
ಒಂದು ವಿಷ್ಯ ಯೋಚನೆ ಮಾಡಿ.
ನಿಮಗೆ ನಿಮ್ಮ ಬಾಸ್ “ನಾಳೆ ಶುಕ್ರವಾರ ಬೆಳಿಗ್ಗೆ ಎಂಟಕ್ಕೆ, ಅಥವಾ ಒಂಬತ್ತಕ್ಕೆ ಆಫೀಸಲ್ಲಿ ಇರಬೇಕು, ಒಂದು ಕೆಲಸ ಇದೆ” ಅಂದ್ರೆ, ನೀವು ಆ ಟೈಮಿಗೆ ಕರೆಕ್ಟಾಗಿ ಅಲ್ಲಿ ಇರ್ತೀರಿ ಅಲ್ವಾ? ಹೋಗ್ಲಿ, ಇನ್ನೂ ಕರೋನಾಶಕೆ ಮುಗಿದಿಲ್ಲ, ಆಫೀಸಿಗೆ ಹೋಗಲಿಕ್ಕಿಲ್ಲ ಮನೆಯಿಂದಲೇ ಕೆಲ್ಸ ಅಂತೀರಾ. ನಿಮ್ಮ ಕ್ಲೈಂಟ್ “ನಾಳೆ ಮಧ್ಯಾಹ್ನ ಎರಡಕ್ಕೆ ಒಂದು MS Teams ಕಾಲ್ ಮಾಡುವ” ಅಂದ್ರೆ, ಉಳಿದ ಕೆಲಸ ಎಲ್ಲಾ ಮುಗಿಸಿ ಅದಕ್ಕೆ ರೆಡಿಯಾಗ್ತೀರಿ. ನಿಧಾನ ಊಟ ಮಾಡುವವರು ನೀವಾಗಿದ್ರೆ, ಹನ್ನೆರಡೂವರೆಗೇ ಊಟ ಶುರುಮಾಡಿ, ಒಂದೂವರೆ ಒಂದೂಮುಕ್ಕಾಲಿಗೆಲ್ಲಾ ಮುಗ್ಸಿ, ಶರ್ಟು ಹಾಕ್ಕೊಂಡು ಕ್ಯಾಮರಾ ಮುಂದೆ ಎರಡಕ್ಕೆ ರೆಡಿಯಾಗ್ತೀರಿ, ಅಲ್ವಾ?
ನೀವು ಒಂದು ಹೋಟಲಲ್ಲಿ ಕೆಲಸ ಮಾಡ್ತಿದ್ದೀರಿ ಅಂತಾದರೆ, ನಿಮ್ಮ ಸೂಪರ್ವವೈಸರ್ರು ದಿನಕ್ಕೆ ಮೂರು ಸಲ (ಬೆಳಿಗ್ಗೆ ಹತ್ತಕ್ಕೆ, ಮಧ್ಯಹ್ನ ಒಂದಕ್ಕೆ, ಸಂಜೆ ಐದಕ್ಕೆ) ವೇಸ್ಟ್ ಎಲ್ಲಾ ತೆಗೆದು ಹೊರಗಡೆ ಬಿಸಾಕು ಅಂದ್ರೆ, ನೀವದನ್ನ ಚಾಚೂ ತಪ್ಪದೇ ಪಾಲಿಸ್ತೀರಿ, ಕಸ ಬಿಸಾಕ್ತೀರಿ.
ನಿಮ್ಮ ಗರ್ಲ್ಫ್ರೆಂಡು ಶನಿವಾರ ಸಂಜೆ ಫಿಲಂಗೆ ಹೋಗೋಣ ಕಣೋ ಅಂದ್ರೆ, ಶನಿವಾರದ ಕೆಲಸಗಳನ್ನೆಲ್ಲಾ ಆಚೀಚೆ ಮಾಡಿ, ಸಾಧ್ಯವಿರೋವಷ್ಟನ್ನ ಮುಗಿಸಿ ಸಂಜೆ ಆರಕ್ಕೆಲ್ಲಾ ಸಿನಿಮಾ ನೋಡೋಕೋಸ್ಕರ ಮಾಲ್ ತಲುಪ್ತೀರಿ.
ಸ್ನೇಹಿತರು “ಮುಂದಿನ ತಿಂಗಳು ಲಾಂಗ್ ವೀಕೆಂಡಲ್ಲಿ ಗೋಕರ್ಣ ಹೊನ್ನೆಮರಡು ಟ್ರಿಪ್ ಹೋಗೋಣ” ಅಂದ್ರೆ, ಬೇರೆ ಕೆಲಸಗಳನ್ನ ಆಚೀಚೆ ದೂಡಿ, ಅದೇ ಲಾಂಗ್ ವೀಕೆಂಡಲ್ಲಿ ಮನೆಯಲ್ಲಿ ಏನಾದರೂ ಫಂಕ್ಷನ್ನು ಅಥವಾ ಸಂಬಂಧಿಗಳ ಮದುವೆಗಿದುವೆ ಇದ್ರೆ, ಅವರಿಗೆ ಫೋನ್ ಮಾಡಿ “ಆಗಲ್ಲ ಬರೋಕೆ ಕಣೋ, ಸಾರಿ. ಆಫೀಸಲ್ಲಿ ಸ್ವಲ್ಪ ಡೆಲಿವರೆಬಲ್ ಹೊರೆ ನನ್ನ ಮೇಲೇ ಇದೆ” ಅಂತಾ ಬೂಸಿಬಿಟ್ಟು, ನಿಮ್ಮನ್ನ ನೀವು ಫ್ರೀ ಮಾಡ್ಕೊಂಡು, ಗೋಕರ್ಣ ಹೊನ್ನೆಮರಡು ಹೋಗ್ತೀರ, ತಾನೇ?
ಎಷ್ಟು ಚಂದವಾಗಿ, ಪ್ರಾಮಾಣಿಕವಾಗಿ ಆ ಸಮಯಕ್ಕೆ ಸರಿಯಾಗಿ ಅಲ್ಲಿರುವ ಪ್ರಯತ್ನ ಮಾಡ್ತೀರಿ ಅಲ್ವಾ?
.
.
.
.
.
.
ಹೀಗಿದ್ದ ಮೇಲೆ “ನಾಳೆ ಬೆಳಿಗ್ಗೆಯಿಂದ ವಾಕ್ ಮಾಡಬೇಕು” ಅಂದುಕೊಂಡಿದ್ದನ್ನ, ನ್ಯೂ ಇಯರ್ ಹಿಂದಿನ ದಿನ “ನಾಳೆಯಿಂದ ದಿನಾ ಎಕ್ಸರ್ಸೈಜ್ ಮಾಡ್ತೀನಿ” ಅಂತಾ ನಿರ್ಧರಿಸಿದ್ದನ್ನ, “ಈ ವರ್ಷ ಮುಗಿಯೋದರೊಳಗೆ ಒಂದು ಯೂಟ್ಯೂಬ್ ಚಾನಲ್ ಪ್ರಾರಂಭಿಸಬೇಕು” ಅಂತಾ ಆಸೆಪಟ್ಟಿದ್ದನ್ನ, “ಮುಂದಿನ ತಿಂಗಳ ಸಂಬಳ ಬಂದಮೇಲೆ ಆ ಪಿಎಂಪಿ ಎಕ್ಸಾಮ್ ಮುಗಿಸಿಬಿಡ್ತೀನಿ” ಅಂದುಕೊಂಡಿದ್ದನ್ನ, “ಇನ್ಮೇಲೆ ಹೀಗಿರಲ್ಲ, ಈ ರೀತಿ ಇವರಿಂದ ಮೋಸ ಹೋಗಲ್ಲ, ಬೇರೆ ರೀತಿಯಲ್ಲಿ ವ್ಯವಹರಿಸ್ತೀನಿ” ಅಂತಾ ನಿರ್ಧರಿಸಿದ್ದನ್ನ ಯಾಕೆ ಗಟ್ಟಿಯಾಗಿ ಹಿಡಿದುಕೊಂಡು ಮುಗಿಸಲ್ಲ? ಯಾಕೆ ಆ ನಿರ್ಧಾರ, ಆಸೆ, ಕನಸುಗಳನ್ನ ಪೂರ್ತಿಗೊಳಿಸುವೆಡೆಗೆ ಪೂರ್ತಿ ಶಕ್ತಿ, ಪ್ರಯತ್ನ ಹಾಕಲ್ಲ?
ಯಾಕೆ ಗೊತ್ತಾ? ಇದು ನಿಮ್ಮೆಡೆಗೆ ನಿಮಗಿರುವ “ಗೌರವದ ಕೊರತೆ” (Lack of self-respect).
ನಿಮ್ಮ ಬಗ್ಗೆಯೇ ನಿಮಗಿರುವ “ಅಭಿಮಾನ ಶೂನ್ಯತೆ”.
ನಿಮ್ಮ ಜೀವನದಲ್ಲಿ ನೀವು ನಿಮ್ಮ ಬಾಸ್, ಕ್ಲೈಂಟ್, ಸೂಪರ್ವೈಸರ್ರು, ಗರ್ಲ್ಫ್ರೆಂಡು, ಸ್ನೇಹಿತರುಗಳಿಗೆ ಕೊಟ್ಟಷ್ಟು ಗೌರವವನ್ನೂ ನೀವು ನಿಮ್ಮೆಡೆಗೆ ಇಟ್ಟುಕೊಂಡಿಲ್ಲ. ನಿಮ್ಮ ಕನಸುಗಳನ್ನು ನೀವು ಮುಂದೂಡಿದಾಗಲೆಲ್ಲವೂ ನಿಮ್ಮ ಬಗ್ಗೆ ನಿಮಗಿರುವ ಅಭಿಮಾನ ಶೂನ್ಯತೆ ಎದ್ದು ಕಾಣಬೇಕು, ಆದರದು ಕಾಣಲ್ಲ. ಬದಲಿಗೆ ಮುಂದೂಡುವಿಕೆಯ ನಿಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಒಂದು ನೆಪ ಹುಡುಕ್ತೀರಿ.
ಇದು ನಿಲ್ಲಬೇಕು.
ಉಳಿದವರು ಕರೆದಾಗ ಹೇಗೆ ಅಲ್ಲಿರ್ತೀರೋ, ಅಷ್ಟೇ ಶ್ರದ್ದೆಯಿಂದ ನಿಮ್ಮ ಕರೆಗಳಿಗೆ ಯಾಕಿರಲ್ಲ? ನಿಮ್ಮ ಕರೆಗಳಿಗೆ ಮಾತ್ರ ಯಾಕೆ ತಪ್ಪಿಸ್ಕೊಳ್ತೀರಿ.
ಇದು ನಿಲ್ಲಬೇಕು
ನಿಮ್ಮ ಕನಸುಗಳಿಗೆ ನೀವೇ ಮುಖ್ಯವಾಗಿ ಅಲ್ಲಿರಬೇಕು. ಕಾರು ಮುಂದೆ ಹೋಗಬೇಕು ಅಂತಾದರೆ ಮೊದಲು ಆಕ್ಸಲರೇಟರ್ ಮೇಲೆ ಕಾಲಿಡಬೇಕು. ನಿಮ್ಮ ಕನಸು ಮತ್ತು ನಿರ್ಧಾರಗಳೆಡೆಗಿನ ಪಯಣಕ್ಕೊಂದು ಮೊಮೆಂಟಮ್ ಒದಗಿಸಬೇಕು. ಅದಿಲ್ಲದೇ ಜೀವನ ಮುಂದೆ ಹೋಗಲ್ಲ, ನಿಮ್ಮ ಕಸುಗಳು ಅವಾಗಿಯೇ ಹತ್ತಿರಬರಲ್ಲ, ನಿಮ್ಮ ನಿರ್ಧಾರಗಳು ತಂತಾನೇ ನೆರವೇರಲ್ಲ. ಆಕ್ಸೆಲರೇಟರ್ ಮೇಲೆ ಕಾಲಿಡಲೇ ಬೇಕು. ಹಾಗೂ ಆಕ್ಸೆಲರೇಟರ್ ಮೇಲಿನ ಆ ಕಾಲು ನಿಮ್ಮದೇ ಆಗಬೇಕು.
ನಿಮ್ಮಬಗ್ಗೆ ಅಭಿಮಾನ, ಗೌರವ ಬೆಳಿಸಿಕೊಳ್ಳಿ. ಉಳಿದವರಿಗಿಂತಾ ಹೆಚ್ಚೇ ಬೆಳೆಸಿಕೊಳ್ಳಿ. ಅದಾಗದಿದ್ದರೆ ಪರವಾಗಿಲ್ಲವೇನೋ, ಆದರೆ ಉಳಿದವರಿಗಿಂತಾ ಕಡಿಮೆಮಾಡಿಕೊಳ್ಳಬೇಡಿ.