Tuesday, 19 March, 2024

2020ರ ವಾರ್ಷಿಕ ಕಾಫಿ-ಟೀ ಮಹಾಸಮರದ ಮುಕ್ತಾಯ ಭಾಷಣ

Share post

ರಾಘು ಕಾಫಿಯನ್ನು ಪ್ರೀತಿಸಿದವ. ಹಾಗಾಗಿ ಚಹಾವನ್ನು ದ್ವೇಷಿಸುತ್ತಾನೆ ಅಂತೆಲ್ಲಾ ಅಂದುಕೊಳ್ಳುವ ಅಗತ್ಯವಿಲ್ಲ. ನಾನು ಮೊದಲಿಂದಲೂ ಒಂದಕ್ಕಿಂತಾ ಹೆಚ್ಚು ದೋಣಿಯಲ್ಲಿ ಕಾಲಿಟ್ಟವನೇ 😉 . ಪಾಂಡುವಿನ ಪ್ರೀತಿ ಮಾದ್ರಿಯೆಡೆಗೆ ಹೆಚ್ಚೋ, ಕುಂತಿಯೆಡೆಗೆ ಹೆಚ್ಚೋ ಅನ್ನುವ ಪ್ರಶ್ನೆಯೇ ಅನಗತ್ಯ ಹಾಗೂ ಅನುಚಿತವಾದದ್ದು. ಹಾಗೆಯೇ ನನಗೆ ಕಾಫಿ ಹೆಚ್ಚೋ, ಟೀ ಹೆಚ್ಚೋ ಅನ್ನೂ ಪ್ರಶ್ನೆಯೂ ಅಷ್ಟೇ ನಿಕೃಷ್ಟ. ಈ ಕಾಫಿ-ಟೀ ಹೋರಾಟಗಳೂ ಕಾಫಿ ಮೇಲಿನ ನೊರೆಯಷ್ಟೇ, ಚಹಾದ ಬಿಸಿಯಷ್ಟೇ ತಾತ್ಕಾಲಿಕ.

 

ಚಹಾದ ಬಗ್ಗೆ ನನ್ನ ತಕರಾರುಗಳೇನೇ ಇದ್ದರೂ ವಾರದಲ್ಲಿ ಕೆಲಬಾರಿ ನಾನು ಚಹಾದ ಮೊರೆ ಹೋಗುವುದು ಸಾಮಾನ್ಯ. ಆಫೀಸಿನಲ್ಲಿ ಕಾಫಿಯದ್ದೇ ಹೆಚ್ಚಿನ ಕಾರುಬಾರಾದರೂ, ಯಾರನ್ನಾದರೂ ಕ್ಯಾಬಿನ್ನಿನಲ್ಲಿ ಮಾತನಾಡಿಸಲು ಆಗದ ಪರಿಸ್ಥಿತಿಯಿದ್ದಾಗ ಅವರನ್ನು ಹೊರಗೆ ಕರೆದುಕೊಂಡು ಹೋಗಿ, ಆಫೀಸಿನ ಬಳಿಯಿರುವ ತಟ್ಟುಕಡವೊಂದರಲ್ಲಿ, ರೈನ್ಬೋ ಬ್ರಾಂಡಿನ ಹಾಲು ಹಾಕಿದ ಜೋಬಿ ಚೇಟ್ಟನ ‘ಚಾಯ’ ಅಪೋಶನ ತೆಗೆದುಕೊಂಡರೇನೇ ಸಂತೃಪ್ತಿ. ಆ ‘ಚಾಯ್ ಪೇ ಚರ್ಚಾ’ಗೆ ನೂರರಲ್ಲಿ ತೊಂಬತ್ತೇಳು ಪ್ರಾಬ್ಲಮ್’ಗಳನ್ನು ಸಾಲ್ವ್ ಮಾಡುವ ಶಕ್ತಿಯಿದೆ.

 

ಶುಕ್ರವಾರದ ಶೀಷಾ ಜೊತೆಗೆ ನನ್ನ ಸಾಥ್ ಕೊಡುವುದು ಚಂದದ ಜಿಂಜರ್-ಹನಿ ಟೀಯ ಒಂದು ದೊಡ್ಡ ಪಾಟ್. ಬಿಸಿನೀರಲ್ಲಿ ಇನ್ಫ್ಯೂಸ್ ಮಾಡಿದ ಹತ್ತು ಹದಿನೈದು ಶುಂಠಿ ಚೂರುಗಳು, ಅದರೊಂದಿಗೆ ಸರಸವಾಡುವ ಎರಡು ಚಮಚ ಯೆಮನೀ ಜೇನುತುಪ್ಪ…ಹಾಲೆಂಬ ಸವತಿಯ ತಲೆಬಿಸಿಯಿಲ್ಲದ ನೀರು+ಶುಂಠಿ+ಜೀನಿನ ಚಂದದ ಸಂಸಾರ. ಸುಮಾರು ಎರಡು ಕಪ್ ಟೀ ಹಿಡಿಸುವ ಈ “Aroma Garden Cafe”ಯ ಟೀ ಪಾಟ್ ಇಡೀ ದುಬೈನಲ್ಲಿ ನನ್ನ ಫೇವರಿಟ್. ಒಂದು ಶೀಷಾ ಮುಗಿಸುವಷ್ಟರಲ್ಲಿ ಈ ರೀತಿಯದ್ದು ಎರಡು ಪಾಟ್ ಮಿನಿಮಮ್ ಬೇಕೇಬೇಕು ನನಗೆ.

 

ಶನಿವಾರದ ದೋಸ್ತಿಗಳ ಮೀಟಿಂಗಿನಲ್ಲಿ ಒಂದೋ ಕಾಮೋಮೈಲ್ ಅಥವಾ ಜಿನ್ಸಿಂಗ್ ಟೀ ಬಂದೇಬರುತ್ತದೆ. ಜೀವನೋತ್ಸಾಹಕ್ಕೊಂದು ಬೇರೆಯದೇ ಅರ್ಥವನ್ನು ಕೊಡುತ್ತದೆ. ದುಬೈಎಂಬ ಊರಿನಲ್ಲಿದ್ದಷ್ಟೂ ದಿನ ಬೇರೆ ಬೇರೆ ದೋಸ್ತಿಗಳೊಂದಿಗೆ ನನ್ನನ್ನು ಹೆಚ್ಚು ಬೆರೆಸಿದ್ದು ಚಹಾವೇ. ಅರಬ್ಬರ ಚಾಯಿಗಳ ಲಿಸ್ಟಂತೂ ಅವರ ಹೆಂಡತಿ ಮಕ್ಕಳ ಎಣಿಕೆಯಷ್ಟೇ ಉದ್ದದ್ದು. ಎಮಿರಾತೀ ದೋಸ್ತರ ಮನೆಗೆ ಹೋದರೆ ಕರಕ್ ಚಾಯ್, ಲೆಬನೀಸರ ಅಥವಾ ಜೋರ್ಡೇನಿಯನ್ನರ ಮನೆಗೆ ಹೋದರೆ ದಾಸವಾಳದ ಐಸ್ ಟೀ, ಸೌದೀಮೂಲದ ದೋಸ್ತುಗಳಿಗೆ ಚೀನಾದ ವೂಯೀ ಬೆಟ್ಟದ (Wuyi Mountains) ತಪ್ಪಿನಿಂದ ಬಂದ ಊಲಾಂಗ್ ಟೀ (Oolong Tea)ಯ ಹುಚ್ಚು, ಮೊರಕ್ಕನ್ನರ ಮನೆಗಳಲ್ಲಿ ಜಗತ್ಪ್ರಸಿದ್ಧ ಮೊರಕ್ಕನ್ ಟೀ…..ಒಂದೇ ಎರಡೇ. ಇವರುಗಳೊಂದಿಗೆ ಮಾತು ಪ್ರಾರಂಭಿಸಲು ನಿಮಗೆ ಇವರ ಟೀಗಳ ಬಗ್ಗೆ ಗೊತ್ತಿದ್ದು ಸ್ವಲ್ಪ ಅದರ ಬಗ್ಗೆ ಮಾತನಾಡಿದರೆ (ಹೊಗಳಿದರೆ 😉 ) ಸಾಕು, ಹತ್ತುನಿಮಿಷದಲ್ಲಿ ನೀವು ಅವರ ಮನೆಮಗನೇ ಆಗಿಹೋಗುತ್ತೀರಿ.

 

ಇನ್ನು ಬ್ರಿಟೀಷರ ಟೀ ಹುಚ್ಚಂತೂ ಕೇಳುವುದೇ ಬೇಡ. ಬ್ರಿಟೀಷರ ನಾಡಿನಲ್ಲಿ ಪ್ರತೀ ಐವತ್ತು ಕಿಲೋಮೀಟರಿಗೆ ಟೀ ಮಾಡುವ ರೀತಿ, ಕುಡಿಯುವ ರೀತಿ ಬದಲಾಗುತ್ತದೆ. ಅರ್ಲ್-ಗ್ರೇ, ಇಂಗ್ಲಿಷ್ ಬ್ರೇಕ್ಫಾಸ್ಟ್, ಲೆಮನ್ ಡಿಲೈಟ್, ಐರಿಷ್ ಬ್ರೇಕ್ಫಾಸ್ಟ್, Pu’er ಟೀ, ಮಸಾಲಾ ಚಾಯ್, ಬೆರ್ರೀ ಟೀ……. ಹೀಗೇ ಬರೆಯುತ್ತಾ ಹೋದರೆ ಟೀ ಹೆಸರುಗಳ ಪಟ್ಟಿ ರಾಣಿ ಎಲಿಜಬೆತ್’ಳ ಕಾಲಘಟ್ಟದಲ್ಲಿ ಬಂದು ಹೋದ ಪ್ರಧಾನಿಗಳ ಪಟ್ಟಿಗಿಂತಲೂ ಉದ್ದವಾಗಿ ಬೆಳಯಬಲ್ಲದು. ಹಾಗೂ ಅವರು ತಮ್ಮ ಟೀಗಳ ಬಗ್ಗೆ ಅದೆಷ್ಟು ಪರ್ಟಿಕ್ಯುಲರ್ ಅಂದ್ರೆ, ಚಹಾಕ್ಕಾಗಿ ಯುದ್ಧಗಳೇ ನಡೆದುಹೋಗುವಷ್ಟು. ಒಬ್ಬರ ಟೀ (ಹಾಗೂ ಅದನ್ನು ಕುಡಿಯುವ ರೀತಿ) ಇನ್ನೊಬ್ಬರಿಗೆ ಹಿಡಿಸದ ಕಾರಣಕ್ಕೇ ಇಂಗ್ಳೀಷಿನಲ್ಲಿ “Not my cup of tea” ಎಂಬ ಜಾಣ್ನುಡಿ ಹುಟ್ಟಿದ್ದು ಎಂದುನಿಮಗೆ ಗೊತ್ತಿರಬಹುದು. ಇವರ ಟೀ ಹುಚ್ಚಿನ ಬಗ್ಗೆ, ಆ ಸಂಸ್ಕೃತಿಯ ಬಗ್ಗೆ ಬೇರೆಯದೇ ಲೇಖನ ಬರೆದರೆ ಒಳ್ಳೆಯದು. ಮುಂದಿನ ವಾರ ಮಾತನಾಡೋಣ ಬಿಡಿ.

 

ಇದೊಂತರಾ ತುತ್ತಾ-ಮುತ್ತಾ ಎಂಬ ಜಗಳದಂಗೆ. ಕಾಫಿ-ಟೀ ವಿಚಾರದಲ್ಲಿ ಅದೆಷ್ಟು ಮುಸಿಕಿನ ಗುದ್ದಾಟಗಳು ನಡೆದರೂ…..ಕೊನೆಗೆ ಎರಡರಲ್ಲೊಂದರ ಮಡಿಲಲ್ಲಿ ನಿರಾಳವಾಗುವವ ನಾನು. ಈ ಸ್ಪರ್ಧೆಯಲ್ಲಿ ಕಾಫಿಗೆ ಮೊದಲ ಸ್ಥಾನವಷ್ಟೇ. ಅದರರ್ಥ ಟೀ ನನ್ನ ಪರಿಧಿಯಲ್ಲೇ ಇಲ್ಲವೆಂದಲ್ಲ. “ಬೆಳಕು ಅಲೆಯ ಸ್ವರೂಪದಲ್ಲೂ ಇದೆ, ಕಣದ ಸ್ವರೂಪದಲ್ಲೂ ಇದೆ” ಎಂಬ ಡಿ-ಬ್ರಾಗ್ಲೀಯ ಬೆಳಕಿನ ಥಿಯರಿಯಂತೆ, ಸಂತಸವೂ ಕೂಡಾ ಒಮ್ಮೊಮ್ಮೆ ಕಾಫಿಯ ಕಾಮರೂಪತಳೆದರೆ, ಇನ್ನೊಮ್ಮೆ ಚಹಾದ ಚಹರೆ ಪಡೆಯುವುದುಂಟು.

 

ಶಂಕರ ಭಗವತ್ಪಾದರ ಪಾದಧೂಳಿಯಿಂದ ಪುಣ್ಯಪಡೆದ ಊರಿನಿಂದ ಬಂದ ನಾನು ಈ ವಿಷಯದಲ್ಲೂ ಅದ್ವೈತಿಯೇ. ಜಗತ್ತಿನ ಈ ಭ್ರಮೆಯಲ್ಲಿ ಕೊನೆಗೆ ಎಲ್ಲವೂ ಒಂದೇ. ಬೇರೆಬೇರೆಯೆಂದೆನಿಸುವ ಈ ಮಾಯೆಗೆ ‘ಆತ್ಮನ್’ ಅಂತಲೂ ಹೆಸರಿದೆ, ‘ಬ್ರಹ್ಮನ್’ ಅಂತಲೂ ಹೆಸರಿದೆ. ಅದಕ್ಕೆ ಕಾಫಿ ಅಂತಲೂ ಹೆಸರಿದೆ, ಟೀ ಅಂತಲೂ ಹೆಸರಿದೆ. ಅವೆರಡನ್ನೂ ಕುಡಿದು ತೃಪ್ತಿ ಹೊಂದಿ ಭವಬಂಧನದಿಂದ ಹೊರಹೋಗುವ ದಾರಿ ಹುಡುಕುವುದು ನಮ್ಮ ಕೆಲಸ. ಕಾಫಿಯೇ ಆಗಲಿ, ಚಹಾವೇ ಆಗಲಿ, ‘ಧರ್ಮ’ದಿಂದ ಸಂಪಾದಿಸಿದ ‘ಅರ್ಥ’ದಿಂದಲೇ ಅದನ್ನು ಕೊಂಡು ‘ಕಾಮ’ವನ್ನು ತೃಪ್ತಿಪಡಿಸಿ ‘ಮೋಕ್ಷ’ದೆಡೆಗೆ ಸಾಗುವುದೇ ಪುರುಷಾರ್ಥ.

 

#ಇತಿಶ್ರೀ

One comment on “2020ರ ವಾರ್ಷಿಕ ಕಾಫಿ-ಟೀ ಮಹಾಸಮರದ ಮುಕ್ತಾಯ ಭಾಷಣ

Leave a Reply

Your email address will not be published. Required fields are marked *