Tuesday, 27 February, 2024

ಈ ವಿಜ್ಞಾನ ಭವಿಷ್ಯ ತಿಳಿದಿದ್ದೀರೇನು? (ಭಾಗ ೨)

Share post

(ಈ ಲೇಖನದ ಭಾಗ ೧ ಇಲ್ಲಿದೆ)

ಹೊಸರೀತಿಯ ಉದ್ಯೋಗಗಳು:

ಕಳೆದ ಹತ್ತುವರ್ಷ ಕಂಪ್ಯೂಟರುಗಳು ನಮ್ಮ ಜೀವನವನ್ನ ಬದಲಾಯಿಸಿದವು. ಕಂಪ್ಯೂಟರುಗಳ ಅವಲೋಕನಾ ಸಾಮರ್ಥ್ಯ ಮತ್ತು ವೇಗ ಎರಡು ಹತ್ತುಪಟ್ಟು ಹೆಚ್ಚಿದವು. ಟಿಕೇಟುಗಳು ಟೂರ್ ಏಜೆನ್ಸಿಗಳಲ್ಲಿ, ಉದ್ದ ಕ್ಯೂ ಇರುವ ಕೌಂಟರುಗಳ ಮುಂದೆ ಬುಕ್ ಆಗುವುದು ನಿಂತು ಯಾವುದೋ ಕಾಲವಾಯಿತು. ಇಂದು ಎಲ್ಲಾ ರೀತಿಯ ಟಿಕೇಟುಗಳು ನಮ್ಮ ಫೋನುಗಳಲ್ಲಿ, ಸಣ್ಣ ಕ್ಯೂಗಳ ಕೌಂಟರುಗಳಲ್ಲಿ ಬುಕ್ ಆಗುತ್ತಿವೆ. ಬಿಲ್ ಕಟ್ಟಲು ಕೆಇಬಿ ಆಫೀಸಿಗೆ ಹೋಗುವ ಅಗತ್ಯ ಇಂದಿಲ್ಲ. ಸಾಫ್ಟ್ವೇರುಗಳು ಎಷ್ಟೋ ಸಾಂಪ್ರದಾಯಿಕ ಬ್ಯುಸಿನೆಸ್ ಮಾಡೆಲ್’ಗಳನ್ನು ಹಾಗೂ ಜೊತೆಗೇ ಜಗತ್ತನ್ನೂ ನಾವಂದುಕೊಂಡದ್ದಕ್ಕಿಂತಾ ಚಿತ್ರ-ವಿಚಿತ್ರರೀತಿಯಲ್ಲಿ ಬದಲಾಯಿಸುತ್ತಿವೆ. ‘ಊಬರ್’ ಇವತ್ತು ಜಗತ್ತಿನ ಅತೀದೊಡ್ಡ ಟ್ಯಾಕ್ಸಿ ಕಂಪನಿ.

ಆದರೆ ಈ ಕಂಪನಿಯ ಬ್ಯಾಲೆನ್ಸ್ ಶೀಟಿನಲ್ಲಿ ಒಂದೇ ಒಂದು ಕಾರು ಟ್ಯಾಕ್ಸಿಯ ರೂಪದಲ್ಲಿಲ್ಲ. ‘ಏರ್ ಬಿ-ಎನ್-ಬಿ’ ಎಂಬುದು ಜಗತ್ತಿನ ಅತೀದೊಡ್ಡ ಹೋಟೆಲ್ ಕಂಪನಿ. ಆದರೆ ಇಡೀ ಭೂಮಿಯಮೇಲೆ ಅವರು ‘ನಮ್ಮದು’ ಅಂತಾ ಹೇಳಿಕೊಳ್ಳುವ ಒಂದೇ ಒಂದು ಹೋಟೆಲ್ ಕಟ್ಟಡವಿಲ್ಲ. ಭಾರತದಲ್ಲಿ ಓಲಾ, ಓಯೋ ರೂಮ್ಸ್, ಪೇಟಿಎಂನಂತಹ ಕಂಪನಿಗಳು ಹೊಸರೀತಿಯದ್ದೇ ಕೆಲಸಗಳನ್ನು ಸೃಷ್ಟಿಸುತ್ತಿವೆ. ನೀವಿರುವ ಜಾಗದಿಂದೆದ್ದು ಹೋಟೆಲಿನವರೆಗೆ ಸೋಮಾರಿತನ ಇರುವವರಿಗಾಗಿ ಇವತ್ತು ಝೊಮ್ಯಾಟೋ, ಸ್ವಿಗ್ಗಿಯಂತಹಾ ಆಪ್ ಬಂದಿವೆ. ಜೊತೆಗೇ, ಆರ್ಡರ್ ಮಾಡಿದ ಊಟವನ್ನು ಹೋಟೆಲಿನಿಂದ ನಿಮ್ಮ ಮನೆಗೆ ಕಳುಹಿಸುವ ಡೆಲಿವರಿ ಕಂಪನಿಗಳ ಹೊಸಾದೊಂದು ಉದ್ಯೋಗಾವಕಾಶ ಸಾಧ್ಯತೆಯನ್ನೇ ತೆರೆದಿಟ್ಟಿವೆ.

ಕೃ-ಬುದ್ಧಿಮತ್ತೆ:

ಕಂಪ್ಯೂಟರುಗಳೀಗ ಜಗತ್ತನ್ನು ಅರ್ಥೈಸಿಕೊಳ್ಳುವಲ್ಲಿಯೂ ಹಿಂದೆಂದೆಂದಿಗಿಂತಲೂ ಹೆಚ್ಚು ನಿಪುಣತೆಯನ್ನು ಪಡೆದಿವೆ. 2017ರಲ್ಲಿ, ಗೂಗಲ್ ಅಭಿವೃದ್ಧಿ ಪಡಿಸಿದ ಆಲ್ಫಾ-ಗೋ ಎಂಬ ಕಂಪ್ಯೂಟರ್, Go ಆಟ(19×19 ಮನೆಯ ಬೋರ್ಡ್ ಮೇಲೆ ಆಡುವ ಸ್ಟ್ರಾಟಜೀ ಗೇಮ್)ದಲ್ಲಿ ಜಗತ್ತಿನಲ್ಲೇ ಚತುರನೆಂದು ಹೆಸರು ಪಡೆದಿದ್ದ ಕೆ ಜೇಯೀ ಎಂಬ 19 ವರ್ಷದ ಆಟಗಾರನನ್ನು ಸೋಲಿಸಿತು. ವಿಜ್ಞಾನಿಗಳ ಹಳೆಯ ಲೆಕ್ಕಾಚಾರದ ಪ್ರಕಾರ ಕಂಪ್ಯೂಟರೊಂದು ಮನುಷ್ಯನನ್ನು ಈ ಆಟದಲ್ಲಿ ಸೋಲಿಸಲು ಇನ್ನೂ ಹತ್ತು ವರ್ಷ ಬೇಕಿತ್ತು. ಅಮೇರಿಕಾದಲ್ಲಿ ಹೊಸದಾಗಿ ಕಾನೂನು ಪದವಿ ಪಡೆಯುತ್ತಿರುವವರಿಗೆ ಕೆಲಸಗಳು ಸಿಗುವುದೇ ಕಷ್ಟವಾಗುತ್ತಿದೆ. ಯಾಕೆಂದರೆ ರಾಸ್ಸ್ ಇಂಟೆಲಿಜೆನ್ಸ್ ಎಂಬ ಹೊಸಾ ಕಂಪನಿಯೊಂದು ಐಬಿಎಮ್’ನ ವಾಟ್ಸನ್ ಎಂಬ ಪ್ರಶ್ನೋತ್ತರ ತಂತ್ರಾಂಶಕ್ಕೆ ಅಮೇರಿಕಾದ ಎಲ್ಲಾ ಪ್ರಾಂತ್ಯಗಳ ಕಾನೂನನ್ನೂ, ಹಾಗೂ ಸಾಧ್ಯವಿರುವಷ್ಟು ಎಲ್ಲಾ ಕೇಸುಗಳನ್ನೂ ಕಲಿಸಿಟ್ಟಿದೆ. ಈಗ ಪಾರಾಲೀಗಲ್ಲುಗಳು ಮಾಡಬೇಕಾದ ಕೆಲಸ ತಮ್ಮದೇ ಸಹದ್ಯೋಗಿಯೊಂದಿಗೆ ಮಾತನಾಡುವ ಭಾಷೆಯಲ್ಲೇ ಕಾನೂನಾತ್ಮಕ ಸಮಸ್ಯೆಯೊಂದನ್ನು ಪ್ರಶ್ಣಾರೂಪದಲ್ಲಿ ಕೇಳಿದರಾಯಿತು. ವಾಟ್ಯ್ಸನ್ ತನ್ನ ಡೇಟಾಬೇಸಲ್ಲಿರುವ ಕೇಸುಗಳನ್ನೂ, ಪ್ರಶ್ಣೆಗೆ ಸಂಬಂಧಿಸಿದ ಕಾನೂನು ಪರಿಚ್ಛೇದಗಳನ್ನೂ ಅವಲೋಕಿಸಿ ಪರಿಹಾರವನ್ನು ಮುಂದಿಡುತ್ತದೆ, ಅದೂ ಸೆಕೆಂಡುಗಳಲ್ಲಿ. ಅದೇ ಪ್ರಶ್ಣೆಗಳಿಗೆ ಮಾನವ ಲಾಯರೊಬ್ಬ 70% ಕರಾರುವಕ್ಕಾಗಿ ಉತ್ತರ ಕೊಡುವಲ್ಲಿ (ಅದೂ ಗಂಟೆಗಟ್ಟಲೇ ಅಭ್ಯಾಸದ ನಂತರ), ವಾಟ್ಸನ್ 90% ಕರಾರುವಕ್ಕಾಗಿ ಉತ್ತರಕೊಡುತ್ತದೆ.

ಹಾಗಂತ ಲಾಯರುಗಳಿಗೆ ಮುಂದೆ ಕೆಲಸವೇ ಇರುವುದಿಲ್ಲ ಎಂದಲ್ಲ. ಲಾಯರುಗಳು ಇನ್ನುಮುಂದೆ ಕಾನೂನಿನ ನಿರ್ದಿಷ್ಟ ವಿಚಾರಗಳಲ್ಲಿ ಪರಿಣಿತರಾಗುತ್ತಾರೆ. ಆದರೆ ಸಣ್ಣಪುಟ್ಟ ಸಾಮಾನ್ಯಕೇಸುಗಳನ್ನೂ, ಹಾಗೂ ಎಲ್ಲಾ ಕೇಸಿಗಳಿಗೆ ಸಂಬಂಧಪಟ್ಟ ಸಣ್ಣಪುಟ್ಟ ಕೆಲಸಗಳಿಗೆ ಜೂನಿಯರ್ ಲಾಯರುಗಳ ಅವಶ್ಯಕತೆ ಇಲ್ಲವಾಗುತ್ತದೆ. ಇದೇ ವಾಟ್ಸನ್, ವೈದ್ಯಕೀಯ ರಂಗದಲ್ಲಿ, ಕ್ಯಾನ್ಸರ್ ಪತ್ತೆಹಚ್ಚುವಲ್ಲಿ ನರ್ಸ್ ಮತ್ತು ಲ್ಯಾಬ್ ಅಸಿಸ್ಟೆಂಟುಗಳಿಗೇ ಸವಾಲೊಡ್ಡುತ್ತಿದೆ. ಅದೂ ಸಹ ಮನುಷ್ಯರಿಗಿಂತ ನಾಲ್ಕುಪಟ್ಟು ಹೆಚ್ಚು ಪರಿಣಾಮಕಾರಿಯಾಗಿ. ಮನುಷ್ಯರ ಮುಖಗಳನ್ನು ಮನುಷ್ಯರಿಗಿಂತಾ ಹೆಚ್ಚು ಕರಾರುವಕ್ಕಾಗಿ ಫೇಸ್ಬುಕ್ ಗುರುತಿಸಲು ಪ್ರಾರಂಭಿಸಿದೆ. ಮಷೀನ್ ಲರ್ನಿಂಗ್, ನ್ಯಾಚುರಲ್ ಲ್ಯಾಂಗ್ವೇಜ್ ಪ್ರೋಸಿಸಿಂಗ್, ಡೀಪ್ ಲರ್ನಿಂಗ್ ಕ್ಷೇತ್ರಗಳಲ್ಲಿ ಇದೇ ರೀತಿ ಅಭಿವೃದ್ಧಿ ಮುಂದುವರೆದರೆ, 2030ರಲ್ಲಿ ಕಂಪ್ಯೂಟರುಗಳು ಎಷ್ಟೋ ಕೆಲಸಗಳಲ್ಲಿ ಮನುಷ್ಯರಿಗಿಂತಾ ಹೆಚ್ಚು ಬುದ್ಧಿವಂತರಾಗಲಿವೆ.

ಸ್ವಯಂಚಾಲಿತ ಕಾರುಗಳು:

ಭವಿಷ್ಯದ ಕಾರುಮಾರುಕಟ್ಟೆ ಮೈನವಿರೇಳಿಸುವ ಸಾಧ್ಯತೆಗಳಿಂದ ಕೂಡಿದೆ. ಯಾವುದೇ ಹಾಲಿವುಡ್ ಚಿತ್ರಕ್ಕೂ ಕಮ್ಮಿಯಿಲ್ಲದಂತೆ ನಿಮ್ಮನ್ನು ಅಚ್ಚರಿಗೊಳಿಸಲಿಗೆ. ಈ ವರ್ಷದ ಕೊನೆಯಲ್ಲಿ ಮೊತ್ತಮೊದಲ ಸ್ವಯಂಚಾಲಿತ ಕಾರುಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ನಿರೀಕ್ಷಿಸಿದಂತೆಯೇ ನಡೆದರೆ ಇನ್ನೈದು ವರ್ಷದಲ್ಲಿ ನೀವು ಸ್ವಂತಕ್ಕೆ ಕಾರು ಕೊಳ್ಳುವುದೇ ಬೇಡವೆನ್ನುವ ಮನಸ್ಸು ಮಾಡಿದರೂ ಆಶ್ವರ್ಯವೇನಿಲ್ಲ. ನಿಮಗೆ Aಯಿಂದ Bಗೆ ಹೊಗಬೇಕೆಂದೆನಿಸಿದಲ್ಲಿ, ಫೋನಿನಲ್ಲಿ ಊಬರ್ ಅಥವಾ ಓಲಾ ಬುಕ್ ಮಾಡಿದಂತೆಯೇ ಕಾರೊಂದನ್ನು ಬುಕ್ ಮಾಡಿದರಾಯ್ತು. ಸ್ವಯಂಚಾಲಿತ ಕಾರೊಂದು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. ಪಾರ್ಕಿಂಗ್ ಹುಡುಕುವ ಅಥವಾ ಪಾರ್ಕ್ ಮಾಡುವ ಅಗತ್ಯವಿಲ್ಲ. ನೀವು ಎಷ್ಟು ದೂರ ಓಡಿಸಿದ್ದೀರೋ ಅಷ್ಟಕ್ಕೇ ಹಣ ಪಾವತಿಸಿದರಾಯ್ತು. ಅದೂ ಅಲ್ಲದೇ ಡ್ರೈವರ್’ನ ಕಚಿಪಿಚಿಯಿಲ್ಲ. ನೀವೇ ಡ್ರೈವ್ ಮಾಡುತ್ತಾ ಸಮಯ ವ್ಯರ್ಥ ಮಾಡುವ ಅಗತ್ಯವೂ ಇಲ್ಲ. ಆಫೀಸಿನ ಕೆಲಸವಿದ್ದರೆ ಮುಗಿಸಿಕೊಳ್ಳಿ, ಅಥವಾ ಪ್ರಯಾಣಿಸುತ್ತಲೇ ಅಮ್ಮನಿಗೊಂದು ಸ್ಕೈಪ್ ಕಾಲ್ ಮಾಡಿ. ಬಹುಷಃ ನಮ್ಮ ಮಕ್ಕಳಿಗೆ (ಮಕ್ಕಳಿಗಲ್ಲದಿದ್ದರೂ ಮೊಮ್ಮಕ್ಕಳಿಗೆ) ಡ್ರೈವಿಂಗ್ ಲೈಸೆನ್ಸ್ ಎಂದರೇನೂ ಎಂದು ತಿಳಿಯಲಿಕ್ಕಿಲ್ಲ ಹಾಗೂ ಅವರುಗಳಿಗೆ ನಾನು ನೀವು ಅನುಭವಿಸಿದ “ನನ್ನ ಮೊದಲ ಕಾರು” ಎಂಬ ಅನುಭೂತಿಯೂ ಆಗಲಿಕ್ಕಿಲ್ಲ.

ಇದರ ನೇರಪರಿಣಾಮವಾಗಿ ನಗರಗಳೂ ಬದಲಾಗಲಿವೆ. ಈ ತಂತ್ರಜ್ಞಾನ ಹೆಚ್ಚೆಚ್ಚು ಫೈನ್-ಟ್ಯೂನ್ ಆದಷ್ಟೂ ರಸ್ತೆಯ ಮೇಲಿನ ಕಾರುಗಳ ಸಂಖ್ಯೆಯಲ್ಲಿ ಹಣನೀಯ ಇಳಿಕೆಯಾಗಲಿದೆ. ಇನ್ನು ಹತ್ತುವರ್ಷದಲ್ಲಿ ಕಾರುಗಳ ಸಂಖ್ಯೆ 60-70% ಕಡಿಮೆಯಾಗಲಿದೆ. ಇದುವರೆಗೆ ಪಾರ್ಕಿಂಗ್ ಮಾಡಲು ಉಪಯೋಗಿಸುತ್ತಿದ ಸ್ಥಳಗಳಲ್ಲಿ ಪಾರ್ಕುಗಳು ನಿರ್ಮಾಣವಾಗಬಹುದು. (ಬೆಂಗಳೂರಂತಾ ನಗರದಲ್ಲಿ ಇನ್ನೊಂದಷ್ಟು ಅಪಾರ್ಟ್ಮೆಂಟುಗಳೂ ತಲೆಯೆತ್ತಬಹುದು ಎಂದು ಕುಹಕವಾಡುತ್ತೀರೇನೋ 🙂 )

ಜಗತ್ತಿನಲ್ಲಿ ಪ್ರತೀವರ್ಷ 12ಲಕ್ಷ ಜನ ರಸ್ತೆ ಅಪಘಾತಗಳಿಂದಾಗಿ ಸಾಯುತ್ತಿದ್ದಾರೆ. ಪ್ರತೀ ಲಕ್ಷ ಕಿಲೋಮೀಟರ್ ಪ್ರಯಾಣಕ್ಕೊಂದು ಅಪಘಾತ ನಡೆಯುತ್ತಿದೆ. ರಸ್ತೆಯಲ್ಲಿ ಸ್ವಯಂಚಾಲಿತ ಕಾರುಗಳ ಸಂಖ್ಯೆ ಹೆಚ್ಚಿದಷ್ಟೂ ಈ ಅಪಘಾತ ಹಾಗೂ ಸಾವುನೋವುಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತದೆ. ಅಪಘಾತಗಳ ಸಂಖ್ಯೆ ಪ್ರತೀ ಕೋಟಿ ಕಿಲೋಮೀಟರಿಗೊಂದಾಗುತ್ತದೆ.

ತಮ್ಮ ವ್ಯವಹಾರದ ಮಾದರಿಯನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ಅನೇಕ ಕಾರುಗಳ ಕಂಪನಿಗಳು ದಿವಾಳಿಯಾಗುತ್ತವೆ. ಹೆಚ್ಚಿನ ಕಂಪನಿಗಳು ವಿಕಾಸನಾಕಾರಿ ತಂತ್ರವನ್ನೇ ಅನುಸರಿಸುತ್ತವೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ತಮ್ಮ ಕಾರುಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತವೆ. ಇದೇ ವೇಳೆ ಟೆಸ್ಲಾ, ಆಪಲ್ ಮತ್ತು ಗೂಗಲ್’ನಂತಹ ತಂತ್ರಜ್ಞಾನೀಯ ಕಂಪನಿಗಳು ಕ್ರಾಂತಿಕಾರಿ ತಂತ್ರವನ್ನನುಸರಿಸಿ, ನಾಲ್ಕು ಚಕ್ರಗಳ ಮೇಲೆ ಕಂಪ್ಯೂಟರನ್ನು ಕೂರಿಸಿ, ಆ ಕಂಪ್ಯೂಟರನ್ನು ಅಭಿವೃದ್ಧಿಪಡಿಸುತ್ತವೆ. ಫೋಕ್ಸ್-ವ್ಯಾಗನ್, ಔಡಿಗಳಲ್ಲಿ ಟೆಸ್ಲಾ ಈಗಾಗಲೇ ನಡುಕ ಹುಟ್ಟಿಸಿದೆ. VW ಆಗಲೇ ತನ್ನ ಮರಿಕಂಪನಿಯಾದ ಪೋರ್ಷ’ಗೆ ಮಿಷನ್-ಇ ಎಂಬ ಎಲೆಕ್ಟ್ರಿಕ್ ಕಾರು ತಯಾರಿಸಲು ಸಜ್ಜು ಮಾಡಿದೆ. ಅದೂ ಸ್ವಯಂಚಾಲಿತವಾಗುವ ದಿನ ದೂರವಿಲ್ಲ.

ಇವೆಲ್ಲಕ್ಕಿಂತಾ ಹೆಚ್ಚಾಗಿ ವಾಹನ ಇನ್ಷೂರೆನ್ಸ್ ಕಂಪನಿಗಳಿಗೆ ಹೊಡೆತ ಬೀಳಲಿದೆ. ಸ್ವಯಂಚಾಲಿತ ಕಾರುಗಳೇ ತುಂಬಿರುವ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಬೆರಳಿನಲ್ಲೆಣಿಸಬಹುದಾದಷ್ಟಾದರೆ, ವಾಹನ ವಿಮೆಯ ಪ್ರೀಮಿಯಂ ಗಮನಾರ್ಹವಾಗಿ ಇಳಿಕೆಯಾಗಲಿದೆ. ಹೀಗೇ ಮುಂದುವರೆದರೆ ಆಮೇಲೆ ಸ್ವಲ್ಪ ಸಮಯದಲ್ಲಿ ಕಾರ್ ವಿಮೆಯ ವ್ಯವಹಾರವೇ ಬಂದ್ ಆಗಬಹುದು.

ರಿಯಲ್ ಎಸ್ಟೇಟ್ ಉದ್ಯಮ ಸಂಪೂರ್ಣ ಬದಲಾಗಲಿದೆ. ಯಾಕೆಂದರೆ ನಿಮ್ಮ ಮನೆಯಿಂದ ಆಫೀಸಿಗೆ ತಲುಪುವ ಸಮಯ ಹೆಚ್ಚೆಚ್ಚು ಕರಾರುವಕ್ಕಾಗಿ ಊಹಿಸಬಲ್ಲುದಾದಾಗ, ನಿಮ್ಮ ಆಫೀಸು ಹೆಬ್ಬಾಳದಲ್ಲಿದ್ದರೂ ಸಹ ಕೆಂಗೇರಿಯಲ್ಲಿ ನೋಡಿದ ಸುಂದರವಾದ ಅಪಾರ್ಟ್ಮೆಂಟಿಗೆ ಹಣಹೂಡಲು ನೀವು ಹಿಂಜರಿಯುವುದಿಲ್ಲ.

 

ಇವಿಷ್ಟೂ ಸ್ವಯಂಚಾಲಿತ ಕಾರುಗಳ ವಿಷಯವಾಯ್ತು. ಈಗ ಇನ್ನೊಂದು ಮುಖ್ಯ ವಿಚಾರ ಅವಲೋಕಿಸೋಣ. ಈ ಸ್ವಯಂಚಾಲಿತ ಕಾರುಗಳಲ್ಲಿ ಹೆಚ್ಚಿನವು ಎಲೆಕ್ಟ್ರಿಕ್ ಕಾರುಗಳು. ಈ ಎಲೆಕ್ಟ್ರಿಕ್ ಕಾರುಗಳು ನಮ್ಮ ಭವಿಷ್ಯವನ್ನು ಹೇಗೆ ಬದಲಾಯಿಸಬಲ್ಲವು ಅಂತಾ ನೋಡೋಣ. ಪೆಟ್ರೋಲ್ ಬೆಲೆ ಕಮ್ಮಿಯಾಗುತ್ತೆ ಅನ್ನೋ ವಿಷಯಗಳೆಲ್ಲಾ ಬೇಡ. ಅಂತಾ ಭವಿಷ್ಯವನ್ನ ಯಾರು ಬೇಕಾದರೂ ಹೇಳಬಲ್ಲರು. ನಾವಿಲ್ಲಿ ಮಾತಾಡ್ತಾ ಇರೋದು ಈ ತಂತ್ರಜ್ಞಾನಗಳಿಂದ ನಮ್ಮ ಜೀವನಶೈಲಿ ಹೇಗೆ ಬದಲಾಗುತ್ತೆ ಅಂತಾ. 2020ರೊಳಗೆ ಭಾರತದಲ್ಲೂ ಎಲೆಕ್ಟ್ರಿಕ್ ಕಾರುಗಳು ಬರಲಾರಂಭಿಸುತ್ತವೆ. ಎಲೆಕ್ಟ್ರಿಕ್ ಕಾರುಗಳು ಹೆಚ್ಚಾದಷ್ಟೂ ರಸ್ತೆಗಳು, ನಗರಗಳು ಹೆಚ್ಚೆಚ್ಚು ಶಾಂತವಾಗುತ್ತವೆ. ವಿದ್ಯುದ್ಶಕ್ತಿ ಇನ್ನೂ ಅಗ್ಗವಾಗುತ್ತದೆ, ಇನ್ನೂ ಹೆಚ್ಚು ಶುದ್ಧವಾಗುತ್ತದೆ. ಸೌರಶಕ್ತಿಯಿಂದ ಉತ್ಪಾದಿಸಲಾಗುತ್ತಿರುವ ವಿದ್ಯುತ್ತಿನ ಪ್ರಮಾಣ ಕಳೆದ 30ವರ್ಷಗಳಿಂದ ಊರ್ಧ್ವಮುಖದಲ್ಲೇ ಇದೆಯಾದರೂ, ಅದರ ಪರಿಣಾಮ ನಮಗೆ ಈಗಷ್ಟೇ ಅರಿವಾಗ್ತಾ ಇದೆ. 2016 ಹಾಗೂ 2017ರಲ್ಲಿ ನಾವು ಸೌರಮೂಲದಿಂದ ಉತ್ಪಾದಿಸಿದ ವಿದ್ಯುತ್ತಿನ ಪ್ರಮಾಣ, ಬೇರೆ ಇಂಧನಮೂಲಗಳಿಂದ ತಯಾರಿಸಿದ ವಿದ್ಯುತ್ತಿಗಿಂತಾ ಹೆಚ್ಚು. ಹಾಗೂ, ಮುಂದಿನ ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಾಗುತ್ತಲೇ ಹೋಗಲಿದೆ. ಸೌರವಿದ್ಯುತ್ ಅದೆಷ್ಟು ಗಮನಾರ್ಹ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ ಹಾಗೂ ಅಗ್ಗವಾಗಲಿದೆ ಎಂದರೆ, 2028ರ ವೇಳೆಗೆ ಕಲ್ಲಿದ್ದಲಿನ ಸ್ಥಾವರಗಳನ್ನಿಟ್ಟ ಕಂಪನಿಗಳು ದಿವಾಳಿಯೇಳುವಷ್ಟು!

ವಿದ್ಯುತ್ ಅಗ್ಗವಾದಷ್ಟೂ ನೀರು ಅಗ್ಗ ಹಾಗೂ ಹೇರಳವಾಗಲಿದೆ. ನಮಗೆ ತಿಳಿದಿರಬೇಕಾದ ಇನ್ನೊಂದು ವಿಷಯವೆಂದರೆ ಭೂಮಿಯ ಮೇಲೆ ನೀರಿಗೆ ಕೊರತೆಯಿಲ್ಲ. ಸ್ವಚ್ಚ ಕುಡಿಯುವ ನೀರಿಗಷ್ಟೇ ಕೊರತೆಯಿರೋದು. ಇವತ್ತು ಉಪ್ಪುನೀರಿನ ಅಲವಣೀಕರಣ ತಂತ್ರಜ್ಞಾನ (desalination technology) ಅದಾಗಲೇ ಅಭಿವೃದ್ಧಿಗೊಂಡು ಪ್ರತಿ ಘನ ಅಡಿ ನೀರಿಗೆ 2 ಕಿಲೋವ್ಯಾಟ್ ಅಷ್ಟೇ ವಿದ್ಯುತ್ ಬಳಸುವಷ್ಟು ಸಮರ್ಥವಾಗಿದೆ. ಇದಕ್ಕೆ ಜೊತೆಯಾಗಿ ವಿದ್ಯುತ್ತಿನ ಬೆಲೆಯೂ ಇಳಿದರೆ ಎಷ್ಟೂ ಸುಲಭವಾಗಿ ಖರ್ಚೇ ಇಲ್ಲದಂತೆ, ಅಥವಾ ಅತೀ ಕಡಿಮೆ ಖರ್ಚಿನಲ್ಲಿ, ಪ್ರತಿಮನುಷ್ಯನಿಗೂ ಸ್ವಚ್ಚ ಹಾಗೂ ಅನಿಯಮಿತ ನೀರು ಒದಗಿಸಬಹುದು, ಯೋಚಿಸಿ!

0 comments on “ಈ ವಿಜ್ಞಾನ ಭವಿಷ್ಯ ತಿಳಿದಿದ್ದೀರೇನು? (ಭಾಗ ೨)

Leave a Reply

Your email address will not be published. Required fields are marked *