Tuesday, 27 February, 2024

ಜಾಳುಜಾಳಾದ ಜೀವನಕ್ಕೆ ದಿಕ್ಕುತೋರಿಸುವ ಜಾರ್ಜಿಯಾದ ಮಾರ್ಗಸೂಚಿಗಳು

Share post

ಒಂದ್ಸಲ ಮಂಗಳೂರು ಏರ್ಪೋರ್ಟಿಂದ ನಾನು ದುಬೈಗೆ ಹೊರಡುವವನಿದ್ದೆ. ಸಂಜೆ 8ಕ್ಕೆ ಫ್ಲೈಟು. ಮಧ್ಯಾಹ್ನ ಒಂದಕ್ಕೇ ಶೃಂಗೇರಿಯ ಮನೆಬಿಟ್ವಿ. ನಾಲ್ಕೂವರೆಗೆಲ್ಲಾ ಏರ್ಪೋರ್ಟಿಗೆ ನನ್ನ ಬಿಟ್ಟು, ಅಪ್ಪ ಅಮ್ಮ ಪೂರ್ತಿ ಕತ್ತಲಾಗುವ ಮೊದಲು ವಾಪಾಸು ಶೃಂಗೇರಿ ತಲುಪಿಕೊಳ್ಳಬಹುದು ಅನ್ನೋ ಲೆಕ್ಕ. ಶೃಂಗೇರಿ ಬಿಟ್ಟು ಸುಮಾರು ಹದಿನೈದು ಕಿಲೋಮೀಟರ್ ಹೋಗಿರಬಹುದು, ಮನೆಯಿಂದ ತಂಗಿ ಕಾಲ್ ಮಾಡಿದ್ಲು. “ಅಣ್ಣಾ ನಿನ್ ಪಾಸ್ಪೋರ್ಟ್ ಇಲ್ಲೇ ಬಿಟ್ ಹೋಗಿದ್ಯಲ್ಲೋ!” ಅಂತಾ. ಟಿಕೇಟಾದ್ರೆ ಫೋನಲ್ಲಿರುತ್ತೆ, ಲಗೇಜ್ ಬಿಟ್ಟು ಹೋದ್ರೆ ಮುಂದಿನ ಸಲ ಬಂದಾಗ ತಗೊಂಡು ಹೋಗಬಹುದು. ಪಾಸ್ಪೋರ್ಟೇ ಬಿಟ್ಟು ಹೋದ್ರೆ!! ಸಧ್ಯ ತನಿಕೋಡು ಹತ್ರದಲ್ಲಿ ಫಾರೆಸ್ಟ್ ಚೆಕ್ಪೋಸ್ಟ್ ಇರೋದ್ರಿಂದ ಅಲ್ಲೊಂದು ನೆಟ್ವರ್ಕ್ ಟವರ್ ಹಾಕಿದ್ದಾರೆ. ನಮ್ ಕಾಲ್ ಕನೆಕ್ಟ್ ಆಯ್ತು. ಇಲ್ಲಾಂದ್ರೆ ಕೆರೆಕಟ್ಟೆಯೋ ಇಲ್ಲಾಂದ್ರೆ ಮಾಳವೋ ತಲುಪಿದ ಮೇಲೆ ತಂಗಿ ನನಗೆ ಕಾಲ್ ಮಾಡಬೇಕಿತ್ತು. ಅಲ್ಲಿಂದಾ ವಾಪಾಸ್ ಬಂದು ನಾನು ಪಾಸ್ಪೋರ್ಟ್ ತಗಂಡು ಮತ್ತೆ ಹೋಗಿ ಫ್ಲೈಟ್ ಹತ್ತಬೇಕಾಗಿತ್ತು. ಅವಸ್ಥೆಯಲ್ಲಾ!! ನಮ್ಮಪ್ಪ ಒಂದ್ಸಲ ನನ್ಕಡೆ ನೋಡಿ “ಅಲ್ಲಾ ಮಾರೇನೇ….ಪಾಸ್ಪೋರ್ಟೇ ಮರೆತು ಹೊರಟಿದ್ಯಲ್ಲ. ಎಂತಾ ಕತೆ ನಿಂದು!? ಮತ್ತೆಂತಾ ದೇಶ-ಜಗತ್ತು ತಿರುಗಿರದು ನೀನು. ಅದಿಲ್ದೆ ಫ್ಲೈಟು ಹತ್ತಕ್ಕಾಗುತ್ತೆನಾ? ಚೆಕ್ ಮಾಡ್ಕಂಡು ಹೊರಡದಲಾ! ಎಲ್ಲೆಲ್ಲಿ ಎಂತೆಂತಾ ಬಿಟ್ಬಂದಿಯಾ ಎಂತದಾ!! ಯಾರಾದ್ರೂ ಈ ಕಥೆ ಕೇಳಿರೆ ಮುಕ್ಳೀಲಿಬಾಯಲ್ಲಿ ನಗಾಡಲ್ಲಾನಾ ಮಾರೇನೇ! ಆಚೆಸಲ ಬಂದಾಗ ಟವಲ್ ಬಿಟ್ ಹೋಗಿದ್ದಿ, ಹೋದ್ಸಲ ಬಂದಾಗ ಬ್ರಷ್ ಬಿಟ್ ಹೋಗಿಯ, ಈ ಸಲ ಪಾಸ್ಪೋರ್ಟ್. ಮುಂದಿನ ಸಲ ಇನ್ನೆಂತದಾ!” ಅಂತಾ ಫುಲ್ ಕೊಯ್ ಅಂದ್ರು. ಅವತ್ತಿಂದಾ ಇವತ್ತಿನವರೆಗೂ ಅಪ್ಪ ನನ್ನ “ಮರೆಯೋ ವಿಚಾರದಲ್ಲಿ” ಕಾಲೆಳೆಯೋದನ್ನ ಮರೆಯಲ್ಲ.

 

ಮರೆಯೋದು ಮನುಷ್ಯನ ಸ್ವಾಭಾವಿಕ ಗುಣಗಳಲ್ಲೊಂದು. “ಅಯ್ಯೋ ಮರೆತೋಗಿ ಬಿಟ್ರೆ!” ಅಂತಾ ನಾವು ಅದನ್ನ ನೆನಪಿಟ್ಟುಕೊಳ್ಳೋಕೆ ಮಾಡುವ ಹರಸಾಹಸಗಳು ಒಂದೆರಡಲ್ಲ. ಫೋನಲ್ಲಿ ಮೂರುಮೂರುತರಹದ ರಿಮೈಂಡರ್ ಆಪ್’ಗಳು, “ನನಗೆ ನೆನಪಿಸೇ” ಅಂತಾ ಹೆಂಡತಿಗೆ ಹೇಳೋದು (ಆಮೇಲೆ ಅವಳು ಮರೆತರೆ, ಅವಳಿಗೆ ಚೂಟಬಹುದಲ್ಲಾ 😉 ಅದಕ್ಕೆ), ಪೇಪರಲ್ಲಿ ಬರೆದಿಟ್ಕೊಳ್ಳೋದು ಹೀಗೇ ನಾನಾ ರೀತಿಯಲ್ಲಿ ಪ್ರಯತ್ನಿಸ್ತೀವಿ. ಆದರೆ ಒಂದ್ಸಲ ಯೋಚಿಸಿ, ಎಲ್ಲಾದ್ರೂ ಒಂದಿನ ಈ ಭೂಮಿಯಲ್ಲೇನಾದ್ರೂ ಹೆಚ್ಚುಕಮ್ಮಿಯಾಗಿ ಇಡೀ ಮನುಷ್ಯಕುಲವೇ 98% ನಾಶವಾಗಿ ಹೋದ್ರೆ!? ಹೆಂಗೆ ಮತ್ತೆ ವಾಪಾಸ್ ಭೂಮಿಯನ್ನ ಸರಿಮಾಡೋದು, ಹೆಂಗೆ ಹೊಸಾರೀತಿಯಲ್ಲಿ ನಾಗರೀಕತೆಯನ್ನು ಸೃಷ್ಟಿಸೋದು? ಅದೆಲ್ಲಾದ್ರೂ ಮರೆತೋಗಿ ಬಿಟ್ರೆ!!

 

ಅದಕ್ಕೇ, ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಜಾರ್ಜಿಯಾ ರಾಜ್ಯದ ಎಲ್ಬರ್ಟ್ ಕೌಂಟಿಯಲ್ಲಿ ಈ ರೀತಿಯೇನಾದ್ರೂ ಮನುಷ್ಯ ಸಂಕುಲವೇ ಅಳಿವಿನಂಚಿಗೆ ತಲುಪಿದ್ರೆ, ಮಾನವೀಯ ಮೌಲ್ಯಗಳನ್ನು ಮರೆಯದೇ, ನಾಗರೀಕತೆಯನ್ನು ಮರುಸೃಷ್ಟಿಸಲು ಸಹಾಯವಾಗುವಂಗೆ ಒಂದು ಹತ್ತು ರೂಲುಗಳನ್ನ ಯಾರೋ ಮಹಾನುಭಾವರು ಬರೆದಿಟ್ಟಿದ್ದಾರಂತೆ. ಅದೂ ಪೇಪರಲ್ಲಿ ಅಳಿಸಿಟ್ಟು ಅದನ್ನೆಲ್ಲಾದ್ರೂ ಯಾರಾದ್ರೂ ಪ್ಯಾಂಟ್ ಜೇಬಲ್ಲಿ ಮರೆತಿಟ್ಟು ವಾಷಿಂಗ್ ಮಷೀನಿಗೆ ಹಾಕಿಬಿಟ್ರೆ! ನಾವೆಷ್ಟು ಸಲ ಹಾಗೆ ಮಾಡಿಲ್ಲ 😉 ಅದಕ್ಕೇ ಹಂಗೆಲ್ಲಾ ಕಳೆದೋಗದಂತೆ ಈ ರೂಲುಗಳನ್ನ ದೊಡ್ಡ ಕಲ್ಲುಗಳಲ್ಲಿ, ಅದೂ ಸುಮಾರು ಇಪ್ಪತ್ತಡಿ ಎತ್ತರದ ನಾಲ್ಕು ಕಲ್ಲುಗಳಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಕೆತ್ತಿ, ಬ್ರಿಟನ್ನಿನ ‘ಸ್ಟೋನ್-ಹೆಂಝ್’ ತರಹಾ ನಿಲ್ಲಿಸಿಬಿಟ್ಟಿದ್ದಾರೆ. ಈ ನಾಲ್ಕೂ ಕಲ್ಲುಗಳ ನಡುವೆ ಒಂದು ನೇರವಾದ ಕಲ್ಲು ನೆಟ್ಟು, ಅದರ ಮೇಲೆ ಇನ್ನೊಂದು ಚಪ್ಪಡಿಯಿಟ್ಟು, ಆ ಚಪ್ಪಡಿ ಎಲ್ಲಾ ಕಲ್ಲುಗಳನ್ನೂ ಮೇಲಿನಿಂದ ಹಿಡಿದು ನಿಲ್ಲಿರುವ ರೀತಿಯಲ್ಲಿ ಈ ಇಡೀ ಸ್ಮಾರಕವನ್ನು ನಿರ್ಮಿಸಲಾಗಿದೆ.

 

ನಡುಗಂಬದ ಮೇಲಿರುವ ಚಪ್ಪಡಿಯ (capstoneನ) ನಾಲ್ಕೂ ಬದಿಯಲ್ಲಿ “Let these be guidestones to an age of reason” (ಈ ಸೂಚಿಗಳು, ಮುಂದಿನ ತರ್ಕಬದ್ಧ ಯುಗಕ್ಕೆ ಮಾರ್ಗದರ್ಶಿಯಾಗಿರಲಿ) ಅಂತಾ ಈಜಿಪ್ಷಿಯನ್ ಹೈರೋಗ್ಲಿಫಿಕ್ಸ್ (ಚಿತ್ರಲಿಪಿ), ಶಾಸ್ತ್ರೀಯ(classical) ಗ್ರೀಕ್, ಸಂಸ್ಕೃತ ಹಾಗೂ ಬ್ಯಾಬಿಲೋನಿಯನ್ ಕ್ಯೂನಿಫಾರ್ಮ್ ಭಾಷೆಗಳಲ್ಲಿ ಬರೆಯಲಾಗಿದೆ. ಚಿತ್ರ – ೧ ಇಡೀ ಸ್ಮಾರಕದ ರಚನೆಯನ್ನು ಚೆನ್ನಾಗಿ ವಿವರಿಸುತ್ತದೆ.

 

ಮಾನವೀಯತೆ ಮತ್ತು ಮನುಕುಲದ ಭವಿಷ್ಯದ ಬಗ್ಗೆ ಮಾತನಾಡುವ ಈ ಕಲ್ಲಿನ ಸ್ಮಾರಕವನ್ನು “ಜಾರ್ಜಿಯಾದ ಮಾರ್ಗಸೂಚಿಗಳು” (Georgia Guidelines) ಎಂದೇ ಕರೆಯಲಾಗುತ್ತದೆ. ಈ 10 ಮಾರ್ಗಸೂಚಿಗಳು, ಮುಂದೆಂದಾದರೂ ನಮಗೆ ಇಡೀ ಮನುಕುಲವನ್ನು ಮತ್ತೀ ಪ್ರಪಂಚವನ್ನು ಮೊದಲಿನಿಂದಾ ಕಟ್ಟಲು ಅವಕಾಶ ಸಿಕ್ಕರೆ ಹೇಗೆ ಕಟ್ಟಬಹುದು ಮತ್ತು ಹೇಗೆ ಕಟ್ಟಬೇಕು ಅನ್ನುವುದರ ಬಗ್ಗೆ ವಿವರಿಸುತ್ತವೆ.

 

ಈ ನಾಲ್ಕೂಕಲ್ಲುಗಳ ಎರಡೂ ಬದಿಯಲ್ಲಿ, ಅಂದರೆ ಒಟ್ಟು ಎಂಟುಕಡೆಗಳಲ್ಲಿ, ಇಂದಿನ ಆಧುನಿಕ ಜಗತ್ತಿನ ಎಂಟು ಬೇರೆ ಬೇರೆ ಪ್ರಸಿದ್ಧ ಭಾಷೆಗಳಲ್ಲಿ ಈ ಹತ್ತೂ ನಿಯಮಾವಳಿಗಳನ್ನು ಕೆತ್ತಲಾಗಿದೆ. ಆ ಎಂಟು ಭಾಷೆಗಳು ಇಂಗ್ಳೀಷ್, ಸ್ಪಾನಿಷ್, ಸ್ವಾಹಿಲಿ, ಹಿಂದಿ, ಹೀಬ್ರೂ, ಅರಾಬಿಕ್, ಸಾಂಪ್ರದಾಯಿಕ ಚೈನೀಸ್ ಮತ್ತು ರಷ್ಯನ್. “ಏನೀ ಹತ್ತು ಮಾರ್ಗಸೂಚಿಗಳು ಮತ್ತು ಅವೇನನ್ನು ಹೇಳುತ್ತವೆ?” ಎಂಬ ಕುತುಹಲ ನಿಮಗಿದ್ದರೆ ಮುಂದೆ ಓದಿ:

 

ಸೂಚಿ 1) ಇಡೀ ಭೂಮಿಯ ಜನಸಂಖ್ಯೆ 5 ಬಿಲಿಯನ್ ದಾಟದಂತೆ ನೋಡಿಕೊಳ್ಳುತ್ತಾ, ಪ್ರಕೃತಿಯೊಂದಿಗೆ ಸಮತೋಲನ ಕಾಯ್ದುಕೊಳ್ಳಿ

ಸೂಚಿ 2) ಸಂತಾನೋತ್ಪತ್ತಿಯನ್ನು ವಿವೇಕದಿಂದ ಮುಂದುವರೆಸಿ – ವೈವಿಧ್ಯತೆ ಮತ್ತು ಆರೋಗ್ಯಕರ ಜನಾಂಗದ ಸೃಷ್ಟಿಯೆಡೆಗೆ ನಿಮ್ಮ ಗಮನವಿರಲಿ

ಸೂಚಿ 3) ಇಡೀ ಮಾನವಕುಲವನ್ನು ಒಂದೇ ಭಾಷೆಯಿಂದ ಒಗ್ಗೂಡಿಸಿ

ಸೂಚಿ 4) ಮಾನವ ಸಹಜ ಉತ್ಸಾಹ – ನಂಬಿಕೆ – ಸಂಪ್ರದಾಯಗಳೊಂದಿಗೆ ಕೂಡಿದ ತರ್ಕಸಹಿತ ಕಾರಣಗಳೊಂದಿಗೆ ನಿಮ್ಮ ಆಡಳಿತ ಮುಂದುವರೆಯಲಿ

ಸೂಚಿ 5) ದೇಶ ಮತ್ತು ನಾಗರೀಕರನ್ನು ನ್ಯಾಯೋಚಿತ ಕಾನೂನುಗಳು ಮತ್ತು ನಿಷ್ಪಕ್ಷಪಾತವಾದ ನ್ಯಾಯಾಲಯಗಳ ಮೂಲಕ ರಕ್ಷಿಸಿ

ಸೂಚಿ 6) ಆಯಾ ದೇಶಗಳ ಆಡಳಿತ ಸಂಪೂರ್ಣವಾಗಿ ಅವುಗಳ ಆಂತರಿಕ ವಿಷಯವಾಗಿರಲಿ, ಬಾಹ್ಯ (ಅಂತರಾಷ್ಟ್ರೀಯ) ವಿವಾದಗಳನ್ನು ಅಂತರಾಷ್ಟ್ರೀಯ ನಾಯಾಲಯದಲ್ಲಿ ಬಗೆಹರಿಸಿಕೊಳ್ಳಲಿ

ಸೂಚಿ 7) ಸಣ್ಣ-ಪುಟ್ಟ ವಿಷಯಗಳಿಗೂ ಚಿಲ್ಲರೆ ಕಾನೂನುಗಳನ್ನು ರೂಪಿಸುವುದನ್ನು ಬಿಡಿ. ಆಡಳಿತದಲ್ಲಿ ಅನುಪಯುಕ್ತ ಅಧಿಕಾರಿಗಳು ಅಥವಾ ಸ್ಥಾನಮಾನಗಳನ್ನು ಸೃಷ್ಟಿಸದಿರಿ

ಸೂಚಿ 8) ಎಲ್ಲಾ ನಾಗರೀಕರಿಗೂ ವೈಯಕ್ತಿಕ ಹಕ್ಕುಗಳನ್ನು ಮಾತ್ರವಲ್ಲ ಕೆಲ ಸಾಮಾಜಿಕ ಕರ್ತವ್ಯಗಳನ್ನೂ ರೂಪಿಸಿ. ಈ ಹಕ್ಕು-ಕರ್ತವ್ಯಗಳು ಸಮತೋಲನದಲ್ಲಿರಲಿ.

ಸೂಚಿ 9) ಸತ್ಯ – ಸೌಂದರ್ಯ – ಪ್ರೀತಿ – ಹಾಗೂ ಅನಂತದೊಂದಿಗೆ ಸಾಮರಸ್ಯವನ್ನು ಬಯಸುವ ಮನೋಭಾವಗಳನ್ನು ಪ್ರೋತ್ಸಾಹಗೊಳಿಸಿ

ಸೂಚಿ 10) ಈ ಭೂಮಿಯ ಮೇಲೆ ಕ್ಯಾನ್ಸರ್ ಆಗಬೇಡಿ. ಪ್ರಕೃತಿಗೆ ಜಾಗವನ್ನು ಬಿಡಿ (ಇನ್ನೊಮ್ಮೆ ಕೇಳಿಸಿಕೊಳ್ಳಿ) ಪ್ರಕೃತಿಗೆ ಜಾಗವನ್ನು ಬಿಡಿ

 

ಚಂದ ಉಂಟಲ್ಲಾ ನಿಯಮಾವಳಿಗಳು? ನಮ್ಮ ಇಂದಿನ ಜಗತ್ತಿನ ಸ್ವಲ್ಪಮಂಕಾದ ಪರಿಸ್ಥಿತಿ, ಮತ್ತದಕ್ಕೆ ಕಾರಣವಾಗಿರಬಹುದಾದ ಐತಿಹಾಸಿಕ ಅಂಶಗಳನ್ನು ಅವಲೋಕಿಸಿದಾಗ ಹೊಸಾ ಭೂಮಿ ಹೀಗೇ ಇದ್ದರೆ ಚಂದ ಅನಿಸುತ್ತದೆ ಅಲ್ಲವೇ.

 

ಅಂದಹಾಗೆ ಇದ್ದು ಬರೀ ಹತ್ತು ಸೂಚನೆಗಳನ್ನು ಬರೆದ ಸ್ಮಾರಕವಷ್ಟೇ ಅಲ್ಲ. ಇಡೀ ಸ್ಮಾರಕ ಒಂದು ಗಡಿಯಾರ, ಕ್ಯಾಲೆಂಡರ್ ಮತ್ತು ದಿಕ್ಸೂಚಿಯಾಗಿಯೂ ಕೆಲಸ ಮಾಡುತ್ತದೆ! ಹೇಗೆ ಅಂತಿರಾ?

 

(*) ಕ್ಯಾಲೆಂಡರ್ – ಇದನ್ನು ಎಲ್ಬರ್ಟ್ ಕೌಂಟಿಯ ಅತ್ಯಂತಎತ್ತರದ ಜಾಗದಲ್ಲಿ ಕಟ್ಟಿದ್ದಾರೆ. ಇಲ್ಲಿಂದ ಸೂರ್ಯನ ಪಶ್ಚಿಮ- ಪೂರ್ವ-ಪಶ್ಚಿಮ ವಾರ್ಷಿಕಚಲನವನ್ನು ಗಮನಿಸಬಹುದಾಗಿದೆ (ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿರೋ ಕೊಸರಿನಲ್ಲಿ). ಈ ಜಾರ್ಜಿಯಾದ ಮಾರ್ಗಸೂಚಿ ಸ್ಮಾರಕದ ಮಧ್ಯಕಂಬದಲ್ಲಿ ಸುಮಾರಿ ಐದಡಿ ಎತ್ತರದಲ್ಲಿ ಆಯತಾಕಾರದಲ್ಲಿ ಕೊರೆದಿರುವ ಜಾಗದ ಮೂಲಕ ನೀವು ಸೂರ್ಯ ಹುಟ್ಟುವ ಜಾಗವನ್ನು ನೋಡಿ ನೀವು ವರ್ಷದ ದಿನಗಳನ್ನು ಅಂದಾಜು ಹಾಕಬಹುದು. ಆಯತ ಸಂಕ್ರಾಂತಿ ಮತ್ತು ವಿಷುವತ್ ಸಂಕ್ರಾಂತಿಯ ದಿನಗಳಂದು ಈ ಕೊರೆತದ ನಟ್ಟ ನಡುಮಧ್ಯದಲ್ಲಿ ಸೂರ್ಯೋದಯವಾಗುತ್ತದೆ. ಇದನ್ನು ಚಿತ್ರ – ೨ ಮತ್ತು ಚಿತ್ರ – ೧ರಲ್ಲಿ 2 ಎಂಬ ಅಂಕಿಯಿರುವಲ್ಲಿ ತೋರಿಸಲಾಗಿದೆ.

 

 

(*) ದಿಕ್ಸೂಚಿ – ಇದೇ ನಡುಗಂಬದಲ್ಲಿ ಸ್ವಲ್ಪ ಎತ್ತರದಲ್ಲಿ ಇನ್ನೊಂದು ರಂಧ್ರವನ್ನು ಕೊರೆದಿದ್ದಾರೆ. ಆ ರಂಧ್ರದ ಕೋನ ಹೇಗಿದೆಯೆಂದರೆ, ಅದರಮೂಲಕ ನೋಡಿದಾಗ ಧ್ರುವನಕ್ಷತ್ರ ನಿಮ್ಮ ಕಣ್ಣೆದುರಿಗೇ ಇರುತ್ತದೆ. ಇದರಿಂದ ನೀವು ದಿಕ್ಕುಗಳನ್ನು ಸರಿಯಾಗಿ ಗುರುತಿಸಿಕೊಳ್ಳಬಹುದು (ಚಿತ್ರ – ೧ರಲ್ಲಿ 3 ಎಂಬ ಅಂಕಿಯಿರುವಲ್ಲಿ).

 

(*) ಗಡಿಯಾರ – ಈ ನಡುಗಂಬದ ಮೇಲಿರುವ capstoneನಲ್ಲಿ(ಅಂದರೆ ನಾಲ್ಕೂ ಕಲ್ಲುಗಳನ್ನು ಹಿಡಿದಿಟ್ಟಿರುವ ಚಪ್ಪಡಿಯಲ್ಲಿ) ಕೊರೆದಿರುವ ಇನ್ನೊಂದು ರಂಧ್ರದ ಮೂಲಕ ಮಧ್ಯಾಹ್ನದ ಸೂರ್ಯ ಅಂದರೆ ನಡುಮಧ್ಯಾಹ್ನದ ಹನ್ನೆರಡು ಘಂಟೆಯ ಸೂರ್ಯ ಬೆಳಸಿನ ಸರಳೊಂದನ್ನು ತೋರಿಸಿ, ನಿಮಗೆ “ಸಮಯ ಈಗ ಹನ್ನೆರಡು ಘಂಟೆ” ಅಂತಾ ಹೇಳಿ ಮುಂದುವರೆಯುತ್ತಾನೆ (ಚಿತ್ರ – ೧ರಲ್ಲಿ 4 ಎಂಬ ಅಂಕಿಯಿರುವಲ್ಲಿ).

 

ಈ ಸ್ಮಾರಕದಿಂದ ಸ್ವಲ್ಪದೂರದಲ್ಲಿ ಇನ್ನೊಂದು ಕಲ್ಲನ್ನು ನೆಲಕ್ಕೆ ಹಾಸಿ, ಅದರಲ್ಲಿ ಈ ಸ್ಮಾರಕದ ರೂಪುರೇಷೆಗಳನ್ನೂ, ಅದು ಹೇಗೆ ಕೆಲಸ ಮಾಡುತ್ತದೆ ವಿವರಿಸಲಾಗಿದೆ. ಜೊತೆಗೇ “ಈ ಕಲ್ಲಿನ ಅಡಿಯಲ್ಲಿ ಆರಡಿ ಆಳದಲ್ಲಿ ಒಂದು ಟೈಂ ಕ್ಯಾಪ್ಸೂಲನ್ನು ______ ದಿನಾಂಕದಂದು ನೆಡಲಾಗಿದೆ. ಅದನ್ನು _______ ದಿನದಂದು ತೆರೆಯಬೇಕು” ಅಂತಲೂ ಬರೆಯಲಾಗಿದೆ. ಆದರೆ ದಿನಾಂಕಗಳಿರಬೇಕಾದ ಜಾಗಗಳೆರಡೂ ಖಾಲಿಯಿರುವುದರಿಂದ, ಇನ್ನೂ ಯಾವುದೇ ಟೈಂ ಕ್ಯಾಪ್ಸೂಲನ್ನು ಇಡಲಾಗಿಲ್ಲ ಎಂದು ತಿಳಿಯಲಾಗಿದೆ. ಒಂತರಾ ವಿಚಿತ್ರವಾಗಿದೆಯಲ್ಲಾ!?

 

ಭೂಕಂಪ, ಅಣುಬಾಂಬ್ ಸ್ಪೋಟದಂತಹಾ ಮಹಾಮಾರಿಗಳನ್ನೂ ತಡೆಯುವಷ್ಟು ಬಲಿಷ್ಟವಾದ ಈ ಸ್ಮಾರಕನ್ನು ಯಾರು ಕಟ್ಟಿಸಿದ್ದು, ಯಾವ ಕಾರಣಕ್ಕೆ ಕಟ್ಟಿಸಿದ್ದು ಎಂಬ ವಿಷಯವಿನ್ನೂ ಸಾರ್ವಜನಿಕವಾಗಿಲ್ಲ. ಖಾಸಗೀ ಸ್ವತ್ತಿನ ಜಾಗದಲ್ಲಿ ಕಟ್ಟಿರುವ ಇದನ್ನು ಸಧ್ಯಕ್ಕೆ ಎಲ್ಬರ್ಟ್ ಕೌಂಟಿಯ ಮುನಿಸಿಪಾಲಿಟಿ ನೋಡಿಕೊಳ್ಳುತ್ತಿದೆ. ಇದನ್ನು ನೋಡಲು ಯಾವುದೇ ಶುಲ್ಕವಿಲ್ಲ. ಆದರೆ ಇದನ್ನು ತಲುಪುದೇ ದೊಡ್ಡತಲೆಬ್ಯಾನೆ. ದುರ್ಗಮ ದಾರಿ ಅಂತಲ್ಲ, ಇಲ್ಲಿಗೆ ತಲುಪುವ ರಸ್ತೆಗಳೆಲ್ಲಾ ಚೆನ್ನಾಗಿಯೇ ಇವೆ. ಆದರೆ ಇದಕ್ಕೆ ಅತೀ ಹತ್ತಿರವಿರುವ ಮುಖ್ಯ ಹೆದ್ದಾರಿಯೇ 25ಮೈಲಿ ದೂರದಲ್ಲಿದೆ. ಜಾರ್ಜಿಯಾದ ರಾಜಧಾನಿ ಅಟ್ಲಾಂಟಕ್ಕೂ ಇಲ್ಲಿಗೂ 125ಮೈಲಿ ದೂರ! ಯಾರ ಕಣ್ಣಿಗೂ ದೊಡ್ಡದಾಗಿ ಕಾಣದ, ಯಾವ ಗಿನ್ನಿಸ್ ರೆಕಾರ್ಡಿನ ಹಂಗೀಗೂ ಬೀಳದ, “ಹಳ್ಳಿಗಳಲ್ಲೂ ಹಳ್ಳಿ”ಯಂತಹಾ ಜಾಗದಲ್ಲಿ ಕಟ್ಟಿರುವ ಈ ಸ್ಮಾರಕದ ಪ್ರಾರಂಭವೂ ಒಂದು ಕುತೂಹಲಕಾರೀ ಕಥೆ. ಬರೀ ಇತಿಹಾಸವಲ್ಲದೇ, ಇದರ ವರ್ತಮಾನವೂ ಸಹ ಸ್ವಲ್ಪ ಕಾಂಟ್ರವರ್ಸಿಯೇ. ಇಷ್ಟೊಳ್ಳೇ ಸಂದೇಶವಿರುವ ಈ ಸ್ಮಾರಕದ ವಿಚಾರದಲ್ಲೂ ಕಾಂಟ್ರವರ್ಸಿಯೇ? ಎಂತಾ ಅದು ಅಂತೆಲ್ಲಾ ಅದನ್ನೂ ಇಲ್ಲೇ ಬರೆದರೆ, ನೀವು ಓದಿ ಹೈರಾಣಾಗುವ ಸಾಧ್ಯತೆಯಿರುವುದರಿಂದ, ಅವನ್ನು ಬೇರೆಯದೇ ಲೇಖನದಲ್ಲಿ ಬರೆದು ಪ್ರಕಟಿಸುತ್ತೇನೆ.

 

 

ಕೊಸರು: ಸೂರ್ಯ ವರ್ಷವಿಡೀ ಒಂದೇ ಜಾಗದಲ್ಲಿ ಹುಟ್ಟುವುದಿಲ್ಲ. ಮಕರಸಂಕ್ರಮಣದ ನಂತರ ದಿನದಿಂದ ದಿನಕ್ಕೆ ಸೂರ್ಯಹುಟ್ಟುವ ಜಾಗ ಸ್ವಲ್ಪಸ್ವಲ್ಪವೇ ಎಡಕ್ಕೆ (ಅಂದರೆ ಈಶಾನ್ಯದೆಡೆಗೆ) ಜರುಗುತ್ತದೆ. ನಿಧಾನಕ್ಕೆ ಈ ಚಲನೆ ತನ್ನ ಉತ್ತುಂಗಕ್ಕೆ ತಲುಪಿ, ಮತ್ತೆ ನಂತರ ಕರ್ಕಾಟಕ ಸಂಕ್ರಮಣದ ದಿನ ಈ ಚಲನೆ ಪೂರ್ವದಿಂದ ಬಲಕ್ಕೆ (ಆಗ್ನೇಯಕ್ಕೆ) ಜರುಗಲಾರಂಭಿಸುತ್ತದೆ. ಇದು ಮಾತ್ರವಲ್ಲದೇ, ವರ್ಷವಿಡೀ ಸೂರ್ಯನ ಚಲನೆ ಒಂದೇ ಸಮನಾಗಿರುವುದಿಲ್ಲ. ಅಂದರೆ ಹೇಗೆ ಸೂರ್ಯ ದಿನವೂ ಒಂದೇ ಸಮಯಕ್ಕೆ ಹುಟ್ಟುವುದಿಲ್ಲವೋ, ಹಾಗೆಯೇ ದಿನದ ಒಂದು ನಿಯಮಿತ ಸಮಯದಲ್ಲಿ ಸೂರ್ಯ ವರ್ಷವಿಡೀ ಒಂದೇ ಜಾಗದಲ್ಲಿ ಇರುವುದಿಲ್ಲ. ನೀವು ಒಂದು ಕ್ಯಾಮರಾವನ್ನು ಒಂದೇ ಜಾಗದಲ್ಲಿ ನಿಲ್ಲಿಸಿಟ್ಟು, ದಿನದ ಒಂದು ನಿರ್ದಿಷ್ಟ ಸಮಯದಲ್ಲಿ (ಉದಾ: ಪ್ರತಿದಿನವೂ 10:30ಕ್ಕೆ) ದಿಗಂತವೂ ಫ್ರೇಮಿನಲ್ಲಿರುವಂತೆ ಸೂರ್ಯನದೊಂದು ಫೋಟೋ ತೆಗೆದು, 365 ಫೋಟೋಗಳ ಓವರ್-ಲ್ಯಾಪ್ ಮಾಡಿದರೆ, ಸೂರ್ಯ ಆಕಾಶದಲ್ಲಿ, ಚಿತ್ರ – ೩ರಲ್ಲಿದ್ದಂತೆ ಅಂಕೆ 8ರ ಆಕಾರದಲ್ಲಿ ಗೋಚರವಾಗುವುದನ್ನು ಕಾಣಬಹುದು. ಈ ವಿದ್ಯಮಾನಕ್ಕೆ “ಅನಲೆಮ್ಮಾ” (Analemma) ಎನ್ನುತ್ತಾರೆ. ಈ ‘ಅನಲೆಮ್ಮಾ’ ಭೂಮಿ ಗುಂಡಗಿರುವುದಕ್ಕೂ, ತನ್ನ ಅಕ್ಷದ ಮೇಲೆ 23.43 ಡಿಗ್ರೀ ವಾಲಿರುವುದಕ್ಕೂ ಪರೋಕ್ಷ ಸಾಕ್ಷಿ.

 

0 comments on “ಜಾಳುಜಾಳಾದ ಜೀವನಕ್ಕೆ ದಿಕ್ಕುತೋರಿಸುವ ಜಾರ್ಜಿಯಾದ ಮಾರ್ಗಸೂಚಿಗಳು

Leave a Reply

Your email address will not be published. Required fields are marked *