Thursday, 28 March, 2024

“ಕರೋನಾ ಆರ್ಥಿಕತೆಯ ABC ಅಲ್ಲಲ್ಲ….L, U, V, W ಮತ್ತು K”

Share post

“ಉಪಮಾ ಕಾಳಿದಾಸಸ್ಯ ಭಾರವೇರರ್ಥಗೌರವಂ | ದಂಡಿನಃ ಪದಲಾಲಿತ್ಯಂ ಮಾಘೇ ಸಂತಿ ತ್ರಯೋಗುಣಾಃ” ಎಂಬ ಮಾತು ಭಾರತದ ಸಾಹಿತ್ಯ ಮತ್ತು ಕಾವ್ಯ ಪ್ರತಿಭೆಗಳಲ್ಲಿ ಅತೀ ಮುಖ್ಯವಾದ ನಾಲ್ಕು ಜನರನ್ನು ಅಂದರೆ ಕಾಳಿದಾಸ, ಭಾರವಿ, ದಂಡಿ ಮತ್ತು ಮಾಘ ಇವರನ್ನು ನಮಗೆ ಪರಿಚಯಿಸುತ್ತದೆ. ಸಾಹಿತ್ಯದ ವಿಚಾರಕ್ಕೆ ಬಂದರೆ ಅಕ್ಷರಗಳೊಂದಿಗೆ ಆಟವಾಡುವುದರಲ್ಲಿ ನಮ್ಮ ಕವಿಗಳು, ವಾಗ್ಗೇಯಕಾರರನ್ನು ಮೀರಿಸುವವರು ಜಗತ್ತಿನ ಬೇರೆಕಡೆಯಲ್ಲಿ ಸಿಗುವುದು ಸ್ವಲ್ಪ ಕಷ್ಟವೇ. ಬಂಧಗಳು, ಅಮೋಘ ಉಪಮೆಗಳು, ಪದಲಾಲಿತ್ಯಗಳು, ವಿಶೇಷಾರ್ಥಗಳ ವಿಚಾರದಲ್ಲಿ ಭಾರತದ ಪ್ರತಿಭೆಗಳು ಅದ್ವಿತೀಯ. ಜಗತ್ತಿನ ಮುಕ್ಕಾಲು ಭಾಗದ ಜನರಿನ್ನೂ ತಮಗೊಂದು ವರ್ಣಮಾಲೆ ಕಟ್ಟಿಕೊಳ್ಳುತ್ತಿದ್ದಾಗಲೇ ಒಂದೇ ವರ್ಣವನ್ನುಉಪಯೋಗಿಸಿ ಇಡೀ ಶ್ಲೋಕವನ್ನು ಬರೆಯುವುದು, ಬೇರೆಬೇರೆ ಚಿತ್ರಬಂಧಗಳಲ್ಲಿ ಕವನ ಬರೆಯುವುದು, ಯೋಚಿಸಲೂ ಅಸಾಧ್ಯವಾದ ನೋಟಗಳನ್ನು ಒದಗಿಸುವುದು ಮುಂತಾದವನ್ನೆಲ್ಲಾ ನಮ್ಮಲ್ಲಿ ಮಾಡಿ ಮುಗಿಸಿದ್ದರು ಎಂಬುದು ಭಾರತೀಯ ಪರಂಪರೆಯ ಹೆಮ್ಮೆಯ ವಿಚಾರಗಳಲ್ಲೊಂದು.

ಇಲ್ಲ ಇಲ್ಲ ಈ ವಾರ ನಾವು ದಂಡಿ, ಬಾಣ, ಮಾಘರ ಏಕಾಕ್ಷರ ಸರ್ಗ ಅಥವಾ ಕಾವ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ನಮ್ಮನ್ನು ಕಾಡುತ್ತಿರುವ ಒಂದು ಜ್ವಲಂತ ಸಮಸ್ಯೆ ಹಾಗೂ ಅದರ ಏಕಾಕ್ಷರ ಪರಿಹಾರದ ಬಗ್ಗೆ ಈ ಲೇಖನ.

ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ನಡೆಯುವ ಅಧ್ಯಕ್ಷ ಪದವಿಯ ಆಕಾಂಕ್ಷಿಗಳ ಸಾರ್ವಜನಿಕ ಚರ್ಚೆ, ಜಾಗತಿಕವಾಗಿ ಉದಾಹರಣಯೋಗ್ಯ ಮತ್ತು ನಕಲುಯೋಗ್ಯ ಪ್ರಕ್ರಿಯೆಗಳಲ್ಲೊಂದು. ಯಾಕೆಂದರೆ ನಮ್ಮಲ್ಲಿ ನಡೆಯುವ ರ್ಯಾಲಿಯ ಭಾಷಣಗಳು ಕೇವಲ ಜನ ಸೇರಿಸುವ ಕೆಲಸಗಳಷ್ಟೇ. ಪ್ರದೇಶವೊಂದರ ಸಮಸ್ಯೆಗಳು, ಅಲ್ಲಿನ ಮತದಾರರ ಜಾತಿ, ಮತಗಳನ್ನು ನೋಡಿಕೊಂಡು ಈ ರ್ಯಾಲಿಗಳು ನಡೆಯುವ ಜಾಗಗಳನ್ನು ಗುರುತಿಸಲಾಗುತ್ತದೆ. ಅಲ್ಲಿಯ ಜನರು ಕೇಳಲಿಚ್ಚಿಸುವ ವಿಷಯಗಳನ್ನು ಮಾತ್ರ ಅಲ್ಲಿ ಮಾತನಾಡಲಾಗುತ್ತದೆ. ಸಂವಾದವಲ್ಲದ ಈ ಏಕಮುಖೀ ಓತಪ್ರೋತವಾಕ್ಪ್ರವಾಹಗಳಿಂದ ಯಾವ ಉಪಯೋಗಗಳೂ ಇಲ್ಲ. ಇದರ ಬದಲಿಗೆ ಪ್ರತಿಯೊಂದು ಪಕ್ಷವೂ ತನ್ನ ಕೊನೆಯ ಅಭ್ಯರ್ಥಿಯನ್ನು ಉಳಿದ ಅಭ್ಯರ್ಥಿಗಳೊಂದಿಗೆ ಕೆಲ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವ ಕೆಲಸವಾಗಬೇಕು. ಆಗ ನಾವು ದೇಶ ನಡೆಸುವ ಕೆಲಸ ಯಾರ ಕೈಗೆ ಕೊಡುತ್ತಿದ್ದೇವೆ ಎಂಬುದೊಂದು ಚಿತ್ರಣ, ಮತದಾನಕ್ಕೂ ಮೊದಲೇ ಸ್ಪಷ್ಟ ಸಿಗುತ್ತದೆ.

ಕಳೆದವಾರ ಅಮೇರಿಕಾದಲ್ಲಿ ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ನಡುವಿನ ಚರ್ಚಾಸ್ಪರ್ಧೆ ನಡೆಯಿತು. ಬಹಳಷ್ಟು ವಿಚಾರಗಳ ಬಗ್ಗೆ ನಡೆದ ಈ ಘನಘೋರ ಚರ್ಚೆಯಲ್ಲಿ ಸದ್ಯದ ಸಮಸ್ಯೆಯಾದ ಕರೋನಾ ವೈರಸ್ ಹಾಗೂ ಅದು ತಂದಿಟ್ಟ ಆರ್ಥಿಕಕುಸಿತದ ಬಗ್ಗೆಯೂ ಮಾತುಕಥೆ ನಡೆಯಿತು. ಚರ್ಚೆಯ ಮಾಡರೇಟರ್ ಕ್ರಿಸ್ ವ್ಯಾಲೇಸ್ ಅಮೇರಿಕಾದ ಆರ್ಥಿಕತೆ ಕುಸಿದದ್ದೂ ಹೌದು, ಅದೀಗ ಚೇತರಿಸಿಕೊಳ್ಳುತ್ತಿರುವುದೂ ಹೌದು. ಅದರಲ್ಲಿ ಎರಡು ಮಾತಿಲ್ಲ. ಆದರೆ ಈ ಚೇತರಿಕೆ ಯಾವರೀತಿಯದ್ದಾಗಿರುತ್ತದೆ? ಎಂಬ ಪ್ರಶ್ನೆಯ ಉತ್ತರ ವರ್ಣಮಾಲೆಯ ಆಟವಾಗಿ ಮಾರ್ಪಟ್ಟಿತು. ಟ್ರಂಪ್ ಅಮೇರಿಕಾ ವಿ ಚೇತರಿಕೆ ಕಾಣಲಿದೆ ಎಂದರೆ ಬಿಡೆನ್ ನನಗೆ ಕೆ ಕಾಣುತ್ತಿದೆ ಎಂದರು. ಏನೀ ವಿ ಮತ್ತು ಕೆ ಚೇತರಿಕೆ? ನಮ್ಮ ಭಾರತದಲ್ಲಿ ಯಾವ ಆಕಾರದ ಚೇತರಿಕೆಯಿದೆ? ತಿಳಿಯೋಣ ಬನ್ನಿ.

ಪ್ರತಿಯೊಂದು ಆರ್ಥಿಕ ಹಿಂಜರಿಕೆ ಅಥವಾ ಕುಸಿಯುವಿಕೆ ಬೇರೆಬೇರೆಯದ್ದೇ ರೀತಿಯಾಗಿ ಚೇತರಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಯಾವುದೇ ಕುಸಿತ ಕಾಲಾನುಕ್ರಮವಾಗಿ ಚೇತರಿಸಿಕೊಂಡು U ಆಕಾರದಲ್ಲಿ ಮೂಡಿಬರುತ್ತದೆ. 1930ರಲ್ಲಿ ಕಂಡುಬಂದ ಅಮೇರಿಕಾದ ಆರ್ಥಿಕ ಮಹಾಕುಸಿತ ಸುಮಾರು 40 ತಿಂಗಳುಗಳ ಕಾಲ ಅತೀನಿಧಾನಕ್ಕೆ ಮೇಲೇರಿ ಸುಸ್ಥಿತಿಗೆ ತಲುಪಿತು. ಇದನ್ನು L ಆಕಾರದ ಚೇತರಿಕೆಯೆಂದು ಕರೆಯಲಾಗಿತ್ತು. ಡಾಟ್ ಕಾಂ ಕುಸಿತ, ಹಾಗೂ ತೀರಾ ಇತ್ತೀಚಿನ ಸಬ್-ಪ್ರೈಂ ಕುಸಿತಗಳು ಇಂಗ್ಲೀಷ್ ವರ್ಣಮಾಲೆಯ W ಆಕಾರದಲ್ಲಿ ಚೇತರಿಸಿಕೊಂಡವು. ಅಂದರೆ ಮೊದಮೊದಲಿಗೆ ಸಣ್ಣ ಚೇತರಿಕೆ ಕಂಡು ಮತ್ತೆ ತಕ್ಷಣವೇ ಇನ್ನೊಂದು ಸಣ್ಣಮಟ್ಟಿನ ತೀವ್ರ ಕುಸಿತಕಂಡು ಆನಂತರ ದಾರಿಕಂಡುಕೊಂಡು ಮೇಲೆದ್ದವು. ಈಗಿನ ಪರಿಸ್ಥಿತಿ ಇನ್ನೊಂದು ಹೊಸ ರೀತಿಯದ್ದೇ ಚೇತರಿಕೆಗೆ ದಾರಿಯಾಗುತ್ತಿದೆ. ಕೇವಲ ಆರ್ಥಿಕಕುಸಿತ ಮಾತ್ರವಲ್ಲ. ಕಂಪನಿಗಳ ಬೆಳವಣಿಗೆಯೂ ಕೆಲವೊಮ್ಮೆ L, V, W ಆಕಾರ ಪಡೆಯುವುದುಂಟು. ಕೆಳಗಿನ ಚಿತ್ರ ಈ ನಿಟ್ಟಿನಲ್ಲಿ ನಿಮಗೆ ಕೆಲ ಉದಾಹರಣೆಗಳನ್ನು ಕೊಡುತ್ತದೆ.

ಆರ್ಥಿಕತೆಯೊಂದು ತೀರಾ ಕಡಿಮೆ ಸಮಯದಲ್ಲಿ ತೀವ್ರವಾಗಿ ಸಂಕುಚಿತಗೊಂಡಾಗ ಹಾಗೂ ಈ ಕುಸಿತಕ್ಕೆ ತಕ್ಷಣವೇ ಪರಿಹಾರ ಸಿಕ್ಕಿದಾಗ ನಾಟಕೀಯವಾಗಿ ಪುಟಿದೆದ್ದು ನಿಲ್ಲುತ್ತದೆ. ಇದೇ ಟ್ರಂಪ್ ಹೇಳಿದ V ಆಕಾರದ ಚೇತರಿಕೆ. ಕೊರೋನಾ ಪ್ರಾರಂಭವಾದಾಗ ಅನೇಕ ಆರ್ಥಿಕ ತಜ್ಞರು ಇದೇ ನಡೆಯುತ್ತದೆಂದು ನಂಬಿದ್ದರು. ಏಕೆಂದರೆ ಸಾಂಕ್ರಾಮಿಕ ರೋಗವೊಂದರಿಂದ ಪ್ರಚೋದಿಸಲ್ಪಟ್ಟ ಆರ್ಥಿಕ ಕುಸಿತ ನಮಗೇನೂ ಹೊಸದಲ್ಲ. ಪರಮಾಣು ಯುದ್ಧದಂತೇನೂ ಕೊರೋನಾ ಇಡೀ ಜಗತ್ತನ್ನೇ ಸ್ತಬ್ಧವಾಗಿಸದೇ ಕೆಲವ್ಯವಹಾರಗಳನ್ನು ಹೆಚ್ಚಾಗಿಯೂ ಕೆಲವ್ಯವಹಾರಗಳನ್ನು ಕಡಿಮೆಯಾಗಿಯೂ ಬಾಧಿಸಿತು. ಫ್ಯಾಕ್ಟರಿಗಳು, ಅಂಗಡಿಗಳು, ಚಿತ್ರಮಂದಿರಗಳ ವ್ಯವಹಾರಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ, ವಿಮಾನೋದ್ಯಮ ಮತ್ತು ಪ್ರವಾಸೋದ್ಯಮಗಳನ್ನು ತಣ್ಣಗಾಗಿಸಿ, ಹೋಟೆಲ್ ಉದ್ಯಮಗಳನ್ನು ನಾಶಮಾಡಿತು. ವೈದ್ಯಕೀಯ ಮತ್ತು ಔಷಧೋದ್ಯಮಗಳು ಮೊದಲಿಗಿಂತಲೂ ಹೆಚ್ಚಿನ ಮಟ್ಟದ ವ್ಯವಹಾರಗಳನ್ನು ಮಾಡಿದವು. ಹಲವಾರು ಕುಸಿತಗಳನ್ನು ಕಂಡಿರುವ ಐಟಿ ಉದ್ಯಮ ದೃತಿಗೆಡದೇ ಮನೆಯಿಂದಲೇ ಕೆಲಸಮಾಡಲಾರಂಭಿಸಿ ಆದಷ್ಟೂ ಕೊರೋನಾದ ಹೊಡೆತವನ್ನು ಕಡಿಮೆಯಾಗಿಸಿಕೊಂಡಿತು. ಈ ರೀತಿಯಾದ ಅಸಮಾನ ಪರಿಣಾಮವನ್ನು ಕಂಡ ಆರ್ಥಿಕತಜ್ಞರು “ಇದು ತೀರಾ ತಾತ್ಕಾಲಿಕ ಕುಸಿತ. ಕೆಲವೇ ತಿಂಗಳುಗಳಲ್ಲಿ ಲಸಿಕೆ ಬರಲಿದೆ ಹಾಗೂ ಆರ್ಥಿಕತೆ ಕೆಳತಲುಪಿದ ವೇಗದಲ್ಲಿಯೇ ಮರುಪುಟಿಯಲಿದೆ” ಎಂಬ V ಆಕಾರದ ಚೇತರಿಕೆಯನ್ನು ಊಹಿಸಿದ್ದರು. ಸ್ವಲ್ಪಮಟ್ಟಿಗೆ ಅದು ಆಗಿದ್ದೂ ಹೌದು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಮೇರಿಕಾದಲ್ಲಿ 22.1 ದಶಲಕ್ಷ ಜನ ಉದ್ಯೋಗಗಳನ್ನು ಕಳೆದುಕೊಂಡ ನಂತರ, ಮೇ ಮತ್ತು ಜೂನ್ ತಿಂಗಳಲ್ಲಿ ಸುಮಾರು 7.5 ದಶಲಕ್ಷ ಜನ ಉದ್ಯೋಗಗಳನ್ನು ಮರುಪಡೆದರು. ಏಕೆಂದರೆ ರೆಸ್ಟೋರೆಂಟ್‌ಗಳು ಮತ್ತು ಇತರ ವ್ಯವಹಾರಗಳು ಹಂತಹಂತವಾಗಿ ಪುನಃ ತೆರೆಯಲು ಪ್ರಾರಂಭಿಸಿದವು.

ಆದರೆ ಅದರ ನಂತರ ನಿಧಾನವಾದ ಹೊಸಾ ಉದ್ಯೋಗಗಳ ಬೆಳವಣಿಗೆ ಜುಲೈ ಮತ್ತು ಆಗಸ್ಟ್‌ನಲ್ಲಿ 3.1 ದಶಲಕ್ಷಕ್ಕೆ ಇಳಿದಿದೆ. ಸೆಪ್ಟೆಂಬರ್‌ ವರದಿಯ ಪ್ರಕಾರ ಆ ಕಳೆದ ತಿಂಗಳು ಕೇವಲ 850,000 ಹೊಸಾ ಉದ್ಯೋಗಗಳು ಸೃಷ್ಟಿಯಾಗಿವೆ. ಯಾವುದೇ ಅಡೆತಡೆಯಿಲ್ಲದೇ ಶೃಂಗೇರಿಯಿಂದ ಶ್ವೇತಭವನದವರೆಗೂ ಹರಡುತ್ತಿರುವ ವೈರಸ್, ನಿಧಾನಗೊಂಡಿರುವ ಲಸಿಕೆ ಸಂಶೋಧನೆಗಳಿಂದಾಗಿ ಗ್ರಾಹಕರು ಸಾರ್ವಜನಿಕ ಸಭೆ ಸ್ಥಳಗಳಿಂದ ದೂರ ಸರಿಯುತ್ತಿದ್ದಾರೆ. ಧೈರ್ಯಮಾಡಿ ಮೊದಮೊದಲಿಗೆ ಬಾಗಿಲುತೆರೆದ ಹೋಟೆಲ್ ಮತ್ತು ರೆಸ್ಟೋರೆಂಟುಗಳಲ್ಲಿ ಹಲವಾರು ಮಾಲೀಕರು ಖರ್ಚುವೆಚ್ಚ ನಿರ್ವಹಿಸಲಾಗದೇ ಎರಡೇ ತಿಂಗಳಿಗೆ ಬಾಗಿಲುಮುಚ್ಚುವ ಪರಿಸ್ಥಿತಿಯಲ್ಲಿದ್ದಾರೆ. ಉಳಿದವರು ಸೀಮಿತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಲ್ಲಿಯ ಉದ್ಯೋಗಸೃಷ್ಟಿ ಅಷ್ಟೇನೂ ಉತ್ತೇಜಕವಾಗಿಲ್ಲ. ಪ್ರವಾಸೋದ್ಯಮ ಪ್ರಯಾಸೋದ್ಯಮವಾಗಿದೆ. ಒಂದುಹಂತದವರೆಗೆ ಹರಿದುಬಂದ ಸರ್ಕಾರೀ ಸಹಾಯಗಳು ನಿಧಾನವಾಗಿ ನಿಲ್ಲುತ್ತಿವೆ. ಸರ್ಕಾರವೇ ತನ್ನ ಖರ್ಚುಗಳನ್ನು ಕಡಿತಗೊಳಿಸುತ್ತಿದೆ. ಆರ್ಥಿಕ ತಜ್ಞರು ನಿಧಾನಕ್ಕೆ ಈ ಕುಸಿತ ತಾತ್ಕಾಲಿಕವಾದ V ಆಕಾರದ್ದಲ್ಲ, ಬದಲಿಗೆ ಹಲವಾರು ದೂರಗಾಮಿ ಪರಿಣಾಮಗಳನ್ನೂ ತರುತ್ತಿದೆ ಹಾಗೂ ಕೆಲ ಉದ್ಯಮಕ್ಷೇತ್ರಗಳನ್ನು ಶಾಶ್ವತವಾಗಿ ಮುಚ್ಚಿಸುತ್ತಿದೆ ಎಂಬ ಅಭಿಪ್ರಾಯಕ್ಕೆ ತಲುಪಿದ್ದಾರೆ.

ನವಯುಗದ ಆರ್ಥಿಕತೆಯ ವಿಶೇಷತೆಯೆಂದರೆ ಒಂದುಪ್ರಮಾಣದ ನಷ್ಟವನ್ನು ಸರಿದೂಗಿಸಲಿಕ್ಕೆ ಒಂದೂವರೆಪ್ರಮಾಣದ ವ್ಯಾವಹಾರಿಕ ಲಾಭವಾಗಬೇಕು. ಏಕೆಂದರೆ ದೊಡ್ಡದೊಂದು ಕುಸಿತದ ನಂತರ ಇಡೀ ಆರ್ಥಿಕತೆಯೇ ಚಿಕ್ಕದಾಗಿ ಹೋಗುತ್ತದೆ. ಹೀಗಿದ್ದಾಗ ಕಳೆದಷ್ಟೇ ಮರಳಿ ಪಡೆದರೆ, ನೀವು ಚಿಕ್ಕಆರ್ಥಿಕತೆಯಾಗಷ್ಟೇ ಮುಂದುವರಿಯಲು ಸಾಧ್ಯ. ಅಮೇರಿಕದ ಲೆಕ್ಕದಲ್ಲಿ ನೋಡಿದರೆ 2019ರ ಕೊನೆಯಲ್ಲಿ ಅವರ ಜಿಡಿಪಿ ಬೆಳವಣಿಗೆ ಇದ್ದದ್ದು 2.1%. 2020ರ ಎರಡನೇ ತ್ರೈಮಾಸಿಕದಲ್ಲಿ ದಾಖಲೆಯ 31.4% ವಾರ್ಷಿಕ ಕುಸಿದ ನಂತರ, ಮೂರನೇ ತ್ರೈಮಾಸಿಕದಲ್ಲಿ ಸುಮಾರು 32%ನಷ್ಟು ಬೆಳೆದಿದೆಯೆಂದು ಅಂದಾಜಿಸಲಾಗಿದೆ. ಆದರೆ ಮರಳಿ ವಾರ್ಷಿಕ 2.1% ಮಟ್ಟಕ್ಕೆ ಮರಳಲು, ಮುಂದಿನೆರಡು ತ್ರೈಮಾಸಿಕಗಳ ಉತ್ಪಾದನೆಯಲ್ಲಿ 54% ಏರಿಕೆಯ ಅಗತ್ಯವಿರುತ್ತದೆ. ಹಾಗಾಗಿ ಅಮೇರಿಕದ ಆರ್ಥಿಕತೆ ಮರಳಿ ಮೊದಲಿನಂತಾಗಲು 2021ರ ಡಿಸೆಂಬರ್ ತನಕ ಕಾಲಾವಕಾಶ ಬೇಕು. ಇಷ್ಟೊಂದು ಸಮಯ ತೆಗೆದುಕೊಳ್ಳುವ ಚೇತರಿಕೆ ಖಂಡಿತಾ V-ಆಕಾರದ್ದಾಗಿರುವುದಿಲ್ಲ, ಬದಲಿಗೆ U-ಆಕಾರದ್ದಾಗಿರುತ್ತದೆ ಎಂಬುದು ಸಧ್ಯದ ಅಭಿಪ್ರಾಯವಾಗಿದ್ದರೂ, 2007-09ರ ಕುಸಿತದ 30 ತಿಂಗಳುಗಳ ಚೇತರಿಕೆಗೆ ಹೋಲಿಸಿದರೆ ಸದ್ಯದ ಸಾಪೇಕ್ಷಚೇತರಿಕೆ V-ಆಕಾರದಲ್ಲೇ ಇದೆ ಎಂದು ಮೋರ್ಗನ್-ಸ್ಟಾನ್ಲಿ ಸಂಸ್ಥೆ ಹೇಳುತ್ತದೆ.

ಆದರೆ ಜೋ ಬಿಡೆನ್ ಬೇರೆಯದ್ದೇ ಒಂದು ಅಭಿಪ್ರಾಯವನ್ನು ಬೆಳಕಿಗೆ ತಂದರು. ಅದೇನೆಂದರೆ ಈ ಆರ್ಥಿಕ ಕುಸಿತದ ನಂತರ, ಆರ್ಥಿಕತೆಯ ವಿವಿಧ ಭಾಗಗಳು ವಿಭಿನ್ನ ದರಗಳಲ್ಲಿ, ವಿಭಿನ್ನ ಸಮಯಾವಕಾಶದಲ್ಲಿ ಹಾಗೂ ವಿಭಿನ್ನ ಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತವೆ. ವ್ಯವಹಾರದಲ್ಲಿ ಮಾತ್ರವಲ್ಲದೇ, ನಾಗರೀಕರ ದೃಷ್ಟಿಯಿಂದಲೂ ನೋಡಿದಾಗ ಬೇರೆಬೇರೆ ಆರ್ಥಿಕ ಸ್ಥಿತಿಯಲ್ಲಿರುವ ನಾಗರೀಕರು ಬೇರೆಬೇರೆ ರೀತಿಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಇದರಿಂದಾಗಿ ಸ್ಥೂಲವಾಗಿ K-ಆಕಾರದ ಚೇತರಿಕೆ ಸಂಭವಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬಹುಷಃ ಮಾನವ ಇತಿಹಾಸದಲ್ಲೇ ಮೊದಲಬಾರಿಗೆ ಬೇರೆಬೇರೆ ಕ್ಷೇತ್ರಗಳು, ಕೈಗಾರಿಕೆಗಳು ಅಥವಾ ಜನರ ಗುಂಪುಗಳು ಕುಸಿತವೊಂದರ ನಂತರ ಸಮನಾದ, ಏಕರೂಪದ ಚೇತರಿಕೆಯನ್ನು ಕಾಣುವುದಿಲ್ಲ ಎಂಬ ಚಿಂತೆಯನ್ನು ತೋರಿದರು.

ಬಿಡೆನ್ ಪ್ರಕಾರ ಈ ಬಾರಿಯ ಆರ್ಥಿಕಚೇತರಿಕೆಗೂ ಮುನ್ನ ಆರ್ಥಿಕತೆಯ ರಚನೆಯಲ್ಲೇ ಮೂಲಭೂತ ಬದಲಾವಣೆಗಳು ಬರಲಿವೆ ಹಾಗೂ ವಿಶಾಲವಾದ ಸಾಮಾಜಿಕ ವಿಭಜನೆಯುಂಟಾಗಿ ಎಲ್ಲಾ ಆರ್ಥಿಕ ಫಲಿತಾಂಶಗಳು ಮತ್ತು ಸಂಬಂಧಗಳು “ಆರ್ಥಿಕಕುಸಿತದ ಮೊದಲು ಮತ್ತು ನಂತರ” ಎಂದು ಬದಲಾಗಲಿವೆ. ಆರ್ಥಿಕತೆಯ ವಿವಿಧ ಭಾಗಗಳ ಹಾದಿಯನ್ನು ಒಟ್ಟಿಗೆ ಪಟ್ಟಿಮಾಡಿದಾಗ ಅವುಗಳ ಚೇತರಿಕೆಯ ರೀತಿ ವಿಭಿನ್ನವಾಗಬಹುದಾದ್ದರಿಂದ, ಇದು ರೋಮನ್ ಅಕ್ಷರ Kಯ ಎರಡು ತೋಳುಗಳನ್ನು ಹೋಲುತ್ತದೆ. ಆದರೆ L, V, W ಆಕಾರಗಳ ವಿವರಣೆಗಳಲ್ಲಿ ಜಿಡಿಪಿಯ ಚೇತರಿಕೆ ಕೇಂದ್ರದಲ್ಲಿದ್ದರೆ, K-ಆಕಾರದ ವಿವರಣೆಯಲ್ಲಿ ಹೇಗೆ ಆರ್ಥಿಕವ್ಯತ್ಯಯಗಳು ವಿಭಿನ್ನಕ್ಷೇತ್ರಗಳಲ್ಲಿ ವಿಭಿನ್ನವಾಗಿ ವರ್ತಿಸಲಿವೆ, ಹಾಗೂ ಸಮಾಜದ ವಿವಿಧ ವಿಭಾಗಗಳಲ್ಲಿನ ಆದಾಯಮಟ್ಟ ಹೇಗೆ ಸ್ಥೂಲವಾಗಿ ವಿಂಗಡಣೆಯಾಗಲಿದೆ ಎಂಬುದರ ಸುತ್ತ ಕೇಂದ್ರೀಕೃತವಾಗಿದೆ.

ಇದಕ್ಕೆ ಕಾರಣ ಕೊರೋನಾಕಾಲದ ಕುಸಿತದಲ್ಲಿ ಕೆಲಸಕಳೆದುಕೊಂಡ ಜನ ಹೆಚ್ಚಿನಕಾಲ ಕಾಯದೇ, ಕೈಗೆ ಸಿಕ್ಕಕೆಲಸಗಳನ್ನು ಆದಷ್ಟೂ ಬೇಗ ಹಿಡಿದುಕೊಳ್ಳುತ್ತಿರುವ ವರ್ತನೆ. ಹೆಚ್ಚಿನ ಕೆಲಸಗಳಲ್ಲಿ ಸಂಬಳದ ಮಟ್ಟ ಕಡಿಮೆಯಾಗಿದೆ. ಈ ಏಪ್ರಿಲ್ ನಂತರ ಬೇಗ ಬಾಗಿಲುತೆಗೆದ ಸಂಸ್ಥೆಗಳಂತೂ ಈ ಪರಿಸ್ಥಿತಿಯನ್ನು ತಮಗೆಬೇಕಾದ ಹಾಗೆ ಬಳಸಿಕೊಂಡು ಸಂಬಳಗಳಲ್ಲಿ ಬಹಳಷ್ಟು ಕಡಿತವನ್ನು ತಂದಿದ್ದಾರೆ. ಇದರಿಂದಾಗಿ ಜನರ ವರಮಾನದಲ್ಲೇ ಮೂಲಭೂತ ಬದಲಾವಣೆಗಳು ಕಂಡುಬರುತ್ತಿದ್ದು, ಹೀಗೇ ಸಂಸ್ಥೆಗಳು ಈ ಸಂಕಷ್ಟಕಾಲವನ್ನು ಸಂಬಳದ ಖರ್ಚುಕಡಿಮೆ ಮಾಡಿಕೊಳ್ಳಲು ಬಳಸಿಕೊಂಡರೆ, ಕೆಲಸಮಾಡುವ ವರ್ಗದಲ್ಲಿ ಉಳ್ಳವರು ಮತ್ತು ಹೆಚ್ಚು ಉಳ್ಳವರು ಎಂಬ ಎರಡೇ ಸ್ಥೂಲ ವರ್ಗಗಳು ಉಳಿದುಹೋಗುವ ಅಪಾಯವೂ ಇದೆಯೆಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಮುಂದಿನ ದೊಡ್ಡಅಪಾಯವೆಂದರೆ ಜನರೀಗ ನಿರುದ್ಯೋಗಿಗಳಾಗಿದ್ದರೂ, ತಮ್ಮ ಉಳಿತಾಯದ ಹಣವನ್ನು ಖರ್ಚು ಮಾಡುತ್ತಿರುವುದರಿಂದ, ಲಸಿಕೆ ಬರುವುದು ತಡವಾದರೆ ಮುಂದಿನದಿನಗಳಲ್ಲಿ ಗ್ರಾಹಕರ ಖರ್ಚುಗಳೇ ನಿಂತುಹೋಗಿ ಆರ್ಥಿಕತೆ ತೀವ್ರವಾಗಿ ಕುಸಿಯಲಿದೆ.

ಭಾರತದಲ್ಲೂ ಸಹ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ಆದರೆ ಭಾರತದ ಪರಿಸ್ಥಿತಿಯಲ್ಲಿ ಇನ್ನೂ V ಅಥವಾ U ಮಾದರಿ ಸೃಷ್ಟಿಯಾಗಿಲ್ಲ. ವಾಹನಗಳ ಮಾರಾಟ, ಫ್ಯಾಕ್ಟರಿಗಳ ಉತ್ಪಾದನೆ, ಸಂಗ್ರಹವಾದ ಜಿಎಸ್ಟಿ ಮೊತ್ತ ನೋಡಿದಾಗ V ಆಕಾರಕಂಡುಬಂದರೆ, ಹೊಸಕೆಲಸಗಳ ಸೃಷ್ಟಿ L ಆಕಾರದಲ್ಲಿದೆ. ಸಗಟು ಮತ್ತು ಚಿಲ್ಲರೆ ಉದ್ಯಮಗಳು U ಆಕಾರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೆ, ಆತಿಥ್ಯಕೇಂದ್ರಿತ ಉದ್ದಿಮೆಗಳು ತೀವ್ರವಾಗಿ ಕುಸಿತಕಂಡಿವೆ ಹಾಗೂ ಕಾಣುತ್ತಲೇ ಇವೆ. ಸಧ್ಯಕ್ಕೆ ಭಾರತದ ಇಡೀ ಆರ್ಥಿಕತೆಗೆ ಯಾವುದೇ ಸ್ಪಷ್ಟ ಚಿತ್ರಣ ನೀಡಲಾಗುವುದಿಲ್ಲವಾದರೂ, ಡಿಸೆಂಬರ್ ಹೊತ್ತಿಗೆ ಒಟ್ಟಾರೆಯಾಗಿ U ಆಕಾರದ ಬೆಳವಣಿಗೆ ಗಟ್ಟಿಯಾಗಬಹುದು ಹಾಗೂ ಭಾರತದಲ್ಲಿ K ಆಕಾರದ ಬೆಳವಣಿಗೆಯ ಸಾಧ್ಯತೆ ಕಡಿಮೆ ಎಂದೆನಿಸುತ್ತದೆ.

1942ರಲ್ಲಿ ಜೋಸೆಫ್ ಶಂಪೀಟರ್ (Joseph Schumpeter) ಎಂಬ ಅರ್ಥಶಾಸ್ತ್ರಜ್ಞ ತನ್ನ “Capitalism, Socialism, and Democracy” ಕೃತಿಯಲ್ಲಿ ಹೇಗೆ ನಿರಂತರವಾಗಿ ಹೊಸದೆಂಬುದು ಹಳೆಯದನ್ನು ಬದಲಾಯಿಸುತ್ತಿರುತ್ತದೆ ಎಂಬುದನ್ನು ವಿವರಿಸುತ್ತಾ “ಸೃಜನಶೀಲ ವಿನಾಶ” (Creative Destruction) ಎಂಬ ಪದವನ್ನು ಸೃಷ್ಟಿಸಿದ. ಆರ್ಥಿಕತೆಗಳು ಹೇಗೆ ಬೆಳೆಯುತ್ತವೆ ಎಂಬುದರ ಬಗ್ಗೆ ವಿವರಿಸುವಾಗ ಶಂಪೀಟರ್ “ಆರ್ಥಿಕಪ್ರಗತಿಯೆಂಬುದು ಕಾಲಕ್ರಮೇಣವಾಗಿ ಮತ್ತು ಎಲ್ಲಾಕಾಲದಲ್ಲೂ ಶಾಂತಿಯುತವಾಗಿಯೇ ನಡೆಯುವ ಕ್ರಿಯೆಯಲ್ಲ. ಬದಲಿಗೆ ಕೆಲವೊಮ್ಮೆ ಅಹಿತಕರವಾಗಿಯೂ ಮತ್ತೆ ಕೆಲವೊಮ್ಮೆ ತನ್ನ ಇತಿಹಾಸಕ್ಕೆ ಸಂಬಂಧವೇ ಇರದಂತೆಯೂ ಬದಲಾಗಬಹುದಾದ ಕ್ರಿಯೆ” ಎಂದು ವಿವರಿಸುತ್ತಾನೆ. K-ಆಕಾರದ ಚೇತರಿಕೆಗೆ ಶಂಪೀಟರನ ಈ ಸಿದ್ದಾಂತ ಬಹಳವಾಗಿ ಹೊಂದುತ್ತದೆ. ಇದರ ಜೊತೆಗೇ ಸರ್ಕಾರಗಳು ಈ ಕುಸಿತಕ್ಕೆ ಹೇಗೆ ಮತ್ತು ಎಷ್ಟು ಬೇಗ ಪ್ರತಿಕ್ರಿಯಿಸುತ್ತಿವೆ, ಹಾಗೂ ಸರ್ಕಾರಗಳು ಪ್ರತಿಕ್ರಿಯೆಗಳು ಹೇಗೆ ಕೆಲ ಉದ್ಯಮಗಳಿಗೆ ಹೆಚ್ಚಾಗಿಯೂ, ಉಳಿದವಕ್ಕೆ ಕಡಿಮೆಯಾಗಿಯೂ ಸಹಾಯಕಾರಿಯಾಗಿವೆಯೆಂಬುದರ ಮೇಲೆ ನಿರ್ಧಾರಿತವಾಗಿ ಆರ್ಥಿಕಚೇತರಿಕೆ V, U ಅಥವಾ K ಆಕಾರ ಪಡೆಯಲಿವೆ.

0 comments on ““ಕರೋನಾ ಆರ್ಥಿಕತೆಯ ABC ಅಲ್ಲಲ್ಲ….L, U, V, W ಮತ್ತು K”

Leave a Reply

Your email address will not be published. Required fields are marked *