Tuesday, 16 April, 2024

“ಜವಾಬ್ದಾರಿ ಎಂಬ ಗಂಟೆಯನ್ನು ಮಾಧ್ಯಮವೆಂಬ ಬೆಕ್ಕಿನ ಕತ್ತಿಗೆ ಕಟ್ಟುವವರ್ಯಾರು?”

Share post

ನಿನ್ನೆ ಪೂರ್ವಯೂರೋಪಿಗೆ ಸಂಬಂಧಿಸಿದ ಮಹತ್ವದ ಶಾಂತಿಮಾತುಕತೆಯೊಂದು ಅಮೇರಿಕದ ಮಧ್ಯಸ್ಥಿಕೆಯಲ್ಲಿ ನಡೆಯಿತು. ಎರಡು ದಶಕಗಳ ವೈರತ್ವವನ್ನು ಬದಿಗಿಟ್ಟು, ಕೊಸೋವೊ ಮತ್ತು ಸರ್ಬಿಯಾಗಳು ಕೈ-ಕೈ ಮಿಲಾಯಿಸಿ, ತಮ್ಮ ಸಂಬಂಧವನ್ನು ಧನಾತ್ಮಕವಾಗಿ ವೃದ್ಧಿಸಿಕೊಳ್ಳುವತ್ತ ಹೆಜ್ಜೆ ಹಾಕಿವೆ. ಎರಡೂ ಪ್ರಾಂತ್ಯಗಳು ತಮ್ಮ ಗಡಿಗಳನ್ನು ಪರಸ್ಪರರಿಗೆ ತೆರೆಯುವ ಬಗ್ಗೆ, ರಸ್ತೆ ರೈಲು ಮಾರ್ಗಗಳನ್ನು ಪುನರಾರಂಭಿಸುವ ಬಗ್ಗೆ, ವಾಣಿಜ್ಯ ವ್ಯವಹಾರ ಮತ್ತು ಹೂಡಿಕೆಗಳ ಬಗ್ಗೆ ಮಹತ್ವದ ಬೆಳವಣಿಗೆಗಳಾದವು. ಇನ್ನೂ ಬಹಳಷ್ಟು ವಿಚಾರಗಳು ಬಗೆಹರಿಯಲು ಬಾಕಿಯಿದ್ದರೂ, ಸಧ್ಯದ ಮಾತುಕತೆ ಯೂರೋಪಿನ ರಕ್ತಸಿಕ್ತ ಅಧ್ಯಾಯವೊಂದಕ್ಕೆ ಉಪಸಂಹಾರ ಒದಗಿಸುವ ಎಲ್ಲಾ ಸೂಚನೆಗಳಿವೆ.

 

ನಿನ್ನೆ ಈ ಮಾತುಕತೆಯಲ್ಲಿ ಮುಖ್ಯಪಾತ್ರವಹಿಸಿದ ಅಮೇರಿಕನ್ ರಾಜತಂತ್ರಜ್ಞ ರಿಚರ್ಡ್ ಗ್ರೆನೆಲ್ ಮಾಧ್ಯಮಗಳೊಂದಿಗೆ ಮಾತನಾಡಲು ವೇದಿಕೆ ಮೇಲೆ ಬಂದಾಗ ನ್ಯೂಯಾರ್ಕ್ ಪೋಸ್ಟ್’ನ ವರದಿಗಾರ ಸ್ಟೀವನ್ ನೆಲ್ಸನ್ ಕೇಳಿದ ಮೊದಲ ಪ್ರಶ್ನೆ “ಸರ್, ನೀವು ಈ ಹಿಂದೆ ಸಲಿಂಗಪ್ರೇಮವನ್ನು ನಿರಪರಾಧೀಕರಿಸುವ ಜಾಗತಿಕ ಆಂದೋಲನವೊಂದರ ಮುಂಚೂಣಿಯಲ್ಲಿದ್ದಿರಿ. ಅದರ ಬಗ್ಗೆ….”, ಪ್ರಶ್ನೆ ಮುಂದುವರೆಯುವ ಮುನ್ನವೇ ರಿಚರ್ಡ್ ಗ್ರೆನೆಲ್ ಆ ವರದಿಗಾರನನ್ನು ನಿಲ್ಲಿಸಿ “ಇವತ್ತು ಇಲ್ಲಿ ಮಹತ್ವದ ಮಾತುಕತೆಯೊಂದು ನಡೆಯುತ್ತಿದೆ. ಜಗತ್ತಿನ ಭೂಪಟದ ಮೇಲೆ ಕೊಸೊವೋ-ಸರ್ಬಿಯಾ ಎಲ್ಲಿವೆ ಅಂತಾ ಕೇಳಿದರೆ ತೋರಿಸಲೂ ನಿಮ್ಮಂತಹ ವರದಿಗಾರರಿಗೆ ಸಾಧ್ಯವಿರುವುದು ನನಗೆ ಅನುಮಾನ. ಇಷ್ಟು ದೊಡ್ಡ ಮಾತುಕತೆಯ ಬಗ್ಗೆ ಮಾತನಾಡುವುದು ಬಿಟ್ಟು, ಇನ್ಯಾವುದೋ ವಿಚಾರದ ಬಗ್ಗೆ ಮಾತನಾಡಲು ಹಾತೊರೆಯುತ್ತಿರುವ ನಿಮ್ಮಗಳ ಮನಸ್ಥಿತಿಯ ಬಗ್ಗೆ ನನಗೆ ಅನುಕಂಪವಿದೆ. ಪತ್ರಿಕೋದ್ಯಮದ ಗುಣಮಟ್ಟ ಎಷ್ಟು ಕುಸಿದಿದೆ ಎಂಬುದನ್ನು ಕಳೆದ ಕೆಲ ವರ್ಷಗಳಿಂದ ನೀವುಗಳ ಮತ್ತೆ ಮತ್ತೆ ತೋರಿಸುತ್ತಿದ್ದೀರಿ. ನಿಮಗೆ ಗೊತ್ತಿದೆಯೋ ಇಲ್ಲವೋ, ಹೊರಜಗತ್ತಿನಲ್ಲಿ ನಿಮ್ಮನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ” ಎಂದು ಕೋಪದಿಂದ ಆದರೆ ಸಭ್ಯತೆಯಿಂದಲೇ ಉತ್ತರಿಸಿದರು. ಆ ವರದಿಗಾರ ತಿರುಗಾ “ನಿಮ್ಮಿಂದ ನಾನು ಯಾವ ಪ್ರಶ್ನೆ ಕೇಳಬೇಕೆಂಬ ಪಾಠ ಕಲಿಯಲು ನಾವಿಲ್ಲಿ ಬಂದಿಲ್ಲ” ಎಂಬ ಉದ್ದಟತನದ ಉತ್ತರ ನೀಡಿದ. ರಿಚರ್ಡ್ ಕೂಡಾ “ಇವತ್ತು ಕೊಸೊವೋ-ಸರ್ಬಿಯಾ ವಿಚಾರ ಬಿಟ್ಟು ಬೇರೇನನ್ನೂ ಮಾತನಾಡಲು ನಾನಿಲ್ಲಿ ಬಂದಿಲ್ಲ” ಎಂದುಬಿಟ್ಟರು.

 

ಈ ಘಟನೆಯ ವಿಡಿಯೋ ತುಣುಕು ಇಲ್ಲಿದೆ:

 

ಈ ಘಟನೆ ನಮ್ಮ ಇಂದಿನ ಮಾದ್ಯಮಗಳು ನಡೆಯುತ್ತಿರುವ ದಾರಿಯ ಪೂರ್ತಿ ಚಿತ್ರಣಕ್ಕೆ ಹಿಡಿದ ಕನ್ನಡಿಯೂ ಹೌದು. ಇತ್ತೀಚಿನ ಪತ್ರಿಕೆಗಳ ವರದಿ ಮತ್ತು ದೃಶ್ಯಮಾಧ್ಯಮಗಳಲ್ಲಿ ಬಿತ್ತರವಾಗುವ ಸುದ್ಧಿಗಳು, ಅವುಗಳ ಗುಣಮಟ್ಟ, ಆ ಸುದ್ದಿಗಳ ಪ್ರಸ್ತುತತೆ, ಅವನ್ನು ವರದಿಮಾಡುವಾಗ ಬಳಕೆಯಾಗುವ ಪದಗಳನ್ನು ಓದಿದಾಗ ಹಾಗೂ ಕೇಳಿ(ನೋಡಿ)ದಾಗ, ಈ ರಂಗಗಳಲ್ಲಿ ಕೆಲಸಮಾಡುವ ಮಹಾನುಭಾವರು ತಮ್ಮ ವರದಿಗಳನ್ನು ತಾವೇ ಒಮ್ಮೆ ಕುಳಿತು ಓದುತ್ತಾರಾ, ತಮ್ಮ ಕಾರ್ಯಕ್ರಮಗಳನ್ನು ತಾವೇ ಎಂದಾದರೂ ವೀಕ್ಷಿಸುತ್ತಾರಾ ಎನ್ನುವ ಅನುಮಾನ ಕಾಡದಿರದು. ಕಳೆದವಾರ ಸ್ಪೋಟಗೊಂಡ ಕನ್ನಡ ಚಲನಚಿತ್ರರಂಗದ ಮಾದಕವಸ್ತು ಸೇವನೆಯ ವಿಚಾರವನ್ನೇ ಗಮನಿಸಿ. ಹೌದು, ಸಮಾಜಕ್ಕೆ ತೀರಾ ಹತ್ತಿರವಾದ ರಂಗವೊಂದು ಮಾದಕವಸ್ತು ಸೇವನೆಯ ವ್ಯಸನದ ಸುಳಿಯಲ್ಲಿ ಸಿಕ್ಕಿಕೊಂಡಿರುವುದು ಕಳವಳಕಾರೀ ವಿಚಾರವೇ. ಹಾಗೂ ಅದರ ಬಗ್ಗೆ ವರದಿಯಾಗಬೇಕಾದದ್ದೂ ಹೌದು. ಅವುಗಳ ಬಗ್ಗೆ ಚರ್ಚೆಯಾಗಬೇಕಾದದ್ದೂ ಹೌದು. ಇಂತಹ ಸಮಾಜಘಾತುಕ ಕೆಲಸಕ್ಕೆ ಬೆಂಬಲ ನೀಡುವವರನ್ನು ಪ್ರಶ್ನಿಸಬೇಕಾದದ್ದೂ ಹೌದು. ಆದರೆ ಈ ಪ್ರಕರಣಗಳಲ್ಲಿ ಪೋಲೀಸ್ ವಿಚಾರಣೆಗೆ ಒಳಪಟ್ಟ ವ್ಯಕ್ತಿಗಳು ರಾತ್ರಿಯಿಡೀ ಎಷ್ಟು ಶರ್ಟು, ಸೀರೆಗಳನ್ನು ಬದಲಾಯಿಸಿದರು? ಸಂಜೆ ಕಾಫಿ ಕುಡಿದರಾ ಇಲ್ಲವಾ? ಬೆಳಿಗ್ಗೆ ಏನು ತಿಂಡಿ ತಿಂದರು? ಮುಂತಾದ ವಿಚಾರಗಳನ್ನು ತಿಳಿದುಕೊಂಡು ನಾವು ಮಾಡಬೇಕಾದದ್ದಾರೂ ಏನು? ಈ ಪ್ರಕರಣವನ್ನು ಬೇಧಿಸುವಂತಾ ಯಾವ ಮಾಹಿತಿ ಈ ವರದಿಗಳಿಂದಾ ಸಿಗುತ್ತಿದೆ? ಇದನ್ನು ಕೇಳಿ ಅಥವಾ ಓದಿದ ನಂತರ, ನಾನು ನನ್ನ ಮಕ್ಕಳ ಜೊತೆ ಅಥವಾ ಪಕ್ಕದಲ್ಲಿ ಕುಳಿತವರ ಜೊತೆ ನಡೆಸುವ ಚರ್ಚೆಗಳಲ್ಲಿ ಎಷ್ಟು ಮೌಲ್ಯವರ್ಧನೆಯಾಗಬಲ್ಲದು? ಈ ಸುದ್ದಿ ಮಾತ್ರವಲ್ಲ, ಅದನ್ನು ಪ್ರಕಟಿಸುತ್ತಿರುವ ಸಂಸ್ಥೆ ಮತ್ತದರ ಮಾಧ್ಯಮದ ಅಗತ್ಯವೂ ನನ್ನ ಸಮಾಜಕ್ಕಿದೆಯಾ? ಎಂಬ ಅನುಮಾನ ನಮಗಿಂದು ಪದೇ ಪದೇ ಬರದಿರಲು ಸಾಧ್ಯವೇ ಇಲ್ಲ.

 

 

ನೀವೇ ಹೇಳಿ, ವೀಕ್ಷಕನಾಗಿ ನಿಮಗೆ ಬೇಕಾದ ಸುದ್ದಿಯಾವುದು? “ಈ ಜಗತ್ತಿನಲ್ಲಿ ಮತ್ತು ಸಮಾಜದಲ್ಲಿ ಏನು ನಡೆಯುತ್ತಿದೆ, ಅದರ ಹಿಂದಿನ ಕಾರಣವೇನು, ಮುಂದೆ ವಿಚಾರಣೆ ನಡೆಯಬಹುದಾದ ಸಾಧ್ಯತೆಯೇನು” ಇವಿಷ್ಟೇ ಅಲ್ಲವೇ? ಕೊನೆಗೆ ಆ ವಿಚಾರ ಅಂತ್ಯ ಕಂಡಾಗ ಮತ್ತೊಮ್ಮೆ ಏನಾಯಿತು, ಯಾಕಾಯಿತು, ಹೇಗಾಯಿತು, ಕೊನೆಗೇನಾಯಿತು ಎಂಬ ಮರುಪ್ರಸಾರ. ಅದಾದಮೇಲೆ ಬೇಕಾದರೆ ಆ ಘಟನೆಯಿಂದಾದ ಸಾಮಾಜಿಕ ಪರಿಣಾಮಗಳ ವಿಶ್ಲೇಷಣೆ ಬರಲಿ. ಅದುಬಿಟ್ಟು “ನೋಡಿ ನೋಡಿ ನನ್ನನ್ನೇ ನೋಡಿ ನೋಡುತ್ತಲೇ ಇರಿ” ಎಂದರಚುವ ನೇರ ದಿಟ್ಟ ಅತ್ಯಂತ ವಿಶ್ವಾಸಾರ್ಹ ಯಾರಪ್ಪನ ಆಸ್ತಿಯೂ ಅಲ್ಲದ ವಾಹಿನಿಗಳಿಂದ, ನೆಟ್ಟಗೆ ಕೂರಲೂ ಆಗದವರ ಸಾರಥ್ಯದಲ್ಲಿ ನಡೆಯುವ ಬರೀ ಸುಳ್ಳುಸುದ್ದಿಹರಡುವ ಜನಮನದ ಸಾರಥಿಗಳ ಪತ್ರಿಕೆಗಳಿಂದ ಸಮಾಜಕ್ಕೆ ಯಾವ ಉಪಯೋಗವಿದೆ?

 

ಭೌತಶಾಸ್ತ್ರದ ವಿಭಾಗವಾದ ಕ್ವಾಂಟಮ್ ಮೆಕಾನಿಕ್ಸಿನಲ್ಲಿ Observer effect ಅಂದರೆ ವೀಕ್ಷಕ ಪರಿಣಾಮ ಎಂಬುದೊಂದು ವಿದ್ಯಮಾನವಿದೆ. ಅದರ ಪ್ರಕಾರ ಒಂದು ಕ್ರಿಯೆಯನ್ನು ವೀಕ್ಷಣೆಮಾಡುವುದೂ ಕೂಡಾ, ಆ ಮೂಲಕ್ರಿಯೆಯನ್ನು ಬದಲಾಯಿಸಬಲ್ಲುದು. ನೀವು ಒಳ್ಳೆಯ ಕಾರು ಚಾಲಕನಿರಬಹುದು, ಆದರೆ ನಿಮ್ಮ ಹಿಂದೆ ಆರ್.ಟಿ.ಓ ಅಧಿಕಾರಿ ಕೂತಾಗ ನಿಮ್ಮ ಕಾರು ಓಡಿಸುವ ಕ್ರಿಯೆಯೇ ಬದಲಾಗುತ್ತದೆ. ನೀವು ಉಷ್ಣತೆಯನ್ನು ಅಳೆಯಲು ಗಾಜಿನ ಕೊಳವೆಯೊಳಗೆ ಬಂಧಿಯಾಗಿರುವ ಪಾದರಸದ ಮಾಪಕವನ್ನು ಬಳಸುತ್ತೀರಿ. ಆದರೆ ಉಷ್ಣತೆ ಎಷ್ಟಿದೆ ಎಂದು ತೋರಿಸಲು ಆ ಕೊಳವೆಯೊಳಗೆ ಏರಿಳಿಯುವ ಪಾದರಸ ಕೂಡಾ, ಒಂದಷ್ಟು ಉಷ್ಣತೆಯನ್ನು ಸುತ್ತಲಿನ ವಾತಾವರಣದಿಂದ ಹೀರಿಕೊಳ್ಳಬೇಕು ಅಥವಾ ವಾತಾವರಣಕ್ಕೆ ಬಿಟ್ಟುಕೊಡಬೇಕು. ಯಾವ ದೇಹದ ಉಷ್ಣತೆಯನ್ನು ದಾಖಲಿಸಲು ಹೊರಟಿದೆಯೋ, ಅದೇ ದೇಹದ ತಾಪಮಾನವನ್ನು ಆ ಉಷ್ಣತಾಮಾಪಕವೇ ಬದಲಾಯಿಸುತ್ತದೆ. ಹೀಗೆ ಮಾಪಕಕ್ರಿಯೆಯೇ ಮೂಲಕ್ರಿಯೆಯನ್ನು ಬದಲಾಯಿಸುವ ಈ ಅಬ್ಸರ್ವರ್ ಎಫೆಕ್ಟ್ ನಮ್ಮ ಮಾಧ್ಯಮ ಕ್ಷೇತ್ರಕ್ಕೂ ಅನ್ವಯವಾಗಬೇಕಾಗಿದೆ. ದಿನಾ ಸಂಜೆ ಈ ಮಾಧ್ಯಮ ಮಿತ್ರರನ್ನು ಕೂರಿಸಿ, ಅವರುಗಳು ಅವತ್ತು ‘ಬ್ರೇಕಿಂಗ್ ನ್ಯೂಸ್’ ಎಂಬ ಅವಸರದಲ್ಲಿ ವೀಕ್ಷಕರೆಡೆಗೆ ಎಸೆದ ಸುದ್ಧಿಗಳ ಮಹತ್ವದ ತುಣುಕುಗಳನ್ನು ಕನಿಷ್ಟ ಎರಡು ಗಂಟೆ ತೋರಿಸಿ, ನಾವುಗಳು ಅನುಭವಿಸುತ್ತಿರುವ ಕಷ್ಟವನ್ನು ಅವರೊಂದಿಗೆ ಹಂಚಿಕೊಳ್ಳಬೇಕು. ಆಗಲಾದರೂ ಈ ‘ಅಬ್ಸರ್ವರ್ ಎಫೆಕ್ಟ್’ನಿಂದಾಗಿ ನಮ್ಮ ಪತ್ರಕರ್ತರಲ್ಲಿ ಬದಲಾವಣೆ ಬರಬಹುದೇನೋ. ಇಲ್ಲವಾದಲ್ಲಿ ಇನ್ನೂ ಕೆಲವುವರ್ಷ ವೀಕ್ಷಕರು “ಜನ ಕೇಳ್ತಿದ್ದಾರೆ ಸಾರ್, ಅದಕ್ಕೇ ಕೊಡ್ತಿದ್ದೀವಿ” ಅನ್ನೋ ಸವಕಲು ಸುಳ್ಳನ್ನೇ ಸಹಿಸಿಕೊಳ್ಳಬೇಕಾಗುತ್ತದೆ.

 

ಹಾಗಂತ ಇದು ಕೇವಲ ಕನ್ನಡ ಸುದ್ದಿಮಾಧ್ಯಮಗಳ ಕಥೆ ಮಾತ್ರವಲ್ಲ. ಜೂನ್ ಹದಿನಾಲ್ಕರಂದು ಒಂದು ಬಾರಿ ಸತ್ತ ಸುಶಾಂತನನ್ನ, ಕಳೆದ ಮೂರು ತಿಂಗಳುಗಳಿಂದ ಪ್ರತಿದಿನವೂ ಕೊಲ್ಲುತ್ತಿರುವ ಹಿಂದಿ ಮತ್ತು ಇಂಗ್ಲೀಷ್ ಮಾಧ್ಯಮಗಳದ್ದೂ ಇದೇ ಕಥೆ. ದಿನಕ್ಕೊಂದು ತಿರುವು, ರೂಪ ಪಡೆಯುತ್ತಿರುವ ಸುಶಾಂತ ಸಿಂಗನ ಪ್ರಕರಣ ಆತ್ಮಹತ್ಯೆಯಿಂದ, ಕೊಲೆಯೆಡೆಗೆ ತಿರುಗಿ, ಪ್ರೇಮಕಥೆಯಾಗಿ, ಸ್ವಜನಪಕ್ಷಪಾತದ ಪರಿಣಾಮವೆಂದು ಕರೆಸಿಕೊಂಡು, ಭೂಗತಲೋಕ ಮತ್ತು ರಾಜಕೀಯ ಪಿತೂರಿಯ ಪರಿವರ್ತನೆ ಪಡೆದು, ಇದೀಗ ಮಾದಕಪದಾರ್ಥ ಜಾಲವೊಂದರ ಕೆಲಸವೆಂಬ ಹಂತಕ್ಕೆ ಬಂದು ನಿಂತಿದೆ. ಇದರನಂತರ ಕೆಲ ಬಂಧನಗಳು ನಡೆದವು. ಇದರ ಜಾಡುಹಿಡಿದು ಹೊರಟ ಸುದ್ದಿವಾಹಿನಿಯೊಂದರ ಪ್ರತಿನಿಧಿ, ಬಂಧಿತನ ಮನೆಯ ಬಾಗಿಲು ಬಡಿಯುತ್ತಾ “ಇಲ್ಲಿ ನೋಡಿ, ಈ ಮಾದಕಪದಾರ್ಥ ಪೂರೈಕೆದಾರರ ಮನೆಯವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಹೆದರಿಕೊಂಡು ಬಾಗಿಲನ್ನೇ ತೆಗೆಯುತ್ತಿಲ್ಲ” ಎನ್ನುತ್ತಾ ಮತ್ತೆ ಮತ್ತೆ ಬಾಗಿಲುಬಡಿಯುತ್ತಿದ್ದ. ಬಂಧಿತನ ಸಂಬಂಧಿಕರು ಈ ಪ್ರಕರಣಕ್ಕೆ ಕುರಿತಂತೆ ಸುದ್ದಿವಾಹಿನಿಗಳಿಗಾಗಲೀ, ಪತ್ರಿಕೆಗಳಿಗಾಗಲೀ ಯಾವುದೇ ಮಾಹಿತಿಯನ್ನಾಗಲೀ, ಸಮರ್ಥನೆಯನ್ನಾಗಲೀ ಕೊಡುವ ಅಗತ್ಯವೇ ಇಲ್ಲ ಎಂಬ ಕನಿಷ್ಟಜ್ಞಾನವೂ ಇಲ್ಲದ ಈ ಪತ್ರಕರ್ತ, ತಾನೇನೋ ಸುಪ್ರೀಂಕೋರ್ಟಿನ ಜಡ್ಜ್ ಎಂಬ ದಾಟಿಯಲ್ಲಿ “ಇದರ ಬಗ್ಗೆ ಏನನ್ನಾದರೂ ಹೇಳಲೇಬೇಕು ನೀವು. ಇಲ್ಲವಾದಲ್ಲಿ ನಾವಿಲ್ಲಿಂದ ಹೋಗುವುದಿಲ್ಲ” ಎಂದು ಅರಚುತ್ತಿದ್ದ. ಇದ್ದಕ್ಕಿದ್ದಂತೆ ಮನೆಯ ಬಾಗಿಲು ತೆರೆಯಿತು. ಕೇವಲ ಚಡ್ಡಿಧರಿಸಿದ್ದ, ಕಟ್ಟುಮಸ್ತಾದ ವ್ಯಕ್ತಿಯೊಬ್ಬ ಕೋಪದಿಂದ ಹೊರಬಂದು “ನಿನಗೇನು ಹೇಳಬೇಕು ನಾನು? ನೀನ್ಯಾರು ಅಂತ ನಿನ್ನ ಹತ್ತಿರ ಮಾತನಾಡಬೇಕು? ನಿಮಗೆ ನಾನೆಷ್ಟು ಮನವಿ ಮಾಡ್ಕೊಳ್ತಾ ಇದ್ದೀನಿ ಈ ರೀತಿ ತೊಂದರೆಕೊಡಬೇಡಿ ಅಂತಾ” ಎನ್ನುತ್ತಲೇ ಕೋಪವೇರಿ, ಕ್ಷಣಮಾತ್ರಗಳಲ್ಲಿ ಆತನ ಕೋಪ ಅವಾಚ್ಯ ಶಬ್ಧಗಳಮಟ್ಟಕ್ಕೇ ಹೋಗಿ, ವರದಿಗಾರನಿಗೆ ಕಪಾಳಕ್ಕೊಂದು ಕೊಟ್ಟೇಬಿಟ್ಟ. ಇದ್ದಕ್ಕಿಂತೆಯೇ ವರದಿಗಾರನ ವರಸೆಬದಲಾಗಿ “ನೋಡಿ ವೀಕ್ಷಕರೆ, ಹೇಗೆ ಈ ಮನೆಯವರು ಸತ್ಯವನ್ನು ವಿವರಿಸಲು ಬಂದ ವರದಿಗಾರರ ಮೇಲೆಯೇ ಹಲ್ಲೆ ಮಾಡುತ್ತಿದ್ದಾರೆ. ಇದರಿಂದಲೇ ಗೊತ್ತಾಗ್ತಾ ಇದೆ, ಈ ಡ್ರಗ್ಸ್ ದಂಧೆಗೂ ಇವರಿಗೂ ಏನೋ ನಿಗೂಡ ಸಂಬಂಧವಿದೆ” ಎನ್ನುತ್ತಾ ವರದಿಮಾಡಲಾರಂಭಿಸಿದ! ಆ ವಾಹಿನಿಕೂಡಾ ಸತ್ಯಹೇಳಲು ಹೋದ ತನ್ನ ವರದಿಗಾರನ ಮೇಲೆ ಹಲ್ಲೆನಡೆಸಿ ಸತ್ಯವನ್ನು ಮುಚ್ಚಿಡಲಾಗುತ್ತಿದೆ, ಈ ಪರಿಸ್ಥಿತಿಯಲ್ಲಿ ತಾನೇ ಬಲಿಪಶು ಎಂಬಂತೆ ಬಿಂಬಿಸಿ ಸುದ್ದಿಪ್ರಸಾರವನ್ನು ಮುಂದುವರಿಸಿತು. ನಿಜಕ್ಕೂ ಇಲ್ಲಿ ಬಲಿಪಶುವಾದದ್ದು ಯಾರು? ನಾವು ಯಾರದ್ದೋ ಖಾಸಗೀತನಕ್ಕೆ ಧಕ್ಕೆ ತಂದು, ಅವರಿಗೆ ಮುಜುರವುಂಟುಮಾಡಿ, ಕೋಪ ತರಿಸಿ, ನಂತರ ಅವರು ನಮಗೆ ಬೇಕಾದಂತೆ ಪ್ರತಿಕ್ರಿಯಿಸಿದಿದ್ದಾಗ ಅದರ ತಪ್ಪನ್ನೂ ಎದುರಿದ್ದವರ ಮೇಲೇ ಹೊರಿಸುವ ಈ ಕಲೆಯನ್ನು ಮೈಗೂಡಿಸಿಕೊಂಡವರೇ ಮಾಧ್ಯಮವೃತ್ತಿಯಲ್ಲುಳಿಯಲು ಸಾಧ್ಯವೇನೋ ಎಂಬ ಅನುಮಾನ ಕಾಡಲಾರಂಭಿಸಿದೆ.

 

ಯೋಧನಶವದ ಮುಂದೆ ಕೂತು ಅಳುತ್ತಿರುವ ಯೋಧಪತ್ನಿಯ ಮುಖಕ್ಕೆ ಮೈಕ್ ಹಿಡಿದು “ಈಗ ನಿಮಗೆ ಹೇಗನ್ನಿಸುತ್ತಿದೆ? ಜನರಿಗೆ ಏನು ಹೇಳಬಯಸುತ್ತೀರಿ” ಅಂತಾ ಅಸೂಕ್ಷ್ಮತೆಯ ಪರಮಾವಧಿಯ ಪ್ರಶ್ನೆ ಕೇಳುವ, ಯಾರಾದರೂ ಇವರನ್ನೇ ಪ್ರಶ್ನಿಸಿದಾಗ “ಏನ್ರೀ! ನಿಮ್ಮನ್ನ ನೀವು ಏನಂದ್ಕೊಂಡಿದ್ದೀರಿ” ಅಂತಾ ಉದ್ಧಟತನದ ಮಾತನಾಡುವ ವರಸೆಗಳೇ ಸಾಮಾನ್ಯ ವರ್ತನೆಯಾಗಿ ಹೋಗಿದೆ. ‘ಅ’ಕಾರ ಮತ್ತು ‘ಹ’ಕಾರಗಳಲ್ಲಿ ವ್ಯತ್ಯಾಸವಿಲ್ಲದಿರುವುದು, ಕಾಗುಣಿತ ಮತ್ತು ವಿಭಕ್ತಿ ಪ್ರತ್ಯಯಗಳೆಡೆಗೆ ಅಸಡ್ಡೆ ತೋರುವುದು, ಜನರ ಗಮನಸೆಳೆಯಲೆಂದೇ ತಲೆಬರಹಕೊಡಲು ಹೋಗಿ ತೀರಾ ಎಡಬಿಡಂಗಿ ಶೀರ್ಷಿಕೆಗಳನ್ನು ಕೊಡುವುದೇ ಅಸ್ತಿತ್ವವಾಗಿ ಹೋಗಿದೆ. ಇನ್ನು ಈ ಎಲ್ಲಾ ಸುದ್ದಿಮನೆಗಳ ಪತ್ರಕರ್ತರೂ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕತಾಣಗಳನ್ನೇ ಉಪಯೋಗಿಸುತ್ತಾ, ಅವುಗಳಿಂದಲೇ ಸುದ್ದಿಪಡೆಯುತ್ತಾ, ತಮ್ಮ ಮೇಲೆ ಟೀಕೆ ಬಂದಾಗ ಈ ತಾಣಗಳನ್ನು ದೂಷಿಸುತ್ತಾ, ಹಾಗೆ ಟೀಕಿಸಿದವರನ್ನು ಮಾತನಾಡದಂತೆ ನಿರ್ಬಂಧಿಸುತ್ತಾ ತಮ್ಮನ್ನು ತಾವೇ ಪ್ರತ್ಯುತ್ಪನ್ನಪ್ರತಿಭರೆಂದುಕೊಂಡು ವ್ಯವಹರಿಸುವವರೇ. ಸತತ ಇಪ್ಪತ್ತನಾಲ್ಕು ತಾಸು ಸುದ್ದಿ ನೀಡುವಷ್ಟು ಸರಕಾಗಲೀ, ಸಾಮರ್ಥ್ಯವಾಗಲೀ ಇಲ್ಲದಿದ್ದರೂ ಸಹ ಜನ ನಮ್ಮನ್ನು ಗಮನಿಸಬೇಕು ಎನ್ನುವ ವ್ಯಾವಹಾರಿಕ ಭಾವನೆಯಿಂದಲೇ ಚಾನಲ್ಲುಗಳು ಪತ್ರಿಕೆಗಳು ನಡೆಯುತ್ತಿವೆ. ಹೀಗಿದ್ದಾಗ ಜನರ ಗಮನ ಸೆಳೆಯಬೇಕೆಂದರೆ ಒಂದೋ ಗಂಧವಾಗಿರಬೇಕು ಇಲ್ಲವೇ ದುರ್ನಾತ ಬೀರುವ ಕೊಚ್ಚೆಯಾಗಿರಬೇಕು! ಬರಬರುತ್ತಾ ಎರಡನೆಯದೇ ಮಾಧ್ಯಮಗಳ ಆದ್ಯತೆಯಾಗುತ್ತಿದೆಯೇ!

 

ಎಂತವರೂ ಕೂಡಾ ಪ್ರಧಾನಿಯಾಗಬಹುದು ಅಂತಾ ನಮ್ಮ ಕರ್ನಾಟಕದ ನಾಯಕರೊಬ್ಬರು ನಿರೂಪಿಸಿದ್ದರು. ಎಂತವರೂ ಕೂಡಾ ವರದಿಗಾರರಾಗಬಹುದು ಅಂತಾ ಇತ್ತೀಚಿನ ಮಾಧ್ಯಮಗಳು ನಿರೂಪಿಸುತ್ತಿವೆ. ಇದು ನಿಜವಾಗಿಯೂ ಪತ್ರಿಕೋದ್ಯಮದ ಇಂದಿನ ಬಿಕ್ಕಟ್ಟು. ಇದನ್ನು ಸರಿಪಡಿಸಿಕೊಳ್ಳದಿದ್ದರೆ, ಒಂದುಕಾಲದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದನ್ನು ಜನರೇ ಶಸ್ತ್ರಚಿಕಿತ್ಸೆ ನಡೆಸಿ ಅಪೆಂಡಿಕ್ಸಿನಂತೆ ಎಸೆಯುವ ದಿನಗಳೂ ಬರಲಿವೆ.

0 comments on ““ಜವಾಬ್ದಾರಿ ಎಂಬ ಗಂಟೆಯನ್ನು ಮಾಧ್ಯಮವೆಂಬ ಬೆಕ್ಕಿನ ಕತ್ತಿಗೆ ಕಟ್ಟುವವರ್ಯಾರು?”

Leave a Reply

Your email address will not be published. Required fields are marked *