Friday, 29 March, 2024

ದಾಸರು, ಅವರ ಪದಗಳು ಹಾಗೂ ಟೇಪ್ ರೆಕಾರ್ಡರಿನ ತಾಪತ್ರಯಗಳು!

Share post

ಹಾಡುಗಳನ್ನು ಹಾಡುವುದಕ್ಕೂ, ಹಾಡುಗಳನ್ನು ಅನುಭವಿಸುವುದಕ್ಕೂ ವ್ಯತ್ಯಾಸವಿದೆ. ಈಗ ನೋಡಿ ‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ’ ಎಂಬ ದಾಸರಪದವನ್ನ ಅದೆಷ್ಟು ಜನ ಹಾಡಿರಲಿಕ್ಕಿಲ್ಲ. ಆದರೆ ಪಂಡಿತ್ ವೆಂಕಟೇಶ್ ಕುಮಾರರು ಅದನ್ನು ಹಾಡುವ ಪರಿ ಕೇಳಿದಾಗ ಗಾಯನವೆಂದರೆ ಇದಲ್ಲವೇ ಎಂದೆನಿಸುವುದು ಸತ್ಯ. ಅವರದನ್ನು ಹಾಡುತ್ತಾ ಅನುಭವಿಸುವಾಗ ಆ ಹಾಡನ್ನು ಪುರಂದರರು ವೆಂಕಟೇಶರಿಗಾಗಿಯೇ ಬರೆದರೇನೋ ಅನ್ನಿಸದವರಿಲ್ಲ.

ಹಾಗೆಯೇ ವಿದ್ಯಾಭೂಷಣರ ಮೇಲೆ ಹಾಗೂ ಪುತ್ತೂರು ನರಸಿಂಹ ನಾಯಕರ ಮೇಲೆ ನನಗೆ ಭಯಂಕರ ಕೋಪವುಂಟು. ಚಿಕ್ಕವನಿದ್ದಾಗಲಿಂದಲೂ ಮನೆಯ ಟೇಪ್ ರೆಕಾರ್ಡರಿನಲ್ಲಿ ಬೆಳಿಗ್ಗೆ ಭಕ್ತಿಗೀತೆ ಕ್ಯಾಸೆಟ್ ಹಾಕಿದಾಗ, ವಾರಕ್ಕೆರಡು ಸಾರಿಯಾದರೂ ಇವರ ಹಾಡುಗಳು ಕೇಳಿಬರ್ತಾ ಇದ್ವು. ಅವರ ಹಾಡುಗಳನ್ನ ಆಗಾಗ ಕೇಳಿ, ನನಗಂತಲ್ಲ I am sure, ನಿಮಗೂ ಸಹ ‘ದಾಸನಾಗು ವಿಶೇಷನಾಗು’ ಅನ್ನೋ ಸಾಲುಗಳು ಎಲ್ಲಾದ್ರೂ ಬರೆದದ್ದು ಕಂಡುಬಂದರೂ, ಅವರದೇ ಹಾಡಿನ ಟ್ಯೂನ್ ಮನಸಲ್ಲಿ ಓಡುತ್ತೇ ಹೊರತು, ನೀವು ಆ ಸಾಲುಗಳು ಬರೀ ಸಾಲುಗಳಾಗಿ ಓದಲು ಸಾಧ್ಯವಿಲ್ಲ. ಅಂದರೆ, ಕನಕರ ಆ ಇಡೀ ರಚನೆಯನ್ನು ಬೇರೆ ಯಾವ ರೀತಿಯಲ್ಲೂ ನಿಮಗೆ ಗ್ರಹಿಸಲು ಸಾಧ್ಯವೇ ಇಲ್ಲ. ಎಷ್ಟೇ ಪ್ರಯತ್ನದ ನಂತರ ನೀವದನ್ನು ಕೇವಲ ಒಂದು ಸಾಲಾಗಿ ಸಾದ್ಯವಾದರೂ, ಅಲ್ಲೆಲ್ಲೋ ಹಿಂದೆ ನಿಮ್ಮ ಮನಸ್ಸಿನಲ್ಲಿ ಆ ಆಲಾಪ ನುಡಿಯುತ್ತಲೇ ಇರುತ್ತೆ. ಈ ಕಾರಣಕ್ಕೇ ನನಗೆ ಇವರಿಬ್ಬರ ಮೇಲೆ ಕೋಪ. ಕನಕ, ಪುರಂದರ, ಸರ್ವಜ್ಞ ಮತ್ತು ಶರೀಫರ ರಚನೆಗಳನ್ನ ಅರ್ಥೈಸಿಕೊಳ್ಳಲಿಕ್ಕೆ ಒಂದು ಬಾರಿಯ ಕೇಳುವಿಕೆ ಯಾವ ಮೂಲೆಗೂ ಸಾಲಲ್ಲ. ಮತ್ತೆ ಮತ್ತೆ ಕೇಳಬೇಕು. ಒಂದೈದು ಸಲ ಕೇಳಿದಮೇಲೆ “ಓಹೋ!! ಇದು ಹಿಂಗೆ” ಅನ್ನಿಸುತ್ತೆ. ಇನ್ನೊಂದೆರಡು ಸಲ ಕೇಳಿದ ನಂತರ “ಓಹೋ!! ಕೇವಲ ಹಾಗೆ ಮಾತ್ರವಲ್ಲ ಇದು ಹೀಗೂ ಇದೆ” ಅಂತಾ ಇನ್ನೊಂದು ಅರ್ಥ ಹೊಳೆಯುತ್ತೆ. ಇವರುಗಳನ್ನ ಓದಿ ಅರ್ಥ ಮಾಡಿಕೊಳ್ಳೋದೇ ಇಷ್ಟು ಕಷ್ಟ. ಇನ್ನು ಇವರ ರಚನೆಗಳಿಗೆ ತಮ್ಮ ಜೇನಿನಂತ ಧ್ವನಿ ಸೇರಿಸಿ ಅದನ್ನು ಪೂರ್ತಿ ಕರ್ಣಾನಂದಕರ ಗೀತೆಯನ್ನಾಗಿ ಮಾಡಿಬಿಡ್ತಾರಲ್ಲ, ಇವರು ಸರಿಯಿಲ್ಲ ಕಣ್ರೀ. ಯಾಕೆ ಗೊತ್ತಾ? ಅವರ ಗಂಧರ್ವಗಾಯನಕ್ಕೆ ಮರುಳಾಗಿ ಹೆಚ್ಚಿನ ಜನ ಅದನ್ನೊಂದು ಭಕ್ತಿಗೀತೆ ಅಂತಾ ‘ಕೇಳಿ’ ಮುಂದೆ ಹೋಗ್ತಾರೆ, ಅಷ್ಟೇ ಹೊರತು ಅದರ ನಿಜವಾದ ತಿರುಳನ್ನು ಯಾವತ್ತಿಗೂ ಅರ್ಥೈಸಿಕೊಳ್ಳಲ್ಲ, ಅನುಭವಿಸಲ್ಲ.

ಅಡಿಗರು ಅಥವಾ ಕೆ.ಎಸ್.ನರಸಿಂಹಸ್ವಾಮಿ ಅವರ ಹಾಡುಗಳಿಗೆ ಹೀಗಾಗಲ್ಲ. ಸಿ.ಅಶ್ವತ್ಥ್ ಮಂದಸ್ವರದಲ್ಲಿ ‘ನೀ ಹಿಂಗs ನೋಡಬ್ಯಾಡ ನನ್ನ’ ಅಂದಕೂಡಲೇ ಗೊತ್ತಾಗಿಬಿಡುತ್ತೆ ಅದೊಂದು ಶೋಕ ತುಂಬಿದ ಗೀತೆ ಅಂತಾ. ಒಂದುಸಲ ಅದು ಗೊತ್ತಾದ ಮೇಲೆ, ಎರಡನೇ ಸಲ ಕೇಳುವಾಗ ಜನ ಅದರ ಸಾಹಿತ್ಯಕ್ಕೆ ಗಮನ ಕೊಡ್ತಾರೆ. ಎಂ.ಡಿ ಪಲ್ಲವಿ ತಮ್ಮ ಮೃದುಧ್ವನಿಯಲ್ಲಿ ‘ನನ್ನ ಇನಿಯನ ನೆಲೆಯ ಬಲ್ಲೆಯೇನೇ…’ಅಂದಕೂಡಲೇ ಲಕ್ಷ್ಮೀನಾರಾಯಣ ಭಟ್ರು ಈ ಹಾಡಿನಲ್ಲಿ ಹೆಣ್ಣಿನ ಅಳಲನ್ನು ವಿಶದವಾಗಿ ಹೇಳಿದ್ದಾರೆ ಅಂತಾ ಗೊತ್ತಾಗಿಬಿಡುತ್ತೆ.

ಸರ್ವಜ್ಞನ ಅಥವಾ ಶರೀಫರ ವಿಷಯ ಹಾಗಲ್ಲ. ಅಷ್ಟು ಸುಲಭವಾಗಿ ಹೃದ್ಗೋಚರಾಗುವವರಲ್ಲ ಅವರು. ದಾಸರಂತೂ ಬೇರೆಯದ್ದೇ ಹಂತ. ಅವರ ಪದಗಳವು ಕೃಷ್ಣನ ನೆನೆಯುವ ಪ್ರೇಮಗೀತೆಗಳೂ ಹೌದು, ಜೀವನಾನುಭವವೂ ಹೌದು, ತತ್ವವೂ ಹೌದು, ಪ್ರತಿಸಾಮಾನ್ಯನನ್ನು ತಲುಪಬಲ್ಲ ರಸಾಮೃತವೂ ಹೌದು. ಅದನ್ನು ಕೇಳಿ ಅರ್ಥಸಿಕೊಳ್ಳದಿದ್ದರೆ, ಅದೆಂತಾ ನಷ್ಟ ಅಲ್ವೇ!

“ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿ ಕೇರಿಗಳಲ್ಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಲೆಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ…..ಹೂ ಬೇಕೇ
ಪರಿಮಳದ ಪರಮ ಪುರುಷ ನಮ್ಮ ಕೃಷ್ಣನ ತೋಟದ ಹೂ ಬೇಕೇ”
ಅನ್ನುವ ಈ ಹಾಡಿನ ಪದಗಳನ್ನ ಯಾರಾದ್ರೂ ಗಮನಿಸಿರುತ್ತಾರಾ!? ಅದನ್ನು ಬಹಳಷ್ಟು ಜನ ಕೇಳಿರಬಹುದು. ಆದರೆ ಅದೆಷ್ಟು ಜನ ಅರ್ಥೈಸಿಕೊಂಡಿರಬಹುದು? ಗಮನಿಸದೇ ಈ ಅನರ್ಘ್ಯಪದಗಳನ್ನ ಕಳೆದುಕೊಂಡವರೆಷ್ಟು ಜನ!

ಪುರಂದರದಾಸರ ರಚನೆಯೊಂದು ಇಲ್ಲಿದೆ ನೋಡಿ. ಇದನ್ನು ಟೇಪ್ ರೆಕಾರ್ಡರಿನಲ್ಲೋ, ಯೂಟೂಬಿನಲ್ಲೋ ಇಂಪಾದ ಹಾಡಿನ ಮೂಲಕ ಕೇಳುವ ಭಾಗ್ಯ ಎಲ್ಲರಿಗೂ ಇರಬಹುದು. ಆದರೆ ಅರ್ಥೈಸಿಕೊಳ್ಳೋ ಭಾಗ್ಯ ಎಷ್ಟು ಜನಕ್ಕಿರುತ್ತೆ ಹೇಳಿ. ಇದನ್ನು ಅರ್ಥೈಸಿಕೊಳ್ಳೋಕೆ ಬಿಡದ ವಿದ್ಯಾಭೂಷಣರ ಮೇಲೆ, ನರಸಿಂಹನಾಯಕರ ಮೇಲೆ ನನಗೆ ಸಿಟ್ಟು.

ಮುಳ್ಳು ಕೊನೆ ಎಂದರೆ ಸೂಕ್ಷ್ಮಾತಿಸೂಕ್ಷ್ಮವಾದ ಜೀವ. ಈ ಜೀವಕ್ಕೆ ನಾನಾ ರೀತಿಯ ಲೋಕಾನುಭೂತಿಯನ್ನು ಕೊಡುವವು ಮೂರು ಕೆರೆಗಳು ಅಂದರೆ ಮೂರು ರೀತಿಯ ನಮ್ಮ ಶರೀರಗಳು. ಸೂಕ್ಷ್ಮ ಶರೀರ, ಲಿಂಗ ಶರೀರ, ಸ್ಥೂಲ ಶರೀರ. ಇದರಲ್ಲಿ ಸೂಕ್ಷ್ಮಶರೀರ ಮತ್ತು ಲಿಂಗ ಶರೀರಗಳಿಗೆ ಸಾಧನೆ ಅಥವಾ ಕರ್ಮಮಾಡುವ ಅವಕಾಶವಿಲ್ಲವಾದ್ದರಿಂದ ಅವೆಂದು ತುಂಬದು. ಸ್ಥೂಲಶರೀರಕ್ಕೆ ಆ ಅವಕಾಶವಿದೆ, ಆದರೆ ಮನುಷ್ಯ ಲೌಕಿಕದ ಆಸೆ-ಬಂಧನಗಳಲ್ಲಿ ಸಿಕ್ಕಿಹಾಕಿಕೊಂಡು ಪುಣ್ಯತುಂಬಿಕೊಳ್ಳಲೇ ಇಲ್ಲ.

ಆ ತುಂಬಲಿಲ್ಲದ ಕೆರೆಗೆ ಅಂದರೆ ಸ್ಥೂಲಶರೀರಕ್ಕೆ ಬಂದ ಮೂವರು ವಡ್ಡರು, ಬಾಲ್ಯ, ಯವ್ವನ ಮತ್ತು ವೃದ್ದಾಪ್ಯ. ಇವುಗಳಲ್ಲಿ ಬಾಲ್ಯ ಮತ್ತು ವೃದ್ದ್ಯಾಪ್ಯದಲ್ಲಿ ಜ್ಞಾನ ಮತ್ತು ಶಕ್ತಿಗಳ ಕೊರತೆಯಿಂದಾಗಿ ಕರ್ಮಾಚರಣೆ ಮಾಡಲಾಗುವುದಿಲ್ಲ. ಯೌವ್ವನದಲ್ಲಿ ಶಕ್ತಿ ಇದ್ದರೂ ಸಹ ವಿಷಯೋಪಭೋಗಗಳಿ೦ದಾಗಿ ಮನಸ್ಸು ಒಂದೆಡೆನಿಲ್ಲುವುದೇ ಇಲ್ಲ. ಚಂಚಲ ಮನಸ್ಸಿಗೆ ಕರ್ಮಮಾಡಲು ಕಾಲೇ ಇಲ್ಲ.

ಕಾಲಿಲ್ಲದ ಒಡ್ಡಗೆ ಕೊಟ್ಟದ್ದು ಹೆಂಡತಿ, ಮಕ್ಕಳು ಮತ್ತು ಹಣವೆಂಬ ಈಷಣಾತ್ರಯಗಳ ಎಮ್ಮೆಗಳನ್ನು. ಅದರಲ್ಲಿ ಎರಡು ಎಮ್ಮೆಗಳು ಬರಡು. ಅಂದರೆ ಹೆಂಡತಿ ಮತ್ತು ಮಕ್ಕಳು ನಾವು ಮಾಡುವ ಕರ್ಮಗಳಿಗೆ ಸಹಕಾರಿಯಲ್ಲ. ಯಾಕೆಂದರೆ ಈ ಇಬ್ಬರು ನಮ್ಮವರಲ್ಲದ ಬೇರೆಯದೇ ಜೀವಗಳು. ನಮ್ಮ ಹಣದ ಮೇಲೆ ಸಂಪೂರ್ಣ ಅಧಿಕಾರ ನಮ್ಮ ಮೇಲಿರುತ್ತೆ. ಆ ಹಣದಿಂದ ದಾನ ಧಾರ್ಮ ಮಾಡಿ ನಿರ್ಗತಿಕರಿಗೆ ಸಹಾಯ ಮಾಡುತ್ತ ಕರ್ಮಪುಣ್ಯ ಸಂಪಾದಿಸಬಹುದು. ಆದರೆ ಯಾರಿಗೂ ದಾನ ಮಾಡುವ ಮನಸ್ಸೆಂಬ ಕರುವೇ ಇಲ್ಲ.

ಕರುವಿಲ್ಲದ ಎಮ್ಮೆಗೆ ಅಂದರೆ ನಮ್ಮ ಐಶ್ವರ್ಯಕ್ಕೆ ಭೋಗ, ನಾಶ ಮತ್ತು ದಾನವೆಂಬ ಮೂರು ಹೊನ್ನುಗಳನ್ನು ಕೊಟ್ಟರಂತೆ. ಅದರಲ್ಲಿ ಭೋಗ ಮತ್ತು ನಾಶವೆಂಬ ಎರಡು ಸವಕಲು ಹೊನ್ನುಗಳು. ಮೂರನೆಯ ಹೊನ್ನಾದ ದಾನವನ್ನು ನಾವು ಮಾಡಲೇ ಇಲ್ಲ, ಹಾಗಾಗಿ ಅದು ಸಲ್ಲಲೇ ಇಲ್ಲ.

ಈ ಸಲ್ಲದ ಹೊನ್ನಿಗಾಗಿ ಸಂಚಿತಕರ್ಮ, ಪ್ರಾರಬ್ಧಕರ್ಮ ಮತ್ತು ಆಗಾಮಿಕರ್ಮ ಎಂಬ ಮೂರು ನೋಟಗಾರರು ಬಂದರು. ಸಂಚಿತಕರ್ಮವೆಂಬುದು ಪೂರ್ವಜನ್ಮದ ಪಾಪ-ಪುಣ್ಯದ ಫಲ, ಆಗಾಮಿಕರ್ಮ ಭವಿಷ್ಯದ ಮತ್ತು ಮುಂದಿನ ಪಾಪ-ಪುಣ್ಯಗಳ ಲೆಕ್ಕ. ಅದು ನಮ್ಮ ಕಣ್ಣಿಗೆ ಕಾಣದ್ದು, ಅಂದರೆ ಕುರುಡು. ಪ್ರಾರಬ್ಧಕರ್ಮ ಈ ಜನ್ಮದಲ್ಲಿ ಪೂರ್ವ-ಜನ್ಮದ ಫಲವನ್ನು ಅನುಭವಿಸುವುದು. ಅದನ್ನಾದರೂ ನೋಡಿ ಅಳೆದು ತೂಗಿ ಮನುಷ್ಯ ತನ್ನನ್ನು ಸರಿಪಡಿಸಿಕೊಳ್ಳಬಹುದು. ಆದರೆ ಭೋಗದಲ್ಲಿ ನಿರತನಾದವ ಅದನ್ನು ನೋಡಬೇಕಲ್ಲ!

ಈ ಕಣ್ಣಿಲ್ಲದ ನೋಟಗಾರನಿಗೆ ರಾಜಸ, ತಾಮಸ ಮತ್ತು ಸಾತ್ವಿಕವೆಂಬ ಮೂರು ಗುಣಗಳ ಮೂರು ಊರುಗಳನ್ನು ಕೊಡಲಾಯ್ತು. ಅದರಲ್ಲಿ ರಾಜಸ ತಾಮಸದಿಂದ ಯಾವಪ್ರಯೋಜನವೂ ಇಲ್ಲ. ಸಾತ್ವಿಕ ಗುಣ ಬೆಳೆಸಿಕೊಂಡಿದ್ದರೆ ಒಳ್ಳೆಯಕರ್ಮಗಳೆಂಬ ಒಕ್ಕಲು ಬರುತ್ತಿತ್ತೇನೋ. ಆದರೆ ಲೋಭಿಮನುಷ್ಯನ ಸತ್ವದೂರಲ್ಲಿ ಒಕ್ಕಲೇ ಇಲ್ಲ.

ಈ ಒಕ್ಕಲಿಲ್ಲದ ಸಾತ್ವಿಕ ಕರ್ಮದೂರಿಗೆ ಹರಿ, ಹರ, ಬ್ರಹ್ಮರೆಂಬ ಮೂರು ಕುಂಬಾರರು ಬಂದರಂತೆ. ಇದರಲ್ಲಿಬ್ಬರು ಹರಿಯ ಆಜ್ಞೆಯನ್ನೇ ಪಾಲಿಸುವ ಹರ ಮತ್ತು ಬ್ರಹ್ಮ ಚೊಂಚರು. ಜೀವನದಲ್ಲಿ ಪುಣ್ಯದ ಕೆಲಸವನ್ನೇ ಮಾಡದ ನಮಗೆ ಸಹಾಯ ಮಾಡಲು ಹರಿಗೆ ಕೈಗಳಾದರೂ ಎಲ್ಲಿಂದ ಬಂದೀತು?

ಈ ಹರಿಯೆಂಬ ಕೈಯಿಲ್ಲದ ಕುಂಬಾರ ಜ್ಞಾನ, ಭಕ್ತಿ, ವೈರಾಗ್ಯಗಳೆಂಬ ಮೂರು ಮಡಕೆಗಳನ್ನು ಮಾಡಿಟ್ಟಿದ್ದಾನೆ. ಆದರೆ ಜ್ಞಾನ ಮತ್ತು ವೈರಾಗ್ಯಗಳೆಂಬ ಎರಡೂ ಮಡಕೆಗಳು ತಾವಾಗೇ ಒದಗಿಬರಲಾದವು. ಅದನ್ನು ನಾವು ಹರಿಯ ಚರಣಕ್ಕೆರಗಿ ಗಳಿಸಿಕೊಳ್ಳಬೇಕು. ನಿಲ್ಲದ ಮನಸ್ಸಿನ ನಮಗೆ ಭಕ್ತಿಯೇ ಇಲ್ಲ. ಅಲ್ಲಿಗೆ ಅದೊಂದು ಬುಡವಿಲ್ಲದ ಮಡಕೆ.

ಈ ಬುಡವಿಲ್ಲದ ಗಡಿಗೆಗೆ ಹಾಕಿದರು ಸಾತ್ವಿಕ, ರಾಜಸಿಕ ಹಾಗೂ ತಾಮಸಿಕ ಭಕ್ತಿಯೆಂಬ ಮೂರು ಅಕ್ಕಿಕಾಳನ್ನು ಹಾಕಿದ್ದಾರಂತೆ. ಅದರಲ್ಲಿ ರಾಜಸಿಕ ತಾಮಸಿಕ ಭಕ್ತಿಗಳೂ ಎಷ್ಟೀದ್ದರೂ ಕಾಮ್ಯ ಪ್ರಯೋಜನಾರ್ಥಿಯಾದ್ದರಿಂದ ಪ್ರಯೋಜನವಿಲ್ಲ. ಸಾತ್ವಿಕ ಭಕ್ತಿ ನಮಗೆ ಇಲ್ಲವೇ ಇಲ್ಲ. ಬೇಯಬಹುದಾಗಿತ್ತು ಆದರೂ ನಾವು ಬೇಯಿಸಬಿಡಲಿಲ್ಲ.

ಈ ಬೇಯಲಿಲ್ಲದ ಅಕ್ಕಿಗಾಗಿ ಮನಸ್ಸು, ವಾಕ್ಕು, ಮತ್ತು ಕಾಯವೆಂಬ ತ್ರಿಕರಣಗಳ ಮೂವರು ನೆಂಟರು ಬಂದರು. ಈ ತ್ರಿಕರಣಪೂರ್ವಕ ಭಕ್ತಿಯೇ ಮೋಕ್ಷಕ್ಕೆ ದಾರಿ. ಆದರೆ ಸ್ಥೂಲದೇಹ ಮತ್ತದರ ವಾಕ್ಕು ಎರಡೂ ನಾಶವಾಗುವುದರಿ೦ದ ಅವರು ಮೋಕ್ಷರಸ ಉಣ್ಣತಕ್ಕವರಲ್ಲ. ಆದರೆ ಮೋಕ್ಷದ ಆಕಾಂಕ್ಷೆಯೇ ಇಲ್ಲದ ಮನವೆ೦ಬ ಒಬ್ಬನಿಗೆ ಹಸಿವೆಯೇ ಇಲ್ಲ.

ಈ ಹಸಿವಿಲ್ಲದ ಮನಸ್ಸೆಂಬ ನೆಂಟನಿಗೆ ನೈಸರ್ಗಿಕ, ದೈಹಿಕ, ಮತ್ತು ಆಧ್ಯಾತ್ಮಿಕವೆಂಬ ತ್ರಿವಿಧ ದುಃಖಗಳ ಮೂರು ಪೆಟ್ಟುಗಳನ್ನು ಕೊಟ್ಟರಂತೆ. ಈ ಮೂರಲ್ಲಿ ಮೊದಲೆರಡು ನಮ್ಮ ನಿಯಂತ್ರಣದಲಿಲ್ಲ. ನಿಯಂತ್ರಣದಲ್ಲಿರುವುದು ನಮ್ಮೊಳಗಿನ ಆಧ್ಯಾತ್ಮಿಕ ಟೊಣಪೆಯೊಂದೇ. ಯಾವತ್ತೂ ಆಧ್ಯಾತ್ಮದ ಯೋಚನೆಬರದ ನಮಗದು ತಾಕಲೇ ಇಲ್ಲ.

ತಾಕಲಿಲ್ಲದ ಈ ಟೊಣೆಪೆಗಳ ಅಂದರೆ ಅಧ್ಯಾತ್ಮ ಚಿಂತನೆಯನ್ನು ತಾಕಿಸಿ ಸದ್ಗತಿಯನ್ನು ಕರುಣಿಸೋ ಪುರಂದರ ವಿಠ್ಠಲರಾಯ ಎನ್ನುತ್ತಾರೆ ದಾಸರು.

ಈಗ ಹೇಳಿ, ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯನ್ನೇನಾದರೂ ನಾವಿಟ್ಟರೆ ಅದು ಪುರಂದರದಾಸರಿಗೆ ಸೇರಬೇಕಾದದ್ದಲ್ಲವೇ! ಇದನ್ನರಿತರೂ ನಮಗೆ ನೋಬೆಲ್ಲನ ಹೆಸರಿನ ಪಾರಿತೋಷಕದ ಲೋಭಬಿಡಲೊಲ್ಲದಯ್ಯಾ ಹರಿಯೇ!

ಹೀಗೆ ಮೇಲುನೋಟಕ್ಕೆ ಇದೊಂದು ಹಳ್ಳಿಯ ಕಥೆಯಂತೆ ಕಂಡುಬಂದರೂ, ಎರಡನೇ ಬಾರಿ ಓದುವಾಗ ಇದೊಂದು ಒಗಟಾಗಿಯೂ, ನಿಧಾನಕ್ಕೆ ತಾತ್ವಿಕ ಮತ್ತು ದಾರ್ಶನಿಕ ಒಳನೋಟಗಳು ತಿಳಿಯಲಾರಂಭಿಸಿದ ಮೇಲೆ ಇದ್ದಕ್ಕಿದ್ದಂತೆಯೇ ಒಮ್ಮೆಲೇ ದಿಗ್ದರ್ಶನವಾಗಿ ಜಗತ್ಸತ್ಯ ನಮ್ಮ ಮುಂದೆ ತೆರೆದು ನಿಲ್ಲಲಿಕ್ಕುಂಟು. ಟೇಪ್-ರೆಕಾರ್ಡರಿನ ಹಾಡಿನಲ್ಲಿ ಹೀಗೆ ಬಂದು ಹಾಗೆ ಹೊರಟುಹೋಗುವ ಸಾಹಿತ್ಯದ ಸೂಕ್ಷ್ಮಗಳು ತಿಳಿಯುವುದೇ ಇಲ್ಲ. ಇವನ್ನು ಕೂತು ಓದಬೇಕು, ಮತ್ತೆ ಮತ್ತೆ ಓದಬೇಕು. ಮನನ ಮಾಡಿಕೊಳ್ಳಬೇಕು. ನಿಧಾನಕ್ಕೆ ಇದನ್ನೋದಿ ಒಂದೊಂದೇ ಸಾಲಿನಮೂಲಕ ಜೀವನದ ಸಾರ್ಥಕತೆಯನ್ನು ಅರಿತುಕೊಳ್ಳುವುದಕ್ಕಾದರೂ ಭಾರತದಲ್ಲಿ ಹುಟ್ಟಬೇಕು, ಕನ್ನಡ ಕಲಿಯಬೇಕು.

2 comments on “ದಾಸರು, ಅವರ ಪದಗಳು ಹಾಗೂ ಟೇಪ್ ರೆಕಾರ್ಡರಿನ ತಾಪತ್ರಯಗಳು!

ನಾಗಲಕ್ಷ್ಮೀ

ವಾಸುದೇವ ಕೃಷ್ಣನ ಸೂಸಿ ಪೂಜಿಸುವಂತ
ದಾಸರೆಂದರೆ ಪುರಂದರ ದಾಸರಯ್ಯ

Reply
Smita

a very Special writing

Reply

Leave a Reply to ನಾಗಲಕ್ಷ್ಮೀ Cancel reply

Your email address will not be published. Required fields are marked *