Tuesday, 27 February, 2024

ಗ್ರಾಹಕಸೇವೆಯ ಸಿರಿವಂತಿಕೆ – ಸಿಂಗಪೂರ್ ಏರ್ಲೈನ್ಸ್

Share post

ನನ್ನ ಮಗಳು ‘ಕುಹೂ’ಗೆ ಈಗ ಜುಲೈ ಆಗಸ್ಟಿನಲ್ಲಿ ಶಾಲೆಗೆ ರಜವಾದ್ದರಿಂದ, ಸಧ್ಯಕ್ಕೆ ಕುಟುಂಬದೊಂದಿಗೆ ತಿರುಗಾಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷದವರೆಗೂ ಅವಳಿಗೆ ಶಾಲೆಯಿಂದ ರಜಕೇಳಬೇಕಾಗಿದ್ದರೆ ಹೆಚ್ಚಿನ ತಲೆಬಿಸಿಯೇನೂ ಇರುತ್ತಿರಲಿಲ್ಲ. ಯಾವಾಗ, ಎಷ್ಟು ದಿನ ಬೇಕಾದರೂ ಕಾಲಿಗೆ ಚಕ್ರ ಕಟ್ಟಬಹುದಾಗಿತ್ತು. ಈ ವರ್ಷದಿಂದ ಹಾಗಿಲ್ಲ, ವರ್ಷಕ್ಕಿಷ್ಟು ದಿನ ಶಾಲೆಗೆ ಬರಲೇಬೇಕೆಂಬ ನಿಯಮವಿರುವುದರಿಂದ ಹೆಚ್ಚಿನ ಪ್ರವಾಸ ಮತ್ತು ಪ್ರಯಾಣಗಳನ್ನು ಅವಳ ಜುಲೈ ಆಗಸ್ಟಿನ ಬೇಸಿಗೆ ರಜದಲ್ಲಿಯೇ ಮುಗಿಸಬೇಕು. ಇಲ್ಲವಾದಲ್ಲಿ ಡಿಸೆಂಬರಿನಲ್ಲಿ ಚಳಿಗಾಲದ ರಜೆ ಬಂದಾಗ ಹೋಗಬೇಕು. ಈ ಬಾರಿ ಆಗಸ್ಟಿನಲ್ಲಿ ಅಪ್ಪ-ಅಮ್ಮನಿಗೂ ಯಾವುದಾದರೂ ವಿಶಿಷ್ಟವಾದ ಜಾಗಕ್ಕೆ ಹೋಗಬೇಕೆಂಬ ಆಸೆಯಿದ್ದುದರಿಂದ ಅವರನ್ನೂ ಕರೆದುಕೊಂಡು ಜಪಾನ್’ಗೆ ಬಂದಿದ್ದೇನೆ. ಸಾಧ್ಯವಿದ್ದರೆ, ಜೀವನದಲ್ಲೊಮ್ಮೆ ಭೇಟಿನೀಡಲೇಬೇಕಾದ ವಿಶಿಷ್ಟವಾದ ದೇಶ ಜಪಾನ್. ಇರುವ ಸಂಪನ್ಮೂಲಗಳನ್ನೇ ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡು, ತಂತ್ರಜ್ಞಾನವನ್ನು ಅತ್ಯುತ್ಕೃಷ್ಟ ರೀತಿಯಲ್ಲಿ ದುಡಿಸಿಕೊಂಡು, ತಮ್ಮ ಮಾತೃಭಾಷೆಯನ್ನು ಅಪ್ರತಿಮವಾಗಿ ಪ್ರೀತಿಸುತ್ತಾ, ದೇಶವನ್ನು ಅಪರಿಮಿತ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಜಪಾನೀಯರ ಛಾತಿ ಖಂಡಿತಾ ನಿಮ್ಮ ಮೂಗಿನ ಮೇಲೆ ಬೆರಳಿಡಿಸುತ್ತದೆ.

 

ಈ ಲೇಖನ ಜಪಾನ್ ಬಗ್ಗೆ ಅಲ್ಲ. ಮುಂದಿನ ಎರಡು ಮೂರು ವಾರಗಳಲ್ಲಿ ಅದರ ಬಗ್ಗೆ ಬರೆಯುತ್ತೇನೆ. ಈ ಲೇಖನ ಬರೆಯಲು ನನಗೆ ಪ್ರೇರಣೆಯಾಗಿದ್ದು, ನನ್ನನ್ನು ಟೋಕಿಯೋಗೆ ತಂದಿಳಿಸಿದ ಸಿಂಗಪೂರ್ ಏರ್ಲೈನ್ಸ್ ಮತ್ತವರ ಗ್ರಾಹಕ ಸೇವೆಯ ಮಟ್ಟ. ಬೆಂಗಳೂರಿನಿಂದ ಟೋಕಿಯೋವನ್ನು ಒಂಬತ್ತು ಗಂಟೆಯಲ್ಲಿ ತಲುಪಲಿಕ್ಕೆ ಜಪಾನ್ ಏರ್ವೇಸ್’ನವರ ನೇರ ವಿಮಾನವಿದ್ದರೂ ಕೂಡ, ನಾನು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಂಡು ನೇರ ವಿಮಾನದ 60% ಬೆಲೆಯಲ್ಲಿ ಕರೆದುಕೊಂಡು ಹೋಗುವ ಆಪ್ಷನ್ನುಗಳಿಗಾಗಿ ಹುಡುಕಾಡಿದೆ. ಬ್ಯಾಂಕಾಕ್ ಮೂಲಕ ಬರುವ ಥಾಯ್ ಏರ್ವೇಸ್, ಸಿಂಗಪೂರಿನ ಮೂಲಕ ಬರುವ ಸಿಂಗಪೂರ್ ಏರ್ಲೈನ್ಸ್, ಹಾಂಕಾಂಗ್ ಮೂಲಕ ಬರುವ ಕ್ಯಾಥೇ ಪೆಸಿಫಿಕ್, ಕೌಲಾ-ಲುಂಪುರ್ ಮೂಲಕ ಬರುವ ಮಲೇಷಿಯನ್ ಏರ್ಲೈನ್ಸ್ ಇವೆಲ್ಲವೂ ತುಂಬಾ ಒಳ್ಳೆಯ ಪರ್ಯಾಯಗಳು. ಇಲ್ಲಿಯವರೆಗೂ ಸಿಂಗಪೂರ್ ಏರ್ಲೈನ್ಸ್’ನವರ ಸೇವೆಯನ್ನು ಅನುಭವಿಸಿರಲಿಲ್ಲವಾದ್ದರಿಂದ ಅದನ್ನೇ ಆಯ್ಕೆ ಮಾಡಿದೆ. ಒಳ್ಳೆಯ ಆಯ್ಕೆಯನ್ನೇ ಮಾಡಿದೆ ಎಂಬ ನಂಬಿಕೆಗೆ ಸ್ವಲ್ಪವೂ ಚ್ಯುತಿಬರದಂತಾ ಸೇವೆಯ ಭಾಗವೂ ಆದೆ. ಜಗತ್ತಿನ ಅತ್ಯುತ್ತಮ ಮೂರು ಏರ್ಲೈನ್ಸ್’ಗಳಾದ ಎಮೆರೇಟ್ಸ್, ಎತಿಹಾದ್ ಮತ್ತು ಕತಾರ್ ಏರ್ವೇಸ್ ಸೇವಯನ್ನು ಅನುಭಸಿದವರಿಗೆ ಬೇರೆಲ್ಲವೂ ಸ್ವಲ್ಪ ಸಪ್ಪೆಯಾಗಿ ಕಾಣುವುದು ಸಹಜವೇ. ಆದರೂ ನನ್ನನ್ನು ಅಚ್ಚರಿಪಡಿಸುವಂತಾ ಸೇವೆ ಕೊಟ್ಟ ಸಿಂಗಪೂರ್ ಏರ್ಲೈನ್ಸ್, ತನ್ನ ತೆಕ್ಕೆಗೊಬ್ಬ ಸಂತುಷ್ಟ ಗ್ರಾಹಕನನ್ನೂ ಪಡೆಯಿತು.

 

ಟಿಕೆಟ್ ಖರೀದಿಸಿದ ತಕ್ಷಣವೇ ನನಗೆ ಮೊದಲಿನೆಯದಾಗಿ ಅಚ್ಚರಿಮೂಡಿಸಿದ ಮೊದಲ ಅಂಶವೆಂದರೆ, ಈ ಏರ್ಲೈನ್ಸ್’ನವರ ಎಲ್ಲಾ ವಿಮಾನಗಳಲ್ಲೂ ಉಚಿತವಾಗಿ ಸಿಗುವ ವೈ-ಫೈ ಸೇವೆ. ಎಮಿರೇಟ್ಸ್ ಮತ್ತು ಕತಾರ್ ಬಿಟ್ಟರೆ ಬೇರಾವ ವಿಮಾನಯಾನ ಸಂಸ್ಥೆಗಳಲ್ಲೂ ನಿಮಗೆ ವೈ-ಫೈ ಸಿಗುವುದಿಲ್ಲ. ಸಿಕ್ಕರೂ ಆಯ್ದ ರೂಟಿನಲ್ಲಷ್ಟೇ. ಅದರಲ್ಲೂ ಹೆಚ್ಚಾಗಿ ಬ್ಯುಸಿನೆಸ್ ಮತ್ತು ಫಸ್ಟ್ ಕ್ಲಾಸ್’ಗಳಲ್ಲಿ ಮಾತ್ರ. ಎಮಿರೆಟ್ಸ್ ಮತ್ತು ಕತಾರಿನವರೂ ಅರ್ಧ ಅಥವಾ ಒಂದು ಗಂಟೆಗಷ್ಟೇ ಉಚಿತವಾಗಿ ಈ ಸೇವೆಯನ್ನು ಕೊಡುವುದು. ಆನಂತರವೂ ಈ ಸೇವೆ ಬೇಕೆಂದರೆ ಹಣ ಕಕ್ಕಿಯೇ ಪಡೆಯಬೇಕು. ಸಿಂಗಪೂರ್ ಏರ್ಲೈನ್ಸಿನಲ್ಲಿ ಹಾಗಿಲ್ಲ. ಮೊದಲ ಇಪ್ಪತ್ತು ನಿಮಿಷ ಹಾಗೂ ಕೊನೆಯ ಇಪ್ಪತ್ತು ನಿಮಿಷ ಬಿಟ್ಟು, ದಾರಿಯುದ್ದಕ್ಕೂ ನಿಮಗೆ ಉಚಿತ ಮತ್ತು ಉತ್ತಮವೇಗದ ವೈ-ಫೈ! ಇದಕ್ಕಾಗಿ ಅವರ ಲಾಯಲ್ಟಿ ಪ್ರೋಗ್ರಾಮಿನ ಸದಸ್ಯತ್ವ ಪಡೆದರಾಯ್ತು, ಅದೂ ಉಚಿತವಾಗಿ. ನಿಮ್ಮದೊಂದು ಈ-ಮೈಲ್ ಐಡಿ, ಹುಟ್ಟಿದ ದಿನಾಂಕ ಎರಡರ ಬದಲಾಗಿ ನಿಮಗೆ ವೈ-ಫೈ!!

ಎರಡನೆಯದಾಗಿ ಅಚ್ಚರಿಮೂಡಿಸಿದ್ದು, ವಿಮಾನ ಹೊರಡುವ ಮುನ್ನ ಅವರು ತೋರಿಸುವ ಸುರಕ್ಷತಾ ಕ್ರಮಗಳ ಬಗೆಗಿನ ವಿಡಿಯೋ. ಇದೇ ನನ್ನ ಪ್ರಯಾಣದ ಹೈಲೈಟ್ ಮತ್ತು ಈ ಲೇಖನದ ಪ್ರೇರಣೆ. ಬಹಳಷ್ಟು ವಿಮಾನಗಳಲ್ಲಿ ಪ್ರಯಾಣ ಮಾಡಿದ, ಬೇರೆಬೇರೆ ರೀತಿಯ ಸೇಫ್ಟಿ ವಿಡಿಯೋಗಳನ್ನು ನೋಡಿದ ಯಾರಿಗಾದರೂ ಸಿಂಗಪೂರಿನವರ ವಿಡಿಯೋ “ವಾವ್” ಎನಿಸದೇ ಇರಲಾರದು. ಸೇಫ್ಟೀ ವಿಡಿಯೋಗಳೆಂದರೆ “ಈ ವಿಮಾನದಲ್ಲಿ ಇಷ್ಟು ಬಾಗಿಲುಗಳಿವೆ, ಇಲ್ಲಿಲ್ಲಿವೆ, ಆಕ್ಸಿಜನ್ ಮಾಸ್ಕ್ ಬರುತ್ತೆ, ಹಾಕ್ಕೊಳ್ಳಿ, ವಿಮಾನ ನೀರಲ್ಲಿ ಬಿದ್ರೆ ಇದು ಮಾಡಿ” ಎಂಬ, ಮುಖ್ಯವಾದರೂ ಕೂಡಾ ಸ್ವಲ್ಪ ಬೋರು ಹೊಡೆಸುವ ವಿಷಯಗಳನ್ನು ಹೇಳುವ, ವಿಡಿಯೋಗಳೆಂಬ ನಿರೀಕ್ಷೆಯಿರುತ್ತೆ. ಹೌದು, ವಿಷಯ ಅದೇ ಆದರೂ ಅದನ್ನು ಹೇಳುವ ರೀತಿ ಭಿನ್ನವಾಗಿರಬಹುದಲ್ಲ. ಇಲ್ಲಿ ಆಗಿರುವುದೂ ಅದೇ. ಸಿಂಗಪೂರ್ ಏರ್ಲೈನಿನವರು ಈ ಸಂದೇಶಗಳನ್ನು ಹೇಳುವಾಗ, ಹಿನ್ನೆಲೆಯಲ್ಲಿ ವಿಮಾನವನ್ನಾಗಲೀ ಅದರ ಚಿತ್ರವನ್ನಾಗಲೀ ಬಳಸದೇ, ಸಿಂಗಪೂರ್ ನಗರದ ಬೇರೆ ಬೇರೆ ಭಾಗಗಳನ್ನು ಬಳಸಿಕೊಂಡು, ಗಗನಸಖಿಯರನ್ನು ಅಲ್ಲಿ ನಿಲ್ಲಿಸಿ, ಆ ಜಾಗದ ಹೆಸರನ್ನೂ ತೋರಿಸುತ್ತಾ, ಆ ಸಂದೇಶವನ್ನು ಕೊಡುತ್ತಾರೆ. ತನ್ನೂರಿಗೆ ಬರುವ ಜನರಿಗೆ, ತನ್ನ ಮೊದಲ ಸಂದೇಶದ ಮೂಲಕ, ಅದೂ ಸೇಫ್ಟೀ ಬ್ರೀಫಿಂಗಿನಂತಹಾ ಅತೀ ಸಾಮಾನ್ಯ ವಿಚಾರದ ಮೂಲಕವೇ ನಗರದ ಹೆಬ್ಬಾಗಿಲನ್ನು ತೆರೆದು ಸ್ವಾಗತ ಕೋರುವ ಆತಿಥಿ ಸತ್ಕಾರ ನಿಜಕ್ಕೂ ಮೆಚ್ಚುವಂತದ್ದು. ಇಡೀ ವಿಡಿಯೋ ನೋಡಿ ಮುಗಿಯುವಷ್ಟರಲ್ಲಿ ನಿಮಗೆ ಸುರಕ್ಷತಾ ಕ್ರಮಗಳ ಜೊತೆಗೆ, ಸಿಂಗಪೂರಿನಲ್ಲಿ ನೀವು ಏನೇನು ನೋಡಬೇಕು, ಎಲ್ಲೆಲ್ಲಿಗೆ ಹೋಗಬೇಕೆಂಬುದರ ಒಂದು ಚಿತ್ರಣವೂ ನಿಮಗೆ ಸಿಕ್ಕಿರುತ್ತದೆ. ನೀವು ಈ ಟ್ರಿಪ್ಪಿಗೆ ಪ್ಲಾನ್ ಮಾಡಿಯೇ ಹೊರಟಿದ್ದರೂ, ಅವರು ಅದನ್ನು ಹೇಳುವ ರೀತಿಯಲ್ಲೇ ನಿಮ್ಮ ಪಟ್ಟಿಗೆ ಇನ್ನೊಂದೆರಡು ಜಾಗಗಳ ಹೆಸರು ಸೇರಿರುತ್ತವೆ.

 

ಉದಾಹರಣೆಗೆ, “ನಿಮ್ಮ ಬಳಿಯಿರುವ ಎಲ್ಲಾ ಬ್ಯಾಗುಗಳನ್ನು ಮುಂದಿನ ಸೀಟಿನ ಕೆಳಗೆ, ಅಥವಾ ತಲೆಯಮೇಲಿರುವ ಓವರ್-ಹೆಡ್ ಕಂಪಾರ್ಟ್ಮೆಂಟಿನಲ್ಲಿ ಇಡಿ” ಎನ್ನುವ ಮಾತು ಹಿನ್ನೆಲೆಯಲ್ಲಿ ಕೇಳಿಬರುವಾಗ, ಸಿಂಗಪೂರ್ ನಗರದ ಬುಗಿಸ್ ಮಾರ್ಕೆಟ್’ನ ಅಂಗಡಿಯೊಂದರಲ್ಲಿ ನಿಂತಿರುವ ಗಗನಸಖಿ, ಬತಿಕ್ ಕುಸುರಿ ಕೆಲಸವಿರುವ ತನ್ನದೊಂದು ಚಂದದ ಕೈಚೀಲವನ್ನು ಅಂಗಡಿಯ ನೆಲದ ಮೇಲಿಟ್ಟು ಮುಂದೂಡುತ್ತಾಳೆ, ಮತ್ತೊಬ್ಬಳ ಕೈಯಲ್ಲಿರುವ ಚೀಲವನ್ನು ಅಂಗಡಿಯ ಮಾಲೀಕ ತೆಗೆದುಕೊಂಡು, ತನ್ನ ಪಕ್ಕದಲ್ಲಿರುವ ಆಳೆತ್ತರದ ಕಪಾಟಿನ ಮೇಲಿರುವ, ಚಂದದ ಉಕಿರಾನ್ ಟಿಂಬುಲ್ ಮತ್ತು ಉಕಿರಾನ್ ಟಿಂಬುಕ್ ಕಲೆಗಾರಿಕೆಗಳಿರುವ ಪೆಟ್ಟಿಗೆಯೊಂದರಲ್ಲಿಟ್ಟು ಬಾಗಿಲು ಮುಚ್ಚುತ್ತಾನೆ. ಇದನ್ನು ನೋಡುವಾಗ ನಿಮಗೆ ಬ್ಯಾಗ್ ಎಲ್ಲಿಡಬೇಕೆಂದು ಖಂಡಿತಾ ಗೊತ್ತಾಗುವುದರೊಂದಿಗೇ, ಆ ರೀತಿಯ ಚಂದದೊಂದು ಸಿಲ್ಕ್ ಕೈಚೀಲವನ್ನೋ, ಆ ಮರದ ಪೆಟ್ಟಿಗೆಯನ್ನೋ ಖರೀದಿಸಿಬೇಕೆಂಬ ಆಸೆಯೂ, ಖರೀದಿಸಲಿಕ್ಕಲ್ಲದಿದ್ದರೂ ಒಂದು ಸಾರಿ ಬುಗಿಸ್ ಮಾರ್ಕೆಟ್’ಗೆ ಹೋಗಿ ಇದನ್ನೆಲ್ಲಾ ನೋಡಿ ಬರೋಣವೆಂಬ ಇಚ್ಛೆಯಂತೂ ಮನಸ್ಸಿನಲ್ಲಿ ಬಂದೇ ಬರುತ್ತದೆ. ಜೊತೆಗೆ ತಮ್ಮ ಬತಿಕ್ ಮತ್ತು ಟಿಂಬುಲ್ ಕಲೆಯನ್ನೂ ನಿಮಗವರು ಪರಿಚಯಿಸಿಯಾಯ್ತು.

 

ಮೇಲಿಂದ ಆಕ್ಸಿಜನ್ ಮಾಸ್ಕ್ ಬರುತ್ತದೆ ಅಂತಾ ಹೇಳುವಾಗ ಅಪ್ಪ-ಮಗನ ಜೋಡಿಯೊಂದು ಹಾಜಿ ಲೇನ್’ನಲ್ಲಿ (ಸಿಂಗಪುರದ ಬ್ರಿಗೇಡ್ ರೋಡ್ ಎನ್ನಬಹುದು) ಆಟಗಳನ್ನಾಡುತ್ತಿರುವಾಗ ಮಾಸ್ಕ್ ಮೇಲಿಂದ ಬರುತ್ತದೆ. ಎಮರ್ಜೆನ್ಸಿ ಎಕ್ಸಿಟ್ಟುಗಳನ್ನ ತೋರಿಸುವಾಗ ಇದೇ ಅಪ್ಪ-ಮಗ ಸ್ಪ್ರೇ-ಪೇಂಟು ಬಳಸಿ ವಿಮಾನದ ಚಿತ್ರವೊಂದನ್ನ ಅಲ್ಲಿನ ಗೋಡೆಯ ಮೇಲೆ ಬರೆಯುತ್ತಾ ಬಾಗಿಲುಗಳನ್ನು ತೋರಿಸುತ್ತಾರೆ. ಇದರೊಟ್ಟಿಗೇ ಹಾಜಿ ಲೇನ್’ನ ಗ್ರಾಫಿಟೀಗಳನ್ನೂ ನೋಡುಗರ/ಪ್ರಯಾಣಿಕರ ಮುಂದಿಡುತ್ತಾರೆ. ತುರ್ತುಪರಿಸ್ಥಿತಿಯಲ್ಲಿ ಹೇಗೆ ವಿಮಾನದಿಂದ ಹೊರಹೋಗಬೇಕೆಂದು ಹೇಳುವಾಗ ಕುಟುಂಬವೊಂದು ಸಿಂಗಪೂರಿನ ಪ್ರಸಿದ್ಧ ಅಡ್ವೆಂಚರ್ ಕೋವ್ ವಾಟರ್-ಪಾರ್ಕಿನಲ್ಲಿ, ನೀರಿನಾಟಕ್ಕೆ ಇಳಿಯುವ ಸಂದರ್ಭದೊಂದಿಗೆ ಹೋಲಿಸುತ್ತಾ, ಹೀಲ್ಡ್ ಚಪ್ಪಲಿಗಳನ್ನು ತೆಗೆಯಬೇಕೆಂದೂ, ಲಗೇಜುಗಳನ್ನೆಲ್ಲಾ ತೆಗೆದುಕೊಳ್ಳದೇ ಹೊರಡಬೇಕೆಂದು ಹೇಳುತ್ತಾರೆ. ಮೊಬೈಲು ಫೋನುಗಳನ್ನು ಫ್ಲೈಟ್ ಮೋಡಿನಲ್ಲಿ ಹಾಕಬೇಕು ಎನ್ನುವಾಗ ತಮ್ಮ ದೇಶದ ಪ್ರಸಿದ್ಧ ಕ್ಯಾಪಿಟೋಲ್ ಥಿಯೇಟರಿನಲ್ಲಿ ಒಪೇರಾವೊಂದರಲ್ಲಿ ಕೂತ ವ್ಯಕ್ತಿ ತನ್ನ ಫೋನನ್ನು ಸೈಲೆಂಟ್ ಅಥವಾ ಫ್ಲೈಟ್ ಮೋಡಿಗೆ ಹಾಕುವುದನ್ನು ತೋರಿಸುತ್ತಾ, ನಮ್ಮೂರಿಗೆ ಬಂದಾಗ ಇಲ್ಲಿಗೆ ಹೋಗಿ ಬನ್ನಿ ಎನ್ನುವ ಸಂದೇಶ ತೋರಿಸುತ್ತಾರೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇದನ್ನು ಓದಿ ಎನ್ನುತ್ತಾ ಗಗನಸಖಿಯೊಬ್ಬಳು ಸಿಂಗಾಪುರದ ಗಗನಚುಂಬಿ ಕಟ್ಟಡಗಳ ಮುಂದೆ ನಿಂತು ಹೇಳುತ್ತಾಳೆ. ಒಟ್ಟಿನಲ್ಲಿ ತಮ್ಮೂರನ್ನು ಇಡೀ ವಿಡಿಯೋದ ಮೂಲಕ ಪ್ರಚಾರಕ್ಕಿಡುತ್ತಾರೆ.

ಸೇಫ್ಟೀ ವಿಡಿಯೋಗಳನ್ನ ಕುತೂಹಲಕಾರಿ ರೀತಿಯಲ್ಲಿ ತೋರಿಸುವುದರಲ್ಲಿ ಇವರೇ ಮೊದಲೇನಲ್ಲ. ಏರ್ ನ್ಯೂಜೀಲ್ಯಾಂಡ್ ತಮ್ಮ ದೇಶದಲ್ಲೇ ಶೂಟ್ ಮಾಡಲಾದ ಲಾರ್ಡ್ ಆಫ್ ದ ರಿಂಗ್ಸಿನ “ಮಿಡ್ಲ್-ಅರ್ಥ್ ಥೀಮ್”ನಲ್ಲಿ ಒಂದೊಳ್ಳೆಯ ವಿಡಿಯೋ ಮಾಡಿದ್ದಾರೆ. ಡೆಲ್ಟಾ ಏರ್ಲೈನ್ಸಿನವರು 80ರ ದಶಕದ ಡಿಸ್ಕೋ ಥೀಮ್ ಹಾಡುಗಳ ಮೂಲಕ ಸುರಕ್ಷತಾ ಕ್ರಮಗಳನ್ನು ತೋರಿಸಿದ್ದಾರೆ. ಟರ್ಕಿಶ್ ಏರ್ಲೈನಿನವರು ಕಳೆದ ದಶಕದಲ್ಲಿ ಇಂಟರ್ನೆಟ್ ಮನೆಮಾತಾಗಿದ್ದ Zack King ಎಂಬ ವಿಡಿಯೋ ಎಡಿಟರ್ ಮತ್ತು ಜಾದೂಗಾರನನ್ನ ಬಳಸಿ ಒಂದೊಳ್ಳೆಯ ವಿಡಿಯೋ ಮಾಡಿದ್ದರು. ಹೊಸತನಕ್ಕೇ ಹೆಸರಾದ ವರ್ಜಿನ್ ಅಟ್ಲಾಂಟಿಕ್, ತಮಾಷೆಯ ವಿಡಿಯೋಗಳ ಮೂಲಕ ಅನಿರೀಕ್ಷಿತ ಸಂದರ್ಭಗಳಲ್ಲಿ ಏನು ಮಾಡಬೇಕು ಎನ್ನುವುದನ್ನು ನವಿರಾದ ಹಾಸ್ಯದ ಮೂಲಕ ತೋರಿಸಿದ್ದಾರೆ. ಏರ್-ಫ್ರಾನ್ಸಿನವರು “ಆಕಾಶದಲ್ಲಿ ಫ್ರಾನ್ಸ್” ಎಂಬ ಥೀಮ್’ನಲ್ಲಿ ತನ್ನ ದೇಶದ ಹೆಸರುವಾಸಿಯಾದ ಬೇರೆ ಬೇರೆ ಕಲೆಗಳ ಮೂಲಕ ಅಂದರೆ ಬ್ಯಾಲೇ ನೃತ್ಯ, ಪೇಂಟಿಂಗುಗಳು, ಕಾರ್ಟೂನುಗಳನ್ನುಪಯೋಗಿಸಿ ಪಕ್ಕಾ ಫ್ರೆಂಚ್ ಥೀಮಿನಲ್ಲಿ ಕಲಾತ್ಮಕವಾದ ವಿಡಿಯೋ ಮಾಡಿದರೆ, ಬ್ರಿಟೀಷ್ ಏರ್ವೇಸ್ ಪ್ರಸಿದ್ಧ ಬ್ರಿಟೀಷ್ ನಟ-ನಟಿಯರು, ಸಂಗೀತ ಸಿನಿಮಾ ಮತ್ತು ನೃತ್ಯ ನಿರ್ದೇಶಕರು, ಪ್ರಸಿದ್ಧ ಬ್ರಿಟೀಷರನ್ನು ಬಳಸಿ ಅತ್ಯುತ್ತಮ ಸಿನಿಮಾ ದರ್ಜೆಯ ವಿಡಿಯೋ ಮಾಡಿದ್ದಾರೆ. ಇದೇ ದೃಷ್ಟಿಕೋನದಲ್ಲಿ ನೋಡಿದಾಗ ಸಿಂಗಪೂರಿಗರ ವಿಡಿಯೋ ವಿಶಿಷ್ಟವಾಗಿ ನಿಲ್ಲುವುದರಲ್ಲಿ ಸಂಶಯವೇ ಇಲ್ಲ.

 

ನೀವು ಎಮಿರೇಟ್ಸ್, ಎತಿಹಾದ್ ಅಥವಾ ಕತಾರ್ ಏರ್ಲೈನ್ಸಿನಲ್ಲಿ ಪ್ರಯಾಣಿಸಿದರೆ ನಿಮಗೆ ಈ ಮೂರೂ ಏರ್ಲೈನ್ಸುಗಳು ತಮ್ಮ ಸಂಸ್ಕೃತಿಯ ಕೆಲಭಾಗಗಳನ್ನು ಆಧುನಿಕ ಜಗತ್ತಿನ ರೀತಿನೀತಿಗಳೊಂದಿಗೆ ಮಿಶ್ರಣಗೊಳಿಸಿ ತಮ್ಮ ಗ್ರಾಹಕ ಸೇವೆಯನ್ನು ಪ್ರಸ್ತುತಪಡಿಸುತ್ತವೆ. ಅರಬ್ ಸಂಪ್ರದಾಯಕ್ಕೆ ತಕ್ಕಂತಿರುವ ಅವರ ಸಮವಸ್ತ್ರಗಳಲ್ಲಿ ಮೈಭಾಗಗಳನ್ನು ಆದಷ್ಟೂ ಕಡಿಮೆ ತೋರಿಸಿ, ಸಣ್ಣದೊಂದು ಶಿರವಸ್ತ್ರ ಕಡ್ಡಾಯವಾಗಿರುತ್ತದೆ. ಏರ್ಪೋರ್ಟ್ ಮತ್ತು ವಿಮಾನದ ಒಳಾಂಗಣ ವಿನ್ಯಾಸ ಮತ್ತು ಬಣ್ಣಗಳಲ್ಲಿ ಆಯಾದೇಶಕ್ಕೆ ಸಂಬಂಧಿಸಿದ ವಿಷಯಗಳು ಹೇರಳವಾಗಿರುತ್ತವೆ. ಹೀಗಿದ್ದರೂ ಅವರ ಊಟೋಪಚಾರ, ಮನರಂಜನೆ ಮತ್ತು ಸೇವೆ ಸಂಪೂರ್ಣ ವಿಶ್ವದರ್ಜೆಯಲ್ಲಿರುತ್ತವೆ. ನಿಮಗೆ ಇಡೀ ಪ್ರಯಾಣದಲ್ಲಿ ಅರಬ್ ಜಗತ್ತು ಮತ್ತು ಉಳಿದ ಜಗತ್ತಿನ ಅಂಶಗಳು ಹೇರಳವಾಗಿ ದೊರೆಯುತ್ತವೆ. ಈ ಮೂರೂ ಅರಬ್ ವಿಮಾನಯಾನ ಕಂಪನಿಗಳು ಕೇವಲ ಇಪ್ಪತ್ತು ವರ್ಷದ ಹಿಂದೆ ತಮ್ಮ ಆಧುನಿಕ ಪ್ರಯಾಣವನ್ನು ಪ್ರಾರಂಭಿಸಿದಾಗ, ತಮ್ಮ ಹೊಸಾ ಸೇವಾಧ್ಯೇಯ ಹೇಗಿರಬೇಕು ಎಂಬುದರ ಬಗ್ಗೆ ಮೂಲ ಪ್ರೇರಣೆ ಕೊಟ್ಟಿದ್ದೇ ಸಿಂಗಪೂರ್ ಏರ್ಲೈನ್. ದುಬೈನ ಶೇಖ್ ಮಹಮ್ಮದ್ ತನ್ನ ಒಡೆತನದ ಎಮಿರೇಟ್ಸ್ ಏರ್ಲೈನ್, ಸಿಂಗಪೂರ್ ಏರ್ಲೈನಿನ ಮಾದರಿಯಲ್ಲೇ ಬೆಳೆಯಬೇಕು ಎಂದು ಖುದ್ದಾಗಿ ತಾಕೀತು ಮಾಡಿದ್ದರು.

 

ಮೂರು ವಿಶ್ವದರ್ಜೆಯ ಏರ್ಲೈನುಗಳಿಗೆ ಮಾದರಿಯಾದ ಸಿಂಗಪೂರ್ ಏರ್ಲೈನ್ ಹೇಗಿರಬಹುದು ಎಂಬುದರ ಬಗ್ಗೆ ನನಗೆ ಕುತೂಹಲವಿತ್ತು. ವೈಯುಕ್ತಿಕವಾಗಿ ಅನುಭವಿಸಿದ ಮೇಲೆ ಯಾಕವರು ಉಳಿದವರಿಗೆ ಮಾದರಿಯಾದರು ಎಂಬುದು ನಿರ್ವಿವಾದವಾಗಿ ತಿಳಿದುಬಂತು. ಮುಂದಿನವಾರ, ಸಿಂಗಪೂರ್ ಏರ್ಲೈನಿನ ಸೇವ ಮತ್ತು ಚಾಂಗಿ ಏರ್ಪೋರ್ಟ್ ಎಂಬ ಮಾಯಾಲೋಕದ ವಿವರಣೆ!

0 comments on “ಗ್ರಾಹಕಸೇವೆಯ ಸಿರಿವಂತಿಕೆ – ಸಿಂಗಪೂರ್ ಏರ್ಲೈನ್ಸ್

Leave a Reply

Your email address will not be published. Required fields are marked *