Thursday, 28 March, 2024

ವಾಗ್ದೇವಿಯ ಮಕ್ಕಳ ವಾಕ್ಸಮರವೇ ಚೆಂದ

Share post

90ರ ದಶಕದಲ್ಲಿ ಟೀವಿ ಅಂದರೆ ದೂರದರ್ಶನ ಮಾತ್ರವಿದ್ದ ಕಾಲದಲ್ಲಿ ನಮಗೆಲ್ಲಾ ಆಗಾಗ ಕೆಲ ಚರ್ಚೆಗಳನ್ನು ನೋಡುವ ಅವಕಾಶವಿದ್ದಿತ್ತು. ಒಂದೇ ವಿಷಯದಮೇಲೆ ಭಿನ್ನಾಭಿಪ್ರಾಯ ಹೊಂದಿದ್ದ ಎರಡು ಬಣಗಳ ಪ್ರತಿನಿಧಿಗಳು ಬಂದು ತಂತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಭಿನ್ನಾಭಿಪ್ರಾಯಗಳಿದ್ದರೂ ಅದೆಷ್ಟು ಗೌರವಯುತವಾಗಿ ಮಾತನಾಡ್ತಾ ಇದ್ರು ಅಂದ್ರೆ, ಈ ಚರ್ಚೆಗಳಿವೆ ಬರುವವರೇನಾದರೂ ಅಷ್ಟಾವಧಾನ ತಗೊಂಡು ಬಂರ್ತಾರಾ? ಅದೆಷ್ಟು ಸಿಟ್ಟಾಗದೇ, ಸೌಮ್ಯವಾಗಿ ಚಂದವಾಗಿ ಮಾತಾಡ್ತಾರಲ್ಲಾ! ಅಂತಾ ನಮಗೆ ಆಶ್ಚರ್ಯವಾಗೋದು. ನಿಧಾನಕ್ಕೆ ಖಾಸಗೀ ಚಾನೆಲ್ಲುಗಳು ಬಂದವು. ಅಗತ್ಯವೇ ಇಲ್ಲದಿದ್ದರೂ 24‍x7 ಸುದ್ಧಿಗಳು ಬರಲಾರಂಭಿಸಿದವು. ಪ್ಯಾನಲ್ ಚರ್ಚೆ ಎಂಬುದೊಂದು ಪೆಡಂಭೂತ ಆವರಿಸಿಕೊಂಡಿತು. ಭಾರತದಲ್ಲಿ ರಸ್ತೆಬದಿಯಲ್ಲಿಬ್ಬರು ಹೊಡೆದಾಡ್ತಾ ಇದ್ದರೆ ಜನ ನಿಂತು ನೋಡುವುದು, ನಗುತ್ತಾ ಆನಂದವನ್ನನುಭವಿಸುವುದು ಹೇಗಿದ್ದರೂ ಸಾಮಾನ್ಯವೇ ಅಲ್ಲವೇ! ಹಾಗೆಯೇ ಈ ಚರ್ಚೆಗಳಲ್ಲಿ ಗಲಾಟೆ ಹೆಚ್ಚಾದಷ್ಟೂ ಜನ ಮಜಾತೆಗೆದುಕೊಳ್ಳಲೆಂದೇ ನೋಡಬರುತ್ತಾರೆ ಎಂಬ ಸತ್ಯ ಚಾನೆಲ್ಲುಗಳಿಗೆ ಅರಿವಾದಕೂಡಲೇ, ಚರ್ಚೆಗಳಲ್ಲಿ ಬೇಕಂತಲೇ ಕಿಡಿನುಡಿಗಳನ್ನಾಡುವುದು, ಎದುರಿಗಿದ್ದವರನ್ನು ರೊಚ್ಚಿಗೆಬ್ಬಿಸುವುದು ಸಾಮಾನ್ಯವಾಗತೊಡಗಿತು. ಕೆಲವು ಚಾನೆಲ್ಲುಗಳಲ್ಲಿ ಚರ್ಚೆಯ ವಿಷಯದಬಗ್ಗೆ ನಯಾಪೈಸೆ ಗೊತ್ತಿಲ್ಲದಿದ್ದರೂ ವಿವಾದಾತ್ಮಕ ಹೇಳಿಕೆ ಕೊಡಬಲ್ಲವರು ಬಂದರೆ ಸಾಕು ಎಂಬಂತಾಗಿದೆ. ಅವರಿಂದ ವಿವಾದ ಹುಟ್ಟಿಸಿ, ಅದರಬಗ್ಗೆ ಇನ್ನೆರಡು ಪ್ಯಾನೆಲ್ ಚರ್ಚೆ ಮಾಡಿಸಬಹುದಲ್ಲಾ ಎಂಬ ಲೆಕ್ಕಾಚಾರ ಶುರುವಾಗಿದೆ. ಇದೊಂದು ರೀತಿ ಚೀನಾದವರೇ ವೈರಸ್ ಬಿಟ್ಟು, ಒಂದಾರು ತಿಂಗಳ ನಂತರ ಜಗತ್ತಿನಲ್ಲಿ ದೊಡ್ಡದೊಂದು ಗ್ರಾಹಕವರ್ಗ ಸೃಷ್ಟಿಯಾದ ಕೂಡಲೇ ಅದಕ್ಕೆ ಮದ್ದು ಕೊಡುವಂತೆ!

 

ಸಾಮಾಜಿಕ ಜಾಲತಾಣಗಳಲ್ಲಂತೂ ಚರ್ಚೆಗಳು ಎಷ್ಟು ವೈಯುಕ್ತಿಕಮಟ್ಟಕ್ಕೆ ತಲುಪುತ್ತವೆಂದರೆ ಮೊನ್ನೆಮೊನ್ನೆಯವರೆಗೂ ದೋಸ್ತಿಗಳಾಗಿದ್ದವರು ರಾತ್ರೋರಾತ್ರಿ ಕಟ್ಟಾವೈರಿಗಳಾಗಿ ಬದಲಾಗಿಬಿಡುತ್ತಾರೆ. ಆಯುರ್ವೇದ ಅಲೋಪತಿ ಗಲಾಟೆ, ಕಜೆ ವರ್ಸಸ್ ಗ್ಲೆನ್ಮಾರ್ಕ್ ಚರ್ಚೆ, ಸಂಶೋಧನಾ ಲೇಖನಗಳನ್ನು ವಿಕಿಪೀಡಿಯಾಕ್ಕೆ ಹಾಕಲಾಗಿದೆ ಎಂಬ ದೂರು…ಜನ ಜಗಳಕ್ಕೇ ಕಾಯುತ್ತಿರುತ್ತಾರೇನೋ ಎಂಬಂತಾಗಿದೆ. ಇವತ್ತು ಜನರಿಗೆ ಭಿನ್ನಾಭಿಪ್ರಾಯ ಅನ್ನುವುದು ಮಿತ್ರದ್ರೋಹ ಅಥವಾ ಮಾನವದ್ರೋಹ ಎಂಬಂತಾಗಿದೆ. ಎಲ್ಲೋ ಅಪವಾದವೆಂಬಂತೆ ಕಾಫಿ ಮತ್ತು ಚಹಾ ಬಣಗಳ ನಡುವೆ ನಡೆದ ಚೇತೋಹಾರಿ ವಾಗ್ಯುದ್ದದಂತವು ನಡೆಯುತ್ತವಷ್ಟೇ.

 

ಇವೆಲ್ಲಾ ಸಾಮಾನ್ಯಮನುಷ್ಯರ ನಡುವಿನ ವಾಕ್ಸಮರಗಳಾದರೆ, ಸಾಮಾಜಿಕವಾಗಿ ಉನ್ನತಸ್ಥಾನದಲ್ಲಿರುವವರೂ, ತಂತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೂ, ಸಾಹಿತ್ಯ ಸರಸ್ವತಿಯ ಮಾನಸಪುತ್ರರೂ ಆಗಿರುವವರ ನಡುವಿನ ವಾಕ್ಸಮರಗಳು ಹೇಗಿದ್ದಿರಬಹುದು? ಸಾತ್ವಿಕ ಸಿಟ್ಟು, ಪದಲಾಲಿತ್ಯ ಹಾಗೂ ವ್ಯಂಗ್ಯಗಳೂ ಒಂದೇ ಚಾಟಿಯಲ್ಲಿ ಬೆರೆತರೆ ಅದರ ರುಚಿ ಹೇಗಿದ್ದಿರಬಹುದು! ಹಲವುಭಾಷೆಗಳಿಂದ ಪದಗಳನ್ನು ಎರವಲು ಪಡೆದಿರುವ ಇಂಗ್ಲೀಷ್ ಬಾಷೆಯಲ್ಲಿ ಇಂತಹ ಗಲಾಟೆಗಳ ಸಂಗ್ರಹ ಬೇಕಾದಷ್ಟಿದೆ.

 

ಬ್ರಿಟನ್ನಿನ ಪೂರ್ವ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಮತ್ತು ಐರಿಷ್ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ ನಡುವಿನ ವೈಮನಸ್ಯ, ಜಗತ್ಪ್ರಸಿದ್ಧ. ಯಾವಾಗಲೂ ಕಚ್ಚಾಡುತ್ತಲೆ ಇದ್ದರು. ಅವರ ಕಚ್ಚಾಟದ ಸಣ್ಣ ತುಣುಕಿನಲ್ಲೂ ಏನೋ ಒಂಥರ ಮಜಾ. ಕೇಳಿಸಿಕೊಂಡವನಿಗೆ, ಯಾರು ಯಾರ ಕಾಲೆಳೆದರು!? ಎಂಬುದೇ ಅರ್ಥವಾಗದ ಪ್ರಕರಣಗಳವು. ಒಮ್ಮೆ ಬರ್ನಾರ್ಡ್ ಷಾ ಲಂಡನ್ನಿನಲ್ಲಿ ಪ್ರದರ್ಶನಗೊಳ್ಳಲಿರುವ, ತಮ್ಮದೊಂದು ಹೊಸಾ ನಾಟಕ ‘ಪಿಗ್ಮೇಲಿಯನ್’ಗೆ ಚರ್ಚಿಲ್ ಅವರನ್ನು ಆಹ್ವಾನಿಸುತ್ತಾ “ಮಿ. ಚರ್ಚಿಲ್, ನನ್ನ ಹೊಸಾ ನಾಟಕದ ಮೊದಲ ಶೋ’ಗೆ ನಿಮ್ಮನ್ನು ಆಹ್ವಾನಿಸುತ್ತಾ, ಈ ಪತ್ರದೊಂದಿಗೆ ಎರಡು ಟಿಕೇಟುಗಳನ್ನು ಲಗತ್ತಿಸಿದ್ದೇನೆ. ಬೇಕಾದರೆ, ನಿಮ್ಮ ಸ್ನೇಹಿತರೊಬ್ಬರನ್ನೂ ಕರೆತರಬಹುದು. ನಿಮಗ್ಯಾರಾದರೂ ‘ಸ್ನೇಹಿತರು’ ಅಂತಾ ಇದ್ದರೆ” ಎಂದು ಕಿಚಾಯಿಸಿ ಪತ್ರ ಬರೆದರು. ಅದಕ್ಕುತ್ತರವಾಗಿ ಚರ್ಚಿಲರು “ಮಿ.ಷಾ, ನಿಮ್ಮ ಪತ್ರ ಮತ್ತು ಟಿಕೇಟಿಗೆ ಧನ್ಯವಾದ. ಮೊದಲ ಶೋಗೆ ಬರುವುದು ಕಷ್ಟವಾಗಬಹುದು ಎನ್ನಿಸುತ್ತಿದೆ. ಆದರೆ ಎರಡನೇ ದಿನದ ಶೋಗೆ ಖಂಡಿತಾ ಬರುತ್ತೇನೆ. ನಿಮ್ಮ ನಾಟಕ ಎರಡನೇ ಶೋವರೆಗೂ ಉಳಿದಿದ್ದರೆ” ಎಂದು ಕಾಲೆಳೆದಿದ್ದರು.

 

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚರ್ಚಿಲ್ಲರಿಗೆ, ಮೆಟ್ಟಿಲ ಬಳಿ ಅವರ ‘ಪರಮಸ್ನೇಹಿತ’ ಬರ್ನಾರ್ಡ್ ಷಾ ಸಿಕ್ಕಿಬಿಟ್ಟರು. ಬರ್ನಾರ್ಡ್ ಮೆಟ್ಟಿಲೇರಿ ಮೇಲಿನ ಮಹಡಿಗೆ ಹೊರಟಿದ್ದರೆ, ಚರ್ಚಿಲ್ ಅಲ್ಲಿಂದಾ ಇಳಿದು ಕೆಳಗೆ ಹೊರಟವರು. ಆ ಹಳೆಯ ಕಟ್ಟಡದ ಹಳೆಯ ಮಾದರಿಯ ಮೆಟ್ಟಿಲುಗಳಲ್ಲಿ ಒಂದೇ ಬಾರಿಗೆ ಇಬ್ಬರು ಆರಾಮಾಗಿ ಒಡಾಡುವಷ್ಟು ಜಾಗವಿರಲಿಲ್ಲ. ಒಬ್ಬರನ್ನೊಬ್ಬರು ತಾಕಿಕೊಂಡೇ ಓಡಾಡಬೇಕಿತ್ತು. ನಮ್ಮ ಚರ್ಚಿಲ್ ಸಾಹೇಬರು ಮೊದಲೇ ಧಾರ್ಷ್ಟ್ಯದ ಪ್ರತಿರೂಪ. ಬದಿಗೆ ಸರಿದು ದಾರಿ ಬಿಡಲು ಸಿದ್ಧವಿರಲಿಲ್ಲ. ಅದರ ಮೇಲೆ ಅವರೊಳಕ್ಕೆ ಹೊಕ್ಕಿದ್ದ ‘ಪರಮಾತ್ಮನ’ ಕೃಪೆಯೂ ಸ್ವಲ್ಪ ಆಗಿತ್ತು. ಅವರ ಬಾಯಿಯ ಮೂಲಕ ಪರಮಾತ್ಮ ನುಡಿದೇ ಬಿಟ್ಟ. ತಮ್ಮ ಹಿಂದಿದ್ದ ಸಂಸದ ಸ್ನೇಹಿತ ಡೇವ್ ಮೂಲಕ. ‘ಡೇವ್, ನಾನು ನಾಯಿಗಳಿಗೆ ದಾರಿಬಿಡುವುದಿಲ್ಲ ಎಂದು ಇಲ್ಲಿ ಕೆಲವರಿಗೆ ಗೊತ್ತಿಲ್ಲವೆನ್ನಿಸುತ್ತದೆ’ ಎಂದರು ಚರ್ಚಿಲ್. ಬೇರೆ ಯಾರಾದರೂ ಆಗಿದ್ದರೆ ಕಪಾಳಕ್ಕೆರಡು ಬಿಡುತ್ತಿದ್ದರೇನೋ. ಆದರೆ ಇಲ್ಲಿದ್ದದ್ದು ಮಾತಿನ ಕಲಾಕಾರರು. ಚರ್ಚಿಲ್ಲರ ಮುಖದ ಕಳೆ ನೋಡಿದವರೇ, ಷಾ ಹೆಚ್ಚೇನೂ ಕೋಪಿಸಿಕೊಳ್ಳದೇ, ಮೆಟ್ಟಿಲಲ್ಲೇ ಬದಿಗೆ ಸರಿದು ನಿಲ್ಲುತ್ತಾ ‘ಪರವಾಗಿಲ್ಲ ಡೇವ್, ನಾನು ನಾಯಿಗಳಿಗ ಸದಾ ಜಾಗ ಬಿಟ್ಟುಕೊಡುತ್ತೇನೆ’ ಎಂದರು.

 

ಇಂತಹಾ ಮಹಾಗರ್ವಿ ಚರ್ಚಿಲ್ಲನನ್ನು ನಮ್ಮ ರಾಷ್ಟ್ರಪತಿ ರಾಧಾಕೃಷ್ಣನ್ ಭೇಟಿಯಾದ ಔತಣಕೂಟದಲ್ಲಿ ಸಲಾಡ್ ತಂದಿಟ್ಟಾಗ, ಚರ್ಚಿಲ್ ಸಲಾಡ್ ಫೋರ್ಕ್ ಕೈಗೆತ್ತಿಕೊಂಡರೆ, ರಾಧಾಕೃಷ್ಣನ್ ಕೈಯಿಂದಲೇ ಕ್ಯಾರಟ್ ಚೂರನ್ನೆತ್ತಿಕೊಂಡು ತಿನ್ನಲಾರಂಭಿಸಿದರು. ಚರ್ಚಿಲ್ ‘ನೋಡಿ ಇದಕ್ಕೇ ನಾನು ಭಾರತೀಯರ ಬಗ್ಗೆ ಕಿಚಾಯಿಸುವುದು. ಸ್ವಚ್ಚತೆಯ ಬಗ್ಗೆ ಅಸಡ್ಡೆ ಅವರಿಗೆ. ಫೋರ್ಕ್ ಉಪಯೋಗಿಸುವುದರ ಬದಲು, ಎಲ್ಲೆಲ್ಲೋ ಉಪಯೋಗಿಸಿದ ಕೈಯನ್ನು ತಿನ್ನಲು ಉಪಯೋಗಿಸುತ್ತಾರೆ. ಎಷ್ಟು ಅನ್’ಹೈಜೀನಿಕ್!!’ ಎಂದ. ಸ್ವಲ್ಪವೂ ವಿಚಲಿತರಾಗದ ರಾಧಾಕೃಷ್ಣನ್, ಚರ್ಚಿಲರೆಡೆಗೆ ಹಾಗೂ ಇತರರೆಡೆಗೆ ನೋಡುತ್ತಾ ‘ಕಡೇ ಪಕ್ಷ ನನ್ನ ಕೈ ಎಲ್ಲೆಲ್ಲಿ ಉಪಯೋಗಿಸಿದ್ದೇನೆ ಎಂಬ ಅರಿವು ನನಗಿದೆ. ಹಾಗೂ ಊಟಕ್ಕೆ ಮುಂಚೆ ತೊಳೆದಿದ್ದೇನೆ ಎಂಬ ಗ್ಯಾರಂಟಿಯೂ ನನಗಿದೆ. ನನ್ನ ಕೈಯ ಮೂಲಕ ಬೇರೆಯವರ್ಯಾರೂ ಎಂದಿಗೂ ಏನನ್ನೂ ತಿಂದಿರಲು ಸಾಧ್ಯವೇ ಇಲ್ಲ ಎಂಬುದೂ ನನಗೆ ಗ್ಯಾರಂಟಿಯಿದೆ. ಅಂದಮೇಲೆ ಫೋರ್ಕಿಗಿಂತ ಕೈಯೇ ಹೆಚ್ಚು ಹೈಜೀನಿಕ್ ಅಲ್ಲವೇ?’ ಎಂದು ಚರ್ಚಿಲನ ಬಾಯ್ಮುಚ್ಚಿಸಿದ್ದರು.

 

ಇಂತಹುದ್ದೇ ಇನ್ನೊಂದು ಕಥೆಯಲ್ಲಿ ಅಮೇರಿಕಾದ ಅಧ್ಯಕ್ಷ ಐಸೆನ್ಹೂವರ್ ತಮ್ಮ ಭಾಷಣವೊಂದರಲ್ಲಿ ‘ಅಮೇರಿಕದಲ್ಲಿರುವಷ್ಟು ವ್ಯಕ್ತಿ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ. ಈ ದೇಶದಲ್ಲಿ ಒಬ್ಬ ನಾಗರೀಕ ಬೇಕಾದರೆ ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರಿನಲ್ಲಿ ನಿಂತು ‘ಅಮೇರಿಕಾದ ಅಧ್ಯಕ್ಷ ಒಬ್ಬ ಮುಠ್ಠಾಳ’ ಎಂದು ಕೂಗಬಹುದು. ಅವನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಅವನಿಗಿದೆ. ಇದು ನಮ್ಮ ಪ್ರಜಾಪ್ರಭುತ್ವದ ಸೌಂದರ್ಯ’ ಎಂದದಕ್ಕೆ, ರಷ್ಯಾದ ಕೃಶ್ಚೇವ್ “ನೋಡಿ ಮಿ.ಅಧ್ಯಕ್ಷರೇ. ಮಾನವ ಹಕ್ಕುಗಳ ವಿಷಯಕ್ಕೆ ಬಂದರೆ ಇಂತಹುದೇ, ಬಹುಶಃ ಇದಕ್ಕಿಂತಾ ಒಳ್ಳೆಯ ಪರಿಸ್ಥಿತಿ ನಮ್ಮ ರಷ್ಯಾದಲ್ಲಿದೆ. ನನ್ನೂರು ಮಾಸ್ಕೋದ ರೆಡ್ ಸ್ಕ್ವೇರಿನಲ್ಲಿ ಯಾರಾದರೂ ನಿಂತು ‘ಅಮೇರಿಕಾದ ಅಧ್ಯಕ್ಷ ಒಬ್ಬ ಮುಠ್ಠಾಳ’ ಎಂದು ಕೂಗಿದರೆ, ಬಂಧನ, ವಿಚಾರಣೆ ಆಗುವುದು ಹಾಗಿರಲಿ. ಅವನಿಗೊಂದು ಸೋವಿಯತ್ ರಷ್ಯಾದ ಗೌರವಾನ್ವಿತ ಮೆಡಲ್ ಸಿಕ್ಕಿದರೂ ಸಿಗಬಹುದು. ನಿಮ್ಮ ದೇಶದಲ್ಲಿ ಹೀಗಾಗುವುದು ಸಾಧ್ಯವುಂಟೇ’ ಎಂದು ಕಿಚಾಯಿಸಿ ಐಸೆನ್ಹೂವರನನ್ನು ಪೆಚ್ಚಾಗಿಸಿದ್ದ.

 

ಪದಗಳಾಟ ಮತ್ತು ಆತ್ಮವಿಶ್ವಾಸದ ಇನ್ನೊಂದು ಝಲಕ್ ನೋಡಿ. 1965ರ ಭಾರತ-ಪಾಕಿಸ್ಥಾನಗಳ ಯುದ್ಧ ಮುಗಿದ ಸಮಯದಲ್ಲಿ, ಎರಡೂ ದೇಶಗಳ ನಡುವಿನ ಶಾಂತಿ ಮಾತುಕತೆಗೆ, ಮಧ್ಯಸ್ಥಿಕೆ ವಹಿಸಿದ್ದ ಅಂದಿನ ಸೋವಿಯತ್ ರಷ್ಯಾದ ಅಧ್ಯಕ್ಷ ಅಲೆಕ್ಸಿ ಕೊಸಿಗಿನ್, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಇಬ್ಬರನ್ನು ತಾಷ್ಕೆಂಟಿಗೆ ಬರಹೇಳಿದರು. ಅಯೂಬ್ ಖಾನ್ ಆರೂವರೆ ಅಡಿ ಎತ್ತರದ ಭಾರೀ ಮನುಷ್ಯ. ನಮ್ಮ ಶಾಸ್ತ್ರಿಗಳು ಐದೂಕಾಲು ಅಡಿಯ ವಾಮನಮೂರ್ತಿ. ತಾಷ್ಕೆಂಟಿಗೆ ಹೊರಟುನಿಂತಿದ್ದ ಶಾಸ್ತ್ರಿಗಳನ್ನು ಪ್ರಧಾನಿ ನಿವಾಸದೆದುರು ಒಬ್ಬ ಕಿಡಿಗೇಡಿ ಪತ್ರಕರ್ತ, ‘ಶಾಸ್ತ್ರಿಗಳೇ, ಯುದ್ಧ ಗೆದ್ದಿದ್ದು ಸಂತೋಷವೇ. ಆದರೆ ನಮ್ಮ ಉಳಿದ ಬೇಡಿಕೆಗಳಿಗೆ ಅವರೊಪ್ಪುವಂತೆ ಯಾವ ಅಸ್ತ್ರ ಪ್ರಯೋಗಿಸಲಿದ್ದೀರಿ!? ಅವರೊಂದಿಗೆ ಯಾವ ರೀತಿ ಮಾತನಾಡಲಿದ್ದೀರಿ?’ ಎಂದು ಕೇಳಿದ. ಶಾಸ್ತ್ರೀಜಿಯವರ ಕಡೆಯಿಂದ ಒಂದೇಕ್ಷಣದಲ್ಲಿ ಉತ್ತರ ಬುಲ್ಲೆಟ್ಟಿನಂತೆ ತೂರಿ ಬಂತು. “ಕೈಸೆ ಬಾತ್ ಕರೇಂಗೇ ಮತಲಬ್!? ಹಮ್ ಸರ್ ಉಠಾ ಕೆ ಬಾತ್ ಕರೇಂಗೆ. ಔರ್ ವೋಹ್ ಸರ್ ಝುಕಾ ಕೆ” (ಹೇಗೆ ಮಾತನಾಡುತ್ತೇನೆಂದರೆ ಏನರ್ಥ!? ನಾನು (ಸಂಪೂರ್ಣವಿಶ್ವಾಸದಿಂದ) ತಲೆಯೆತ್ತಿ ಮಾತನಾಡುತ್ತೇನೆ. ಆವನು ತಲೆತಗ್ಗಿಸಿ ನನ್ನ ಮಾತು ಕೇಳುತ್ತಾ ಮಾತನಾಡುತ್ತಾನೆ). ತಮ್ಮ ದೈಹಿಕ ಎತ್ತರವನ್ನೂ, ಯುದ್ಧಗೆದ್ದ ಅದಮ್ಯ ಆತ್ಮವಿಶ್ವಾಸವನ್ನೂ ಒಟ್ಟಿಗೆಬೆರೆಸಿ ಶಾಸ್ತ್ರಿಗಳು ಚಿಮ್ಮಿಸಿದ ಚಟಾಕಿ ಕೇಳಿದ ಪತ್ರಕರ್ತರು ತಕ್ಷಣ ಗಪ್-ಚುಪ್!

ಬಹುಶಃ ಈ ಕಥೆಗಳಲ್ಲಿ ಅತ್ಯಂತ ಹಳೆಯದು ಸುಮಾರು ಕ್ರಿಸ್ತಪೂರ್ವ 344ರಲ್ಲಿ ನಡೆದದ್ದು. ಮ್ಯಾಸಿಡೋನಿಯಾದ ರಾಜನಾಗಿದ್ದ ಎರಡನೇ ಫಿಲಿಪ್, ಮಹಾ ಯುದ್ಧದಾಹಿ. ಇವನ ಕಾಲದಲ್ಲೇ ಪುಟ್ಟದೇಶವಾಗಿದ್ದ ಮ್ಯಾಸಿಡೋನಿಯ ವಿಸ್ತಾರವಾಯ್ತು. ಏಗನ್ ಸಮುದ್ರದಿಂದೀಚಿಗಿದ್ದ ಎಲ್ಲಾ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡ ಈ ಪುಣ್ಯಾತ್ಮ, ಏಗನ್ನಿನಾಚೆಗೂ ಇದ್ದ ಪರ್ಷಿಯನ್ನರ ಸಾಮ್ಯಾಜ್ಯಕ್ಕೂ ಕೈ ಹಾಕುವ ಧೈರ್ಯ ತೋರಿದ. ಅಲೆಕ್ಸಾಂಡರ್ ಇವನ ಕಥೆಗಳನ್ನೇ ಕೇಳಿ ಸ್ಪೂರ್ತಿ ಪಡೆದದ್ದು ಎಂಬ ಪ್ರತೀತಿಯಿದೆ. ಇಂತಹಾ ಫಿಲಿಪ್, ಅಂದಿನ ಗ್ರೀಕ್ ಸಾಮ್ರಾಜ್ಯಗಳಾದ ಮೊಲೋಸಿಯಾ, ಥೆಸ್ಸಾಲಿ, ಥೆಬೆಸ್, ಒಲಂಪಿಯಾಗಳೆಲ್ಲವನ್ನೂ ವಶಪಡಿಸಿಕೊಂಡ ಮರುದಿನ ಇನ್ನುಳಿದಿದ್ದ ಒಂದೇ ಗ್ರೀಕ್ ಪ್ರಾಂತ್ಯ ‘ಸ್ಪಾರ್ಟ’ದ ಮೇಲೆ ದೃಷ್ಟಿ ಬೀರಿದ. ಮಹಾನ್ ದೇಶಪ್ರೇಮಿಗಳೂ, ಸ್ವಾತಂತ್ರ್ಯಪ್ರೇಮಿಗಳೂ, ಯುದ್ಧನಿಪುಣರೂ ಆಗಿದ್ದ ಸ್ಪಾರ್ಟನ್ನರನ್ನು ಗೆದ್ದ ರಾಜ ಯಾರೂ ಇರಲಿಲ್ಲ. ಅವರನ್ನು ಗೆದ್ದು ನಿಂತರೆ ತನ್ನ ಹೆಸರಿಗೊಂದು ವಜನ್ನು ಬರುತ್ತದೆಂದು ಸಲಹೆಪಡೆದ ಫಿಲಿಪ್, ಸ್ಪಾರ್ಟಾನ್ನರಿಗೆ ಯುದ್ಧಕ್ಕೆ ಮುಂಚೆ ಎಚ್ಚರಿಕೆ ನೀಡಲೆಂದು “ಗ್ರೀಕ್ ಸಾಮ್ರಾಜ್ಯಗಳನ್ನೆಲ್ಲಾ ಗೆದ್ದು ನಿಂತಿರುವ ನಾನು, ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ, ತಡಮಾಡದೇ ನಿಮ್ಮೆಲ್ಲಾ ಶಸ್ತ್ರಗಳನ್ನು ಕೆಳಗಿಟ್ಟು ಶರಣಾಗಿ. ನಾನು ನನ್ನ ಸೈನ್ಯವನ್ನು ತೆಗೆದುಕೊಂಡು ಸ್ಪಾರ್ಟಕ್ಕೆ ಕಾಲಿಟ್ಟರೆ, ನಿಮ್ಮ ಹೊಲಗಳನ್ನು ನಾಶಮಾಡಿ, ನಿಮ್ಮ ಜನರ ಕತ್ತುಗಳನ್ನು ಸೀಳಿ, ನಿಮ್ಮ ನಗರಗಳನ್ನು ನೆಲಸಮಮಾಡುತ್ತೇನೆ” ಎಂದು ಪತ್ರ ಬರೆದ. ಮೂರು ದಿನಗಳ ನಂತರ ಸ್ಪಾರ್ಟನ್ನರಿಂದ ಉತ್ತರ ಬಂತು. ಅಲ್ಲಿದ್ದದ್ದು ಇಷ್ಟೇ “ಸ್ಪಾರ್ಟಕ್ಕೆ ಕಾಲಿಟ್ಟರೆ…..ತಾನೇ”. ಇದನ್ನೋದಿದ ಮಂತ್ರಿ, ಫಿಲಿಪ್ ಹಾಗೂ ಅವನ ಸಲಹೆಗಾರರಷ್ಟೂ ಜನರ ಮುಖ ಕಪ್ಪಿಟ್ಟತ್ತು. ಫಿಲಿಪ್ ಮಾತ್ರವಲ್ಲ, ಮುಂದೆ ಅಲೆಕ್ಸಾಂಡರ್ ಸಹಾ ಸ್ಪಾರ್ಟಾದ ತಂಟೆಗೆ ಹೋಗಲಿಲ್ಲ.

ಜಗಳ ಅಥವಾ ವಾದ ಮಾಡಿ ಎದುರಾಳಿಯನ್ನು ಮಣಿಸುವುದು ಬೇರೆ. ಎರಡೇ ಮಾತಿನಲ್ಲಿ ಎದುರಾಳಿ ಮತ್ತೆ ಉಸಿರೆತ್ತದಂತೆ ಮಾಡುವುದು ಬೇರೆ. ಮೊದಲನೆಯದು ಪ್ರತಿಭೆ, ಎರಡನೆಯದು ಕಲೆ. ಎಲ್ಲಿ ಜಗಳವಾಡಬೇಕು, ಮತ್ತದನ್ನು ಯಾವಾಗ ನಿಲ್ಲಿಸಬೇಕು ಅನ್ನುವ ಜ್ಞಾನ, ಅದಕ್ಕೆ ತಕ್ಕ ಪದಸಂಪತ್ತು, ಜೊತೆಗೆ ಚತುರತೆಯೂ ಮುಖ್ಯ. ಸಿಕ್ಕಿಹಾಕಿಕೊಂಡಿರುವ ಪೇಚಿನಿಂದ ಹೊರಬರುವುದರೊಂದಿಗೆ ಎದುರಾಳಿಯನ್ನು ಗಪ್-ಚುಪಾಗಿಸುವುದು ಒಂದು ಕಲೆಯೇ ಸರಿ. ಸ್ವಲ್ಪ ಹೆಚ್ಚುಕಮ್ಮಿಯಾದರೂ, ನಮಗೇ ಡಬಲ್ ಪೇಚು. ಒಂದುರೀತಿಯಲ್ಲಿ ಮುಳ್ಳಿನಮೇಲೆ ಬಿದ್ದಿರುವ ಬಟ್ಟೆಯನ್ನು ಬಿಡಿಸಿದಂತೆ. ಇಂತಹ ವಾಕ್ಚತುರತೆಯನ್ನು ಎಲ್ಲರಿಂದಲೂ ನಿರೀಕ್ಷಿಸಲಾಗುವುದಿಲ್ಲವಾದರೂ, ನಮ್ಮ ಮಾತುಗಳಲ್ಲಿ ಕನಿಷ್ಟ ಸೌಜನ್ಯವೂ ಇಲ್ಲವಾಗುತ್ತಿರುವುದು ಇಂದಿನ ದುರಂತ.

5 comments on “ವಾಗ್ದೇವಿಯ ಮಕ್ಕಳ ವಾಕ್ಸಮರವೇ ಚೆಂದ

Gangadhara

ಚೆಂದದ ಬರಹ ರಾಘಣ್ಣ.
ರಾಮಜನ್ಮ ಭೂಮಿ ಹೋರಾಟದ ಬಗ್ಗೆ ನಿಮ್ಮಿಂದ ಒಂದು ಸುಧೀರ್ಘ ಬರಹದ ನೀರಿಕ್ಷೆಯಲ್ಲಿದ್ದೆನೆ.
ನಿಮ್ಮ ಫೇಸ್ಬುಕ್ ಬರಹದಲ್ಲಿ ಒಮ್ಮೆ ಕಲ್ಯಾಣ್ ಸಿಂಗರ ಪ್ರಸ್ತಾಪ ನೋಡಿದ್ದೆ ,ಅದರ ನಂತರ ಕಲ್ಯಾಣ ಸಿಂಗರ ಬಗ್ಗೆ ತಿಳಿದುಕೊಂಡೆ.
🙏🙏🙏🙏

Reply

ಧನ್ಯವಾದಗಳು ಗಂಗಾಧರ್. ಖಂಡಿತಾ ಬರೆಯೋಣ.

Reply
ಕಾರ್ತಿಕ ಕೋಟೆ

ಬಹಳ ಸೊಗಸಾಗಿದೆ 👌🏻

Reply

ಧನ್ಯವಾದಗಳು ಕಾರ್ತಿಕ್ 🙂

Reply
ಆನಂದ.ಎನ್. ಎಲ್.

ವಾಗ್ದೇವಿಯ ಮಕ್ಕಳು , ಮಾತ್ರ ಇಂತಹ ಲೇಖನ ಬರೆಯಲು ಸಾಧ್ಯ..

ಅರ್ಥಪೂರ್ಣ ಲೇಖನ.

ಧನ್ಯವಾದಗಳು.

Reply

Leave a Reply to admin Cancel reply

Your email address will not be published. Required fields are marked *