Thursday, 28 March, 2024

ಪರಮವೀರ ಚಕ್ರದ ಕಥೆ

Share post

ಯುದ್ಧಕಾಲದಲ್ಲಿ ಪ್ರದರ್ಶಿಸಿದ ಅಪ್ರತಿಮ ಸಾಹಸ, ಶೌರ್ಯ ಮತ್ತು ತ್ಯಾಗಕ್ಕಾಗಿ, ಭಾರತೀಯ ಸೈನ್ಯ ತನ್ನ ಸೈನಿಕರಿಗೆ ನೀಡುವ ದೇಶದ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ “ಪರಮ ವೀರ ಚಕ್ರ”ಕ್ಕೆ ಸ್ಪೂರ್ತಿ ಹಿಂದೂ ಮಹರ್ಷಿ ದಧೀಚಿ. 1.375 ಇಂಚಿನ ವ್ಯಾಸದ ಈ ಶೌರ್ಯಭೂಷಣದ ಮೇಲೆ ರಾಷ್ಟ್ರೀಯಲಾಂಛನದ ಸುತ್ತ ಇರುವ ಕಾಣುವ ನಾಲ್ಕು ಚಿಹ್ನೆಗಳು ಬೇರೇನೂ ಅಲ್ಲ, ದೇವರಾಜ ಇಂದ್ರನ ಆಯುಧವಾದ “ವಜ್ರಾಯುಧ”.

ವಜ್ರಾಯುಧದ ಬಗ್ಗೆ ನಿಮಗೆ ತಿಳಿದೇ ಇದೆ. ಅಸುರರನ್ನು ಸೋಲಿಸಿ ಸ್ವರ್ಗವನ್ನು ಮರಳಿಪಡೆಯಲು ದೇವತೆಗಳಿಗೆ ಋಷಿ ದಧೀಚಿ ತನ್ನ ಮೂಳೆಗಳನ್ನೇ ತ್ಯಾಗ ಮಾಡಿದ. ಅವನ ಮೂಳೆಗಳಿಂದ ತಯಾರಾದ ಆಯುಧವೇ ವಜ್ರಾಯುಧ. ದುಷ್ಟರಿಂದ ರಕ್ಷಣಾರಹಿತರನ್ನು ಕಾಪಾಡಲು, ಹಾಗೂ ಕೇಡಿನಿಂದ ಒಳಿತನ್ನು ರಕ್ಷಿಸಲೋಸುಗ ಮಾಡಿದ ತ್ಯಾಗಕ್ಕಿಂತಾ ದೊಡ್ಡದು ಯಾವುದೂ ಇಲ್ಲ ಎಂಬುದೇ ದಧೀಚಿಯ ಕಥೆಯ ಸಾರ. ಪರಮವೀರ ಚಕ್ರಕ್ಕೆ ಮತ್ತದರ ತಾತ್ಪರ್ಯಕ್ಕೆ ಇದಕ್ಕಿಂತಾ ಒಳ್ಳೆಯ ಹಿನ್ನೆಲೆ ಸಿಗಲಿಕ್ಕಿಲ್ಲ.

ಈ ಪ್ರಶಸ್ತಿಯನ್ನು ವಿನ್ಯಾಸ ಮಾಡಿದ ಸಾವಿತ್ರಿಬಾಯಿ ಖಾನೋಲ್ಕರ್’ರ ಕಥೆ ಕೇಳಿದರೆ ನೀವು ಇನ್ನೊಮ್ಮೆ ರೋಮಾಂಚಿತರಾಗುವುದರಲ್ಲಿ ಸಂಶಯವೇ ಇಲ್ಲ. ಈ ಹೆಸರು ಕೇಳಿ ನೀವು ಇದು ಒಂದು ಮರಾಠಿ ಹೆಣ್ಣಿನ ಕಥೆ ಎಂದುಕೊಂಡಿರಲಿಕ್ಕೆ ಸಾಕು. ಆದರೆ ಸಾವಿತ್ರಿಬಾಯಿಯವರ ಮೂಲ ಹೆಸರು ಈವ್ ಯ್ವೊನ್ನೆ ಮದಾಯ್ ಡಿ ಮರೋಸ್ (Eve Yvonne Maday de Maros, 20 July 1913 – 26 November 1990). ಈಕೆ ಹುಟ್ಟಿದ್ದು ಸ್ವಿಟ್ಝರ್ಲೆಂಡಿನಲ್ಲಿ. ತಂದೆ ಹಂಗೇರಿಯನ್, ತಾಯಿ ರಷ್ಯನ್. ಇಬ್ಬರೂ ಸೋಶಿಯಾಲಜಿಯ ಪ್ರೊಫೆಸರ್ರುಗಳು. 1929ರಲ್ಲಿ ನಮ್ಮ ಈವ್, ಬ್ರಿಟನ್ನಿನ ಸ್ಯಾಂಡ್ಹರ್ಸ್ಟ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿಗಾಗಿ ಸೇರಿದ್ದ ಹಾಗೂ ಸಣ್ಣದೊಂದು ಪ್ರವಾಸಕ್ಕಾಗಿ ಸ್ವಿಟ್ಝರ್ಲೆಂಡಿಗೆ ಬಂದಿದ್ದ ಭಾರತೀಯ ಮಿಲಿಟರಿಯ ಯುವ ಕೆಡೆಟ್ ವಿಕ್ರಮ್ ರಾಮ್ಜಿ ಖಾನೋಲ್ಕರ್’ನನ್ನು ಭೇಟಿಯಾದಳು. ಆಗಿನ್ನೂ ಆಕೆಗೆ ಹದಿನಾರು ವರ್ಷ, ವಿಕ್ರಮ್ ಬಹುಷಃ ಅದಾಗಲೇ ಇಪ್ಪತೈದರ ಆಸುಪಾಪಿನಲ್ಲಿದ್ದಾತ. ಮೊದಲನೋಟದಲ್ಲೇ ಆದ ಪ್ರೀತಿ, ಕೆಲವೇ ಸಮಯದಲ್ಲಿ ಮದುವೆಯೆಂಬ ಹಂತಕ್ಕೆ ಬಂದಾಗಿತ್ತು. ಈವ್’ಳ ಅಪ್ಪ ಅಮ್ಮ ಮದುವೆಗೆ ಸುತಾರಂ ಒಪ್ಪಲಿಲ್ಲ. ಹುಡುಗ ಸರಿಯಿಲ್ಲವೆಂದಲ್ಲ, ಹುಡುಗ ಅವರಿಗೆ ಒಪ್ಪಿಗೆಯಾಗಿದಾಯ್ತು. ಆದರೆ ಮಗಳನ್ನು ದೂರದೇಶವಾದ ಭಾರತಕ್ಕೆ ಕಳಿಸಲು ಮನಸ್ಸಿರಲಿಲ್ಲ. ಮಗಳು ಅಲ್ಲೇನು ಕಷ್ಟ ಅನುಭವಿಸಲ್ಲಿಕ್ಕುಂಟೋ ಎಂದು ಅವರ ಬೇಗುದಿ. ಆದರೆ ಪ್ರೀತಿಯಲ್ಲಿ ಮುಳುಗಿರುವ ಹುಡುಗಿ ಕೇಳಬೇಕಲ್ಲ. ವಿಕ್ರಮನ ತರಬೇತಿ ಮುಗಿದು ಆದ ಭಾರತಕ್ಕೆ ತಲುಪಿದ ಕೂಡಲೇ ಈಕೆ ಅಪ್ಪ-ಅಮ್ಮನಿಗೆ ಬೈಬೈ ಹೇಳಿ ಭಾರತ ತಲುಪಿಯೇ ಬಿಟ್ಟಳು. 1932ರಲ್ಲಿ ಲಕ್ನೋನಲ್ಲಿ ಇಬ್ಬರ ಮದುವೆಯೂ ಆಯಿತು. ಈವ್ ತನ್ನ ಹೆಸರನ್ನು ಸಾವಿತ್ರಿಬಾಯಿ ಎಂದು ಬದಲಾಯಿಸಿಕೊಂಡಾಯ್ತು.

ಯೂರೋಪಿಯನ್ ಹಿನ್ನೆಲೆಯಿಂದ ಬಂದವಳಾದರೂ ಸಹ, ಸಾವಿತ್ರಿಬಾಯಿ ತನ್ನನ್ನು ತಾನು ಭಾರತೀಯ ಸಂಪ್ರದಾಯಗಳು ಹಾಗೂ ಆದರ್ಶಗಳೊಂದಿಗೆ ಸುಲಭವಾಗಿ ಹಾಗೂ ಗಾಢವಾಗಿ ಗುರುತಿಸಿಕೊಂಡರು. ಆಕೆಯೇ ಹೇಳಿದ ಪ್ರಕಾರ ಯೂರೋಪಿಯನ್ನಳಿಂದ ಭಾರತೀಯಳಾಗುವ ಪ್ರಕ್ರಿಯೆ ಸಮಸ್ಯೆಯಾಗಲೇ ಇಲ್ಲ. ಸಸ್ಯಾಹಾರಿಯಾದ ಸಾವಿತ್ರಿ, ಮರಾಠಿ, ಸಂಸ್ಕೃತ ಹಾಗೂ ಹಿಂದಿಯನ್ನು ಅತೀ ಸುಲಭವಾಗಿ ಕಲಿತಳು. ಪತಿ ವಿಕ್ರಮನ ಉತ್ತೇಜನ ಆಕೆಗೆ ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ಚಿತ್ರಕಲೆಯನ್ನೂ ಕಲಿಯುವಂತೆ ಪ್ರೇರೇಪಿಸಿತು. ಆಕೆ ಸದಾ ಹೇಳುತ್ತಿದ್ದರಂತೆ “ನಾನು ಯೂರೋಪಿನಲ್ಲಿ ತಪ್ಪಾಗಿ ಹುಟ್ಟಿದ್ದೆ ಅನ್ಸುತ್ತೆ. ನಾನು ಮತ್ತು ನನ್ನ ಆತ್ಮ ಸದಾ ಭಾರತೀಯ” ಅಂತಾ. ಆಕೆಯನ್ನು (ಬಾಯ್ತಪ್ಪಿನಿಂದಲೂ) ‘ಫಾರಿನರ್’ ಎಂದು ಕರೆದವರನ್ನು ತರಾಟೆಗೆ ತೆಗೆದುಕೊಳ್ಳದೇ ಬಿಡುತ್ತಿರಲಲ್ಲ.

ಭಾರತೀಯ ಪುರಾಣಗಳಲ್ಲಿ ಆಕೆಗಿದ್ದ ಆಸಕ್ತಿ ಅಷ್ಟಿಷ್ಟಲ್ಲ. ಎಲ್ಲಾ ಪುರಾಣಗಳನ್ನೂ, ಕಥೆಗಳನ್ನೂ ಅಭ್ಯಸಿಸಿದ್ದ ಆಕೆಗೆ ಭಾರತದ ಪೌರಾಣಿಕ, ಐತಿಹಾಸಿಕ ಮಹತ್ವಗಳೂ ಹಾಗೂ ಮಹಾಪುರುಷ ಮಹಿಳೆಯರ ಬಗ್ಗೆ ಅಗಾಧವಾದ ಜ್ಞಾನವಿತ್ತು. ಈ ಜ್ಞಾನವೇ ಆಕೆಗೆ ಮುಂದೊಂದು ದಿನ ‘ಪರಮ್ ವೀರ ಚಕ್ರದ’ ಮೂಲ ಕಲ್ಪನಾಕರ್ತೃ ಮೇಜರ್ ಜನರಲ್ ಹೀರಾ ಲಾಲ ಅಟಲ್ ಅವರು, ಈ ಅತ್ಯುನ್ನತ ಶೌರ್ಯವನ್ನು ಸಂಕೇತಿಸುವ ಪ್ರಶಸ್ತಿಗೊಂದು ಪದಕವಿನ್ಯಾಸ ಮಾಡಿಕೊಡುವಂತೆ ಸಾವಿತ್ರಿಬಾಯಿಯವರ ಸಹಾಯ ಕೇಳಿದಾಗ, ಆಕೆ ಸಂತೋಷದಿಂದ ಒಪ್ಪುವಂತೆ ಮಾಡಿದ್ದು.

ಸಾವಿತ್ರಿಬಾಯಿಯವರು ಪರಮವೀರ ಚಕ್ರ ಮಾತ್ರವಲ್ಲದೇ ಭಾರತೀಯ ಸೇನೆಯ ಇನ್ನಿತರ ಯುದ್ಧ ಮತ್ತು ಕಾಲದ ಸಾಹಸ ಹಾಗೂ ತ್ಯಾಗ ಪ್ರಶಸ್ತಿಗಳಾದ ಅಶೋಕ ಚಕ್ರ, ಮಹಾ ವೀರ ಚಕ್ರ, ಕೀರ್ತಿ ಚಕ್ರ, ವೀರ ಚರ್ಕ, ಶೌರ್ಯ ಚಕ್ರಗಳನ್ನೂ ವಿನ್ಯಾಸಗೊಳಿಸಿದರು. 1965ರವರೆಗೆ ಕೊಡಲಾಗುತ್ತಿದ್ದ “ಜನರಲ್ ಸರ್ವೀಸ್ ಮೆಡಲ್-1947” ಅನ್ನು ಕೂಡಾ ಸಾವಿತ್ರಿಬಾಯಿಯವರೇ ವಿನ್ಯಾಸ ಮಾಡಿದ್ದು. ಈ ಮೆಡಲ್’ನ ಚಿಹ್ನೆಗೆ ಸಾವಿತ್ರಿಬಾಯಿಯವರು ಆಯ್ಕೆ ಮಾಡಿಕೊಂಡದ್ದು ಶಿವಾಜಿಯ ಖಡ್ಗವಾದ “ಭವಾನಿ”ಯನ್ನು! <3

ಕಾಕತಾಳಿಯವೋ, ವಿಪರ್ಯಾಸವೋ…..ದೇಶದ ಮೊತ್ತಮೊದಲ ಪರಮ ವೀರ ಚಕ್ರ ಪಡೆದ ಸೋಮನಾಥ್ ಶರ್ಮ, ಸಾವಿತ್ರಿಬಾಯಿಯವರ ಅಳಿಯನ ತಮ್ಮ.

0 comments on “ಪರಮವೀರ ಚಕ್ರದ ಕಥೆ

Leave a Reply

Your email address will not be published. Required fields are marked *