗಾಳಿ ರೆಸ್ಟೋರೆಂಟಿಗೆ ಹೋಗಿ ನೋಡಿ, ದುರ್ಗಾಪೂಜೆಯ ಪಂಡಾಲುಗಳಿಗೆ ಎಡತಾಕಿ ನೋಡಿ, ತಿಳಿಯಬಹುದು. ಹೀಗಿರುವ ಬಂಗಾಳಿ ಪ್ರಭಾವದ ಪ್ರದೇಶಗಳಿಂದ ಬಂದ ಈ “ಹೊರಗಿನವರು”, ಅವರು ಹಿಂದೂಗಳೇ ಆಗಿರಲಿ, ಮುಸ್ಲಿಮರೇ ಆಗಿರಲಿ ಅಸ್ಸಾಂ, ಸಿಕ್ಕಿಂಗಳಲ್ಲಿ ಅಲ್ಲಿ ಮೂಲನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಅಸ್ಸಾಮೀ ಮತ್ತು ಬೋಡೋ ಭಾಷೆಗಳನ್ನು ಬದಿಗೆ ಸರಿಸಿ ಬಂಗಾಳಿಯನ್ನು ಅಧಿಕೃತ ಭಾಷೆಯನ್ನಾಗಿಸಲು ಪ್ರಯತ್ನ ನಡೆಸಿದ್ದಾರೆ. ಬಂಗಾಳಿ ಮಾತನಾಡದವರನ್ನೆಲ್ಲಾ ಗಣತಿಯ ಸಮಯದಲ್ಲಿ ಬಂಗಾಳಿ ಭಾಷಿಗರು ಅಂತಾ ಬರೆಸಿ, ಈ ಭಾಷೆಯ ಬಳಕೆ ಹೆಚ್ಚಿದೆ ಅಂತಾ ನಿರೂಪಿಸಿಕೊಂಡು, ಬಂಗಾಳಿ ಹಬ್ಬಗಳಿಗೆ ಅಧಿಕೃತ ರಜೆಗಳನ್ನು ಘೋಷಿಸಿಕೊಂಡಿದ್ದಾರೆ. ನೈಜ ಬಂಗಾಳಿ ಭಾಷಿಗರು ಅಲ್ಪಸಂಖ್ಯಾತರಾಗಿದ್ದರೂ ಸಹ ಸರ್ಕಾರಿ ಕೆಲಸಕ್ಕೆ ಸೇರಬೇಕಾದರೆ ಬಂಗಾಳಿ ಬಾಷಾಜ್ಞಾನವಿರಬೇಕು ಅಂತೆಲ್ಲಾ ಅಲಿಖಿತನಿಯಮಗಳನ್ನು ರೂಪಿಸಿಕೊಂಡಿದ್ದಾರೆ. ಇದರಲ್ಲಿ ದೊಡ್ಡಗುಂಪು ಬಂಗಾಲಿಹಿಂದೂಗಳದ್ದೇ. ಬಂಗಾಲಿ ಮುಸ್ಲಿಮರ ಸಂಖ್ಯೆ ಸಣ್ಣದಾದರೂ ಸಹ ಇದಕ್ಕೆ ಅವರ ಕೊಡುಗೆಯೂ ಇದೆ.

ಇದಕ್ಕೆ ಸರಿಹೊಂದಿಕೊಂಡಂತೆ, 1971ರ ನಂತರ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳುತ್ತಿರುವ ಮುಸ್ಲಿಂ ನಿರಾಶ್ರಿತರಿಗೆ ಅಸ್ಸಾಂ ಸ್ವರ್ಗ. ಕೇಂದ್ರಸರ್ಕಾರದ ಅವಜ್ಞೆಗೂ ತುತ್ತಾಗಿದ್ದ ಈ ಜಾಗವನ್ನು ತಮ್ಮ ದೇಶವೇನೋ ಎಂಬಂತೆ ಮಾಡಿಕೊಂಡು ಅಲ್ಲೆಲ್ಲಾ ತಮ್ಮ ಕೇರಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಅನರಕ್ಷಸ್ಥ, ಧರ್ಮಾಂಧ ಕೇರಿಗಳಿಂದಾಗಿ ರಾಜ್ಯದ ಜನಸಾಮಾನ್ಯರ ಜೀವನವೂ ಏರುಪೇರಾಗಿದೆ. ಮೊದಲೇ “ಹೊರಗಿನವರ” ದಬ್ಬಾಳಿಕೆಯಿಂದ ಬೇಸತ್ತ ಅಸ್ಸಾಮಿಗಳು, ಈ ಎರಡನೇ “ಅಕ್ರಮ ವಲಸಿಗರ” ತೊಂದರೆಯಿಂದ ರೋಸಿಹೋಗಿದ್ದಾರೆ. ಈಗ ಸಿಎಎ ನೆಪದಿಂದ ಈ “ಹೊರಗಿನವರು” ಮತ್ತು “ಅಕ್ರಮ ವಲಸಿಗರು” ದೇಶದ ನಾಗರೀಕರೇ ಆಗಿಹೋದರೆ ನಮ್ಮ ಕಥೆಯೇನು? ನಮ್ಮ ನೆಲದಲ್ಲಿ ನಾವೇ ಎರಡನೇ ದರ್ಜೆಯ ನಾಗರೀಕರಾಗುತ್ತೇವೆ ಎಂಬ ಭಯದಲ್ಲಿದ್ದಾರೆ.

ಪೌರತ್ವ ಕಾಯ್ದೆ ಮೊದಲನೇ ತೊಂದರೆಯನ್ನು ಹೋಗಲಾಡಿಸುವ ಬದಲು ಇನ್ನೂ ಹೆಚ್ಚಾಗಿಸುತ್ತದೆ ಎಂಬ ಸಿಟ್ಟು ಅಸ್ಸಾಮಿಗಳಿಗಿದೆ. ಅದಕ್ಕಾಗಿ ಮೂಲನಿವಾಸಿಗಳು ಬೀದಿಗೆ ಬಂದಿದ್ದಾರೆ. ಎನ್‌ಆರ್‌ಸಿ ಎಂಬುದು ಈ ಎರಡನೇ ತೊಂದರೆಗೆ ಪರಿಹಾರವೇನೋ ಕೊಟ್ಟಿದೆ. ಆದರೆ ಅದನ್ನು ಪರಿಹಾರವೆಂಡು ಒಪ್ಪಿಕೊಳ್ಳುವುದು ಕಾಂಗ್ರೆಸ್, ಸಿಪಿಐ ಮತ್ತು ತೃಣಮೂಲಕಾಂಗ್ರೆಸ್ಸಿನ ರಾಜಕಾರಣಿಗಳಿಗಿಷ್ಟವಿಲ್ಲ. ಯಾಕೆಂದರೆ ಅದೇ ಅವರ ವೋಟ್-ಬ್ಯಾಂಕ್. ಅನಕ್ಷರಸ್ಥ, ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವದ ಆಸೆ ತೋರಿಸಿದವರ ಪ್ರಯತ್ನಗಳೆಲ್ಲಾ ಮೋದಿ-ಶಾ ಮಣ್ಣಾಗಿಸುತ್ತಿದ್ದಾರೆ. ಆ ಕಾರಣಕ್ಕೆ ಈ ಪಾರ್ಟಿಗಳು ಈ ಅಕ್ರಮ ನುಸುಳುಕೋರ ಮನಸ್ಸಿಗೆ ಬೆಂಕಿಹಚ್ಚಿ ರಸ್ತೆಗಿಳಿಸಿದ್ದಾರೆ. ಅಸ್ಸಾಮಿಗಳು “ನೀವು ಸಿಎಎ ಎನ್‌ಆರ್‌ಸಿ ಏನಾದರೂ ಮಾಡಿಕೊಳ್ಳಿ. ಮೊದಲು ಇಲ್ಲಿರುವ ಎಲ್ಲರನ್ನೂ ಹೊರಹಾಕಿ ಅಸ್ಸಾಂ ಅನ್ನು ಮೂಲಅಸ್ಸಾಮಿಗಳಿಗೇ ಕೊಟ್ಟುಬಿಡಿ” ಅಂತಿದ್ದಾರೆ. ಅಕ್ರಮಕ್ರಿಮಿಗಳು “ನಾವಿಲ್ಲಿಂದ ಹೋಗಲ್ಲ, ನಿಮ್ಮ ಎನ್‌ಆರ್‌ಸಿ ವಾಪಾಸ್ ಪಡೆಯಲ್ಲ” ಅಂತಿದ್ದಾರೆ. ಉಳಿದಂತೆ ಪ್ರಭಾವೀ “ಹೊರಗಿನವರು” ಸಿಎಎ ಜಾರಿಗೆ ತರಲೇಬೇಕು ಅಂತಿದ್ದಾರೆ. ಇದು ಎರಡಲ್ಲ ಮೂರು ಅಲುಗುಗಳ ಖಡ್ಗ.


ಅಸ್ಸಾಮಿಗಳ ಮಾತು ಈಡೇರಿಸಿದರೆ, 1947-71ರ ನಡುವೆ ವಲಸೆಬಂದ “ಹೊರಗಿನ” ಹಿಂದೂ-ಮುಸ್ಲಿಮರ ದೊಡ್ಡದೊಂದು ಗುಂಪೇ ತೊಂದರೆಗೀಡಾಗುತ್ತದೆ. ಅವರನ್ನೆಲ್ಲಾ ಅಲ್ಲಿಂದ ಹೊರತಂದರೆ ಇನ್ನೊಂದು ಕಾಶ್ಮೀರ ಪಂಡಿತರ ನಿರಾಶ್ರಿತರ ಸಮಸ್ಯೆಯೇಳುತ್ತದೆ. ಪ್ರಭಾವೀಗುಂಪಾದ “ಹೊರಗಿನವರ” ಆಶಯ ಈಡೇರಿಸಿದರೆ, ಮೂಲನಿವಾಸಿಗಳ ಮತ್ತು ದೊಡ್ಡ ಸಂಖ್ಯೆಯ ಅಕ್ರಮ ವಲಸಿಗ ಮುಸ್ಲಿಮರ ಕೋಪಕ್ಕೀಡಾಗಬೇಕಾಗುತ್ತದೆ. ಅಕ್ರಮವಲಸಿಗರನ್ನು, ಮಾನವಿಯತೆಯ ಆಧಾರದ ಮೇಲೆ ಸಾಕಲು ಹೋದರೆ, ಮೊದಲೆರಡು ಗುಂಪುಗಳು ಮುಗಿಬೀಳುತ್ತವೆ. ಹಾಗಂತ ಅವರನ್ನು ಸುಲಭವಾಗಿ ಹೊರಹಾಕಲು ಕಾಂಗಿ-ಕಮ್ಯೂನಿಸ್ಟ್-ತೃಣಮೂಲ ದುಷ್ಟಶಕ್ತಿಗಳು ಬಿಡುತ್ತಿಲ್ಲ. ಇದೊಂದು ಪ್ರಾದೇಶಿಕ ಹೋರಾಟ – ಮಾನವೀಯತೆ – ಅಕ್ರಮ ನುಸುಳುವಿಕೆ – ರಾಜಕೀಯದ ನಡುವಿನ ಸಂಕೀರ್ಣ ಸಮಸ್ಯೆ. ಎಲ್ಲರೂ ಈ ಸಮಸ್ಯೆಯ ಸದುಪಯೋಗ ಪಡೆಸುಕೊಂಡು ಬೆಂಕುಹಚ್ಚಲು ನೋಡುತ್ತಿದ್ದಾರೆ. ಅದೂ ಅಲ್ಲದೇ ಅಸ್ಸಾಂನಲ್ಲಿ ಎನ್‌ಆರ್‌ಸಿ ವಿಫಲ ಅಂತಾ ನಿರೂಪಿಸಿದರೆ ವಿರೋಧಪಕ್ಷಗಳಿಗೆ ದೇಶವ್ಯಾಪೀ ಎನ್‌ಆರ್‌ಸಿ ಜಾರಿತರದಿರಲು ಸುಲಭ ಅಸ್ತ್ರ ಸಿಕ್ಕಾಂತಾಗುತ್ತದೆ. ಇದೇ ಕಾರಣಕ್ಕೆ ಅಸ್ಸಾಂ ಉರಿಯುತ್ತಿರುವುದು. ಮೋದಿ-ಶಾ ಜೋಡಿ ಇದನ್ನು ಹೇಗೆ ಬಗೆಹರಿಸುತ್ತಾರೆ ಎಂಬುದು ಸಧ್ಯಕ್ಕೆ ಎಲ್ಲರಿಗೂ ಕುತೂಹಲದ ವಿಚಾರ.

0 comments on “ದೇಹಕ್ಕೆ ತಂಪುಕೊಡುವ ಅಸ್ಸಾಂ ಚಹಾತೋಟಕ್ಕೆ ಬೆಂಕಿಯಿಟ್ಟವರ್ಯಾರು

Leave a Reply

Your email address will not be published. Required fields are marked *