Saturday, 20 April, 2024

“ಹೆಸರಿನಲ್ಲೇನಿದೆ ಬಿಡಿ ಸ್ವಾಮಿ”

Share post

ನಿಜವಾಗಿಯೂ….ಹೆಸರಲ್ಲೇನಿದೆ!?

ಹೆಸರಲ್ಲಿ ಬರೀ ಅಕ್ಷರಗಳಿವೆ ಅಂತಾ ಹಾಸ್ಯ ಮಾಡ್ಬೇಡಿ. ಎಷ್ಟೋ ಸಲ ಮನುಷ್ಯನಿಗಿಂತಾ ಅವನ ಹೆಸರೇ ಮುಖ್ಯವಾಗುತ್ತೆ. ಅದಕ್ಕೇ ಅಲ್ವೇ, ಮನುಷ್ಯ ಸತ್ತಮೇಲೂ ಅವನ ಕೆಲಸಗಳಿಂದಾಗಿ ಹೆಸರು ಮಾತ್ರ ಉಳಿಯುವುದು? ಕೆಲವೊಮ್ಮೆ ಮಾಡಿದ ಕೆಲಸ ಕೂಡ ಅಳಿದು ಹೋದರೂ ಹೆಸರು ಮಾತ್ರ ಹಾಗೇ ಉಳಿಯುತ್ತೆ. ಯಾರಾದರೂ ಅತ್ಯಾಕಾಂಕ್ಷಿಗಳನ್ನು ಕಂಡಾಗ “ನೀನೇನು ದೊಡ್ಡ ಅಲೆಕ್ಸಾಂಡರೋ!” ಅಂತಾ ಕೇಳುವುದೂ, ನಮ್ಮ ಅಭಿವ್ಯಕ್ತಿಗೆ ಅವಕಾಶವೇ ಕೊಡದ ಬಾಸ್’ಗೆ ಹಿಟ್ಲರ್ ಅಂತಾ ಹೆಸರಿಡುವುದೂ, ಹುಚ್ಚುಚ್ಚು ನಿರ್ಧಾರಗಳನ್ನು ತೆಗೆದುಕೊಳ್ಳುವವರಿಗೆ ತುಘಲಕ್ ಅಂತಾ ಕರೆಯುವುದೂ, ನಾನು ಸುಳ್ಳೇ ಹೇಳಲ್ಲಪ್ಪ ಅಂದರೆ ‘ಸತ್ಯಹರಿಶ್ಚಂದ್ರನ ಮೊಮ್ಮಗ ನೀನು’ ಎನ್ನುವುದೂ, ಯಾರಿಗದರೂ ಜಗಳ ಹಚ್ಚಿಕೊಟ್ಟರೆ ಶುಕುನಿ, ಮಂಥರೆ, ನಾರದಮುನಿ ಅಂತೆಲ್ಲಾ ಕರೆಯುವುದೂ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಆ ವ್ಯಕ್ತಿಗಳು ಇವತ್ತಿಲ್ಲದಿದ್ದರೂ, ಅವರ ಗುಣಲಕ್ಷಣಗಳ ಹಾಗೂ ಸಾಧನೆ-ವೈಫಲ್ಯಗಳ ಕುರುಹಾಗಿ ಆ ಹೆಸರುಗಳು ನಿಂತುಬಿಟ್ಟಿವೆ.

ಹೆಸರು ಎನ್ನುವ ಕಲ್ಪನೆ ಯಾವಾಗಲಿಂದ ಪ್ರಾರಂಭವಾಯ್ತು ಎನ್ನುವುದು ಇಂದಿಗೂ ಒಂದು ಕುತೂಹಲಭರಿತ ವಿಷಯ. ನಮ್ಮೆಲ್ಲಾ ದಾಖಲೀಕೃತ ಚರಿತ್ರೆ ಹಾಗೂ ದಾಖಲಾಗದ ಪುರಾಣಗಳು ಬರುವ ಕಾಲಕ್ಕಾಗಲೇ ಹೆಸರಿಡುವ ಸಂಪ್ರದಾಯ ಪ್ರಾರಂಭವಾಗಿತ್ತು. ಭೂಮಿಯ ಮೊದಲ ಮಾನವ ಇನ್ನೊಬ್ಬ ಮಾನವನನ್ನು ಕಂಡಾಗಲೇ ಒಬ್ಬರನ್ನೊಬ್ಬರು ಗುರುತಿಸಲು ಹೆಸರು, ಹಚ್ಚೆ, ಸಂಖ್ಯೆಗಳು ಇವೆಲ್ಲದರ ಅಗತ್ಯ ಕಂಡುಬಂದಿತ್ತು. ನಿಧಾನಕ್ಕೆ ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಾದಂತೆ, ಗ್ರಾಮದ ಗಾತ್ರ ಬೆಳೆದಂತೆ, ಬೇರೆ ಬೇರೆ ಸಮುದಾಯ, ಬುಡಕಟ್ಟು ಮತ್ತು ನಾಗರೀಕತೆಗಳೊಂದಿಗೆ ಬೆರೆದಂತೆಲ್ಲಾ ಹೆಸರು, ಹಚ್ಚೆಗಳ ಕಲ್ಪನೆ ಹೆಚ್ಚೆಚ್ಚು ಗಟ್ಟಿಯಾಗಿ ಅವುಗಳ ಹಿಂದೆ ತಮ್ಮದೇ ಆದ ತರ್ಕ ಮತ್ತು ಸಮೀಕರಣಗಳನ್ನು ಬೆಳೆಸಿಕೊಳ್ಳುತ್ತಾ ರೂಪುಗೊಂಡವು. ಒಂದು ಜೀವಿಗೆ ಅಸ್ಮಿತೆ ಕೊಡುವುದರಲ್ಲಿ ಹೆಸರಿನ ಪಾತ್ರ ಬಹುಮುಖ್ಯ. ಹಾಗಾಗಿಯೇ ಮನೆಯಲ್ಲಿ ಹತ್ತು ನಾಯಿಗಳಿದ್ದು, ಎಲ್ಲಾ ನಾಯಿಗಳ ಮೇಲೂ ಏಕರೂಪದ ಪ್ರೀತಿಯಿದ್ದಾಗ್ಯೂ, ಒಂದಕ್ಕೆ ಟೈಗರ್ ಅಂತಲೂ, ಇನ್ನೊಂದಕ್ಕೆ ಪಿಂಕಿ ಅಂತಲೂ ಹೆಸರಿಡೋದು.

ಈಗಂತೂ ಹೆಸರೇ ಎಲ್ಲವೂ ಆಗಿಹೋಗಿದೆ. ಮಾಡುವ ಕೆಲಸ ಏನು ಬೇಕಾದರೂ ಆಗಲಿ, ಆದರೆ ಕೆಲಸ ಮಾತ್ರ ಇನ್ಫೋಸಿಸ್, ವಿಪ್ರೋ, ಟಾಟಾ, ಮೈಕ್ರೋಸಾಫ್ಟ್, ಗೂಗಲ್ ಎಂಬ ಹೆಸರಿನ ಕಂಪನಿಗಳಲ್ಲೇ ಬೇಕಾಗಿದೆ. ಕುಡಿಯುವುದು ತಂಪುಪಾನೀಯವೇ ಆಗಿದ್ದರೂ ಕೋಕ್ ಬೇಕು, ಪೆಪ್ಸಿಯೇ ಬೇಕು. ಸೇದುವುದು ಅದೇ ಅನಿಷ್ಟ ಹೊಗೆಯಾದರೂ ಗೋಲ್ಡ್ ಫ್ಲೇಕ್, ಮಾರ್ಲ್ಬರೋ ಎನ್ನುವ ಹೆಸರಿನದ್ದೇ ಆಗಬೇಕು. ನನ್ನ ಅಜ್ಜಿ ತಿನ್ನೋದು ಅದೇ ಕಾಂಪೋಸಿಶನ್ನಿನ ಮಾತ್ರೆಯಾದರೂ ಅವರಿಗೆ ಬಿ.ಪಿ ಇಳಿಸಲು Diamox ಮಾತ್ರೇನೇ ಆಗ್ಬೇಕು. ಎಲ್ಲಾ ಮಾತ್ರೆಗಳಲ್ಲೂ ಹೆಚ್ಚೂಕಮ್ಮಿ ಅದೇ ಘಟಕಾಂಶಗಳು ಅಜ್ಜಿ ಅಂತಾ ಎಷ್ಟು ಅರ್ಥ ಮಾಡಿಸಿದ್ರೂ ಬೇರೆ ಮಾತ್ರೆ ತಿನ್ನೊಲ್ಲ. ಅವರಿಗೆ ಆ ಕೆಂಪುಬೇಗಡೆಯ ಆ ಹೆಸರಿನ ಆ ಮಾತ್ರೆಯೇ ಬೇಕು. ಹಾಗಾಗಿ, ಹೆಸರಿನಲ್ಲೇನಿದೆ ಸ್ವಾಮಿ ಅನ್ಬೇಡಿ. ತುಂಬಾನೇ ಇದೆ.

ಮನುಷ್ಯರ ವಿಷಯಕ್ಕೆ ಬಂದ್ರೆ ಇಲ್ಲಿ ತಮಾಷೆಯ ದೊಡ್ಡ ಪಟ್ಟಿಯೇ ಇದೆ. ನಮ್ಮಜ್ಜಿ ಹೆಸರು ಶಾರದ ಅಂತಾ, ಆದ್ರೆ ಓದೋಕೆ ಒಂದಕ್ಷರಾನೂ ಬರಲ್ಲ! ನುಡಿಸೋ ಮಾತು ಬಿಡಿ, ವೀಣೇಯನ್ನ ಕೈಯಲ್ಲಿ ಹಿಡಿಯೋಕೂ ಬರಲ್ಲ ಅವರಿಗೆ! ಹೆಸರು ಸಿದ್ರಾಮ, ಆದರೆ ಕೆಲಸಕ್ಕೆ ಕರೆದ್ರೆ….ಏಯ್ ಹೋಗಪ್ಪಾ ನಾನ್ ಬರಲ್ಲ ಅನ್ನೋ ಜನರನ್ನ ನಾವು ನೋಡಿಲ್ವಾ? ಶಕ್ತಿ ಅಂತಾ ಹೆಸರಿಟ್ಟುಕೊಂಡು, ಐದು ಕೇಜಿ ಅಕ್ಕಿ ಮೂಟೆ ಎತ್ತುವಷ್ಟರಲ್ಲಿ ಸುಸ್ತು ಆಗೋರನ್ನೂ, ಪ್ರಾರ್ಥನಾ ಅಂತಾ ಹೆಸರಿಟ್ಟುಕೊಂಡ ನಾಸ್ತಿಕರನ್ನೂ, ಗಾಯನ ಅಂತಾ ಹೆಸರಿದ್ದರೂ ಹಾಡಲಾಗದವರನ್ನೂ ನೀವು ನೋಡಿರ್ತೀರಿ.

ಆದರೆ ಇವತ್ತಿನ ವಿಷಯ, ಊರಿನ ಹೆಸರುಗಳು. ಆದರೆ ಅಂತಿಂತಾ ಹೆಸರುಗಳಲ್ಲ. ತಮಾಷೆಯ ಹೆಸರುಗಳು. ನಮ್ಮಲ್ಲೇನೋ ‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್’ ಎಂದು ನಮ್ಮ ಆದಿಕವಿ ಪಂಪ ಹೆಮ್ಮೆಯಿಂದ ಹೇಳಿಕೊಂಡ. ಆದರೆ ಎಲ್ಲ ಊರಿನ ಹೆಸರುಗಳೂ ಅಷ್ಟೆಲ್ಲಾ ಹೆಮ್ಮೆಯಲ್ಲಿ ಹೇಳಿಕೊಳ್ಳೋ ಹಾಗಿರೋಲ್ಲ. ಉದಾಹರಣೆಗೆ ಯು.ಎಸ್.ಎ.ನಲ್ಲಿ ಓರೆಗಾಂವ್ ಎಂಬ ರಾಜ್ಯದಲ್ಲಿ ಒಂದು ಊರಿನ ಹೆಸರು ‘ಡಲ್ (Dull)’ ಅಂತಾ ಇಟ್ಟುಬಿಟ್ಟಿದ್ದಾರೆ. ಇದಕ್ಕೆ ಸರಿಯಾಗಿ, ಇವರ ಪಕ್ಕದ ಊರಿನವರೂ ಸಹ ನಾವೀನೂ ಕಮ್ಮಿ ಇಲ್ಲ, ಅಂತಾ ತೋರಿಸೋಕೆ ಅವರ ಊರಿಗೆ ‘ಬೋರಿಂಗ್ (Boring)’ ಅಂತಾ ಹೆಸರಿಟ್ಟಿದ್ದಾರೆ. ಜೀವನದಲ್ಲಿ ಅದೇನೋ ಜಿಗುಪ್ಸೆಯೋ ಈ ಜನರಿಗೆ, ಇವರಿಬ್ರೂ ಸೇರ್ಕೋಂಡು ಪ್ರತೀವರ್ಷದ ಆಗಸ್ಟ್ 9ರಂದು ‘ಡಲ್ ಹಾಗೂ ಬೋರಿಂಗ್ ಡೇ’ ಅಂತಾ ಆಚರಿಸುತ್ತಾರಂತೆ!! ಅವತ್ತು ನಡೆಯುವ ಕಾರ್ಯಕ್ರಮಗಳು ಅಷ್ಟೇನೂ ಆಸಕ್ತಿದಾಯಕವಾಗಿರಲಿಕ್ಕಿಲ್ಲ ಬಿಡಿ. UKಯಲ್ಲೂ ಡಲ್ ಎನ್ನುವ ಸಣ್ಣ ಊರಿದೆ! ಈ ಡಲ್ ಮತ್ತು ಬೋರಿಂಗಿಗೆ ಸ್ಪರ್ಧೆಯೊಡ್ದಲು ನಿರ್ಧರಿಸಿದ ಆಸ್ಟ್ರೇಲಿಯನ್ನರು ತಮ್ಮದೊಂದು ಊರಿಗೆ ‘ಬ್ಲಾಂಡ್(Bland = ಸಪ್ಪೆ)’ ಎಂದು ಹೆಸರಿಟ್ಟಿದ್ದಾರೆ! ಇಷ್ಟೆಲ್ಲಾ Dull ಹಾಗೂ Boring ಹೆಸರುಗಳ ನಡುವೆ, ಅಮೇರಿಕೆಯಲ್ಲೊಂದು ಕಡೆ ‘ಬ್ರಿಲಿಯಂಟ್’ ಎಂಬ ಸಣ್ಣ ಊರೂ ಇದೆ. ಊರಿನಲ್ಲಿರುವವರು ನಿಜವಾಗಿಯೂ ಬ್ರಿಲಿಯಂಟ್ ಹೌದೋ ಅಲ್ಲವೋ, ಆದರೆ ಊರಿಗೆ ಈ ಹೆಸರಿಟ್ಟವನಂತೂ ನಿಜವಾಗಿಯೂ ಬ್ರಿಲಿಯಂಟ್ ಅಲ್ಲವೇ.


ಬಹಳಷ್ಟು ದೇಶಗಳಲ್ಲಿ ಇಂತಹುದೇ ತಮಾಷೆಯ ಹೆಸರಿಗೇನೋ ಕಮ್ಮಿಯಿಲ್ಲ. ‘ಸ್ವರ್ಗ ಮತ್ತು ನರಕ ಮೇಲೆಲ್ಲೋ ಇಲ್ಲ, ಇಲ್ಲೇ ಇವೆ. ಈ ಭೂಮಿಯಲ್ಲಿಯೇ ಇವೆ’ ಅಂತಾ ಯಾರೋ ಹೇಳಿದ್ದನ್ನ ಗಂಭೀರವಾಗಿ ತೆಗೆದುಕೊಂಡವರ್ಯಾರೋ, ತಮ್ಮೂರಿಗೆ ‘ಹೆಲ್ (Hell)’ ಅಂತಾನೇ ಹೆಸರಿಟ್ಟಿದ್ದಾರೆ. ಹೆಲ್ ಹೆಸರಿನ ಪುಟ್ಟ ಊರುಗಳು ಅಮೇರಿಕಾದ ಮಿಚಿಗನ್ ರಾಜ್ಯದಲ್ಲೂ ಮತ್ತು ನೆದರ್ಲಾಂಡಿನಲ್ಲೂ ಇವೆ. ‘ಹೆವನ್ (Heaven)’ ಎನ್ನುವ ನಗರ ಇದೆ ಎಂದು ಕೇಳಲ್ಪಟ್ಟಿದ್ದೇನಾದರೂ, ಇದುವರೆಗೂ ಅದನ್ನು ನಿರೂಪಿಸುವ ಚಿತ್ರಗಳ್ಯಾವುದೂ ಕಂಡುಬಂದಿಲ್ಲ. ಅಲ್ಲಿಯವರೆಗೆ ಸ್ವರ್ಗವನ್ನು ಹುಡುಕುತ್ತಲೇ ಇರಬೇಕು.

ಇನ್ನೊಂದು ತಮಾಷೆ ನೋಡಿ. ‘ಇಲ್ಲದೇ ಇರುವುದು’ ಇರಲು ಸಾಧ್ಯವಿದೆಯೇ!? ಹೌದು, ಊರಿನ ಹೆಸರಿನಲ್ಲಿ ಸಾಧ್ಯವಿದೆ. ಬ್ರಿಟೀಷರು ಈ ವಿಚಿತ್ರದ ಹಿಂದೆ ತಮ್ಮ ಕೈವಾಡ ತೋರಿಸಿದ್ದಾರೆ. ಇಂಗ್ಲೆಂಡಿನ ಡರ್ಹಮ್ ಕೌಂಟಿಯಲ್ಲೊಂದು ಊರು ‘ನೋ ಪ್ಲೇಸ್ (No Place)’!! ನನಗೆ ಈ ಊರಿನ ಬೋರ್ಡು ನೋಡಿದಾಗ ಬೀಚಿಯವರ ಲಲಿತಪ್ರಬಂಧವೊಂದರ ನೆನಪಾಯ್ತು. ಬೀಚಿಯವರು ಬೆಳಿಗ್ಗೆ ಮಲ್ಲೇಶ್ವರಂನಲ್ಲಿ ವಾಕಿಂಗ್ ಹೋಗುತ್ತಿದ್ದಾಗ ‘ಸೌಂದರ್ಯ ವಿಲ್ಲಾ (Soundarya Villa)’ ಎಂಬ ಮನೆಯ ಹೆಸರು ನೋಡಿ, ಅಷ್ಟೇನೂ ಸುಂದರವಿಲ್ಲದ ಆ ಮನೆಯ ಒಡತಿ ಅಲ್ಲೇ ಮನೆಯ ಮುಂದೆ ನಿಂತಿದ್ದಕ್ಕೂ ಸಂಬಂದಕಲ್ಪಿಸಿ ‘ಸೌಂದರ್ಯವಿಲ್ಲ ಹೌದು. ಆದರೆ ಅದನ್ನು ಬೋರ್ಡು ಹಾಕಿ ಇಷ್ಟು ರಾಜಾರೋಷವಾಗಿ ಹೇಳಿಕೊಳ್ಳುವುದ್ಯಾಕೆ?’ ಎಂದು ಚಟಾಕಿ ಹಾರಿಸುತ್ತಾರೆ. ಬಹುಷಃ ಇಂಗ್ಲೆಂಡಿನ ಈ ಊರಿನಲ್ಲೂ ಹೊಸಬರಿಗೆ ಮನೆ ಕಟ್ಟಲು ಜಾಗವಿಲ್ಲವೆಂದು ತಿಳಿಸಲು ‘No Place=ಜಾಗವಿಲ್ಲಾ’ ಅಂತೇನಾದ್ರೂ ಹೆಸರಿಟ್ಟಬಹುದೇನೋಪ್ಪಾ!

 

 

 

 

 

 

 

ಈ ರೀತಿಯ ಕಿತಾಪತಿಗಳಿಗೆ ಬ್ರಿಟೀಷರು ಅಮೇರಿಕನ್ನರು ಅಂತೇನೂ ವ್ಯತ್ಯಾಸವಿಲ್ಲ. ಅಮೇರಿಕೆಯಲ್ಲೊಂದು ಗ್ರಾಮದ ಹೆಸರು ‘ನೋ ನೇಮ್ (No Name)’! ಅಂದರೆ ಊರಿನ ಹೆಸರೇ ‘ಹೆಸರಿಲ್ಲ’ ಅನ್ನುವಂತಾಗಿದೆ. ಈ ಊರಿನ ಸುತ್ತಮುತ್ತ ಓಡಾಡೋ ಬಸ್ಸಿನ ಕಂಡಕ್ಟರುಗಳಿಗೆ, ಯಾರಾದ್ರೂ ಪ್ಯಾಸೆಂಜರ್ ‘ಹೆಸರಿಲ್ಲದ ಜಾಗಕ್ಕೆ ಒಂದು ಟಿಕೇಟ್ ಕೊಡಪ್ಪಾ’ ಎಂದರೆ, ಎಂತಾ ಭಯಂಕರ ತಲೆಬಿಸಿ ಅಲ್ವಾ! ಪೋಲೆಂಡಿನ ಒಂದು ಸಣ್ಣ ಊರಿಗೆ ‘ಪೋಲೀಸ್ (Police)’ ಅಂತಾ ಹೆಸರಿಟ್ಟುಬಿಟ್ಟಿದ್ದಾರೆ. ಅದೇನು ಪೋಲೀಸರಿರೋ ಊರೋ, ಅಥವಾ ಕಳ್ಳರು ಬರಬಾರದೆಂದು ಆ ಊರಿಗೆ ಪೋಲೀಸ್ ಅಂತಾ ಹೆಸರಿಟ್ಟಿದ್ದಾರೋ ಗೊತ್ತಾಲ್ಲಪ್ಪ. ಅಮೇರಿಕಾದ ವರ್ಜೀನಿಯಾ ರಾಜ್ಯದಲ್ಲೊಂದು ಊರಿನ ಹೆಸರು ‘ಕ್ರೇಜಿ ವುಮನ್ ಕ್ರೀಕ್ (Crazy Woman Creek)’. ವಿಕ್ರಮಾದಿತ್ಯನ ಕತೆಗಳಲ್ಲಿ ಬರುವ ‘ಪ್ರಮೀಳಾ ಸಾಮ್ರಾಜ್ಯ’ ಇದೇ ಇರಬಹುದೆಂದು ನನ್ನ ಹಾಗೂ ಎಲ್ಲಾ ಪುರುಷವಾದಿಗಳ ಅನಿಸಿಕೆ.

 

 

 

 

 

 

‘ಅಪಘಾತ ವಲಯ, ನಿಧಾನವಾಗಿ ಚಲಿಸಿ’ ಎಂಬ ಫಲಕವನ್ನು ನೀವು ನಮ್ಮ ರಸ್ತೆಗಳಲ್ಲಿ ನೋಡಿರುತ್ತೀರಿ. ಆದರೆ ಇಡೀ ಊರಿನ ಹೆಸರೇ ‘ಅಪಘಾತ’ ಅಂತಿದ್ದರೆ! ಹೌದು ಮೇರಿಲ್ಯಾಂಡಿನಲ್ಲೊಂದು ಊರಿನ ಹೆಸರೇ ಆಕ್ಸಿಡೆಂಟ್. ಈ ಊರಿನ ಅಕ್ಕಪಕ್ಕದಲ್ಲಿ ಕಾರು ಚಲಾಯಿಸುವಾಗ ಸ್ವಲ್ಪ ಜಾಗ್ರತೆ ಮಾರಾಯ್ರೆ.

 


ಹಾರ್ವಡ್ ವಿದ್ಯಾಲಯದ ತತ್ವಶಾಸ್ತ್ರದ ಪರೀಕ್ಷೆಯಲ್ಲೊಮ್ಮೆ, ನೂರು ಅಂಕಕ್ಕೆ ಒಂದೇ ಒಂದು ಪ್ರಶ್ನೆಯನ್ನು ಕೇಳಿದ್ದರಂತೆ. ಪ್ರಶ್ನೆ ಇದ್ದದ್ದು ‘Why?’ ಎಂದಷ್ಟೇ. ಅದರಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿ ಒಬ್ಬ ಮಾತ್ರ. ಅವನ ಉತ್ತರ ಇದ್ದದ್ದು ‘Why not?’ ಅಂತಷ್ಟೇ. ಆ ಕಥೆ ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಅರಿಜೋನಾದಲ್ಲಿ ‘Why’ ಮತ್ತು ಉತ್ತರ ಕ್ಯಾರೋಲೀನಾದಲ್ಲಿ ‘Why Not’ ಎಂಬ ಎರಡು ಊರುಗಳಿರುವುದಂತೂ ಸತ್ಯ. ವೇಲ್ಸ್’ನಲ್ಲಿ ‘Llanfairpwllgwyngyllgogerychwyrndrobwllllantysiliogogogoch’ ಎಂಬ ‘ಸಣ್ಣ ಹೆಸರಿನ’ ಒಂದು ಸಣ್ಣ ಊರಿದೆ. 2007ರಲ್ಲಿ ಈ ಊರಿನ ಪಕ್ಕದ ಊರಿನವರು ತಮ್ಮೂರನ್ನು ಪ್ರಚುರಪಡಿಸಲು, Golf Halt ಎಂದಿದ್ದ ಚೆಂದದ ಹೆಸರು ತೆಗೆದು ಹಾಕಿ, ‘Gorsafawddachaidraigodanheddogleddollônpenrhynareurdraethceredigion’ ಎಂದು ನಾಮಕಾರಣ ಮಾಡಿದರಂತೆ.

ಇಷ್ಟೇ ಅಲ್ಲದೆ Peculiar, Wair-a-bit, Truth of consequences, Happy, Climax, Parachute, Okay, Coward, Chemistry,  ಮುಂತಾದ ವಿಚಿತ್ರ ಹೆಸರಿನ ಊರುಗಳಿಗೆ ಈ ವಿಚಿತ್ರ ಜಗತ್ತಿನಲ್ಲೇನೂ ಬರವಿಲ್ಲ. ಚರಿತ್ರೆಯಾಗಲೀ, ಪೌರಣಿಕ ಮಹತ್ವವಾಗಲೀ ಇಲ್ಲದ ಊರುಗಳಲ್ಲಿ ಅದರ ಇತಿಹಾಸಕ್ಕೂ ಹೆಸರಿಗೂ ಸಂಬಂಧಕಲ್ಪಿಸುವ ಅಗತ್ಯ ಕಂಡುಬರುವುದಿಲ್ಲವೆಂದೆನಿಸುತ್ತದೆ. ಗೂಗಲ್ಲಿನಲ್ಲೊಮ್ಮೆ “Unusual place names” ಎಂದು ಕೀಲಿಸಿನೋಡಿ. ಮುಖದಲ್ಲಿ ನಗು ಮೂಡಿಯೇ ಮೂಡುತ್ತದೆ. ಈ ರೀತಿಯ ವಿಚಿತ್ರ, ತಮಾಷೆಯೆನಿಸುವ ಹೆಸರುಗಳು ಭಾರತದಲ್ಲೂ ಕಡಿಮೆಯೇನಿಲ್ಲ. ಕಾಲಾ-ಬಕ್ರಾ, ನಗೀನಾ, ಗಧಾ, ದಾರೂ, ಫೋರ್ಬ್ಸ್-ಗಂಜ್’ನಿಂದ ಹಿಡಿದು, ನಮ್ಮದೇ ಕರ್ನಾಟಕದ ಸಿಂಗಾಪುರ, ನಾರ್ವೆಯಂತಹಾ ಫಾರಿನ್ ಹೆಸರುಗಳೂ, ಜಯಪುರದಂತಹ ಉತ್ತರಭಾರತೀಯ ಹೆಸರುಗಳೂ, ಕೆನ್ನೆ ಕೆಂಪಾಗಿಸುಂತಹಾ ಬಾರೆ, ಕಳಚೆಯಂತಹ ಊರಿನ ಹೆಸರುಗಳೂ ಇವೆ.

ಇಷ್ಟೆಲ್ಲಾ ನಗುವರಿಸುವಂತಾ ಹೆಸರುಗಳಿದ್ದರೂ ನನ್ನ ಮನಸ್ಸು ಅರಳುವುದು ನನ್ನ ಮಲೆನಾಡಿನ ಬೆತ್ತದ ಕೊಳಲು, ಎಲೆಮಡಿಲು, ಮರಿ ತೊಟ್ಲು, ಒಳಲೆ ಮಾವಿನ ಕಾಡು, ಕೊಳಲೆ, ಬಿದರೆ, ಮಡುವಿನ ಕೆರೆ, ಹುಲಿಗರಡಿ, ಮೃಗವಧೆ, ಹೂವಿನ ಹಕ್ಲು, ತೆಂಗಿನಮನೆ, ಆಲೆಮನೆ, ಸಕ್ರೆಮಕ್ಕಿ, ಹಾಲ್ಮುತ್ತೂರು, ಗಾಳಿತೋಟ, ಬಸರೀಕಟ್ಟೆ, ಸಿರಿಮನೆ, ಅರಳಸುರುಳಿ, ಅಂಬುತೀರ್ಥ ಮುಂತಾದ ಹೆಸರಿಗಳಿಗೆ ಮಾತ್ರವೇ. ಅವುಗಳ ಹೆಸರು ಕೇಳಿದರೇನೇ ಜಯಂತ್ ಕಾಯ್ಕಿಣಿಯವರ ಹಾಡು ಕೇಳುತ್ತಿದ್ದೀವೇನೋ ಎನ್ನುವಂತಾ, ಒಂತರಾ ಮೇತಿಂಗಳ ಸಂಜೆಯಲ್ಲಿ ಯಾರೋ ಮೈಮೇಲೆ ನೀರಿನ ಹನಿ ಚಿಮುಕಿಸಿದಂಗೆ ಖುಷಿ. ನಿಮಗೂ ನಿಮ್ಮೂರಿನ ಮತ್ತು ಅದರಹತ್ತಿರದೂರುಗಳ ಹೆಸರುಗಳನ್ನು ಕೇಳಿದಾಗ ಹಾಗೇ ಆಗುತ್ತೆ ತಾನೇ?

ಆದ್ರೂ ಸಹ, ಹೆಸರಿನಲ್ಲೇನಿದೆ ಬಿಡಿ ಸ್ವಾಮಿ!

2 comments on ““ಹೆಸರಿನಲ್ಲೇನಿದೆ ಬಿಡಿ ಸ್ವಾಮಿ”

Vishwanath Elechithaya

Try a search “this street” in Google maps and browse around the places 😁

Reply

Are you talking about the “This Street” in Fargo, North Dakota, which meets with “That Street“?

Reply

Leave a Reply to Vishwanath Elechithaya Cancel reply

Your email address will not be published. Required fields are marked *