Wednesday, 27 March, 2024

ಸಹಾಯಹಸ್ತ ಚಾಚಲು ಸರ್ಕಾರವೇ ಆಗಬೇಕಿಲ್ಲ – London Dairies

Share post

ಮಾನವ ವಿಕಾಸದ ಚರಿತ್ರೆಯಲ್ಲಿ ನಾಗರೀಕತೆ ಎಂಬುದು ನಿಜಕ್ಕೂ ಒಂದು ಸಾಧ್ಯತೆಯ ಕಲ್ಪನೆಯಾಗಿ ಬೆಳೆಯಲು ಪ್ರಾರಂಭವಾಗುವ ಒಂದು ಟರ್ನಿಂಗ್ ಪಾಯಿಂಟ್ ಪಡೆದದ್ದು ಯಾವಾಗ ಗೊತ್ತಾ?

 

ಅವನು ಮಂಗನಿಂದ ವಿಕಸನಹೊಂದಿ ಎರಡು ಕಾಲಿನಲ್ಲಿ ನಡೆಯಲು ಆರಂಭಿಸಿದಾಗ?

ಅಲ್ಲ.

 

ಬೆಂಕಿ ಉಪಯೋಗಿಸಿ ಆಹಾರವನ್ನು ಬೇಯಿಸಲು ಕಲಿತಾಗ?

ಅಲ್ಲ.

 

ವ್ಯವಸಾಯ ಪ್ರಾರಂಭಿಸಿದಾಗ?

ಅಲ್ಲ.

 

ವಿಜ್ಞಾನಿಗಳು ಲಕ್ಷಾಂತರ ವರ್ಷಗಳ ಕಾಲದ ಸಾವಿರಾರು ಅಸ್ಥಿಪಂಜರಗಳ ಅಧ್ಯಯನದ ನಂತರ ಹೇಳುವುದೇನೆಂದರೆ, ಯಾವ ಕಾಲಘಟ್ಟದಲ್ಲಿ ತೊಡೆಮೂಳೆಯೊಂದು ಮುರಿದು, ಮತ್ತೆ ಅದು ವಾಸಿಯಾದ ಲಕ್ಷಣಗಳಿರುವ ಅಸ್ಥಿಪಂಜರ ಸಿಕ್ಕಿದೆಯೋ, ಆ ಕಾಲಘಟ್ಟದಲ್ಲಿ ನಾಗರೀಕತೆಯೆಂಬ ಕಲ್ಪನೆಯ ಉಗಮವಾಯ್ತು. ಸಧ್ಯಕ್ಕೆ ಸಿಕ್ಕಿರುವ ಸಾಕ್ಷಿಗಳ ಪ್ರಕಾರ, ಇದು ಸುಮಾರು 15,000 ವರ್ಷಗಳ ಹಿಂದೆ ಆಗಿರಬಹುದು ಅಂತಾ ವಿಜ್ಞಾನಿಗಳ ಅಭಿಪ್ರಾಯ.

 

ತೊಡೆಮೂಳೆಗೂ, ನಾಗರೀಕತೆಗೂ ಏನು ಸಂಬಂಧ? ಇದ್ಯಾಕೆ ಹೀಗೆ? ಅಂತಾ ಕೇಳ್ತೀರೆಂದಾದರೆ, ಈ ಹರಟೆ ನಿಮಗೆ.

 

ಮನುಷ್ಯನ ದೇಹದಲ್ಲಿ ಎಲ್ಲಕ್ಕಿಂತ ಉದ್ದ, ಮತ್ತು ದೊಡ್ಡದಾದ ಮೂಳೆ, ತೊಡೆಯ ಫೀಮರ್ (femur). ದೇಹದ ಬೇರೆ ಯಾವ ಮೂಳೆ ಮುರಿದರೂ, ಸ್ವಸಹಾಯದಿಂದ ಮನುಷ್ಯ ಅದನ್ನು ಶುಶ್ರೂಷೆ ಮಾಡಿಕೊಳ್ಳಬಹುದು. ಆದರೆ ಫೀಮರ್ ಮುರಿದರೆ ಆತ ನೆಲಕಚ್ಚಲೇಬೇಕು. ಹಾಸಿಗೆ ಹಿಡಿಯಲೇ ಬೇಕು. ಮನುಷ್ಯ ಅಂತಲ್ಲ, ಯಾವುದೇ ಪ್ರಾಣಿಯ ಫೀಮರ್ (ಪ್ರಾಣಿಗಳಲ್ಲಿ ಹಿಂಗಾಲ ಮೂಳೆ ಎಂದುಕೊಳ್ಳಿ) ಮುರಿದರೂ, ಅವುಗಳ ಕಥೆ ಮುಗಿದಂತೆಯೇ. ಯಾಕೆಂದರೆ ಮುರಿದ ಫೀಮರ್ ತಾನಾಗಿಯೇ ಕೂಡುವುದಿಲ್ಲ. ಅದು ಉದ್ದದ ಒಂದೇ ಸಿಂಗಲ್ ಮೂಳೆಯಾದ್ದರಿಂದ ಅದಕ್ಕೆ ಗುತ್ತಿ ನೀಡಲು ಆಚೀಚಿನ ಬೇರೆ ಯಾವ ಮೂಳೆಗಳ ಹಂದರವೂ ಇಲ್ಲದ್ದರಿಂದ, ತೊಡೆ ಮೂಳೆ ಮುರಿದು ಗಾಯಗೊಂಡ ಪ್ರಾಣಿ ಸುಮ್ಮನೇ ವಾರಗಟ್ಟಲೇ ಒಂದೇ ಕಡೆ ಬಿದ್ದಿದ್ದರೂ, ಮುರಿದ ಫೀಮರ್ ಸ್ವಲ್ಪವೂ ಗುಣಮುಖವಾಗುವುದಿಲ್ಲ. ಬೇರೆ ಪ್ರಾಣಿಗಳು ಹಾಗೆ ಗಾಯಗೊಂಡ ಪ್ರಾಣಿಗೆ ಆಹಾರ ತಂದುಕೊಟ್ಟರೂ (ಆ ಸಾಧ್ಯತೆಯೂ ಕಡಿಮೆ ಅನ್ನಿ), ಗಾಯಗೊಂಡ ಪ್ರಾಣಿ ಶಾಶ್ವತವಾಗಿ ಅಂಗವಿಕಲನೇ. ಹಾಗೂ ಅಂಗವಿಕಲತೆಗೊಳಗಾದ ಪ್ರಾಣಿಗಳು, ಆ ಜೀವಲೋಕದ ನಿಯಮಗಳ ಪ್ರಕಾರ, ಸತ್ತಂತೆಯೇ ಲೆಕ್ಕ. ಕೆಲವೇ ವಾರಗಳಲ್ಲಿ ಸಾಯುತ್ತವೆ ಕೂಡಾ. ಈ ಮೂಳೆಯನ್ನು ಮನುಷ್ಯ ತಾನಾಗಿಯೇ ಎಳೆದು ಕೂರಿಸಿ ಪಟ್ಟುಹಾಕಲೂ ಸಾಧ್ಯವಿಲ್ಲ. ಹಾಕಿದರೂ ಡೊಂಕಾಗುವ ಸಾಧ್ಯತೆಯೇ ಹೆಚ್ಚು. ಹಾಗೆ ಪಟ್ಟುಹಾಕಿಕೊಂಡು ಕೂತ ಮನುಷ್ಯನೂ ಕನಿಷ್ಟ ಎರಡುಮೂರು ವಾರ ಎದ್ದು ಓಡಾಡುವಂತಿಲ್ಲ. ಅಂದಮೇಲೆ ಆಹಾರ ಸಿಗದೇ ಆತ ಸತ್ತನೆಂದೇ ಲೆಕ್ಕ.

 

ಒಬ್ಬಂಟಿಯಾಗಿದ್ದ, ಅಲೆಮಾರಿಯಾಗಿದ್ದ, ಆಗಷ್ಟೇ ಎರಡು ಕಾಲಿನಲ್ಲಿ ನಡೆಯುವಷ್ಟು ವಿಕಸನ ಹೊಂದಿದ್ದ ಮನುಷ್ಯನೆಂಬ ಜೀವಿಗೆ ಈ ರೀತಿಯ ಗಾಯಗಳಾದಾಗ ಆತ ಸತ್ತೇಹೋಗಿದ್ದಾನೆ. ಆದರೆ ಎಲ್ಲೋ 15,000 ವರ್ಷದ ಹಿಂದೆ ಒಂದು ಮ್ಯಾಜಿಕ್ ನಡೆದಿದೆ. ಈ ತರಹ ತೊಡೆಮೂಳೆ ಮುರಿದು ಗಾಯಗೊಂಡ ಮನುಷ್ಯಪ್ರಾಣಿಯೊಂದಿಗೆ, ಯಾರೋ ನಿಂತಿದ್ದಾರೆ. ಗಾಯಗೊಂಡು ಬಿದ್ದ ಆತ/ಆಕೆಯನ್ನು ನಿರ್ಲಕ್ಷಿಸಿ ಮುಂದೆ ಹೋಗದೆ ಅಲ್ಲೇ ಉಳಿದಿದ್ದಾರೆ. ಅವನಿಗೆ ಶುಶ್ರೂಷೆ ಮಾಡಿದ್ದಾರೆ. ಅವನ ಮೂಳೆಗೊಂದು ಪಟ್ಟಿಹಾಕಿ, ಅವನಿಗೆ ಕೂತಲ್ಲಿಗೇ ಕೆಲಕಾಲ ಆಹಾರ ತಂದುಕೊಟ್ಟಿದ್ದಾರೆ. ಅವನು ಮತ್ತೆ ನಡೆಯುವಂತೆ ಮಾಡಿದ್ದಾರೆ!! ಆ ಸಹಾಯದ ಹಿಂದೆ ಪ್ರೀತಿಯೋ, ಅನುಕಂಪವೋ, ತಾನೇ ಹಿಂದೊಮ್ಮೆ ಅನುಭವಿಸಿದ ನೋವಿನ ನೆನಪೋ, ತನಗೂ ಯಾರೋ ಸಹಾಯಮಾಡಿ ಆ ಸಹಾಯದಿಂದಲೇ ಅವರ ಜೀವ ಹೋದ ವಿಷಾದವೋ ಏನಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಸಹಾಯ ಮಾಡಿದ್ದಾರೆ. ಅದಾದ ಮೇಲೆ, ಮೊದಲ ಮನುಷ್ಯ, ಎರಡನೇ ಮನುಷ್ಯನಿಗೆ ಕೃತಜ್ಞತೆ ಸಲ್ಲಿಸಕ್ಕೆಂದೇ ಜೊತೆಯಾದನೋ (ಆಗಿನ್ನೂ ಕೃತಜ್ಞತೆಯೆಂಬ ಭಾವವೇ ಇತ್ತಾ ಎಂಬುದೂ ಗೊತ್ತಿಲ್ಲ), ಅಥವಾ ಒಬ್ಬರಿಗಿಂತ ಜೊತೆಗೆ ಇಬ್ಬರಿದ್ದರೆ, ನಮ್ಮ ಅಸ್ತಿತ್ವಕ್ಕೆ ಎಲ್ಲರೀತಿಯಲ್ಲೂ ಒಳ್ಳೆಯದು ಅನ್ನೋದನ್ನ ಇಬ್ಬರೂ ತಿಳಿದುಕೊಂಡರೋ ಗೊತ್ತಿಲ್ಲ. ಒಟ್ಟಿನಲ್ಲಿ ಸಂಘಜೀವನದಲ್ಲಿ ಇರುವ ಲಾಭಗಳು ಗೊತ್ತಾಗಿವೆ. ಒಟ್ಟಿನಲ್ಲಿ ಅಲ್ಲೆಲ್ಲೋ 15,000 ವರ್ಷಗಳ ಹಿಂದೆ ನಿಧಾನಕ್ಕೆ ಜನರು ಒಟ್ಟಾಗಿ ಜೀವಿಸಲು ಪ್ರಾರಂಭಿಸಿದರು. ಗುಂಪುಗಳ ವಾಸದಿಂದ ಹಾಡಿ, ಹಳ್ಳಿ ಬೆಳೆದವು. ಇದಾದ ಒಂದೆರಡು ದಶಕಗಳೊಳಗೇ ದೊಡ್ಡ ನಾಗರೀಕತೆಯ ಪರಿಕಲ್ಪನೆಗಳು ಬೆಳೆದಿರಲಿಕ್ಕೆ ಸಾಕು.

 

ನಾಗರೀಕತೆಯೊಂದು ಬೆಳೆಯುವುದು ಕೇವಲ ಸಂಸ್ಕೃತಿ, ಕಲೆ, ವಿಜ್ಞಾನದಿಂದ ಮಾತ್ರವಲ್ಲ. ಬದಲಿಗೆ ಮನುಷ್ಯ ಮನುಷ್ಯನಿಗೆ ಸಹಾಯಮಾಡುವುದರಿಂದ. ನಾವಂದುಕೊಂಡ ಕಲೆ, ವಿಜ್ಞಾನಗಳ್ಯಾವುದೂ ಇಲ್ಲದೇ ವರ್ಧಿಸಿದ ನಾಗರೀಕತೆಗಳು ಬೇಕಾದಷ್ಟಿವೆ. ಈಗಲೂ ಇವೆ ಕೂಡಾ. ಆದರೆ ಕಲೆ, ವಿಜ್ಞಾನಗಳಿಗಂಟಿಕೊಂಡ ನಾಗರೀಕತೆಗಳಲ್ಲಿಯೇ ಈ ಇನ್ನೊಬ್ಬ ಮನುಷ್ಯನಿಗೆ ಸಹಾಯ ಮಾಡುವ ಅಭ್ಯಾಸ ಕಡಿಮೆಯಾಗ್ತಾ ಇರೋದು. ತೀರಾ ಎಲ್ಲೋ ಒಂದೆರಡು ಕಡೆ ಜೈನ ಮಾರ್ವಾಡಿಗಳು ಕುಡಿಯುವ ನೀರಿನ ಕಟ್ಟೆ ಕಟ್ಟಿಸಿದ್ದು, ದಾಸೋಹ ನಡೆಸಿದ್ದು ನಾವಿದನ್ನು ನೋಡುತ್ತೀವಾದರೂ, ನಾಗರೀಕತೆಯ ಎಲ್ಲಾ ಮನುಷ್ಯರೂ ಇನ್ನೊಬ್ಬ ಮನುಷ್ಯನಿಗೆ ಸಹಾಯ ಮಾಡುತ್ತಾರೆ ಎಂಬ ನಂಬಿಕೆ ನಮ್ಮಲ್ಲಿಯೇ ಯಾರಿಗೂ ಇಲ್ಲ ಬಿಡಿ. ಸಹಾಯಕ್ಕೆ ದೊಡ್ಡ ಶ್ರೀಮಂತರಾಗಿರಬೇಕು, ಆಗ ಛತ್ರ-ಅರವಟ್ಟಿಗೆ ಕಟ್ಟಿಸಬಹುದು, ಮಜ್ಜಿಗೆ ಕೇಂದ್ರ ನಡೆಸಬಹುದು, ಕೆರೆ ಕಟ್ಟಿಸಬಹುದು, ನಮ್ಮಿಂದ ಏನಾದೀತು ಬಿಡಿ ಎಂಬ ಊಹೆಗಳು ಈಗಲೂ ನಮ್ಮಲ್ಲಿ ಇವೆ.

 

ಬ್ರಿಟನ್ನಿನ ಈ ಬಾರಿಯ ಪ್ರಯಾಣದಲ್ಲಿ ಕಂಡ ಒಂದೆರಡು ನೋಟಗಳು ಇದನ್ನು ಬರೆಯುವಂತೆ ಮಾಡಿತು. ಇದು ಬಿಳಿಯರು ಮಾಡಿದ್ದು ಅದಕ್ಕೆ ಗ್ರೇಟು ಅಂತಾ ನಾನು ಹೇಳ್ತಿಲ್ಲ. ನಾವು ಇಂತಹಾ ವಿಚಾರಗಳನ್ನು ಯೋಚಿಸಲ್ಲ ಅಂತಾ ನೆನಪಿಸ್ತಾ ಇದ್ದೀನಿ ಅಷ್ಟೇ. ರೈಲ್ವೇ ಸ್ಟೇಷನ್ನು, ಪಾರ್ಕುಗಳು ಭಾರತದಲ್ಲೂ, ಬ್ರಿಟನ್ನಿನಲ್ಲೂ ಸರ್ಕಾರೀ ಸ್ವತ್ತು. ಅಲ್ಲಿರುವುದೆಲ್ಲಾ ಸರ್ಕಾರದ್ದೇ, ಅಲ್ಲಿನ ಕೆಲಸಗಳನ್ನೆಲ್ಲಾ ಸರ್ಕಾರವೇ ಮಾಡಿಸಬೇಕು ಅಂತಾ ಅಂದುಕೊಂಡಿರುವವರು ನಮ್ಮಲ್ಲಿದ್ದಾರೆ. ಆದರೆ ಬ್ರಿಟನ್ನಿನ ರೈಲ್ವೇ ಸ್ಟೇಷನ್ನುಗಳಲ್ಲಿ, ಪಾರ್ಕುಗಳಲ್ಲಿ, ಹೈಕಿಂಗ್ ಟ್ರೈಲುಗಳಲ್ಲಿ ತೀರಾ ಸಾಮಾನ್ಯವಾಗಿ ಅಲ್ಲಲ್ಲಿ ಬೆಂಚುಗಳನ್ನು ನೋಡಬಹುದು. ಜನರಿಗೆ ಕೂರಲು ಉಪಯೋಗವಾಗುವ ಈ ಬೆಂಚುಗಳನ್ನು ಸರ್ಕಾರವೇ ಹಾಕಬೇಕೆಂದಿಲ್ಲ. ಅಲ್ಲಿನ ಜನ ತಮ್ಮವರ ನೆನಪಲ್ಲಿ ಈ ರೀತಿಯ ಬೆಂಚುಗಳನ್ನು ದಾನ ಕೊಡುವುದು ತೀರಾ ಸಾಮಾನ್ಯ. ಸಣ್ಣದೊಂದು ಸಹಾಯ, ಒಬ್ಬರ ನೆನಪಲ್ಲಿ, ಎಷ್ಟು ಚಂದ ಅಲ್ವಾ?

ಬ್ರಿಟೀಷರು ಕಳ್ಳರು, ಯೂರೋಪಿಯನ್ನರು ಕ್ರೂರಿಗಳು, ಅಮೇರಿಕನ್ನರು ವಂಚಕರು ಅಂತಾ ಮೂಗುಮುರಿಯೋದು ಬೇಡ. ಒಳ್ಳೆಯಗುಣಕ್ಕೆ ಮತ್ಸರಬೇಡ. ಸರ್ಕಾರದ್ದು ಎಂದರೆ, ಸಾರ್ವಜನಿಕ ಆಸ್ತಿಯೆಂದೂ, ಯಾವುದಾದರೂ ಪ್ರತಿಭಟನೆ ಮಾಡುವಾಗ ಸಾರ್ವಜನಿಕ ಆಸ್ತಿಗೇ ಹಾನಿಮಾಡುವ ನಾಗರೀಕತೆಗೆ ಎಷ್ಟು ವರ್ಷದ ಮಹಾನ್ ಇತಿಹಾಸವಿದ್ದೇನು ಪ್ರಯೋಜನ ಅಲ್ವಾ? ಈ ರೀತಿಯ ಸಣ್ಣ ಚಂದದ ಆಲೋಚನೆಗಳು ನಮಗ್ಯಾಕೆ ಬರಲ್ಲ? ನಮ್ಮ ಬೀದಿಯ ಕೊನೆಯಲ್ಲಿರುವ ಪಾರ್ಕಿಗೆ ಬೆಂಚು ಕೂರಿಸುವ ಕೆಲಸವೂ ಸರ್ಕಾರದ್ದೇ ಅಂತಾ ಯಾಕೆ ನಾವು ಅಂದುಕೊಳ್ತೇವೆ? ಹಾಗೆಯೇ ಹೊರಗಡೆ ಕಂಡ ನಮ್ಮದಲ್ಲದ ಎಲ್ಲವನ್ನೂ ಹಾಳುಮಾಡುವಾಗ ನಮಗೆ ಒಂದಿಂಚೂ ಬೇಸರವಾಗದಿರೋದು ಯಾಕೆ?

 

ಅದರ ಬದಲಿಗೆ ಸರ್ಕಾರೀ ಜಾಗದಲ್ಲೂ ನಾನು ಬೇರೆಯವರಿಗೆ ಸಹಾಯಮಾಡಬಹುದು ಎಂಬ ಈ ರೀತಿಯ ಆರ್ದ್ರತೆಯನ್ನು ಉಳಿಸಿಕೊಂಡ ಜೀವಗಳಿಗೆ ಒಂದು ಧನ್ಯವಾದ!

 

ಇಂತಹದೊಂದು ಚಿಂತನೆಗೆ ಹಚ್ಚಿದ್ದು ಟ್ರೆಕ್ ಒಂದರಲ್ಲಿ ಸಿಕ್ಕಿದ್ದ ಈ ಎರಡು ಬೆಂಚುಗಳು. ಇವನ್ನು ನೋಡಲಿಕ್ಕೆ ಕಾರಣವಾದದ್ದು ಗೆಳತಿ ವೈಶಾಲಿ ದಾಮ್ಲೆಯವರ ವಾಕಿಂಗ್ ಹುಚ್ಚು. ಚಂದದ ಜಾಗಗಳನ್ನೂ ತೋರಿಸಿ, ನಾವು ಒಂದು ರೌಂಡ್ ಹಾಕುವ ಮುಂಚೆಯೇ ಎರಡನೇ ರೌಂಡ್ ಹಾಕುತ್ತಾ ನಮ್ಮನ್ನು ಓವರ್ಟೇಕ್ ಮಾಡಿ, ಇನ್ನೂ ಇಲ್ಲೇ ಇದ್ದೀರಾ ಅಂತಾ ಆರೇಳು ಕಿಲೋಮೀಟರ್ ಓಡಾಡಿಸಿದರು. ಜೊತೆಗೇ ಮನೆಯಲ್ಲಿ ಚಂದದ ಚಕ್ಕುಲಿ, ಬೇಸನ್ ಲಾಡು, ಆಮ್ರಖಂಡಯುಕ್ತ ಆತಿಥ್ಯವೂ ಕೊಟ್ಟರು. ಅವರ ಗಾರ್ಡನ್ನಿನ್ನ ಗುಲಾಬಿಗಳಂತೆಯೇ ಸದಾ ನಗ್ತಾ ಅವರ ಮನೆಯಲ್ಲಿ ನಮ್ಮ ಎರಡು ದಿನಗಳ ನೆನಪನ್ನೂ ಹಸಿರಾಗಿಸಿದರು. ಅವರಿಗೂ ಧನ್ಯವಾದ !

0 comments on “ಸಹಾಯಹಸ್ತ ಚಾಚಲು ಸರ್ಕಾರವೇ ಆಗಬೇಕಿಲ್ಲ – London Dairies

Leave a Reply

Your email address will not be published. Required fields are marked *