Thursday, 28 March, 2024

“ಯಮನನ್ನೇ ಗೆದ್ದ ಯಾಮಾಗುಚಿ”

Share post

‘ಪಾಪಿ ಚಿರಾಯು’ ಅನ್ನೋ ಮಾತು ನೀವು ಆಗಾಗ ಕೇಳಿರಬಹುದು. ಮೇಲ್ನೋಟಕ್ಕೆ ಕಂಡುಬರುವಂತೆ ಇದರರ್ಥ ‘ಪಾಪಿಗಳಿಗೆ ಸಾವಿಲ್ಲ’ ಅಂತಾ. ಆದರೆ ನಿಜಕ್ಕೂ ಪಾಪಿಗೆ ಸಾವಿಲ್ಲವೇ!? ‘ಜೀವನ ಅತ್ಯಮೂಲ್ಯ’ ಅಂತಾ ಆದ ಮೇಲೆ, ಸಾವು ಸಿಗದವ ಪಾಪಿ ಹೇಗೆ? ಸಾವು ಹತ್ತಿರ ಸುಳಿಯದೇ ಬದುಕುಳಿದವ ಪುಣ್ಯವಂತನಲ್ಲವೇ!? ಹಾಲಿವುಡ್ಡಿನಲ್ಲಿ ‘ಫೈನಲ್ ಡೆಸ್ಟಿನೇಷನ್’ ಎಂಬುದೊಂದು ಚಿತ್ರಸರಣಿಯೇ ಇದೆ. ಅದನ್ನು ನೋಡಿ ಮನೆಯಿಂದ ಹೊರಬರಲೇ ಹೆದರಿರುವವರ ಪಟ್ಟಿ ಉದ್ದವಿದೆ. ಸಾವನ್ನು ವಂಚಿಸಲು ಸಾಧ್ಯವಿಲ್ಲ. ಒಂದುಬಾರಿಗೆ ವಂಚಿಸಿದರೂ ಅದು ಮತ್ತೆ ಹಿಂದೆಯೇ ಹಿಂಬಾಲಿಸಿಬರುತ್ತದೆ ಎಂಬ ಕಥೆಯ ಸರಣಿಯಿದು. ಅದನ್ನು ನೋಡಿದರೆ ಪಾಪಿ ಚಿರಾಯುವೋ, ಪುಣ್ಯವಂತ ಚಿರಾಯುವೋ ಎಂಬ ಅನುಮಾನ ಕಾಡಲಿಕ್ಕುಂಟು.

 

ಅಮೇರಿಕಾದಲ್ಲೊಬ್ಬ ರಾಯ್ ಸಲ್ಲಿವಾನ್ ಎಂಬ ಪುಣ್ಯಾತ್ಮ ಏಳು ಬಾರಿ ಸಿಡಿಲು ಹೊಡೆಸಿಕೊಂಡೂ ಬದುಕಿದ್ದಾನಂತೆ. ಪಾಪ ಅದೆಷ್ಟು ಬಾರಿ ಮದುವೆಯಾಗಿದ್ದನೋ

ಏಳು ಬಾರಿ ಸಿಡಿಲು ಹೊಡೆಸಿಕೊಂಡೂ ಬದುಕುಳಿದ ಸಿಡಿಲಮರಿ ರಾಯ್ ಸಲ್ಲಿವಾನ್!

ಏನೋ! ಹಾಗಾಗಿ ಮತ್ತೆ ಮತ್ತೆ ಸಿಡಿಲುಬಡಿದರೂ, ಮತ್ತೆ ಮತ್ತೆ ಗಾಯಗೊಂಡರೂ ಕಮಕ್-ಕಿಮಕ್ ಎನ್ನದೇ ಬದುಕುಳಿದಿದ್ದಾನೆ. ಅವನ ಬಗ್ಗೆ ಓದಿದಾಗ ನಾನು ‘ಇವನಪ್ಪಾ ನಿಜವಾದ ಅದೃಷ್ಟಶಾಲಿ ಮತ್ತು ಧೈರ್ಯಶಾಲಿ’ ಅಂದ್ಕೊಂಡಿದ್ದೆ. ಕ್ಯಾನ್ಸರ್ ಗೆದ್ದು ಬರುವವರ ಮೇಲೆ ನನಗೆ ಬಹಳ ಗೌರವವಿದೆ. ಯಾಕೆಂದರೆ, ಕ್ಯಾನ್ಸರ್ ರೋಗ ಕೊಡುವುದಕ್ಕಿಂತಲೂ ಹೆಚ್ಚು ನೋವು ಕೊಡೋದು ಕ್ಯಾನ್ಸರಿಗೆ ಕೊಡಲಾಗುವ ಚಿಕಿತ್ಸೆ. ಅದು ನರಕಕ್ಕಿಂತಲೂ ಹೆಚ್ಚು ಯಾತನಾಮಯ. ಎಷ್ಟೋ ಜನ ಕ್ಯಾನ್ಸರಿಗೆ ತುತ್ತಾದವರು, ರೋಗಕ್ಕಿಂತ ಹೆಚ್ಚಾಗಿ, ಕೀಮೋಥೆರಪಿಯ ಜೀವಹಿಂಡುವ ನೋವಿನಿಂದಾಗಿಯೇ ಖಿನ್ನತೆಗೊಳಗಾಗಿ, ಬದುಕುವ ಆಸೆ ಬಿಟ್ಟು ಬಿಡುತ್ತಾರೆ. ಇಂತಹ ಸಮಯಕ್ಕೆ ಅಂತಲೇ ಕಾಯುತ್ತಿರುವ ಸಾವು ಹಾಗೇ ಹೆಗಲೇರಿ ಕುಳಿತುಬಿಡುತ್ತದೆ.

 

ವಿಮಾನ ಅಪಘಾತವೊಂದರಲ್ಲಿ ಸರಿಸುಮಾರು 11,000 ಅಡಿಯಿಂದ ಕೆಳಗೆ ಬಿದ್ದ ಜೂಲಿಯನ್ ಕೊಯೆಪ್ಕೆ (Juliane Koepcke), ಎರಡನೇ ಮಹಾಯುದ್ಧದಲ್ಲಿ 18,000 ಅಡಿಯಿಂದ ಬಿದ್ದೂ ಬದುಕುಳಿದ ಗನ್ನರ್ ನಿಕೊಲಸ್ ಅಲ್ಕೆಮೇಡ್ (Nicholas Alkemade) ಹಾಗೂ 22,000 ಅಡಿಯಿಂದ ವಿಮಾನದಿಂದ ಹಾರಿ ಬದುಕಿದ ಅಲನ್ ಮ್ಯಾಗೀ (Alan Magee) ಎಂಬ ಏರ್ಮ್ಯಾನ್, 23,000 ಅಡಿತೆತ್ತರದಲ್ಲಿ ಹಾರುತ್ತಿದ್ದ ವಿಮಾನಕ್ಕೆ ಬೆಂಕಿಬಿದ್ದಾಗ ‘ಬೆಂಕಿಯಲ್ಲಿ ಉರಿದು ಸಾಯುವುದಕ್ಕಿಂತಾ ನೆಲಕ್ಕಪ್ಪಳಿಸಿ ಒಂದೇ ಬಾರಿಗೆ ಸಾಯುವುದೇ ಮೇಲು’ ಎಂದು ನಿರ್ಧರಿಸಿ ಹಾರು ಅಚ್ಚರಿಯ ರೀತಿಯಲ್ಲಿ ಬದುಕುಳಿದ ಇವಾನ್ ಮಿಖಾಯ್ಲೋವಿಚ್ ಚಿಸ್ಸೋವ್ (Ivan Mikhailovich Chisov)ನ ಕಥೆಗಳನ್ನೆಲ್ಲಾ ಓದಿದಾಗ ನನಗೆ ಇನ್ನೂ ಆಶ್ಚರ್ಯವುಂಟಾಗಿತ್ತು. “ಇವರೆಲ್ಲಾ ಮಿಲಿಟರಿಯವರು ಬಿಡ್ರೀ, ಗಟ್ಟಿಮುಟ್ಟಾಗಿದ್ದರು” ಅಂತೀರೇನು!? 1972ರಲ್ಲಿ ಪ್ಯಾರಾಚೂಟ್ ಕೂಡ ಇಲ್ಲದೇ 33,000 ಅಡಿಯಿಂದ ಬಿದ್ದರೂ ಬದುಕುಳಿದ ವೆಸ್ನಾ ವುಲೋವಿಕ್ (Vesna Vulović) ಎಂಬ ಗಗನಸಖಿಯ ಕಥೆಯನ್ನು ಕೇಳಿದರೆ ನೀವು ಕೂತಿರುವ ಕುರ್ಚಿಯಿಂದ ಹಾಗೆಯೇ ಕೆಳಗೇ ಬಿದ್ದುಬಿಟ್ಟೀರೇನೋ!

 

ಸಿಡಿಲಾಯಿತು, ರೋಗಗಳಾಯಿತು, ವಿಮಾನದಿಂದ ಬಿದ್ದದ್ದಾಯಿತು. ಇನ್ಯಾವುದರಲ್ಲಿ ಸಾವನ್ನು ವಂಚಿಸುತ್ತೀರ!? ಅಣುಬಾಂಬಿನಿಂದ!? ಅದರಿಂದರೂ ಬದುಕುಳಿದವನೊಬ್ಬನ ಕಥೆಯಿದೆ ಎಂದರೆ ನಂಬುತ್ತೀರಾ!? ಇನ್ನೂ ಅಚ್ಚರಿಯ ವಿಷಯ ಕೇಳಿ. ಆತ ಒಂದಲ್ಲ ಎರಡು ಅಣುಬಾಂಬ್ ಸ್ಪೋಟಗಳಿಂದ ಬಚಾವಾಗಿದ್ದಾನೆ! ಅಣುಬಾಂಬಿನಿಂದ ಬಚಾವಾಗುವುದು ಕಷ್ಟ ಮಾತ್ರವಲ್ಲಅಸಾಧ್ಯವೆಂದು ಸಂಭವನೀಯತೆಯ ಸಿದ್ಧಾಂತಗಳು ಹೇಳುತ್ತವೆ. ಅಣುಬಾಂಬ್ ಬಿದ್ದ ಮರುಕ್ಷಣ ಉಂಟಾಗುವ ಶಾಕ್ ಅಲೆಯಿಂದಲೇ ಸ್ಪೋಟಕೇಂದ್ರದಿಂದ ಸುಮಾರು 2 ಕಿಮೀ ಸುತ್ತಳತೆಯಲ್ಲಿರುವ (ಅಂದರೆ Ground Zeroದಲ್ಲಿ) ಮನುಷ್ಯರೆಲ್ಲಾ ಛಿದ್ರವಿಚ್ಚಿದ್ರವಾಗುತ್ತಾರೆ. ಅಕಸ್ಮಾತ್ ಅಲ್ಲಿ ಬದುಕುಳಿದಿರಿ ಅಂತಲೇ ಇಟ್ಕೊಳ್ಳಿ. ಮರುಕ್ಷಣದಲ್ಲೇ ಬೀಸಿ ಬರುವ ಸ್ಪೋಟದ ಶಾಖಕ್ಕೆ, 3 ಕಿಲೋಮೀಟರ್ ಸುತ್ತಳತೆಯಲ್ಲಿರುವ ಎಲ್ಲಾ ವಸ್ತುಗಳು ಉರಿದು ಆವಿಯಾಗುತ್ತವೆ. ಆದರೆ ಈ ಮನುಷ್ಯ ಬದುಕುಳಿದ!

 

ಇವನ ಹೆಸರು ತ್ಸುತೋಮು ಯಾಮಾಗುಚೀ (Tsutomu Yamaguchi). ಎರಡನೇ ಮಹಾಯುದ್ಧದಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ ಎರಡೂ ನಗರಗಳ ಮೇಲೆ ಬಿದ್ದ ಎರಡೂ ಬಾಂಬುಗಳಿಂದ ಬಚಾವಾದ ಏಕೈಕ ವ್ಯಕ್ತಿ ಈತ. ಮೂಲತಃ ನಾಗಾಸಾಕಿಯ ಮಿತ್ಸುಬಿಷಿ ಕಚೇರಿಯಲ್ಲಿ ಕೆಲಸ ಮಾಡುತ್ತಾ ಜೀವನ ನಡೆ ಸುತ್ತಿದ್ದ ಯಾಮಾಗುಚಿ, ಮೂರು ತಿಂಗಳ ಕಾಲ ಕಂಪನಿಯ ಕೆಲಸಕ್ಕೆಂದು ಹಿರೋಶಿಮಾಕ್ಕೆ ಬಂದಿದ್ದ. ಆಗಸ್ಟ್ 6, 1945 ಹಿರೋಶಿಮಾದಲ್ಲಿ ಅವನ ಕೆಲಸದ ಕೊನೆಯ ದಿನ. ಅವತ್ತು ಕೆಲಸ ಮುಗಿಸಿ ನಾಗಾಸಾಕಿಗೆ ಹೊರಡಲನುವಾಗಿ ಬಂದರಿನ ಕಡೆ ಹೊರಟವನಿಗೆ, ತನ್ನ ‘ಹಾನ್ಕೋ'(ಪ್ರಯಾಣಕ್ಕೆ ಅಗತ್ಯವಾಗಿ ಬೇಕಾದ, ಕೆಲಸದ ಕಂಪನಿಯಿಂದ ಕೊಡಲಾಗುವ ಒಂದು ಸೀಲು ಮಾಡಿದ ಕಾಗದ)ವನ್ನು ಆಫೀಸಿನಲ್ಲೇ ಮರೆತುಬಿಟ್ಟು ಬಂದಿದ್ದು ಗೊತ್ತಾಯ್ತು. ಜೊತೆಗಿದ್ದ ಇಬ್ಬರು ಸ್ನೇಹಿತರಿಗೆ ಮುಂದೆ ನಡೆಯುತ್ತಿರಲು ಹೇಳಿ ತಾನು ಆಫೀಸಿಗೆ ಹೋಗಿ, ಕಾಗದಪತ್ರವನ್ನು ತೆಗೆದುಕೊಂಡು ಬಂದರಿನ ಕಡೆಗೆ ಒಂದು ಹತ್ತು ಹೆಜ್ಜೆ ಹಾಕಿದ್ದನಷ್ಟೇ. ದೂರದಲ್ಲಿ ಅವನಿಗೆ ‘ಎನೋಲಾ ಗೇ’ ಬಾಂಬರ್ ವಿಮಾನವೂ, ಅದರಿಂದ ಕೆಳಗಿಳಿಯುತ್ತಿದ್ದ ‘ಲಿಟ್ಲ್ ಬಾಯ್’ ಅಣುಬಾಂಬಿನ ಎರಡು ಪ್ಯಾರಾಚೂಟುಗಳೂ ಕಂಡವು. ಅದೇನೆಂದು ಕುತೂಹಲದಿಂದ ನೋಡುವಷ್ಟರಲ್ಲೇ ‘ಆಕಾಶದಲ್ಲಿ ಒಂದು ಕಣ್ಣು ಕೋರೈಸುವ ಬೆಳಕು ಕಂಡುಬಂತು, ಹಾಗೂ ತನ್ನನ್ನು ಎತ್ತಿ ಎಸೆದ ಅನುಭವವಾಯ್ತು’ ಅಂತಾ ಯಾಮಾಗುಚಿ ಹೇಳುತ್ತಾನೆ. ಆತ ಸ್ಪೋಟದ 3 ಕಿ.ಮೀ. ವ್ಯಾಪ್ತಿಯ ಹೊರಗಿದ್ದಿದ್ದರಿಂದ ಆಘಾತದ ಅಲೆಯಿಂದಲೂ, ಶಾಖದ ಅಲೆಯಿಂದಲೂ ಬಚಾವಾದ. ಹಾಗಂತ ಆತನ ಕೂದಲೇ ಕೊಂಕಲಿಲ್ಲವೆಂದೇನಲ್ಲ. ಸ್ಪೋಟದ ಸದ್ದಿಗೆ ಆತ ಸಂಪೂರ್ಣ ಕಿವುಡನಾದ, ಆ ಬೆಳಕಿನಿಂದಾಗಿ ತಾತ್ಕಾಲಿಕವಾಗಿ ಮೂರು ಘಂಟೆಗಳ ಕಾಲ ಕುರುಡನೂ ಆದ, ದೇಹದ ಮೇಲ್ಬಾಗದ ಎಡಬದಿಯೆಲ್ಲಾ ಗಂಭೀರವಾದ ಸುಟ್ಟಗಾಯಗಳಾದವು. ಇಷ್ಟಾದರೂ ಆತ ಮುಂದೆ ಓಡಿ ತನ್ನ ಸ್ನೇಹಿತರಿಗಾಗಿ ಹುಡುಕಿದ. ಅವರಲ್ಲಿ ಇಬ್ಬರು ಬದುಕಿದ್ದರೆಂಬ ವಿಷಯ ತಿಳಿದು ಅವರನ್ನು ಹುಡುಕಿ, ಆ ರಾತ್ರಿಯೆಲ್ಲಾ ಅವರೊಂದಿಗೇ ಕಳೆದ. ಹಿರೋಷಿಮಾದ ಆಸ್ಪತ್ರೆಗಳಲ್ಲಿ ಜಾಗವಿಲ್ಲದ್ದರಿಂದ, ಬದುಕುಳಿದವರಿಗೆಲ್ಲಾ ಪ್ರಥಮ ಚಿಕಿತ್ಸೆಕೊಟ್ಟು ಮರುದಿನ ಹಡಗು ಹತ್ತಿಸಿ ನಾಗಾಸಾಕಿಗೆ ಕಳಿಸಲಾಯ್ತು. ಅಲ್ಲಿ ಅವನಿಗೆ ಪೂರ್ಣಪ್ರಮಾಣದ ಚಿಕಿತ್ಸೆಯನ್ನೂ ಕೊಡಲಾಯ್ತು. ಅಷ್ಟು ಗಾಯಗಳ ನಡುವೆಯೂ, ಬ್ಯಾಂಡೇಜ್ ಸುತ್ತಿಕೊಂಡೇ, ಈ ಮಹಾರಾಯ ಆಗಸ್ಟ್ 9ರಂದು ಕೆಲಸಕ್ಕೆ ಹಾಜರಾದ!

 

ಅವತ್ತು ಬೆಳಗ್ಗೆ ಸುಮಾರು ಹನ್ನೊಂದು ಘಂಟೆಗೆ, ತನ್ನ ಮೇಲಧಿಕಾರಿಗೆ ಹಿರೋಷಿಮಾದ ಘಟನೆ ವಿವರಿಸುತ್ತಿದ್ದಾಗಲೇ (ಇದು ತಮಾಷೆಯಾಗಿ ಕಂಡರೂ ಸಹ, ನಿಜ), ಅಮೇರಿಕಾದ ‘ಬಾಕ್ಸ್ಕಾರ್’ ಯುದ್ಧವಿಮಾನ, ಎರಡನೇ ಅಣುಬಾಂಬ್ ‘ಫ್ಯಾಟ್-ಮ್ಯಾನ್’ ಅನ್ನು ನಾಗಾಸಾಕಿಯ ಮೇಲೆ ಹಾಕಿತು. ಈ ಸಲವೂ ಸಲ ಬಾಂಬ್ ಸ್ಪೋಟದ ಕೇಂದ್ರದಿಂದ 3 ಕಿ.ಮೀ ಹೊರಗಿದ್ದ ಯಮಾಗುಚಿ ಬದುಕುಳಿದ. ಯಾವ ಹೊಸಗಾಯಗಳೂ ಆಗಲಿಲ್ಲ. ಆದರೆ ‘ಅವತ್ತಷ್ಟೇ ಹಾಕಿದ್ದ ನನ್ನ ಹೊಸಾ ಬ್ಯಾಂಡೇಜುಗಳೆಲ್ಲಾ ಹಾಳಾಗಿಹೋದವು. ನಾಗಾಸಾಕಿಯಲ್ಲಿಯೂ ಹಿರೋಷಿಮಾದಂತೆಯೇ ಆಸ್ಪತ್ರೆಗಳೆಲ್ಲಾ ಅವಿರತವಾಗಿ ಕೆಲಸಮಾಡುತ್ತಿದ್ದರಿಂದ, ಹೊಸ ಬ್ಯಾಂಡೇಜು ಸಿಗದೆ ನಾನು ಒಂದು ವಾರ ಅತೀವ ಜ್ವರದಿಂದ ಬಳಲುವಂತಾಯ್ತು’ ಎಂಬ ಅಳಲು ತೋಡಿಕೊಂಡ, ಅಷ್ಟೇ. ಹೀಗೆ ಯಮಾಗುಚಿ ಎರಡೂ ಅಣುಬಾಂಬುಗಳ ಸ್ಪೋಟದ ನಡುವೆಯೂ ಬದುಕುಳಿದ ಏಕೈಕ ವ್ಯಕ್ತಿಯಾದ.

 

ಯಾಮಾಗುಚಿಯ ಮುಂದಿನ ಕೆಲವರ್ಷಗಳು ಅಷ್ಟೇನೂ ಸುಖಮಯವಾಗಿರಲಿಲ್ಲ. ಕಂಪನಿ ಬಹಳ ನಷ್ಟದಲ್ಲಿ ನಡೆಯತೊಡಗಿದರಿಂದ, ಆತನನ್ನು ಕೆಲಸದಿಂದ ತೆಗೆಯಲಾಯ್ತು. ತನ್ನ ಇಡೀ ಕುಟುಂಬವನ್ನೇ ನಿದ್ರೆಮಾತ್ರೆ ಕೊಟ್ಟು ಸಾಯಿಸುವ ಯೋಚನೆಯನ್ನೂ ಒಮ್ಮೆ ಮಾಡಿದ್ದನಂತೆ. ಆದರೆ ಸಧ್ಯ, ಅಂತಾ ಪ್ರಮೇಯ ಬಂದೊರಗಲಿಲ್ಲ. ಯುದ್ಧಾನಂತರ ಅಮೇರಿಕಾದ ಸೇನೆಗೆ ಭಾಷಾ ಅನುವಾದಕನಾಗಿ ಕೆಲಸ ಮಾಡಿದ. ನಂತರ ಸ್ವಲ್ಪಕಾಲ ಶಾಲೆಯಲ್ಲಿ ಶಿಕ್ಷಕನಾಗಿ ಕೂಡಾ ಕೆಲಸಮಾಡಿದ. ಕೊನೆಗೆ, ತನ್ನ ಹಳೆಯ ಕಂಪನಿ ಮಿತ್ಸುಬಿಷಿ ಪುನಃ ಕೆಲಸಕ್ಕೆ ಕರೆದಾಗ, ಅವರ ಆಯಿಲ್ ಟ್ಯಾಂಕರ್ ತಯಾರಿಕಾ ಘಟಕದಲ್ಲಿ ಕೆಲಸಕ್ಕೆ ಅಲ್ಲೇ ನಿವೃತ್ತಿ ಕೂಡಾ ಹೊಂದಿದ.

 

ಸ್ಪೋಟಗಳು ನಡೆದಾಗ ಈತನಿಗೆ 29ವರ್ಷ ವಯಸ್ಸು. 1950ರಲ್ಲಿ ಅವನ ಹೆಂಡತಿ (ಆಕೆ ಕೂಡಾ ನಾಗಾಸಾಕಿ ಸ್ಪೋಟದಲ್ಲಿ ಬದುಕುಳಿದವಳು) ಎರಡು ಹೆಣ್ಣು ಮಕ್ಕಳಿಗೆ ಜನ್ಮಕೊಟ್ಟಳು. ಹುಟ್ಟಿದ ಮಕ್ಕಳೂ ಸಹ ಆರೋಗ್ಯವಾಗಿಯೇ ಇದ್ದವು. ಅವನಿಗೆ ಹಿರೋಶಿಮಾದ ಸ್ಪೋಟದಲ್ಲಿ ಎಡಕಿವಿ ಕಳೆದುಕೊಂಡದ್ದು ಹಾಗೂ ಕೂದಲು ಉದುರಲು ಪ್ರಾರಂಭಿಸಿದ್ದು ಬಿಟ್ಟರೆ ಅಂತದ್ದೇನೂ ಹೇಳುವಂತಾ ಅನಾರೋಗ್ಯ ಕಾಡಲಿಲ್ಲ. ಕೊನೆಗಾಲದಲ್ಲಿ ಮಾತ್ರ ಯಾಮಾಗುಚಿ ವಿಕಿರಣಸಂಬಂಧೀ ಕಾಯಿಲೆಗಳಾದ ಕ್ಯಾಟರಾಕ್ಟ್ ಹಾಗೂ ಲ್ಯುಕೇಮಿಯಾದಿಂದ ಹಾಸಿಗೆ ಹಿಡಿದ. ಜನವರಿ 4, 2010ರಂದು, ತನ್ನ 93ನೇ ವಯಸ್ಸಿನಲ್ಲಿ, ತನ್ನನ್ನು ಒಂದು ವರ್ಷ ಕಾಲ ಕಾಡಿದ ಹೊಟ್ಟೆಯ ಕ್ಯಾನ್ಸರಿಗೆ ಶರಣಾಗಿ ಮರಣಹೊಂದಿದ. ಆತನ ಹೆಂಡತಿ ಮಾತ್ರ ನಾಗಾಸಾಕಿಯ ಸ್ಪೋಟದ ನಂತರ ಉಂಟಾದ ಕಪ್ಪು ಮಳೆ(black rain)ಯಿಂದಾಗಿ ಜೀವನವಿಡೀ ನರಳಿ 88ನೇ ತನ್ನ ವಯಸ್ಸಿನಲ್ಲಿ, 2008ರಲ್ಲಿ ಕಿಡ್ನಿ ಹಾಗೂ ಯಕೃತ್ತಿನ ಕ್ಯಾನ್ಸರಿನಿಂದ ಮರಣಿಸಿದಳು. ಆತನ ಮಕ್ಕಳೂ ಸಹ ಜೀವನವಿಡೀ ಸಣ್ಣಪುಟ್ಟ ಖಾಯಿಲೆಯಿಂದ ನರಳುತ್ತಲೇ ಇದ್ದರು.

 

ಈ ಅಣುಬಾಂಬ್ ಸ್ಪೋಟಗಳಿಂದ ಕಷ್ಟಗಳಿಗೊಳಗಾಗಿಯೂ ಬದುಕುಳಿದವರನ್ನು ಜಪಾನ್ ಸರ್ಕಾರ ‘ಹಿಬಾಕುಶಾ’ ಎಂದು ಕರೆಯುತ್ತದೆ. 1957ರಲ್ಲಿ ಹಿಬಾಕುಶಾಗಳನ್ನು ಗುರುತಿಸಿದಾಗ, ಯಾಮಾಗುಚಿಯ ಹೆಸರನ್ನು ಬರೇ ನಾಗಾಸಾಕಿಯ ಸ್ಪೋಟದ ಪಟ್ಟಿಯಲ್ಲಿ ಮಾತ್ರ ಸೇರಿಸಿದ್ದರು. ಆತ ಅದರಿಂಲೇ ಸಂತುಷ್ಟನಾಗಿದ್ದ. ಎರಡೂ ಬಾಂಬುಗಳಿಂದ ಬದುಕುಳಿದ ತನ್ನ ‘ಸಾಹಸ’ವನ್ನು ಹೇಳಿಕೊಳ್ಳಬೇಕೆಂದು ಅವನಿಗೇನೂ ಅನ್ನಿಸಲಿಲ್ಲ. ಆದರೆ ವಯಸ್ಸಾದಂತೆಲ್ಲಾ ಅವನಿಗೆ ಅಣುವಿಕಿರಣದ ಅಪಾಯಗಳ ಬಗ್ಗೆ ತನ್ನ ಮುಂದಿನ ಪೀಳಿಗೆಯನ್ನು ಎಚ್ಚರಿಸಬೇಕೆಂದೆನಿಸಲು ಪ್ರಾರಂಭಿಸಿತು. 2009ರ ಜನವರಿಯಲ್ಲಿ ಆತ ತನ್ನನ್ನು ಎರಡೂ ಸ್ಪೋಟಗಳಡಿಯಲ್ಲಿ ಗುರುತಿಸುವಂತೆ ಜಪಾನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ. 2009ರ ಮಾರ್ಚ್ ನಲ್ಲಿ ಆತನ ಮನವಿ ಪುರಸ್ಕರಿಸಿದ ಸರ್ಕಾರ ಆತನಿಗೆ Double Recognition ಕೊಟ್ಟು, ಅವನನ್ನು ಈ ಗುರುತಿಗೆ ಪಾತ್ರನಾದ ಏಕೈಕ ವ್ಯಕ್ತಿಯೆಂದೂ ಘೋಷಿಸಿತು. ಅದನ್ನು ಸ್ವೀಕರಿಸುತ್ತಾ ‘ಈಗ ನಾನು ಎರಡೆರಡು ಬಾರಿ ಅಣುವಿಕಿರಣಕ್ಕೆ ತುತ್ತಾಗಿರುವುದು ಸರ್ಕಾರೀ ದಾಖಲೆಯಾಗಿ ಗುರುತಿಸಲ್ಪಟ್ಟಿದೆ. ನನ್ನ ಮುಂದಿನ ಪೀಳಿಗೆಗಳು ಈಗ ಅಣುಬಾಂಬಿನ ಕೆಟ್ಟಪರಿಣಾಮಗಳ ಬಗ್ಗೆ ಖಂಡಿತಾ ತಿಳಿಯಬಹುದು. ಈ ದಿನಗಳು ನಮ್ಮ ಜೀವನದಲ್ಲಿ ಮತ್ತೆಂದೂ ಬರದಿರಲಿ’ ಎಂದ.

 

ಈ ಆಗಸ್ಟ್ ತಿಂಗಳಿಗೆ, ಹಿರೋಷಿಮಾ ಮತ್ತು ನಾಗಾಸಾಕಿಯನ್ನು ಅಮೇರಿಕಾ ಧ್ವಂಸಮಾಡಿ 75ವರ್ಷ ತುಂಬಿತು. ಕಳೆದ 75ವರ್ಷಗಳಲ್ಲಿ ಸುಮಾರು ಏಳೆಂಟುಬಾರಿ ಇನ್ನೇನು ಪರಮಾಣುಯುದ್ಧ ಶುರುವಾಗಿಯೇಬಿಟ್ಟಿತು ಎನ್ನುವಷ್ಟರಮಟ್ಟಿಗೆ ತಲುಪಿದ್ದ ಪರಿಸ್ಥಿತಿಗಳು, ಜಗತ್ತಿನ ನಾಯಕರುಗಳ ಜ್ಞಾನದದೆಸೆಯಿಂದ ತಿಳಿಯಾಗಿ, ಮನುಕುಲವಿನ್ನೂ ಅಳಿದುಹೋಗದೇ ಉಳಿದಿದೆ. ಇಡೀ ಮಾನವಚರಿತ್ರೆಯಲ್ಲೇ ಅಣುಬಾಂಬನ್ನು ನಾವು ಮತ್ತೊಮ್ಮೆ ಯುದ್ಧಕಾಲದಲ್ಲಿ ಬಳಸುವ ಅವಕಾಶ ಬಂದಿಲ್ಲ. ಬರುವುದೂ ಬೇಡ.

ಮನುಷ್ಯ ಸಾವನ್ನು ಒಂದೆರಡು ಬಾರಿ ವಂಚಿಸಬಹುದಷ್ಟೇ. ಆದರೆ ಅದರಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದಲ್ಲಾ ಒಂದು ದಿನ ನಮ್ಮ ಹತ್ತಿರಕ್ಕೆ ಅದು ಬಂದೇ ಬರುತ್ತದೆ. ಅದು ಬರುವ ಮುನ್ನ, ನಾಲ್ಕು ಜನಕ್ಕೆ ಒಳ್ಳೆಯದಾಗುವಂತಹ ಕೆಲಸ ಮಾಡೋಣ. ಒಬ್ಬ ಉಪವಾಸವಿದ್ದ ಮನುಷ್ಯನಿಗೆ ಊಟ ಕೊಡೋಣ. ವರ್ಷಕ್ಕೆರಡು ಬಾರಿ ರಕ್ತದಾನ ಮಾಡೋಣ. ಪರಿಚಯವೇ ಇಲ್ಲದ ಯಾವುದಾದರೂ ಮಗುವನ್ನು ಸಲಹಿ, ಅದಕ್ಕೊಂದು ಒಳ್ಳೆಯ ವಿದ್ಯಾಭ್ಯಾಸ ಸಿಗಲು ಸಹಾಯ ಮಾಡೋಣ. ಜಾತಿಗಳನ್ನು ಬದಿಗಿಟ್ಟು ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣೋಣ. ಇನ್ನೊಂದಷ್ಟು ಯಮಾಗುಚಿಗಳ ನೋವಿಗೆ ಕಾರಣವಾಗದಿರೋಣ.

0 comments on ““ಯಮನನ್ನೇ ಗೆದ್ದ ಯಾಮಾಗುಚಿ”

Leave a Reply

Your email address will not be published. Required fields are marked *