Wednesday, 28 February, 2024

ಮೊಸರನ್ನದ ಆನಂದಕ್ಕೂ, ಆರ್ಗಾನಿಕ್ ಕೆಮೆಸ್ಟ್ರಿಗೂ ಅದೇನು ಅನುಬಂಧ!

Share post

ಎಲ್ಲರಿಗೂ, ಎಲ್ಲಾ ಕಾಲಕ್ಕೂ ಮತ್ತು ಎಲ್ಲಾ ವಯೋಮಾನದವರಿಗೂ ಸಲ್ಲುವ ಅತ್ಯಂತ ಸರಳ ಆಹಾರವೆಂದರೆ ಮೊಸರನ್ನ. ನನಗಂತೂ ಅದೆಷ್ಟೇ ರುಚಿಕಟ್ಟಾದ, ಹತ್ತಾರು ಭಕ್ಷ್ಯಗಳಿರುವ ಭೂರಿ ಭೋಜನ ಮಾಡಿದರೂ ಕೊನೆಗೆ ಒಂದೆರಡು ತುತ್ತು ಮೊಸರನ್ನ ತಿಂದರೇನೇ ಆ ಊಟ ಸಂಪನ್ನವಾಗೋದು. ಈ ತೃಪ್ತಿ ಬಣ್ಣಿಸೋಕೆ ಆಗಲ್ಲ.

 

ಟ್ರಿಪ್ಟೋಫ್ಯಾನ್ ಅನ್ನೋದೊಂದು ಅಮೈನೋ ಆಸಿಡ್ ನಮ್ಮ ದೇಹದಲ್ಲಿ ಸಾರಜನಕದ ಸಮತೋಲನವನ್ನು ಕಾಪಾಡುತ್ತೆ. ಸಣ್ಣ ಮಕ್ಕಳ ಬೆಳವಣಿಗೆಗೂ ತುಂಬಾ ಸಹಕಾರಿ. ನಿಯಾಸಿನ್ (ಅಂದರೆ ವಿಟಮಿನ್ ಬಿ3) ದೇಹದಲ್ಲಿ ತಯಾರಾಗೋಕೆ ಟ್ರಿಪ್ಟೋಫ್ಯಾನ್ ಬೇಕು. ನಿಯಾಸಿನ್ ಇದ್ದರೇನೇ ನಮ್ಮ ದೇಹ ಸೆರೋಟೋನಿನ್ ಎಂಬ ನ್ಯೂರೋಟ್ರಾನ್ಸ್ಮಿಟರ್ (ನಿಮ್ಮ ನರ ಕೋಶಗಳ ನಡುವೆ ಸಂಕೇತಗಳನ್ನು ಕಳುಹಿಸುವ ರಾಸಾಯನಿಕ ಪದಾರ್ಥ) ಅನ್ನು ತಯಾರಿಸಲು ಸಾಧ್ಯ. ಸೆರೋಟೋನಿನ್ ಏನು ಮಾಡುತ್ತೆ? ಅದು ನಿಮ್ಮ ಖಿನ್ನತೆಯನ್ನು ಕಡಿಮೆಮಾಡುತ್ತದೆ, ಆತಂಕವನ್ನು ನಿಯಂತ್ರಿಸುತ್ತದೆ, ಗಾಯಗಳನ್ನು ಗುಣಪಡಿಸುತ್ತದೆ ಹಾಗೂ ಮೂಳೆ ಆರೋಗ್ಯವನ್ನು ಕಾಪಾಡುತ್ತದೆ.

 

ವಾಪಾಸ್ ಟ್ರಿಪ್ಟೋಫ್ಯಾನ್ ವಿಷಯಕ್ಕೆ ಬರೋಣ. ಇದು ದೇಹಕ್ಕೆ ಅವಶ್ಯಕವಾದ ಅಮೈನೋ ಆಸಿಡ್. ಅಂದರೆ ನಮ್ಮ ದೇಹದಲ್ಲಿ ಇದು ತಯಾರಾಗೋದಿಲ್ಲ. ಇದು ಎಲ್ಲಿ ಸಿಗುತ್ತೆ? ಪ್ರೋಟೀನ್ ಹೆಚ್ಚಾಗಿರುವ ಎಲ್ಲಾ ಆಹಾರಪದಾರ್ಥದಲ್ಲೂ ಇರುತ್ತೆ. ಅಂದರೆ ಕೋಳಿ ಮಾಂಸ, ಮೊಟ್ಟೆ, ಟರ್ಕಿ ಮಾಂಸ, ಹಾಲು, ಮೀನು, ಶೇಂಗಾಬೀಜ, ಸೋಯಾ ಮುಂತಾದವುಗಳಲ್ಲಿ ಯಥೇಚ್ಛವಾಗಿ ದೊರೆಯುತ್ತದೆ. ಜೊತೆಗೇ ಕುಂಬಳ, ಎಳ್ಳಿನಬೀಜದಲ್ಲದೇ ಚಾಕಲೇಟಿನ ಮೂಲಪದಾರ್ಥವಾದ ಕೋಕೋವಾದಲ್ಲೂ ಸಿಗುತ್ತದೆ. ಟ್ರಿಪ್ಟೋಫ್ಯಾನ್ ಕೂಡಾ ಸೆರೋಟೊನಿನ್ ಮಾಡುವ ಎಲ್ಲಾ ಕೆಲಸಗಳನ್ನೂ ಮಾಡುತ್ತೆ. ಜೊತೆಗೇ ಒಳ್ಳೆಯ ನಿದ್ದೆಗೂ ದಾರಿಮಾಡಿಕೊಡುತ್ತೆ.

 

ಇಷ್ಟೆಲ್ಲಾ ಯಾಕೆ (ಕೊ)ಬರೆದದ್ದು ಅಂದ್ರೆ, ಇತ್ತೀಚೆಗೆ ವಾಟ್ಸಾಪಿನಲ್ಲಿ ಒಂದು ಮೆಸೇಜ್ ಹರಿದಾಡುತ್ತಿತ್ತು. ಇದೇ ಮೊಸರನ್ನದ ಉದಾಹರಣೆ ಕೊಟ್ಟು, “ಇದರಲ್ಲಿ ಟ್ರಿಪ್ಟೋಫ್ಯಾನ್ ಇರುತ್ತೆ. ಟ್ರಿಪ್ಟೋಫ್ಯಾನ್ ಅನ್ನೋ ಪದ ಹುಟ್ಟಿದ್ದು ಸಂಸ್ಕೃತದ ‘ತೃಪ್ತಿ’ ಅನ್ನೋ ಪದದಿಂದ. ಮೊಸರನ್ನ ತಿಂದಾಗ ಬರುವ ತೃಪ್ತಿಯೇ, ಈ ಹೆಸರಿಗೆ ಮೂಲ” ಅಂತಾ ಆ ಮೆಸೇಜಿನಲ್ಲಿತ್ತು. ಮೊಸರನ್ನ ತಿಂದಾಗ ತೃಪ್ತಿ ಸಿಗೋದು ಹೌದು. ಆದರೆ ಆ ತೃಪ್ತಿಯೇ ಟ್ರಿಪ್ಟೋಫ್ಯಾನಿನ ಹೆಸರಿಗೆ ಮೂಲ ಅನ್ನೋದು ಸತ್ಯವಲ್ಲ. ನಾನು ಮೂಲತಃ ಹೊಟ್ಟೆಬಾಕ. ನನ್ನ ಮನಸ್ಸನ್ನು ಪ್ರವೇಶಿಸಲು ಹೊಟ್ಟೆಯ ಮೂಲಕ ಬಾಗಿಲಲ್ಲ ಹೆದ್ದಾರಿಯೇ ಇದೆ. ಅದರಲ್ಲೂ ಭಾರತೀಯ ಪಾಕಪದ್ಧತಿಯ ಬಗ್ಗೆ ನನಗೆ ಬಹಳ ಹೆಮ್ಮೆ ಹಾಗೂ ವಿಶೇಷ ಅಭಿಮಾನವಿದೆ. ಹಾಗಂತ ಅಸತ್ಯಗಳನ್ನು ಒಪ್ಪಿಕೊಳ್ಳುವುದು ಬೇಡ.

ಭಾರತಕ್ಕೆ ಹೆಗ್ಗಳಿಕೆ ಸಿಗಲಿಲ್ಲ ಅಂತಾ ಬೇಜಾರು ಮಾಡ್ಕೋಬೇಡಿ. ಇನ್ನೊಂದು ವಿಷಯ ಕೇಳಿ, ಇಲ್ಲಿರೋ ಭಾರತದ ಕನೆಕ್ಷನ್ನು ಕೇಳಿ ನಿಮಗೆ ಖುಷಿಯಾಗಬಹುದು. ಚಾಕಲೇಟು ತಿಂದಾಗ ಅಥವಾ ಗಾಂಜಾ ಸೇವಿಸಿದಾಗ ದೇಹಕ್ಕೆ ಒಂಥರಾ ಆನಂದ ಸಿಗುತ್ತೆ ಅನ್ನೋದು ನೀವು ಅನುಭವಿಸಿ ಅಥವಾ ಕೇಳಿ ತಿಳಿದಿರಬಹುದು. ಈ ಎಫೆಕ್ಟಿಗೆ ಕಾರಣವೇನು ಗೊತ್ತಾ? ಚಾಕಲೇಟು, ಗಾಂಜಾ, ಅಫೀಮು, (ಜೊತೆಗೇ ಮಾರ್ಫೀನ್, ಗಸಗಸೆ, ಹುರಿದ ತಿಂಡಿಗಳೂ ಸಹಾ) ಮೆದುಳಿನಲ್ಲಿ ಎನ್- ಅರಾಕಿಡೊನೋಯ್ಲೀಥನೋಲಮೈನ್ (N-arachidonoylethanolamine, ಸಣ್ಣದಾಗಿ AEA ಎಂದು ಕರೆಯಲ್ಪಡುವ) ಎಂಬ ನ್ಯೂರೋಟ್ರಾನ್ಸ್ಮಿಟರನ್ನು ಉತ್ಪಾದಿಸುತ್ತವೆ. ಈ AEA ಏನು ಮಾಡುತ್ತೆ. ನಿಮ್ಮ ಮೆದುಳಿನಲ್ಲಿ ಸಂತೋಷ, ಸುಖದ ಭಾವನೆಯನ್ನು ಉತ್ತೇಜಿಸುವ ಜಾಗಗಳಿಗೆ ಚೆನ್ನಾಗಿ ಕಚಗುಳಿಯುಡುತ್ತದೆ. ನೀವು ಆನಂದದಲ್ಲಿ ತೇಲಾಡುತ್ತಿರುವ ಭಾವನೆಯನ್ನು ಕೊಡುತ್ತದೆ. ಈ AEAಗೆ ವಿಜ್ಞಾನಿಗಳು ಕೊಟ್ಟಹೆಸರೇನು ಗೊತ್ತಾ? “ಆನಂದಮೈನ್”!! ಈ ಹೆಸರು/ಪದದ ಮೂಲವೇನೆಂದು ನಾನು ಹೇಳುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ. ಕೆಲವುಸಲ ಚಾಕಲೇಟು ಮತ್ತಿತರ ಉತ್ತೇಜಕಗಳನ್ನು ಸೇವಿಸದೆಯೂ ದೇಹ ಆನಂದಮೈಡ್ ಅನ್ನು ಉತ್ಪಾದಿಸುತ್ತದೆ. ದೈಹಿಕ ವ್ಯಾಯಾಮ ಮುಗಿಸಿದಾಗ (ಒಳ್ಳೆಯದೊಂದು ಜಿಮ್ ಸೆಶನ್ ಮುಗಿಸಿದಾಗ, ಮ್ಯಾರಾಥಾನ್ ಓಡಿ ಮುಗಿಸಿದಾಗ ಅಥವಾ ಒಂದೊಳ್ಳೆ ಸೈಕಲ್ ರೈಡ್ ಮಾಡಿದಾಗ), ಅಥವಾ ನಿಮ್ಮ ನೆಚ್ಚಿನ ಸ್ನೇಹಿತರೊಂದಿಗೆ ಒಂದೊಳ್ಳೆ ವಿಷಯದ ಬಗ್ಗೆ ಉತ್ತಮ ಚರ್ಚೆ ಮಾಡಿದಾಗಲೂ ನಿಮ್ಮ ಮೆದುಳು ಆನಂದಮೈಡ್ ಅನ್ನು ಉತ್ಪಾದಿಸುತ್ತದೆ. ನಿಮಗೆ “ಇವತ್ತೊಂದು ಸಾರ್ಥಕ ದಿನ” ಅನ್ನೋ ಫೀಲಿಂಗ್ ಬರೋಕೆ ಕಾರಣವಾಗುತ್ತದೆ.

ಆನಂದಮೈನ್

ಮೆದುಳಿನಲ್ಲಿ ಆನಂದದ ಪರಿಣಾಮವುಂಟು ಮಾಡುವ ಕೊಬ್ಬಿನೆಣ್ಣೆಯಂಶಕ್ಕೂ, ಸಂಸ್ಕೃತಕ್ಕೂ ಇರುವ ಕನೆಕ್ಷನ್ ನಿಮಗೆ ಗೊತ್ತಿತ್ತೇ? ಚಾಕಲೇಟಿರಲಿ, ಮೊಸರಿರಲಿ….ಚೆನ್ನಾಗಿ ದೇಹಕ್ಕೆ ಅಗತ್ಯವಿದ್ದಷ್ಟು ತಿನ್ನಿ. ಟ್ರಿಪ್ಟೋಫ್ಯಾನ್ ನಿಮಗೆ ತೃಪ್ತಿಯನ್ನೂ ಕೊಡಲಿ. ಆನಂದಮೈಡ್ ನಿಮಗೆ ಆನಂದವನ್ನೂ ಕೊಡಲಿ 🙂

 

ಕೊಸರು: ಆನಂದಮೈಡ್’ನಂತದ್ದೇ ಪರಿಣಾಮಗಣನ್ನು ಉತ್ಪಾದಿಸಬಲ್ಲ ಇನ್ನೊಂದು ಬಯೋಕೆಮಿಕಲ್ ಇದೆ. ಅದರ ಹೆಸರು…ವಿರೋಧಮೈನ್!! ಓ-ಅರಾಕಿಡೊನೋಯ್ಲೀಥನೋಲಮೈನ್ (O-arachidonoyl ethanolamine; O-AEA) ಎಂಬ ರಾಸಾಯನಿಕ ಹೆಸರಿದ್ದರೂ, ಪ್ರೀತಿಯಿಂದ ವಿರೋಧಮೈನ್ ಎಂದು ಕರೆಸಿಕೊಳ್ಳುವ ಇದರ ಹೆಸರೂ ಸಹ ಆನಂದಮೈಡ್’ನಂತೆಯೇ ಸಂಸ್ಕೃತ ಮೂಲದಿಂದ ಬಂದ ಪದ. ಹೆಸರಲ್ಲಿ ವಿರೋಧವಿದೆಯೆಂದ ಮಾತ್ರಕ್ಕೆ, ಇದೇನೂ ಆನಂದಮೈಡ್’ಗೆ ವಿರುದ್ಧವಾಗಿ ಕೆಲಸಮಾಡುವುದಿಲ್ಲ. ಬದಲಿಗೆ ಅದರಂತೆಯೇ ಕೆಲಸ ಮಾಡುತ್ತದೆ. ಹೆಸರಲ್ಲೆ ವಿರೋಧವಿರುವುದೇಕೆಂದರೆ, ಇದರ ಅಣ್ವಿಕ ರಚನೆ ಆನಂದಮೈಡ್’ಗೆ ಸಂಪೂರ್ಣ ಉಲ್ಟಾ! ತೀರಾ, ಅಂದರೆ ಅತೀ ತೀರಾಸಾಮಾನ್ಯ ಶಬ್ದಗಳಲ್ಲಿ ವಿವರಿಸಬೇಕೆಂದರೆ ಆನಂದಮೈಡ್ ಬೇರೆ ಪದಾರ್ಥಗಳೊಂದಿಗೆ ರಾಸಾಯನಿಕ ಬಂಧಗಳನ್ನು ರಚಿಸಿಕೊಳ್ಳುವಾಗ ಅವುಗಳ ಎಡಕ್ಕೆ ಮಾತ್ರ ಅಂಟಿಕೊಳ್ಳುತ್ತದೆ. ಅಂದರೆ  ವಿರೋಧಮೈನ್ ಬಲಕ್ಕೆ ಅಂಟಿಕೊಳ್ಳುತ್ತದೆ ಅಷ್ಟೇ.

 

(ವಿ.ಸೂ: ಈ ವಿವರಣೆ ಕೇವಲ 2-ಆಯಾಮದ ಜಗತ್ತಿಗೆ ಮಾತ್ರ ಸೀಮಿತ. ಆದ್ದರಿಂದ ಇದನ್ನು ಕಾರ್ಯರೂಪದಲ್ಲಿ ‘ಎಡ’, ‘ಬಲ’ ಅಂತೆಲ್ಲಾ ಊಹಿಸಿಕೊಳ್ಳಬೇಡಿ).

ವಿರೋಧಮೈನ್

0 comments on “ಮೊಸರನ್ನದ ಆನಂದಕ್ಕೂ, ಆರ್ಗಾನಿಕ್ ಕೆಮೆಸ್ಟ್ರಿಗೂ ಅದೇನು ಅನುಬಂಧ!

Leave a Reply

Your email address will not be published. Required fields are marked *