Tuesday, 27 February, 2024

ಪ್ರತಿಭೆ, ಪರಿಶ್ರಮ, ಮತ್ತು ಸಫಲತೆಗಳ ಸಮಾಗಮ – ಪೌಲ್ ವಿಲಿಯಮ್ಸ್

Share post

ಭಾರತದಲ್ಲಿ ದಲಿತರ ಶೋಷಣೆ ನಡೆದಂತೆಯೇ ಅಮೇರಿಕಾದಲ್ಲಿ ಬಿಳಿಯರಲ್ಲದವರೆಲ್ಲರ ಮೇಲೂ ಶೋಷಣೆ ನಡೆದಿತ್ತು. ಈಗಲೂ ನಡೆಯುತ್ತಿದೆ ಕೂಡಾ. ಮೊದಲಿನಂತೆ ಅಲ್ಲ, ಆದರೆ ಶೋಷಣೆ ಬೇರೆ ಬೇರೆಯ ಸ್ವರೂಪಗಳನ್ನು ಪಡೆದು ಈಗಲೂ ನಡೆಯುತ್ತಿದೆ. ಕೆಲಸಕ್ಕೆ ಅರ್ಜಿ ಹಾಕಿದರೆ ಪ್ರತಿಭೆ ಎಷ್ಟೇ ಇದ್ದರೂ ಚರ್ಮದ ಬಣ್ಣ, ಇಂಗ್ಳಿಷಿನ ಉಚ್ಛಾರ, ಯಾವ ಕಾಲೇಜಿನಿಂದ ಓದಿದ್ದು ಮುಂತಾದವನ್ನು ನೋಡಿ ಕೆಲ ಅರ್ಜಿಗಳನ್ನು ತಿರಸ್ಕರಿಸುವುದುಂಟು. ಕೆಲಸಗಳಲ್ಲೂ ಕೂಡಾ ಈ ಕೆಲಸ ಇಂತಹವನಿಗೇ, ಈ ದೇಶದವನಿಗೇ ಅಂತಲೂ ನಿರ್ಧರಿಸುವುದುಂಟು. ಕಂಪ್ಯೂಟರ್ ಅಥವಾ ವೈದ್ಯಕೀಯ ವೃತ್ತಿಯಲ್ಲಿರುವವರು ಎಂದರೆ ಭಾರತೀಯರು ಎನ್ನುವ ಸ್ಟೀರಿಯೋಟೈಪ್ ಹೇಗುಂಟೋ, ಹಾಗೆಯೇ ಗಾರ್ಡನಿಂಗ್, ಮನೆ ಸುತ್ತಮುತ್ತ ಕ್ಲೀನಿಂಗ್, ಪ್ಲಂಬಿಗ್ ಕೆಲಸಕ್ಕೆ ಹಿಸ್ಪಾನಿಕ್ಕರೇ ಬೆಸ್ಟು, ಆಟ-ಓಟಗಳಲ್ಲಿ ಮಾದಕವಸ್ತು ಮಾರಾಟಗಳಲ್ಲಿ ಮುಂದಿರುವವರು ಕರಿಯರು, ಲಾಂಡ್ರಿ ಮತ್ತು ಚೀಪ್ ಹೋಟೆಲುಗಳನ್ನು ನಡೆಸುವುದರಲ್ಲಿ ಚೀನಿಯರೇ ಮೇಲುಗೈ ಎಂಬ ಸ್ಟೀರಿಯೋಟೈಪುಗಳೂ ಉಂಟು. (ಚೀನಿಯರು ಕಳೆದ ಇಪ್ಪತ್ತುವರ್ಷಗಳಲ್ಲಿ ಆಟೋಟಗಳೊಂದನ್ನು ಬಿಟ್ಟು ಉಳಿದ ಎಲ್ಲಾ ಕ್ಷೇತ್ರಗಳನ್ನೂ ಆಕ್ರಮಿಸಿಕೊಂಡಿದ್ದಾರೆ ಬಿಡಿ). ಸಂಬಳವೂ ಕೂಡಾ ಅದೇ ಒಂದೇ ಕೆಲಸಕ್ಕೆ ಬಿಳಿಯರಿಗೇ ಬೇರೆ, ಬಿಳಿಯರಲ್ಲದವರಿಗೇ ಬೇರೆ (ಅದರಲ್ಲೂ ಭಾರತೀಯರಿಗೇ ಬೇರೆ, ಹಿಸ್ಪಾನಿಕ್’ಗಳಿಗೇ ಬೇರೆ, ಚೀನಿಯರಿಗೇ ಬೇರೆ) ಇರುವುದುಂಟು. ಇದಕ್ಕೆಲ್ಲಾ ಅವರು ಎಷ್ಟೇ ಬೇರೆ ಬೇರೆ ರೀತಿಯ ಬಣ್ಣಬಣ್ಣದ ವ್ಯಾವಹಾರಿಕ ಕಾರಣ ಕೊಟ್ಟರೂ, ಆಳದಲ್ಲಿ ಅದು “ಇವ ಬಿಳಿಯನಲ್ಲ” ಎಂದ ಕಾರಣಕ್ಕಾಗಿ ನಡೆದ ತಾರತಮ್ಯವೇ.

 

ಇದೇ ಕಾರಣಕ್ಕೆ ಅಮೇರಿಕಾದಂತಹಾ ವಲಸಿಗ ಪ್ರಧಾನ ದೇಶಗಳಲ್ಲಿ ಈ ರೀತಿಯ ಶೋಷಣೆ ಮತ್ತು ತಾರತಮ್ಯಕ್ಕೆ ಕಡಿವಾಣ ಹಾಕಲು ಹಲವಾರು ಕಾನೂನುಗಳು ಚಾಲ್ತಿಯಲ್ಲಿವೆ. ಎಲ್ಲರಿಗೂ ಒಂದೇ ಕನಿಷ್ಟ ವೇತನವನ್ನೂ, ಕೆಲಸ ಕೊಡುವಾಗ ಅಥವಾ ಕೆಲಸದಿಂದ ತೆಗೆಯುವಾಗ ಯಾರದ್ದೂ ರಾಷ್ಟ್ರೀಯತೆ, ರಿಲೀಜಿಯನ್, ಮೈಬಣ್ಣ, ಲಿಂಗ ಮುಂತಾದ ವಿಚಾರಗಳು ಯಾವುದೇ ಹಂತದಲ್ಲೂ ಕಾರಣವಾಗದಂತೆ ನೋಡಿಕೊಳ್ಳುವ ಕಾನೂನುಗಳು ಬಿಗಿಯಾಗಿವೆ. ಆದರೂ ಚಾಪೆ ಹಾಸುವ ಸರ್ಕಾರಕ್ಕೆ ಒಂದು ದಾರಿಯಾದರೆ ರಂಗೋಲಿಗಳ ಕೆಳಗೆ ತೂರುವ ಲಫಂಗರಿಗೆ ನೂರುದಾರಿಗಳಿವೆ ಬಿಡಿ. ಇವತ್ತಿಗೂ ಇವೆಲ್ಲವೂ ನಡೆಯುತ್ತಿವೆ.

 

ಆದರೆ ಇವ್ಯಾವ ಕಾನೂನೂಗಳೂ ಇಲ್ಲದಿದ್ದಾಗ, ಗುಲಾಮಗಿರಿ ನಿಂತಮೇಲೂ ಕರಿಯರಿಗೆ ಶಾಲೆಗಳಲ್ಲಿ ವಿದ್ಯೆ ಪಡೆಯುವ, ಸಾರ್ವಜನಿಕ ಬಸ್ಸುಗಳನ್ನು ಹತ್ತುವ, ಹತ್ತಿದರೂ ಉಳಿದವರೊಂದಿಗೆ ಕೂರುವ ಸ್ವಾತಂತ್ರ್ಯವೂ ಇಲ್ಲದಿದ್ದ ಕಾಲವೊಂದಿತ್ತು. ಇಂದಿನ ಕರಿಯರ ಅಜ್ಜ ಮುತ್ತಜ್ಜಂದಿರು ಇಪ್ಪತ್ತನೇ ಶತಮಾನದ ಆರಂಭದಲ್ಲಿ ವಿದ್ಯೆ ಪಡೆಯದ ಕಾರಣದಿಂದಲೇ ಇವತ್ತಿಗೂ ನೂರಿಪ್ಪತ್ತು ವರ್ಷದ ನಂತರವೂ ಹೆಚ್ಚಿನ ಕರಿಯರು ಬಡವರಾಗಿಯೇ ಉಳಿದಿರೋದು. ಕೆಲ ಕೆಲಸಗಳಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆಯಲ್ಲಿರೋದು. ಇಂತಹ ಕಾಲದಲ್ಲೂ ದಿಟ್ಟತನದಿಂದ ನಿಂತ ಕೆಲ ಕರಿಯರು ಇಡೀ ಜಗತ್ತಿಗೇ ಮಾದರಿ. ಹೆಸರುಗಳು ನೂರಾರಿವೆ, ಆದರೆ ಈ ಚೈತನ್ಯಗಳು ನಮಗೆ ಕೊಟ್ಟ ಸಂದೇಶಗಳನ್ನು ನಾವು (ನಮಗಿಂತಾ ಮುಖ್ಯವಾಗಿ ಅಮೇರಿಕನ್ ಕರಿಯರು) ಅರ್ಥೈಸಿಕೊಳ್ಳಬೇಕು. ಅದೇನೆಂದರೆ “ನೀವು ನನ್ನನ್ನು ನೂರು ರೀತಿಯಲ್ಲಿ ಶೋಷಿಸಿದರೂ, ನಿಮಗಿಂತ ಉತ್ತಮನಾಗುವ ನನ್ನ ಪ್ರಯತ್ನವನ್ನು ನಾನು ನಿಲ್ಲಿಸಲಾರೆ. ನಿಮ್ಮ ಲೆಕ್ಕದಲ್ಲಿ ಒಳ್ಳೆಯ ಸಂಬಳದ ಕೆಲಸ, ದೊಡ್ಡದೊಂದು ಮನೆ, ಕಾರು ಇವೇ ತಾನೇ ಸಫಲತೆಯ ಸಂಕೇತಗಳು. ಇವಿದ್ದರೆ ನನ್ನನ್ನೂ ಪಕ್ಕದಲ್ಲಿ ಕೂರಿಸಿಕೊಳ್ಳುತ್ತೀರಿ, ಹೌದು ತಾನೇ? ಇದನ್ನು ನಾನು ಪಡೆದೇ ತೀರುತ್ತೇನೆ. ಕರಿಯರೆಂದರೆ ಬರೇ ಗದ್ದೆ ಕೆಲಸ, ಚಾಲಕ ಅಥವಾ ಅಪರಾಧಿ ಮಾತ್ರವೇ ಎಂಬ ನಿಮ್ಮ ನಂಬಿಕೆಯನ್ನು ಮುರಿಯುತ್ತೇನೆ. ಇವತ್ತು ನೀವು ನನ್ನನ್ನು ನಿಮ್ಮ ಪಕ್ಕ ಕೂರಲುಬಿಡಲಿಲ್ಲ, ಆದರೆ ಒಂದುದಿನ ನಿಮ್ಮನ್ನು ನನ್ನ ಪಕ್ಕ ಕೂರಿಸಿಕೊಂಡೇ ಕೂರಿಸಿಕೊಳ್ತೇನೆ. ಸಾಯುವ ಮುನ್ನ ಸಮಾಜದಲ್ಲಿ ಗಣ್ಯನೆನಿಸಿಕೊಂಡೇ ಸಾಯುತ್ತೀನಿ”, ಎಂಬ ನಿರ್ಧಾರವೊಂದನ್ನು ಅವರು ಮನಸ್ಸಿನಲ್ಲೇ ಮಾಡಿಕೊಂಡಿದ್ದರು. ಯಾರಿಗೂ ಹೇಳಿಕೊಂಡು ತಿರುಗಾಡಲಿಲ್ಲ, ಆದರೆ ಅದನ್ನು ಮಾಡಿ ತೋರಿಸಿದರು. ಇವತ್ತು ಅರ್ಧದಷ್ಟಾದರೂ ಕರಿಯರು ವಿದ್ಯೆ ಕಲಿತಿದ್ದರೆ, ಬೇರೆ ಬೇರೆ ರೀತಿಯ ಸಫಲತೆಗಳನ್ನು ಕಂಡಿದ್ದರೆ ಅದರಲ್ಲಿ ಈ ಚೈತನ್ಯಗಳ ಪಾಲೂ ದೊಡ್ಡದಿದೆ.

ಪೌಲ್ ವಿಲಿಯಮ್ಸ್

ಈ ಚಿತ್ರದಲ್ಲಿ ಕಾಣುವ ಈ ದೈತ್ಯಪ್ರತಿಭೆಯನ್ನು ನೋಡಿ. ಈತನ ಹೆಸರು ಪೌಲ್ ವಿಲಿಯಮ್ಸ್. ಕರಿಯರೆಲ್ಲಾ ಇನ್ನೂ ಗದ್ದೆಗಳಲ್ಲೇ ಕೆಲಸ ಮಾಡುತ್ತಿದ್ದಾಗ, ಶಾಲೆಗೆ ಹೋಗ್ತೀನಿ ಅಂತಾ ಕನಸು ಕಂಡ. ಕನಸು ಕಂಡಿದ್ದು ಮಾತ್ರವಲ್ಲ, ಅದನ್ನು ನನಸಾಗಿಸಿಕೊಂಡ ಕೂಡಾ. ಹಣ್ಣಿನ ವ್ಯಾಪಾರಿಯಾಗಿದ್ದ ಬಡ ಅಪ್ಪನಿಗೆ ದುಂಬಾಲು ಬಿದ್ದರೂ, ಶಾಲೆಗೆ ಕಳಿಸಲು ಅಪ್ಪನ ಬಳಿ ಹಣವೆಲ್ಲಿಂದಾ ಬರಬೇಕು!? ವಯಸ್ಸು ಹತ್ತಾಗುವ ಮುನ್ನವೇ ಅಪ್ಪ ಅಮ್ಮ ಇಬ್ಬರೂ ತೀರಿಕೊಂಡು, ಅನಾಥಾಶ್ರಮಗಳಲ್ಲಿ ಬೆಳೆದ. ಕೊನೆಗೆ ಕುಟುಂಬವೊಂದು ಇವನನ್ನು ದತ್ತು ಪಡೆಯಿತು. ಅವರು ದತ್ತುಪಡೆಯುವಾಗ ಈತ ಕೇಳಿದ್ದು ಒಂದೇ ಪ್ರಶ್ನೆ “ನಿಮ್ಮನೆಗೆ ಬಂದರೆ ಶಾಲೆಗೆ ಸೇರಿಸ್ತೀರಾ?”. ಅವರು ಹೂ ಅಂದಿದ್ದೇ ತಡ, ಬ್ಯಾಗು ಹಿಡ್ಕೊಂಡು ಹೊರಡಲು ರೆಡಿಯಾಗಿದ್ದ. ಇಡೀ ಶಾಲೆಯಲ್ಲಿ ಮೊದಲ ಏಳುವರ್ಷ ಕಾಲ ಇವನೊಬ್ಬನೇ ಕರಿಯ ವಿದಾರ್ಥಿ. ಎಲ್ಲರ ಅಪಹಾಸ್ಯ ಮೂದಲಿಕೆ ಯಾವುದಕ್ಕೂ ಕಿವಿಗೊಡದೆ, ಓದಿದ. ಮುಂದೆ ಕಾಲೇಜಿಗೂ ಸೇರಿ ಅರ್ಕಿಟೆಕ್ಚರ್ ಡಿಗ್ರಿಯನ್ನೂ ಪಡೆದ. 25ನೇ ವಯಸ್ಸಿಗೇ ವಾಸ್ತುಶಿಲ್ಪದ ಸ್ಪರ್ಧೆಗಳಲ್ಲೆಲ್ಲಾ ಮೊದಲ ಪ್ರೈಜುಗಳನ್ನೂ ಪಡೆದ. ಮೂರುವರ್ಷ ಕಂಪನಿಯೊಂದರಲ್ಲಿ ಕೆಲಸ ಮಾಡಿ, ನಂತರ ತನ್ನದೇ ಕಂಪನಿಯನ್ನೂ ತೆರೆದ. ಜಗತ್ತಿನ ನಿಯಮಗಳಿಗೆ ಸೆಡ್ಡುಹೊಡೆದು ಕರಿಯ-ಬಿಳಿಯ ಎಲ್ಲರ ಹೆಗಲಿಗೆ ಹೆಗಲುತಾಗಿಸಿ ಸಮನಾಗಿ ನಿಲ್ಲುತೇನೆ ಅಂತಾ ಹೊರಟವನಿಗೆ, ಜಗತ್ತು ತನ್ನನ್ನು ಪಕ್ಕದಲ್ಲಿ ಕೂರಿಸಿಕೊಳ್ಳದಿರುವುದನ್ನು ಕಂಡು ಭ್ರಮನಿರಸನವಾಯ್ತು. ಕ್ಲೈಂಟುಗಳು ಇವನನ್ನು ಕರಿಯನೆಂಬ ಕಾರಣಕ್ಕೆ ಪಕ್ಕಕ್ಕೆ ಕೂರಗೊಡದೇ ಟೇಬಲ್ಲಿನ ಎದುರಿಗೆ ಕೂರಲು ಹೇಳುತ್ತಿದ್ದರು. ಹಗಲೂ ರಾತ್ರಿ ಕೂತು, ತನ್ನ ಕಡೆ right side up ಇರುವಂತೆ ಮಾಡಿ ಬರೆದ ಡ್ರಾಯಿಂಗ್ ಅನ್ನು ಕ್ಲೈಂಟಿಗೆ ವಿವರಿಸುವಾಗ, ಕ್ಲೈಂಟು ಪಕ್ಕದಲ್ಲಿ ಕೂರದಿದ್ದರೆ, ಆರ್ಕಿಟೆಕ್ಟ್ ಆಗಿ ನೀವು ಈ ಕಡೆ, ಕ್ಲೈಂಟು ಆ ಕಡೆ ಕೂತರೆ ಡ್ರಾಯಿಂಗನ್ನ ಅರ್ಥಮಾಡಿಸೋದು ಹೇಗೆ? ನೀವೇ ಆ ಆರ್ಕಿಟೆಕ್ಟ್ ಅಂದುಕೊಳ್ಳಿ. ದಿನಗಟ್ಟಲೇ ನೀವು ಡ್ರಾಯಿಂಗ್ ಬೋರ್ಡ್ ಎದುರು ನಿಂತು ಬರೆದ ಆ ಡ್ರಾಯಿಂಗು ನಿಮ್ಮ ಮೆದುಳಲ್ಲಿ ನಿಮ್ಮ right side up ರೀತಿಯಲ್ಲೇ ಅಚ್ಚಾಗಿರುತ್ತದೆ. ನಿಮಗೆ ಸರಿಯಾಗುವಂತೆ ಡ್ರಾಯಿಂಗ್ ಇಟ್ಟುಕೊಂಡರೆ ಕ್ಲೈಂಟಿಗೆ ಮಂಡೆಬಿಸಿ, ಕೋಪ. ಅವರ ಕಡೆ ಸರಿಯಾಗುವಂತೆ ಇಟ್ಟರೆ ಅರ್ಥಮಾಡಿಸಲು ನಿಮ್ಮ ಮೆದುಳು ಹರಸಾಹಸ ಪಡಬೇಕು. ಒಟ್ನಲ್ಲಿ ಕಷ್ಟ. ಇದೇ ಕಷ್ಟ ವಿಲಿಯಮ್ಸನಿಗೂ ಇತ್ತು. ಹಾಗಂತ ಇವ “ನೀವೆಲ್ಲಾ ನನ್ನ ಶೋಷಿಸ್ತಾ ಇದ್ದೀರಿ, ನಾನು ದಮನಿತ” ಅಂತಾ ಅಳಲಿಲ್ಲ ಕೂಗಲಿಲ್ಲ. ನಿಮ್ಮನ್ನೆಲ್ಲಾ ಕೊಲ್ಲಬೇಕು ಅಂತಾ ಕೋವಿಹಿಡಿದು ಹೊರಡಲಿಲ್ಲ. ಬದಲಿಗೆ ಇವ ಈ ಸಮಸ್ಯೆಯನ್ನೇ ತಲೆಕೆಳಗಾಗಿಸಿದ. ಹೇಗೆ ಅಂತಾ ಕೇಳ್ತೀರಾ?

 

Upside down drawing ಎಂಬ ಕಲೆಯನ್ನು ತಾನೇ ಹುಟ್ಟುಹಾಕಿದ. ಅಂದರೆ ಡ್ರಾಯಿಂಗ್ ಬರೆಯುವಾಗಲೇ ಕ್ಲೈಂಟ್ ಆ ಕಡೆ ಇದ್ದಾರೆ ಎಂದು ಊಹಿಸಿಕೊಂಡು, ಅವರಿಗೆ right side up ಇರುವಂತೆಯೇ ಡ್ರಾಯಿಂಗ್ ಬರೆಯುವುದು! ಆಗ ನಿಮ್ಮ ಮೆದುಳಲ್ಲಿಯೂ ಅದು ಆ orientationನಲ್ಲೇ ಅಚ್ಚಾಗುತ್ತದೆ. ವಿವರಿಸುವಾಗ ಸೂಪರ್ ಸುಲಭ! ಕ್ಲೈಂಟ್ ಹೇಗೂ ಆಕಡೆಯೇ ಇದ್ದಾರೆ, ಅವರಿಗೆ ಅದು right side up ಆಗಿಯೇ ಕಾಣುತ್ತದೆಯಾದ್ದರಿಂದ ಅವರಿಗೂ ಅರ್ಥೈಸಿಕೊಳ್ಳಲು ಸುಲಭ!! ಇದಾದ ಮೂರೇ ವರ್ಷದಲ್ಲಿ ಪೌಲ್ ವಿಲಿಯಮ್ಸ್’ನ ಪ್ರಾಜೆಕ್ಟುಗಳು ಎಲ್ಲಾಕಡೆಯೂ ಪ್ರಸಿದ್ಧವಾದವು. ಜನರು ದೂರದೂರುಗಳಿಂದ ಕರೆಕರೆದು ಮನೆ, ಫ್ಯಾಕ್ಟರಿ, ಚರ್ಚುಗಳ ಪ್ರಾಜೆಕ್ಟುಗಳನ್ನು ಕೊಡಲಾರಂಭಿಸಿದರು. ಹತ್ತಾರು ನಗರಗಳಲ್ಲಿ ಇವನ ಆಫೀಸುಗಳು ತೆರೆದವು. ಹಾಲಿವುಡ್ ತಾರೆಯರ ಮನೆಗಳ ವಿನ್ಯಾಸಕ್ಕೆ ಕೈಹಾಕಿದ ಮೇಲಂತೂ ವಿಲಿಯಮ್ಸ್ ಈ ವೃತ್ತಿಯಲ್ಲಿ ಸೆಲೆಬ್ರಿಟಿಯೇ ಆಗಿಬಿಟ್ಟ. ಜೀವಿತಾವದಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕಟ್ಟಡಗಳ ವಿನ್ಯಾಸಮಾಡಿದ ಈತನನ್ನು ಸರ್ಕಾರಗಳು, ಸಮುದಾಯಗಳು ಕರೆಕರೆದುಸನ್ಮಾನ ಮಾಡಿದವು. ಸಮಾಜದಲ್ಲಿ ಗಣ್ಯನಾದ. ಇದೆಲ್ಲದರ ಮಧ್ಯೆ ಅದ್ಯಾವ ಮಾಯದಲ್ಲೋ ಗೊತ್ತಿಲ್ಲ, ತನಗೇ ಗೊತ್ತಿಲ್ಲದೇ ವಿಲಿಯಮ್ಸ್ ಕ್ಲೈಂಟುಗಳ ಪಕ್ಕವೇ ಕೂರಲು ಪ್ರಾರಂಭಿಸಿದ್ದ. ಅವನ upside down drawingನ ಅಗತ್ಯವೇ ನಿಂತುಹೋಗಿತ್ತು. ಜೀವಮಾನದಲ್ಲಿ ಮೂರು ಗೌರವ ಡಾಕ್ಟರೇಟ್ ಪಡೆದ. ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ (AIA)ನ ಮೊತ್ತಮೊದಲ ಆಫ್ರಿಕನ್ ಅಮೇರಿಕನ್ ಸದಸ್ಯನಾಗಿದ್ದ ಈತನಿಗೆ, ಮರಣೋತ್ತರ ಚಿನ್ನದ ಪದಕವನ್ನು ನೀಡಿ AIA ಸನ್ಮಾನಿಸಿತು.

ಪ್ರತಿಭೆ, ಪರಿಶ್ರಮ ಇದ್ದಲ್ಲಿ ಸಫಲತೆ ಬಂದೇ ಬರುತ್ತದೆ. ಸಫಲತೆ ಇದ್ದಲ್ಲಿ ಯಾವ ಅಸ್ಪೃಷ್ಯತೆಯೂ ನಿಲ್ಲಲ್ಲ ಎಂಬುದು ನನ್ನ ಬಲವಾದ ನಂಬಿಕೆ. ನನ್ನ ಜೀವನದಲ್ಲಂತೂ ನಾನದನ್ನು ಅಳವಡಿಸಿಕೊಂಡಿದ್ದೇನೆ. ಯಾರೋ ನನ್ನ ಮನೆಯೊಳಗೆ ಬಿಟ್ಟುಕೊಳ್ಳಲಿಲ್ಲ ಅಂತಾ ಅವತ್ತೂ ನಾನು ಅತ್ತಿಲ್ಲ, ಇವತ್ತೂ ನಾನು ಗಮನಿಸಲ್ಲ. ಯಾವ ಜಾತಿ ಸಮುದಾಯವಾದರೂ, ನನಗೆ ಇಷ್ಟವಿಲ್ಲದವರ ಮನೆಗೆ ನಾನೇ ಕಾಲಿಡಲ್ಲ. ನನಗಿಷ್ಟವಾದವರು ನನ್ನನ್ನು ಅವರ ಮನೆಗೆ ಕರೆಸಿಕೊಳ್ಳುವಂತಾ ಕೆಲಸ ಮಾಡ್ತೀನಿ, ಅವರ ಮನೆಯ ಅಡುಗೆಮನೆಯಲ್ಲೇ ನಿಂತು ಕಾಫಿ ಕುಡೀತೀನಿ. ಇದೇ ಕಾರಣಕ್ಕೆ ಪೌಲ್ ವಿಲಿಯಮ್ಸ್’ನಂತವರು ನನ್ನ ಹೀರೋಗಳು.

 

ಆತ ತನ್ನ “I Am a Negro” ಎಂಬ ಲೇಖನದಲ್ಲಿ ಹೇಳಿಕೊಂಡ ಈ ಸಾಲುಗಳನ್ನು ನೋಡಿ.

I came to realize that I was being condemned, not by lack of ability, but by my color. I passed through successive stages of bewilderment, inarticulate protest, resentment, and, finally, reconciliation to the status of my race. Eventually, however, as I grew older and thought more clearly, I found in my condition an incentive to personal accomplishment, and inspiring challenge. Without having the wish to “show them,” I developed a fierce desire to “show myself.” I wanted to vindicate every ability I had. I wanted to acquire new abilities. I wanted to prove that I, as an individual, deserved a place in the world.

 

ಕನ್ನಡ ಅನುವಾದ:

“ನನ್ನನ್ನು ಸಮಾಜ ದೂರವಿಟ್ಟಿದ್ದು ನನ್ನ ಸಾಮರ್ಥ್ಯದ ಕೊರತೆಯಿಂದಲ್ಲ, ಆದರೆ ನನ್ನ ಮೈಬಣ್ಣದಿಂದ ಎಂದು ನಾನು ಅರಿತುಕೊಂಡೆ. ಸಮಾಜ ತನ್ನ ವರ್ತನೆಯಿಂದ ಮತ್ತೆ ಮತ್ತೆ ನನ್ನನ್ನು ದಿಗ್ಭ್ರಮೆಗೆ ದೂಡಿತು. ಬಾಯ್ಬಿಟ್ಟು ಹೇಳದಿದ್ದರೂ ಚಾಲ್ತಿಯಲ್ಲಿದ್ದ ಅಸ್ಪೃಷ್ಯತೆ, ನಾನು ಗೆಲ್ಲದಂತೆ ಅದು ಮಾತಿಲ್ಲದೇ ನಡೆಸುತ್ತಿದ್ದ ಪ್ರತಿಭಟನೆ, ನನ್ನ ಹಾಗೂ ನನ್ನ ಗೆಲುವಿನ ಬಗ್ಗೆ ಅದಕ್ಕಿದ್ದ ಅಸಮಾಧಾನಗಳನ್ನು ನೋಡುತ್ತಲೇ ನಾನು ಅಂತಿಮವಾಗಿ ನನ್ನ ಜನಾಂಗದ ಸ್ಥಿತಿಯೇ ಇದು ಎಂದು ನನ್ನೊಳಗೇ ರಾಜಿ ಮಾಡಿಕೊಂಡೆ. ಆದರೆ ಸೋಲೊಪ್ಪಿಕೊಳಲಿಲ್ಲ. ನಾನು ಬೆಳೆದಂತೆ ಮತ್ತು ಹೆಚ್ಚೆಚ್ಚು ಸ್ಪಷ್ಟವಾಗಿ ಯೋಚಿಸಿದಾಗ, ನನ್ನ ಈ ಪರಿಸ್ಥಿತಿಯೇ ನನಗೆ ವೈಯಕ್ತಿಕ ಸಾಧನೆಗೆ ಪ್ರೋತ್ಸಾಹವಾಗಬೇಕು, ಇದರಲ್ಲೇ ನಾನು ಗೆದ್ದು ತೋರಿಸಬೇಕು ಎಂಬ ಸ್ಪೂರ್ತಿದಾಯಕ ಸವಾಲನ್ನು ನಾನು ಕಂಡುಕೊಂಡೆ. “ಅವರಿಗೆ ತೋರಿಸುವ” ಬಯಕೆಗಿಂತಲೂ ಹೆಚ್ಚಾಗಿ, “ನನಗೆ ನಾನೇ ತೋರಿಸಿಕೊಳ್ಳುವ” ತೀವ್ರತರವಾದ ಬಯಕೆಯನ್ನು ನಾನು ಬೆಳೆಸಿಕೊಂಡೆ. ನನ್ನಲ್ಲಿರುವ ಪ್ರತಿಯೊಂದು ಸಾಮರ್ಥ್ಯವನ್ನೂ ಮತ್ತದರ ಸತ್ಯತೆಯನ್ನೂ ಎತ್ತಿಹಿಡಿಯಲು ನಾನು ಬಯಸಿದ್ದೆ. ಅದಕ್ಕಾಗಿ ನಾನು ಹೊಸ ಸಾಮರ್ಥ್ಯಗಳನ್ನು ಪಡೆಯಲು ಬಯಸಿದ್ದೆ. (ಜನಾಂಗದ ಕಥೆ ಬದಿಗಿರಲಿ, ಮೊದಲಿಗೆ) ಒಬ್ಬ ವ್ಯಕ್ತಿಯಾಗಿ ನಾನು ಜಗತ್ತಿನಲ್ಲಿ ನನ್ನದೇ ಒಂದು ಸ್ಥಾನವನ್ನು ಪಡೆಯಲು ಅರ್ಹನಾಗಿದ್ದೇನೆ ಎಂದು ಸಾಬೀತುಪಡಿಸಲು ನಾನು ಬಯಸಿದ್ದೆ”.

 

ಎಂತಾ ಅದ್ಭುತ ಮಾತುಗಳು!!

 

ಉಳ್ಳವರಿಗೆ ಮಿಲಿಯನ್ಗಟ್ಟಲೇ ಡಾಲರಿನ ಮನೆಗಳನ್ನು ಕಟ್ಟಿಕೊಟ್ಟ ವಿಲಿಯಮ್ಸ್, ಬಡವರಿಗಾಗಿ ಕಡಿಮೆ ವೆಚ್ಚದ ಮನೆಗಳನ್ನೂ ಮಾಡಿಕೊಟ್ಟ. ಮಾತ್ರವಲ್ಲ ಸರ್ಕಾರಗಳು ಬಡವರಿಗಾಗಿ affordable homes ಪ್ರಾಜೆಕ್ಟ್ ಘೋಷಿಸಿದಲ್ಲೆಲ್ಲಾ ಅತ್ಯಂತ ಕಡಿಮೆ ಫೀಸಿನಲ್ಲಿ, ಕೆಲವಡೆ ಫೀಸೇ ಪಡೆಯದೆಯೂ ಕೆಲಸಮಾಡಿಕೊಟ್ಟ. “Expensive homes are my business and social housing is my hobby” ಎನ್ನುತ್ತಿದ್ದ ವಿಲಿಯಮ್ಸ್ ಹತ್ತುಹಲವು ಹಂತಗಳಲ್ಲಿ ನಮಗೆ ಹೀರೋ ಆಗಬೇಕು.

ಪೌಲ್ ವಿಲಿಯಮ್ಸ್, ಬಿಳಿಯನೆಂಬ ಕಾರಣಕ್ಕೆ ಯಾರಿಗೂ ತಾನು ಕೂತಿದ್ದ ಸೀಟ್ ಬಿಟ್ಟುಕೊಡಲಾರೆ ಎಂದು ಪಟ್ಟುಹಿಡಿದ ರೋಸಾ ಪಾರ್ಕ್ಸ್, ಬರೀ ಬಿಳಿಯರೇ ತುಂಬಿದ್ದ ಶಾಲೆ ಹೋಗಿ ಎಲ್ಲ ಅವಮಾನ ಸಹಿಸಿಯೂ ಛಲಬಿಡದೇ ವಿದ್ಯೆ ಪಡೆದ ರೂಬಿ ಬ್ರಿಡ್ಜಸ್, ಪದವಿಪಡೆದ ಮೊತ್ತಮೊದಲ ಕಪ್ಪುಜನಾಂಗದ ಮಹಿಳೆ ಚಾರ್ಲೀನ್ ಸ್ಮಿತ್, ಮಾರ್ಟಿನ್ ಲೂಥರ್ ಕಿಂಗ್ ಮುಂತಾದವರ ನೆರಳಲ್ಲಿ ಹೆಚ್ಚೆಚ್ಚು ಕರಿಯರು ವಿದ್ಯಾಭ್ಯಾಸ ಮಾಡಿದರು. ಸಮಾಜದಲ್ಲಿ ಗಣ್ಯರೆನಿಸಿಕೊಂಡರು, ಬ್ಯುಸಿನೆಸ್-ಮ್ಯಾನುಗಳಾದರು, ಹೋಟೇಲಿಯರುಗಳಾದರು, ಕ್ರಿಸ್ ಗಾರ್ಡ್ನರ್ ಸ್ಟಾಕ್ ಬ್ರೋಕರ್ ಕಿಂಗ್ ಕೂಡಾ ಆದ. ಕರಿಯರ ಮಕ್ಕಳಿಗೆ ಹೆಚ್ಚೆಚ್ಚು ಉದಾಹರಣೆಗಳು ನಿರ್ಮಾಣವಾದವು. ಇದರ ಪರಿಣಾಮವಾಗಿ ಇವತ್ತು ಕರಿಯರು ಇಲ್ಲದ ವೃತ್ತಿಕ್ಷೇತ್ರವೇ ಇಲ್ಲ ಎಂಬಂತಾಗಿದೆ. ನೂರುವರ್ಷದಲ್ಲಿ ಆ ದೇಶ, ಆ ಸಮಾಜ ಎರಡೂ ಸಹ ಬಹಳಷ್ಟು ಬದಲಾಗಿವೆ, ಬೆಳೆದಿವೆ. ಇವತ್ತು ಕರಿಯನೊಬ್ಬ ನಾನು ಕರಿಯ ಅಂತಾ ಅತ್ತೂಕರೆದು, ವಿಕ್ಟಿಮ್ ಕಾರ್ಡ್ ಹಿಡಿದುಕೊಂಡೇ ತನ್ನನ್ನು ತಾನು ನಿರೂಪಿಸುವ ಅಗತ್ಯವಿಲ್ಲವಾಗಿದೆ.

 

ಭಾರತದಲ್ಲಿ ಅಂಬೇಡ್ಕರ್ ಕೂಡಾ ಇದೇ ಚಾಲೆಂಜ್ ಅನ್ನು ಸ್ವೀಕರಿಸಿದರು. ದಲಿತನಾದರೂ ನಿಮ್ಮೆಲ್ಲರ ಎದುರೇ ನೀವೇ ಆಶ್ಚರ್ಯಪಡುವಷ್ಟು ಎತ್ತರಕ್ಕೆ ಬೆಳೆದು ತೋರಿಸುತ್ತೇನೆ ಎಂಬ ಸವಾಲು ಹಾಕಿಕೊಂಡದ್ದು ಮಾತ್ರವಲ್ಲ, ಅದನ್ನು ನಿರೂಪಿಸಿಯೂ ತೋರಿಸಿದರು. ನಾನು ಮಾಡಬಲ್ಲೆ ಅಂತಾದರೆ ನೀವೂ ಮಾಡಬಲ್ಲಿರಿ ಎಂದು ಉಳಿದ ದಲಿತರಿಗೆ ತೋರಿಸಿಕೊಟ್ಟರು. ನನ್ನಷ್ಟು ಪ್ರತಿಭಾವಂತರು ನೀವಲ್ಲ ಎಂಬ ಕೀಳರಿಮೆಯೇನಾದರೂ ಇದ್ದರೆ ಬಿಟ್ಟುಬಿಡಿ ಎಂದು ಕರೆಕೊಟ್ಟರು. ಅದನ್ನು ನಿವಾರಿಸಲು ಮೀಸಲಾತಿ ಎಂಬ ಆಯುಧವನ್ನೂ ಕೊಟ್ಟರು. ಜೀವನವೆಂಬ ರೇಸಿನಲ್ಲಿ ಸ್ವಲ್ಪ ಮುಂದೆನಿಂತು ರೇಸ್ ಪ್ರಾರಂಭಿಸುವ ಅನುಕೂಲವನ್ನು ಮಾಡಿಕೊಟ್ಟರು. ಕೆಲಕಾಲದ ನಂತರ ಮೀಸಲಾತಿಯ ಅಗತ್ಯವೇ ಇಲ್ಲದಷ್ಟು ಎತ್ತರಕ್ಕೆ ಏರಿ ಎಂಬ ಕರೆಯನ್ನೂ ಕೊಟ್ಟರು. ಆದರೂ ನಮ್ಮ ದಲಿತವರ್ಗದ ದುರಾದೃಷ್ಟ, ನಮ್ಮಲ್ಲಿ ಇನ್ನೊಬ್ಬ ಅಂಬೇಡ್ಕರು ಹುಟ್ಟಲೇ ಇಲ್ಲ.

 

ಪೌಲ್ ವಿಲಿಯಮ್ಸನ ಕೋಟ್’ನೊಂದಿಗೆ ಮುಕ್ತಾಯ ಹಾಡೋಣ:

“If I allow the fact that I am a Negro to checkmate my will to do, now, I will inevitably form the habit of being defeated.”

ಅನು: “ಜೀವನದಲ್ಲಿ ಏನಾದರೂ ಸಾಧಿಸುವ ಛಲಕ್ಕಿಂತಾ “ನಾನೊಬ್ಬ ನೀಗ್ರೋ” ಎಂಬ ಅಂಶವನ್ನೇ ದೊಡ್ದದು ಮಾಡಿಟ್ಟುಕೊಂಡು ಕೂತರೆ, ನಾನು ಅನಿವಾರ್ಯವಾಗಿ ಸೋಲುವ ಅಭ್ಯಾಸವನ್ನೇ ರೂಡಿಸಿಕೊಳ್ಳಬೇಕಾಗುತ್ತದೆ.”

ಜೀವನದಲ್ಲಿ ಗೆಲ್ಲಲು ಈ ಸಾಲಿಗಿಂತಾ ಒಳ್ಳೆಯ ಪ್ರೇರಣೆ ಬೇಕೇ?

 

ಯಥಾಪ್ರಕಾರ ಒಂದು ವರ್ಗದ ಜನರಿಗಾಗಿ ಒಂದು ಫುಟ್-ನೋಟ್ ಬರೆಯಲೇ ಬೇಕು (ಯಾವ ವರ್ಗ ಅಂತಾ ಕೇಳಬೇಡಿ. ಅವರಿಗೆ ಗೊತ್ತಿರುತ್ತೆ ಯಾವ ವರ್ಗ ಅವರು ಅಂತಾ).

ಈ ಲೇಖನದ ಅರ್ಥ, ಅಸ್ಪೃಷ್ಯನೊಬ್ಬ ಮೇಲ್ವರ್ಗದವರ ಒಡನಾಟ ಗಳಿಸಲು, ಮೇಲ್ವರ್ಗದವರಿಗೆ ಸೂಟ್ ಆಗುವಂತಾ ಆಟವನ್ನೇ ಆಡಬೇಕು, ಅವರ ನಿಯಮಗಳಂತೆಯೇ ನಡೆದುಕೊಳ್ಳಬೇಕು, ಅವರ ವಿರುದ್ಧ ಹೋರಾಡಬಾರದು ಎಂದಲ್ಲ. ವಿಲಿಯಮ್ಸ್ ಯಾರನ್ನೋ ನೆಚ್ಚಿಸಲು ಅವರ ಕಡೆಯ orientation ಇರುವ ಡ್ರಾಯಿಂಗ್ ಬರೆಯಲಿಲ್ಲ. ತನ್ನನ್ನು ಜಗತ್ತಿನೆದುರು ನಿರೂಪಿಸಲು, ಕರಿಯರೂ ಪ್ರತಿಭಾವಂತರೇ ಎಂಬುದನ್ನು ನಿರೂಪಿಸಲು ಅವನಿಗೆ ಆ ನಡೆಯ ಅಗತ್ಯವಿತ್ತು. ತಾನೇ ಸರಿ, ಬೇಕಾದರೆ ನನ್ನ ಕಡೆಯೇ ಕ್ಲೈಂಟುಗಳು ಬರಲಿ ಎಂದು ಕೂತಿದ್ದರೆ ಆತ ನೂರಾರು ಆರ್ಕಿಟೆಕ್ಟುಗಳ ನಡುವೆ ಒಬ್ಬನಾಗುತ್ತಿದ್ದನಷ್ಟೇ. ಬಹುಷಃ ಕರಿಯರಷ್ಟೇ ಆತನ ಕ್ಲೈಂಟುಗಳಾಗುತ್ತಿದ್ದರು. ಕರಿಯರಲ್ಲಿ ಎಷ್ಟು ಜನ ಸ್ವಂತ ಮನೆ, ಫ್ಯಾಕ್ಟರಿ, ಆಫೀಸು, ಚರ್ಚು ಕಟ್ಟಿಸುವಷ್ಟು ಸಬಲರಿದ್ದರು? ಅತನ ಬ್ಯುಸಿನೆಸ್ ಎಷ್ಟು ದೊಡ್ಡದಾಗಲು ಸಾಧ್ಯವಿತ್ತು? ಬದಲಿಗೆ Paul took the game to the whites, proved his worth and won the game fair and square, in their own arena. ಮಾತ್ರವಲ್ಲ ಅವನನ್ನೂ ಅವನ ಸಮುದಾಯವನ್ನೂ ದೂರವಿಟ್ಟಿದ್ದ ಬಿಳಿಯರ ಮೂತಿಗೇ ಇಕ್ಕಿಬಂದ. “ನಾನು ಕರಿಯ, ನನ್ನನ್ನು ನೂರಾರು ವರ್ಷ ತುಳಿದರು, ಈಗಲೂ ತುಳಿಯುತ್ತಲೇ ಇದ್ದಾರೆ, ಇವರು ತುಳಿಯದೇ ಇದ್ದಿದ್ದರೆ ನಾನೂ ಅವರಂತೆಯೇ ಆಗುತ್ತಿದ್ದೆ” ಅಂತಾ ವೇದನೆ ಗೀಚುವ ಬದಲು, “ನಿಮ್ಮ ಯೋಗ್ಯತೆ ತುಳಿಯಲಿಕ್ಕಷ್ಟೇ ಸೀಮಿತವಿರಬಹುದು, ನನ್ನ ಯೋಗ್ಯತೆ ಅದನ್ನೂ ಮೀರಿದ್ದು. ತುಳಿಸಿಕೊಂಡೂ ಎದ್ದುನಿಲ್ಲಬಲ್ಲ ವಾಮನ ನಾನು” ಎಂದು ತೋರಿಸಿಕೊಟ್ಟ. ಬೃಹದಾಕಾರವಾಗಿ ಬೆಳೆದುನಿಂತ. ಹತ್ತುಹಲವು ಉದಾಹರಣೆಗಳಿಗೆ ನಾಯಕನಾದ. ನೂರಾರು ಮರಿ ಪೌಲ್ ವಿಲಿಯಮ್ಸರಿಗೆ ಪ್ರೇರಣೆಯಾದ.

0 comments on “ಪ್ರತಿಭೆ, ಪರಿಶ್ರಮ, ಮತ್ತು ಸಫಲತೆಗಳ ಸಮಾಗಮ – ಪೌಲ್ ವಿಲಿಯಮ್ಸ್

Leave a Reply

Your email address will not be published. Required fields are marked *