Wednesday, 28 February, 2024

ಈ ವಿಜ್ಞಾನ ಭವಿಷ್ಯ ತಿಳಿದಿದ್ದೀರೇನು? (ಭಾಗ ೩)

Share post

(ಈ ಲೇಖನದ ಭಾಗ ೧ ಮತ್ತು ಭಾಗ ೨ ಇಲ್ಲಿವೆ)

3ಡಿ ಮುದ್ರಣ:

ಹತ್ತು ವರ್ಷದ ಹಿಂದೆ ಅತ್ಯಂತ ಅಗ್ಗದ 3ಡಿ ಪ್ರಿಂಟರ್’ಗೆ 18000 ಡಾಲರ್ ಬೆಲೆಯಿತ್ತು. ಇವತ್ತು 400 ಡಾಲರ್’ಗೆ 3ಡಿ ಪ್ರಿಂಟರ್ ಸಿಗುತ್ತಿದೆ. ಇದೇ ಹತ್ತು ವರ್ಷದಲ್ಲಿ ಈ ಮುದ್ರಕ ತನ್ನ ದಕ್ಷತೆ ಮತ್ತು ವೇಗವನ್ನು ನೂರುಪಟ್ಟು ಹೆಚ್ಚಿಸಿಕೊಂಡಿದೆ. ಹೆಚ್ಚಿನ ಶೂ ಕಂಪನಿಗಳು ತನ್ನ ಶೂಗಳನ್ನು 3ಡಿ ಪ್ರಿಂಟ್ ಮಾಡಲು ಪ್ರಾರಂಭಿಸಿವೆ. ಬಹಳಷ್ಟು ದೂರದ ವಿಮಾನನಿಲ್ದಾಣಗಳಲ್ಲಿ ವಿಮಾನದ ಸಣ್ಣಪುಟ್ಟ ಭಾಗಗಳನ್ನು ಫ್ರಾನ್ಸಿನಿಂದ, ಅಮೇರಿಕಾದಿಂದ, ಬ್ರೆಝಿಲ್’ನಿಂದ ಅಮದು ಮಾಡಿಕೊಳ್ಳುವ ಬದಲು ಅಲ್ಲೇ ಹ್ಯಾಂಗರುಗಳಲ್ಲಿ 3ಡಿ ಮುದ್ರಣ ಮಾಡಲಾಗ್ತಾ ಇದೆ. ದೂರದ ನಿಲ್ದಾಣಗಳನ್ನು ಬಿಡಿ, ಇಲ್ಲೇ ದುಬೈನಲ್ಲೇ ಎಮಿರೇಟ್ಸ್ ಕಂಪನಿ ಸಣ್ಣಪುಟ್ಟ ಬಿಡಿಭಾಗಗಳನ್ನು ತಾನೇ ಪ್ರಿಂಟ್ ಮಾಡುತ್ತಿದೆ. ಭೂಮಿಯಮೇಲೆ ಮಾತ್ರವಲ್ಲದೇ ಬಾಹ್ಯಾಕಾಶದಲ್ಲೂ 3ಡಿ ಮುದ್ರಣ ಶುರುವಾಗಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ಕ್ಕೆಂದೇ ವಿಶೇಷವಾಗಿ ತಯಾರಿಸಲಾದ 3ಡಿ ಮುದ್ರಕದಿಂದಾಗಿ ಎಷ್ಟೋ ಬಿಡಿಬಾಗಗಳನ್ನೂ, ಉಪಕರಣಗಳನ್ನೂ ISS ತಾನೇ ಮುದ್ರಿಸಿ, ಬಳಸುತ್ತಿದೆ. ಈಗ ಸಣ್ಣದೊಂದು ರಿವಿಟ್ ಲೂಸಾದರೆ, ಅದನ್ನು ಸರಿಪಡಿಸೋಕೆ ನಾಸಾ ತನ್ನ ಕೊಲಂಬಿಯಾ ಅಥವಾ ಅಟ್ಲಾಂಟಿಸ್ ಶಟಲ್ ಬಸ್ಸುಗಳನ್ನು ಕಳಿಸುವ ಅಗತ್ಯವಿಲ್ಲ.

ಈಗ ನಡೆಯುತ್ತಿರುವ ತಂತ್ರಜ್ಞಾನ ಅಭಿವೃದ್ಧಿ, ನಮ್ಮ ಸ್ಮಾರ್ಟ್-ಫೋನುಗಳೇ 3ಡಿ ಮುದ್ರಣ ಮಾಡಲು ಸಾಧ್ಯವೇ ಎಂಬ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಅಭಿವೃದ್ಧಿಯ ವೇಗವನ್ನು ಗಮನಿಸಿದರೆ 2020ರ ಹೊತ್ತಿಗೆ, ಮನೆಯಲ್ಲೇ ನಿಮ್ಮ ಕಾಲಿನ ಸ್ಕ್ಯಾನಿಂಗ್ ಮಾಡಿ, ನಿಮ್ಮ ಕಾಲಿಗೆ ತಕ್ಕನಾದ ಚಪ್ಪಲಿಯನ್ನ ನೀವೇ ಪ್ರಿಂಟ್ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. Winsun ಎಂಬ ಕಂಪನಿ ಚೀನಾದಲ್ಲಿ ಅದಾಗಲೇ ಸಂಪೂರ್ಣ 3ಡಿ ಮುದ್ರಣದಿಂದಲೇ ಆರಂತಸ್ತಿನ ಮನೆಯೊಂದನ್ನು ಕಟ್ಟಿ ಮುಗಿಸಿದ್ದಾರೆ. 2027ರ ಹೊತ್ತಿಗೆ ಜಗತ್ತಿನಲ್ಲಿ ಉತ್ಪಾದನೆಯಾಗುತ್ತಿರುವ ಎಲ್ಲಾ ವಸ್ತುಗಳ 10% ಉತ್ಪಾದನೆ 3ಡಿ ಮುದ್ರಣದಿಂದಲೇ ನಡೆಯಲಿದೆ.

ಔದ್ಯೋಗಿಕ ಹಾಗೂ ವ್ಯವಹಾರ ಅವಕಾಶಗಳು:

ನಿಮ್ಮ ತಲೆಯಲ್ಲೊಂದು ಈವರೆಗೂ ಯಾರೂ ಪ್ರಯತ್ನಿಸದ ಒಂದೊಳ್ಳೆಯ ಬ್ಯುಸಿನೆಸ್ ಐಡಿಯಾ ಇದೆ ಅಂತಿಟ್ಕೊಳ್ಳಿ. ಮುಂದಿನ ಆರು ತಿಂಗಳಲ್ಲಿ ನೀವು ಈ ಬ್ಯುಸಿನೆಸ್ ಶುರು ಮಾಡ್ಬೇಕು ಅಂತಿದ್ದೀರ. ಈ ಹಾಗೂ ಮುಂದಿನ ದಿನಗಳಲ್ಲಿ ಬ್ಯುಸಿನೆಸ್ ಪ್ರಾರಂಭಿಸುವ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ “ಇವತ್ತಿಗೆ ನನ್ನ ಈ ಉತ್ಪನ್ನದ ಅವಶ್ಯಕತೆಯಿದೆ. ಮುಂದಿನ ಐದು ವರ್ಷಕ್ಕೂ ಈ ಅವಶ್ಯಕತೆ ಇರುತ್ತಾ?”. ಉತ್ತರ ಹೌದು ಎಂದಾದರೆ ನೀವು ತಕ್ಷಣ ಯೋಚಿಸಬೇಕಾದದ್ದು “ಆ ಐದು ವರ್ಷದ ನಂತರದ ಪ್ರಾಡಕ್ಟನ್ನ ಇಂದೇ ಉತ್ಪಾದಿಸುವುದು ಹೇಗೆ?” ಎಂದು. ನಿಮ್ಮ ಈ ಉತ್ಪನ್ನ ಅಥವಾ ಐಡಿಯಾ ಫೋನಿನೊಂದಿಗೆ ಕೆಲಸ ಮಾಡುತ್ತಾ ಎಂದು ಪರಿಶೀಲಿಸಿಕೊಳ್ಳಿ. ಫೋನಿಗೂ ಅದಕ್ಕೂ ಸಂಬಂಧವಿಲ್ಲ ಅಂತಾದರೆ ನಿಮ್ಮ ಬ್ಯುಸಿನೆಸ್ ಐಡಿಯಾ ಗೆಲ್ಲೋದು ಕಷ್ಟವಿದೆ ಎಂದೇ ಅರ್ಥ. ಇಪ್ಪತ್ತನೇ ಶತಮಾನದಲ್ಲಿ ಯಾವ್ಯಾವ ಔದ್ಯೋಗಿಕ ಅವಕಾಶಗಳು ಸಫಲವಾಗಿದ್ದವೋ, ಇಪ್ಪತ್ತೊಂದನೆಯ ಶತಮಾನದಲ್ಲಿ ಗೋತಾ ಹೊಡೆಯೋ ಸಾಧ್ಯತೆಗಳೇ ಹೆಚ್ಚು.


ಉದ್ಯೋಗವಕಾಶಗಳು:

ಜಗತ್ತಿನಲ್ಲಿ ಇವತ್ತಿರುವ 40%-50% ಕೆಲಸಗಳು ಮುಂದಿನ 20ವರ್ಷಗಳಲ್ಲಿ ಇರೋದೇ ಇಲ್ಲ. ರಿಸೆಪ್ಷನಿಸ್ಟ್, ಗ್ರಾಹಕರ ಕರೆ ಸ್ವೀಕಾರ ಮಾಡುವ ಕೆಲಸಗಳು, ಮೊದಲಹಂತದ ಗ್ರಾಹಕ ಸಪೋರ್ಟ್, ಮನೆಗೆ ವಸ್ತುಗಳನ್ನು ತಲುಪಿಸುವ ಕೆಲಸಗಳು ಮುಂತಾದುವೆಲ್ಲಾ ಮನುಷ್ಯರಿಗೆ ಸಿಗದೇ ಇರುವಂತೆ ಮಾಯವಾಗ್ತಾವೆ. ಆ ಜಾಗಗಳಲ್ಲಿ ಕಂಪ್ಯೂಟರ್ ಮತ್ತು ರೋಬೋಟುಗಳು ಬಂದು ಕೂರ್ತಾವೆ. ಇನ್ನೆಷ್ಟೋ ಕೆಲಸಗಳು ಈಗಿರುವ ರೀತಿಗಿಂತಾ ಹೆಚ್ಚು ಬದಲಾಗ್ತಾವೆ. ಎಲ್ಲೆಲ್ಲೆ ಸಾಧ್ಯವೋ ಅಲ್ಲಲ್ಲಿ ಕೆಲಸಗಳು ಯಾಂತ್ರೀಕೃತಗೊಳ್ತಾವೆ. ಹಾಗಂತಾ ಮನುಷ್ಯರಿಗೆ ಕೆಲಸಗಳೇ ಇರೊಲ್ಲ ಅಂತಲ್ಲಾ. ಹೊಸಹೊಸ ರೀತಿಯ ಕೆಲಸಗಳು ಸೃಷ್ಟಿಯಾಗ್ತಾವೆ. ಆದರೆ ಈಗಿರುವ ಜನಸಂಖ್ಯೆಯ ಪ್ರಮಾಣಾನುಗತವಾಗಿ ಕೆಲಸಗಳ ಸಂಖ್ಯೆಯೂ ಇರುತ್ತದೆಯೋ ಇಲ್ಲವೋ ಎಂಬುದನ್ನು ಸಮಯವೇ ಹೇಳಬೇಕು. ಆದರೆ ಕೆಲಸಗಳ ಸಂಖ್ಯೆ ಕಡಿಮೆಯಾಗುವುದಂತೂ ಹೌದು.

ಕೃಷಿ:


ಕೆಲವೇ ವರ್ಷಗಳಲ್ಲಿ ನೂರು ಡಾಲರ್’ಗೂ ಕಡಿಮೆ ಬೆಲೆಗೆ ಕೃಷಿಸಂಬಂಧೀ ರೋಬೋಟ್ ಮಾರುಕಟ್ಟೆಗೆ ಬರಲಿದೆ. ಅವುಗಳ ಸದ್ಬಳಕೆ ಮಾಡಿಕೊಂಡು ಏಷ್ಯಾದ ಕೃಷಿಪ್ರಧಾನ ದೇಶಗಳ ರೈತರು ದಿನವಿಡೀ ಹೊಲದಲ್ಲಿ ದುಡಿಯುತ್ತಾ ನಿಲ್ಲುವಬದಲು, ವರ್ತಕರು ಮತ್ತು ಮ್ಯಾನೇಜರುಗಳ ಸ್ಥಾನಗಳಲ್ಲಿ ನಿಲ್ಲಬಹುದು. ಕೃಷಿವಿಜ್ಞಾನ ಬೆಳೆದಷ್ಟೂ ನಮ್ಮ ಹೊಲಗಳಲ್ಲಿ ಕಡಿಮೆ ನೀರಿನ ಬಳಕೆಯ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತದೆ. ಹೋದವರ್ಷವಷ್ಟೇ ವಿಜ್ಞಾನಿಗಳು ಪ್ರಯೋಗಶಾಲೆಯಲ್ಲಿ ಮಾಂಸವನ್ನು ಬೆಳೆಸಿದ್ದಾರೆ. ಕೆಲವರ್ಷಗಳಲ್ಲಿ ಪ್ರಯೋಗಶಾಲೆಯಲ್ಲಿ ಬೆಳೆಸಲಾದ ಮಾಂಸ, ಪ್ರಾಣಿಯಿಂದ ಪಡೆದ ಮಾಂಸದಷ್ಟೇ ಅಥವಾ ಅದಕ್ಕಿಂತಾ ಅಗ್ಗವಾಗಲಿದೆ. ಸದ್ಯದ ಕೃಷಿಭೂಮಿಯ 30%, ಪ್ರಾಣಿಗಳ ಬಳಕೆಗಾಗಿ ಅದರಲ್ಲೂ ದನಗಳ ಬಳಕೆಗಾಗಿ ಮೀಸಲಿಡಲಾಗ್ತಾ ಇದೆ. ಮಾಂಸಕ್ಕೊಸ್ಕರ ಪ್ರಾಣಿಗಳನ್ನು ಸಾಕದೇ ಇದ್ದಲ್ಲಿ, ಆ ಜಾಗವೂ ಕೃಷಿಬಳಕೆಗೆ ಸಿಕ್ಕರೆ ಎಷ್ಟು ಉಪಯೋಗವಾಗಬಹುದು ಯೋಚಿಸಿ ನೋಡಿ! ಇದು ಮಾತ್ರವಲ್ಲದೇ ಮನುಷ್ಯರ ಮಾಂಸಸೇವನೆ ಬಾಯಿರುಚುಗೆ ಅಂತಾ ನಾವಂದುಕೊಂಡಿದ್ದರೂ ಸಹ, ಅದರ ಮುಖ್ಯ ಕಾರಣ ದೇಹದ ಪ್ರೋಟೀನ್ ಪೂರೈಕೆಗಾಗಿ ಮಾತ್ರ. ಇದೇ ಪ್ರೋಟೀನ್ ಬೇರೆ ಮೂಲಗಳಿಂದಲೂ ದೊರೆಯುವಂತಾದರೆ? ಮಾಂಸಗಳಿಂದ ದೊರೆಯುವ ರೀತಿಯದ್ದೇ ಪ್ರೋಟೀನ್ಗಳನ್ನು ಕೊಡುವ ಕೀಟಗಳಿಂದಲೂ ಅದನ್ನು ಪಡೆದು ಸಂಸ್ಕರಿಸಿ, ಮಾನವ ಬಳಕೆಗೆ ಯೋಗ್ಯಗೊಳಿಸಿ ಮಾರುಕಟ್ಟೆಗೆ ಬಿಡುವ ಸ್ಟಾರ್ಟ್-ಅಪ್ ಕಂಪನಿಗಳು ಆಗಲೇ ತಮ್ಮ ಕೆಲಸ ಆರಂಭಿಸಿವೆ. ಕೀಟಗಳಲ್ಲಿ ಮಾಂಸಕ್ಕಿಂತಾ ಹೆಚ್ಚು ಪ್ರೋಟೀನ್ ಪಡೆಯುವ ಅವಕಾಶವಿದೆ. ಸದ್ಯದಲ್ಲೇ ನಿಮ್ಮ ಸಮೀಪದ ಅಂಗಡಿಯಲ್ಲಿ “ಪರ್ಯಾಯ ಪ್ರೋಟೀನ್ ಮೂಲಗಳಿಂದ ಪಡೆದ ಪಥ್ಯ ಪೂರಕ” ಎಂಬ ಲೇಬಲ್ ಧರಿಸಿರುವ ಬಾಟಲಿ ಕಂಡುಬಂದರೆ ಗಾಬರಿಬೀಳುವ ಅಗತ್ಯವಿಲ್ಲ. (‘ಪರ್ಯಾಯ ಮೂಲ’ ಎಂಬ ಲೇಬಲ್ ಏಕೆಂದರೆ ಹೆಚ್ಚಿನ ಜನರಿನ್ನೂ ಕೀಟಗಳನ್ನು ಆಹಾರವೆಂದು ಸ್ವೀಕರಿಸುವ ಮನಸ್ಸು ಮಾಡದಿರುವುದಷ್ಟೇ).

ಮಾನವ ನಡವಳಿಕೆಗಳು ಹಾಗೂ ನೈತಿಕತೆ:

ಹೆಚ್ಚಿನ ಆಪ್-ಸ್ಟೋರುಗಳಲ್ಲಿ ‘ಮೂಡೀಸ್’ ಅನ್ನುವ ಒಂದು ಆಪ್ ಅದಾಗಲೇ ಇದೆ. Beyond Verbal ಎಂಬ ಕಂಪನಿ ಹದಿನೈದು ವರ್ಷಗಳ ಅಧ್ಯಯನದ ನಂತರ ಬಿಡುಗಡೆ ಮಾಡಿರುವ (ಹಾಗೂ ಮತ್ತೆ ಮತ್ತೆ ಅಭಿವೃದ್ಧಿಪಡಿಸುತ್ತಲೇ ಇರುವ) ಈ ಆಪ್, ನಿಮ್ಮ ಧ್ವನಿಯನ್ನು ಕೇಳಿ ನಿಮ್ಮ ಮೂಡ್ ಹೇಗಿದೆ ಅಂತಾ ಹೇಳಬಲ್ಲದು. ನಿಮ್ಮ ಬಾಸ್ ಹತ್ರಾ ರಜಾ ಅರ್ಜಿ ಹಿಡಿದು ಹೋಗಿದ್ದೀರ. ಬಾಸ್ ನಗದೇ, ಸಿಟ್ಟು ಮಾಡದೇ ನಿಮ್ಮ ಅರ್ಜಿ ಒಪ್ಪಿದ್ದಾನೆ. ಯಾವತ್ತೂ ಇಷ್ಟು ಸುಲಭವಾಗಿ ರಜಾ ಕೊಡಲು ಒಪ್ಪದ ನಿಮ್ಮ ಬಾಸು ಒಪ್ಪಿದ್ದು ಆಶ್ಚರ್ಯವೇ? ಮನಸ್ಸಲ್ಲಿ ಸಂತೋಷವಿದ್ದರೂ, ನಿಮಗ್ಯಾಕೋ “ಈ ಒಪ್ಪಿಗೆ ಯಾಕೋ ಒಂದ್ವಾರ ಕಳೆದ ಮೇಲೆ ತಿರುಗುಬಾಣವಾಗಲಿದೆ” ಅಂತಾ ಅನ್ನಿಸುತ್ತಿದೆಯಾ? ನಿಮ್ಮ ಮೂಡೀಸ್ ಆಪ್ ತೆರೆದಿಟ್ಟು, ಮತ್ತೆ ಬಾಸ್ ಕ್ಯಾಬಿನ್ನಿಗೆ ಹೋಗಿ ಒಂದು ನಿಮಿಷ ಮಾತನಾಡಿ, ನಿಮಗೆ ಉತ್ತರ ಸಿಗಬಹುದು. ಯಾಕೆಂದರೆ ಮೂಡೀಸ್ ಬರೀ ನಿಮ್ಮ ಮೂಡ್ ಮಾತ್ರವಲ್ಲ, ನಿಮ್ಮ ಫೋನಿನ ಮೈಕ್ರೋಫೋನ್ ಅನ್ನು ತೆರೆದಿಟ್ಟರೆ ಯಾರ್ಯಾರು ಮಾತನಾಡುತ್ತಿದ್ದಾರೋ ಅವರ ಚಿತ್ತ, ವರ್ತನೆ, ಸ್ವಭಾವ ಮಾತ್ರವಲ್ಲದೇ ಅವರ ವ್ಯಕ್ತಿತ್ವದ ಬಗ್ಗೆಯೂ ತಿಳಿಯಲು ಸಹಕರಿಸಲಿದೆ.


ನೀವು ಆಫೀಸಿನಲ್ಲಿ ಕೆಲಸ ಮುಗಿಸಿ ಹೈರಾಣಾಗಿ ಹೈವೇನಲ್ಲಿ 90ಕಿಮೀ ವೇಗದಲ್ಲಿ ಡ್ರೈವ್ ಮಾಡುತ್ತಾ ಮನೆಕಡೆಗೆ ಹೋಗುತ್ತಿದ್ದೀರ. ಹಿಂದಿನ ಸೀಟಿನಲ್ಲಿ ನಿಮ್ಮ ಮಕ್ಕಳಿಬ್ಬರೂ ಏನೋ ವಿಚಾರಕ್ಕೆ ಪಿರಿಪಿರಿಪಿರಿ ಅಂತಿದ್ದಾರೆ. ನಿಮಗೆ ತಲೆಚಿಟ್ಟುಹಿಡಿದು “ಏಯ್! ಸುಮ್ನೇ ಕೂರ್ರೋ!!” ಅಂತಾ ಅರಚುತ್ತೀರಾ. ತಕ್ಷಣ ನಿಮ್ಮ ಫೋನ್ ನಿಮ್ಮ ಧ್ವನಿಯಲ್ಲಿರುವ ಒತ್ತಡ ಹಾಗೂ ಸಿಟ್ಟನ್ನರಿತು, ತಾನು ಕನೆಕ್ಟ್ ಆಗಿರುವ ಕಾರಿನ ಕಂಪ್ಯೂಟರಿಗೆ ಹೇಳಿ ನಿಮ್ಮ ಕಾರಿನ ವೇಗವನ್ನು  60ಕ್ಕಿಳಿಸುವಂತಾದರೆ!!

2020ರ ಒಳಗೆ ನಿಮ್ಮ ಧ್ವನಿ ಮತ್ತು ಮುಖಭಾವವನ್ನು ಗಮನಿಸಿ ನೀವು ಸುಳ್ಳು ಹೇಳುತಿದ್ದೀರೋ ಇಲ್ಲವೋ ಎಂಬುದನ್ನು ಬರೀ ನಿಮ್ಮ ಮೊಬೈಲ್ ಕ್ಯಾಮೆರಾ ಉಪಯೋಗಿಸಿ ಕೆಲಸಮಾಡಿ ಹೇಳುವ ಆಪ್’ಗಳಿಗೆ ಪೇಟೆಂಟ್ ಪಡೆಯಲು ಅದಾಗಲೇ ಕಂಪನಿಗಳು ಕ್ಯೂನಲ್ಲಿ ನಿಂತಿವೆ. ನಿಮ್ಮ ಸ್ಥಳೀಯ ರಾಜಕಾರಣಿ ತನ್ನ ಭಾಷಣದಲ್ಲಿ ಕೊಡುತ್ತಿರುವ ಆಶ್ವಾಸನೆಗಳು, ಮಾಡುತ್ತಿರುವ ಆರೋಪಗಳು ನಿಜವೋ, ಟೊಳ್ಳೋ ಅಂತಾ ಗೊತ್ತಾಗುವಂತಾದರೆ!!
…….ಕಲ್ಪನೆ ಒಳ್ಳೆಯದಿದೆಯಲ್ಲವೇ?

(ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದರೂ ಹೆಣ್ಣುಮಕ್ಕಳ ಮಾತಿಗೂ, ಅದರ ನಿಜಾರ್ಥಕ್ಕೂ ಯಾವತ್ತೂ ಸಂಬಂಧವಿರಲ್ಲ ಅನ್ನೋ ಜೋಕುಗಳು ನಿಧಾನವಾಗಿ ಹಳೆಯದಾಗುತ್ತವೆಯೋ ಇಲ್ಲವೋ ಇನ್ನೂ ಗೊತ್ತಿಲ್ಲ 🙂 )

ಹಣಕಾಸು:

ಎಲ್ಲೆಡೆ ಸದ್ದು ಮಾಡುತ್ತಿರುವ ಬಿಟ್ ಕಾಯಿನ್, ಲೈಟ್-ಕಾಯಿನ್, ZCash, ಈಥೀರಿಯಮ್, ಫೇಸ್ಬುಕ್ ಲಿಬ್ರಾ ಮುಂತಾದ ಕ್ರಿಪ್ಟೋಕರೆನ್ಸಿಗಳು ಎಲ್ಲಾ ವಿರೋಧಗಳ ನಡುವೆಯೂ ಮುಖ್ಯವಾಹಿಸಿಗೆ ಬರಲಿವೆ. ದೇಶಗಳೆಲ್ಲಾ ಒಟ್ಟಿಗೆ ಸೇರಿ ಇವಕ್ಕೊಂದು ನಿಯಮವಾಳಿಗಳನ್ನ ರೂಪಿಸಿದರೆ, ಇವೇ ಸಾಮಾನ್ಯ ರಿಸರ್ವ್ ಕರೆನ್ಸಿಗಳಾಗಬಹುದು. ಬರೀ ಒಂದೇ ದೇಶದ ಕರೆನ್ಸಿಯಾದ ಡಾಲರ್ ಮೇಲೆ ಅವಲಂಬಿತವಾಗುವ ಬದಲು, ಈ ಡಿಜಿಟಲ್ ಕರೆನ್ಸಿಗಳ ಮೇಲೆ ದೇಶೀಯ ಕರೆನ್ಸಿಗಳನ್ನು ಆಂಕರ್ ಮಾಡಿ ತಮ್ಮ ಸ್ಟಾಕ್ ಮಾರ್ಕೆಟ್ಗಳನ್ನು ಈಗಿಗಿಂತಾ ಹೆಚ್ಚು ಸ್ಥಿರವಾಗಿಸಬಹುದು.

ಆಯಸ್ಸು:

ಇವತ್ತಿನ ತಂತ್ರಜ್ಞಾನಭಿವೃದ್ಧಿಯ ವೇಗದಲ್ಲಿ ಮನುಷ್ಯನ ಆಯಸ್ಸು ವರ್ಷಕ್ಕೆ ಮೂರುತಿಂಗಳಿನಂತೆ ಹೆಚ್ಚಾಗ್ತಾ ಇದೆ. ನಾಲ್ಕುವರ್ಷದ ಹಿಂದೆ ಮಾನವನ ಸರಾಸರಿ ಆಯಸ್ಸು 79ವರ್ಷವಾಗಿತ್ತು. ಇವತ್ತು ಅದು 80ವರ್ಷವಾಗಿದೆ. ಬರೀ ಸರಾಸರಿ ಆಯಸ್ಸು ಮಾತ್ರ ಹೆಚ್ಚಾಗ್ತಾ ಇಲ್ಲ, ವರ್ಷದಿಂದವರ್ಷಕ್ಕೆ ಆಯಸ್ಸಿನ ವೃದ್ಧಿಯೂ ಹೆಚ್ಚಾಗ್ತಾ ಇದೆ. 2036ರ ಹೊತ್ತಿಗೆ ವಿಜ್ಣ್ಯಾನಿಗಳು ಪ್ರತಿವರ್ಷವೂ ಮಾನವನ ಆಯಸ್ಸಿಗೆ ಒಂದುವರ್ಷ ಸೇರಿಸುವಷ್ಟು ಮುಂದುವರೆಯುತ್ತಾರೆ. ನಮ್ಮ ಆಹಾರಪದ್ಧತಿಗಳಲ್ಲಿ ಗಣನೀಯ ಮತ್ತು ಗಮನಾರ್ಹ ಗುಣಾತ್ಮಕ ಬದಲಾವಣೆಗಳಾದರೆ ಮನುಷ್ಯ ನೂರಕ್ಕಿಂತ ಹೆಚ್ಚು ವರ್ಷ ಬದುಕುವುದು ತೀರಾ ಅಸಾಧ್ಯವಾಗಲಿಕ್ಕಿಲ್ಲ.

ಶಿಕ್ಷಣ:

ಇಂದು ಆಫ್ರಿಕಾ ಮತ್ತು ಏಷ್ಯಾದ ದೇಶಗಳಲ್ಲಿ 10ಡಾಲರ್’ಗಳಿಗೆ ಅತ್ಯಂತ ಅಗ್ಗವಾದ ಸ್ಮಾರ್ಟ್ಫೋನ್ಗಳು ಲಭ್ಯವಿವೆ. 2022ರ ಹೊತ್ತಿಗೆ ಜಗತ್ತಿನ 70% ಜನಸಂಖ್ಯೆ ಸ್ಮಾರ್ಟ್ಫೋನ್ ಬಳಸಲಿದೆ. ಈ ಫೋನುಗಳ ಬಗ್ಗೆ ಜೋಕುಗಳದೇನೇ ಇರಲಿ, ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿದ್ದವನಿಗೆ ಫೋನುಗಳನ್ನು ಬಳಸಿಕೊಂಡು ಹೇಗೆ ಶಿಕ್ಷಣಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರಬಹುದು ಎಂದು ತಿಳಿದಿರುತ್ತೆ. ಜಗತ್ತನೆಲ್ಲೆಡೆ ಉತ್ತಮ ಶಿಕ್ಷಣ ಸುಲಭವಾಗಿ ದೊರೆಯುವಂತಾದರೆ ಅದೇ ಅಲ್ಲವೇ ಶ್ರೀಮಂತ ಭವಿಷ್ಯ?

ಇದೆಲ್ಲಾ ಬರೆಯುವಾಗ ನನಗೆ ಇತ್ತೀಚೆಗೆ ನೋಡಿದ “ಪ್ಯಾಡ್-ಮ್ಯಾನ್” ಚಿತ್ರದ ಒಂದು ಸಾಲು ಬಹಳವಾಗಿ ನೆನಪಿಗೆ ಬರುತ್ತಿದೆ. ಅದರ ನಾಯಕ ಕೊನೆಯಲ್ಲಿ UNಅನ್ನು ಉದ್ದೇಶಿಸಿ ಮಾತನಾಡುವಾಗ ಹೇಳ್ತಾನೆ “ನನ್ನ ಪ್ರಕಾರ, ಯಾವ ತಂತ್ರಜ್ಞಾನ ಮನುಷ್ಯನ ಜೀವನವನ್ನು ಮತ್ತು ಮಾನವೀಯ ಮೌಲ್ಯಗಳನ್ನು ತಟ್ಟುತ್ತದೆಯೋ, ಅದೇ ನಿಜವಾದ ಅಭಿವೃದ್ಧಿ”. ನಮ್ಮಲ್ಲಿ ಎಷ್ಟೋ ಜನರು “ಈ ಊಬರ್ ಆಪ್ ಕಂಡುಹಿಡಿದವ ಎಂತಾ ಬುದ್ಧಿವಂತ ಮಾರಾಯ, ಜಗತ್ತನ್ನೇ ಬದಲಾಯಿಸಿಬಿಟ್ಟ” ಅಂತಾ ಹೇಳಿದಾಗಲೆಲ್ಲಾ ನನಗೆ ಹುಸಿನಗು ಬರುತ್ತದೆ. ಯಾಕೆಂದರೆ ಈ ಊಬರ್, ಓಲಾಗಳಿಂದ ಆರ್ಥಿಕವಾಗಿ ನಾವು ವ್ಯವಹರಿಸುವ ರೀತಿ ಬದಲಾಗಿರಬಹುದು, ಟ್ಯಾಕ್ಸಿಗಳಿಗಾಗಿ ನಾವು ಕಾಯುವ ರೀತಿ ನಾವವುಗಳನ್ನ ಬಳಸುವ ರೀತಿ ಬದಲಾಗಿದೆಯೇ ಹೊರತು, ಅದರಿಂದ ಮನುಷ್ಯನ ಜೀವನವೇನೂ ಸುಧಾರಣೆಗೊಂಡಿಲ್ಲ.

ಆ ರೀತಿಯಲ್ಲಿ ನೋಡಿದರೆ ಟೆಸ್ಲಾ ಕಂಪನಿಯ ನಿರ್ಮಾತೃ ಎಲೋನ್ ಮಸ್ಕ್’ನ ಆವಿಷ್ಕಾರಗಳು ಬಹಳಷ್ಟು ಹಂತಗಳಲ್ಲಿ , ಬೇರೆ ಬೇರೆ ಸಮಯಗಳಲ್ಲಿ ನಿಜಕ್ಕೂ ಜನರ ಜೀವನಗಳಲ್ಲಿ ಬದಲಾವಣೆ ತರಬಲ್ಲವಾಗಿವೆ. ಆತನ ಎಲೆಕ್ಟ್ರಿಕ್ ಕಾರುಗಳು, ಟ್ರಕ್ಕುಗಳು ಇವತ್ತಿಗೆ ರಸ್ತೆಯಲ್ಲಿ ಸಣ್ಣದೊಂದು ಚಳುಕು ಹುಟ್ಟಿಸಿವೆ. ಎಲೆಕ್ಟ್ರಿಕ್ ಕಾರುಗಳೆಂದರೆ ಬರೀ ಬೆಂಕಿಪೊಟ್ಟಣದ ಗಾತ್ರದವು, 60 ಕಿಮೀ ವೇಗವನ್ನು ದಾಟಲಿಕ್ಕಿಲ್ಲ ಎಂಬ ಅನಿಸಿಕೆಯನ್ನು ಚೂರುಚೂರಾಗಿಸಿ ಎಲೆಕ್ಟ್ರಿಕ್-ಕಾರು ಕೂಡಾ ಬೆಂಝ್’ನಷ್ಟೇ ಸುಂದರವಾಗಿರಬಲ್ಲುದು, ಪೋರ್ಶದಷ್ಟೇ ವೇಗವಾಗಿ ಚಲಿಸಬಲ್ಲುದು, ಹೋಂಡಾದಷ್ಟೇ ಮಾಲೀಕನ ಜೇಬಿಗೆ ಹಿತವಾಗಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ.

ಜೊತೆಗೇ ಈ ಕಾರುಗಳ ಮಾರಾಟ ಉಳಿದ ಕಾರು ತಯಾರಕರಿಗೂ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಈ ಟ್ರೆಂಡ್ ಕಾರಣದಿಂದ ವಿದ್ಯುತ್ತನ್ನು ಬೇರೆ ಬೇರೆ ಮೂಲಗಳಿಂದ, ಅದರಲ್ಲೂ ಹೆಚ್ಚೆಚ್ಚು ಅಜೈವಿಕ ಮೂಲಗಳಿಂದ, ಪಡೆಯುವ ರೇಸ್ ಉಂಟಾಗಿದೆ. ಈ ಸ್ಪರ್ಧೆಯಿಂದಾಗಿ ಹೆಚ್ಚು ವಿದ್ಯುತ್ ಕೂಡಾ ಸಿಗುತ್ತಿದೆ, ಜೊತೆಗೇ ವಿದ್ಯುತ್ತಿನ ಬೆಲೆ ಕಡಿಯಾಗುತ್ತಲೇ ಹೋಗುತ್ತಿದೆ. ಅಂದರೆ ಎಲ್ಲರಿಗೂ ದಿನದ 24ಘಂಟೆಯೂ ವಿದ್ಯುತ್, ಅದರಲ್ಲೂ ಅಗ್ಗದ ವಿದ್ಯುತ್ ಸಿಗಲಾರಂಭಿಸುತ್ತದೆ. ಕೈಗಾರಿಕೆಗಳು ಹೆಚ್ಚು ಉತ್ಪಾದಕ ಉದ್ದಿಮೆಗಳಾಗಲಿವೆ. ವಿದ್ಯುತ್ ಆಧಾರಿತ ಸೇವೆಗಳು ಅಗ್ಗವಾಗಲಿವೆ. ಹೀಗೆ, ಒಬ್ಬ ಮನುಷ್ಯನ ‘ವೇಗದ ಎಲೆಕ್ಟ್ರಿಕ್ ಕಾರು ತಯಾರಿಸಬೇಕೆಂಬ’ ಹಂಬಲ, ಛಲದ ಬೆನ್ನಲ್ಲೇ ಸಮಾಜದ ಬೇರೆ ಬೇರೆ ಸ್ಥರದ ಜನರಿಗೆ ಪರೋಕ್ಷ ಉಪಯೋಗವಾಗಲಿದೆ. ಈತನ ಇನ್ನೊಂದು ಕನಸು ಮತ್ತೆ ಮತ್ತೆ ಉಪಯೋಗಿಸಬಲ್ಲ ರಾಕೆಟ್ ಅನ್ನು ತಯಾರಿಸುವುದು. ಇದೂ ಕೂಡಾ ರಾಕೆಟ್ ತಂತ್ರಜ್ಞಾನದಲ್ಲಿ ಭಾರೀ ಬದಲಾವಣೆ ತರಲಿದೆ. ಮುಂದೊಂದು ದಿನ ನಮ್ಮ ಮಕ್ಕಳು ಮಧುಚಂದ್ರಕ್ಕೆ ಚಂದ್ರನ ಮೇಲಿಳಿಯಲೂ, ಅಥವಾ ನಮ್ಮ ಮರಿಮೊಕ್ಕಳು ಬೇಸಿಗೆ ರಜಕ್ಕೆ ಮಂಗಳನ ಅಂಗಳಕ್ಕೇ ಹೋಗಲು ಇಂತಹ ಕನಸುಗಳು ಮತ್ತದಕ್ಕನುಗುಣವಾದ ಅಭಿವೃದ್ಧಿಗಳಿಂದ ಮಾತ್ರವೇ ಸಾಧ್ಯವಿದೆ. ನಾವು ನಿಂತಲ್ಲಿಗೇ ಟ್ಯಾಕ್ಸಿ ಅಥವಾ ಊಟ ಕರೆಸಿದರೇನು ಬಂತು, ಟೆಸ್ಲಾದಂತಹ ಕನಸುಗಳಿಂದಲ್ಲವೇ ಮನುಕುಲ ನಿಜಕ್ಕೂ ಮುಂದುವರೆಯಲು ಸಾಧ್ಯ?

0 comments on “ಈ ವಿಜ್ಞಾನ ಭವಿಷ್ಯ ತಿಳಿದಿದ್ದೀರೇನು? (ಭಾಗ ೩)

Leave a Reply

Your email address will not be published. Required fields are marked *