Saturday, 27 April, 2024

ಅಪ್ಪ-ಅಮ್ಮ ಯಾಕೆ ನಗಲಿಲ್ಲ!?

Share post

We all at some point in time wondered “why are our parents such joy kills!! Why can’t they smile for a while, and relax for a while?”

ಅವರಿಗಿದ್ದ ಅಲ್ಪಸ್ವಲ್ಪದಲ್ಲೇ ದಿನಸಿ ಖರ್ಚು, ಮಕ್ಕಳ ಶಾಲೆಯ ಫೀಸು, ತಿಂಗಳ ಚೀಟಿ, ಕರೆಂಟ್ ಬಿಲ್ಲು, ಹಬ್ಬ ಹರಿದಿನ, ಮತ್ತದಕ್ಕೆ ಹೊಸಾ ಬಟ್ಚೆ, ಅಂದಾಜೇ ಇಲ್ಲದೇ ದುತ್ತನೇ ಎದುರಾದ ಅದೆಂತದೋ ಸಣ್ಣದೊಂದು ಖರ್ಚು, ಆರ್ಡಿ ಎಲ್ಲೈಸಿ ಪ್ರೀಮಿಯಂ, ಅಮ್ಮನ ಸ್ಟೀಲ್ ಪಾತ್ರೆಯ ಚೀಟಿ, ಆಟಕ್ಕೆ ಹೋಗಿ ಕೈಮುರಿದುಕೊಂಡ ಮಗನ ಆಸ್ಪತ್ರೆಯ ಖರ್ಚು, ಎಲ್ಲಿ ಹೋಯ್ತು ಈ ದುಡ್ಡು ಅಂತಾ ಅಪ್ಪ ತಲೆಬಿಸಿ ಮಾಡಿಕೊಳ್ಳುತ್ತಿರುವಾಗ ಅಮ್ಮನ ಸಾಸಿವೆಡಬ್ಬಿ ಸೇರಿ ಬೆಚ್ಚಗೆಕೂತ ಅದೊಂದಷ್ಟು ದುಡ್ಡು…..ಈ ತರಹದ ದುಡ್ಡಿನ ತಲೆಬಿಸಿ ಒಂದುಕಡೆಯಾದರೆ

ದೂರದೂರಲ್ಲಿರುವ ಅಪ್ಪ ಅಮ್ಮನ ಆರೋಗ್ಯದ ಚಿಂತೆ, ಅಲ್ಲೇ ಮನೆಹತ್ರ ನೋಡಿರೋ ಸೈಟಿಗೆ ಬೇಗ ಅಡ್ವಾನ್ಸ್ ಕೇಳ್ತಿರೋ ಪಂಡಿತರ ಒತ್ತಡ, ಪಕ್ಕದ ದರಖಾಸ್ತು ಜಾಗದ ಬೇಲಿಯನ್ನ ವರ್ಷವರ್ಷ ಮೂರಡಿ ಈ ಕಡೆ ದೂಡುತ್ತಿರುವ ಚಂದ್ರಾನಾಯ್ಕನ ತಲೆಬಿಸಿ, ಮುಂದಿನ ವಾರ ಇನ್ಸಪೆಕ್ಟರು ಬರ್ತಾರೆ ಅದಕ್ಕೆ ನೋಟ್ಸ್ ಆಫ್ ಲೆಸನ್ ಬರೆದಿಲ್ಲ ಅಂತಾ ಚಿಂತೆ, ಮೊನ್ನೆಬಂದ ಅಚಾನಕ್ ಮಳೆಗೆ ಕ್ವಾಟ್ರಸ್ಸಿನ ಕಡಿಮಾಡು ಸ್ವಲ್ಪ ಕುಸಿದಿದೆ ಅದರ ರಿಪೇರಿಗೆ ಯಾರಿಗೆ ದೂರು ಕೊಡಬೇಕು ಅನ್ನೋದೇ ಗೊತ್ತಿಲ್ಲ, ಮುಂದಿನ ತಿಂಗಳು ಮಾಡಬೇಕಿರೋ ಕೋಳಿಗಣತಿ, ಕೊಪ್ಪಕ್ಕೆ ಟ್ರಾನ್ಫರ್ ಕೇಳಿದ್ದಕ್ಕೆ ಹತ್ತುಸಾವಿರ ಕೇಳಿರೋ ಡಿಡಿಪಿಐ, ಎಲ್ಲರ ಮನೆಗೂ ಫೋನು ಟೀವಿ ಮಿಕ್ಸಿ ಬರ್ತಾ ಇದೆ ನಮ್ಮನೆಯಲ್ಲಿ ಯಾಕಿಲ್ಲ ಅಂತಾ ಕೇಳುವ ಮಕ್ಕಳು….ಈ ತರಹದ ಸಾಮಾಜಿಕ ತಲೆಬಿಸಿಗಳು ಇನ್ನೊಂದುಕಡೆ

ಇಷ್ಟರ ಮಧ್ಯದಲ್ಲಿ ಸಿಗಬೇಕಾದ ಪ್ರಮೋಷನ್ನು, ಪೇಕಮಿಷನ್ ಇಂಪ್ಲಿಮೆಟೇಷನ್ನು, ಪಂಚಾಯ್ತಿ ಎಲೆಕ್ಷನ್ ರಾಜಕೀಯ ಮತ್ತದರಲ್ಲಿ ಎಸ್ಬಿಸಿ ಮೆಂಬರುಗಳಿಗೂ ಮಾಷ್ಟ್ರುಗಳಿಗೂ ಹತ್ತಿರುವ ರಾಜಕೀಯದ ಜಗಳ….ಎಷ್ಚು ಬೇಕು ತಲೆಬಿಸಿಗಳು!?

ಆದರೂ ನನ್ನಮ್ಮ ಪಕ್ಕದಮನೆಯ ಆದರ್ಶನ ಅಮ್ಮನಂತೆ ಐ ಲವ್ ಯೂ ಅನ್ನಲಿಲ್ಲ, ನನ್ನಪ್ಪ ಆ ಪಿಚ್ಚರಲ್ಲಿ ನೋಡಿದ ಅಪ್ಪನಂತೆ ನಗ್ತಾ ಇರಲ್ಲ ಅಂತಾ ಬೇಜಾರು ನಮಗೆ. ನನ್ನಪ್ಪ-ಅಮ್ಮ ಕೂಲ್ ಅಲ್ಲ ಅಂತಾ ಬೇಸರ.

ಮೊನ್ನೆ ಕೂತು “ಕಳೆದ ಹತ್ತು ವರ್ಷಗಳ ನನ್ನದೇ ಜೀವನವನ್ನ ಮೆಲುಕುವಾಗ, what a hell of a ride it has been ಅಂತಾ ಯೋಚಿಸುವಾಗ, ಸಣ್ಣಪುಟ್ಟ ಕೆಲವು ಸಾಧನೆಗಳನ್ನೂ ನೆನಸಿಕೊಂಡು ಚಪ್ಪರಿಸುವಾಗ, ಅಮ್ಮ-ಅಪ್ಪ ಇದಕ್ಕೆಲ್ಲಾ ಎಷ್ಚು ಕಷ್ಟಪಟ್ಟಿರಬಹುದು ಅಂತಾ ನೆನಸಿಕೊಳ್ತಾ ಉಸ್ಸಪ್ಪಾ ಎಂದೆ. ಹಾಗೆಯೇ ಅವರು ಯಾಕೆ ಯಾವಾಗಲೂ ನಗುತ್ತಿರಲಿಲ್ಲ ಎಂಬುದಕ್ಕೆ ಉತ್ತರವನ್ನೂ ಕಂಡುಕೊಂಡೆ.

ಜೀವನದ ರೇಸಿಗೆ ಅವರ ಪ್ರಾರಂಭದ ಗುರಿಯೇ ಬೇರೆಯಾಗಿತ್ತು, ಅವರ ಗುರಿಗಳೂ ಬೇರೆಯಾಗಿದ್ದವು. ಅವರ ವೇಗವೂ ಬೇರೆಯದಿತ್ತು. ನಲವತ್ತೆಂಟಕ್ಕೆ ರಿಟೈರ್ ಆಗಬೇಕು ಎನ್ನುವ ನನ್ನದೂ, ಜೀವನಪೂರ್ತಿ ಸರ್ಕಾರಕ್ಕೆ ದುಡಿದು ಪೆನ್ಷನ್ನು ಪಿಎಫ್ಫು ಪಡೆಯುತ್ತೀನಿ ಅವರ ಸುರಕ್ಷತೆ-ಅಸುರಕ್ಷತೆಗಳೂ ಬೇರೆಯವಿದ್ದವು ಅನ್ನುವುದೂ ನಿಜವೇ.
ಆದರೆ ತುಳಿಸಿಕೊಳ್ಳುವುದು-ಅಳುವುದೇ ಜೀವನದ ಪಾಠವಾಗಿದ್ದಾಗ “ಅಪ್ಪ ಅಮ್ಮ ನಗುವುದನ್ನು ಮರೆತಿದ್ದರು” ಅಂತಾ ಹೇಳಲಿ? ಅವರಿಗೆ “ಅಪ್ಪಾ ನಗು” ಅಂತಾ ಹೇಳಲಿಕ್ಕೆ ನಮಗೂ ಧೈರ್ಯವಿರಲಿಲ್ಲ ಅನ್ನಿ. ಅವರೂ ಕೂಡ ನಮ್ಮೆದುರಿಗೆ ನಗದಿದ್ದರೂ, ನಮಗೆ ಕಾಣದಂಗೆ ಅತ್ತು ಸುಮ್ಮನಾಗುತ್ತಿದ್ದರು ಎನ್ನುವುದಂತೂ ಸತ್ಯ.

ಈಗಿನ ಮಕ್ಕಳಂತೂ ಬಿಡಿ ಬಹಳಾ ಮುಂದುವರೆದಿವೆ. “ಅಪ್ಪ ಗುಮ್ಮನಗುಸಕ” ಅಂತಾ ಓಪನ್ನಾಗಿಯೇ ಹೇಳುತ್ತವೆ. ಸದಾ ನಗುತ್ತಿರುವ ನನಗೂ ಕೂಡಾ ಅವಳು ಮಾತನಾಡುವಾಗ ನಾನೆಲ್ಲೋ ಕಳೆದುಹೋಗಿದ್ದರೆ, ಅವಳ ಜೋಕಿಗೆ ನಗದಿದ್ದರೆ “ಆಗಾಗ ನಗ್ತಾ ಇರಪ್ಪಾ” ಅಂತಾ ಕುಹೂ ನೆನಪಿಸ್ತಾ ಇರ್ತಾಳೆ. ಸಾವಿರ ಸೋಲುಗಳ ಮಧ್ಯೆ ಸಣ್ಣದೊಂದು ಸಾಧನೆಗೆ ಸ್ವಲ್ಪ ನಕ್ಕರೂ “ಬಡ್ಡೀಮಗನ ಅದೃಷ್ಟ ಗಟ್ಟಿ ಕಣ್ರೀ” ಅಂತಾ ಜಡ್ಜ್ಮೆಂಟು ಕೊಡುವವರ ನಡುವೆ, ನಮಗೇ ಗೊತ್ತಿಲ್ಲದೇ ನಾವು ಜೀವನದಲ್ಲಿ ನಗು ಮರೆತರೆ ಹೀಗೆ ಯಾರಾದರೂ ನೆನಪಿಸುವುದಿದೆಯಲ್ಲಾ….ಅದೂ ಕೂಡ ಒಂದುರೀತಿ ಅದೃಷ್ಟವೇ ಅನ್ನಿ.

One comment on “ಅಪ್ಪ-ಅಮ್ಮ ಯಾಕೆ ನಗಲಿಲ್ಲ!?

Leave a Reply

Your email address will not be published. Required fields are marked *