
ಕಳೆದವಾದ ಸಿಂಗಪೂರ್ ಏರ್ಲೈನ್ ತನ್ನ ದೇಶವನ್ನು, ಸೇಫ್ಟೀವಿಡಿಯೋದಂತಹ ಒಂದು ನೀರಸವಾಗಬಹುದಾಂತಹಾ ವಿಚಾರದ ಮೂಲಕವೂ ಹೇಗೆ ಪ್ರವಾಸೀ ಮಾರುಕಟ್ಟೆಗೆ ತೆರೆದಿಡುತ್ತೆ ಎನ್ನುವುದನ್ನ ಹೇಳಿದ್ದೆ. ಸೇಫ್ಟೀವಿಡಿಯೋ ಮಾತ್ರವಲ್ಲ, ಅವರ ಇನ್-ಫ್ಲೈಟ್ ಮನರಂಜನಾ ವ್ಯವಸ್ಥೆಯಲ್ಲಿ, ಸಿಂಗಪೂರಿನ ಬಗ್ಗೆ, ಅಲ್ಲಿನ ಆಕರ್ಷಣೆಗಳ ಬಗ್ಗೆ ಸಣ್ಣ ಸಣ್ಣ ಫಿಲಂಗಳೇ ಇವೆ. ನಿಮ್ಮ ಪ್ರಯಾಣದ ಉದ್ದೇಶ ಏನೆಂದು ಆರಿಸಿಕೊಂಡರೆ, ನಿಮ್ಮ ಅಭಿರುಚಿಗೆ ತಕ್ಕಂತೆ ಒಂದು ಟೂರ್ ಪ್ಲಾನನ್ನೂ ನೀವು ವಿಮಾನದಲ್ಲಿ ಕೂತೇ ಮುಗಿಸಿಕೊಳ್ಳಬಹುದು. ಕಡ್ಡಾಯವಾಗಿ ತೋರಿಸಬೇಕಾದ ಸೇಫ್ಟೀ-ವಿಡಿಯೋ ಜೊತೆಗೇ ಸೈಕಲ್ ಗ್ಯಾಪಿನಲ್ಲಿ ತಮ್ಮ ದೇಶವನ್ನು ಶೋಕೇಸಿಗಿಡುವುದು ವ್ಯಾವಹಾರಿಕ ಮನಸ್ಥಿತಿಯಲ್ಲ. ಹೀಗೆ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಬುದ್ಧಿವಂತಿಕೆಯೇ.
ನನಗೆ ಸಿಂಗಪೂರ್ ಏರ್ಲೈನ್ ಕೇವಲ ಆ ವಿಡಿಯೋಕ್ಕಾಗಿ ಇಷ್ಟವಾಗಲಿಲ್ಲ. ಇವರ ಸೇವೆಯೂ ಟಾಪ್ ಕ್ಲಾಸ್. ಹಿಂದಿನ ಲೇಖನದಲ್ಲಿ ಹೇಳಿದಂತೆ, ಮೂರು ಪ್ರತಿಷ್ಠಿತ ಗಲ್ಫ್ ಏರ್ಲೈನುಗಳ ಸೇವೆಯನ್ನು ಅನುಭವಿಸಿದವರಿಗೆ, “ಇದಕ್ಕಿಂತಾ ಹೆಚ್ಚಾಗಿ ವಿಮಾನದೊಳಗೆ ಏನೂ ಮಾಡಲಿ ಸಾಧ್ಯವಿಲ್ಲವೇನೋ” ಎಂದೆನಿಸಿರುತ್ತದೆ. ಏರ್-ಇಂಡಿಯಾ, ಯುನೈಟೆಡ್, ಬ್ರಿಟೀಷ್ ಏರ್ವೇಸ್, ಏರ್-ಫ್ರಾನ್ಸ್ ಇತ್ಯಾದಿ ಏರ್ಲೈನುಗಳಿಗೆ ಕೊಟ್ಟಷ್ಟೇ ಹಣದಲ್ಲಿ, ಅವರಿಗಿಂತಲೂ ಸ್ವಚ್ಛ ಮತ್ತು ಅತ್ಯುತ್ತಮ ವಿಮಾನಗಳು, ಅತ್ಯುತ್ತಮ ಊಟ-ಮದಿರೆ, ನಗುಮೊಗದ ಅತ್ಯುತ್ತಮ ಸೇವೆಯನ್ನು, ಸುರಕ್ಷತೆಯ ಉತ್ಕೃಷ್ಟ ರೆಕಾರ್ಡ್’ನೊಂದಿಗೆ ಕೊಡುವ ಎಮಿರೇಟ್ಸ್, ಎತಿಹಾದ್ ಮತ್ತು ಕತಾರ್ ಏರ್ವೇಸ್, ಈ ಉದ್ಯಮದ ತ್ರಿವಿಕ್ರಮರೇ ಸರಿ. ಜಗತ್ತಿನ ಘಟಾನುಘಟಿ ಏರ್ಲೈನುಗಳಿಗೆಲ್ಲಾ ಮುಟ್ಟಿನೋಡಿಕೊಡುವಂತೆ ಸ್ಪರ್ಧೆ ನೀಡಿದ್ದು ಮಾತ್ರವಲ್ಲದೇ, ಆಕಾಶಯಾನದ ಚಹರೆಯನ್ನೇ ಬದಲಿಸಿ, ಹೊಸದೊಂದು ಬೆಂಚ್-ಮಾರ್ಕ್ ಅನ್ನೇ ಸೃಷ್ಟಿಸಿದ ಹೆಗ್ಗಳಿಕೆ ಇವರದ್ದು.
ಹಾಗಾದರೆ ಇವರಿಗೆಲ್ಲಾ ವ್ಯವಹಾರ ಕಲಿಸಿದ ಗುರುವಾದ ಏರ್ಲೈನ್ ಇನ್ನೂ ಒಂದು ಹೆಜ್ಜೆ ಮುಂದಿರಬೇಕಲ್ಲ ಎಂಬ ಕುತೂಹಲವಿತ್ತು. ಎಮಿರೇಟ್ಸ್’ನ ಗಗನಸಖಿಯರು ಕೆಲ ಪ್ರಯಾಣಿಕರೆಡೆಗೆ ಮುಖ ಸಿಂಡರಿಸಿದ್ದನ್ನು ನೋಡಿದ್ದೇನೆ. ಕೆಲವುಬಾರಿ ಅವರ ನಗು ಸ್ವಲ್ಪ ಪ್ಲಾಸ್ಟಿಕ್ ಎನಿಸಿದ್ದೂ ಇದೆ. ವಿಮಾನ ಹೊರಟ ಒಂದು ಘಂಟೆಯೊಳಗೇ ಚೆಂದಾದ ಒಂದು ಊಟವನ್ನೂ, ಅದಾದ ಅರ್ಧ ಘಂಟೆಯೊಳಗೇ ಕಾಫಿ-ಟೀಯನ್ನೂ ನಿಮಗೆ ಕೊಟ್ಟ ನಂತರ, ಮತ್ತವರು ಕಾಣಸಿಗುವುದು ವಿಮಾನ ಇಳಿಯುವ ಸಮಯ ಹತ್ತಿರ ಬಂದಾಗಲೇ. ಮಧ್ಯದಲ್ಲಿ ಏನಾದರೂ ಬೇಕಾಗಿ ನೀವು ಕರೆದರೆ ಬರುತ್ತಾರೆಯೇ ಹೊರತು, ಉಳಿದ ಸಮಯದಲ್ಲಿ ಅವರು ಗ್ಯಾಲಿಯಲ್ಲಿ ಕೆಲಸವೋ, ಊಟವೋ ಮಾಡುತ್ತಾ, ಮಾತುಕತೆ ನಡೆಸುತ್ತಾ ಇರುತ್ತಾರೆ. ಆದರೆ ಸಿಂಗಪೂರ್ ಏರ್ಲೈನಿನಲ್ಲಿ ನನಗೆ ಈ ವ್ಯತ್ಯಾಸ ಎದ್ದು ಕಂಡಿತು. ಬೆಂಗಳೂರಿನಿಂದ ಸಿಂಗಪೂರ್’ವರೆಗಿನ ನಾಲ್ಕು ಘಂಟೆಯ ಪ್ರಯಾಣದಲ್ಲೂ, ಸಿಂಗಪೂರಿನಿಂದ ಟೋಕಿಯೋವರೆಗಿನ ಏಳು ಘಂಟೆಗಳ ಪ್ರಯಾಣದಲ್ಲೂ, ತಲೆಯೆತ್ತಿ ನೋಡಿದಾಗಲೆಲ್ಲಾ ನನಗೆ ಕ್ಯಾಬಿನ್ನಿನಲ್ಲಿ ಒಬ್ಬರಾದರೂ ಸಿಬ್ಬಂದಿ ಕಂಡೇ ಕಾಣುತ್ತಿದ್ದರು. ಮೊದಲೊಬ್ಬ ಟ್ರೇನಲ್ಲಿ ಐದಾರು ಕಪ್ ನೀರು ಮತ್ತು ಜ್ಯೂಸ್ ಹಿಡಿದುಕೊಂಡು ಓಡಾಡುತ್ತಿದ್ದ. ಹದಿನೈದು ನಿಮಿಷಗಳ ನಂತರ ಅವನ ಹಿಂದೆ ಬಂದವಳೊಬ್ಬಳು, ಸಣ್ಣದೊಂದು ಪ್ಲಾಸ್ಟಿಕ್ ಬ್ಯಾಗ್ ಹಿಡಿದುಕೊಂಡು ಎಲ್ಲಾ ಸೀಟುಗಳನ್ನೂ, ಪರಿಶೀಲಿಸುತ್ತಾ ಏನಾದರೂ ಕಸವಿದ್ದರೆ ತೆಗೆದುಕೊಳ್ಳುತ್ತಾ ಹೋಗುತ್ತಿದ್ದಳು. ಮತ್ತೆ ಸ್ವಲ್ಪಹೊತ್ತಿಗೆ ಇನ್ನೊಬ್ಬ ನೀರು, ಜ್ಯೂಸು ಹಿಡಿಕೊಂಡು….ಪ್ರತಿ ಹದಿನೈದಿಪ್ಪತ್ತು ನಿಮಿಷಕ್ಕೆ ಹೀಗೊಬ್ಬರು ನನಗೆ ಕ್ಯಾಬಿನ್ನಿನಲ್ಲಿ ಕಾಣುತ್ತಲೇ ಇದ್ದರು. ಏನಾದರೂ ಬೇಕಾದಾಗ ಜನರು ಅವರಾಗಿಯೇ ಕರೆಯಲಿ ಎಂಬ ಮನೋಭಾವವೇ ಅವರಲ್ಲಿದ್ದಂತೆ ಕಾಣಲಿಲ್ಲ. ಸದಾ ಏನಾದರೊಂದು ಕುಡಿಯುತ್ತಲೇ ಇರುವ ನನಗೆ, ಅವರನ್ನು ಕರೆಘಂಟೆಯೊತ್ತಿ ಕರೆಯುವ ಅವಶ್ಯಕತೆ ಕೇವಲ ಒಂದು ಸಲ ಬಿತ್ತಷ್ಟೇ. ಈ ರೀತಿಯ ಸಣ್ಣ ಡೀಟೇಲುಗಳು ಸೇವೆಯನ್ನು ಸದಾ ಒಂದು ಹಂತ ಮೇಲಿಡುತ್ತವೆ.

ಇದಿಷ್ಟು ವಿಮಾನದೊಳಗಿನ ಕಥೆಯಾದರೆ, ನೀವು ಸಿಂಗಾಪೂರಕ್ಕೆ ಬಂದಿಳಿದಾಗ ನಿಮ್ಮ ಸ್ವಾಗತಿಸುವ ಚಾಂಗಿ ಏರ್ಪೋರ್ಟಿನದು ಇನ್ನೊಂದೇ ಹಂತದ ಅನುಭವ! ಸಮುದ್ರವನ್ನೇ ಹಿಂದೆ ತಳ್ಳಿ, ರಿಕ್ಲೇಮಿಂಗ್ ಪ್ರೋಸೆಸ್ಸಿನಿಂದ ಎಂಟೂವರೆ ಚದರ ಕಿಲೋಮೀಟರುಗಳಷ್ಟು ಜಾಗ ಪಡೆದು, ನೆಲದ ಕೆಳಗೆ ಏಳುಹಂತ, ನೆಲದ ಮೇಲೆ ಐದು ಹಂತದ ದೈತ್ಯ ಏರ್ಪೋರ್ಟ್ ಒಂದನ್ನು ಕಟ್ಟಿದ ಸಿಂಗಪೂರಿಗರ ಛಾತಿಗೆ ಹುಬ್ಬೇರಿಸಲೇಬೇಕು. ಸಿಂಗಾಪುರದ ಮೋಡಿಮಾಡುವ ಆಕರ್ಷಣೆಗಳು ಮತ್ತು ಪ್ರವಾಸೋದ್ಯಮ ಶ್ರೇಷ್ಠತೆಗೆ ಹೆಬ್ಬಾಗಿಲಾಗಿ ನಿಂತಿರುವ ಈ ವಿಮಾನನಿಲ್ದಾಣ, ದೇಶಕ್ಕೆ ಬಂದಿಳಿದ ಪ್ರವಾಸಿಗನನ್ನು, ವಿಮಾನದಿಂದ ಹೊರಬಂದ ಹತ್ತೇನಿಮಿಷದಲ್ಲಿ ಆವರಿಸಿಕೊಳ್ಳುತ್ತದೆ. ತನ್ನ ಸಾಂಸ್ಕೃತಿಕ ಛಾಪನ್ನು ಮಾತ್ರವಲ್ಲದೇ, ಶ್ರೇಷ್ಠತೆಯೆಡೆಗೆ ಆ ದೇಶಕ್ಕಿರುವ ಬದ್ಧತೆಯನ್ನೂ ಉದಾಹರಣೆಯ ಮೂಲಕ ತೋರಿಸುತ್ತದೆ. ಏನೇ ಮಾಡಿದರೂ ಚಂದಾಗಿ ಮಾಡಬೇಕು, ಮತ್ತದು ಚೆಂದಾಗಿ ಉಳಿಯಬೇಕು ಎನ್ನುವ ದೃಷ್ಟಿಕೋನದಲ್ಲೇ ಸಿಂಗಪೂರಿಗರು ಯೋಚಿಸೋದು ಮಾತ್ರವಲ್ಲ, ಆ ನಿಟ್ಟಿನಲ್ಲಿ ತಾವೆಲ್ಲರೂ ಪ್ರಯತ್ನಿಸುತ್ತಾರೆ ಕೂಡಾ.
ಭಾರತದಿಂದ ಪೂರ್ವದೆಡೆಗೆ ಆಗ್ನೇಯ ಮತ್ತು ನೈರುತ್ಯ ಏಷ್ಯಾ, ಆಸ್ಟ್ರೇಲಿಯಾ, ನ್ಯೂಝೀಲ್ಯಾಂಡ್ ಮಾತ್ರವಲ್ಲದೇ, ಅಮೇರಿಕದ ಪಶ್ಚಿಮತೀರದ ನಗರಗಳಿಗೂ ಪ್ರಯಾಣಿಸುವವರಿಗೆ ಸಿಂಗಪೂರ್ ಒಂದೊಳ್ಳೆಯ ನಿಲ್ದಾಣ. ನಿಮ್ಮನ್ನು ಸುಸ್ತಾಗಿಸಬಲ್ಲ ಉದ್ದದ ಈ ಪ್ರಯಾಣಗಳನ್ನು, ಎರಡು ಪುಟ್ಟ ಮತ್ತು ಆರಾಮದಾಯಕ ಪ್ರಯಾಣಗಳಾಗಿ ಪರಿವರ್ತಿಸಲು ನಿಮಗೆ ಹಾಂಗ್-ಕಾಂಗ್, ಮಲೇಷಿಯ, ಥಾಯ್ಲ್ಯಾಂಡ್ ಮತ್ತು ಸಿಂಗಪೂರ್ ನಾಲ್ಕೂ ದೇಶಗಳು ತಂತ್ರಗಾರಿಕೆ ನಡೆಸಿ ತಮ್ಮ ದೇಶವನ್ನೂ ಪ್ರವಾಸಿಗಳಿಗೆ ಆಕರ್ಷಕವಾಗಿ ಮಾಡಿದ್ದಾರೆ. ಈ ನಾಲ್ಕರ ಪೈಕಿ, ಹೆಚ್ಚು ಜನರನ್ನು ಸೆಳೆಯಲು ಸಿಂಗಪೂರ್ ಬಳಿಯಿರುವ ಟ್ರಂಪ್-ಕಾರ್ಡೇ ಈ ಚಾಂಗಿ ಏರ್ಪೋರ್ಟ್. ಇದೊಂದು ಕೇವಲ ಟ್ರಾನ್ಸಿಟ್ ಪಾಯಿಂಟ್ ಮಾತ್ರವಲ್ಲ, ಅನುಭವ. ತನ್ನ ಮುಖ್ಯ ವಿಮಾನಸಂಸ್ಥೆಯಾದ ಸಿಂಗಪೂರ್ ಏರ್ಲೈನ್, ಮತ್ತದರದ್ದೇ ಪುಣಾಣಿ ಏರ್ಲೈನ್ ಕಂಪನಿಯಾದ ಸ್ಕೂಟ್, ಸಿಂಗಪೂರದ್ದೇ ಇನ್ನೊಂದು ಜೆಟ್-ಸ್ಟಾರ್ ಏರ್ಲೈನ್ಸ್ ಮುಂತಾದವುಗಳನ್ನು ಬಳಸಿಕೊಂಡು ಒಂದು ಅತ್ಯುತ್ತಮ ಸಂಪರ್ಕಜಾಲವನ್ನೂ, ವಾವ್ ಎನ್ನಿಸುವ ವಾಸ್ತುಶಿಲ್ಪವನ್ನೂ, ಬೇರೆಲ್ಲೂ ಕಾಣಸಿಗದ ಕೆಲ ಆಕರ್ಷಣೆಗಳನ್ನೂ ಕೊಡುತ್ತಾ ಜೊತೆಗೇ ಸಾಟಿಯಿಲ್ಲದ ಸಿಂಗಪೂರಿಗರ ಸಿಗ್ನೇಚರ್ ಆದ ಪ್ರಯಾಣಿಕರ ಸೇವೆಗಳಿಂದಾಗಿ, ಚಾಂಗಿ ಕಳೆದ ಹಲವಾರು ವರ್ಷಗಳಿಂದ ಸತತವಾಗಿ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಹೆಸರು ಪಡೆದಿದೆ.

ಚಾಂಗಿ ನಿಲ್ದಾಣದ ಹೆಸರಿಗೆ ಕಿರೀಟವಿಟ್ಟಂತಿರುವುದು “ಜ್ಯುವೆಲ್ ಅಟ್ ಚಾಂಗಿ”. ಇದೊಂದು MUD – Mixed Use Development ಆಗಿದ್ದು, ವಿಮಾನ ನಿಲ್ದಾಣಗಳಲ್ಲಿರಬಹುದಾದ ಆಕರ್ಷಣೆಗಳ ಪರಿಕಲ್ಪನೆಯನ್ನೇ ಮರುವ್ಯಾಖ್ಯಾನಿಸುವಂತಿದೆ. ಇದೊಂದು ಶಾಪಿಂಗ್ ಮಾಲೂ ಹೌದು, ಆರಾಮಪಡೆಯುವ ಜಾಗವೂ ಹೌದು, ಬೇರೆಬೇರೆ ತಿನಿಸುಗಳನ್ನು ಸವಿಯುವ ಜಾಗವೂ ಹೌದು, ಮಕ್ಕಳಿಗೆ ದೊಡ್ಡದೊಂದು ಆಟದ ಮೈದಾನವೂ ಹೌದು, ನಿಮಗೆ ವ್ಯಾಯಾಮ ಮಾಡಬೇಕೆಂದರೆ ಜಿಮ್ಮೂ ಹೌದು, ಸುಂದರವಾದ ಕಾಡೂ ಹೌದು. ಇಷ್ಟೆಲ್ಲದರ ಜೊತೆ ಇದರ ಮಧ್ಯದಲ್ಲಿ ವಿಶ್ವದ ಅತಿ ಎತ್ತರದ ಒಳಾಂಗಣ ಜಲಪಾತವೂ ಇದೆ. ‘ರೇನ್ ವೋರ್ಟೆಕ್ಸ್’ ಎಂಬ ಹೆಸರಿನ ಈ ನಲವತ್ತು ಮೀಟರ್ ಎತ್ತರದ ಸುರುಳಿಯಾರದ ಈ ನೀರಿನಧಾರೆ, ಹಗಲು ಹೊತ್ತಿನಲ್ಲಿ ಜಲಪಾತವಾಗಿ ಕಂಡರೆ, ರಾತ್ರಿ ಹೊತ್ತಿನಲ್ಲಿ ಬೆಳಕು ಸಂಗೀತದೊಂದಿಗೆ ಬೇರೆಯದೇ ಅನುಭವವಾಗಿ ನಿಲ್ಲುತ್ತದೆ. ನಾನು ಹೋದಾಗ ಅಲ್ಲೇ ಜಲಪಾತದ ಪಕ್ಕದಲ್ಲಿ ಒಬ್ಬಾಕೆ ಜಿಮ್ ಇನ್ಸ್ಟ್ರಕ್ಟರ್ ಎಲ್ಲೂ ಹೋಗದ ಸೈಕಲ್ಲಿನ ಮೇಲೆ ಕೂತು ಮತ್ತೊಂದಿಪ್ಪತ್ತು ಜನರಿಗೆ ಸೈಕಲ್ ಹೊಡೆಸುತ್ತಿದ್ದಳು, ಇನ್ನೊಂದು ಕಡೆ ಝುಂಬಾ ಡ್ಯಾನ್ಸ್ ನಡೆಯುತ್ತಿತ್ತು. ಪಕ್ಕದಲ್ಲೇ ಇರುವ ಶಿಸೈಡೋ ಫಾರೆಸ್ಟ್ ವ್ಯಾಲಿ ಎಂಬ ಹೆಸರಿನ ಸೊಂಪಾದ ಒಳಾಂಗಣ ಉದ್ಯಾನ. ಅದರ ಪಕ್ಕದಲ್ಲೇ ಬೇರೆಬೇರೆ ರೀತಿಯ ಆಟಗಳುಳ್ಳ ಕ್ಯಾನೋಪಿ ಪಾರ್ಕ್.

ಚಾಂಗಿ ಎಕ್ಸ್ಪೀರಿಯನ್ಸ್ ಸ್ಟುಡಿಯೋದಲ್ಲಿ, ವರ್ಚುವಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿ, ಹಾಗೂ 5-ಡಿ ತಂತ್ರಜ್ಞಾನಗಳನ್ನು ಬಳಸಿ, ವಾಯುಯಾನದ ಬಗ್ಗೆ ಮತ್ತು ಚಾಂಗಿಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಬಹುದು. ಟಚ್ ಸರ್ಫೇಸುಗಳನ್ನು ಬಳಸಿರುವ ಈ ಪ್ರದರ್ಶನಗಳಿಂದ, ಇಲ್ಲಿ ಬರುವ ಪ್ರವಾಸಿಗರು ವಿಮಾನ ನಿಲ್ದಾಣದ ವಿಕಾಸ ಮತ್ತು ಇತಿಹಾಸವನ್ನು ಅನ್ವೇಷಿಸಬಹುದು. ಶಾಶ್ವತ ಮತ್ತು ತಾತ್ಕಾಲಿಕ ಎರಡೂ ರೀತಿಯ ಆರ್ಟ್ ಗ್ಯಾಲರಿಗಳ ದೊಡ್ಡದೊಂದು ಸಂಗ್ರಹವೇ ಈ ಏರ್ಪೋಟಿನಲ್ಲಿದೆ. ಸಿಂಗಾಪುರದ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಬಿಂಬಿಸುವ ಈ ಕಲಾಕೃತಿಗಳು, ಚಾಂಗಿಯನ್ನು ಕಾಂಕ್ರೀಟು ಸ್ಟೀಲಿನ ಬರೀ ಟರ್ಮಿನಲ್ ಆಗಿಸದೇ, ಪ್ರಯಾಣಿಕರಿಗೆ ಹೊಸದೊಂದು ಅನುಭೂತಿಕೊಡುವ ಸಾಂಸ್ಕೃತಿಕ ಪ್ರದರ್ಶನವಾಗಿ ಪರಿವರ್ತಿಸುತ್ತವೆ. ವಿಶ್ವದ ಮೊತ್ತಮೊದಲ “ವಿಮಾನ ನಿಲ್ದಾಣದೊಳಗಿನ ಚಿಟ್ಟೆ ಉದ್ಯಾನ” ಚಾಂಗಿಯಲ್ಲಿದೆ. ಉಷ್ಣವಲಯದ ಕಾಡಿನ ಸ್ವರೂಪದ ಈ ಪಾರ್ಕಿನಲ್ಲಿ, ಪ್ರಯಾಣಿಕರು ಹಲವು ರೀತಿಯ ಚಂದದ, ಗಾಢ ಬಣ್ಣದ ಜಾವಾ, ಬೋರ್ನಿಯೋ, ಮಲಯ್ ಪ್ರದೇಶಗಳಲ್ಲಿ ಕಂಡುಬರುವ ಚಿಟ್ಟೆಗಳನ್ನು ನೋಡಬಹುದು, ಮೈಮೇಲೆ ಬಂದು ಕೂತರೆ ಅದನ್ನೂ ಅನುಭವಿಸಬಹುದು. ಒಂದು ವಿಮಾನದಿಂದಿಳಿದು, ಮುಂದಿನ ವಿಮಾನಕ್ಕಾಗಿ ಕಾಯುವ ಪ್ರಯಾಣಿಕರಿಗೆ ಇಲ್ಲಿ ಕಣ್ಣು ಮನಸ್ಸು ಎರಡೂ ತಂಪು.

ನೀವು ಐದು ಘಂಟೆಗಿಂತಾ ಹೆಚ್ಚು ಹೊತ್ತು ಚಾಂಗಿಯಲ್ಲಿ ಕೂರಬೇಕಾಗಿ ಬಂದಿದ್ದರೆ, ಸಿಂಗಾಪೂರದ ಉಚಿತ ಪ್ರಯಾಣಕ್ಕೆ ಹೆಸರು ನೋಂದಾಯಿಸಬಹುದು. ಎರಡೂವರೆ ಘಂಟೆಯ ಈ ಟ್ರಿಪ್ ಸಿಂಗಾಪುರದ ಒಂದು ಜಾಗಕ್ಕೆ ಹೋಗಿ ಬರುವ ಅವಕಾಶ ನೋಡುತ್ತದೆ. ನಿಮ್ಮ ಅಭಿರುಚಿಗನುಗುಣವಾಗಿ ಕಲೆ-ಸಂಸ್ಕೃತಿ, ಇತಿಹಾಸ ಅಥವಾ ಶಾಪಿಂಗಿನಂತಹ ಬೇರೆ ಬೇರೆ ಟ್ರಿಪ್ಪುಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು. ಚಾಂಗಿ ಡಿಸ್ಟ್ರಿಕ್ಟ್, ಫುಡ್ ಸ್ಟ್ರೀಟ್, ಮರೀನಾ ಬೇ ಸ್ಯಾಂಡ್ಸ್, ಮೆರ್ಲಿಯನ್ ಪಾರ್ಕ್ ಮತ್ತು ಗಾರ್ಡನ್ಸ್ ಬೈ ದಿ ಬೇ ಮುಂತಾದ ಸಿಂಗಾಪುರದ ಪ್ರಮುಖ ಆಕರ್ಷಣೆಗಳ ರುಚಿಯನ್ನು ಹವಾನಿಯಂತ್ರಿತ ಬಸ್ಸಿನಲ್ಲಿ ಕೂತು ಪಡೆದು ಬರಬಹುದು. ಎಲ್ಲಿಂದ ಎಲ್ಲಿಗೋ ಹೋಗುವ ದಾರಿಯಲ್ಲಿ ನಿಮಗೊಂದು ಉಚಿತ ಸಿಂಗಾಪೂರ ದರ್ಶನ. ಈ ರೀತಿ ಟೈಂ-ಪಾಸಿಗೆಂದು ಉಚಿತ ಟ್ರಿಪ್ ಮಾಡಿದವರಲ್ಲಿ ಹೆಚ್ಚಿನವರು ಬರೇ ಸಿಂಗಾಪೂರ ನೋಡಲಿಕ್ಕೆಂದೇ ಮತ್ತೆ ವಾಪಾಸ್ ಬಂದಿದ್ದಾರೆ ಅಂತಾ ಚಾಂಗಿ ಏರ್ಪೋರ್ಟ್ ಹೇಳಿಕೊಂಡಿದೆ.

ಸರಿ ನನಗೆ ಓಡಾಡೋಕೆ ಆಗಲ್ಲ ಅಂತೀರಾ, ನಿಮಗೋಸ್ಕರ ಫಿಲಂ ಥಿಯೇಟರ್ ಇದೆ, ವಿಡಿಯೋ ಗೇಮ್ ಸ್ಟೇಷನ್‌ಗಳಿವೆ. ಸುಮ್ಮನೇ ಚಿಲ್ ಮಾಡ್ಬೇಕಾ? ಸ್ವಿಮ್ಮಿಂಗ್ ಪೂಲ್ ಇದೆ. ಬೋರ್ ಆದ ಮಕ್ಕಳಿಗಾಗಿ ಕೂತು ಆಡೋಕೆ ಬೇರೆ, ನಿಂತು ಆಡೋಕೆ ಬೇರೆ, ಓಡಾಡಿಕೊಂಡು ಆಡೋಕೆ ಬೇರೆ ಪಾರ್ಕುಗಳಿವೆ. ಸಿಂಗಾಪುರದ ಪ್ರವಾಸೋದ್ಯಮ ಖಾತೆ ಮತ್ತು ಚಾಂಗಿ ಏರ್ಪೋರ್ಟ್ ಸೇರಿ ಸೃಷ್ಟಿಸಿರುವ “ಚಾಂಗಿ ರಾಯಭಾರಿಗಳು” ಸಮೂಹದೊಂದಿಗೆ ಸಮಯ ಬುಕ್ ಮಾಡಿಕೊಂಡು ಸಿಂಗಾಪುರದ ವಾಕಿಂಗ್ ಟೂರ್ ಅಥವಾ ಚಹಾ ಸೇವನೆಗೆ ಹೋಗಬಹುದು.

ಹೀಗೆ ಚಾಂಗಿ ವಿಮಾನ ನಿಲ್ದಾಣ ಕೇವಲ ಒಂದು ಪ್ರಯಾಣಕೇಂದ್ರ ಮಾತ್ರವಲ್ಲ. ಇದು ಸಿಂಗಾಪುರದ ಪ್ರವಾಸೋದ್ಯಮದ ವಿಶಾಲದೃಷ್ಟಿಯ ಪ್ರತೀಕವೂ, ನಾವೀನ್ಯತೆ, ಆತಿಥ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸುವ ಸಿಂಗಾಪುರದ ಬದ್ಧತೆಗೆ ಸಾಕ್ಷಿಯೂ ಹೌದು. ವಿವಿಧ ಖಂಡಗಳಿಂದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಮತ್ತು ಸಿಂಗಾಪುರವನ್ನು ಪ್ರವಾಸಿಸ್ನೇಹಿ ತಾಣವಾಗಿ ಸ್ಥಾಪಿಸುವಲ್ಲಿ ಚಾಂಗಿ ನಿರ್ಣಾಯಕ ಅಂಶವೂ ಹೌದು. ಸಿಂಗಾಪುರದ ಅದ್ಭುತಗಳನ್ನು ನೋಡಲು ಬರುವ ಪ್ರವಾಸಿಗೆ, ಅಲ್ಲಿನ ಆಧುನಿಕತೆ ಮತ್ತು ಸಂಪ್ರದಾಯಮಿಶ್ರಿತ ಮೋಡಿಯೊಂದಿಗೆ ಚಾಂಗಿ ಬೆಚ್ಚನೆಯದೊಂದು ಅಪ್ಪುಗೆಯನ್ನು ನೀಡಿ ಸ್ವಾಗತಕೋರುತ್ತದೆ.