Thursday, 28 March, 2024

ರಾಮನಿಗೆ ಮಂದಿರ ನಾವು ಕಟ್ಟುವೆವು, ಆದರ ರಾಮನನ್ನು ಕಟ್ಟಿದವರ್ಯಾರು

Share post

ದೇಶದ ಜ್ವಲಂತ ಸಮಸ್ಯೆಗಳಲ್ಲೊಂದಾದ ರಾಮ ಮಂದಿರ ಕೊನೆಗೂ ಅಂತ್ಯ ಕಂಡಿದೆ. ಸರ್ವೋಚ್ಚ ನ್ಯಾಯಾಲಯ ಕೂಡ ಆ ಭೂಮಿ ಹಿಂದೂಗಳಿಗೇ ಸೇರಬೇಕಾದದ್ದು ಎಂದು ಹೇಳಿ, ಕಿರಿಕಿರಿಗೆ ಪರದೆ ಎಳೆದಿದೆ. ರಾಮನಿಗೊಂದು ಸೂರು ಸಿಕ್ಕಿತು ಅಂತಾ ರಾಮನನ್ನು ನಂಬಿದವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ನ್ಯಾಯಕಾರ್ಯಕ್ಕೆ ಹಲವಾರು ಜನರ ಪರಿಶ್ರಮ, ತ್ಯಾಗ ಮತ್ತು ಬಲಿದಾನವೂ ಸೇರಿದೆ. ಇದರ ಫಲವಾಗಿ ರಾಮನಿಗೊಂದು ಮಂದಿರ ಸಿಕ್ಕಿದೆ.

ನಾನು ಈ ಸಮಯದಲ್ಲಿ ಒಂದು ಹೆಜ್ಜೆ ಹಿಂದೆ ಹೋಗಿ, “ರಾಮನಿಗೇನೋ ಮಂದಿರ ಸಿಕ್ಕಿತು, ಆದರೆ ರಾಮ ನಮಗೆ ಸಿಗುವಂತೆ ಮಾಡಿದವರ್ಯಾರು?” ಎಂದು ಯೋಚಿಸುತ್ತಾ ಕೆಲ ಮಹನೀಯರನ್ನು ನೆನೆಸಿಕೊಳ್ಳಬಯಸುತ್ತೇನೆ. ಎಂಟನೇ ಶತಮಾನದಲ್ಲಿ ರಾಜ್ಯ ವಿಸ್ತರಣೆಗಲ್ಲದೆ, ತಮ್ಮ ಮತವನ್ನು ವಿಸ್ತರಿಸುವ ಯೋಜನೆಗಳನ್ನು ಹಾಕಿಕೊಂಡು, ಬೇರೆ ಧರ್ಮ ಮತ್ತು ಮತಗಳನ್ನು ತುಳಿಯುವ ಹಾಗೂ ತರಿಯುವ ಉದ್ದೇಶದ ಶಕ್ತಿಗಳು ಭಾರತವನ್ನು ಆಕ್ರಮಿಸತೊಡಗಿದಾಗಲೇ, ಹಿಂದೂಧರ್ಮದವರಿಗೆ “ಅಪಾಯದಲ್ಲಿರುವುದು ನಾವು ಮತ್ತು ನಮ್ಮ ಜೀವ ಮಾತ್ರವಲ್ಲ, ನಮ್ಮ ನಂಬಿಕೆಗಳೂ ಸಹಾ” ಅಂತಾ ಅರಿವಾಗತೊಡಗಿತು. ಕಾಶ್ಮೀರ, ರಾಜಸ್ಥಾನ ಮತ್ತು ಗುಜರಾತ್’ಗಳನ್ನಾಳುತ್ತಿದ್ದ ಕಾರ್ಕೋಟ, ರಜಪೂತ, ಗುರ್ಜರ ಪ್ರತೀಹಾರರ ಮೇಲೆ ಉಮಯ್ಯದ್ ಕ್ಯಾಲಿಫೇಟ್’ಗಳ ಆಕ್ರಮಣದ ಸಮಯದಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸೆ, ದೌರ್ಜನ್ಯಗಳೇನಿವೆ, ಅವು “ಇವರೆಲ್ಲಾ ಬೇರೊಂದು ರಾಜ್ಯದ ನಾಗರೀಕರು” ಎಂಬ ನಂಬಿಕೆಯ ಮೇಲೆ ನಡೆಯಲಿಲ್ಲ. ಬದಲಾಗಿ “ಅವರು ಹಿಂದೂಗಳು, ವಿಗ್ರಹಾರಾಧಕರು, ಕಾಫಿರರು. ಇವರುಗಳಿಗೆ ನಮ್ಮ ಶಾಂತಿಧರ್ಮದ ಸಾಮ್ರಾಜ್ಯದಲ್ಲಿ ಜಾಗವಿಲ್ಲ” ಎಂಬ ಕಾರಣಕ್ಕಾಗಿ ನಡೆಯಿತು. ಮತ್ತು ಆ ಕಾರಣಗಳಿಗನುಗುಣವಾಗಿ ಹಿಂದೂಗಳ ವಿಗ್ರಹ, ದೇವಸ್ಥಾನ, ಪೂಜಾ-ಕೈಂಕರ್ಯಗಳನ್ನು ನಾಶಗೊಳಿಸಲಾಯಿತು.

ಮ್ಲೇಚ್ಚರು ತಮ್ಮ ಅಂದಿನ ಉಪಾಯದ ಪ್ರಕಾರ “ದೇವಸ್ಥಾನ ಮತ್ತು ವಿಗ್ರಹಗಳೇ ಇಲ್ಲದಿದ್ದರೆ ಇವರ ಧರ್ಮ ಎಲ್ಲಿಂದ ಉಳಿಯುತ್ತದೆ? ಕೆಲವೇ ವರ್ಷಗಳಲ್ಲಿ ಹಿಂದೂ ಧರ್ಮ ನಾಶವಾಗಿ ಹೋಗುತ್ತದೆ” ಎಂದುಕೊಂಡಿದ್ದರು. ಈ ತಂತ್ರ ಅದೆಷ್ಟು ದುರ್ಬಲ, ಮತ್ತು ಹಿಂದೂಗಳೆಡಿಗಿನ ಅವರ ತಿಳುವಳಿಕೆ ಎಷ್ಟು ತಪ್ಪು ಎಂದು ಅವರಿಗೆ ಗೊತ್ತಿರಲಿಲ್ಲವೆಂದೆನಿಸುತ್ತದೆ. ಮುಸ್ಲಿಂ ರಾಜರ ಈ “ಹಿಂದೂ ಧರ್ಮಸ್ಥಾನಗಳನ್ನು ನಾಶಪಡಿಸುವ” ಈ ತಂತ್ರಕ್ಕೆ ವಿರುದ್ಧವಾಗಿ ಹಿಂದೂಸಮಾಜ ತನ್ನ ದೇವರುಗಳನ್ನು ದೇವಸ್ಥಾನಗಳಲ್ಲಿ ಮಾತ್ರವಲ್ಲದೇ, ಜನಮಾನಸದಲ್ಲಿ ಸ್ಥಾಪಿಸುವ ಪ್ರತಿತಂತ್ರ ಹೂಡಿತು. ದೇವಸ್ಥಾನದಲ್ಲಿ ನಿಂತ ದೇವರನ್ನೇನೋ ನಾಶಮಾಡಬಲ್ಲರು, ಮನಸ್ಸಿನಲ್ಲಿ ನಿಂತ ದೇವರನ್ನು ಹೇಗೆ ನಾಶಮಾಡಲು ಸಾಧ್ಯ? ಹಿಂದೂಸಮಾಜ ಹಾಡು, ನಾಟಕ, ನಾಟ್ಯ, ಕಥೆಗಳಲ್ಲಿ ಸ್ಥಾಪಿಸಿ ಅದನ್ನು ಕುಗ್ರಾಮಗಳಿಂದ ಹಿಡಿದು ಊರು, ನಗರ, ಮಹಾನಗರಗಳಲ್ಲಿ ಪ್ರಚುರಪಡಿಸತೊಡಗಿತು. ಅಲೆಕ್ಸಾಂಡರನ ಅಕ್ರಮಣದ ನಂತರ ಸುಮಾರು 1100 ವರ್ಷಗಳ ಕಾಲ ಬೇರೆ ಯಾವ ಮಹಾನ್ ಆಕ್ರಮಣವೂ ನಡೆಯದ ಕಾಲದಲ್ಲಿ ಕೂತು, ಹಿಂದೂನಾಗರೀಕತೆ ಕಟ್ಟಿದ ಹರಿಕಥೆ, ನಾಟಕ, ನಾಟ್ಯ ಮುಂತಾದ ಲಲಿತಕಲೆಗಳು ಈಗ ಉಪಯೋಗಕ್ಕಿಳಿದವು. ಬೈರಪ್ಪನವರ ‘ಸಾರ್ಥ’ ಓದಿದವರಿಗೆ ಈ ಪ್ರಯೋಗಗಳ ಪರಿಚಯವಿರುತ್ತದೆ. ದೇವರು ದೇವಸ್ಥಾನದಿಂದ ಮನೆ ಮನೆಗೆ ಬಂದ. ಮನೆಗ ಬಂದವ ಸೀದಾ ಮನಸ್ಸಿನಲ್ಲೇ ನಿಂತ. ರಾಮ-ಕೃಷ್ಣರು ನೆಂಟರಾದರು, ಸ್ನೇಹಿತರಾದರು. ಎಂದಿಗೂ ಅಳಿಸದಂತೆ ನೆಲೆನಿಂತರು.

ಆದರೆ ಅಪಾಯವಿನ್ನೂ ಮುಗಿದಿರಲಿಲ್ಲ. ಬದಲಿಗೆ ಶುರುವಾಗಿತ್ತಷ್ಟೇ. ಘಜ್ನಿ-ಘೋರಿಗಳಿಂದ ಪ್ರಾರಂಭವಾದ ಆಕ್ರಮಣ ನಿಲ್ಲದೇ, ಕಡಿಮೆಯಾಗದೇ ಹೆಚ್ಚುತ್ತಲೇ ಹೋಯಿತು. ಇಂದಿನ ಆಪ್ಘಾನಿಸ್ಥಾನ, ಪಾಕಿಸ್ಥಾನಗಳು ಮುಸ್ಲಿಂ ಆಕ್ರಮಣಕ್ಕೆ ತುತ್ತಾಗಿ ಕೆಲವೇ ದಶಕಗಳಲ್ಲಿ ಹಿಂದೂಧರ್ಮವೇ ಆ ಭಾಗಗಳಲ್ಲಿ ತೆಲೆಯೆತ್ತದಂತೆ ಮಕಾಡೆ ಮಲಗಿತು. ಪಂಜಾಬ್, ರಾಜಸ್ಥಾನ, ಗುಜರಾತ್’ಗಳಲ್ಲಿ ಹಿಂದೂಸಮಾಜದ ಹೆಂಗಸರೂ ಹೊರಗಿನಿಂದ ಬಂದ ಮುಸ್ಲಿಂ ಸೈನಿಕರ ಕಣ್ಣುಗಳಿಂತ ತಪ್ಪಿಸಿಕೊಳ್ಳಲು ಪರ್ದಾ ಪದ್ದತಿಯನ್ನು ಪ್ರಾರಂಭಿಸಿದರು. ತುಘಲಕ್’ನ ಕಾಲದಲ್ಲಿ ಮದುವೆಗಳಿಗೆ ಸರ್ಕಾರದ ಅನುಮತಿ ಬೇಕಿತ್ತು. ಮದುವೆಗೆ ಮಾಡಿದ ಖರ್ಚನ್ನು ನೋಡಿ, ಆ ಕುಟುಂಬ ಕಟ್ಟಬೇಕಾದ ತೆರಿಗೆಯನ್ನು ಬದಲಿಸುವ ಸಾದ್ಯತೆಯಿದ್ದದರಿಂದ ಮತ್ತು ಹೆಣ್ಣುಬಾಕ ಆಕ್ರಮಣಕಾರರಿಂದ ತಮ್ಮಮನೆಯ ವಯಸ್ಕ ಹೆಂಗಸರನ್ನುಳಿಸಿಕೊಳ್ಳಲು, ಹಿಂದೂಗಳು ಅವರ ಕಣ್ತಪ್ಪಿಸಿ ರಾತ್ರಿಸಮಯದಲ್ಲೇ ಮದುವೆಗಳನ್ನು ಮಾಡಲು ಪ್ರಾರಂಭಿಸಿದರು. ಹಿಂದೂಗಳ ನರಮೇಧದ ಕುರುಹಾಗಿ ಉತ್ತರಭಾರತದಲ್ಲಿ ಇವತ್ತಿಗೂ ಈ ಪರ್ದಾ ಮತ್ತು ರಾತ್ರಿಮದುವೆ ಪದ್ದತಿಗಳು ಹಾಗೇ ಉಳಿದಿವೆ.

ಇಷ್ಟೆಲ್ಲದರ ನಡುವೆ ನಮ್ಮ ದೈವನಂಬಿಕೆಗಳನ್ನುಳಿಸಲು ಪ್ರಾರಂಭವಾದದ್ದೇ ಭಕ್ತಿಪಂಥ. ದೈವಭಕ್ತ ಹಿಂದೂಗಳು ಪ್ರಾದೇಶಿಕವಾಗಿ ವಿವಿಧ ದೇವರು ಮತ್ತು ದೇವತೆಗಳ ನಾಮಸ್ಮರಣೆಯನ್ನು ಆಯಾಭಾಷೆಗಳಲ್ಲಿ ಹಾಡು-ಹಸೆ-ನೃತ್ಯಗಳ ಮೂಲಕ ರೂಪಾಂತರಿಸಿದರು. ವಿಷ್ಣುಪೂಜಕರಾದ ವೈಷ್ಣವರು, ಶಿವನನ್ನು ನಂಬಿದ ಶೈವರು, ಶಕ್ತಿ ಉಪಾಸಕರು ಸ್ಮಾರ್ತರು ಯಾರೂ ಹಿಂದೆಬೀಳಲಿಲ್ಲ. ಭಕ್ತಿಪಂಥ ಸ್ಥಳೀಯ ಭಾಷೆಗಳನ್ನು ಬಳಸಿಯೇ ದೇವರ ಅಗತ್ಯ, ಮಹಿಮೆ ಮತ್ತು ನಂಬಿಕೆಯ ಪರಿಣಾಮಗಳನ್ನು ಬೋಧಿಸಿತು. ಇದರಿಂದಾಗಿ ಸಂದೇಶವು ಜನಸಾಮಾನ್ಯರಿಗೆ ತಲುಪಿತು. ಈ ಚಳುವಳಿಯು ಅನೇಕ ಆಚಾರ್ಯ, ಕವಿ, ಮತ್ತು ಸಂತರಿಂದ ಪ್ರೇರಿತವಾಗಿತ್ತು. ಬರೀ ದೇವಸ್ಮರಣೆಯಲ್ಲದೇ ದ್ವೈತ, ಅದ್ವೈತಗಳ ವೇದಾಂತವನ್ನೂ ಆಸ್ತಿಕ-ನಾಸ್ತಿಕದ ದ್ವಂದ್ವವನ್ನೂ ಬೋಧಿಸಿ, ಬಳಸಿ ಬೆಳೆಸಿತು. ಈ ಚಳುವಳಿಯ ಮುಖ್ಯಪಾತ್ರಧಾರಿಗಳು ದಾಸರು ಅಂದೆ ತಪ್ಪಾಗಲಿಕ್ಕಿಲ್ಲ. ದಾಸಸಾಹಿತ್ಯ ಭಾರತದ ಅನರ್ಘ್ಯರತ್ನಗಳಲ್ಲೊಂದು. ನಾವಿವತ್ತು ನಂಬಿದ ದೇವರನ್ನು ಮತ್ತದರ ಕಲ್ಪನೆಯನ್ನು ಉಳಿಸಿದ್ದೇ ದಾಸಸಾಹಿತ್ಯ ಮತ್ತು ಭಕ್ತಿಪಂಥ. ಇಲ್ಲವಾದಲ್ಲಿ ಆಕ್ರಮಣಕಾರರ ಕತ್ತಿಯ ಅಲುಗಿನ ಮೇಲೆ ಸುಮಾರು 400 ವರ್ಷ ಕುತ್ತಿಗೆಯಿಟ್ಟೇ ಬದುಕಿದ ಹಿಂದೂಧರ್ಮ ಇವತ್ತಿಗೆ ಅಜ್ಟೆಕ್ ಮತ್ತು ಇಂಕಾಗಳಂತೆ ಬರೀ ಕುರುಹಾಗುತ್ತಿತ್ತಷ್ಟೇ.

ಭಕ್ತಿಪಂಥದ ಮೂಲ ಎಂಟನೇ ಶತಮಾನದ ದಕ್ಷಿಣದ ಭಾರತದಲ್ಲಿ ಅದರಲ್ಲೂ ತಮಿಳುನಾಡಿನಲ್ಲಿ ಕಂಡುಬಂದರೂ ಸಹ ಹನ್ನೆರಡನೇ ಶತಮಾನದ ಕಾಲದಲ್ಲಿ ಇಡೀ ಭಾರತವೇ ಭಕ್ತಿಪಂಥದಲ್ಲಿ ಮುಳುಗೇಳುತ್ತಿತ್ತು. ಶೈವರ ನಾಯನಾರ್’ಗಳು, ವೈಷ್ಣವರ ಆಳ್ವಾರ್’ಗಳು ಹಾಕಿಕೊಟ್ಟ ಪಂಕ್ತಿಯನ್ನೇ ಅನುಸರಿಸಿದ ಮುಂದಿನ ದಾಸರು ಇಡಿ ಸಮಾಜವನ್ನು ತಮ್ಮೊಂದಿಗೆ ಕರೆದೊಯ್ದರು. ಆಕ್ರಮಣದಡಿಯಲ್ಲಿ ಬದುಕುತ್ತಿದ್ದ ಜನರಿಗೆ ಭಕ್ತಿಪಂಥ ಸುರಂಗದ ಕೊನೆಯಲ್ಲಿ ಬೆಳಕಿನಂತೆ ಕಾಣಿಸಿತೋ ಇಲ್ಲವೋ ಗೊತ್ತಿಲ್ಲ, ಆದರೆ ಇಡೀ ಸಮಾಜವನ್ನು ಒಗ್ಗೂಡಿಸಿತು. ಎಲ್ಲರೂ ಜೊತೆಗೆ ಕೂತು ರಾಮನಾಮವನ್ನು ಪಠಿಸುವಾಗ, ಶಿವ ಸ್ತೋತ್ರವನ್ನು ಹಾಡುವಾಗ ನಾವೆಲ್ಲರೂ ಒಂದೇ, ನಮ್ಮೆಲ್ಲರ ತೊಂದರೆಗಳೂ ಒಂದೇ, ಮತ್ತು ನಮ್ಮೆಲ್ಲರನ್ನೂ ಒಟ್ಟಿಗೇ ರಾಮ-ಕೃಷ್ಣ-ಹರಿ-ಹರರು ಮೇಲೆತ್ತುತ್ತಾರೆ ಎಂಬ ನಂಬಿಕೆ ಹೆಚ್ಚಿನವರದ್ದಾಗಿರುತ್ತಿತ್ತು. ಸಮಾಜದಲ್ಲಿ ಭಕ್ತಿ ಮಾತ್ರವಲ್ಲದೇ, ಬದುಕಿನ ವೇದಾಂತ ಮತ್ತು ಮಾನವ ತತ್ವಗಳನ್ನೂ ಕೂಡಾ ಭಕ್ತಿಪಂಥ ಬಿತ್ತಿತು. ಜೀವನ ಮತ್ತದರ ಉಪಯೋಗದ ಬಗ್ಗೆ ಹಿಂದೂ ಸಮಾಜದ ಇಂದಿನ ನಂಬಿಕೆಗಳು ರೂಪುಗೊಂಡದ್ದು ಮತ್ತು ಗಟ್ಟಿಗೊಂಡದ್ದೂ ಸಹ ಇಲ್ಲಿಯೇ. ಸಹಿಷ್ಣುತೆಯೆಂಬುದು ಮೊದಲಿಂದಲೂ ನಮ್ಮ ಪುರಾಣ ವೇದಗಳಲ್ಲಿದ್ದರೂ ಸಹ, ಅದರ ಮುಖ್ಯ ಪ್ರಾಯೋಗಿಕತೆ ಹಿಂದೂಗಳಿಗೆ ಅರಿವಾಗಿದ್ದೂ ಈ ಕಾಲಘಟ್ಟದಲ್ಲಿಯೇ.
ಹೀಗೆ, ದಾಸರು ನಮ್ಮನ್ನು ಕೇವಲ ಭಕ್ತರನ್ನಾಗಿಸಲಿಲ್ಲ, ಬದಲಿಗೆ ಮನುಷ್ಯರಾಗಿಯೂ, ಸಮಾಜದ ಉಪಯುಕ್ತವಾಗಿಯೂ ಬೆಳೆಸಿದರು.

 

ಆಳ್ವಾರ್, ನಾಯನಾರ್’ಗಳಿಂದ ಪ್ರಾರಂಭವಾದ ಈ ಪಂಥ, ಅಂಡಾಳ್, ಬಸವಣ್ಣ, ಭಗತ್ ಪಿಪಾ, ಗುರು ನಾನಕ್, ರವಿದಾಸ, ಜ್ಞಾನಾನಂದ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಕಬೀರ್, ತುಲಸೀದಾಸ, ರಮಾನಂದ, ಶ್ರಿಪಾದರಾಜ, ವ್ಯಾಸತೀರ್ಥ, ಪುರಂದರದಾಸ, ಕನಕದಾಸ, ವಿಜಯದಾಸ, ವೃಂದಾವನದ ಗೋಸ್ವಾಮಿಗಳು, ನಾಮದೇವ, ಏಕನಾಥ, ತುಕಾರಾಮ, ಮೀರಾಬಾಯಿ, ರಾಮಪ್ರಸಾದ್ ಸೇನ್, ಸಂಕರದೇವ, ವಲ್ಲಭಾಚಾರ್ಯ, ಗಂಗಾಸತಿ, ಚೈತನ್ಯ ಮಹಾಪ್ರಭುಗಳವರೆಗೂ ಮುಂದುವರೆದುಬಂತು. ರಾಮ ನಮ್ಮ ಮನಸ್ಸಿನಲ್ಲಿ ಉಳಿಯಲು ಈ ಭಕ್ತಿಪಂಥದ ಪ್ರತಿಯೊಂದು ಮಹಾನ್ ಚೇತನದ್ದೂ ಕಾಣಿಕೆಯಿದೆ. ಅವರು ವೈಷ್ಣವರೇ ಆಗಿರಲಿ, ಶೈವರೇ ಆಗಿರಲಿ, ನಿರ್ಗುಣ ಬ್ರಹ್ಮನ ಆರಾಧಕರೇ ಆಗಿರಲಿ, ಸಗುಣ ಬ್ರಹ್ಮನ ಆರಾಧಕರೇ ಆಗಿರಲಿ, ನಿರಾಕಾರ-ನಿರ್ವಿಕಾರ ಬ್ರಹ್ಮನ ಆರಾಧಕರೇ ಆಗಿರಲಿ ಅವರೆಲ್ಲರೂ ದೇವರನ್ನು ನಮ್ಮ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿದರು. ಇವರ ಕಾಣಿಕೆಗಳಿಂದಾಗಿ ರಾಮ ಕೇವಲ ದಶರಥನ ಮಗನಾಗಲಿಲ್ಲ, ನಮ್ಮೆಲ್ಲರ ಮನೆಮಗನಾದ, ಆದರ್ಶಪುರುಷನಾದ, ರಾಮಲಲ್ಲಾ ಆದ. ಕೃಷ್ಣ ಯಶೋದೆಗಷ್ಟೇ ಮಗನಾಗಲಿಲ್ಲ, ನಮ್ಮನೆಯ ಬೆಣ್ಣೆಯನ್ನೂ ತಿಂದ, ನಮಗೂ ವಿಶ್ವರೂಪ ತೋರಿಸಿದ, ಸುಧಾಮನಿಗಷ್ಟೇ ಸ್ನೇಹಿತನಾಗಲಿಲ್ಲ, ನಮಗೂ ಸ್ನೇಹಿತನಾದ. ಶಿವ ಬರೀ ಆದಿಯೋಗಿಯಾಗಲಿಲ್ಲ, ಬೋಳೇಶಂಕರನೂ ಆದ, ನಟರಾಜನೂ ಆದ.

ಭಕ್ತಿಪಂಥ ನಮಗೆ ದೇವರನ್ನು ಹತ್ತಿರತಂದದ್ದೂ ಅಲ್ಲದೇ, ಸಮಾಜ ಕಲ್ಯಾಣದ ಹಲವು ಮಜಲುಗಳನ್ನು ಕಟ್ಟಿಕೊಟ್ಟಿತು. ದಾನ, ಸೇವೆ, ದಾಸೋಹ, ಗೋಶಾಲೆ, ವಾರ್ಷಿಕ ತೀರ್ಥಯಾತ್ರೆಗಳಂತಹಾ ಹಲವು ಪರಿಕಲ್ಪನೆಗಳನ್ನೂ ಸಮಾಜಕ್ಕೆ ಕೊಟ್ಟಿತು. ಪಂಡರಾಪುರದ ಯಾತ್ರೆಗಳು, ಹರದ್ವಾರ ಗೋಮುಖ್ ಮತ್ತು ಗಂಗೋತ್ರಿಗಳ ಕಾವಡಿ ಯಾತ್ರೆ, ಕೈಲಾಶ ಯಾತ್ರೆ, ಮಾನಸರೋವರ ಯಾತ್ರೆ, ಜಗನ್ನಾಥ ಯಾತ್ರೆಗಳ ಪರಿಕಲ್ಪನೆಗಳು ಗಟ್ಟಿಯಾಗಿದ್ದೇ ಭಕ್ತಿಪಂಥದ ಕಾಲದಲ್ಲಿ. ಆ ದೇವರನ್ನು ನಿಯಮಿತವಾಗಿ ನೋಡುವುದು, ಆ ನೋಡುವ ಕ್ರಿಯೆಯ ಸಮಯದಲ್ಲಿ ಅವನನ್ನು ಪ್ರಾರ್ಥಿಸುವುದು, ಎಲ್ಲರೂ ಒಂದಾಗುವುದು ಬಲವಾದ ಸಮಾಜವೊಂದಕ್ಕೆ ತಳಹದಿಯನ್ನು ಇನ್ನೂ ಗಟ್ಟಿಗೊಳಿಸಿತು. ದೇವಸ್ಥಾನಗಳಲ್ಲಿ ಅನ್ನದಾನ, ಗೋ ಪಾಲನೆ, ವೃದ್ಧರು ಮತ್ತು ಖಾಯಿಲೆಬಿದ್ದವರಿಗೆ ಸೇವೆಗಳು ಮತ್ತದಕ್ಕೆ ದಾನ ನೀಡುವುದು ಸಮಾಜದ ಭಾಗವಾಗತೊಡಗಿದವು. ನೈಸರ್ಗಿಕ ವಿಕೋಪಗಳಾದಾಗ ಜನರು ಮನೆಯಿಂದ ಹೊರಬಂದು ಸೇವೆ ಸಲ್ಲಿಸುವುದು ಸಾಮಾನ್ಯವಾಗತೊಡಗಿತು. ಹೀಗೆ ಆಕ್ರಮಣದ ಕಾಲದಲ್ಲಿ ಪ್ರತಿರೋಧ ತೋರದಿದ್ದರೆ ಸುಲಭವಾಗಿ ಹರಿದುಹೋಗಬಹುದಾಗಿದ್ದ ಹಿಂದೂಧರ್ಮವೆಂಬ ಬಟ್ಟೆಯನ್ನು ಭಕ್ತಿಪಂಥ ಒಂದಾಗಿ ಹಿಡಿಯಿತು. ದೇವರ ಕಲ್ಪನೆಯೆಂಬ ದಾರದಲ್ಲಿ ಹೊಸೆಯಿತು.

ಇವತ್ತು ರಾಮನಿಗೆ ಮಂದಿರ ಸಿಕ್ಕಿದ್ದಕ್ಕೆ ನಾವು ಸಂಭ್ರಮಿಸುತ್ತಿದ್ದರೆ, ಅದಕ್ಕೆ ನಮಗೆ ರಾಮನನ್ನು ಕಟ್ಟಿಕೊಟ್ಟ, ರಾಮನನ್ನು ನಮ್ಮವನನ್ನಾಗಿಸಿದ, ರಾಮನನ್ನು ರಾಮಲಲ್ಲಾನನ್ನಾಗಿಸಿದ ಭಕ್ತಿಪಂಥವೂ ಕಾರಣ. ನಮ್ಮ ಮನಸ್ಸಿನಲ್ಲಿ ರಾಮನನ್ನು ಸದಾ ಜೀವಂತವಾಗಿಟ್ಟ ಕನಕಪುರಂದರರನ್ನೂ, ತುಲಸೀದಾಸ, ಭದ್ರಾಚಲ ರಾಮದಾಸ, ತ್ಯಾಗರಾಜರನ್ನೂ ನೆನೆಸಿಕೊಳ್ಳಲೇಬೇಕು. ಅಯೋಧ್ಯೆಯಲ್ಲಿ ಮಂದಿರ ನೆಲಸಮವಾದರೂ ಸಹ ಈ ಮಹಾನುಭಾವರು ಮನಸ್ಸಿನಿಂದ ರಾಮನನ್ನು ತೆಗೆಯಲಿಲ್ಲ. ಅವರ ಭಕ್ತಿ ಅಲುಗಲಿಲ್ಲ. ಅವರ ದೇಹಾಂತ್ಯದ ಸಮಯದಲ್ಲೂ ಅವರು ರಾಮನ ಮಂದಿರ ನೆಲಸಮವಾದ ನೆನಪನ್ನೇ ಕೊಂಡೊಯ್ದರು. ರಾಮಮಂದಿರ ಅವರ ಕನಸಾಗಿತ್ತೋ ಇಲ್ಲವೋ, ರಾಮನ ಕಲ್ಪನೆ ಸದಾ ಅಮರವಾಗಿರಬೇಕೆಂಬುದು ಅವರ ಕನಸಾಗಿತ್ತು. ಮರ್ಯಾದಾ ಪುರುಷೋತ್ತಮ ರಾಮನೂ ಸಹ ತನ್ನ ಮಂದಿರಕ್ಕಾಗಿ ಯುದ್ಧ ಮಾಡಲಿಲ್ಲ, ಇನ್ನೊಬ್ಬರನ್ನು ಒಕ್ಕಲೆಬ್ಬಿಸಲಿಲ್ಲ. ನ್ಯಾಯಯುತವಾಗಿಯೇ ತನಗೆ ಸೇರಬೇಕಾದ ಜಾಗವನ್ನು ಪಡೆದ. ಇದೀಗ ಆ ಎಲ್ಲಾ ಚೇತನಗಳ ಕನಸು ಮೂರ್ತರೂಪವನ್ನೂ ಪಡೆದಿದೆ. ರಾಮನ ಮಂದಿರ ಭವ್ಯವಾಗಿ ತಲೆಯೆತ್ತಲಿದೆ.

0 comments on “ರಾಮನಿಗೆ ಮಂದಿರ ನಾವು ಕಟ್ಟುವೆವು, ಆದರ ರಾಮನನ್ನು ಕಟ್ಟಿದವರ್ಯಾರು

Leave a Reply

Your email address will not be published. Required fields are marked *