Tuesday, 16 April, 2024

ಸಾವಿಗೆ ‘ಸುಳ್ಳು’ ಹೇಳಿದ ‘ಲೈ’ಟೋಲ್ಲರ್

Share post

ಜೇಮ್ಸ್ ಕ್ಯಾಮರೂನನ ಟೈಟಾನಿಕ್ ನೆನಪಿದ್ಯಾ? “ಎಂತಾ ಮೂರ್ಖ ಪ್ರಶ್ನೆ. ಆ ಚಿತ್ರವನ್ನು ನೋಡಿದವರು ಯಾರಾದರೂ ಅದನ್ನು ಮರೆಯುವ ಸಾಧ್ಯತೆ ಬಹಳವೇ ಕಡಿಮೆ” ಅಂತೀರಾ. ಹೌದು, ಅಷ್ಟು ಅಚ್ಚುಕಟ್ಟಾಗಿ ನಿರ್ಮಿಸಿದ ಅರೆಸತ್ಯ ಅರೆಕಾಲ್ಪನಿಕ ಚಿತ್ರವದು. ಅರೆಕಾಲ್ಪನಿಕ ಯಾಕಂದಿರಾ? ಚಿತ್ರದ ಜೀವಾಳವಾದ ಜಾಕ್ ಮತ್ತು ರೋಸ್ ಕಥೆ ಕಾಲ್ಪನಿಕವಾದ್ದರಿಂದ. ಅದು ಬಿಟ್ಟರೆ ಉಳಿದದ್ದೆಲ್ಲಾ ನಿಜವೇ. ಅದನ್ನೇ ಬಿಟ್ಟರೆ ಇನ್ನೇನು ಉಳೀತು ಅಂದಿರಾ? ಇಡೀ ಟೈಟಾನಿಕ್ ಮುಳುಗಿದ ಕಥೆ ಉಳೀತಲ್ಲ ಸ್ವಾಮೀ!! ಅದಂತೂ ನಿಜವೇ ತಾನೇ! ಟೈಟಾನಿಕ್ ನೆನಪಿದೆ ಅಂತಾದ್ರೆ, ಅದರಲ್ಲಿ ಬರುವ ಚಾರ್ಲ್ಸ್ ಲೈಟೋಲ್ಲರ್ ಎಂಬ ಪಾತ್ರ ನೆನಪಿದೆಯಾ? ಇರಲಿಕ್ಕಿಲ್ಲ, ಅಷ್ಟು ದೊಡ್ಡ ಪಾತ್ರವರ್ಗವಿರುವ ಆ ಸಿನಿಮಾದಲ್ಲಿ ಒಂದು ಪಾತ್ರ ನೆನಪಿರುವುದು ಸ್ವಲ್ಪ ಕಷ್ಟವೇ ಬಿಡಿ. ನಿಮಗೆ ಸ್ವಲ್ಪ ನೆನಪು ಮಾಡಿಸೋಣ. ಟೈಟಾನಿಕ್ ಐಸ್-ಬರ್ಗ್’ಗೆ ಡಿಕ್ಕಿ ಹೊಡೆದ 14 April 1912ರ ದುರಂತರಾತ್ರಿಯಂದು, ಹಡಗಿನ ಬ್ರಿಡ್ಜಿನಲ್ಲಿ (ಹಡಗಿನ ನಿಯಂತ್ರಣ ಕೊಠಡಿಗೆ ‘ಬ್ರಿಡ್ಜ್’ ಅನ್ನುತ್ತಾರೆ) ಕ್ಯಾಪ್ಟನ್ ಸ್ಮಿತ್ ಸಂಜೆಯ ಪಾಳಿ ಮುಗಿಸಿ ತನ್ನೊಬ್ಬ ಸಹಾಯಕನೊಂದಿಗೆ ಮಾತನಾಡುವ ಒಂದು ಸೀನ್ ಇದೆ. ಆ ಸಹಾಯಕ “ಸಮುದ್ರ ಎಷ್ಟು ಶಾಂತವಾಗಿದೆ ಅಲ್ವಾ?” ಅಂತಾ ಕೇಳ್ತಾನೆ. ಸ್ಮಿತ್ ಅದಕ್ಕುತ್ತರವಾಗಿ “ಹೌದು, ಪ್ರಶಾಂತ ಕೊಳದಂತಿದೆ. ಗಾಳಿಯ ಉಸಿರೇ ಇಲ್ಲ” ಎನ್ನುತ್ತಾನೆ. ಅದಕ್ಕೆ ಆ ಸಹಾಯಕ “ಅದೇ ತೊಂದರೆ, ಇಷ್ಟೊಂದು ಪ್ರಶಾಂತವಾಗಿದ್ದರೆ ಐಸ್ಬರ್ಗ್’ಗಳು ಇರೋದೇ ಗೊತ್ತಾಗುವುದಿಲ್ಲ. ಅವಕ್ಕೆ ಅಪ್ಪಳಿಸಿ ಹಿಂದಿರುಗಿದ ನೀರಿನ ಅಲೆಗಳಾದ್ರೂ ಕಂಡರೆ, ಕೆಲಸ ಸುಲಭ. ಇಷ್ಟೊಂದು ಪ್ರಶಾಂತವಾಗಿದ್ದರೆ…” ಎನ್ನುತ್ತಾನೆ. ಸ್ಮಿತ್ ಆ ರಾತ್ರಿಯ ಕೆಲಸವನ್ನು ಆ ಸಹಾಯಕನಿಗೆ ವಹಿಸಿಕೊಟ್ಟು “Maintain the speed and heading” ಅಂತಾ ಹೇಳಿ ಮಲಗಲಿಕ್ಕೆ ಹೋಗ್ತಾನೆ.

ಟೈಟಾನಿಕ್ ಚಿತ್ರದಲ್ಲಿ “Maintain Speed and Heading” ಎಂದು ಕ್ಯಾಪ್ಟನ್ ಸ್ಮಿತ್ ಸೆಕೆಂಡ್ ಆಫೀಸರ್ ಚಾರ್ಲ್ಸ್’ಗೆ ಹೇಳುತ್ತಿರುವ ದೃಶ್ಯ

ನೆನಪಾಯ್ತಾ, ಇಲ್ಲವಾ? ಹೋಗಲಿ ಇನ್ನೊಂದು ಸೀನ್ ನೆನಪಿಸ್ತೇನೆ. ಹಡಗು ಮುಳುಗುತ್ತಾ ಇದೆ. ಸಿಬ್ಬಂದಿಗಳು ಪ್ರಯಾಣಿಕರನ್ನು ಲೈಫ್-ಬೋಟುಗಳಿಗೆ ಹತ್ತಿಸ್ತಾ ಇದ್ದಾರೆ. ಅದರಲ್ಲೊಂದು ಕಡೆ ಒಬ್ಬ ಸಿಬ್ಬಂದಿ “ಹೆಂಗಸರು ಮತ್ತು ಮಕ್ಕಳು ಮಾತ್ರ. ಮುಂದೆ ಬನ್ನಿ….ಹೆಂಗಸರು ಮತ್ತು ಮಕ್ಕಳು ಶಾಂತರೀತಿಯಲ್ಲಿ ಮುಂದೆ ಬಂದು ಬೋಟ್ ಹತ್ತಿ” ಎನ್ನುತ್ತಿರುತ್ತಾನೆ. ಅಲ್ಲೊಂದಷ್ಟು ಜನ ಗಂಡಸರು ಗಲಾಟೆಮಾಡಿ ಬೋಟ್ ಹತ್ತಲು ಪ್ರಯತ್ನಿಸುವಾಗ ಜೇಬಿನಿಂದ (ಗುಂಡೇ ಇಲ್ಲದ) ಪಿಸ್ತೂಲು ತೆಗೆದು “ಯಾವನಾದ್ರೂ ಮುಂದೆ ಬಂದ್ರೆ ನಾಯಿಗಳನ್ನ ಶೂಟ್ ಮಾಡಿದಂತೆ ನಿರ್ದಾಕ್ಷಿಣ್ಯವಾಗಿ ಶೂಟ್ ಮಾಡಿಬಿಡ್ತೀನಿ. ಶಾಂತವಾಗಿರಿ, ಶಿಸ್ತಿನಲ್ಲಿರಿ. ಮಿ. ಲೋವ್, ಬೋಟ್ ನೀರಿಗಿಳಿಸಿ ಹೊರಡಿ” ಅಂತಾನೆ. ಈಗಾದ್ರೂ ನೆನಪಾಗಿರಬೇಕು. ಈಗ್ಲೂ ನೆನಪಾಗಲಿಲ್ಲವೆಂದರೆ ಇನ್ನೊಮ್ಮೆ ಸಿನಿಮಾ ನೋಡಿ 🙂

ಟೈಟಾನಿಕ್ ಚಿತ್ರದಲ್ಲಿ ಚಾರ್ಲ್ಸ್ ಲೈಟೋಲ್ಲರ್’ನ ಪಾತ್ರವಹಿಸಿದ ನಟ ಜೋನಾಥನ್ ಫಿಲಿಪ್ಸ್

ವಿಷಯ ಏನೆಂದರೆ ಮೇಲಿನ ಎರಡೂ ಸೀನುಗಳಲ್ಲಿ ಕಂಡುಬರುವ ವ್ಯಕ್ತಿ ಒಬ್ಬನೇ. ಅವನ ಹೆಸರು ಚಾರ್ಲ್ ಹರ್ಬರ್ಟ್ ಲೈಟೋಲ್ಲರ್ (Charles Herbert Lightoller). ಈತ ಟೈಟಾನಿಕ್’ನಲ್ಲಿ ಸೆಕೆಂಡ್ ಆಫೀಸರ್ ಆಗಿದ್ದವ. ಸೆಕೆಂಡ್ ಆಫೀಸರ್ ಅಂದರೆ ಸಮುದ್ರಯಾನದ ಪರಿಭಾಷೆಯಲ್ಲಿ ಕ್ಯಾಪ್ಟನ್ ಮತ್ತು ಫಸ್ಟ್ ಆಫೀಸರ್ ನಂತರದ ಮುಖ್ಯವ್ಯಕ್ತಿ. ಈ ಲೈಟೋಲ್ಲರನ ಜೀವನವೇ ಒಂದು ಸಾಹಸಗಾಥೆ. ಹೈಸ್ಕೂಲು ಮುಗಿಸಿದನಂತರ ಸಮುದ್ರಪ್ರಯಾಣದ ಹುಚ್ಚುಹತ್ತಿಸಿಕೊಂಡ ಚಾರ್ಲ್ಸ್ ಹಡಗುಕಂಪನಿಗಳೊಂದಿಗೆ ಕೆಲಸಮಾಡುವ ನೆಪದಲ್ಲಿ ಕೆನಡಾದಲ್ಲೆಲ್ಲೋ ಚಿನ್ನಹುಡುಕುತ್ತಾ, ಆಫ್ರಿಕಾದಲ್ಲಿ ಮಲೇರಿಯಾದೊಂದಿಗೆ ಹೋರಾಡುತ್ತಾ, ಭಾರತದಲ್ಲಿ ಶಾರ್ಕ್ ಜೊತೆಗೆ ಕುಸ್ತಿಯಾಡುತ್ತಾ ಎಲ್ಲೆಲ್ಲೋ ತಿರುಗುತ್ತಾ ಹತ್ತಾರುರೀತಿಯ ಕೆಲಸಮಾಡಿ, ಕೊನೆಗೆ 1910ರಲ್ಲಿ ಅಂದಿನಕಾಲಕ್ಕೆ ಮುಳುಗಲು ಸಾಧ್ಯವೇ ಇಲ್ಲದ ಹಡಗು ಎಂಬ ಪ್ರಸಿದ್ಧಿಯ ಟೈಟಾನಿಕ್ ಒಡೆತನದ ವೈಟ್ ಸ್ಟಾರ್ ಲೈನ್ ಎಂಬ ಹಡಗುಕಂಪನಿಗೆ ಕೆಲಸಕ್ಕೆ ಸೇರಿದ. ಟೈಟಾನಿಕ್ ಮುಳುಗಿದಾಗ ಬದುಕುಳಿದ ವ್ಯಕ್ತಿಗಳಲ್ಲಿ ಇವನೂ ಒಬ್ಬ. ಹಡಗಿನ ಸಿಬ್ಬಂದಿಗಳ ಲೆಕ್ಕದಿಂದ ನೋಡಿದರೆ, ಬದುಕುಳಿದ ಸಿಬ್ಬಂದಿಗಳಲ್ಲಿ ಅತೀ ಹಿರಿಯ ವ್ಯಕ್ತಿ (ವಯಸ್ಸಿನಲ್ಲಲ್ಲ, ಹುದ್ದೆ ಮತ್ತು ಸ್ಥಾನಮಾನದ ಲೆಕ್ಕದಲ್ಲಿ) ಇವನೇ. ಹಾಗಂತ ಇವನೇನೂ ಸುಲಭವಾಗಿ ಬೋಟಿನಲ್ಲಿ ಕೂತು ಬದುಕಲಿಲ್ಲ. ಕೊನೆಯಕ್ಷಣದತನಕವೂ ಲೈಫ್-ಬೋಟುಗಳಲ್ಲಿ ಹೆಂಗಸರು ಮತ್ತು ಮಕ್ಕಳು ಮಾತ್ರವೇ ಕೂರಬೇಕೆಂಬ ನಿಯಮವನ್ನು ತನ್ನಕೈಲಾದಷ್ಟೂ ಜಾರಿಗೊಳಿಸದವನೇ ಈತ. ತನ್ನ ಕರ್ತವ್ಯ ನಿರ್ವಹಿಸುತ್ತಲೇ ಹಡಗಿನೊಂದಿಗೆ ತಾನೂ ಸಮುದ್ರದಲ್ಲಿ ಮುಳುಗಿಯೂ ಬಿಟ್ಟ. ಅದೃಷ್ಟವೋ ಅಥವಾ ದೈವನಿಯಾಮಕವೋ, ಆತ ಮುಳುಗಿದ ಕೆಲ ಕ್ಷಣದಲ್ಲೇ ಹಡಗಿನ ಬಾಯ್ಲರ್ ಸ್ಫೋಟಗೊಂಡು ಉಕ್ಕೇರಿದ ಆವಿಯ ಅಲೆಯೊಂದಿಗೆ ತಾನೂ ನೀರಿನ ಮೇಲ್ಮಟ್ಟಕ್ಕೆ ಎಸೆಯಲ್ಪಟ್ಟ. ಕೋಟಿನಲ್ಲಿದ್ದ ರಿವಾಲ್ವರಿನ ಭಾರಕ್ಕೆ ಮತ್ತೆ ಕೆಳಕ್ಕೆಳೆದಂತಾದರೂ, ತಕ್ಷಣ ರಿವಾಲ್ವರ್ ಬಿಸಾಕಿ, ಅಡಿಮೇಲಾಗಿತೇಲುತ್ತಿದ್ದ ಮರದ ತೇಲೊಡ್ಡೊಂದನ್ನು (raft) ಹಿಡಿದುಕೊಂಡು, ಮತ್ತೊಂದಷ್ಟುಜನರನ್ನೂ ಅದರಲ್ಲಿ ಬಚಾಯಿಸಿಕೊಂಡು ಬದುಕುಳಿದ.

 

ಟೈಟಾನಿಕ್ ದುರಂತದ ವಿಚಾರಣೆಯಲ್ಲಿ ಉತ್ತಮ ರೆಕಮೆಂಡೇಶನ್ ಪಡೆದು ಹೊರಬಂದ ಲೈಟೋಲ್ಲರ್ 1913ರಲ್ಲಿ ಬ್ರಿಟಿಷ್ ನೌಕಾದಳ ಸೇರಿದ. ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿ ಬಹಳಷ್ಟು ಸಾಹಸಕಾರ್ಯಾಚರಣೆಗಳಲ್ಲಿ ಭಾಗಿಯಾಗಿ, ಹತ್ತಾರು ಮೆಡಲುಗಳನ್ನೂ ಪಡೆದ. 1 ಏಪ್ರಿಲ್ 1918ರಂದು ಇವನ ನಾಯಕತ್ವದಲ್ಲಿದ್ದ ಫಾಲ್ಕನ್ ಹಡಗು ಅಪಘಾತಕ್ಕೀಡಾಗಿ ಮುಳುಗಿದ್ದಕ್ಕೆ ಕೋರ್ಟ್ ಮಾರ್ಷಲ್ ನಡೆದರೂ, ಕಟ್ಟಕೊನೆಯ ಸಿಬ್ಬಂದಿ ಹೊರಬರುವತನಕವೂ ಹಡಗನ್ನುಬಿಡದೇ ನಿಂತಿದ್ದಕ್ಕಾಗಿ ಮಿಲಿಟರಿಕೋರ್ಟಿನಿಂದ ಶಹಬ್ಬಾಷ್ ಎನಿಸಿಕೊಂಡ. ಬಡ್ತಿಪಡೆದು HMS Garry ಎಂಬ ಟಾರ್ಪಿಡೋ ಬಾಂಬರ್ ಡೆಸ್ಟ್ರಾಯರ್ ನೌಕೆಗೆ ನಾಯಕನಾಗಿ, UB-110 ಹೆಸರಿನ ಜರ್ಮನ್ ಸಬ್-ಮರೀನನ್ನು ಮುಳುಗಿಸಿಯೂಬಿಟ್ಟ. 1919ರಲ್ಲಿ ಕಮಾಂಡರ್ ಹುದ್ದೆಯವರೆಗೆ ತಲುಪಿ, ನಿವೃತ್ತಿ ಪಡೆದು, ತನ್ನ ಹಳೆಯ “ವೈಟ್ ಸ್ಟಾರ್ ಲೈನ್” ಕಂಪನಿಗೆ ಮರಳಿದ. ಅಲ್ಲಿ ಹೆಚ್ಚಿನ ಕೆಲಸಗಳೇನೂ ಕೈಗೂಡಿಬರದೇ ಬಹಳಷ್ಟುಕಾಲ ಗ್ರೌಂಡ್-ಡ್ಯೂಟಿಯಲ್ಲೇ ಇದ್ದ. ನಿಧಾನಕ್ಕೆ ಅವನಿಗೆ ‘ಟೈಟಾನಿಕ್ ಸಿಬ್ಬಂದಿಗಳಾಗಿದ್ದವರನ್ನು ಒಂದುರೀತಿ ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಆ ಮುಳುಗಿದ ಹಡಗಿನಲ್ಲಿ ಕೆಲಸಮಾಡಿದವರನ್ನು ಒಂದುರೀತಿ ಅಪಶಕುನವೆಂಬಂತೆ ಪರಿಗಣಿಸಿ ಬೇರೆಯಾವುದೇ ಹಡಗಿನ ಸೇವೆಗೆ ನೇಮಕಮಾಡುತ್ತಿರಲಿಲ್ಲ’ ಎಂಬುದು ಅರಿವಿಗೆ ಬಂತು. ಬೇಸರಗೊಂಡು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಕೋಳಿಸಾಕಣೆ, ಸೆಕ್ಯೂರಿಟಿ, ರಿಸೆಪ್ಷನಿಸ್ಟ್, ಸಟ್ಟಾಬಾಜಿ ವ್ಯಾಪಾರಿ ತರಹದ ಸಣ್ಣಪುಟ್ಟಕೆಲಸಗಳಲ್ಲಿ ತೊಡಗಿಸಿಕೊಂಡ.

ಥರ್ಡ್ ಆಫೀಸರ್ ಹರ್ಬರ್ಟ್ ಪಿಟ್ಮನ್(ಎಡದಲ್ಲಿ) ಜೊತೆಗೆ ಟೈಟಾನಿಕ್ ಮುಳುಗಡೆಯ ವಿಚಾರಣೆಗೆ ಹಾಜರಾಗುತ್ತಿರುವ ಚಾರ್ಲ್ಸ್ (ಬಲ)

1930ರಲ್ಲಿ ‘Titanic and Other ships’ ಎಂಬ ಆತ್ಮಕಥೆಯನ್ನೂ ಬರೆದ. ಮೊದಲಿಗೆ ಚೆನ್ನಾಗಿಯೇ ಮಾರಾಟವಾದ ಪುಸ್ತಕವನ್ನು ‘ಮಾರ್ಕೋನಿ ಕಂಪನಿ’ಯವರ ಕಾನೂನುಬೆದರಿಕೆಯ ಕಾರಣದಿಂದ ಮಾರುಕಟ್ಟೆಯಿಂದಲೇ ಹಿಂಪಡೆಯಲಾಯ್ತು. ಟೈಟಾನಿಕ್ ಮುಳುಗಿದ ಕಾಲದಲ್ಲಿ ಹಡಗಿನ ರೇಡಿಯೋ ಜವಾಬ್ದಾರಿ ಹೊತ್ತಿದ್ದ ಮಾರ್ಕೋನಿ ಕಂಪನಿಯ ಆಪರೇಟರುಗಳ ಮೇಲೆ ಲೈಟೋಲ್ಲರ್ ಕೆಲ ಟೀಕಾಟಿಪ್ಪಣಿಗಳನ್ನು ಮಾಡಿದ್ದ. ಏಪ್ರಿಲ್ 14ರ ಸಂಜೆಹೊತ್ತಿಗೆ ಟೈಟಾನಿಕ್ಕಿಗಿಂತಾ ಮುಂದೆ ಪಯಣಿಸುತ್ತಿದ್ದ ಎಸ್ಎಸ್ ಕ್ಯಾಲಿಫೋರ್ನಿಯಾದ ಹಡಗಿನ ಸಿಬ್ಬಂದಿ ದೊಡ್ಡ ಮಂಜುಬಂಡೆಗಳು ಟೈಟಾನಿಕ್ ಹಾದಿಯಲ್ಲೇ ತೇಲುತ್ತಿರುವ ಬಗ್ಗೆ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸಿದ್ದರು. ಆದರೆ ಅವು ಟೈಟಾನಿಕ್ಕಿನ ಕ್ಯಾಪ್ಟನ್ ಕೈಸೇರಲೇ ಇಲ್ಲ. ಶ್ರೀಮಂತಪ್ರಯಾಣಿಕರ ಸಂದೇಶವಾಹನೆಗಾಗಿ ಟೈಟಾನಿಕ್’ನಲ್ಲಿ ರೇಡಿಯೋ ಉಪಕರಣವನ್ನು ಸ್ಥಾಪಿಸಿದ್ದು ಮತ್ತು ಅದನ್ನು ನಿರ್ವಹಿಸುತ್ತಿದ್ದದ್ದು ಮಾರ್ಕೋನಿ ಕಂಪನಿ. ಅಂದಿನ ರೇಡಿಯೋ ಪಾಳಿಯಲ್ಲಿದ್ದ ಮಾರ್ಕೋನಿಯ ಸಿಬ್ಬಂದಿ, ಪ್ರಯಾಣಿಕರ ಖಾಸಗೀಸಂದೇಶಗಳನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದರಲ್ಲಿ ಎಷ್ಟು ಕಾರ್ಯನಿರತವಾಗಿದ್ದನೆಂದರೆ, ಆತ ಎಸ್ಎಸ್  ಕ್ಯಾಲಿಫೋರ್ನಿಯಾದ ಸಂದೇಶಗಳನ್ನು ಸ್ವೀಕರಿಸಲೇ ಇಲ್ಲ. ಎಸ್ಎಸ್ ಕ್ಯಾಲಿಫೋರ್ನಿಯಾ ಇನ್ನಷ್ಟುಬಾರಿ ಪ್ರಯತ್ನಿಸುತ್ತಾ ಅಂತಿಮಸಂದೇಶ ಕಳುಹಿಸಿದಾಗ, ಮಾರ್ಕೋನಿ ಕಂಪನಿಯ ಕೆಲಸಗಾರ ಕೋಪಗೊಂಡು “ಬಾಯ್ಮುಚ್ಚು ಮಾರಾಯ. ನಾನಿಲ್ಲಿ ಭಯಂಕರ ಬ್ಯುಸಿಯಾಗಿದ್ದೇನೆ” ಎಂದು ಬೈದು ಮರುತ್ತರಕಳಿಸಿದ್ದನಂತೆ. ಲೈಟೋಲ್ಲರ್ ತನ್ನ ಪುಸ್ತಕದಲ್ಲಿ, ಮಾರ್ಕೋನಿಕಂಪನಿ(ಯ ಸಿಬ್ಬಂದಿ) ಆ ತಪ್ಪನ್ನು ಮಾಡದಿದ್ದಿದ್ದರೆ, ಟೈಟಾನಿಕ್’ನ ಕಥೆಯೇ ಬದಲಾಗುತ್ತಿತ್ತು ಎಂದು ಬರೆದಿದ್ದರಿಂದ, ಟೈಟಾನಿಕ್ ಮುಳುಗಲು ನಾವೇ ಕಾರಣ ಎಂದು ಪರೋಕ್ಷವಾಗಿ ಆರೋಪ ಹೊರಿಸುತ್ತಿದ್ದಾನೆ ಎಂದು ಮಾರ್ಕೋನಿ ಕಂಪನಿ ಕೋಪಗೊಂಡಿತ್ತು. ಈ ಕಥೆಯಿಂದಾಗಿ ಲೈಟೋಲ್ಲರ್’ನ ಪುಸ್ತಕದ ವರಮಾನವೂ ಕಡಿಮೆಯಾಯ್ತು.

ಲೈಟೊಲ್ಲರ್ ಬರೆದ ಪುಸ್ತಕ “Titanic and Other Ships”

ಇಷ್ಟೆಲ್ಲಾ ಆದರೂ ಲೈಟೋಲ್ಲರ್’ನ ಸಮುದ್ರಪ್ರೀತಿ ಎಳ್ಳಷ್ಟೂ ಕಡಿಮೆಯಾಗಲಿಲ್ಲ. ನಿವೃತ್ತಿಯ ಸಮಯದಲ್ಲಿ ಬಂದ ದುಡ್ಡನ್ನೆಲ್ಲಾ ಸುರಿದು Sundowner ಎಂಬಹೆಸರಿನ ಮೋಟರ್-ಬೋಟ್ ಒಂದನ್ನು ಕೊಂಡ. ಎರಡನೇ ಮಹಾಯುದ್ಧ ಪ್ರಾರಂಭವಾದಾಗ ನಾನೂ ಸೈನ್ಯದಲ್ಲಿರಬೇಕಿತ್ತು ಎಂದುಕೊಳ್ಳುತ್ತಿದ್ದ ಲೈಟೋಲ್ಲರ್, ತನ್ನ ಕಿರಿಯಮಗ ಬ್ರಿಯಾನ್ ಮತ್ತು ಎರಡನೇ ಮಕ್ಕಗ ಟ್ರೆವರ್’ರನ್ನು ಸೈನ್ಯದಲ್ಲಿ ಕೆಲಸಮಾಡಲು ಕಳಿಸಿಕೊಟ್ಟಿದ್ದ. ಪೈಲಟ್ ಆಗಿದ್ದ ಕಿರಿಯಮಗ ಬ್ರಿಯಾನ್ ಯುದ್ಧದ ಎರಡನೇ ದಿನದಲ್ಲೇ ತೀರಿಕೊಂಡಿದ್ದ. ಟ್ರೆವರ್ ಭೂಸೇನೆಯಲ್ಲಿ ಸೇವೆಸಲ್ಲಿಸುತ್ತ ಫ್ರಾನ್ಸ್’ನ ಯುದ್ಧಭೂಮಿಯಲ್ಲಿದ್ದ. ಡನ್ಕಿರ್ಕಿನಲ್ಲಿ ಸಿಕ್ಕಿಕೊಂಡಿದ್ದ ಸೈನಿಕರನ್ನು ಬಚಾಯಿಸುವ ಆಪರೇಷನ್ ಡೈನಮೋಗಾಗಿ 31 ಮೇ 1940ರಂದು ಬ್ರಿಟೀಷ್ ಮಿಲಿಟರಿ, ಪ್ರಯಾಣಿಕರು ಕೂರಬಹುದಾದ ಎಲ್ಲಾ ದೋಣಿ ಮತ್ತು ನೌಕೆಗಳನ್ನು ಬ್ರಿಟೀಷ್ ನೌಕಾಪಡೆಗೆ ಹಸ್ತಾಂತರಿಸಲು ಕೋರಿದಾಗ, ಆ ಪಟ್ಟಿಯಲ್ಲಿ ಸನ್‌ಡೌನರ್ ಹೆಸರು‌ ಕೂಡಾ ಇತ್ತು. ತನ್ನ ಬೋಟನ್ನು ಸೈನ್ಯದಸೇವೆಗೆ ಕೊಡಲು ತಯಾರಿದ್ದ ಲೈಟೋಲ್ಲರ್ ಇಟ್ಟಿದ್ದು “ಬೋಟನ್ನು ನಾನೇ ಓಡಿಸಬೇಕು” ಎಂಬ ಒಂದೇ ಶರತ್ತು. ಮರುದಿನ ಜೂನ್ 1ರಂದು, 66 ವರ್ಷದ ಲೈಟೋಲ್ಲರ್ ತನ್ನ ಹಿರಿಯಮಗ ರೋಜರ್, 18ವರ್ಷದ ಸೀಸ್ಕೌಟ್ ಜೆರಾಲ್ಡ್ ಆಷ್ಕ್ರಾಫ್ಟ್ ಜೊತೆಗೂಡಿ ಇಂಗ್ಲೆಂಡಿನ  Ramsgateನಿಂದ ಡನ್ಕಿರ್ಕ್ ಕಡೆಗೆ‌ ಹೊರಟ. ಹನ್ನೆರಡು ಗಂಟೆಗಳ ಪ್ರಯಾಣದನಂತರ, ಡನ್ಕಿರ್ಕ್ ತಲುಪಿ ಕೇವಲ 21 ಜನರನ್ನು ಕೂರಬಹುದಾದ ತನ್ನ ಬೋಟಿನಲ್ಲಿ, 127 ಜನರನ್ನು ತುಂಬಿಸಿಕೊಂಡು ರಾಮ್ಸ್ಗೇಟ್’ಗೆ ಮರಳಿದ. ಮಗ ಬ್ರಿಯಾನ್ ಹೇಳಿಕೊಟ್ಟಿದ್ದ ಕೆಲ ತಂತ್ರಗಳನ್ನುಪಯೋಗಿಸಿ, ಜರ್ಮನ್ ಸ್ಟುಕಾ ಡೈವ್ ಬಾಂಬರ್’ಗಳ ಆಕ್ರಮಣದಿಂದ ತಪ್ಪಿಸಿಕೊಂಡು, ಒಂದೇ ಒಂದು ಜೀವವೂ ಕಳೆದುಹೋಗದಂತೆ ಸನ್-ಡೌನರ್ ರಾಮ್ಸ್ಗೇಟ್ ಬಂದರಿಗೆ ಬಂದಾಗ, ಅದರಿಂದಿಳಿದ ಸೈನಿಕರಸಂಖ್ಯೆ ನೋಡಿ ಆಫೀಸರುಗಳೇ ದಂಗಾಗಿಹೋದರು. ಬೋಟಿನ ಪುಟ್ಟಬಾತ್ರೂಮಿನಲ್ಲಿ ಐದುಜನ, ಕ್ಯಾಬಿನ್ನನಲ್ಲಿ ಎಪ್ಪತ್ತುಜನ, ಡೆಕ್ ಮೇಲೆ ಐವತ್ತೆರಡುಜನರನ್ನು ತುಂಬಿಕೊಂಡು ಬಂದ ಚಾರ್ಲ್ಸ್ ಲೈಟೋಲ್ಲರ್ ಸೈನ್ಯದ ಮೆಚ್ಚುಗೆಗೆ ಪಾತ್ರವಾದ. ತಕ್ಷಣವೇ ಎರಡನೇ ಸುತ್ತಿನ ಪ್ರಯಾಣಕ್ಕೆ ಸಿದ್ದನಾಗಿದ್ದರೂ, ಇಪ್ಪತ್ತು ನಾಟ್’ಗಿಂತ ಹೆಚ್ಚಿನ ವೇಗದ ನೌಕೆಗಳು ಮಾತ್ರಸಾಕೆಂದು ಸೈನ್ಯದವರು ಹೇಳಿದ್ದರಿಂದ ಮರಳಿ ಹೋಗಲಾಗಲಿಲ್ಲ. ಹೀಗೆ ಎರಡನೇ ಮಹಾಯುದ್ಧಕ್ಕೂ ತನ್ನದೊಂದು ಕಾಣಿಕೆ ಸಲ್ಲಿಸಿದ ನಮ್ಮ ಹೀರೋ, ಕ್ರಿಸ್ಟೋಫರ್ ನೋಲನ್‌’ನ 2017ರ ಚಿತ್ರ ಡನ್ಕಿರ್ಕ್‌ನಲ್ಲಿ ಮಿ.ಡಾಸನ್ ಪಾತ್ರಕ್ಕೂ ಸ್ಪೂರ್ತಿಯಾದ. ನೀವೀಗ ಇವನ ನೆನಪಿಗೆ ಆ ಚಿತ್ರವನ್ನೂ ನೋಡಬೇಕು.

ಲೈಟೋಲ್ಲರ್’ನ ಒಡೆತನದಲ್ಲಿದ್ದ ಮೂಲದೋಣಿ Sundowner (ಇದನ್ನೀಗ ಸದ್ಯಕ್ಕೆ ದಕ್ಷಿಣ ಇಂಗ್ಲೆಂಡ್‌ನ ರಾಮ್‌ಸ್ಗೇಟ್ ಮ್ಯಾರಿಟೈಮ್ ಮ್ಯೂಸಿಯಂನಲ್ಲಿ ನಿಲ್ಲಿಸಲಾಗಿದೆ)
ಡನ್ಕಿರ್ಕ್ ಚಿತ್ರದಲ್ಲಿ ಮಿ. ಡಾಸನ್’ರ ದೋಣಿ Moonstone

ಡನ್ಕಿರ್ಕ್ ಚಿತ್ರದಲ್ಲಿ ಲೈಟೋಲ್ಲರನ ಕಥೆಯ ಸ್ಪೂರ್ತಿಯಿಂದ ಬಂದ ಮಿ.ಡಾಸನ್ ಪಾತ್ರವನ್ನು ನಿರ್ವಹಿಸಿದ ಮಾರ್ಕ್ ರೈಲಾನ್ಸ್

ಯುದ್ಧದ ನಂತರ ಲೈಟೋಲ್ಲರ್ ಲಂಡನ್‌ನಲ್ಲಿ ಒಂದು ಸಣ್ಣ ಬೋಟ್‌ಯಾರ್ಡ್ ನಡೆಸುತ್ತಾ, ಪೊಲೀಸರಿಗೆ ದೋಣಿಗಳನ್ನು ನಿರ್ಮಿಸುತ್ತಾ ಕಾಲಕಳೆದ.
8 ಡಿಸೆಂಬರ್ 1952ರಂದು, ತನ್ನ 78ನೇ ವಯಸ್ಸಿನಲ್ಲಿ, ಲಂಡನ್ನು ಅನ್ನು ಆವರಿಸಿದ 1952ರ ಮಹಾ ಮಂಜುಹೊಗೆಯೊಂದಿಗೆ ಹೋರಾಡುತ್ತಾ ತನ್ನ ದೀರ್ಘಕಾಲದ ಹೃದಯಕಾಯಿಲೆಯಿಂದ ನಿಧನನಾದ.

ಟೈಟಾನಿಕ್, ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧದ ಅತ್ಯಂತಮಹತ್ವದ ಘಟನೆಗಳ ಜೊತೆಗೆಲ್ಲಾ ಹೆಸರು ತಳುಕು ಹಾಕಿಕೊಳ್ಳುವ, ಟೈಟಾನಿಕ್ ಮತ್ತು ಡನ್ಕಿರ್ಕ್’ನಂತಹ ಎರಡು ಮಹತ್ವದ ಚಿತ್ರಗಳಲ್ಲಿ ಉಲ್ಲೇಖಪಡೆಯುವ ಅವಕಾಶ ಎಷ್ಟುಜನಕ್ಕೆ ಸಿಗಬಹುದು! ಚಾರ್ಲ್ಸ್ ಹರ್ಬರ್ಟ್ ಲೈಟೋಲ್ಲರ್ ಅದೃಷ್ಟವಂತನೂ, ಉದಾತ್ತನೂ ಜೊತೆಗೆ ರಾಕ್-ಸ್ಟಾರ್ ಕೂಡಾ ಹೌದಲ್ಲವೇ!

(ಒರಿಜಿನಲ್) ಟೈಟಾನಿಕ್’ನಲ್ಲಿ ನಿಂತಿರುವ (ಒರಿಜಿನಲ್) ಚಾರ್ಲ್ಸ್ ಹರ್ಬರ್ಟ್ ಲೈಟೋಲ್ಲರ್
RMS ಟೈಟಾನಿಕ್’ನ ಸಿಬ್ಬಂದಿ.
ಚಾರ್ಲ್ಸ್ ಲೈಟೋಲ್ಲರ್, ಹಿಂದಿನ ಸಾಲು ಎಡದಿಂದ ಎರಡನೆಯವ

One comment on “ಸಾವಿಗೆ ‘ಸುಳ್ಳು’ ಹೇಳಿದ ‘ಲೈ’ಟೋಲ್ಲರ್

ಕಿಶೋರ್

ಎಂಥಾ ರೋಚಕ ಸಂಗತಿ ರಾಘಣ್ಣ!!!

Reply

Leave a Reply

Your email address will not be published. Required fields are marked *