Wednesday, 28 February, 2024

ಹೂಡಿಕೆ (investment) ಎಂದರೇನು?

Share post

ನಮಗೆಲ್ಲರಿಗೂ ಅದು ಬೇಕು ಇದು ಬೇಕು ಎಂಬ ಒಂದಲ್ಲ ಒಂದು ಆಸೆಯಿದ್ದೇ ಇರುತ್ತದೆ. ಅದು ಲೌಕಿಕ/ಭೌತಿಕ ವಸ್ತುಗಳಿರಬಹುದು, ಅಥವಾ ಮನಶ್ಶಾಂತಿ, ಪ್ರೀತಿ, ಮನೋಬಲದಂತಹಾ ಅಭೌತಿಕ ವಿಚಾರಗಳಿರಬಹುದು….ಎಲ್ಲರಿಗೂ ‘ಬೇಕು’ಗಳು ಇದ್ದೇ ಇರುತ್ತವೆ. ಏನೇ ಮಾಡುವುದಿದ್ದರೂ ಇದರಿಂದ ನನಗೇನು ಸಿಗುತ್ತದೆ ಎಂಬ ಪ್ರಶ್ನೆಯೂ ಎಲ್ಲರ ಮನಸ್ಸಿನಲ್ಲಿದ್ದೇ ಇರುತ್ತದೆ. ಆದರೆ “ಏನಾದರೂ ಬೇಕಾದರೆ, ನಾನು ಏನಾದರೂ ಮಾಡಬೇಕು” ಎಂಬ ನೈಜತೆಯ ಅರಿವು ಕೆಲವರಿಗೆ ಮಾತ್ರವೇ ಇರುತ್ತದೆ.

 

ನನಗೊಬ್ಬಳು ಒಳ್ಳೆಯ ಗರ್ಲ್ಫ್ರೆಂಡು ಅಥವಾ ಹೆಂಡತಿ ಬೇಕು, ನನಗೊಂದು ಒಳ್ಳೆಯ ಸಂಬಳದ ಕೆಲಸ ಬೇಕು, ನನಗೊಂದು ಕಾರು/ಮನೆ ಬೇಕು, ನನಗೊಂದು ಒಳ್ಳೆಯ ರಿಟೈರ್ಡ್ ಲೈಫು ಬೇಕು ಅಂತಾ ಎಲ್ಲರೂ ಆಸೆಪಡುವವರೇ. ಆದರೆ ಆ ‘ಬೇಕು’ಗಳು ನಿಜವಾಗಬೇಕಾದರೆ ಅದಕ್ಕೆ ತಕ್ಕ ಹೂಡಿಕೆಗಳೂ ಇರಬೇಕು ಎನ್ನುವುದನ್ನು ಹೆಚ್ಚಿನವರು ಮರೆಯುತ್ತಾರೆ. ಮಾತ್ರವಲ್ಲ, ತಮಗೆ ಬೇಕಾದದ್ದು ಇನ್ನೊಬ್ಬರಿಗೆ ಸಿಕ್ಕಿದ್ದಾಗ ‘ಬಡ್ಡೀಮಗ ಲಕ್ಕೀ ರೀ. ಕೂತಲ್ಲೇ ಸಿಕ್ಕಿಬಿಡುತ್ತೆ’ ಅಂತಾ ಆಡಿಕೊಳ್ಳೋದು, ಹೊಟ್ಟೆಕಿಚ್ಚು ಪಡುತ್ತಾರೆ. ಆತನ ಶ್ರಮ, ಆತ ಮಾಡಿದ ಸರಿಯಾದ ಹೂಡಿಕೆಗಳು, ಆತನ ನಿರ್ಧಾರಗಳನ್ನು ಅನಲೈಸ್ ಮಾಡುವವರು, ಮತ್ತದನ್ನು ಅಳವಡಿಸಿಕೊಳ್ಳುವವರು ತೀರಾ ಕಡಿಮೆ ಜನ. ನಮಗೊಬ್ಬಳು ಸಂಗಾತಿ ಸಿಕ್ಕು ಅವಳನ್ನು ನಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಕಾದರೆ ಅವಳನ್ನು ಅರ್ಥಮಾಡಿಕೊಳ್ಳುವ ಮನಸ್ಸಿರಬೇಕು. ಅವಳಿಗೆ ಗಡ್ಡ ಇಷ್ಟವೋ/ಕ್ಲೀನ್ ಶೇವ್ ಮುಖವಿಷ್ಟವೋ ಎಂಬುದನ್ನು ತಿಳಿದುಕೊಳ್ಳುವಷ್ಟು ಸಮಯವನ್ನಾದರೂ ಹೂಡಿಕೆಮಾಡಬೇಕು. ಆಕೆಯ ಪಕ್ಕ ಕೂರುವಾಗ ವಾಕರಿಕೆ ಬರದಂತೆ ಬೆವರ ವಾಸನೆ ಹೊಡೆಯಬಾರದು, ಇರುವುದರಲ್ಲಿ ಒಳ್ಳೆಯದೊಂದು ಶರ್ಟು ಹಾಕಬೇಕು, ಸ್ನಾನ ಮಾಡಬೇಕು ಎನ್ನುವುದು ತಿಳಿಯುವಷ್ಟಾದರೂ ಸಮಯ ಹೂಡಿಕೆ ಮಾಡಬೇಕು. “ಇಲ್ಲಾ ನಾನಿಂಗೇ ಪೊಗರು ಸಿನಿಮಾದ ಹೀರೋ ಪಾತ್ರದ ತರಾನೇ ಇರೋದು” ಅನ್ನೋದು ನಿಮ್ಮ ಹೂಡಿಕೆಯಾದ್ರೆ, ……..ಆ ದೇವರೇ ನಿಮ್ಮನ್ನು ಕಾಪಾಡಬೇಕು.

 

ಒಳ್ಳೆಯ ಸಂಬಳದ ಕೆಲಸ ಬೇಕು ಅಂತಾದರೆ ಆ ಕೆಲಸಗಳು ಎಲ್ಲಿವೆ, ಅವರು ಕೇಳುವಷ್ಟು ವಿದ್ಯಾರ್ಹತೆಯೋ ಅಥವಾ ಕೌಶಲ್ಯವೋ ನನ್ನಲ್ಲಿ ಇದೆಯಾ, ಇಲ್ಲವಾದಲ್ಲಿ ಅದನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಯಲು ಸಮಯದ ಹೂಡಿಕೆಯನ್ನೂ…ಆ ಕೌಶಲ್ಯವನ್ನು ಪಡೆಯಲು ಮನಸ್ಸಿನ ಹೂಡಿಕೆಯೂ ಇರಬೇಕು. ರಿಟೈರ್ಡ್ ಲೈಫು ಒಳ್ಳೆಯದಿರಬೇಕೆಂದರೆ ಕರೆಯರ್ರಿನ ಮೊದಲ ಭಾಗದಲ್ಲೇ ಹಣಕ್ಕೂ ಸಂಪತ್ತಿಗೂ ವ್ಯತ್ಯಾಸವೆಂದರೇನು ಎಂಬುದನ್ನು ತಿಳಿದುಕೊಳ್ಳಬೇಕು, ಕೆಲಸದಲ್ಲಿದ್ದಾಗ ಹಣವನ್ನುಳಿಸಬೇಕು ಹಾಗೂ ಉಳಿಸಿದ ಹಣವನ್ನು ಡೈವರ್ಸಿಫೈ ಮಾಡಿ ಮೂರ್ನಾಲ್ಕು ಬೇರೆ ಬೇರೆ ಕಡೆ ಹೂಡಿಕೆ ಮಾಡಿ ವೆಲ್ತ್ ಸೃಷ್ಟಿಸಿಕೊಳ್ಳಬೇಕು. ಹೂಡಿಕೆಯೇ ಇಲ್ಲದೇ ‘ಮಕ್ಕಳು ನನ್ನನ್ನು ನೋಡಿಕೊಳ್ಳುತ್ತಿಲ್ಲ, ಅವರಿಗಾಗಿ ನಾನೆಲ್ಲಾ ಮಾಡಿದೆ, ಈಗ ನನ್ನನ್ನು ನೋಡಿಕೊಳ್ಳುವವರಿಲ್ಲ” ಎಂದು ಅತ್ತರೇನು ಪ್ರಯೋಜನ?

 

ಹೂಡಿಕೆ (investment) ಎಂದರೇನು?

ಒಂದು ಉದಾಹರಣೆ:

 

ಜಗತ್ತಿನ ಅತ್ಯಂತ ವೇಗದ ಓಟಗಾರ ಉಸೈನ್ ಬೋಲ್ಟ್ ನಿಮಗೆಲ್ಲಾ ಗೊತ್ತಿರಬಹುದು. ಟ್ರಾಕ್ ಅಂಡ್ ಫೀಲ್ಡಿನಲ್ಲಿ ಹಲವಾರು ದಾಖಲೆಗಳನ್ನು ಮುರಿದು ತನ್ನ ಹೆಸರನ್ನು ಸ್ಥಾಪಿಸಿದ ವೀರ ಬೋಲ್ಟ್. ಆತ ಓಡಿದಲ್ಲೆಲ್ಲಾ ಜಯವನ್ನೇ ಸಾಧಿಸಿದ್ದಾನೆ.

ಬೇರೆ ಚಾಂಪಿಯನ್-ಶಿಪ್’ಗಳನ್ನು ಸ್ವಲ್ಪ ಹೊತ್ತು ಬದಿಗಿಟ್ಟು, ಆಟೋಟಗಳ ಅತ್ಯುನ್ನತ ಸ್ಪರ್ಧೆಯಾದ ಒಲಂಪಿಕ್ಸ್ ಬಗ್ಗೆ ಒಂದುನಿಮಿಷ ಮಾತನಾಡೋಣ. ಬೋಲ್ಟ್ ಕಳೆದ ಮೂರು ಒಲಂಪಿಕ್ಕುಗಳಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿದ್ದಾನೆ. ಈ ಮೂರು ಒಲಂಪಿಕ್ಕುಗಳಲ್ಲಿ ಆತ ಬೇರೆ ಬೇರೆ ಸ್ಪರ್ಧೆಗಳಲ್ಲಿ ಓಡಿದ್ದರೂ ಆತನ ಎಲ್ಲಾ ಸ್ಪರ್ಧೆಗಳ ಒಟ್ಟು ಓಟದ ಸಮಯ (ಅಂದರೆ ಪಿಸ್ತೂಲಿನ ಗುಂಡು ಹಾರಿದ ನಂತರ, ಆತ ಶೂಗೆ ಬೆಂಕಿಬೀಳುವ ಹಾಗೆ ಓಡಿ, ತನ್ನ ಗುರಿ ತಲುಪುವರೆಗಿನ ಒಟ್ಟು ಸಮಯ) ಲೆಕ್ಕ ಹಾಕಿದರೆ ಅದು ಬರೇ 115 ಸೆಕೆಂಡು….ಅಂದರೆ ಎರಡು ನಿಮಿಷಕ್ಕಿಂತಲೂ ಕಡಿಮೆ!!!

ಈ 115 ಸೆಕೆಂಡಿನಲ್ಲಿ ಆತ ಸಂಪಾದಿಸಿದ ಹಣ 119 ಮಿಲಿಯನ್ ಡಾಲರ್!! ಅಂದರೆ ಒಂದು ಸೆಕೆಂಡಿಗೆ ಒಂದು ಮಿಲಿಯನ್ ಡಾಲರಿಗೂ ಹೆಚ್ಚು ದುಡಿಮೆ.

ಆದರೆ ಈ ದುಡಿಮೆಯ ಎರಡು ನಿಮಿಷಕ್ಕೆ ಅವ ಹದಿನೈದು ವರ್ಷ ಶ್ರಮ ಹಾಕಿದ್ದ. ಆ ಹದಿನೈದು ವರ್ಷ ಇದೆಯಲ್ಲಾ

.

.

.

.

.

ಅದು….”ಹೂಡಿಕೆ” ಅಂದ್ರೆ.

ಅದಿಲ್ಲದೇ ಇದಿಲ್ಲ.

ನಿಮ್ಮ ಹೂಡಿಕೆಗಳ ಬಗ್ಗೆ ಗಮನವಿರಲಿ.

 

0 comments on “ಹೂಡಿಕೆ (investment) ಎಂದರೇನು?

Leave a Reply

Your email address will not be published. Required fields are marked *