Thursday, 25 April, 2024

ಶೋಡಷಿಯ ಗುರಾಣಿಯ ಹಿಂದೆ ಶೋಷಣೆಯ ಶಸ್ತ್ರ

Share post

(ಶೋಡಷಿ ಎಂಬ ಪದದ ಅರ್ಥ ಹದಿನಾರ ಹರಯದ ಹುಡುಗಿ. ಈ ಪದವನ್ನು ಇಲ್ಲಿ ಪ್ರಾಸಕ್ಕಾಗಿ ಬಳಸಲಾಗಿದೆಯೇ ಹೊರತು, ಯಥಾರ್ಥ ಕಲ್ಪಿಸಿಕೊಳ್ಳಬಾರದಾಗಿ ವಿನಂತಿ 😊)

**************************************

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂಬಮಾತು ಭಾರತದಲ್ಲಿ ಸಾಕ್ಷಾತ್ಕಾರವಾಗಿ ಬಹಳ ಕಾಲವಾಗಿದೆ. ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆಯೆಂದು ನಮ್ಮ ಪೂಜ್ಯಸಾಹಿತ್ಯಗಳು ತಿಳಿಸುತ್ತವೆ. ಭಾರತೀಯಸಂಸ್ಕೃತಿ ಮಹಿಳೆಗೆ ಕೊಟ್ಟ ಪೂಜ್ಯಸ್ಥಾನವನ್ನು ಜಗತ್ತಿನ ಇನ್ಯಾವ ಸಂಸ್ಕೃತಿಯೂ ನೀಡಿರಲಿಕ್ಕಿಲ್ಲ. ನಮ್ಮಲ್ಲಿ ಶಕ್ತಿದೇವತೆಗಳೆಂದರೆ ಸ್ತ್ರೀದೇವತೆಗಳೇ. ಉಮಾಮಹೇಶ್ವರ, ಲಕ್ಷ್ಮೀನಾರಾಯಣ, ಸೀತಾರಾಮ, ಲಕ್ಷ್ಮೀನರಸಿಂಹ, ರಾಧಾಕೃಷ್ಣ ಮುಂತಾದ ದೇವರುಗಳ ಹೆಸರಲ್ಲಿ ಮೊದಲು ರಾರಾಜಿಸುವುದು ಸ್ತ್ರೀನಾಮವೇ!

ಅಭಿವೃದ್ಧಿಹೊಂದಿದ ದೇಶಗಳೆಂದು ಕರೆಯಲ್ಪಡುವ ದೇಶಗಳಲ್ಲಿಯೂ ಸಹ 1920ರ ಆಸುಪಾಸಿವನರೆಗೆ ಹೆಂಗಸರೆಂದರೆ ಕೇವಲ ಮನೆಕೆಲಸಕ್ಕಷ್ಟೇ ಎಂಬಅಭಿಪ್ರಾಯವಿದ್ದದ್ದು. ಎಷ್ಟೋದೇಶಗಳ ಸ್ವಾತಂತ್ರ್ಯಹೋರಾಟದಲ್ಲಿಯೂ ಹೆಂಗಸರಿಗೆ ಜಾಗವಿರಲಿಲ್ಲ, ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವ ಬಂದಮೇಲೂ ಎಷ್ಟೋವರ್ಷಗಳವರೆಗೆ ಹೆಂಗಸರಿಗೆ ಮತದಾನದ ಹಕ್ಕೂ ಇರಲಿಲ್ಲ. ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಮಾತ್ರವಲ್ಲ ಸ್ವಾತಂತ್ರ್ಯಾನಂತರದ ಭಾರತದಲ್ಲೂ ಮೊದಲವೇ ದಿನದಿಂದಲೂ ಹೆಂಗಸರು ಸಮಾನವಾಗಿ ಸ್ವೀಕರಿಸಲ್ಪಟ್ಟರು. ಮಾನವಹಕ್ಕುಗಳ ಮುಂಚೂಣೆಯ ದೇಶವೆಂದು ಕರೆಸಿಕೊಳ್ಳುವ ಬ್ರಿಟನ್ನಿನ ಸಂಸತ್ತಿನಲ್ಲಿ ಹೆಂಗಸರಿಗೆ ಸರಿಯಾದ ಪ್ರಾತಿನಿಧ್ಯ ಕೊಡುವ ನಿಯಮಾವಳಿಗಳಿಗಾಗಿ ಹೆಣಗಾಡುತ್ತಿದ್ದ ಸಮಯದಲ್ಲಿ, ಭಾರತ ಶ್ರೀಲಂಕಾ ಬಾಂಗ್ಲಾದೇಶಗಳಲ್ಲಿ ಸ್ತ್ರೀಪ್ರಧಾನಿಗಳೇ ಬಂದುಹೋದರು.

ನಮ್ಮಲ್ಲಿ 10ನೇ ಶತಮಾನ ಮತ್ತು 14ನೇ ಶತಮಾನದ ನಡುವೆ ಸ್ವಲ್ಪ ಕರಾಳವರ್ಷಗಳಲ್ಲಿ, ಪುರಾಣಸಾಹಿತ್ಯಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಬಹಳಷ್ಟು ಪುರುಷಪ್ರಧಾನ ಆಚರಣೆಗಳು ಮುನ್ನೆಲೆಗೆ ಬಂದದ್ದು ಹೌದು. ಮೊಘಲರ ಆಳ್ವಿಕೆಯೊಂದಿಗೇ ಪರ್ದಾ ಪದ್ದತಿಯೂ, ಅವರ ಕ್ರೌರ್ಯದ ಪರಿಣಾಮವಾಗಿ ಸ್ವಾಭಿಮಾನವೇ ಆಸ್ತಿಯಾಗಿದ್ದ ಪಂಗಡಗಳಲ್ಲಿ ಜೌಹರ್ (ಅಥವಾ ಸತಿಪದ್ದತಿ)ಯೂ ಆಚರಿಸಲ್ಪಡಲಾರಂಭಿಸಿತು. ಇವುಗಳನ್ನೇ ಮುಂದಿಟ್ಟುಕೊಂಡು ಸ್ತ್ರೀಯರ ಹಕ್ಕುಗಳ ಕುರಿತಾದ ಹೋರಾಟಗಳು ರೂಪುಗೊಂಡವು. ಕೆಲಸಗಳಲ್ಲಿ, ಸಂಬಳದಲ್ಲಿ, ಆಡಳಿತದಲ್ಲಿ ಸಮಾನತೆಯ ಹಕ್ಕುಗಳ ಬೇಡಿಕೆಯ ಕೂಗು ಬಲವಾಗಲಾರಂಭಿಸಿತು. 60ರ ದಶಕದಲ್ಲಿ ಪ್ರಾರಂಭವಾದ ಪಶ್ಚಿಮದಲ್ಲಿ ಪ್ರಾರಂಭವಾದ ಈ ಹೋರಾಟಗಳು ಬಲವಾಗಿ ವಿಶ್ವವ್ಯಾಪಿಯಾದವು. ಅದಕ್ಕೆ ಪೂರಕವಾಗಿ ಸ್ತ್ರೀಯರ ಹಕ್ಕುಗಳನ್ನು ಬಲಪಡಿಸುವ ಕಾಯ್ದೆಗಳೂ ರೂಪುಗೊಂಡವು. ಇಂತಹುದೊಂದು ಕೆಲಸ ಆಗಬೇಕಾದದ್ದೂ ಹೌದು.

ಆದರೆ ಇತ್ತೀಚೆಗೆ ಸ್ತ್ರೀಸಮಾನತೆಯ ಮತ್ತು ಹಕ್ಕುಗಳ ಹೋರಾಟದೊಂದಿಗೆ, ಸ್ತ್ರೀಶಕ್ತಿಗೆ ಸಂಬಂಧಿಸಿದ ಕಾನೂನುಗಳ ದುರುಪಯೋಗವೂ ಬೆಚ್ಚಿಬೀಳಿಸುವಷ್ಟು ಹೆಚ್ಚಾಗಿದೆ. ಕಳೆದವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಒಂದು ವಿಡಿಯೋಕ್ಲಿಪ್ ಈ ರೀತಿಯ ಪ್ರಕರಣಗಳ ಕರಾಳರೂಪವನ್ನು ಅತ್ಯಂತ ಸುಲಭವಾಗಿ ನಿಮಗೆ ಪರಿಚಯಿಸಬಲ್ಲದು. ಸಾಲ ರಿಕವರಿಯೋ ಇನ್ನೊಂದಕ್ಕೋ ಬಂದ ಒಂದಷ್ಟು ವ್ಯಕ್ತಿಗಳನ್ನು ಒಬ್ಬಾಕೆ ಹೆಣ್ಣುಮಗಳು “ಮರ್ಯಾದೆಕೊಟ್ಟು ಮಾತನಾಡಿಸಿ. ದುಡ್ಡು ಕೇಳುವುದಕ್ಕೆ ಒಂದು ರೀತಿ-ನೀತಿ ಇರುತ್ತೆ. ನನ್ನ ಗಂಡನನ್ನು ಹಾಗೆಲ್ಲ ಅವಮಾನಿಸಬೇಡಿ. ಒಂದುಹೆಜ್ಜೆ ಹಿಂದೆನಿಂತು ಮಾತನಾಡಿ” ಎಂದು ಗದರಿಸುತ್ತಿರುವುದನ್ನು ನೋಡಿ ನಾನು ಒಂದುಕ್ಷಣ “ಅರೆರೆ, ಗಂಡನನ್ನು ಅದೆಷ್ಟು ಚಂದವಾಗಿ ರಕ್ಷಿಸುತ್ತಿದ್ದಾರೆ ಈ ಹೆಣ್ಣು. ಈ ರಿಕವರಿ ಏಜೆಂಟುಗಳು ಹೀಗೇ. ಸಾಲತೆಗೆದುಕೊಂಡವರ ಬಳಿ ತುಂಬಾಕೆಟ್ಟದಾಗಿ ವರ್ತಿಸುತ್ತಾರೆ. ಅವರು ಮಾಡೋ ರೀತಿಗೆ ಸರಿಯಾಗಿ ಉತ್ತರಕೊಡ್ತಿದ್ದಾರೆ ಈ ಹೆಣ್ಣುಹುಲಿ ಖಾನ್ಸೀ ಕೀ ರಾಣಿ” ಎಂದುಕೊಂಡಿದ್ದೆ. ಮರುಕ್ಷಣವೇ ಆಕೆಯ ಬಾಯಿಂದ “ತಲೆಹರಟೆ ಮಾಡಿದ್ರೆ ರೇಪ್-ಕೇಸ್ ಹಾಕಿಸಿಬಿಡ್ತೀನಿ. ಬೇಲ್ ಕೂಡಾ ಸಿಗೋದಿಲ್ಲ. ಏನಂದುಕೊಂಡಿದ್ದೀಯಾ” ಎನ್ನುತ್ತಲೇ ಕೇಶರೂಪಕಗಳನ್ನೆಲ್ಲಾಕೊಟ್ಟು, ಆತನನ್ನು ತಳ್ಳಿ ವಿಡಿಯೋ ಮಾಡುತ್ತಿರುವವರ ಕಡೆ ನೋಡುತ್ತಾ “ನೋಡಿ ಅನುಮತಿಯಿಲ್ದೇ ನನ್ನನ್ನು ಮುಟ್ತಾ ಇದ್ದಾನೆ. ಫಿಸಿಕಲ್ ಅಸಾಲ್ಟ್ ಜೊತೆಗೆ ಅಟೆಂಪ್ಟ್ ಟು ರೇಪ್ ಹಾಕಿಸೋಣ” ಅನ್ನುವ ಮಟ್ಟಕ್ಕೆಹೋಯ್ತು. ಹಣಕೇಳಲು ಬಂದಿದ್ದ ಮಧ್ಯವಯಸ್ಕರಲ್ಲೊಬ್ಬರು “ಮೇಡಂ, ಇರ್ಲಿ ಬಿಡಿ ಮೇಡಂ. ಬಿಡಿ ತಪ್ಪಾಯ್ತು” ಎನ್ನುತ್ತಾ ಆಕೆಯ ಕಾಲಿಗೇ ಬಿದ್ದರು!! ಘಟನಾವಳಿಯನ್ನು ನೋಡಿ ಗಂಟಲಪಸೆಯೇ ಆರಿಹೋಯ್ತು. ಆ ಹಣಕೇಳುತ್ತಿದ್ದ ಜನರೂ ಈ ವ್ಯವಹಾರಕ್ಕೇನೂ ಹೊಸಬರಲ್ಲ, ಇಂತಹ ಬೇಕಾದಷ್ಟು ಕೇಸುಗಳನ್ನು ನೋಡಿರುವವರೇ. ಅವರೂ ಕೂಡಾ ಈ ಹೆಣ್ಣುಮಗಳ ಮಾತುಕೇಳಿ ಭಯಭೀತರಾಗಿ ಕಾಲಿಗೆಬಿದ್ದು ಕ್ಷಮೆಕೇಳೋಕೆ ಮುಂದಾಗುತ್ತಾರೆ ಅಂದರೆ, ಆ ಕಾನೂನುಗಳ ಶಕ್ತಿ ಎಷ್ಟಿದೆ ಎಂದು ನಿಮಗೆ ತಿಳಿಯಬಹುದು.

ಆಮೇಲೆ ಆ ಮಹಿಳೆಯ ಸುತ್ತಮುತ್ತ ಬೇಕಾದಷ್ಟು ಕಥೆಗಳು ಹೊರಬಂದವು. ಅದೇನೇ ಇರಲಿ, ನಮ್ಮ ಮುಂದಿರುವ ದೊಡ್ಡ ಸವಾಲು ಆಕೆಯ ಕಥೆಗಳಲ್ಲ, ಬದಲಿಗೆ ಸ್ತ್ರೀಯರ ರಕ್ಷಣೆಗಿರುವ ಕಾಯ್ದೆಗಳನ್ನು ಬಳಸಿ ನಿಮ್ಮನ್ನು ಅರೆಸ್ಟ್ ಮಾಡಿಸುತ್ತೇನೆ ಎನ್ನುತ್ತಾಳಲ್ಲ ಆ ಮನೋಭಾವ. ಸ್ತ್ರೀಸಂಬಂಧೀ ಕಾನೂನುಗಳು ದುರುಪಯೋಗವಾಗುತ್ತಿರುವುದು ಇದೇ ಮೊದಲೇನಲ್ಲ. ಸುಳ್ಳು ವರದಕ್ಷಿಣೆ ಕೇಸಿನಲ್ಲಿ ಸಿಕ್ಕಿಹಾಕಿಕೊಂಡ, ಇಲ್ಲದ ಕೌಟುಂಬಿಕ ಹಿಂಸೆಯ ಕೇಸಿನಲ್ಲಿ ನರಕ ಕಂಡ ಉದಾಹರಣೆಗಳು ನನ್ನ ಸಮೀಪವಲಯದ ಸ್ನೇಹಿತರಲ್ಲೇ ಕಂಡಿದ್ದೀನಿ. ಆದರೆ ಈ ರೀತಿ ಅದನ್ನು ರಾಜಾರೋಷವಾಗಿ ವಿಡಿಯೋದಲ್ಲಿ ಹೇಳುತ್ತಾ, ಹೌದು ಅರೆಸ್ಟ್ ಮಾಡಿಸುತ್ತೀನಿ ಎಂಬದಾರ್ಷ್ಟ್ಯವನ್ನು ಸಮರ್ಥಿಸಿಕೊಳ್ಳುವುದಿದೆಯಲ್ಲಾ ಅದನ್ನು ನಾನು ಈ ಮೊದಲು ಕಂಡಿರಲಿಲ್ಲ. ಕಳೆದವರ್ಷ ನೋಯ್ಡಾದಲ್ಲಿ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳ ನಡುವೆ ನಡೆದ ಕ್ಷುಲ್ಲಕ ಪಾರ್ಕಿಂಗ್ ಗಲಾಟೆಯೊಂದರಲ್ಲಿ ಇವನು ನನ್ನನ್ನು ದೈಹಿಕವಾಗಿ ಹಿಂಸಿಸುತ್ತಿದ್ದಾನೆ ಎಂದು ಹುಡುಗಿಯರು ದಾಂಧಲೆಯೆಬ್ಬಿಸಿ, ಸುತ್ತಮುತ್ತಲಿನ 25-30 ಜನರು ಆ ಹುಡುಗರನ್ನು ಥಳಿಸಿ ಒಬ್ಬನ ಪ್ರಾಣವೇ ಹೊರಟುಹೋಯಿತು. ಇನ್ನೊಬ್ಬ ಮೂರ್ನಾಲ್ಕು ತಿಂಗಳು ಆಸ್ಪತ್ರೆವಾಸ ಮುಗಿಸಿಬಂದ. ಹುಡುಗಿಯರ ಕಥೆಯಪ್ರಕಾರ ಪೋಲೀಸರು ಹುಡುಗರ ಮೇಲೆ ದೈಹಿಕಹಿಂಸೆ (molestation) ಕೇಸು ದಾಖಲಿಸಿ, ಕೋರ್ಟಿನಲ್ಲಿ ಎರಡೂ ದಿನವೂ ನಿಲ್ಲದ ಪ್ರಕರಣದಲ್ಲಿ ನರಕಯಾತನೆ ಅನುಭವಿಸಿದ್ದು ಮಾತ್ರ ಹುಡುಗರು. ತಪ್ಪುಕೇಸು ದಾಖಲಿಸಿದ್ದಕ್ಕೆ ಕೋರ್ಟು ಆ ಹುಡುಗಿಯರಿಗೆ ಎಚ್ಚರಿಕೆ ಕೊಟ್ಟು ಕಳಿಸಿತು, ಅಷ್ಟೇ!

ತಮ್ಮ ವಿಚಾರಗಳಲ್ಲಿ ಸಣ್ಣಪುಟ್ಟ ದೌರ್ಬಲ್ಯಗಳಿದ್ದಾಗ ಅದನ್ನು ಮಕ್ಕಳ ಮೂಲಕ ಮುಂದಿಡುವ Pedophrasty ಎಂಬಹೊಸದೊಂದು ತಂತ್ರ ಇತ್ತೀಚೆಗೆ ಶುರುವಾಗಿದೆ. ಸಿರಿಯಾದಲ್ಲಿ ತನ್ನಿಡೀ ಕುಟುಂಬವನ್ನು ಕಳೆದುಕೊಂಡ ಮಗುವೊಂದು ವಿಶ್ವಸಂಸ್ಥೆಯ ಮುಂದೆನಿಂತು “ಎಲ್ಲಾ ಸೈನ್ಯಗಳನ್ನು ಈ ಕೂಡಲೇ ವಿಸರ್ಜಿಸಬೇಕು. ಅವುಗಳ ಅಗತ್ಯವಿಲ್ಲ” ಎಂದು ಧರಣಿ ಕೂರುತ್ತದೆ ಎಂದುಕೊಳ್ಳಿ. ಯಾವ ಹೃದಯವಂತ ಮನುಷ್ಯ ತಾನೇ ಮಕ್ಕಳೊಂದಿಗೆ ವಾದಮಾಡಬಲ್ಲ! ಸೈನ್ಯದ ಅಗತ್ಯದ ಬಗ್ಗೆ ನೀವದೆಷ್ಟೇ ತರ್ಕಗಳನ್ನು ಆ ಮಗುವಿನ ಮುಂದಿಟ್ಟರೂ, ನಿಮಗೆ “ಆ ಮಗು ತನ್ನಿಡೀ ಕುಟುಂಬ ಜೊತೆಗೊಂದು ಕಣ್ಣನ್ನೂ ಕಳೆದುಕೊಂಡಿದೆ. ಅಂತವನನ್ನು ನಿನ್ನ ವಾದದ ಮೂಲಕ ಅಪಹಾಸ್ಯ ಮಾಡುತ್ತಿದ್ದೀಯಾ” ಎಂಬ ಉತ್ತರವಷ್ಟೇ ಸಿಗೋದು. ಒಟ್ಟಿನಲ್ಲಿ ನಿಮ್ಮನ್ನೇ ಸುಮ್ಮನಿರಿಸಲಾಗುತ್ತದೆ. ಗ್ರೆಟಾ, ಮಲಾಲ ಅವರದ್ದೂ ಇದೇ ಕಥೆ. ಅವರ ವರದಿಗಳಲ್ಲಿರುವ ಸತ್ಯಾಸತ್ಯತೆ ಅಥವಾ ವರದಿಯ ಮೂಲವನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇಲ್ಲ. ಯಾಕೆಂದರೆ ಹಾಗೆ ಪ್ರಶ್ನಿಸಿದವರನ್ನೆಲ್ಲಾ ಹೃದಯಹೀನರು ಎಂಬಪಟ್ಟಕಟ್ಟಿಕೂರಿಸಿಯಾಗಿದೆ. ಇತ್ತೀಚೆಗೆ ಇದೇ ತಂತ್ರವನ್ನು ಹೆಂಗಸರನ್ನು ಪ್ರಶ್ನಿಸಿದವರೆಡೆಗೂ ಪ್ರಯತ್ನಿಸಲಾಗುತ್ತಿದೆ. ಮಾತೆತ್ತಿದ್ದರೆ ಪುರುಷಪ್ರಧಾನತೆ (ಅದರಲ್ಲೂ ಬ್ರಾಹ್ಮಿನಿಕಲ್ ಪೇಟ್ರಿಯಾರ್ಕಿ ಎಂಬಅಸಂಬದ್ಧ ಪದಬೇರೆ), ಸವರ್ಣೀಯತೆ, ಮನುಸ್ಮೃತಿ ಎಂಬಪದಗಳನ್ನು ಪ್ರಯೋಗಿಸಿ, ನಿಮ್ಮ ಪೇಟ್ರಿಯಾರ್ಕಿಯಲ್ ಸಮಾಜ ಹೆಂಗಸರಿಗೆ ಮಾತನಾಡಲೂ ಬಿಡುತ್ತಿಲ್ಲ ಎಂದು ಸುಮ್ಮನೆಕೂರಿಸಲಾಗುತ್ತದೆ.


ಕೇವಲ ಕಾನೂನಾತ್ಮಕವಾಗಿ ಮಾತ್ರವಲ್ಲ, ತಾರ್ಕಿಕವಾಗಿಯೂ ಈ ಪ್ರಕರಣಗಳನ್ನು ಹೇಗೆ ನೋಡಬೇಕು ಎಂಬುದರ ಬಗ್ಗೆ ಬಹಳಷ್ಟು ಗೊಂದಲಗಳಿವೆ. ಬಸ್ಸಿನಲ್ಲಿ ಒಬ್ಬನ ಕೈತಾಗಿತು ಅಂತಾ ಹೆಂಗಸು ಕೂಗಿದರೆ ತದುಕಲು ತಯಾರಾಗಿರುವ ಸಮಾಜ, ಒಬ್ಬಳ ಕೈ ತಾಗಿತು ಅಂತಾ ಗಂಡಸು ಕೂಗಿದರೆ ಹೇಗೆ ವರ್ತಿಸುತ್ತದೆ? ಪುರುಷನೊಬ್ಬನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದರೆ, ‘ಇದರಲ್ಲಿ ದೂರುಕೊಡುವಂತದ್ದೇನಿದೆ?’ ಎಂದು ನಗುವವರೇ ಹೆಚ್ಚು. ಒಂದಷ್ಟು ಹೆಂಗಸರು ಚೌಕವೊಂದರಲ್ಲಿ ನಿಂತು “ನಮಗೆ ಕಾರ್ಪೊರೇಟ್ ಕೆಲಸಗಳಲ್ಲಿ 50% ಮೀಸಲಾತಿ ಬೇಕು” ಅಂತಾ ಆಗ್ರಹಿಸಿದರೆ ವಾಹ್ವಾಹ್ ಎನ್ನುವ ಜನ ಸಮೂಹ, ಮರುದಿನ ಕೆಲ ಗಂಡಸರು ಅದೇ ಜಾಗದಲ್ಲಿ ನಿಂತು “ಮನೆಕಟ್ಟುವ, ಗಾರೆಕಲಸುವ, ಬಾರ್ ಬೆಂಡ್ ಮಾಡುವ ಕೆಲಸದಲ್ಲಿ ಮಹಿಳೆಯರಿಗೆ 50% ಮೀಸಲಾತಿ ಕೊಡಲೇಬೇಕು” ಎಂದು ಆಗ್ರಹಿಸಿದರೆ ಇವರಿಗೆ ತಲೆಕೆಟ್ಟಿದೆಯಾ ಎನ್ನುತ್ತದೆ. ಗಾರೆಕೆಲಸವನ್ನು ಮಹಿಳೆಯವು ಮಾಡುತ್ತಿಲ್ಲವೆಂದಲ್ಲ, ಆದರೆ ಅದರ ಹಿಂದೆ ಅವರಿಗಿರುವ ಅನಿವಾರ್ಯತೆಯೇ ಬೇರೆ. ಆದರೆ ಕೆಲಸದಲ್ಲಿ ಹೆಂಗಸರಿಗೆ 50% ಮೀಸಲಾತಿ ತಂದ ಮರುದಿನವೇ “ನನ್ನನ್ನ್ಯಾಕೆ ಈ ಕೆಲಸ ಮಾಡಲು ಒತ್ತಾಯಿಸಲಾಗುತ್ತಿದೆ?” ಎಂಬ ತರ್ಕ ಆ ಜಾಗಕ್ಕೆ ಬರುತ್ತದೆ. ಎಲ್ಲಕಡೆಯೂ ಸಮಾನತೆ ಕೋರುವ ಹೆಂಗೆಳೆಯರು ಕೆಲಕಡೆ ಬೇಕಂತಲೇ ಇಂತಹಾ ವಾದವನ್ನು “ನಾವು ಕೇಳಿದ್ದನ್ನು ಕೊಡಿ, ನಿಮಗೆ ಬೇಕಾದದ್ದನ್ನಲ್ಲ” ಎಂದು ಹೇಳಿ ಮುಗುಮ್ಮಾಗಿ ಮರೆಮಾಚುತ್ತಾರೆ.

ಪ್ರಪಂಚದಲ್ಲಿ ನಡೆದ ಯುದ್ಧಗಳ ಅಂಕಿಅಂಶಗಳ ಪ್ರಕಾರ, ಯುದ್ಧದಲ್ಲಿ ಹೋರಾಡಿ ಸತ್ತವರಲ್ಲಿ 82% ಗಂಡಸರು. ಸಶಸ್ತ್ರಯುದ್ಧದಲ್ಲಿ ಭಾಗವಹಿಸದೆ, ಯುದ್ಧದ ದುಷ್ಪಣಾಮಗಳಿಂದ ಸತ್ತ ನಾಗರೀಕರಲ್ಲೂ 61% ಗಂಡಸರು. ಇದಿಷ್ಟೂ ದಾಖಲಿಸಲಾದ ಯುದ್ಧಗಳ ಲೆಕ್ಕ ಮಾತ್ರ. 15ನೇ ಶತಮಾನಕ್ಕಿಂತಾ ಹಿಂದಿನ ಯುದ್ಧಗಳ ನಿಖರ ಲೆಕ್ಕವಿಟ್ಟವರ್ಯಾರು? ಜಗತ್ತಿನ ಜೈಲುವಾಸಿಗಳಲ್ಲಿ 68% ಗಂಡಸರು. ಭೂಕುಸಿತ, ರಸ್ತೆಅಪಘಾತಗಳು, ಸಾಂಕ್ರಾಮಿಕ ಯಾವುದರಲ್ಲಿ ಸಾವು ಸಂಭವಿದರೂ ವಾರ್ತೆಗಳಲ್ಲಿ “ಸತ್ತವರಲ್ಲಿ ಇಷ್ಟು ಹೆಂಗಸರು, ಇಷ್ಟು ಮಕ್ಕಳೂ ಇದ್ದಾರೆ” ಎಂಬೆರಡು ಅಧಿಕ ಸಾಲುಗಳು ಸೇರುತ್ತವೆ. ಎಷ್ಟು ಗಂಡಸರು ಸತ್ತರು ಅಂತಾ ಪ್ರತ್ಯೇಕವಾಗಿ ಹೇಳುವುದಿಲ್ಲ. ಬಹುಷಃ ಗಂಡಸರ ಸಾವು ಅಷ್ಟು ವಿಶೇಷವಾದದ್ದಲ್ಲ. ಮೂರನೇ ಕ್ರುಸೇಡಿನಿಂದ ಹಿಡಿದು ಮಹಾಯುದ್ಧದ ಕಾಲವರೆಗೂ, ಯುದ್ಧದಲ್ಲಿ ಭಾಗವಹಿಸದ ಗಂಡಸರಿಗೆ ಬಿಳಿಹಕ್ಕಿಗರಿಯೊಂದನ್ನು ಕೊಟ್ಟು ಅವಮಾನಿಸಲಾಗುತ್ತಿತ್ತು. ನೆರೆ, ಬರ, ಬಿಸಿಲು, ಖಾಯಿಲೆ ಯಾವುದರ ಲೆಕ್ಕಹಿಡಿದರೂ ಸತ್ತವರಲ್ಲಿ ಗಂಡಸರ ಸಂಖ್ಯೆ ಮುಂಚೂಣಿಯಲ್ಲಿ. ಕುಟುಂಬಗಳ ಯೋಗಕ್ಷೇಮ ಮತ್ತವುಗಳ ರಕ್ಷಣೆ ಗಂಡಸರ ಅಲಿಖಿತ ಜವಾಬ್ದಾರಿಯಾದ್ದರಿಂದ, ಅದನ್ನು ನೆರವೇರಿಸುತ್ತಾ ಸತ್ತ ಗಂಡಸರ ಸುದ್ಧಿ, “ಬಾವಿಗೆ ಬಿದ್ದ ಮಗಳನ್ನು ಈಜು ಬರದಿದ್ದರೂ ರಕ್ಷಿಸಿದ ತಾಯಿ” ಎಂಬ ಸುದ್ಧಿಯಷ್ಟು ಮುಖ್ಯವಾಗುವುದಿಲ್ಲ. ಲೈಂಗಿಕ ಮತ್ತು ಕೌಟುಂಬಿಕ ದೌರ್ಜನ್ಯದ ವಿಚಾರಗಳಲ್ಲೂ ಸಹ ಮಹಿಳೆಯರೇ ಸಾಮಾನ್ಯವಾಗಿ ಬಲಿಪಶುಗಳಾದರೂ, ಪುರುಷರೂ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ ಮಹಿಳೆಯರ ವಿಚಾರದಲ್ಲಿ ಸಿಗುವಷ್ಟು ಅಂಕಿಅಂಶಗಳು ಪುರುಷರು ಬಲಿಪಶುವಾದ ಪ್ರಕರಣಗಳ ಬಗ್ಗೆ ಲಭ್ಯವಿಲ್ಲ ಎಂಬುದೂ ಗಮನಿಸಬೇಕಾದ ಸಂಗತಿ.

ಎಲ್ಲ ಗಂಡಸರು ಅತ್ಯಾಚಾರಿಗಳಲ್ಲದಿದ್ದರೂ, “every man is a potential rapist” ಎಂದಾಗ ಚಪ್ಪಾಳೆಗಳು ಸಿಗುತ್ತವೆ. ಅದೇ ಇಂದ್ರಾಣಿ ಮುಖರ್ಜಿ ಪ್ರಕರಣದಿಂದಾಗಿ, ಇನ್ನೊಂದು ಹೆಣ್ಣನ್ನು ಇಂದ್ರಾಣಿಯೆಂದು ಕರೆದರೆ ನಿಮ್ಮನ್ನು ಬಂಧಿಸಬಹುದಾದ ಕಾನೂನೂ ನಮ್ಮಲ್ಲಿದೆ. ನಡೆದ ಒಂದು ಅಪರಾಧಕ್ಕೆ ಗಂಡಸರ ಇಡೀ ಕುಲವನ್ನೇ ದೂಷಿಸುವುದು ಸರ್ವೇಸಾಮಾನ್ಯವಾಗಿದೆ. ಆದರೆ ಸ್ತ್ರೀಸಂಬಂಧೀ ಕಾನೂನನ್ನು ದುರುಪಯೋಗಪಡಿಸಿಕೊಂಡ ಹತ್ತು ಪ್ರಕರಣಗಳ ನಂತರವೂ ಅವನ್ನು ಟೀಕಿಸಿದರೆ  ಸ್ತ್ರೀದ್ವೇಷಿ ಎನ್ನಲಾಗುತ್ತದೆ. ಹೆಣ್ಣು ಎಂಬ ಒಂದೇ ಕಾರಣವನ್ನು ಗುರಾಣಿಯಾಗಿ ಬಳಸಿಕೊಂಡು ಗಂಡಸರನ್ನು, ಸಮಾಜವನ್ನು ಶೋಷಿಸುತ್ತಲೇ ಹೋಗುವ ಹೆಂಗಸರನ್ನು ಸಬಲೆ ಎನ್ನಲಾಗುತ್ತದೆ.

ಹೆಂಗಸರ ರಕ್ಷಣೆಗೆ ಅತ್ಯಂತ ಕಠಿಣ ಕಾನೂನುಗಳು ಬೇಕು. ಅದರಲ್ಲಿ ಎರಡು ಮಾತಿಲ್ಲ. ಭಾರತದಂತಹಾ ದೇಶದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ಇನ್ನೂ ಗಟ್ಟಿಯಾಗಬೇಕಾದದ್ದು ಹೌದು. ಆದರೆ ಈ ಕಾನೂನಿನ ಗೋಡೆಯನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ, ನಮ್ಮಸುತ್ತಲೂ ನಾವೇ ಗೋಡೆಕಟ್ಟಿಕೊಂಡು ಅದರೊಳಗೇ ಬಂಧಿಯಾಗುವ ಪರಿಸ್ಥಿತಿ ಬರಬಾರದಷ್ಟೇ! ಈ ಕಾನೂನುಗಳು, ತಪ್ಪಿಗೆ ಸಿಗುವ ಶಿಕ್ಷೆಯಷ್ಟೇ ಗಂಭೀರವಾದ ಪರಿಣಾಮವನ್ನು ಕಾನೂನನ್ನು ತಪ್ಪಾಗಿ ಬಳಸಿಕೊಂಡವರೆಡೆಗೂ ಬೀರಬೇಕಲ್ಲವೇ? ಲೈಂಗಿಕ ಸಮಾನತೆಯೆನ್ನುವುದು ಕೇವಲ ಫೆಮಿಸಿಸಮ್ಮಿನ ವಿಚಾರದಲ್ಲ, ಬದಲಿಗೆ ಮಾನವೀಯತೆಯ ವಿಚಾರವೂ ಹೌದು. ಹೆಣ್ಣು ಎಂಬುದು ಹೆಮ್ಮೆಯವಿಚಾರವಾಗಬೇಕೇ ಹೊರತು, ಶಿಕ್ಷೆ ಕೊಡಿಸುವ ದಾರಿಯಾಗಬಾರದಲ್ಲವೇ?

0 comments on “ಶೋಡಷಿಯ ಗುರಾಣಿಯ ಹಿಂದೆ ಶೋಷಣೆಯ ಶಸ್ತ್ರ

Leave a Reply

Your email address will not be published. Required fields are marked *