Tuesday, 21 May, 2024

ಹೂಡಿಕೆ ಮಾಡುವುದು ಹೇಗೆ?

Share post

ಹಿಂದಿನ ಲೇಖನಕ್ಕೆ ನನ್ನ ಸ್ನೇಹಿತರೊಬ್ಬರು ಕೇಳಿದ ಎರಡು ಪ್ರಶ್ನೆಗಳು:

 

(1)”ಆದರೆ ಎಲ್ಲಕ್ಕೂ ಮೊದಲು ಎಲ್ಲಿ ಹೇಗೆ ಹೂಡಿಕೆ ಮಾಡಬೇಕೆಎಂಬುದು ಮಿಲಿಯನ್ ಡಾಲರ್ ಪ್ರಶ್ನೆ”?

 

(2)”ಆ ಬೇರೆ ಬೇರೆ ಹೂಡಿಕೆ decide ಮಾಡೋದು ಕೂಡು ಅಷ್ಟು ಸುಲಭ ಇಲ್ಲ. ನನ್ನ ಬಳಿ ಇರುವ ಹಣ ಹೇಗೆ diversify ಮಾಡಲಿ? ಯಾವ instrument ಎಷ್ಟು % ಇರಬೇಕು ಎಂಬ ಜ್ಞಾನ ಇಲ್ಲ. ಇಂತಹ ಹತ್ತು ಹಲವು ಯೋಚನೆ ಬರುತ್ತವೆ. ಹೂಡಿಕೆ ಮಾಡಿದರೆ ಅದು ಸರಿಯೋ ತಪ್ಪೋ ಎನ್ನುವ ಯೋಚನೆ ಕಾಡುತ್ತವೆ”

 

ನನ್ನ ಇತಿಮಿತಿಯಲ್ಲಿನ ಉತ್ತರ ಹೀಗಿದೆ:

 

ಎಲ್ಲಿ ಹೇಗೆ ಹೂಡಿಕೆ ಮಾಡಬೇಕು ಎನ್ನುವುದೇನೂ ತೀರಾ ಬ್ರಹ್ಮಜ್ಞಾನವಲ್ಲ.

ಕೆಲ ನಿಯಮಗಳು ಮತ್ತು ಕೆಲ ಪ್ರಶ್ನೋತ್ತರಗಳಿಂದ ನಮ್ಮ ಹೂಡಿಕೆಗೊಂದು ಸ್ಥೂಲವಾದ ಪರಿಧಿಯನ್ನು ಗುರುತಿಸಿಕೊಳ್ಳಬಹುದು.

 

(*) ಮೊದಲನೆಯದಾಗಿ ಯಾವುದಕ್ಕಾಗಿ ಹಣ ಉಳಿಸುತ್ತಿದ್ದೀವಿ? ರಿಟೈರ್ಮೆಂಟಿಗೋ, ಮನೆ ಕೊಳ್ಳೋಕೋ, ಅಮ್ಮನಿಗೊಂದು ಸರ ಕೊಡಿಸೋಕೋ, ಮದುವೆಗೋ…ಯಾವುದಕ್ಕೆ ಅಂತಾ ಗೊತ್ತಾದರೆ ಉಳಿಕೆಯ ಗಾತ್ರ, ಹಾಗೂ ನಮ್ಮ ಬಳಿಯಿರುವ ಸಮಯ ಗೊತ್ತಾಗುತ್ತೆ.

 

(*) Money saved is money earned ಅಂದಹಾಗೆ ಉಳಿಸಿದ ಹಣವೂ ಹೂಡಿಕೆಯೇ. ಅನಗತ್ಯ ಖರ್ಚುಗಳನ್ನು ನಿಲ್ಲಿಸುವುದು ಮುಖ್ಯ.

 

(*) ಜೊತೆಗೇ ನಮ್ಮ ಹಣದಲ್ಲಿ ನಾಲ್ಕು M ಗಳನ್ನು ಗುರುತಿಸಬೇಕು:

  • M1 – ನಿಮ್ಮ ಬದುಕಿಗೆ ಬೇಕಾದ ಮೂಲ ಹಣ. ಇದಿಲ್ಲದೇ ನೀವು ಬದುಕಲು ಸಾಧ್ಯವೇ ಇಲ್ಲ. ನಿಮ್ಮ ಬಾಡಿಗೆ, ಪೆಟ್ರೋಲು, ಊಟದ ಖರ್ಚು, ಮಗನ ಸ್ಕೂಲ್ ಫೀಸು, ಅಮ್ಮನ ಔಷಧಿ ಖರ್ಚು ಇತ್ಯಾದಿ. ಇದು ಹೂಡಿಕೆಗಲ್ಲ. ಇದು ನಿಮ್ಮ ಜೀವದ್ರವ್ಯ. ಇದರಲ್ಲಿ ಹೊಟ್ಟೆಬಟ್ಟೆ ಕಟ್ಟಿ ಸ್ವಲ್ಪ ಉಳಿಸಬಹುದಷ್ಟೇ. ಆದರೆ ಇದನ್ನು ತೀರಾ ಉಳಿಸಲಿಕ್ಕಾಗಲ್ಲ. ಈ M ಹೋದಲೆಕ್ಕವೇ.

 

  • M2 – ಮೇಲಿನ M ಖರ್ಚೆಲ್ಲಾ ಆದಮೇಲೆ ಉಳಿದದ್ದು ಈ ನಿಮ್ಮ ಬದುಕನ್ನು ಹಸನು ಮಾಡುವ, ನಿಮಗೆ ಲೌಕಿಕ ಸಂತಸ ಕೊಡುವ ಹಣ. Luxury spend. ಇದೂ ಮುಖ್ಯವೇ. ಸೊಂಟ ಮುರಿದು ದುಡಿಯುವ ಮನುಷ್ಯನಿಗೆ ಆಗಾಗ ಸಣ್ಣ ಸಣ್ಣ ಸಂತೋಷಗಳು ಮುಖ್ಯ. LCD ಟೀವಿ, ಮಗನ ಹುಟ್ಟುಹಬ್ಬಕ್ಕೊಂದು ಆಟಿಕೆ. ಮಗಳಿಗೊಂದು ಒಳ್ಳೆಯ ಡ್ರೆಸ್ಸು, ಹೆಂಡತಿಗೊಂದು ಸಿಲ್ಕ್ ಸೀರೆ, ಒಂದೊಳ್ಳೆ ಸೋಫಾ, ಕುಟೂಂಬದ ಜೊತೆಗೊಂದು ವರ್ಷದ ತಿರುಗಾಟ….ಇದಿರಬೇಕು ಅಲ್ವಾ? ನಮ್ಮ ನಮ್ಮ M2ಗೆ ಅನುಗುಣವಾಗಿ ಇದರ ಕ್ವಾಲಿಟಿ ಬದಲಾಗಬಹುದು. ಆದರೆ ಎಲ್ಲರಿಗೂ ಇದು ಬೇಕು. ಇದನ್ನೂ ನೀವು ಸ್ವಲ್ಪ ಉಳಿಸಬಹುದು. ದಿನಾಲೂ ವಿಸ್ಕಿ ಎತ್ತುವಬದಲು ವಾರಕ್ಕೊಮ್ಮೆ ಮಾಡಬಹುದು. ಪ್ರತೀ ಆರುತಿಂಗಳಿಗೊಮ್ಮೆ ನ್ಯಾಷನಲ್ ಲವೆಲ್ ಟ್ರಿಪ್ಪು, ವರ್ಷಕ್ಕೊಂದು ಫಾರಿನ್ ಟ್ರಿಪ್ಪಿನ ಬದಲು ಹೇಗೆ optimise ಮಾಡಬಹುದು ಅಂತಾ ನೋಡಬಹುದು. ಎಲ್ಲಾ ಪಾರ್ಟಿಗಳೂ ITC ಗಾರ್ಡೇನಿಯಾದಲ್ಲೇ ಆಗಬೇಕಿಲ್ಲ, ಲೋಕಲ್ ಹೋಟಲುಗಳಲ್ಲೀ ಆಗಬಹುದು. ಆದರೆ ತೀರಾ ಜಿಪುಣರಾಗಹೋಗಿ ಎಲ್ಲವನ್ನೂ ಉಳಿಸಹೋದರೆ, ಮನಸ್ಸೇ ಹುಳಿಯಾಗಿ ಜೀವನವನ್ನು ಅನುಭವಿಸಲಾಗದೇ ಹೋಗಬಹುದು. ಎಷ್ಟೆಲ್ಲಾ ಉಳಿಸಿ 60ನೇ ವಯಸ್ಸಿನಲ್ಲಿ ರೋಸ್-ವುಡ್ಡಿನ ತೂಗುಮಂಚದಲ್ಲಿ ಕೂರಬಹುದು, ಆದರೆ ಸ್ವಲ್ಪ ಕಮ್ಮಿ ಉಳಿಸಿ ಕಬ್ಬಿಣದ ತೂಗುಮಂಚಕ್ಕೆ ಸೆಟಲ್ ಆಗಿ, 40ನೇ ವಯಸ್ಸಿನಲ್ಲೂ ಸ್ವಲ್ಪ ಎಂಜಾಯ್ ಮಾಡಿ. ನಿಮ್ಮನ್ನು ನೀವು ಪ್ರೀತಿಸುವಂತಾಗಲು ಈ M ಬೇಕು.

 

  • M1 – M2 ಎಂಬಗಂಟನ್ನು ಬದಿಗಿಟ್ಟಮೇಲೆ ಉಳಿದದ್ದು ಇದು ಅತೀ ಮುಖ್ಯವಾದ ಹಣ. ಇದು ನಮ್ಮ long term investment. ಇದರ ಮೇಲೆ ನಿಮ್ಮ ನಿವೃತ್ತಿ ಜೀವನ ನಿಂತಿದೆ. ಈ ಹಣವನ್ನು ನೀವು ಕಳೆದುಕೊಳ್ಳಬಾರದು. ಇದನ್ನು ಕಡಿಮೆ ರಿಸ್ಕಿನ, ಕಡಿಮೆ ಬಡ್ಡಿಯದ್ದಾದರೂ ಸುರಕ್ಷಿತವಾದ inustrumentಗಳಲ್ಲಿ ಹೂಡಬೇಕು. EPF, PPF, FD, RD, SIP, Insurance, Post Office Deposit, ಕೊನೆಗಾಲದಲ್ಲಿ ಬದುಕಲೊಂದು ಮನೆಗಾಗಿ Real estate ಕೆಲ ಉದಾಹರಣೆಗಳು. ಚಿನ್ನ ಕೂಡಾ ಒಳ್ಳೆಯ ಹೂಡಿಕೆಯೇ. ಆದರೆ ಅದನ್ನು ಸುರಕ್ಷಿತವಾಗಿಡಲು ನಾವೇ ಖರ್ಚು ಮಾಡಬೇಕು (ಉದಾ: ಲಾಕರ್ ಫೀ, ಥೆಫ್ಟ್ ಇನ್ಯೂರೆನ್ಸ್). ನನಗಂತೂ ಹೆಚ್ಚಿನ ಚಿನ್ನದಂಗಡಿಗಳು ಕೊಡುವ “11 ತಿಂಗಳ ಕಂತು ನೀವು ಕಟ್ಟಿ, ಹನ್ನೆರಡನೇ ತಿಂಗಳು ನಾವು ಕಟ್ತೀವಿ” ಎಂಬ ಆಫರುಗಳು ಆಕರ್ಷಕವಾಗಿ ಕಾಣ್ತಾವೆ. ನಾನು ನನ್ನ ಮೊದಲ ಆಭರಣ, ಅಮ್ಮನಿಗೆ ಕೊಡಿಸಿದ ಆಭರಣಗಳನ್ನು ಹಾಗೆಯೇ ಕೊಂಡದ್ದು. ಎಲ್ಲಾ ಹೂಡಿಕೆಗಳಲ್ಲೂ ಪ್ಲಸ್-ಮೈನಸ್ ಇದ್ದೇ ಇರುತ್ತವೆ. ಆದರೆ ಕಡಿಮೆ ಮೈನಸ್ ಇದ್ದದ್ದು ನೋಡಿ ಹೂಡಬೇಕಷ್ಟೇ.

 

  • M4 – ಇಷ್ಟೆಲ್ಲಾ ಮಾಡಿದ ಮೇಲೂ ಪಾಕೆಟಲ್ಲಿ ಹಣ ಉಳಿದಿದ್ದರೆ ಅದು ಈ ಹಣದ ವಿಶೇಷವೇನೆಂದರೆ ಇದು ಸಣ್ಣ ಪ್ರಮಾಣದ್ದಾಗಿರುತ್ತದೆ ಹಾಗೂ ಈ ಹಣದ ಮೇಲೆ ನಿಮ್ಮ ಎಮೋಷನಲ್ ಕನೆಕ್ಷನ್ ತೀರಾ ಕಡಿಮೆಯಿರುತ್ತದೆ. “ಕಲ್ಲು ಹೊಡೆದು ನೋಡುವಾ. ಬಂದ್ರೆ ಬಂತು. ಹೋದ್ರೆ ಹೋಗ್ಲತ್ಲಾಗೆ” ಎಂಬ ಹಣವಿದ್ದರೆ ಅದು M4 ಆಗುತ್ತೆ. ಈ ಹಣವನ್ನು ನೀವು high risk instrumentಗಳ ಮೇಲೆ ಹೂಡಬಹುದು. ಜಗತ್ತಿನ ಮಜವೆಂದರೆ high risk ಇದ್ದಲ್ಲೇ high returns ಇರುತ್ತೆ. ನಿಮಗೆ ಎಷ್ಟು ರಿಸ್ಕ್ ತಗೊಳ್ಳುವಷ್ಟು ತಾಕತ್ತಿದೆ ಎಂಬುದರ ಮೇಲೆ ನಿಮಗೆಷ್ಟು ವಾಪಾಸು ಬರುತ್ತೆ ಎಂಬುದು ನಿರ್ಧಾರವಾಗುತ್ತೆ. ಈ ಹಣವನ್ನು ನೀವು ಈಕ್ವಿಟಿ ಅಂದರೆ ಶೇರ್ ಮಾರ್ಕೆಟ್ಟಿನಲ್ಲಿ, ಹೈ ರಿಸ್ಕ್ ಮ್ಯೂಚುವಲ್ ಫಂಡುಗಳಲ್ಲಿ ಹೂಡಬಹುದು. ನಿಮ್ಮದೇ ಅಥವಾ ನಿಮ್ಮ ದೋಸುಗಳ ಬ್ಯುಸಿನೆಸ್ಸಿನಲ್ಲಿ ಹೂಡಿಕೆ ಮಾಡಿ ವೆಂಚರ್ ಕ್ಯಾಪಿಟಲಿಸ್ಟುಗಳಾಗಬಹುದು. ಫಿಲಂ, ಧಾರಾವಾಹಿ, ವೆಬ್ ಸೀರೀಸ್ ತೆಗೆಯಬಹುದು. ಬಡ್ಡಿಗೆ ಬಿಡಬಹುದು. ಆದರೆ ಈ ಹಣವನ್ನು ಮರೆಯಲೂ ತಯಾರಿಗಿರಬೇಕು. ಇಲ್ಲಿ ಎಮೋಷನಲ್ ಹೂಡಿಕೆ ಅವಕಾಶವಿಲ್ಲ. ಅಂದ್ರೆ ಅಯ್ಯೋ ಅವರನ್ನ ನಂಬಿ ಮೋಸಹೋದೆ, ಅವರು ಅಗ್ರಿ ಶೇರ್ಸ್ ತಗಂಡಿದ್ದಕ್ಕೆ ನಾನೂ ತಗಂಡೆ. ಅವರು ಐಟಿಸಿ ತಗಂಡ್ರು ಅಂತಾ ನಾನು ಬೆಕ್ಟರ್ ತಗಂಡಿದ್ದೆ. ಈಗ ನೋಡಿದ್ರೆ ಬೆಕ್ಟರ್ 50% ಇಳಿದು ಹೋಗಿದೆ. ಬಡ್ಡೀಮಗ ನನಗೆ ಹೇಳ್ಲೇ ಇಲ್ಲ ಅಂತೆಲ್ಲಾ ಅಳುವಂಗಿಲ್ಲ. ಇದರಲ್ಲಿ ಸರಿಯಾದ್ರೂ ತಪ್ಪಾದ್ರೂ ಪೂರ್ತಿ ನೀವೇ ಹೊಣೆ.

 

(*) M4ಗೆ ಮಾತ್ರವಲ್ಲ, ಸಾಮಾನ್ಯವಾಗಿ ಹೂಡಿಕೆಯ ವಿಚಾರಕ್ಕೆ ಬಂದಾಗ ಎಮೋಷನ್ಸ್ ಬದಿಗಿಡಬೇಕು. ನನ್ನ ದೊಡ್ಡಮಾವ ಹೇಳಿದ್ದಾರೆ ನಂಗೆ ದುಡ್ಡುಕೊಡು, ನಾನು ಐದುವರ್ಷದಲ್ಲಿ 10% ಜಾಸ್ತಿ ಮಾಡಿಕೊಡ್ತೀನಿ ಅಂದ್ರು ಅಂತಾ ಮುಲಾಜಿಗೆ ಹೂಡಿಕೆ ಮಾಡೋದು. ಮಗಾ ಹರ್ಬಾಲೈಫ್ ಏಜೆನ್ಸಿ ತಗಾ ಅಂತಾ ಯಾರೋ ಹೇಳಿದ್ದಕ್ಕೆ ತಗೊಳ್ಳೋದು, ಪಿರಮಿಡ್ ಸ್ಕೀಮುಗಳಿಗೆ ಸೇರೋದು ಇವಕ್ಕೆಲ್ಲಾ strict NO. M1, M2, M3ಗಳಲ್ಲಿ ಈ ತರಹದ ಕೆಲಸ ಮಾಡೋದಂತೂ NO NO NO.

 

(*) ಹಣವನ್ನು ಆದಷ್ಟು ಡೈವರ್ಸಿಫೈ ಮಾಡಬೇಕು, ಅದನ್ನು ದುಡಿಸಬೇಕು and you have to make money work for you. ಒಂದು ಹಂತದವರೆಗಷ್ಟೇ ನೀವು ಹಣಕ್ಕಾಗಿ ದುಡಿಯಬೇಕು ಹಾಗೂ ಹಣವನ್ನು ಸಂಪಾದಿಸಬೇಕು. ಅದಾದ ಮೇಲೆ ಆ ಹಣ ನಿಮಗಾಗಿ ದುಡಿಯಬೇಕು, ಹಾಗೂ ಆ ಹಣ ನಿಮಗಾಗಿ ಹಣ ಸಂಪಾದಿಸಬೇಕು. ನೀವು ಒಂದೇ ಕಡೆ ಹಣ ಹೂಡಿಕೆ ಮಾಡಿದರೆ ಅದಕ್ಕಿಂತಾ ದೊಡ್ಡ ತಪ್ಪು ಇನ್ನೊಂದಿಲ್ಲ. ಆಗಲೇ ಹೇಳಿದಂತೆ ಬ್ಯಾಂಕಿನಲ್ಲಿಟ್ಟರೆ ಬಡ್ಡಿಕಮ್ಮಿ, ಆದರೆ ಸೇಫ್. ಈಕ್ವಿಟಿಯಲ್ಲಿಟ್ಟರೆ ರಿಟರ್ನ್ಸ್ ಹೆಚ್ಚು, ಆದರೆ ಅಷ್ಟೇ ರಿಸ್ಕಿ. ಗೋಲ್ಡಿನಲ್ಲಿಟ್ಟರೆ ರಿಟರ್ನ್ ಹಾಗೂ ಸೇಫ್ಟಿ ಗ್ಯಾರಂಟಿ, ಆದರೆ ಅದನ್ನ ಉಳಿಸ್ಕೊಳ್ಳೋಕೇ ಹಣ ಖರ್ಚಾಗುತ್ತೆ. ಇನ್ಯೂರೆನ್ಸ್, ಮ್ಯೂಚುವಲ್ ಫಂಡ್, ಎಸ್ಸೈಪಿಗಳೂ ತೀರಾ ಸುಲಭವಲ್ಲ, ಅವು ಬೆಳೆಯೋಕೆ ತುಂಬಾ ತಾಳ್ಮೆಬೇಕು. ರಿಯಲ್ ಎಸ್ಟೇಟ್ ಸದಾ ಅಪ್ರಿಷಿಯೇಟಿಂಗ್. ಆದರೆ ಯಾವ ಸಮಯಕ್ಕೆ ಗ್ರಾಫ್ ಉಲ್ಟಾ ಆಗುತ್ತೆ ಹೇಳೋಕಾಗಲ್ಲ.

 

ಹೀಗೆ ಯಾವುದೋ ಒಂದನ್ನ ಆರಿಸಿಕೊಳ್ಳುವುದು ತಪ್ಪು. ಎಲ್ಲಾಕಡೆಯೂ ಸ್ವಲ್ಪ ಸ್ವಲ್ಪ ಹೂಡಿಕೆ ಮುಖ್ಯ. ನಿಮಗೆ ಕೊನೆಯಲ್ಲಿ ಏನು ಬೇಕು, ನಿಮ್ಮ risk appetite ಎಷ್ಟು ಎನ್ನುವುದರ ಮೇಲೆ, ಹೂಡಿಕೆ ನಿರ್ಧಾರವಾಗುತ್ತೆ. ಇಲ್ಲಿಯೇ ಮೊದಲು (ನಿಮ್ಮ ಸಮಯದ) ಹೂಡಿಕೆ ಬೇಕಾಗಿರುವುದು. ಇದೇನೂ ಬ್ರಹ್ಮಜ್ಞಾನವಲ್ಲ. ದಿನಕ್ಕೊಂದು ಘಂಟೆ ಹೂಡಿಕೆ ಮಾಡಿ ಜಗತ್ತನ್ನೂ ಮಾರುಕಟ್ಟೆಯನ್ನು (ಸ್ಟಾಕ್ ಮಾರುಕಟ್ಟೆಯಲ್ಲ) ಅವಲೋಕಿಸಿದರೆ ಇದನ್ನೂ ಕಲಿಯಬಹುದು.

ಎಲ್ಲದರದ್ದೂ ಸರಿತಪ್ಪು ಯೋಚನೆ ಮಾಡುತ್ತಾ ಕೂತರೆ, ಹೂಡಿಕೆಯೇ ಆಗಲ್ಲ. When in doubt, take the smallest and least risky step.

 

ಕೆಲವನ್ನು ಕೇಳಿ ಕಲಿಯಬೇಕು, ಕೆಲವದನ್ನು ನೋಡಿ ಕಲಿಯಬೇಕು, ಕೆಲವದನ್ನು ಮಾಡಿ ಕಲಿಯಬೇಕು.

 

Ofcourse, ಕೊನೆಯಲ್ಲೊಂದು ಚಿನ್ನದಂತಾ ನಿಯಮ ಅಂದರೆ ಗೋಲ್ಡನ್ ರೂಲ್. ಯಾವನಾದ್ರೂ ಈ ಸ್ಕೀಮಿನಲ್ಲಿ ಹತ್ತು ಸಾವಿರ ಹಾಕಿ ಸಾರ್. ಒಂದು ವರ್ಷದಲ್ಲಿ ಒಂದು ಲಕ್ಷ ಮಾಡಿ ಕೊಡ್ತೀನಿ ಅಂದರೆ ಅಲ್ಲಿಂದ ಮೊದಲು ಓಡಬೇಕು 🙂 ಅಂತಹ ಯಾವ ಸ್ಕೀಮೂ ಜಗತ್ತಿನಲ್ಲಿಲ್ಲ. ಯಾವ ಹಣವೂ ಮರದಲ್ಲಿ ಬೆಳೆಯುವುದಿಲ್ಲ. ಮರವೂ ಕೂಡಾ ನೀರುಣಿಸಿ, ಗೊಬ್ಬರ ಹಾಕಿ, ಬಿಸಿಲುಕೊಟ್ಟು ಬೆಳೆಸಿದರಷ್ಟೇ ಬೆಳೆಯುವುದಂತೆ. ಅಂತಿದ್ದ ಮೇಲೆ ಹಣದ ಮರ…….. 🙂

 

0 comments on “ಹೂಡಿಕೆ ಮಾಡುವುದು ಹೇಗೆ?

Leave a Reply

Your email address will not be published. Required fields are marked *