Friday, 29 March, 2024

ಈ ವಿಜ್ಞಾನ ಭವಿಷ್ಯ ತಿಳಿದಿದ್ದೀರೇನು? (ಭಾಗ ೧)

Share post
(ರಾಬರ್ಟ್ ಗೋಲ್ಡ್ಮನ್' Future Predictions ಎಂಬ ಪ್ರಬಂಧದಿಂದ ಪ್ರೇರಿತ ಬರಹ)

ಲೇಖನದ ತಲೆಬರಹ ನೋಡಿ ಇದೇನಪ್ಪಾ ಹಸ್ತ ಭವಿಷ್ಯ ಗೊತ್ತು, ವಾಸ್ತು ಭವಿಷ್ಯ ಕೇಳಿದ್ದೀನಿ, ವಿಜ್ಞಾನದಲ್ಲೂ ಭವಿಷ್ಯವೇ ಅಂದ್ಕೋಬೇಡಿ. ಇದು ನಮ್ಮ ವೈಜ್ಞಾನಿಕ ಅಭಿವೃದ್ಧಿಗಳ ನಾಗಾಲೋಟದ ಬೆಳವಣಿಗೆಯ ಬಗ್ಗೆ ಭವಿಷ್ಯದ ನುಡಿ. ನಾವೀಗ ಸದ್ಯಕ್ಕೆ ವಿಜ್ಞಾನದ ಸುವರ್ಣಯುಗದಲ್ಲಿ ಬದುಕುತ್ತಿದ್ದೇವೆ. ನಮ್ಮ ಝೀವನದ ಪ್ರತಿಯೊಂದು ಅಂಗುಲದಡಿಯಲ್ಲೂ ವಿಜ್ಞಾನ ಬೆಳೆದು ಆಕ್ರಮಿಸಿಕೊಂಡಿದೆ. ಹತ್ತುವರ್ಷದ ಹಿಂದೆ ನಾವು ಊಹಿಸಿದರ ರೀತಿಯಲ್ಲಿ ವಿಜ್ಞಾನ ಬೆಳೆದಿದೆ. 2008ರಲ್ಲಿ ಇನ್ನೂ ಮೊಬೈಲ್ ಫೋನಿನ ಮುಖ್ಯ ಉದ್ದೇಶ ಇನ್ನೊಬ್ಬರಿಗೆ ಕರೆ ಮಾಡೋದೇ ಆಗಿತ್ತು. ಉಳಿದಂತೆ ಸಂಗೀತ, ಕ್ಯಾಮೆರಾಗಳೆಲ್ಲಾ ಒಂದರೊಟ್ಟಿಗೆ ಒಂದು ಫ್ರೀ ಎಂಬಂತೆ ಸಿಗುತ್ತಿದವಷ್ಟೇ. ಆದರೆ ಇವತ್ತು ಎಲ್ಲದಕ್ಕೂ ಒಂದು ಆಪ್ ಇದೆ, ಎಲ್ಲಿದ್ದೀವಿ ಏನು ಮಾಡುತ್ತಿದ್ದೀವಿ ಎಂದು ಹೇಳುವುದಕ್ಕೂ ಒಂದು ಕಂಪ್ಯೂಟರ್ ಪ್ರೋಗ್ರಾಮ್ ಬಂದಿವೆ. 2008ರಲ್ಲಿ ತಾನು ತಾಯಿಯಾದರೆ ಕರೆಮಾಡಿ ಹೇಳುತ್ತಿದ ಜನ, 2018ರಲ್ಲಿ ಇನ್ಸ್ಟಾಗ್ರಾಮ್’ನಲ್ಲಿ ಫೋಟೋ ಹಾಕಿ ಹೇಳಲಾರಂಭಿಸಿದ್ದಾರೆ. ನಮ್ಮ ಜನ ಕಟ್ಟಕಡೇ ಎಸ್ಸೆಮ್ಮೆಸ್ಸು ಕಳಿಸಿ ಯಾವ ಕಾಲಯಾವಾಯ್ತೋ! ಈಗೇನಿದ್ರೂ ವಾಟ್ಸ್ಯಾಪ್, ಟೆಲಿಗ್ರಾಮ್, ಸ್ನಾಪ್-ಚಾಟ್ ಕಾಲ. ಅಜ್ಜ ಸತ್ತರೆ ಅಳುತ್ತಿದ್ದ ಮೊಮ್ಮಕ್ಕಳು ಇವತ್ತು ಅಜ್ಜನ ಚಟ್ಟನ ಪಕ್ಕ ನಿಂತು “Last snap with my grandpa” ಅಂತಾ ಫೇಸ್ಬುಕ್ಕಿನಲ್ಲಿ ಫೋಟೋ ಹಾಕುತ್ತಿದ್ದಾರೆ. ಈ ಹತ್ತು ವರ್ಷದಲ್ಲೇ ನಮ್ಮ ಜೀವನ ಹೀಗಾಗಿರಬೇಕಾದರೆ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಹೇಗಾಗಬಹುದು ಎಂಬ ಕಲ್ಪನೆ ನಮ್ಮೆಲ್ಲರಿಗೂ ಒಂದಲ್ಲ ಒಂದು ಸಲ ಬಂದಿರುತ್ತೆ. ಕನಸೂ ಕಂಡಿರ್ತೀವಿ.

ಆದರೆ , ಜನ ಭವಿಷ್ಯದ ಬಗ್ಗೆ ಮಾತನಾಡುವಾಗ ಎಂತೆಂತದೋ ಕಲ್ಪನೆಗಳನ್ನಿಟ್ಟುಕೊಂಡಿರ್ತಾರೆ. ಹಾಲಿವುಡ್ಡಿನ ಸೈ-ಫೈ ಚಿತ್ರಗಳನ್ನ ನೋಡಿ ಇನ್ನೇನು ಎರಡುಮೂರು ವರ್ಷಗಳಲ್ಲಿ ಹಾರುವ ಕಾರುಗಳೇ ಬಂದುಬಿಡ್ತಾವೆ ಅಂತಾ ನಿರೀಕ್ಷೆ ಇಟ್ಟುಕೊಂಡವರಿಗೇನು ಕೊರತೆಯಿಲ್ಲ. ತಮಾಷೆಯೆಂದರೆ, ಹಾಲಿವುಡ್ಡಿನ ಬರಹಗಾರರು, ಗ್ರಾಫಿಕ್ ಆರ್ಟಿಸ್ಟುಗಳು ಈ ರೀತಿ ಹಾರುವ ಕಾರುಗಳು ಬರ್ತಾವೆ ಅನ್ನೋ ಕಲ್ಪನೆಯನ್ನ 1970ರಿಂದಲೂ ಹರಿಬಿಡ್ತಾಲೇ ಇದ್ದಾರೆ.  ಕ್ರಿಯೇಟಿವಿಟಿಯ ಗ್ರೇವಿಗೆ ಯಾವುದರ ಹಂಗು? ಅದು ತನಗೆ ಹೆಂಗ್ ಬೇಕೋ ಹಂಗೆ ಹರಿಯುತ್ತೆ. ಯಾರೂ ಕೂಡಾ Air Traffic Control ಅನ್ನೋದು ಅದೆಷ್ಟು ಕ್ಲಿಷ್ಟವಿಚಾರ, ಅದೆಷ್ಟೋ ಎತ್ತರದಲ್ಲಿ ಹಾರುವ ಮಾಮೂಲಿ ಏರೋಪ್ಲ್ಲೇನುಗಳನ್ನೇ ಸುಧಾರಿಸೊಕ್ಕೆ ಕಷ್ಟಪಡ್ತಾ ಇದ್ದೀವಿ, ಇದರ ಜೊತೆಗೆ ಮಾರುತಿ-800ಗಳೂ ಹಾರೋಕೆ ಶುರುಮಾಡಿದ್ರೆ ಏನಾಗುತ್ತೆ ಅನ್ನೋದರನ್ನ ಅರ್ಥ ಮಾಡ್ಕೊಳ್ಳೋದೇ ಇಲ್ಲ. ಭವಿಷ್ಯ ಅಂದರೆ ಹೀಗೇ ಹಾರುವ ಕಾರುಗಳ, ರೋಬೋಟುಗಳ ಕಾಲ ಅಂತಲೇ ಅಂದ್ಕೊಳ್ಳುವುದರ ನಡುವೆ, ನಿಜವಾಗಲೂ ಭವಿಷ್ಯ ಹೇಗಿರುತ್ತೆ ಅಂತಾ ಯೋಚಿಸುವವರು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಒಂದು ಕ್ಷಣಕ್ಕೆ ಈ “ಇನ್ನೂ ಮುಖ್ಯವಾಹಿನಿಗೆ ಬರದಿರುವ” ತಂತ್ರಜ್ಞಾನಗಳ ಉಸಾಬರಿ ಬದಿಗಿಟ್ಟು, ಈಗಾಗಲೇ ನಮ್ಮ ಬಳಿಯಿರುವ ತಂತ್ರಜ್ಞಾನಗಳು ಹಾಗೂ ಅವುಗಳ ಸುಧಾರಿತ ವರ್ಷನ್ನುಗಳು ತರಬಹುದಾದ ಭವಿಷ್ಯದ ಬಗ್ಗೆ ಯೋಚಿಸುತ್ತಾ ಈ ಬರಹ. ಇದರಲ್ಲಿ “ಹೊಸದಾಗಿ ಏನು ಬರುತ್ತೆ” ಅಂತಾ ಬೂಸಿ ಬಿಡೋದನ್ನ ಬದಿಗಿಟ್ಟು, ಸಧ್ಯದ ಪರಿಸ್ಥಿತಿಯೇ ಮುಂದುವರೆದರೆ “ಈಗಿರುವ ಹಾಗೂ ಹಳೆಯದರ ಕಥೆ ಏನಾಗುತ್ತೆ” ಎನ್ನುವ ಬಗ್ಗೆ ಅವಲೋಕನವಿದೆ.

ಮುಂದಿನದರ ಬಗ್ಗೆ ಯೋಚಿಸುವ ಮುನ್ನ, ನಮ್ಮ ನಿನ್ನೆಗಳು ಹೇಗಿದ್ದವು ಹಾಗೂ ನನ್ನ ಇವತ್ತುಗಳು ಹೇಗೆ ನಿನ್ನೆಯ ಕೆಲ ತಂತ್ರಜ್ಞಾನಗಳನ್ನ ಅಳಿಸಿಹಾಕಿವೆ ಎಂಬುದನ್ನೊಮ್ಮೆ ನೋಡಿ.

  • 1998ರಲ್ಲಿ ಕೊಡಾಕ್ ಎಂಬ ಕಂಪನಿ ಛಾಯಾಚಿತ್ರಗ್ರಾಹಕರ ಮೆಚ್ಚಿನ ಕಂಪನಿಯಾಗಿತ್ತು. ಜಗತ್ತಿನ 85% ಫೋಟೋ ಪೇಪರನ್ನ ತಯಾರಿಸ್ತಾ ಇದ್ದ ಈ ಕಂಪನಿ 1,70,000 ಉದ್ಯೋಗಿಗಳಿದ್ದ ದೈತ್ಯ. ಆದರೆ 2003ರಷ್ಟೊತ್ತಿಗೆ ಕಂಪನಿ ದಿವಾಳಿಯಂಚಿಗೆ ತಲುಪಿತ್ತು. ಅವರ ವ್ಯವಹಾರ ಮಾದರಿ (business model) ನಾಪತ್ತೆಯೇ ಆಗಿಹೋಗಿತ್ತು. 2012ರ ಜನವರಿಯಲ್ಲಿ ಅಧಿಕೃತವಾಗಿ ದಿವಾಳಿಯೆಂದು ಘೋಷಿಸಿಕೊಂಡು ಸರ್ಕಾರದಿಂದ ಸಹಾಯ ಕೋರಿಕೆಗೆ ಅರ್ಜಿ ಹಾಕಿತು. ಕೊಡಾಕ್’ಗೆ ಆದ ಗತಿಯೇ ಇನ್ನೂ ಎಷ್ಟೋ ಕಂಪನಿಗಳಿ ಮುಂದಿನ ಹತ್ತುವರ್ಷಗಳಲ್ಲಿ ಆಗಲಿದೆ. ಹಾಗೂ ಎಷ್ಟೋ ಕಂಪನಿಗಳಿಗೆ ಅದಿನ್ನೂ ತಿಳಿದೂ ಇಲ್ಲ. 1998ರಲ್ಲಿ, ಇನ್ನು ಮೂರುವರ್ಷಗಳಲ್ಲಿ 80% ಜನಸಾಮಾನ್ಯರು ಫಿಲಂಗಳನ್ನುಪಯೋಗಿಸಿ ಫೋಟೋ ತೆಗೆಯೋದೇ ಇಲ್ಲ ಅಂತಾ ಸ್ವತಃ ಕೊಡಾಕ್’ಗೆ ಕೂಡಾ ತಿಳಿದಿರಲಿಲ್ಲ.

ತಮಾಷೆಯ ವಿಷಯವೆಂದರೆ 1975ರಲ್ಲಿ ಜಗತ್ತಿನ ಮೊತ್ತಮೊದಲ ಡಿಜಿಟಲ್ ಕ್ಯಾಮೆರಾ ತಯಾರಿಸಿದ್ದು ಇದೇ ಕೊಡಾಕ್ ಕಂಪನಿ. ಆಗಿನ್ನೂ ಅದರಲ್ಲಿದ್ದದ್ದು ಬರೇ ಹತ್ತುಸಾವಿರ ಪಿಕ್ಸೆಲ್’ಗಳು. ಆಮೇಲೆ ಅದನ್ನ ಅಭಿವೃದ್ಧಿಪಡಿಸಿ ಅಗ್ಗವಾಗಿಸಿದ್ದೂ ಸಹಾ ಇದೇ ಕೊಡಾಕ್ ಕಂಪನಿ. ಆದರೆ ಡಿಜಿಟಲ್ ಕ್ಯಾಮರಾವನ್ನ ಕೊಡಾಕ್ ಯಾವತ್ತೂ ಜನಸಾಮಾನ್ಯರ ತಂತ್ರಜ್ಞಾನ ಅಂತಾ ಪರಿಗಣಿಸಲೇ ಇಲ್ಲ. ಅವರು ಬಹುಷಃ ಅದನ್ನ ಹೆಚ್ಚೆಚ್ಚು ಅಭಿವೃದ್ಧಿಪಡಿಸಿ ಹಾಲಿವುಡ್’ಗೆ ಮಾರುವ ಯೋಚನೆಯಲ್ಲಿದ್ದರು. ಕೊಡಾಕ್’ನ ಎಕ್ಸಿಕ್ಯೂಟಿವ್’ಗಳಿಗೆ ಫಿಲಂ ಕ್ಯಾಮರಾ ಇಲ್ಲದ ಜಗತ್ತನ್ನ ಊಹಿಸಲು ಸಾಧ್ಯವಾಗಲೇ ಇಲ್ಲ. ಫ್ಯೂಜಿಪಿಲಂನೊಂದಿಗಿನ ತನ್ನ ವ್ಯವಹಾರ ವೈರತ್ವದಲ್ಲೇ ಬಿಡುವಿಲ್ಲದೇ ತೊಡಗಿಸಿಕೊಂಡ ಕೊಡಾಕ್, ಮೂರ್’ನ ನಿಯಮ (Moore’s Law) ಅರ್ಥೈಸಿಕೊಳ್ಳುವಲ್ಲಿ ಎಡವಿತು.

ಮೂರ್ ನಿಯಮ:ಫೈರ್ಚೈಲ್ಡ್ ಸೆಮಿಕಂಡಕ್ಟರ್ ಹಾಗೂ ಇಂಟೆಲ್’ನಂತಹ ಕಂಪನಿಗಳ ಸ್ಥಾಪಕ ಗೋರ್ಡನ್ ಮೂರ್, 1965ರ ತನ್ನ ಪ್ರಬಂಧವೊಂದರಲ್ಲಿವಿದ್ಯುನ್ಮಾನ ಕ್ಷೇತ್ರದಲ್ಲಿ ಪ್ರತೀ ವರ್ಷಕ್ಕೊಮ್ಮೆ ಇಂಟಿಗ್ರೇಟೆಡ್ ಸರ್ಕ್ಯೂಟ್ಗಳ ಮೇಲಿರುವ ಘಟಕಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆಎಂದಿದ್ದ. ಈಗ ಇದು ಪ್ರತಿ 18ತಿಂಗಳಿಗೊಮ್ಮೆ ದ್ವಿಗುಣಗೊಳ್ಳುತ್ತೆ ಎಂಬಲ್ಲಿಗೆ ಬಂದು ನಿಂತಿದೆ.

1995ರ ತನಕವೂ ತೆವಳುತ್ತಲೇ ಸಾಗಿದ ಈ ಡಿಜಿಟಲ್ ಕ್ಯಾಮರಾ ತಂತ್ರಜ್ಞಾನ, ಮುಂದಿನ ಐದು ವರ್ಷಗಳಲ್ಲಿ ಘಾತೀಯ ಮಟ್ಟದಲ್ಲಿ (exponential rate) ಅಭಿವೃದ್ಧಿ ಹೊಂದಿತು. ಇದೇ ರೀತಿಯ ಬೆಳವಣಿಗೆ ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಅಥವಾ ಕೃ-ಬುದ್ಧಿಮತ್ತೆ) ಅಭಿವೃದ್ಧಿ (Artificial Intelligence), ವೈದ್ಯಕೀಯ ರಂಗ, ಸ್ವಯಂಚಾಲಿತ ಹಾಗೂ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ, ಶಿಕ್ಷಣರಂಗ, 3D ಪ್ರಿಂಟಿಂಗ್, ಕೃಷಿ ಹಾಗೂ ಉದ್ಯೋಗರಂಗದಲ್ಲಿ ಆಗಲಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯ ಘಟ್ಟದಲ್ಲಿ ನಾವೀಗ ನಿಂತಿದ್ದೀವಿ. ರಾಬರ್ಟ್ ಗೋಲ್ಡ್ಮನ್ ಎಂಬ ತಂತ್ರಜ್ಞ, ತಮ್ಮ ದ್ವಿಗುಣ-ತ್ರಿಗುಣ ವೇಗದ ಅಭಿವೃದ್ಧಿಯಿಂದ ಜಗತ್ತಿನ ಚಹರೆಯನ್ನೇ ಬದಲಿಸಬಲ್ಲ ಈ ಕೆಲವು ತಂತ್ರಜ್ಞಾನಗಳನ್ನು ಘಾತೀಯ ತಂತ್ರಜ್ಞಾನಗಳು (Exponential technologies) ಎಂದೂ, ಈ ತಂತ್ರಜ್ಞಾನಗಳು ಉಪಯೋಗಿಸಲ್ಪಡುವ ಈ ಕಾಲಘಟ್ಟಕ್ಕೆ ಘಾತೀಯ ಯುಗ (Exponential age) ಅಂತಲೂ ಕರೆದಿದ್ದಾನೆ. ಈ ಯುಗದ ಕೆಲ ಪದರಗಳನ್ನು ಮುಂದಿನ ಭಾಗದಲ್ಲಿ ಅವಲೋಕಿಸೋಣ ಬನ್ನಿ.

2 comments on “ಈ ವಿಜ್ಞಾನ ಭವಿಷ್ಯ ತಿಳಿದಿದ್ದೀರೇನು? (ಭಾಗ ೧)