Tuesday, 16 April, 2024

ಹಿಂದೆ ಗೊತ್ತಿಲ್ಲ, ಮುಂದೆ ಗೊತ್ತಿಲ್ಲ….ಹೋರಾಟಗಳೇ ಊರತುಂಬೆಲ್ಲಾ

Share post

 

ಭಾರತ ಒಂದು ಬಹಳ ಬ್ಯುಸಿ ದೇಶ. ಇಲ್ಲಿನ ಜನಸಂಖ್ಯೆ 125 ಕೋಟಿ. ಇಲ್ಲಿನ ತೊಂದರೆಗಳೂ 125 ಕೋಟಿ. ಇಲ್ಲಿ ದಿನಕ್ಕಾಗುವ ಚರ್ಚೆಗಳೂ 125 ಕೋಟಿ. ನಮ್ಮ ಜನಕ್ಕೆ ದಿನಕ್ಕೊಂದುಹೊತ್ತು ಊಟ ತಪ್ಪಿದರೂ, ಚರ್ಚೆಗೆ ವಿಷಯಗಳು ತಪ್ಪಲ್ಲ. ಅದಕ್ಕೆ ಸರಿಯಾಗಿ ನಮ್ಮ ನೂರೆಂಟು ಸುದ್ಧಿಚಾನಲ್ಲುಗಳು ದಿನವಿಡೀ ಕೆಲಸಮಾಡುತ್ತಾ, ಜನರ ಚರ್ಚೆಯೆಂಬ ಬೆಂಕಿಗೆ ತುಪ್ಪ ಸುರಿಯುತ್ತಲೇ ಇರುತ್ತಾರೆ. ಅದರಲ್ಲಿ ಸರಿಯೆಷ್ಟು ತಪ್ಪೆಷ್ಟು, ನಾನು ಪ್ರಸರಿಸುತ್ತಿರುವ ಸುದ್ಧಿಯ ಮೂಲ, ನಿಖರತೆ ಮತ್ತು ನಿಪಕ್ಷಪಾತತೆಯನ್ನು ಪರಿಶೀಲಿಸಿದ್ದೀನಾ ಎಂಬ ಕನಿಷ್ಟ ವಿವೇಚನೆಯನ್ನೂ ತೋರದ ನಮ್ಮ ಮಾಧ್ಯಮಗಳು, ಮಸಾಲಾ ಧಾರಾವಾಹಿಗಳನ್ನೇ ಜೀವಾಳ ಮಾಡಿಕೊಂಡಿರುವ ಡ್ರಾಮಾ ಚಾನಲ್ಲುಗಳಿಗಿಂತಾ ಯಾವರೀತಿಯಲ್ಲೂ ಕಮ್ಮಿಯಿಲ್ಲ. ಯಾರಿಗೂ ಸ್ಪಷ್ಟತೆಯ ತವಕವಿಲ್ಲ. ತಪ್ಪುಮಾಹಿತಿ ಹರಡಿ ದೇಶ ಉರಿದರೆ, ಇವರ ನಾಳೆಯ ಸುದ್ಧಿಯ ತಲೆಬಿಸಿ ತಪ್ಪಿತಲ್ಲ! ನಮ್ಮ ನಾಳೆಗಳನ್ನು ಈ ಚಾನಲ್ಲುಗಲು ಸೃಷ್ಟಿಮಾಡುವುದೇ ಹೀಗೆ. ಇದರಲ್ಲಿ ಮುದ್ರಣಮಾಧ್ಯಮವೂ ಹಿಂದೆಬಿದ್ದಿಲ್ಲ. ಆದರೆ ಪೇಪರರುಗಳಿಗೆ ಹೋಲಿಸಿದರೆ, ಇತ್ತೀಚಿನ ದಿನಗಳಲ್ಲಿ ದೃಶ್ಯಮಾಧ್ಯಮ ಸೃಷ್ಟಿಸಿದಷ್ಟು ಬೀಭತ್ಸತೆ ಬೇರೆಕಡೆ ಕಂಡುಬಂದಿಲ್ಲ.

ಹೋದವಾರ ಚರ್ಚೆಯಾದ ಹಲವಾರು ವಿಷಯಗಳಲ್ಲಿ ಪೌರತ್ವ ತಿದ್ದುಪಡೆ ಮಸೂದೆಯೂ ಒಂದು. ಅದೀಗ ಪೌರತ್ವ ತಿದ್ದುಪಡಿ ಕಾಯ್ದೆಯಾಗಿದೆ ಅನ್ನೋದೂ ಹಲವರಿಗೆ ಇನ್ನೂ ತಿಳಿದಂತಿಲ್ಲ. ಅದಾಗಲೇ *CAA – Citizenship Amendment Act* ಆಗಿರುವ ಅದನ್ನಿನ್ನೂ *CAB – Citizenship Amendment Bill* ಅಂತಲೇ ಕರೆಯುತ್ತಿದ್ದಾರೆ. ಈ ಕಾಯ್ದೆಯ ಬಗ್ಗೆ ಎಲ್ಲರೂ ಚರ್ಚೆಸಿಯಾಯ್ತು. ಕೆಲ ಶಾಂತಿಯುತ ನಾಗರೀಕರು ಕಾಯ್ದೆಯಿಂದ ಗರಂ ಆಗಿ, ಅಸ್ಸಾಂ ಮತ್ತು ಪಶ್ಚಿಮಬಂಗಾಳದಲ್ಲಿ ಬೆಂಕಿಹಚ್ಚಿ ಕಾನೂನುಸುವ್ಯವಸ್ಥೆಯನ್ನು ಗರಂ ಆಗಿಸಿದರು. ದೇಶದೆಲ್ಲೆಡೆ ವಿದ್ಯಾಸಂಸ್ಥೆಗಳಿದ್ದರೂ ಸಹ, ಮುಸ್ಲಿಮರಿಗೆ ಮೀಸಲಾತಿ ನೀಡುವ ಎರಡು ವಿಶ್ವವಿದ್ಯಾನಿಲಯಗಳ “ವಿದ್ಯಾವಂತರು” ಮಾತ್ರ ಬೀದಿಗಿಳಿದು ಪ್ರತಿಭಟಿಸಿದರು. CAAಯಿಂದ ಭಾರತೀಯ ಮುಸ್ಲಿಮರಿಗೆ ಯಾವ ತೊಂದರೆಯೂ ಇಲ್ಲವೆಂದು ಗೊತ್ತಿದ್ದರೂ ಬೀದಿಗಿಳಿದರು. ಪ್ರಶ್ನಿಸಿದಾಗ ಇದು CAAಬಗ್ಗೆ ಮಾತವಲ್ಲ ಎನ್‌ಆರ್‌ಸಿ ಬಗ್ಗೆಯೂ ಕೂಡಾ ಹೌದು ಎಂದರು. ಪ್ರತಿಭಟನೆಯನ್ನೇ ಎತ್ತಿತೋರಿಸುವ ಮಾಧ್ಯಮಗಳು CAA ಮತ್ತು ಎನ್‌ಆರ್‌ಸಿ ಗಳ ಬಗ್ಗೆ ಬೆಳಕು ಚೆಲ್ಲುವ, ಪ್ರಸರಿಸುವ ಪ್ರಯತ್ನವನ್ನೂ ಮಾಡಲಿಲ್ಲ. ನಿನ್ನೆ ಅಲೀಘಡ ಮುಸ್ಲಿಂ ವಿವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದವನೊಬ್ಬನನ್ನು ತಡೆದು ಮಾಧ್ಯಮದವರು “ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಪ್ಪಾ?” ಅಂತಾ ಕೇಳಿದರೆ “ನಮ್ಮ ಜನರಿಗೆ ತೊಂದರೆಯಾಗಿದೆ, ಅದಕ್ಕೇ” ಅಂದ. “ಯಾರು ನಿಮ್ಮ ಜನ, ಏನು ತೊಂದರೆ?” ಅಂತಾ ಮರು ಪ್ರಶ್ನಿಸಿದ್ದಕ್ಕೆ ಅವನ ಬಳಿ ಉತ್ತರವೇ ಇರಲಿಲ್ಲ. ಅದೂ….ಅವರು….ಕರೆದ್ರು…ಬಂದ್ವಿ ಅಂತಾ ಬೆಬ್ಬೆಬ್ಬೆಯಾದ. ಅಲ್ಲಿಗೇ ಸಂದರ್ಶನ ಮುಗಿಯಿತು. ಆ ಮಾಧ್ಯವದವನೂ ಆ ಪ್ರತಿಭಟನೆಕಾರನಿಗೆ ತಿಳಿಹೇಳುವ ಪ್ರಯತ್ನಮಾಡಲಿಲ್ಲ. ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಆ ಹೋರಾಟಗಾರನೂ ಇರಲಿಲ್ಲ. ಇವು ನಮ್ಮ ಇಂದಿನ ಹೋರಾಟಗಳು 🙂

 

ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಕಳೆದೆರಡು ದಿನಗಳಿಂದ ಚರ್ಚೆಗಳಾಗಿದೆ. ಹೋದವಾರ ನಾನೂ ಬರೆದಾಗಿದೆ. ಈ ವಾರ Be the change you want to see ಅನ್ನುವ ಮಾತಿನಂತೆ, ಈ ವಾರ ಎನ್‌ಆರ್‌ಸಿ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಇಲ್ಲಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಕೂಡಲೇ ಮತ್ತು ಅದನ್ನು ಕಾನೂನನ್ನಾಗಿ ಮಾಡುವ ಅಧ್ಯಕ್ಷರ ಒಪ್ಪಿಗೆಯನ್ನು ನೀಡಿದ ಕೂಡಲೇ, ಮತ್ತೊಂದು ನಡೆಯ ಬಗ್ಗೆ ಜೋರಾಗಿ ಗೊಣಗಾಟಗಳು ಪ್ರಾರಂಭವಾದವು. ಅದೇ ರಾಷ್ಟ್ರೀಯ ನಾಗರಿಕರ ನೋಂದಣಿ ಅಥವಾ ಎನ್‌ಆರ್‌ಸಿ. ಎನ್‌ಆರ್‌ಸಿ ಎಂದರೇನು ಮತ್ತು ಸಿಎಎ ಜೊತೆ ಕ್ಲಬ್ ಮಾಡಿದರೆ ಅದು ನಿಜವಾಗಿಯೂ ಸಮಸ್ಯೆಯನ್ನು ಸೃಷ್ಟಿಸುತ್ತದೆಯೇ? ಕೆಲ ಪ್ರಶ್ನೆ ಮತ್ತು ಉತ್ತರಗಳು ಇಲ್ಲಿವೆ:

ಏನಿದು ಎನ್‌ಆರ್‌ಸಿ ?
ಎನ್‌ಆರ್‌ಸಿ ನಾಗರೀಕರ ರಾಷ್ಟ್ರೀಯ ನೋಂದಣಿಯಾಗಿದೆ. ಅಂದರೆ ನಿಮ್ಮ ಕುಟುಂಬದವರ್ಯಾರಾರು? ಅವ್ರಗಲ್ಲಿ ಒಬ್ಬರಿಗೊಬ್ಬರು ಹೇಗೆ ಸಂಬಂಧಿಗಳು ಅಂತೆಲ್ಲಾ ಒಂದು ಪುಸ್ತಕದಲ್ಲಿ ಬರೆಟ್ಟ ವಂಶಾವಳಿಯಂಗೆ, ಇಡೀ ಭಾರತಕ್ಕೊಂದು ವಂಶಾವಳಿ ಬರೆದರೆ ಅದು ಎನ್ಆರ್ಸಿ. ಭಾರತದ ನಾಗರೀಕರು ಯಾರ್ಯಾರು ಅಂತಾ ಗುರುತಿಸೋದು ಹೇಗೆ? ಭಾರತಕ್ಕೆ ಸಾಂವಿಧಾನಿಕ ಅಸ್ತಿತ್ವ ಸಿಕ್ಕಾಗ ಯಾರ್ಯಾರು ಭಾರತದಲ್ಲಿದ್ದರೋ ಅವರೆಲ್ಲರೂ ಸ್ವಾಭಾವಿಕವಾಗಿಯೇ ಭಾರತದ ನಾಗರೀಕರು. ಇದರ ಜೊತೆಗೆ ಭಾರತ ದೇಶ ಆಗಾಗ ಕೆಲವೊಂದಷ್ಟು ಜನರಿಗೆ ಅಧಿಕೃತವಾಗಿ ಭಾರತದ ನಾಗರೀಕತೆ ಕೊಟ್ಟಿದೆ. ಅವರೆಲ್ಲಾರ ಹೆಸರುಗಳ ಒಟ್ಟು ಸೂಚಿಯೇ ಎನ್ಆರ್ಸಿ. ಇದೇನೂ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಮೇಲೆ “ಯಾರ್ಯಾರಿದ್ದೀರಪ್ಪಾ ಭಾರತದ ನಾಗರೀಕರು? ಹೆಸರೇಳಿ” ಅಂತಾ ಪಟ್ಟಿ ಬರೆದದ್ದಲ್ಲ. 1951ರಲ್ಲೇ ಮೊತ್ತಮೊದಲ ಎನ್ಆರ್ಸಿಯನ್ನು ತಯಾರಿಸಲಾಗಿತ್ತು. ಅದಾದ ಮೇಲೆ ಆ ಪಟ್ಟಿಯನ್ನು ಯಾರೂ ನವೀಕರಿಸಿಲ್ಲ, ಅಷ್ಟೇ. ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳಿಬಂದು, ವರ್ಷಾನುಗಟ್ಟಲೇ ವಾಸವಿದ್ದು, ಆಧಾರ್ ಕಾರ್ಡ್ ಮುಂತಾದವುನ್ನೆಲ್ಲಾ ಕಳ್ಳದಾರಿಯಲ್ಲಿ ಮಾಡಿಸಿಕೊಂಡು, ತಮ್ಮನ್ನು ಭಾರತದ ನಾಗರೀಕರು ಅಂತಾ ಕರೆದುಕೊಂಡು ಅಸ್ಸಾಮಿನಲ್ಲಿ ದೊಡ್ಡ ತಲೆನೋವಾಗಿರುವ ವಲಸಿಗರನ್ನು ಗುರುತಿಸಲು, 2013ರ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಎನ್‌ಆರ್‌ಸಿಯನ್ನು ಜಾರಿಗೆ ತಂದಿತು. ಅಸ್ಸಾಮಿನ ಜನಾಂಗೀಯ ಅನನ್ಯತೆಯನ್ನು ಬದಲಾಯಿಸದೆ ಇರಿಸಲು ಇದು ಆ ರಾಜ್ಯಕ್ಕಾಗಿ ಮಾಡಿದ ನಿರ್ದಿಷ್ಟ ಅನುಷ್ಟಾನವಷ್ಟೇ. ಆದರೆ ಅಕ್ರಮ ವಲಸಿಗರು ದೇಶದೆಲ್ಲೆಡೆ ಹರಡಿರುವುದರಿಂದ, ಎನ್‌ಆರ್‌ಸಿಯನ್ನು ದೇಶದೆಲ್ಲೆಡೆ ಅನುಷ್ಠಾನಗೊಳಿಸಲು ಬೇಡಿಕೆ ಹೆಚ್ಚುತ್ತಿದೆ. ಈಗ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಉನ್ನತ ಬಿಜೆಪಿ ನಾಯಕರು ಅಸ್ಸಾಂನ ಎನ್‌ಆರ್‌ಸಿಯನ್ನು ಭಾರತದಾದ್ಯಂತ ಜಾರಿಗೆ ತರಬೇಕೆಂದು ಪ್ರಸ್ತಾಪಿಸಿದ್ದಾರೆ. ಕಾನೂನುಬಾಹಿರವಾಗಿ ಭಾರತದಲ್ಲಿ ವಾಸಿಸುತ್ತಿರುವ ನುಸುಳುಕೋರರನ್ನು ಗುರುತಿಸಲು, ಅವರನ್ನು ಬಂಧಿಸಲು ಮತ್ತು ಅವರು ಎಲ್ಲಿಂದ ಬಂದಿದ್ದಾರೋ ಅಲ್ಲಿಗೆ ಗಡೀಪಾರು ಮಾಡಲು, ಈ ಎನ್‌ಆರ್‌ಸಿ ಸರ್ಕಾರಕ್ಕೆ ಪರಿಣಾಮಕಾರಿಯಾಗಿ ಸೂಚಿಸುತ್ತದೆ.

 

CAA ಮತ್ತು ಎನ್‌ಆರ್‌ಸಿ ಗೆ ಏನು ಸಂಬಂಧ?
ಏನೂ ಇಲ್ಲ. ಎರಡನ್ನೂ ಬೇರೆಬೇರೆಯಾಗಿ ನೋಡಿದಾಗ ಏನೂ ಸಂಬಂಧವಿಲ್ಲ. CAA ದೇಶದ ಒಳಬರಲು ಕೆಲಜನರಿಗೆ ಅವಕಾಶ ಮಾಡಿಕೊಡುವ ಕಾಯ್ದೆಯಾದರೆ, ಎನ್‌ಆರ್‌ಸಿ ದೇಶದಲ್ಲಿರುವ ಅಕ್ರಮ ವಲಸಿಗರನ್ನು ಹೊರಗೆ ತಳ್ಳಲು ಅವಕಾಶ ಮಾಡಿಕೊಡುವ ಪ್ರಕ್ರಿಯೆ ಅಷ್ಟೇ. ಆದರೆ CAAನಲ್ಲಿ ಒಳಬರಲಾಗದವರೂ ಬೇರೆದೇಶದ ಮುಸ್ಲಿಮರು. ಎನ್‌ಆರ್‌ಸಿ ಯಿಂದ ಹೊರಹೋಗುವವರೂ ಸಹ ಬೇರೆದೇಶದ ಮುಸ್ಲಿಮರು. ಎರಡು ಕಾಯ್ದೆಗಳನ್ನೂ ಒಟ್ಟಿಗೇ ಜಾರಿಗೆ ತಂದಾಗ, ಕಾಂಗ್ರೆಸ್, ಟಿಎಂಸಿ ಮತ್ತು ಕಮ್ಯೂನಿಸ್ಟರು ಇದುವರೆಗೂ ಹಣಸುರಿದು ಸಂಗ್ರಹಿಸಿಟ್ಟುಕೊಂಡಿದ್ದ ಅಕ್ರಮವಾಗಿ ಭಾರತದೊಳಗೆ ನುಸುಳಿದ್ದ ಬಾಂಗ್ಲಾಮುಸ್ಲಿಮರು ಅಡುಗೆಮನೆಯಲ್ಲಿ ಔಷದಿ ಹೊಡೆದಾಗ ಹೊರಬರುವ ಜಿರಳೆಗಳಂತೆ ಹೊರಬರಲಿದ್ದಾರೆ. ಮತ್ತವರನ್ನು ಅವರ ದೇಶಕ್ಕೆ ವಾಪಾಸ್ ಗಡೀಪಾರು ಮಾಡಲಾಗುತ್ತದೆ. ಇದರೊಂದಿಗೇ ಮಾಯ್ನ್ಮಾರಿನಿಂದ ಓಡಿಬಂದು ಕಾಶ್ಮೀರದವರೆಗೂ ಓಡಿ ಹೋಗಿ ಅವಿತುಕುಳಿತಿರುವ ರೋಹಿಂಗ್ಯಾಗಳೂ ವಾಪಾಸ್ ಗಂಟುಂಉಟೆ ಕಟ್ಟಲಿದ್ದಾರೆ. ಇದೊಂದೇ ನಮ್ಮ ಲಿಬರಲ್ಲುಗಳ ಹಿಂಬಾಗಕ್ಕೆ ಶಾಖ ಕೊಟ್ಟಿರುವುದು. ಮುಸ್ಲಿಮರಿಗೆ (ನಮ್ಮದೇಶದವರಲ್ಲದಿದ್ದರೂ ಸಹ) ಅನ್ಯಾಯದಲ್ಲೆಲ್ಲಾ ದನಿಯೆತ್ತುವ ಲಿಬರಲ್ಲುಗಳಿಗೆ ಇದೊಂದೇ ಗಂಟಲಮುಳ್ಳಾಗಿರುವುದು. ಆದರೆ ಇದೇ ಲಿಬರಲ್ಲುಗಳು ಯೆಮನ್ನಿನಲ್ಲಿ, ಸಿರಿಯಾದಲ್ಲಿ, ಇರಾಕಿನಲ್ಲಿ, ಇಲ್ಲೇ ಪಕ್ಕದ ಪಾಕಿಸ್ಥಾನದಲ್ಲಿ ಮುಸ್ಲಿಮರಿಂದಲೇ ಮುಸ್ಲಿಮರಿಗೆ ತೊಂದರೆಯಾಗಿದ್ದರೂ ಸಹ ಗಪ್-ಚುಪ್. ಆದರೆ ಭಾರತದಲ್ಲಿರುವ ಅಕ್ರಮವಾಸಿ ಮುಸ್ಲಿಮರಿಗೆ ತೊಂದರೆಯಾದರೆ ನಮ್ಮ ಮನೆಯವರಿಗಾದಷ್ಟೇ ನೋವು ಇವರಿಗಾಗುತ್ತದೆ.

 

ಯಾರಿಗೆ ಇದರಿಂದ ತೊಂದರೆ?
ಈಗಿನ್ನೂ ಎನ್‌ಆರ್‌ಸಿ ಪ್ರಾಸ್ತಾವಿಕ ಮಸೂದೆಯಾಗಿಯೇ ಉಳಿದಿದೆ. ಅದು ಕಾಯ್ದೆಯಾಗಿ ಮಾರ್ಪಾಡಾದಾಗ ಅದು ಭಾರತದಲ್ಲಿರುವ ಅಕ್ರಮ ವಲಸಿಗರನ್ನು ತನ್ನ ಗುರಿಯಾಗಿಸಿಕೊಳ್ಳುತ್ತದೆ. ಆದರೆ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಜೈನರು ಮತ್ತು ಪಾರ್ಸಿಗಳು ತಾವು ಧಾರ್ಮಿಕ ಕಿರುಕುಳಕ್ಕೊಳಗಾಗಿ ಆ ದೇಶವನ್ನು ಬಿಟ್ಟು ಭಾರತಕ್ಕೆ ಬಂದಿದ್ದಾರೆಂದು ಹೇಳಿಕೊಂಡರೆ ಅವರ ಮೇಲೆ ಯಾವ ಪರಿಣಾಮವನ್ನೂ ಎನ್‌ಆರ್‌ಸಿ ಬೀರುವುದಿಲ್ಲ. ಅಂದರೆ, ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಪ್ರಸ್ತಾಪಿಸಿದಂತೆಯೇ ಬಂದರೆ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಯಾವುದೇ ಅಕ್ರಮ ವಲಸಿಗರು ಮೂಲದೇಶಕ್ಕೆ ಹೊರಡಬೇಕಾಗುತ್ತದೆ. ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಆಪ್ಘಾನಿಸ್ಥಾನದಲ್ಲಿ ಹಿಂದೂ, ಕ್ರಿಸ್ಛಿಯನ್, ಸಿಖ್, ಬೌದ್ಧ ಮತ್ತು ಜೈನರನ್ನು ಬಿಟ್ಟರೆ ಇರುವುದ್ಯಾರು? ಮುಸ್ಲಿಮರು. ಆ ಮೂರೂ ರಾಷ್ಟ್ರಗಳು ಇಸ್ಲಾಂ ಅನ್ನು ತಮ್ಮ ಸಂವಿಧಾನವಾಗಿ ಸ್ವೀಕರಿಸಿ ರಾಷ್ಟ್ರಗಳಾಗಿ ಮಾನ್ಯತೆ ಪಡೆದದ್ದು. ಅಲ್ಲಿನ ಮುಸ್ಲಿಂ ಸಮುದಾಯಕ್ಕೆ ಸೇರಿದ ಜನರು ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ ಸೇರದ ಕಾರಣ ಎನ್‌ಆರ್‌ಸಿ ಅವರ ಮೇಲೆ ನೇರ ಪರಿಣಾಮ ಬೀರುತ್ತದೆ, ಹಾಗೂ ಅವರನ್ನು ತಮ್ಮ ದೇಶಗಳಿಗೆ ಮರಳುವಂತೆ ಸೂಚಿಸುತ್ತದೆ.

 

ಎನ್‌ಆರ್‌ಸಿ ಯಲ್ಲಿ ಹೆಸರಿರದವರ ಕಥೆ ಏನಾಗ್ತದೆ?
ಮೊತ್ತಮೊದಲನೆಯದಾಗಿ ಎನ್‌ಆರ್‌ಸಿ ಯಲ್ಲಿ ಹೆಸರಿರದವ ಅಕ್ರಮ ವಲಸೆಗಾರ ಅಂತಾ ಗುರುತಿಸಲ್ಪಡುತ್ತಾನೆ. ಅಕ್ರಮ ವಲಸೆಗಾರನಿಗೆ ದೇಶದ ಯಾವ ಯೋಜನೆ ಮತ್ತು ಸಂಪನ್ಮೂಲಗಳ ಮೇಲೂ ಹಕ್ಕಿರುವುದಿಲ್ಲ. ಆದ್ದರಿಂದ ಅವರನ್ನು ತಮ್ಮ ದೇಶಗಳಿಗೆ ಹೊರಡುವಂತೆ ಸೂಚಿಸಲಾಗುತ್ತದೆ. ಆ ದೇಶಗಳೊಂದಿಗೆ ಮಾತುಕಥೆ ನಡೆಸಿ, ಅವರನ್ನು ಆ ದೇಶಗಳ ಸುಪರ್ದಿಗೆ ಒಪ್ಪಿಸಲಾಗುತ್ತದೆ. ಈ ಹಸ್ತಾಂತರ ನಡೆಯುವವರೆಗೆ, ಅವರನ್ನು ಭಾರತ ತನ್ನ ಕಣ್ಗಾವಲಿನಲ್ಲಿ ಇಡುತ್ತದೆ. ಇದಕ್ಕಾಗಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗುತ್ತದೆ. ಆ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಊಟ, ವಸತಿಗಳನ್ನು ಒದಗಿಸಲಾಗುತ್ತದೆ.

ಇದನ್ನು ನಮ್ಮ ಲಿಬರಲ್ಲುಗಳು ಎರಡನೇ ಮಹಾಯುದ್ಧದ ಕಾಲಕ್ಕೆ ಹೋಲಿಸಿ, ಭಯಂಕರ ಚಿತ್ರಣಗಳನ್ನು ಕೊಡುತ್ತಿದ್ದಾರೆ. ಈ ನಿರಾಶ್ರಿತರ ಶಿಬಿರಗಳನ್ನು, ನಾಜಿಗಳ ಕಾನ್ಸಂಟ್ರೇಶನ್ ಕ್ಯಾಂಪುಗಳಿಗೆ ಹೋಲಿಸಿ, ಭಾರತ ಸರ್ಕಾರ ನಿರಾಶ್ರಿತರಿಂದ ಕೆಲಸ ಮಾಡಿಸಿಕೊಳ್ಳುತ್ತದೆಯೇನೋ ಎಂಬಂತೆ ಚಿತ್ರಿಸಲಾಗುತ್ತಿದೆ. ಇವೆಲ್ಲವೂ ಕೆಲಸಕ್ಕೆ ಬಾರದ ಕವಿಗಳ ಕವಿಸಮಯವಷ್ಟೇ. ನಿರಾಶ್ರಿತರ ಶಿಬಿರ ಸರ್ಕಾರೀ ಖರ್ಚಿನಲ್ಲೇ ನಡೆಯುವ ಊಟ, ವಸತಿ ಕೇಂದ್ರವಷ್ಟೇ ಹೊರತು ಬೇರೇನೂ ಅಲ್ಲ.

 

ನನ್ನ ಇಡೀ ಕುಟುಂಬ ಭಾರತಕ್ಕೆ ಸ್ವಾತಂತ್ರ್ಯ ಬಂದನಂತರದಿಂದ ಇಲ್ಲಿಯೇ ಇದೆ. ನನ್ನ ಅಜ್ಜ-ಅಪ್ಪ ಯಾರ ಹೆಸರೂ ಎನ್‌ಆರ್‌ಸಿ ಯಲ್ಲಿ ಇದ್ದಂಗಿಲ್ಲ. ಅವರ ಹುಟ್ಟಿದದಿನಾಂಕದ ಪ್ರಮಾಣಪತ್ರವೂ ನನ್ನ ಹತ್ತಿರವಿಲ್ಲ. ನಾನೂ ನಿರಾಶ್ರಿತನಾಗಬಲ್ಲೆನೇ?
ಯಾರ್ಯಾರ ಹೆಸರು 1951ರ ಎನ್ಆರ್ಸಿಯಲ್ಲಿದೆಯೋ, (ನೀವು ಅಸ್ಸಾಮಿನವರಾದರೆ) ಯಾರ್ಯಾರ ಹೆಸರು 24 ಮಾರ್ಚ್ 1971ರವರೆಗಿನ ಮತಪಟ್ಟಿಯಲ್ಲಿದೆಯೋ, ಮತ್ತವರ ನೇರ ವಂಶಸ್ಥರು ನೇರವಾಗಿ ಹೊಸ ಎನ್‌ಆರ್‌ಸಿ ಯಲ್ಲಿ ನೇರವಾಗಿ ಕಂಡುಬರುತ್ತಾರೆ. ಇದಲ್ಲದೇ (೧) 1966ರ ಜನವರಿ 1 ಮತ್ತು 25 ಮಾರ್ಚ್ 1977ರ ಒಳಗಿನ ದಿನಗಳಲ್ಲಿ ಅಸ್ಸಾಂಗೆ ವಲಸೆಬಂದು ಪ್ರಾದೇಶಿಕ ವಿದೇಶಿಯರ ನೋಂದಣಿ ಅಧಿಕಾರಿಯೆದುರು ಹಾಜರಾಗಿ ಅಕ್ರಮ ವಲಸಿಗನಲ್ಲ ಎಂದು ಪ್ರಮಾಣಿತವಾದವರು ಮತ್ತು (೨) ಅಸ್ಸಾಂ ಬುಡಕಟ್ಟು ಜನಾಂಗಕ್ಕೆ ಸೇರಿದ್ದು ಭಾರತ ಸರ್ಕಾರ ತನ್ನ ನಾಗರೀಕರೆಂದು ಪ್ರಮಾಣೀಕರಿಸಿದ ಎಲ್ಲಾ ಅಸ್ಸಾಮಿಗಳು ಮತ್ತವರ ವಂಶಸ್ಥರು ಕೂಡಾ ಎನ್‌ಆರ್‌ಸಿ ಯೊಳಗೆ ಸೇರಿಕೊಳ್ಳುತ್ತಾರೆ (೩) 24 ಮಾರ್ಚ್ 1971ಕ್ಕೂ ಮುಂಚೆ ಭಾರತ ಸರ್ಕಾರ ಕೊಟ್ಟ ಯಾವುದೇ ನಾಗರೀಕತೆಯ ಪ್ರಮಾಣಪತ್ರಗಳನ್ನು ಒದಗಿಸಬಲ್ಲ ಜನರು (೪) ‘ಅಸ್ಸಾಂನ ಮೂಲಜನ’ರೆಂದು ಗುರುತಿಸಲ್ಪಟ್ಟ ಎಲ್ಲಾ ಟೀ ಬುಡಕಟ್ಟುಗಳಿಗೆ ಸೇರಿದ ಜನರು ಕೂಡಾ ಎನ್‌ಆರ್‌ಸಿ ಯೊಳಗೆ ಸ್ವಾಭಾವಿಕವಾಗಿ ಸೇರಿಕೊಳ್ತಾರೆ.

ಆದರೆ ಒಂದು ವಿಷಯ ತಿಳಿದಿರಿ. ನೀವು ಹಿಂದೂವಾಗಿರಿ, ಮುಸ್ಲಿಮರಾಗಿರಿ, ಬೇರೆ ಯಾವುದೇ ಧರ್ಮದವರಾಗಿರಿ ಎನ್‌ಆರ್‌ಸಿ ಎಲ್ಲರಿಗೂ ಏಕರೂಪದಲ್ಲಿ ಅನ್ವಯವಾಗುತ್ತದೆ. CAAನಲ್ಲಿದ್ದಂತೆ, ಎನ್‌ಆರ್‌ಸಿ ಯಲ್ಲಿ ಯಾವುದೇ ಧರ್ಮದವರಿಗೆ ವಿಶೇಷ ಸ್ಥಾನಮಾನಗಳಿಲ್ಲ. ನಿಮ್ಮಜ್ಜನ ಹೆಸರು 1971ರ ಮತಪಟ್ಟಿಯಲ್ಲಿದ್ದು (1971ರ ನಂತರ ಒಂದಾದರೂ ಮತ ಚಲಾಯಿಸಿದ್ದರೆ ಇದು ತಾನೇತಾನಾಗಿ ನಿರೂಪಿತವಾಗುತ್ತದೆ), ಅವರು ನಿಮ್ಮಜ್ಜ ಅಂತಾ ನೀವು ನಿರೂಪಿಸಬಲ್ಲಿರಾದರೆ ನೀವೂ ಎನ್‌ಆರ್‌ಸಿ ಯಲ್ಲಿದ್ದೀರ.

CAAಪ್ರಕಾರ ಒಂದು ಧರ್ಮದವರಿಗೆ ಭಾರತದ ನಾಗರೀಕರಾಗುವ ಅವಕಾಶವಿಲ್ಲದಿರುವುದು ಹೌದು. CAA ಹೊರದೇಶಗಳಿಂದ ಬಂದವರಿಗೆ ಅನ್ವಯವಾಗುವಂತದ್ದು. ಭಾರತದವರಿಗಲ್ಲ, ಆ ದೇಶಗಳಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರಿಂದ ಕಷ್ಟ ಅನುಭವಿಸಿಬಂದ ಯಾವುದೇ ಧರ್ಮದವರಿಗೆ ಭಾರತ ಕೊಡುತ್ತಿರುವ ಸ್ವಾಗತ ಅದು. ‘ಅತಿಥಿ ದೇವೋಭವ’ ಎಂಬುದನ್ನು ನಂಬಿದ ಭಾರತದ ಯಾವ ಧರ್ಮದವರಿಗೂ ಇದರಿಂದ ನೋವಾಗಕೂಡದು. ಯಾಕೆಂದರೆ ಯಾವುದೇ ಭಾರತೀಯ ನಾಗರಿಕನಿಗೆ ಇದರಿಂದ ಕಷ್ಟ-ನಷ್ಟಗಳಿಲ್ಲ.

ಎನ್‌ಆರ್‌ಸಿ ಭಾರತದೊಳಗುರುವವರಿಗೆ ಅನ್ವಯವಾಗವಂತದ್ದು. ಇಲ್ಲಿ ಯಾವುದೇ ಧರ್ಮಕ್ಕೆ ವಿಶೇಷ ಪ್ರಾವಧಾನ ಕೊಡದೇ “ಭಾರತದ ನಾಗರಿಕರ್ಯಾರು?” ಅಂತಾ ಗುರುತಿಸುವ ಕೆಲಸವಷ್ಟೇ. ಸರ್ಕಾರ ಕೇಳುತ್ತಿರುವ, ಸರ್ಕಾರವೇ ನಿಮಗೆ ಕೊಟ್ಟ ಕೆಲವೇ ಕೆಲ ಸರ್ಕಾರೀ ದಾಖಲೆಗಳನ್ನು ತೋರಿಸಿದರೆ ಸಾಕು, ನೀವು ಎನ್‌ಆರ್‌ಸಿ ಯಲ್ಲಿ ಸೇರಿಕೊಳ್ಳುತ್ತೀರ. ಅದರಲ್ಲೇನು ಅಮೇರಿಕದ ಏರ್ಪೋರ್ಟಿನಲ್ಲಿ ಮುಸ್ಲಿಮನೊಬ್ಬನ ಗಡ್ಡನೋಡಿ “ಬದಿಗೆ ಬನ್ನಿ ಪ್ಲೀಸ್” ಅಂತಾ ಕರೆದಂತೆ, ಭಾರತದ ಸರ್ಕಾರೀ ಅಧಿಕಾರಿಯೊಬ್ಬ ಕರೆಯುವ ಸಾಧ್ಯತೆಗಳಿಲ್ಲ. ಅಥವಾ ಬ್ರಾಹ್ಮಣನೊಬ್ಬನ ಜನಿವಾರ ನೋಡಿ ಯಾವ ದಾಖಲೆಯನ್ನೂ ಪರಿಶೀಲಿಸದೆ “ಇವನಿಗೆ ಎನ್‌ಆರ್‌ಸಿ ಯೊಳಗೆ ಸೇರಿಸ್ರೀ” ಅಂತಾ ಆದೇಶ ನೀಡುವ ಸಾಧ್ಯತೆಯೂ ಇಲ್ಲ. ಆಧಾರ್ ಕಾರ್ಡ್ ಮಾಡಿಸಿದವರಿಗೆ ಇವೆಲ್ಲದರ ಅನುಭಾವ ಇದ್ದೇ ಇರುತ್ತದೆ. ಭಾರತೀಯ ಮೊದಲೆಂದಿಗಿಂತಲೂ ಇಂದು ಹೆಚ್ಚು ಸಶಕ್ತ ಮತ್ತು ಬುದ್ಧಿವಂತ. ಅವನಿಗೆ ಇವ್ಯಾವುದೋ ತಲೆಬಿಸಿಯೇ ಅಲ್ಲ.

 

CAAಯಿರಬಹುದು, ಎನ್‌ಆರ್‌ಸಿ ಯಿರಬಹುದು ಹೆಚ್ಚಿನ ವಿಷಯಗಳು ಸ್ಪಷ್ಟವಾಗಿಯೇ ಇವೆ. ಒಂದೆರಡು ವಿಚಾರಗಳು ತಾಂತ್ರಿಕವಾಗಿ ಕ್ಲಿಷ್ಟವಾಗಿದ್ದಿರಬಹುದಷ್ಟೇ. ಅದನ್ನೂ ಸಹ ಸರ್ಕಾರ ಸಾಧ್ಯವಾದಷ್ಟರಮಟ್ಟಿಗೆ ಪರಿಹರಿಸಿದೆ. ಆದರೆ ಏನನ್ನೂ ಓದದೇ, ತಿಳಿಯದೇ ಕೇವಲ ಮೋದಿ-ಶಾ-ದೋವಲ್ ಅನ್ನೋ ಹೆಸರಿಡುಕೊಂಡು ಪ್ರತಿಭಟಿಸುವವರ ಸಂಖ್ಯೆ ಇವತ್ತಿನಮಟ್ಟಿಗೆ ದೊಡ್ಡದೇ ಇದೆ. ಅವರ ವಾದಗಳನ್ನು ಕೇಳಿ ಏನನ್ನೂ ಪರಿಶೀಲಿಸದೇ, ಪರಿಶೋಧಿಸದೇ ಅವನ್ನು ಒಪ್ಪುವ ಕುರಿಗಳ ಹಿಂಡೇ ನಮ್ಮಲ್ಲಿದೆ. ಅಭಿವ್ಯಕ್ತಿಸ್ವಾತಂತ್ರ್ಯದ ಗುರಾಣಿಯಡಿಯಲ್ಲಿ ಅಡಗಿಕೊಂಡು “ಅಯ್ಯಯ್ಯೋ ದೇಶದ ಮುಸ್ಲಿಮರೆಲ್ಲಾ ಪಾಕಿಸ್ಥಾನಕ್ಕೋ, ಬಾಂಗ್ಲಾದೇಶಕ್ಕೋ ಹೋಗಬೇಕಂತೆ”, “ಬಿಜೆಪಿ ಭಾರತವನ್ನು ಹಿಂದೂರಾಷ್ಟ್ರ ಮಾಡುತ್ತದಂತೆ” ಅಂತೆಲ್ಲಾ ಹೆದರಿಸಿ ಜನರ ಮೇಲೆ ಜಿರಳೆ ಎಸೆಯುವ ಕೆಲಸ ಮಾಡುವ ಪಾಪಿಗಳನ್ನು ಹಿಡಿದು ಕಡುವಾಗಿ ಶಿಕ್ಷಿಸಬೇಕು.

One comment on “ಹಿಂದೆ ಗೊತ್ತಿಲ್ಲ, ಮುಂದೆ ಗೊತ್ತಿಲ್ಲ….ಹೋರಾಟಗಳೇ ಊರತುಂಬೆಲ್ಲಾ

I truly love your website.. Pleasant colors & theme.
Did you build this site yourself? Please reply back as I’m trying to
create my very own website and would like to learn where you got this from
or exactly what the theme is called. Many thanks!

Reply

Leave a Reply

Your email address will not be published. Required fields are marked *