Wednesday, 17 April, 2024

ಅಂತರ್ಜಾತೀಯ ಅಂತರ್ಧರ್ಮೀಯ ವಿವಾಹಗಳ ಗೋಜಲು

Share post

“ಕ್ಯಾಪಿಟಲಿಸಂ ಮತ್ತು ಗ್ಲೋಬಲೈಸೇಷನ್ ಬೆಳೆದಂತೆ ಸಬಾಲ್ಟ್ರನ್ ಸಂಸ್ಕೃತಿಗಳು ಅಳಿವಿನಂಚಿಗೆ ಹೋಗ್ತಾವೆ, ಅವುಗಳ ಸಾಂಸ್ಕೃತಿಕ ಅನನ್ಯತೆ ಹಾಳಾಗುತ್ತೆ” ಅಂತೆಲ್ಲಾ ಬಗ್ಗೆ ಭಯಂಕರ ಪುಂಗುತ್ತಿದ್ದವರ ಗುಂಪೊಂದು ಒಂದೆರಡು ವರ್ಷಗಳ ಹಿಂದೆ ನನ್ನ ಫ್ರೆಂಡ್ ಲಿಸ್ಟಲ್ಲಿತ್ತು. ಮೋದಿ, ಬ್ರಾಹ್ಮಣ್ಯ, NRC, UCC ಎಲ್ಲಾ ಬಂದುಬಿಟ್ರೆ ಈ ಸಬಾಲ್ಟ್ರನ್ ಜನಾಂಗಗಳಿಗೆ ಕಷ್ಟವುಂಟು ಅಂತಾ ಬಾಯ್ಬಡ್ಕೋತಾ ಇದ್ರು. ಒಟ್ಟಿನಲ್ಲಿ ಸಬಾಲ್ಟ್ರನ್ ಸಂಸ್ಕೃತಿ ಅನ್ನೋ ತಮ್ಗೇ ಅರ್ಥವಾಗದ ಒಂದು ಪದ ಹಾಗೂ ತಮ್ಮ ಯೂಶುವಲ್ ಶತ್ರುಗಳಾದ ಕ್ಯಾಪಿಟಲಿಸಂ ಮೋದಿ ಬ್ರಾಹ್ಮಣ್ಯಗಳಿಗೆ ತಳುಕು ಹಾಕ್ಕೊಂಡು ಅಳ್ತಾ ಇದ್ರು.

 

ತಮಾಷೆಯೆಂದರೆ ಇದೇ ಲಿಬರಲ್ಲುಗಳು ಇವತ್ತು ಅಂತರ್ಜಾತೀಯ ಅಂತರ್ಧರ್ಮೀಯ ವಿವಾಹಗಳು ನಡೆಯಬೇಕು ಅಂತಾ ಅಳ್ತಿದ್ದಾವೆ. ಅಂತರ್ಧರ್ಮೀಯ ಬಿಡಿ ಬರೇ ಒಂದು ಅಂತರ್ಜಾತೀಯ ವಿವಾಹದಲ್ಲೇ ನಮ್ಮ ಸಾಂಸ್ಕೃತಿಕ ಮೌಲ್ಯಗಳು ಅದೆಷ್ಟು ಅಲ್ಲಾಡಿ ಹೋಗ್ತಾವೆ ಅಂತಾ ಇವರಿಗೆ ಅರಿವೇ ಇದ್ದಂತಿಲ್ಲ. ಮಾಧ್ವ ಬ್ರಾಹ್ಮಣರ ಹುಡುಗ ಶೈವ ಬ್ರಾಹ್ಮಣರ ಹುಡುಗಿಯನ್ನು ಮದುವೆಯಾಗಿ ಹೋದರೆ ಎರಡು ಕುಟುಂಬದ ಕಿರಿಕಿರಿಗಳನ್ನು ನಾವು ಪಟ್ಟಿಮಾಡಲು ಸಾಧ್ಯವೇ? ಒಂದೇ ಜನಾಂಗದ ಒಳಪಂಗಡದಲ್ಲೇ ಹೀಗಾದರೆ, ಮೊಗವೀರರ ಹುಡುಗಿ ಗೌಡರ ಹುಡುಗನನ್ನು ಮದುವೆಯಾದರೆ ಏನಾಗಬಹುದು ಹೇಳಿ. ಪಂಜುರ್ಲಿ, ಬೊಬ್ಬರ್ಯ, ಅಣ್ಣಪ್ಪರನ್ನು ಬದಲು ಮಂಟೇಸ್ವಾಮಿ, ಮಲೆಮಹದೇಶ್ವರ, ಬೆಟ್ಟದಮ್ಮನನ್ನೇ ಪೂಜೆಮಾಡು ಅಂತಾ ಒಂದು ಮನೆಯವರು ಕೂತರೆ ಏನೇನಾಗುತ್ತೆ ಅಂತಾ ಗೊತ್ತಾ? ಕಾಫಿಗೆ ಬೆಲ್ಲ ಹಾಕೋದೂ, ಸಕ್ಕರೆ ಹಾಕೋದೂ ಕೂಡಾ ಕುಟುಂಬದಲ್ಲಿ ಹರಿದುಬಂದ ಹಲವಾರು ಮೌಲ್ಯಗಳ ಒಟ್ಟುನಿರ್ಧಾರ. ನಮಗೇ ಅರ್ಥವಾಗದ ರೀತಿಯಲ್ಲಿ ಸಮ್ಮಿಳಿತಗೊಂಡ ನೂರಾರು ವೇರಿಯಬಲ್ಲುಗಳ ಸಮೀಕರಣ ನಮ್ಮ ಸಂಸ್ಕೃತಿ. ಅಂತರ್ಜಾತೀಯ ವಿವಾಹ ಆಗಬೇಕು, ನಾನು ಸಮಾಜಕ್ಕೆ ಮಾದರಿಯಾಗಬೇಕು ಅಂತಾ ಹೊರಟ ಹೆಣ್ಣುಗಂಡುಗಳ ಕುಟುಂಬದಲ್ಲಿ ಒಂದೋ ವರ್ಷಕ್ಕಿಷ್ಟು ಜಗಳಗಳು ಅಂತಾ ಗ್ಯಾರಂಟಿಯಾಗಿರುತ್ತೆ. ಇಲ್ಲಾಂದರೆ ಆ ಕುಟುಂಬ ಯಾವ ಗಲಾಟೆಯೂ ಬೇಡ ಅಂತೇಳಿ ಎಲ್ಲಾ ಪೂಜೆ ಪುನಸ್ಕಾರ ಸಾಂಸ್ಕೃತಿಯ ಆಚರಣೆಗಳನ್ನೇ ಬದಿಗಿಡುತ್ತೆ. ಎರಡೂ ಕಷ್ಟದ್ದೇ ಪರಿಣಾಮಗಳು. ಜಗಳವಾದರೂ ಸರಿಹೋಗಬಹುದು, ಆದರೆ ಎರಡನೆಯ ಪರಿಣಾಮದ ದೂರಗಾಮಿ ಅರ್ಥಗಳೇನು ಅಂತಾ ನಮಗರ್ಥವಾಗುತ್ತಾ? ಒಂದೆಲಗದ ಸಾರು, ಕೆಂಪಿರುವ ಚಟ್ಣಿ, ಕರಡಿಕುಣಿತ, ಹಾಲ್ಬಾಯಿ, ದೇವರಿಗಿಟ್ಟ ಧೂಪ, ವರ್ಷಕ್ಕೊಮ್ಮೆ ಕೊಡುವ ಹರಕೆಯ ಕುರಿಯ ಬಾಡೂಟ, ಆ ನೆಪದಲ್ಲೇ ವರ್ಷಕ್ಕೊಮ್ಮೆ ಸೇರುವ ಕುಟುಂಬ ಮತ್ತು ಊರಿನ ಜನರು…..ಇವೆಲ್ಲವನ್ನೂ ನಿಧಾನವಾಗಿ ನಮಗೇ ಗೊತ್ತಿಲ್ಲದಂಗೆ ಹೊಸೆದುಹಾಕಲಾಗುತ್ತೆ….ಸಮಾನತೆ, ಅಂತರ್ಜಾತೀಯ ವಿವಾಹ ಅನ್ನೋ ಬಿಸಿಲುಕುದುರೆಗಳ ಹೆಸರಲ್ಲಿ. ಗಟ್ಟಿ ಜಾತಿಗಳದ್ದೇ ಈ ಕತೆಯಾದರೆ ಸಬಾಲ್ಟ್ರನ್ ಸಮಾಜಗಳ ಕಥೆಯೇನು?

 

ಇನ್ನು ಅಂತರ್ಧರ್ಮೀಯ ಮದುವೆಗಳಂತೂ ಬಿಟ್ಟೇ ಹಾಕಿ. ಅಲ್ಲಿಗೆ ಹೋದ ಹಿಂದೂ ಹುಡುಗಿಯರ್ಯಾರೂ ತಮ್ಮ ಹಳೆಯ ಅಸ್ಮಿತೆಯನ್ನು ಉಳಿಸಿಕೊಳ್ಳಲಾರರು. ಅದಕ್ಕೆ ಆ ಧರ್ಮ ಬಿಡುವುದಿಲ್ಲ. ಇನ್ನು ಸಮಾಜಕ್ಕೆ ಮಾದರಿಯಾಗೋಕೆ ಅಂತಾ ಆ ಧರ್ಮದವರನ್ನು ಮದುವೆಯಾದ ಹಿಂದೂ ಹುಡುಗರೂ ಮತ್ತವರ ಮನೆಯವರೂ ಅವಳನ್ನು ಅಕಾಮಡೇಟ್ ಮಾಡೋಕೆ, ನಮ್ಮನೆಯಲ್ಲಿ ಆಕೆ ಹೊರಗಿನವಳಂತೆ ಫೀಲ್ ಆಗೋದು ಬೇಡ ಅಂತೇಳಿ (ಹೇಗಿದ್ದರೂ ಸಹಿಷ್ಣುತೆ ನಮ್ಮ ಹಿಂದೂಗಳ ಹೆಗ್ಗಳಿಕೆ ನೋಡಿ) ಪರವಾಗಿಲ್ಲ ಬಿಡಮ್ಮ, ನಿನಗೆ ನೀರು ಬಿಡೋದು ಗೊತ್ತಿಲ್ಲ, ನೀನು ತುಳಸಿಗೆ ಸುತ್ತುಹಾಕೋದಿಲ್ಲ, ರಂಗೋಲಿ ಅಂದ್ರೇನು ಗೊತ್ತಿಲ್ಲ ಅಂತಾ ತಾವೇ ಮಾಡ್ತಾರೆ. ಆಕೆ ಅದನ್ನ ಕಲಿಯಲ್ಲ, ಮಕ್ಕಳಂತೂ ಕಲಿಯಲಿ ಸಾಧ್ಯವೇ ಇಲ್ಲ. ಅಲ್ಲಿಗೆ ಆ ಕುಟುಂಬದಲ್ಲೂ ಹಿಂದೂಗಳ ಸಂಸ್ಕೃತಿ ಸಂಪ್ರದಾಯಗಳೆಲ್ಲಾ ಹಳ್ಳಹಿಡಿದಂಗೇ. ಮೂರು ತಲೆಮಾರು ಕಳೆದು ನಾಲ್ಕನೆಯದಕ್ಕೆ ಕಾಲಿಡುವಷ್ಟೊತ್ತಿಗೆ ಬ್ರಾಹ್ಮಣನಿಗೆ ತಟ್ಟೆಕಾಸಿನವ ಅನ್ನೋದೂ, ಗೌಡರಿಗೆ ಮುದ್ದೇಮಾಂಸದವ ಅನ್ನೋದೂ, ಲಿಂಗಾಯತರಿಗೆ ನಾಮ ಇಟ್ಕಂಡೋನು ಅನ್ನೋದು, ಶೆಟ್ಟರಿಗೆ ಇನ್ನೊಂದೇನೋ ಅನ್ನೋದು ಕಾಮನ್ ಆಗಿರುತ್ತೆ. ಆ ಜನಾಂಗಗಳ ಅನನ್ಯತೆ, ಅವರ ಸಾಂಸ್ಕೃತಿಕ ಶ್ರೀಮಂತಿಕೆ ಏನು, ನಾಡಿನ ಹೆಗ್ಗಳಿಕೆ ಅವರ ಕೊಡುಗೆಗಳೇನು ಹಾಗೂ ಅದಕ್ಕೆ ಆ ಜಾತಿ ಅನ್ನೋ ಕಲ್ಪನೆಯ ಕೊಡುಗೆ ಏನು ಅನ್ನೋದನ್ನೇ ಮರೆತು ಅವರಿವರನ್ನು ಪುಳ್ಚಾರಿ, ನಾಮ, ಕ್ರಾಸ್ಬೆಲ್ಟು, ಮಟನ್ ಬಿರಿಯಾನಿ ಅಂತೆಲ್ಲಾ ಹೀಯಾಳಿಸೋದೇ ಮುಖ್ಯವಾಹಿಯಾಗಿರುತ್ತೆ.

 

ಈ ದೇಶದ ವಿಶಿಷ್ಟತೆಗೆ ಸಮಾಜದ, ಈ ವಿಭಾಗೀಕರಣದಿಂದ ಬಹಳ ದೊಡ್ಡಕೊಡುಗೆ ಇದೆ. ಅದಿಲ್ಲವಾದ ದಿನ, “ನಾವೆಲ್ಲಾ ಒಂದೇ – ನಮ್ಮದೇವರೂ ಒಂದೇ – ನಮ್ಮ ಹಬ್ಬಗಳೂ ಒಂದೇ” ಅಂತಾ ಕೂತ ದಿನ ನಾವೂ ಅಬ್ರಹಾಮನ ಮಕ್ಕಳದ್ದೇ ಇನ್ನೊಂದು ಗುಂಪಾಗಿ ಕೂರುತ್ತೇವಷ್ಟೇ. ಭಾರತ ಉಪಖಂಡವಾಗಲ್ಲ, ಜೆರುಸಲೇಮಿನದ್ದೋ ಮೆಸೊಪೊಟೇಮಿಯಾದ್ದೋ ಬ್ರಾಂಚ್ ಆಫೀಸಾಗುತ್ತೆ. (ಜೆರುಸಲೇಮ್ ಅಥವಾ ಮೆಸೊಪೊಟೇಮಿಯ ಅಂತಾ ಯಾಕೆ ಹೇಳ್ದೆ ಅನ್ನೋದನ್ನ ರೀಸರ್ಚ್ ಮಾಡಿ ತಿಳ್ಕೊಳ್ಳಿ).

 

(ಅಂತರ್ಜಾತೀಯ ವಿವಾಹಕ್ಕೆ ನನ್ನ ಯಾವ ತಕರಾರೂ ಇಲ್ಲ. ಅದರಿಂದ ಮಾನವೀಯ ಮೌಲ್ಯಗಳು ಬೆಳೆಯುತ್ತವೆ ಅನ್ನೋದು ಒಂದು ಮಟ್ಟಿಗೆ ಸತ್ಯ.

ಹಾಗೆಯೇ ಜಾತಿ ವ್ಯವಸ್ಥೆಯಿಂದಲೂ ನನಗೆ ತೊಂದರೆಯಿಲ್ಲ. ನಮ್ಮೆಲ್ಲರ ಅನನ್ಯತೆಯ ಪ್ರತೀಕಗಳೇ ಜಾತಿಗಳು. ತೊಂದರೆ ಇರೋದು ನನ್ನ ಜಾತಿ ಮೇಲೆ, ನಿನ್ನ ಜಾತಿ ಕೀಳು ಅನ್ನೋದರಲ್ಲಿ ಅಷ್ಟೇ.)

 

0 comments on “ಅಂತರ್ಜಾತೀಯ ಅಂತರ್ಧರ್ಮೀಯ ವಿವಾಹಗಳ ಗೋಜಲು

Leave a Reply

Your email address will not be published. Required fields are marked *