Tuesday, 16 April, 2024

ಜಪಾನಿಗರ ಜಾಣತನ ಪಾಯಿಂಟಿಂಗ್ ಅಂಡ್ ಕಾಲಿಂಗ್

Share post

2016ರಲ್ಲಿ ನಾನು ಜಪಾನಿಗೊಂದು ಪ್ರವಾಸ ಹೋಗಿದ್ದೆ. ಒಂದುದಿನ ಮೌಂಟ್ ಫ್ಯೂಜಿ ನೋಡೋ ಪ್ಲಾನ್ ಇತ್ತು. ಮೌಂಟ್ ಫ್ಯೂಜಿ ನೋಡೋದು ಅಂದ್ರೆ ಅದರ ಬುಡಕ್ಕೆ ಹೋಗಿ ಕತ್ತೆತ್ತಿ ನೋಡೋರೂ ಇದ್ದಾರೆ. ಮೌಂಟ್ ಫ್ಯೂಜಿಯ ಹೆಗಲವರೆಗೂ (mountain shoulder), ಹಿಮಬೀಳಲು ಪ್ರಾರಂಭವಾಗುವ ಜಾಗದವರೆಗೂ ಟ್ರೆಕ್ಕಿಂಗ್ ಮಾಡಿ ಹೋಗೋರೂ ಇದ್ದಾರೆ. ಅವಕ್ಕಂತಲೇ ಟೂರುಗಳಿವೆ. ಆದರೆ ಪವಿಗೆ (ನನ್ನ ಹೆಂಡತಿ) ಚಳಿ, ಹಿಮ ಅಂದ್ರೆ ಅಷ್ಟಕ್ಕಷ್ಟೇ ಆದ್ದರಿಂದ ಅವ್ಯಾವ ಸಾಹಸಕ್ಕೂ ಕೈ ಹಾಕುವಂತಿರಲಿಲ್ಲ. ನಮ್ಮ ಪ್ಲಾನು ಟೊಕಿಯೋದಿಂದಾ ಫೂಜಿಯೋಷಿದಾ ಎಂಬ ಊರಿಗೆ ರೈಲಲ್ಲಿ ಹೋಗಿ ಅಲ್ಲಿಂದಾ ನಡೆದು ಗುಡ್ಡ ಹತ್ತಿ, ಅಲ್ಲಿದ್ದ ಬೌದ್ಧವಿಹಾರವೊಂದರಿಂದ ಫ್ಯೂಜಿ ಪರ್ವತದ ಸೌಂದರ್ಯ ಸವಿಯುವುದಾಗಿತ್ತು.

ರೈಲು ಹತ್ತಿಯಾಯ್ತು. ಏನೋ ಅದೃಷ್ಟ ಹೆಚ್ಚುಕಮ್ಮಿಯಾಗಿ ಮೊದಲ ಕಂಪಾರ್ಟ್ಮೆಂಟೇ ಪ್ರವೇಶಿಸಿದ್ವಿ. ಅಲ್ಲಿಂದಾ ಡ್ರೈವರ್ ಮತ್ತು ಮುಂದಿನ ಟ್ರ್ಯಾಕ್ ನೋಡುವ ಅವಕಾಶ! ಇಂತಹ ಅವಕಾಶ ಸಿಕ್ಕಿದ್ಮೇಲೆ, ಅದೆಷ್ಟೇ ಸೀಟು ಖಾಲಿಯಿದ್ರೂ ಯಾರಾದ್ರೂ ಕೂರ್ತಾರಾ? ಮೊದಲಿಂದಲೂ ಡ್ರೈವರ್ರುಗಳು ಅಂದ್ರೆ ನಂಗೆ ಅದೇನೋ ಸೆಳೆತ. ಅಲ್ಲಿ ನಿಂತ್ಕಡು ಡ್ರೈವರ್ ರೈಲುಬಿಡೋದನ್ನೇ ನೋಡ್ತಾ ಇದ್ದೆ. ಡ್ರೈವರ್ ಅಲ್ಲ ಅದು ಡ್ರೈವರಮ್ಮ. ಒಂದು ಮೂವತ್ತು ವರ್ಷ ಇರಬಹುದು ಆಕೆಗೆ. ಲೀಲಾಜಾಲವಾಗಿ ಚುಕುಬುಕು ಓಡಿಸ್ತಾ ಇದ್ಲು. ಆದರೆ ಮಧ್ಯೆ ಮಧ್ಯೆ ಅದೇನೇನೋ ಕೈಸನ್ನೆ ಮಾಡ್ತಾ ಇದ್ಲು. ಕೈಬೆರಳನ್ನ ಒಂದ್ಸಲ ಸೀದಾ ಮುಂದೆ ತೋರಿಸೋದು, ಆಮೇಲೆ ಪಕ್ಕದಲ್ಲಿರೋ ಒಂದು ಶೀಟ್ ಕಡೇ ತೋರಿಸೋದು, ಆಮೇಲೆ ಕೆಲವೊಮ್ಮೆ ಕೆಲ ಇನ್ಸ್ಟ್ರುಮೆಂಟ್’ಗಳೆಡೆಗೆ ಬೆರಳು ತೋರಿಸೋದು ಮಾಡ್ತಾ ಇದ್ಲು.

ನಾನು ಮೊದಲಿಗೆ “ಈ ಟ್ರಾಕ್ ಪಕ್ಕದಲ್ಲಿ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿದ್ದಾರೆ. ಎಲ್ಲೆಲ್ಲಿ ಕ್ಯಾಮರಾ ಬರುತ್ತೋ ಅಲ್ಲಿ ಕೈಯೆತ್ತಿ ಕ್ಯಾಮರಾ ಕಡೆ ಸಂಜ್ಞೆ ಮಾಡಬೇಕು ಅನ್ನೋ ರೂಲ್ಸು ಇರಬೇಕು” ಅಂತದ್ಕಂಡೆ. “ಆದರೆ ಪಕ್ಕದಲ್ಲೂ ಕೈ ತೋರಿಸ್ತಾ ಇದ್ದಾಳಲ್ಲ! ತನಷ್ಟಕ್ಕೇ ತಾನು ಮಾತಾಡ್ಕೋತಾ ಇದ್ದಾಳಾ! ಅಥವಾ ಇವಳಿಗೇನಾದ್ರೂ ಸ್ಟ್ರೋಕ್ ಏನಾದ್ರೂ ಹೊಡೀತಿದ್ಯಾ!?” ಅಂತಲೂ ಅನುಮಾನ ಬಂತು. ನನ್ನ ಪಕ್ಕದಲ್ಲೇ ಒಬ್ಬ JR (Japan Rail) ಸ್ಟಾಫ್ ನಿಂತಿದ್ದ. ಅಲ್ಲಿಂದ ಡ್ರೈವರನ್ನ ನೋಡ್ತಾ, ಪ್ರತಿ ಸ್ಟೇಷನ್ ಬಂದಕೂಡಲೇ ಸ್ಟಾಪ್-ವಾಚ್ ನೋಡ್ಕಂಡು ಪೇಪರಲ್ಲಿ ಏನೋ ಗುರುತು ಹಾಕ್ಕಳ್ತಿದ್ದ. ಸ್ಟೇಷನ್ ಬಿಟ್ಟಕೂಡಲೇ ಇನ್ನೊಂದ್ಸಲ ಸ್ಟಾಪ್-ವಾಚ್ ನೋಡಿ ಮತ್ತೆ ಬರ್ಕೋತಾ ಇದ್ದ. ಆಗಾಗ ಕೆಳಗೆ ಇನ್ನೇನೋ ಅವರ ಲಿಪಿಯಲ್ಲಿ ಬರ್ಕೋತಾ ಇದ್ದ.

ಕೆಲ ಸ್ಟೇಷನ್ಗಳ ನಂತರ ಡ್ರೈವರ್ ಬದಲಾದ್ರು. ಅಮ್ಮಯ್ಯ ಇಳಿದು, ಅಪ್ಪಯ್ಯ ಬಂದ. ಇವನದ್ದೂ ಅದೇ ಕಥೆ. ಇವನು ಇನ್ನೂ ಸ್ವಲ್ಪ ನಾಟಕೀಯವಾಗಿ “ನಾನು…..ಅಲ್ಲಿssssssಗೆ ಹೋಗ್ತೀನಿ” ಅನ್ನೋತರ ಮುಂದೆ ಕೈ ತೋರಿಸ್ತಾ ಇದ್ದ. ನಂಗೆ ಮಂಡೆಕೆಟ್ಟುಹೋಯ್ತು. ಪಕ್ಕದಲ್ಲಿದ್ದ ಲೆಕ್ಕಬರೀತಿದ್ದ “ರೈಲು-ಲೆಕ್ಕಿಗ”ನಿಗೆ ಮಾತಾಡ್ಸೋಣ ಅಂತಾ ಪ್ರಯತ್ನಿಸಿದೆ. ಏನೇನೋ ಜಪಾನೀಸ್ ಭಾಷೆಯಲ್ಲಿ ಹೇಳಿ, ಮುಂದೆಬಗ್ಗಿ “ಗೊಮ್ಮೆನ್ನಾಸಾsssಯ್” ಅಂದ. ನಂಗೆ ಗೊಮ್ಮೆನ್ನಸಾಯ್ ಅಂದ್ರೆ “ಸಾರಿ ಸಾರ್” ಅಂತಾ ಗೊತ್ತಿದ್ರಿಂದ, ಇವನು ನಂಗೆ ” ದಯವಿಟ್ಟು ಸುಮ್ಮನಿರಿ. ಡಿಸ್ಟರ್ಬ್ ಮಾಡ್ಬೇಡಿ” ಅಂತಾ ಇದ್ದಾನೆ ಅಂತಾ ಸೂಚ್ಯವಾಗಿ ಗೊತ್ತಾಯ್ತು. ಸುಮ್ಮನಾದೆ.

ಆದರೆ ನಾವು ಇಷ್ಟಕ್ಕೆಲ್ಲಾ ಬಿಡ್ತೀವಾ. ಯಾವುದು ಮುಚ್ಚಿಡ್ತಾರೋ ಅದನ್ನೇ ಪಡೆಯೋ ಡಿಫೆಕ್ಟು ನಂದು. ಫೂಜಿಯೋಶಿದಾ ಸ್ಟೇಷನ್ನಲ್ಲಿ, ಟ್ರೈನ್ ಬದಲಾಯಿಸಬೇಕಿತ್ತು. ನನ್ನ ಅರ್ಧಾಂಗಿ ಹಿಂದಿನ ರೈಲಲ್ಲಿ ಛತ್ರಿ ಕಳೆದುಕಂಡಿದ್ದರಿಂದ, ಅಲ್ಲಿಯ ಸ್ಟಾಫ್ ಒಬ್ಬನ ಹತ್ರ ಆದರ ಬಗ್ಗೆ ವಿಚಾರಿಸ್ತಾ ಇದ್ದೆ. ಜಪಾನಿಯರಲ್ಲಿ ಇಂಗ್ಳೀಷ್ ಭಾಷೆಯನ್ನು ಮಾತನಾಡಬಲ್ಲವರು ನನಗೆ ಸಿಕ್ಕಿದ್ದು ಬಹಳ ಕಡಿಮೆ. ಈತ ನಿರರ್ಗಳವಾಗಿ ಇಂಗ್ಳೀಷಿನಲ್ಲಿ ಮಾತನಾಡಬಲ್ಲವನಾಗಿದ್ದ! ಕೋಲಾರ ಗೋಲ್ಡ್ ಮೈನ್ ಸಿಕ್ಕಿದಂಗಾಯ್ತು. ಕೇಳೋಕೆ ಸಾವಿರ ಪ್ರಶ್ನೆಯಿದ್ವು. ಮೊದಲು ಈ ರೈಲು ಡ್ರೈವರ್ರುಗಳ ನಾಟಕದ ಬಗ್ಗೆ ತಿಳ್ಕೊಳ್ಳೋಣಾ ಅಂತಾ ಅದನ್ನೇ ಕೇಳಿದೆ. ಅವ ಕೊಟ್ಟ ಉತ್ತರ ನನಗೆ ಹೊಸತೊಂದು ವಿಷಯವನ್ನೇ ತಿಳಿಸಿತು!!

ಜಪಾನಿಯರ ಸಮಯಪ್ರಜ್ಣೆ, ಗುಣಮಟ್ಟದ ಹುಚ್ಚು, ಸಿಕ್ಸ್-ಸಿಗ್ಮಾ, ಸೆಯಿರಿ, ಸೆಯ್ಟನ್, ಸೈಸೋ, ಸೈಕೆತ್ಸು, ಶಿತ್ಸುಕೆ (5S methodology) ಇವುಗಳ ಬಗ್ಗೆಯೆಲ್ಲಾ ತಿಳಿದಿದ್ದ ನನಗೆ ಜಪಾನೀಯರ ಈ “ಪಾಯಿಂಟಿಂಗ್ ಅಂಡ್ ಕಾಲಿಂಗ್” ಎಂಬ ಹೊಸದೊಂದು ರೂಡಿಯ ಬಗ್ಗೆ ತಿಳಿದುಬಂತು. ಜಪಾನೀ ಭಾಷೆಯಲ್ಲಿ ‘ಯುಬಿಸಾಶೀ ಕೋಶೋ’ ಅನ್ನುವ ಇದು ಜಪಾನೀಯರ ಔದ್ಯೋಕಿಗ ಸುರಕ್ಷತಾ ಕ್ರಮ (Occupational safety measure). ಅಂದರೆ ಕೆಲಸವೊಂದನ್ನು ಮಾಡುವಾಗ, ಆಗಾಗ ಉಪಯೋಗಿಸಬೇಕಾಗಿರುವ ಉಪಕರಣ/ಮುಖ್ಯವಾದ ಸೂಚಕಗಳೆಡೆಗೆ ಕೈತೋರಿಸಿ, ತಾನು ಮುಂದೆ ಮಾಡಬೇಕಾಗಿರುವ ಕೆಲಸವನ್ನು ಜೋರಾಗಿ ಒಮ್ಮೆ ಹೇಳುವುದು. ಅಂದರೆ ಆ ಡ್ರೈವರ್ ಮಾಡುತ್ತಿದ್ದೇನೆಂದರೆ “ನಾನು ಹೋಗಬೇಕಾಗಿರುವ ದಾರಿ ಹೀsssಗೆ ಮುಂದೆ. ಮುಂದಿನ ಜಂಕ್ಷನ್ ಇಷ್ಟುದೂರದಲ್ಲಿದೆ. ಹಳಿಬದಲಾಯಿಸುವಾಗ ಇದು, ಇದು, ಮತ್ತಿದು ಆನ್ ಇರಬೇಕು. ನನ್ನ ಸ್ಪೀಡ್ ಇಷ್ಟಿದೆ (ಇದಕ್ಕಿಂತಾ ಹೆಚ್ಚಿಲ್ಲ)” ಅಂತಾ ತನಗೆ ತಾನೇ ಹೇಳಿಕೊಂಡು ಕೆಲಸವನ್ನು ಮಾಡುತ್ತಿದ್ದ(ಳು). ಇದರಿಂದ ಪುನರಾವರ್ತಿತ ಕೆಲಸಗಳು ಹಾಗೂ ಅಪಾಯಕಾರಿ ಕೆಲಸಗಳಲ್ಲಿ, ಅವಘಡಗಳು ಘಟಿಸುವ ಸಾಧ್ಯತೆ ಬಹಳ ಕಡಿಮೆಯಂತೆ. ಜಪಾನಿನ JISHA ಅಂದರೆ Japan Industrial Safety and Health Associationನ್ನಿನ ನಿಯಮಗಳ ಪ್ರಕಾರ ಇದು ಕಡ್ಡಾಯ. ಸಧ್ಯಕ್ಕೆ ಜಪಾನ್ ಹಾಗೂ ನ್ಯೂಯಾರ್ಕ್ ಸಬ್-ವೇ ಸಿಸ್ಟಮ್ಮಿನಲ್ಲಿ ಈ Pointing and Callingನ ಅಭ್ಯಾಸ ಇದೆ. ಉಳಿದೆಡೆ ಕಮ್ಮಿ ಅಥ್ವಾ ಇಲ್ಲವೇ ಇಲ್ಲ. ನನ್ನ ಪಕ್ಕ ನಿಂತಿದ್ದ ಆ ರೈಲುಲೆಕ್ಕಿಗನ ಬಗ್ಗೆ ಕೇಳಿದೆ. ಆತ ಆಡಿಟರ್ ಅಂತೆ. ಆ ಡ್ರೈವರಮ್ಮನ annual appraisal ಮಾಡ್ತ ಇದ್ನಂತೆ.

ಇನ್ನೂ ಒಂದೆರಡು ವಿಷಯಗಳನ್ನು ತಿಳಿದುಕೊಳ್ಳುವ ವೇಳೆಗೆ ನಮ್ಮ ಎರಡನೇ ರೈಲು ಬಂದಿದ್ದರಿಂದ, ಹೆಚ್ಚು ಪ್ರಶ್ನೆಗಳಿಗೆ ಅವಕಾಶವಾಗಲಿಲ್ಲ. ಅವನಿಗೊಂದು “ಅರಿಗಾಟ್ಟೋ-ಗೊಝೈಮಾಸ್” (ಧನ್ಯವಾದ) ಹೇಳಿ ಓಡಿದೆ. ಇದಾದ ಮೇಲೆ ಬರೇ ಡ್ರೈವರ್ರುಗಳಲ್ಲದೇ ಫಾಟ್ಫಾರ್ಮ್ ಇನ್ಸ್ಪೆಕ್ಟರುಗಳೂ ಸಹ ಇದನ್ನು ಅನುಸರಿಸುತ್ತಿದ್ದದ್ದು ಕಂಡುಬಂತು. ವಿಡಿಯೋ ನೋಡಿದರೆ ನಿಮಗೆ ಅರ್ಥವಾಗಬಹುದು.

https://en.wikipedia.org/wiki/Pointing_and_calling

ಅಷ್ಟೆಲ್ಲಾ ಆಸೆಪಟ್ಟು ಹೋದ ನಮಗೆ ಫೂಜಿಯೋಷಿದಾದಲ್ಲಿ ಸರ್ಪ್ರೈಸ್ ಕಾದಿತ್ತು. ಇದ್ದಕ್ಕಿದ್ದಂತೆ ಹಿಮಪಾತ ಪ್ರಾರಂಭವಾಗಿ, ಬೌದ್ಧವಿಹಾರವನ್ನು ತಲುಪುವ ಮೆಟ್ಟಿಲುದಾರಿಯೆಲ್ಲಾ ಹಿಮಾವೃತ್ತವಾಗಿ, ಜಾರಿಕೆ ಹೆಚ್ಚು ಅಂತಾ ಹೇಳಿ ನಮಗೆ ಮೇಲೆ ಹೋಗೋಕೇ ಬಿಡಲಿಲ್ಲ. ಅಲ್ಲಿಂದಾ ಮೌಂಟ್ ಫ್ಯೂಜಿ ನೋಡುವ ಅವಕಾಶವೇ ಸಿಗಲಿಲ್ಲ. ಮರುದಿನ ಶಿಂಕಾನ್’ಸೆನ್ (ಬುಲೆಟ್ ಟ್ರೈನ್)ನಲ್ಲಿ ಒಸಾಕಾಕ್ಕೆ ಹೋಗುವಾಗ ಅದರ ಕಿಟಕಿಯಿಂದ ಮೌಂಟ್ ಫ್ಯೂಜಿಯನ್ನು ನೋಡಿ ಕಣ್ತುಂಬಿಕೊಂಡೆ.

ನಾವು ನೋಡಬೇಕೆಂದು ಹೋಗಿದ್ದು ಈ ನೋಟವನ್ನು
ನಮಗೆ ಸಿಕ್ಕ ನೋಟ ಇದು
ನಮಗೆ ಸಿಕ್ಕಿದ್ದು ಇದು
ಮರುದಿನ ಶಿಂಕಾನ್’ಸೆನ್ (ಬುಲೆಟ್ ಟ್ರೈನ್)ನ ಕಿಟಕಿಯಿಂದ ಕಂಡದ್ದು

0 comments on “ಜಪಾನಿಗರ ಜಾಣತನ ಪಾಯಿಂಟಿಂಗ್ ಅಂಡ್ ಕಾಲಿಂಗ್

Leave a Reply

Your email address will not be published. Required fields are marked *