Thursday, 28 March, 2024

ಬಿಸಿ ಬಿಸಿ ಸರ್ವರುಗಳೂ, ಅವನ್ನು ತಂಪಾಗಿಸುವ ಕೂಲ್ ಕೂಲ್ ಐಡಿಯಾಗಳೂ

Share post

ಬೆಳಿಗ್ಗೆ ಇಂತಹದ್ದೊಂದು ಸುದ್ಧಿ ಓದಿದೆ. ಅದರಲ್ಲಿ ಹೇಗೆ ಇಮೇಲ್ ಹಾಗೂ ಅಟ್ಯಾಚ್ಮೆಂಟುಗಳು ಪರಿಸರಕ್ಕೆ ಹಾನಿ ಮಾಡುತ್ತಿವೆ ಅಂತಾ ಪತ್ರಿಕಾ ಲೇಖನವೊಂದಿತ್ತು. “ಪ್ರತಿಯೊಂದು ಈಮೇಲ್’ನಿಂದ 4ಗ್ರಾಂನಷ್ಟು ಕಾರ್ಬನ್ ಡೈ-ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಈಮೇಲ್ ಗಾತ್ರ ದೊಡ್ಡದಿದ್ದರೆ, ಅಥವಾ ದೊಡ್ಡ ಅಟ್ಯಾಚ್ಮೆಂಟುಗಳಿದ್ದರೆ ಇನ್ನೂ ಹೆಚ್ಚು ಇಂಗಾಲ ಪರಿಸರಕ್ಕೆ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತದೆ” ಅಂತಾ ಅದರಲ್ಲಿ ಬರೆದಿದ್ದರು.

 

ಮೇಲ್ನೋಟಕ್ಕೆ ಕಾಮಿಡಿಯಾಗಿ ಕಾಣುವ ಈ ಲೇಖನ ನಿಜಕ್ಕೂ ಸತ್ಯದ ಅಂಶಗಳಿಂದ ಕೂಡಿದೆ. ಆದರೆ ಅವರು ಅದನ್ನು ಬರೆದ ರೀತಿ ಹಾಸ್ಯಾಸ್ಪದವಾಗಿ, ತಪ್ಪುಮಾಹಿತಿಗಳಿಂದ ಕೂಡಿ ಅರ್ಧಸತ್ಯವಾಗಿದೆ ಅಷ್ಟೇ. ಅವರು “ಸಣ್ಣ ಈಮೇಲ್’ಗಳನ್ನು ಕಳುಹಿಸಿ, ಮೊಬೈಲ್ ಚಾರ್ಜ್ ಆದಮೇಲೆ ಸ್ವಿಚ್ ಆಫ್ ಮಾಡಿ, ಬಳಸದೇ ಇರೋ ಆಪ್’ಗಳನ್ನು ಫೋನಿನಿಂದ ಅಳಿಸಿ, ಸಾಮಾಜಿಕ ತಾಣದಲ್ಲಿ ಅನಗತ್ಯ ಚರ್ಚೆ ಮಾಡಬೇಡಿ” ಅಂತೆಲ್ಲಾ ಬರೆದಿರೋದು ಮಾತ್ರ ಪೂರ್ತಿ ಕಾಮಿಡಿಯೇ ಆಗಿದೆ.

ವಿಷಯಕ್ಕೆ ಬರೋಣ. ನಾವು ಬಳಸುವ ಪ್ರತಿಯೊಂದು ವೆಬ್ಸೈಟು, ಅಂತರ್ಜಾಲ ಸೇವೆಗಳು (ಈಮೇಲ್, ಶಾಪಿಂಗ್, ಚಾಟ್) ಮತ್ತು ಸಾಮಾಜಿಕ ತಾಣಗಳು ದೊಡ್ಡಮಟ್ಟದ ಡೇಟಾಸೆಂಟರುಗಳನ್ನು ಬಳಸುತ್ತವೆ. ಸಾವಿರಾರು ಸರ್ವರುಗಳ ಈ ಬೃಹತ್ ಡೇಟಾಸೆಂಟರುಗಳಲ್ಲಿ ಸರ್ವರುಗಳು ಬಳಸುವ ವಿದ್ಯುತ್ ದೊಡ್ಡಮಟ್ಟದ್ದೇ. ಈ ಸರ್ವರುಗಳು ನಮ್ಮ ನಿಮ್ಮ ಕಂಪ್ಯೂಟರುಗಳಂತೆ ಸಾವಿರಾರು ಸಣ್ಣಸಣ್ಣಕೆಲಸಗಳನ್ನು ಮಾಡುವವಲ್ಲ. ಅವು ತಮಗೆ ಕೊಟ್ಟ ಕೆಲವೇ ಕೆಲವು ಕೆಲಸಗಳನ್ನು ಮತ್ತೆ ಮತ್ತೆ ಶರವೇಗದಲ್ಲಿ ಮುಗಿಸುವಂತವು. ಈ ಶರವೇಗದ ಸರದಾರರು ತಮ್ಮ ಕ್ಷಮತೆಯ 80-90% ಎಫಿಷೆಯೆನ್ಸಿ ಲೆವೆಲ್ಲಿನಲ್ಲಿ ಕೆಲಸ ಮಾಡುವಾಗ ವಿಪರೀತ ಬಿಸಿಯಾಗುತ್ತವೆ. ಹಾಗಾಗಿ ಈ ಸರ್ವರುಗಳು ಬಳಸುವ ಶಕ್ತಿಗಿಂತಲೂ ಮೂರುಪಟ್ಟು ಹೆಚ್ಚು ವಿದ್ಯುತ್ಚಕ್ತಿ, ಈ ಡೇಟಾಸೆಂಟರುಗಳನ್ನು ತಣ್ಣಗಿಡುವುದಕ್ಕೇ ಖರ್ಚಾಗುತ್ತದೆ. ಸಾವಿರಾರು ಟನ್ ಕ್ಷಮತೆಯ ದೈತ್ಯಾಕಾರದ ಏರ್ಕಂಡೀಷನರುಗಳು ಡೇಟಾಸೆಂಟರುಗಳನ್ನು ಹದಿಮೂರದಿನಾಲ್ಕು ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಸದಾ ತಣ್ಣಗಿಡುತ್ತವೆ. ಸರ್ವರುಗಳ ಮೇಲೆ ಹೆಚ್ಚೆಚ್ಚು ಕೆಲಸ ಬಿದ್ದಷ್ಟೂ ಉದಾಹರಣೆಗೆ ಭಾರತದಲ್ಲಿ ಸರ್ಕಾರ ಬಿದ್ದ ದಿನ, ಕಿಮ್ ಕರ್ದಾಷಿಯಾನಳ ತೊಡೆಸಂಧಿಯೊಂದು ಸಾರ್ವಜನಿಕವಾಗಿ ಕಂಡದಿನ, ಫ್ಲಿಪ್ಕಾರ್ಟ್-ಅಮೆಜಾನ್’ಗಳಲ್ಲಿ ಸೂಪರ್ ಸೇಲ್ ನಡೆವ ದಿನ, ಟ್ರಂಪ್ ಮೆಕ್ಸಿಕೋ ಬಗ್ಗೆ ಏನಾದರೂ ಹೇಳಿದ ದಿನ ಜನ ಸಾಮಾಜಿಕ ತಾಣಗಳಲ್ಲಿ ಮುಗಿಬಿದ್ದಾಗ, ಈ ಸರ್ವರುಗಳು ಅಕ್ಷರಷಃ ಅಂಡಿಗೆ ಬೆಂಕಿಬಿದ್ದಂಗೆ ಕೆಲಸ ಮಾಡುತ್ತಿರುತ್ತವೆ. ಇದನ್ನೇ ಸ್ವಲ್ಪ ದೊಡ್ಡಮಟ್ಟದಲ್ಲಿ ನೋಡಿದಾಗ, ಆ ಲೇಖನದಲ್ಲಿ ಹೇಳಿದಂಗೆ ದೊಡ್ಡ ಈಮೇಲುಗಳು, ದೊಡ್ಡ ಅಟ್ಯಾಚ್ಮೆಂಟುಗಳನ್ನು ಕಳಿಸಿದಾಗ, ಇನ್ಸ್ಟಾಗ್ರಾಂಗೆ ಫೋಟೋಗಳನ್ನು ಅಪ್ಲೋಡ್ ಮಾಡಿದಾಗ, ನಾನೀ ಆರ್ಟಿಕಲ್ ಬರೆದಾಗ, ಅದನ್ನು ನೀವು ಓದಿ ಕಮೆಂಟು ಮಾಡಿದಾಗ, ಶೇರ್ ಮಾಡಿದಾಗಲೆಲ್ಲಾ ಸ್ವಲ್ಪಸ್ವಲ್ಪವೇ ಕೆಲಸ ಹೆಚ್ಚಾಗಿ ಸರ್ವರುಗಳು ಒಂದಂಶ ಬಿಸಿಯಾಗುತ್ತವೆ. ಅವನ್ನು ತಣ್ಣಗಾಗಿಸುವ ಏರ್ಕಂಡೀಷನರ್ಗಳ ಮೇಲೂ ಒಂದಂಶ ಕೆಲಸ ಹೆಚ್ಚಾಗುತ್ತದೆ. ಅವನ್ನು ನಡೆಸುವ ಜನರೇಟರುಗಳು, ಅಥವಾ ವಿದ್ಯುತ್ ಒದಗಿಸುವ ಗ್ರಿಡ್ ಅವುಗಳೆಡೆಗೆ ಹೆಚ್ಚು ಶಕ್ತಿ ಹರಿಸುತ್ತಾ ಸಣ್ಣಗೆ ಒಂದುಸಲ ಹೂಂಕರಿಸುತ್ತದೆ. ಈ ಹೂಂಕಾರದಲ್ಲಿ ಇಂಗಾಲವೊಂದಷ್ಟು ವಾತಾವರಣ ಸೇರುತ್ತದೆ. ಇದು ಆ ಲೇಖನದ ಮೂಲೋದ್ದೇಶ.

ಆದರೆ ನಿಜಕ್ಕೂ ಕಥೆ ಹೀಗೆಲ್ಲಾ ಇದೆಯೇ? 2012ರ ಒಂದು ಅಂದಾಜಿನ ಪ್ರಕಾರ 2025ಕ್ಕೆ ಜಗತ್ತಿನಲ್ಲಿ ಉತ್ಪಾದನೆಯಾದ ಐದನೇ ಒಂದು ಭಾಗ ವಿದ್ಯುತ್ಶಕ್ತಿ ಈ ರೀತಿಯ ಡೇಟಾ ಸೆಂಟರುಗಳನ್ನು ತಣ್ಣಗಿಡುವುದಕ್ಕೇ ಬೇಕಾಗುತ್ತದೆ ಅಂತಾ ಹೇಳಲಾಗಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ಈ ರಂಗದಲ್ಲಿ ಅದ್ವಿತೀಯ ಬದಲಾವಣೆಗಳಾಗಿವೆ. 2017ರಿಂದೀಚೆಗೆ ಡೇಟಾಸೆಂಟರ್ ಮ್ಯಾನೇಜ್ಮೆಂಟ್ ಕಂಪನಿಗಳು ತಮ್ಮ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇಕಡಾ 17%ಕಡಿಮೆ ಮಾಡಿವೆ! ಹೇಗೆ ಅಂತೀರಾ? ಇಲ್ಲಿ ನಡೆದಿರುವ ಕೆಲ ತಾಂತ್ರಿಕಬೆಳವಣಿಗೆಗಳನ್ನು ನೋಡೋಣ ಬನ್ನಿ:

(೧) ತಂತ್ರಜ್ಞಾನ ಜಗತ್ತಿನ ದೈತ್ಯ ಗೂಗಲ್ ಇವತ್ತಿಗೂ ಜಗತ್ತಿನ ಕೆಲ ಅತೀದೊಡ್ಡ ಡೇಟಾಸೆಂಟರುಗಳನ್ನು ಹೊಂದಿದೆ. ತನ್ನ ಹತ್ತು ಹಲವು ಸೇವೆಗಳಿಗೆ ಮಾತ್ರವಲ್ಲದೇ, ಬೇರೆ ಕಂಪನಿಗಳ ದತ್ತಾಂಶವನ್ನೂ ತನ್ನ ಡೇಟಾಸೆಂಟರುಗಳಲ್ಲಿ ಕಾಪಿಡುತ್ತದೆ. ಮೊತ್ತಮೊದಲಿಗೆ ಗೂಗಲ್ ತಂದ ಬದಲಾವಣೆಯೇನೆಂದರೆ, ಕಡಿಮೆ ಬಾಡಿಗೆಗೆ ಜಾಗ ಸಿಗುತ್ತದೆ ಎಂಬ ಕಾರಣಕ್ಕೆ ಅರಿಝೋನಾ, ನೆವಾಡಾದಂತಹ ಮರುಭೂಮಿ ರಾಜ್ಯಗಳಲ್ಲಿ ಸ್ಥಾಪಿಸಿದ್ದ ತನ್ನ ಡೇಟಾಸೆಂಟರುಗಳನ್ನು ತಂಪಾದ ಹವಾಮಾನವಿರುವ ಜಾಗಗಳಿಗೆ ಬದಲಾಯಿಸಿದ್ದು. ಇಲ್ಲಿ ನೈಸರ್ಗಿಕವಾಗಿಯೇ ಹವಾಮಾನ ತಂಪಿರುವುದರಿಂದ ನೀವು ಆ ತಂಪುಗಾಳಿಯನ್ನೇ ಬಳಸಿ aircooled ಡೇಟಾಸೆಂಟರುಗಳ ಪರಿಕಲ್ಪನೆ ರೂಪಿಸಿದ್ದು. ಯಾವಾಗ ಬರೀ aircooling ಸಾಕಾಗುವುದಿಲ್ಲ ಎಂದೆನಿಸಿತೋ ಆಗ ನೀರನ್ನು ಉಪಯೋಗಿಸಿ watercooled ಡೇಟಾಸೆಂಟರುಗಳನ್ನಾಗಿ ಪರಿವರ್ತಿಸಿದ್ದು. ಇದಾದ ಆರೇತಿಂಗಳಿಗೆ ನೀರನ್ನು ಬಳಸಿ ತಂಪುಮಾಡುವಾಗ ಅದೇನೂ ತಾಜಾನೀರಾಗಬೇಕಿಲ್ಲ ಎಂಬುದನ್ನರಿತು, ಆ ಡೇಟಾಸೆಂಟರುಗಳಿರುವ ಊರುಗಳ ಅಕ್ಕಪಕ್ಕದ ಮುನಿಸಿಪಲ್ ಕೌನ್ಸಿಲುಗಳೊಂದಿಗೆ ಮಾತುಕಥೆಯಾಡಿ, ಆ ಊರು/ನಗರಗಳ ಕೊಳಚೆನೀರನ್ನೇ ಬಳಸಿ ಡೇಟಾಸೆಂಟರುಗಳನ್ನು ತಂಪಾಗಿಟ್ಟಿದ್ದು. ಇದಾದ ಮೇಲೆ, ತನ್ನೆಲ್ಲಾ ಕಚೇರಿಗಳಿಗೆ ಬರುವ ವಿದ್ಯುತ್ತನ್ನು ಸೌರ, ವಾಯು ಮತ್ತು ಜಲಸಂಪನ್ಮೂಲಗಳನ್ನೇ ಬಳಸಿ ವಿದ್ಯುತ್ ತಯಾರಿಸುವ ಕಂಪನಿಗಳಿಂದ ಮಾತ್ರವೇ ಕೊಳ್ಳಲಾರಂಭಿಸಿದ್ದು. ಈ ಮೇಲಿನ ಉಪಾಯಗಳಿಂದಾಗಿ ಉಳಿಸಿದಷ್ಟೇ ವಿದ್ಯುತ್ ಅನ್ನು ಬಳಸಿ, ಜೊತೆಗೆ ತನ್ನೆಲ್ಲಾ ಆಫೀಸುಗಳ ಮೇಲೆ ಸೋಲಾರ್ ಪ್ಯಾನೆಲ್ ಕೂರಿಸಿ ಅದರಿಂದ ಬಂದ ವಿದ್ಯುತ್ ಬಳಸಿ, ಉಪಯೋಗಿಸಿಕೊಂಡ ಆ ಕೊಳಚೆ ನೀರನ್ನೂ ಶುದ್ಧೀಕರಿಸಿ, ನೀರನ್ನೂ ಅದರಜೊತೆಗೆ ಸ್ವಲ್ಪಮಟ್ಟಿನ ವಿದ್ಯುತ್ತನ್ನೂ ಅದೇ ನಗರಗಳಿಗೆ ಮರಳಿ ಕೊಟ್ಟು, ಗೂಗಲ್ ಕೇವಲ ಕಾರ್ಬನ್ ನ್ಯೂಟ್ರಲ್ ಆಗಿದ್ದು ಮಾತ್ರವಲ್ಲದೆ, ಜಗತ್ತಿನ ಮೊದಲ ಕಾರ್ಬನ್ ನೆಗೆಟಿವ್ ಕಂಪನಿಯೂ ಆಯ್ತು. ಈಗ ಗೂಗಲ್ ತನ್ನ ಡೇಟಾಸೆಂಟರುಗಳನ್ನು ನೋಡಿಕೊಳ್ಳಲು ಡೀಪ್-ಮೈಂಡ್ ಎಂಬ ಕೃತಕಬುದ್ಧಿಮತ್ತೆಯನ್ನೂ ಅಭಿವೃದ್ಧಿಪಡಿಸಿದೆ. ಡೀಪ್-ಮೈಂಡ್ ಇಡೀ ಡೇಟಾಸೆಂಟರಿನಲ್ಲಿ ಎಲ್ಲಾ ಕಡೆಗೂ ಅನಗತ್ಯವಾಗಿ ತಂಪುಗಾಳಿ ತಳ್ಳದೇ, ಯಾವಾಗ ಯಾವ ಸರ್ವರಿನ ಮೇಲೆ ಲೋಡ್ ಹೆಚ್ಚಾಗಿ ಅದು ಬಿಸಿಯಾಗುತ್ತದೆ ಎಂದೆನಿಸುತ್ತದೆಯೋ ಆಗ ಮಾತ್ರ ಅಲ್ಲಿಗೆ ತಂಪುಗಾಳಿಹರಿಸುವ ಮೂಲಕ, ಮತ್ತಷ್ಟು ಅನಗತ್ಯ ವಿದ್ಯುತ್ ಬಳಕೆಯನ್ನು ಕಡಿತಗೊಳಿಸುತ್ತದೆ. ಎಂಟುವರ್ಷದಲ್ಲಿ ಗೂಗಲ್ಲಿನ ಡೇಟಾಸೆಂಟರುಗಳು 350% ಬೆಳೆದಿವೆ, ಆದರೆ ಒಟ್ಟು ಬಳಸುತ್ತಿದ್ದ ವಿದ್ಯುತ್ತಿನಲ್ಲಿ 50% ಕಡಿಮೆಯಾಗಿದೆ.

(೨) ಗೂಗಲ್ಲಿನ ಉಪಾಯಗಳ ಎಳೆಯನ್ನೇ ಮುಂದಿನ ಹಂತಕ್ಕೆ ಕೊಂಡೊಯ್ದ ಐಬಿಎಮ್, ಫೇಸ್ಬುಕ್, ಅಮೆಝಾನ್, ಟ್ವಿಟರುಗಳೂ ತಂತಮ್ಮ ಡೇಟಾಸೆಂಟರುಗಳನ್ನು ಸ್ವೀಡನ್, ನಾರ್ವೆ, ಫಿನ್ಲೆಂಡ್, ಐರ್ಲೆಂಡುಗಳಿಗೆ ಸ್ಥಳಾಂತರಿಸಿದವು. ಈ ದೇಶಗಳ ವಿದ್ಯುತ್ 90ರಿಂದ 100% ಸ್ವಚ್ಚ ರೀತಿಯಲ್ಲಿ ಅಂದರೆ ಪರಿಸರಕೆ ಅತ್ಯಂತ ಕಡಿಮೆ ಅಥವಾ ಯಾವುದೆ ಹಾನಿಯಿಲ್ಲದೇ ತಯಾರಾಗುತ್ತದೆ.

(೩) ಕೆಲ ಕಂಪನಿಗಳು ಸಮುದ್ರಮಧ್ಯದಲ್ಲಿ ಕೆಲಸಮಾಡದೇ ಡೀಫಂಕ್ಟ್ ಆಗಿರುವ ಆಯಿಲ್-ರಿಗ್’ಗಳನ್ನು ಬಾಡಿಗೆಗೆ ಪಡೆದು, ಅಲ್ಲಿ ವೈರ್ಲೆಸ್ ಡೇಟಾಸೆಂಟರುಗಳನ್ನು ಸ್ಥಾಪಿಸಿ, ಸಮುದ್ರದ ನೀರನ್ನೇ ಪಂಪ್ ಮಾಡಿ ಕೂಲಿಂಗಿಗೆ ಬಳಸಲಾರಂಭಿಸಿದರು. ಆದರೆ ಈ ರಿಗ್’ಗಳು ಅಂತರರಾಷ್ಟ್ರೀಯ ಸಮುದ್ರದಲ್ಲಿರುವುದರಿಂದ, ಅವುಗಳಲ್ಲಿರುವ ಡೇಟಾ ಯಾವ ದೇಶದ ಸುಪರ್ದಿಗೂ ಸೇರದೇ, ಯಾರು ಬೇಕಾದರೂ ಎಂತಹ ಡೇಟಾವನ್ನು ಕೂಡಾ ಸಂಗ್ರಹಿಸಿಡಬಹುದಾದ ಕಾನೂನು ತೊಡಕುಂಟಾಗುವುದನ್ನು ಅರಿತ ಕೆಲಸ CIA ಈ ಯೋಜನೆಗಳಿಗೆ ತಣ್ಣೀರೆರಚಿತು.

(೩) ಮೈಕ್ರೋಸಾಫ್ಟು ತನ್ನ ಪ್ರಾಜೆಕ್ಟ್ ನಾಟ್ವಿಕ್ ಎಂಬ ಯೋಜನೆಯಡಿಯಲ್ಲಿ ಹಡಗುಗಳಲ್ಲಿ ಸರಕುಸಾಗಿಸಲು ಉಪಯೋಗಿಸುವ ಶಿಪ್ಪಿಂಗ್ ಕಂಟೈನರುಗಳನ್ನು ಒಂದಕ್ಕೊಂದು ವೆಲ್ಡ್ ಮಾಡಿ, ದೊಡ್ಡದೊಂದು ಲೋಹದ ಬಾಕ್ಸ್ ಮಾಡಿ, ಅದರಲ್ಲಿ ಸರ್ವರುಗಳನ್ನು ಒಪ್ಪವಾಗಿ ಜೋಡಿಸಿ, ಇಡೀ ಬಾಕ್ಸನ್ನೇ ಸ್ಕಾಟ್ಲೆಂಡಿನ ಹತ್ತಿರದಲ್ಲಿ, ತಣ್ಣಗಿನ ಸಮುದ್ರದಡಿಯಲ್ಲಿ ಮುಳುಗಿಸಿಟ್ಟಿದೆ. ಯಾವುದೇ ಎಸಿಯ ಅಗತ್ಯವಿಲ್ಲದೇ, ಸರ್ವರುಗಳು ಸಮರ್ಥವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಐದು ವರ್ಷ ಇದನ್ನು ಅಧ್ಯಯನ ಮಾಡಿ, ಮುಂದಿನ ವರ್ಷಗಳಲ್ಲಿ ದೊಡ್ಡ ರೂಪದಲ್ಲಿ ಪ್ರಾರಂಭಿಸುವ ಇರಾದೆ ಮೈಕ್ರೋಸಾಫ್ಟ್’ಗಿದೆ.

(೪) ನಾರ್ವೆಯ ಗ್ರೀನ್ ಮೌಂಟೆನ್ ಎಂಬ ಕಂಪನಿಯ ಹೊಸಾ DC1-Stavanger ಡೇಟಾಸೆಂಟರ್ NATOದ ಹಳೆಯದೊಂದು ಶಸ್ತ್ರಾಸ್ತ್ರ ಸಂಗ್ರಹಣಾ ಬಂಕರಿನಲ್ಲಿದೆ. ನೆಲದಡಿಯಲ್ಲಿ ಅಣುಬಾಂಬಿನ ಸ್ಪೋಟದಿಂದಲೂ ರಕ್ಷಣೆಸಿಗುವಷ್ಟು ಗಟ್ಟಿಯಾಗಿ NATO ಇದನ್ನು ಕಟ್ಟಿರುವುದರಿಂದ, ಇಲ್ಲಿರುವ ಸರ್ವರುಗಳು ಸದಾ ಕ್ಷೇಮ. ಬಂಕರಿನ ಪಕ್ಕದಲ್ಲಿಯೇ ಹರಿಯುತ್ತಿರುವ ಫ್ಯೋರ್ದ್ (Fjord – ಬೆಟ್ಟಗಳ ನಡುವಿನಲ್ಲಿ ಒಂದಾನೊಂದುಕಾಲದಲ್ಲಿ ಹಿಮನದಿಯಿದ್ದ ತಗ್ಗುಪ್ರದೇಶದಲ್ಲಿ ನುಗ್ಗಿರುವ ಸಮುದ್ರ. ನಾರ್ವೆ, ಫಿನ್ಯಾಂಡುಗಳಲ್ಲಿ ಹೆಚ್ಚಾಗಿ ಕಾಣಬರುತ್ತದೆ) ಒಂದರಿಂದ ಗುರುತ್ವಬಲವನ್ನುಪಯೋಗಿಸಿಕೊಂಡು 6-10 ಡಿಗೀ ಸೆಂಟಿಗ್ರೇಡಿನಷ್ಟು ತಣ್ಣಗಿನ ನೀರನ್ನು ಡೇಟಾಸೆಂಟರಿನ ಸುತ್ತಲೂ ಹರಿಸಿ, ಅದನ್ನು ತಂಪಾಗಿಸಿ, ಮತ್ತೆ ನೀರನ್ನು ಮರಳಿ ಫ್ಯೋರ್ದಿಗೇ ಕೊಟ್ಟು, ಪುಗಸಟ್ಟೆ ಕೆಲಸ ಮಾಡಿಸಿಕೊಂಡಿದ್ದಾರೆ. ಜೊತೆಗೇ ಇಡೀ ಡೇಟಾಸೆಂಟರನ್ನು ಗಾಳಿಯಾಡದಂತೆ ಏರ್-ಟೈಟ್ ಮಾಡಿ ಆಮ್ಲಜನಕದ ಕೊರತೆಯುಂಟಾಗುವಂತೆ ಮಾಡಿರುವುದರಿಂದ ಅಲ್ಲಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೇ ಇಲ್ಲ. ಇದರಿಂದ ಬೆಂಕಿ ನಂದಿಸುವ ಸಿಸ್ಟಮಿನ ಮೇಲಿನ ಲಕ್ಷಾಂತರ ಡಾಲರ್ ಹೂಡಿಕೆಯೂ ಉಳಿದಿದೆ.

(೫) ದೊಡ್ಡಕಂಪನಿಗಳಿಗೇನೋ ದೊಡ್ಡ ಸರ್ವರ್’ಗಳು ಬೇಕು. ಈ ಸರ್ವರುಗಳು ಒಂದೊಂದೂ ಸಹ 75-150 ವ್ಯಾಟ್’ನಷ್ಟು ವಿದ್ಯುತ್ ಕುಡಿಯುತ್ತವೆ. ಕಂಪನಿ ಸಣ್ಣದಿದ್ದರೆ, ಅದರ ಡೇಟಾಸೆಂಟರುಗಳ ಸರ್ವರುಗಳೂ ಸಣ್ಣದಾಗುವಂತಿದ್ದರೆ? ಹೆಚ್-ಪಿ/ಇಂಟೆಲ್ಲಿನ ದೊಡ್ಡ ಸರ್ವರ್ ಬದಲು ರಾಸ್ಪ್ಬೆರ್ರಿ-ಪೈ ಕೂರಿಸುವಂತಾದರೆ? ರಾಸ್ಪ್ಬೆರ್ರಿ-ಪೈ ಎಂಬುವು ಸಣ್ಣ ಸಿಂಗಲ್-ಬೋರ್ಡ್ ಕಂಪ್ಯೂಟರ್ಗಳು. ಇವು ಬರೇ 3 ವ್ಯಾಟ್ ವಿದ್ಯುತ್ತಿನಲ್ಲಿ, ನಿಮ್ಮದೊಂದು ಲ್ಯಾಪ್ಟಾಪ್ ಅಥವಾ ಪಿಸಿ ಮಾಡುವಷ್ಟೇ ಕೆಲಸ ಕೆಲಸಮಾಡಬಲ್ಲವು. ಸಣ್ಣಕಂಪನಿಗಳಿಗೆ ಸರ್ವರುಗಳನ್ನೂ ಇದೇ ರೀತಿ ಬಳಸಲು ಸಾಧ್ಯವಾದರೆ!? PC Extreme ಎಂಬ ಕಂಪನಿ ಈ ನಿಟ್ಟಿನಲ್ಲೂ ಹೆಜ್ಜೆಯಿಟ್ಟಿದೆ. ಸಣ್ಣಮಟ್ಟಿನ ಯಶಸ್ಸನ್ನೂ ಸಾಧಿಸಿದೆ.

(೬) ಉತ್ತರದ್ರುವದ ಬಳಿಯ ದೇಶವಾದ ಸ್ವೀಡನ್ನಿನ ಡಿಜಿಪ್ಲೆಕ್ಸ್ ಎಂಬ ಕಂಪನಿ ಈ ಡೇಟಾಸೆಂಟರಿನ ವ್ಯವಹಾರದ ಮಾದರಿ(business model)ಯನ್ನೇ ಉಲ್ಟಾ ಮಾಡಿ, ಸರ್ವರುಗಳು ಉತ್ಪಾದಿಸುವ ಶಾಖವನ್ನು ‘ಸಮಸ್ಯೆ’ ಎಂದು ಪರಿಗಣಿಸದೇ, ಆ ಶಾಖವನ್ನು ಅಕ್ಕಪಕ್ಕದ ಕಾಲೋನಿಯ ಮನೆಗಳನ್ನು ಬೆಚ್ಚಗಿಡಲು ಮಾರುತ್ತಿದೆ. ಗ್ರಿಡ್’ನಿಂದ ದುಬಾರಿ ವಿದ್ಯುತ್ ಬಳಸಿ ಮನೆಯನ್ನು ಬೆಚ್ಚಗಿಡುವ ಬದಲು, ಹತ್ತರಷ್ಟು ಕಮ್ಮಿಬೆಲೆಯಲ್ಲಿ ಸಿಗುತ್ತಿರುವ ಬಿಸಿಗಾಳಿಯನ್ನೇ ಬಳಸಿ, ಪರಿಸರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಡಿಜಿಪ್ಲೆಕ್ಸ್ 2020ಕ್ಕೆ ಸುಮಾರು 10,000 ಮನೆಗಳಿಗೆ ಶಾಖ ಒದಗಿಸುವ ಯೋಜನೆ ಹೊಂದಿದೆ.

ಹೀಗೆ ವಿಜ್ಞಾನ ಇವತ್ತು ನಾವಂದುಕೊಂಡದ್ದಕಿಂತಲೂ ವೇಗವಾಗಿ ನಮ್ಮ ಬದುಕನ್ನು ಸುಂದರವಾಗಿಸುತ್ತಿದೆ. ಹೌದು ನಮ್ಮಂತಹಾ ಸಾಮಾನ್ಯರು ಚಾರ್ಜಿಗೆ ಹಾಕಿದ ಫೋನು 100% ಚಾರ್ಜ್ ಆದರೂ ತೆಗೆಯುವುದಿಲ್ಲ. ಅದರಿಂದ ಸಣ್ಣದೊಂದು ಮೊತ್ತದ ವಿದ್ಯುತ್ ಪೋಲಾಗುವುದು ಹೌದು. ಅದರಿಂದ ಪರಿಸರಕ್ಕೆ ಎಲ್ಲೋ ಒಂದು ಕಡೆ ಹಾನಿಯಾಗುವುದೂ ಹೌದು. ಆದರೆ ಅದೇ ಸಮಯಕ್ಕೆ ವಿಶ್ವದಾದ್ಯಂತ ಈ ಟೆಕ್ ಕಂಪನಿಗಳು ನಮ್ಮ ಅರಿವಿಗೆ ಬಾರದಂತೆಯೇ ಎಷ್ಟೋ ಹೊಸಹೊಸ ವಿಧಾನಗಳಿಂದ ವಿದ್ಯುತ್ ಉಳಿಸುತ್ತಿದ್ದಾರೆ. ನಿಧಾನಕ್ಕೆ ಈ ವಿಧಾನಗಳೇ ನಮ್ಮ ನಿಮ್ಮ ಮನೆಗೂ ಬಂದಿಳಿಯುತ್ತೆ. ನಾನು ಮತ್ತು ನೀವೂ ಸಹ ಸಂಪೂರ್ಣ ಸ್ವಚ್ಚ ವಿದ್ಯುತ್ (ಅಂದರೆ ವಾಯು, ಸೌರ ಅಥವಾ ಜಲಮೂಲಗಳಿಂದಷ್ಟೇ ಉತ್ಪನ್ನವಾದ ಹಾಗೂ ಪರಿಸರಕ್ಕೆ ಯಾವ ಹಾನಿಯನ್ನೂ ಮಾಡದ) ಮಾತ್ರವೇ ಬಳಸುವ ನಿರ್ಧಾರ ಮಾಡಿದರೂ, ನಮ್ಮ ನಾಳೆಗಳು ಮತ್ತಷ್ಟು ಸುಂದರವಾಗಲು ಸಾಧ್ಯ.

ಆದರೆ ಇದಕ್ಕೆ ತಕ್ಕನಾಗಿ ನಮ್ಮ ಸರ್ಕಾರಗಳೂ ಈ ನಿಟ್ಟಿನಲ್ಲಿ ಯೋಚಿಸಬೇಕು. ಮೊನ್ನೆ ಒಂದು ಲೇಖನ ಓದಿದೆ. ಅಮೇರಿಕ ಒರೆಗಾನ್ ರಾಜ್ಯದ ಪೋರ್ಟ್ಲ್ಯಾಂಡ್ ನಗರ ‘ಲೂಸಿಡ್ ಎನರ್ಜಿ’ ಎಂಬ ಕಂಪನಿಯೊಂದಿಗೆ ಕೈಜೋಡಿಸಿ ತನ್ನ ನೀರುಸರಬರಾಜು ಮತ್ತು ಕೊಳಚೆ ಜಾಲದ ಪೈಪುಗಳನ್ನು ಲೂಸಿಡ್ ಎನರ್ಜಿ ಕಂಪನಿಯ ಪೈಪುಗಳೊಂದಿಗೆ ಬದಲಾಯಿಸಿತು. ಇಡೀ ನಗರದ್ದಲ್ಲ, ಪ್ರಯೋಗಾತ್ಮಕವಾಗಿ ನಗರದ ಒಂದು ಭಾಗದಲ್ಲಿ ಸಧ್ಯಕ್ಕೆ ಹೊಸಾ ಪೈಪುಗಳನ್ನು ಅಳವಡಿಸಲಾಗಿದೆ. ಈ ಪೈಪುಗಳಲ್ಲಿ ಏನು ವಿಶೇಷ ಅಂತೀರಾ? 44 ಇಂಚಿನ ಈ ಪೈಪುಗಳನ್ನು ಸ್ವಲ್ಪವೇ ಸ್ವಲ್ಪ ಅಂದರೆ ಕನಿಷ್ಟ 2 ಡಿಗ್ರೀ ಓಟದ ಇಳಿಜಾರಿನಲ್ಲಿ ಅಳವಡಿಸಿದರೂ ಸಾಕು. ಇದರೊಳಗೆ ಅಷ್ಟಷ್ಟು ಅಡಿ ದೂರದಲ್ಲಿ ಜೋಡಿಸಿರುವ ಟರ್ಬೈನುಗಳು ವಿದ್ಯುತ್ಚಕ್ತಿಯನ್ನು ಉತ್ಪಾದಿಸುತ್ತವೆ!! ಹೆಂಗೆ ಐಡಿಯಾ!? ನೀರನ್ನು ಎಲ್ಲೂ ಪಂಪ್ ಮಾಡುವ ಅಗತ್ಯವಿಲ್ಲ. ಸುಮ್ಮನೇ ಹರಿಫು ಹೋಗುವ ನೀರಿನ ಓಟವನ್ನೇ ಬಳಸಿಕೊಂಡು ಹತ್ತು ಮೀಟರ್ ಓಟದಲ್ಲಿ ಒಂದು ವ್ಯಾಟ್ ವಿದ್ಯುತ್ ಉತ್ಪಾದನೆಯಾದರೂ ಲಾಭವೇ! ಯೋಚನಾಲಹರಿಯಲ್ಲಿ ಬಂದ ಈ ಸಣ್ಣದೊಂದು ಬದಲಾವಣೆ, ಸಧ್ಯಕ್ಕೆ 150 ಮನೆಗಳಿಗೆ ವಿದ್ಯುತ್ ಒದಗಿಸುತ್ತಿದೆ. ಸಂಪೂರ್ಣ ಸ್ವಚ್ಚ ವಿದ್ಯುತ್. ಗಾಳಿಯಿಲ್ಲ ಅಂತಾ ಟರ್ಬೈನ್ ನಿಲ್ಲುವ ಹೆದರಿಕೆಯಿಲ್ಲ, ಬರಗಾಲ ಬಂತು ಅಂತಾ ಅಣೆಕಟ್ಟು ಖಾಲಿಯಾಗುವ ತಲೆಬಿಸಿಯಿಲ್ಲ. ಮನೆಗಳಿಗೆ ನೀರು ಹೋದಾಗಲೆಲ್ಲಾ, ಮನೆಗಳಿಂದ ಕೊಳಚೆನೀರು ಹೊರಬಂದಲ್ಲೆಲ್ಲಾ ವಿದ್ಯುತ್ ಉತ್ಪಾದನೆ!

ಹೀಗೆ ಸರ್ಕಾರ-ಖಾಸಗೀ ಸಂಸ್ಥೆಗಳು-ಸಾರ್ವಜನಿಕರು ಸೇರಿದರೆ ಪರಿಸರವನ್ನು ಸ್ವಚ್ಚವಾಗಿಸುವುದು ದೊಡ್ಡ ವಿಷಯವೇನಲ್ಲ. ಅದಕ್ಕೊಬ್ಬ ನಾಯಕನ ಸಂಕಲ್ಪ, ಸೃಜನಶೀಲ ಪ್ರತಿಭೆಯೊಂದರ ಪ್ರಚೋದನೆ, ಜೊತೆಗೆ ಜನರ ಕೊಡುಗೆಯಿದ್ದರೆ ಸಾಕು.

(ಈಗ ಇದಕ್ಕೆ ಕಮೆಂಟು ಮಾಡಿದರೆ, ಶೇರ್ ಮಾಡಿದರೆೆ ಅಲ್ಲೆಲ್ಲೋ ಸರ್ವರ್ ಮೇಲೆ ಹೊರೆಬೀಳುತ್ತೆ ಅಂತಾ ಅಂಜಬೇಡಿ. ನೀವು ಏನು ಮಾಡದೇ ಇದ್ದರೂ ಅಲ್ಲಿ ಅಷ್ಟೇ ವಿದ್ಯುತ್ ಬಳಕೆಯಾಗುತ್ತಿರುತ್ತದೆ. ಹಾಗಾಗಿ ಯಾವ ಅಂಜಿಕೆಯೂ ಇಲ್ಲದೇ ಕಮೆಂಟು ಮಾಡಿ, ಶೇರ್ ಮಾಡಿ 🙂 )

5 comments on “ಬಿಸಿ ಬಿಸಿ ಸರ್ವರುಗಳೂ, ಅವನ್ನು ತಂಪಾಗಿಸುವ ಕೂಲ್ ಕೂಲ್ ಐಡಿಯಾಗಳೂ

Nagaraj Vaidya

ಬರಹ ಚೆನ್ನಾಗಿದೆ.

Reply
Gireesha K S

ವ್ಹಾವ್

Reply

ಗಿರೀಶಣ್ಣ…Thank You 🙂

Reply
HARISH N

ಎಷ್ಟೆಲ್ಲ ಹೊಸ ವಿಚಾರಗಳು !

ಶುಭವಾಗಲಿ ಸರ್

Reply

ಧನ್ಯವಾದಗಳು ಹರೀಶ್ 🙂

Reply

Leave a Reply to admin Cancel reply

Your email address will not be published. Required fields are marked *