Tuesday, 21 May, 2024

ಬ್ಲೂಟೂಥ್ ಎಂಬ ತಂತ್ರಜ್ಞಾನ ಮತ್ತದರ ದಂತಕಥೆ!

Share post

ತಂತ್ರಜ್ಞಾನದೊಂದಿಗೆ ಮನುಷ್ಯ ಕೂಡಾ ವೇಗವಾಗಿ ಬೆಳೆಯುತ್ತಿದ್ದಾನೆ. ಮೊದಲಿಗಿಂತಲೂ ಹೆಚ್ಚು ಚುರುಕೂ ಆಗಿದ್ದಾನೆ. ಈಗಿನ ಮಕ್ಕಳಂತೂ ಬಿಡ್ರೀ ತುಂಬಾ ಫಾಸ್ಟು. ಮಾತೆತ್ತಿದ್ರೆ ಮೊಬೈಲು, ಕೈಯೆತ್ತಿದ್ರೆ ಕಿಂಡಲ್. ಪಕ್ಕದವನ ಹತ್ರ ಒಳ್ಳೆ ಹಾಡಿದೆಯಾ, ಯಾವುದಾದರೂ ಇಂಟರೆಸ್ಟಿಂಗ್ ವಿಡಿಯೋ ಇದೆಯಾ? ಲೋ ಮಗಾ ನನ್ಗೂ ವಾಟ್ಸ್ಯಾಪ್ ಮಾಡೋ ಅಂತಾರೆ. ಒಂದುವರ್ಷದ ಹಿಂದೆ ಶೇರಿಟ್ ಮಾಡೋ ಅಂತಿದ್ರು. ಅದಕ್ಕೂ ಮುಂಚೆ ಟೆಥರಿಂಗ್ ಮಾಡ್ತೀನಿ, ಕಳ್ಸಪ್ಪಾ ಅಂತಿದ್ರು. ಅದಕ್ಕೂ ಮುಂಚೆ…..!?

ಈ ಮೊಬೈಲ್ ಇಂಟರ್ನೆಟ್, ವೈ-ಫೈ, ನಿಯರ್ ಫೀಲ್ಡ್ ಕಮ್ಯೂನಿಕೇಷನ್ ಇವೆಲ್ಲಾ ಬರೋಕೆ ಮುಂಚೆ (ಓ…ಅಂದ್ರೆ ನಿಮ್ಮ ಕಾಲದಲ್ಲಿ ಅಂತಾ ಹುಬ್ಬೇರಿಸ್ತಾ ಇದ್ದೀರಾ, ಇರ್ಲಿ ಬಿಡಿ ತೊಂದ್ರೆ ಇಲ್ಲ), ನಮಗೆ ಈ ರೀತಿ ಒಂದು ಮೊಬೈಲಿಂದ ಇನ್ನೊಂದು ಮೊಬೈಲಿಗೆ ಏನಾದ್ರೂ ಕಳಿಸಬೇಕಾದ್ರೆ ಇದ್ದದ್ದು ಒಂದೋ ಆಮೆಯ ವೇಗಕ್ಕಿಂತಲೂ ಭಯಾನಕ ನಿಧಾನವಿದ್ದ ಇನ್ಫ್ರಾರೆಡ್ ಕನೆಕ್ಷನ್ ಅಥ್ವಾ ಅಂದಿನ ಕಾಲಕ್ಕೆ ಸೂಪರ್ ಅಲ್ಟ್ರಾ ಹೈ-ಫೈ ತಂತ್ರಜ್ಞಾನವಾಗಿದ್ದ ಬ್ಲೂಟೂಥ್. ಈಗಲೂ ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದ ಮೇಲೂ ಬ್ಲೂಟೂಥ್ ಜನಪ್ರಿಯತೆಯೇನೂ ಕಡಿಯಾಗಿಲ್ಲ. ಇವತ್ತಿಗೂ ನಿಮ್ಮ ಮೊಬೈಲ್ ಫೋನನ್ನು ಕಾರಿನಲ್ಲಿ ಉಪಯೋಗಿಸಬೇಕು ಅಂದ್ರೆ ಬ್ಲೂಟೂಥ್ ಬೇಕೇ ಬೇಕು. ಹೆಚ್ಚಿನ ವೈರ್ಲೆಸ್ ಸ್ಪೀಕರುಗಳು, ಧ್ವನಿಪ್ರಸರಣಕ್ಕೆ ಬ್ಲೂಟೂಥ್ ತಂತ್ರಜ್ಞಾನವನ್ನೇ ಉಪಯೋಗಿಸುತ್ತವೆ. ಒಂದೂರಿನಿಂದ ಇನ್ನೊಂದೂರಿಗೆ ಅಥವಾ ಒಂದುಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಮಾರ್ಗದರ್ಶನ ಮಾಡಲು ಜಿಪಿಎಸ್ ಉಪಯೋಗವಾದರೆ, ಒಂದೇ ದೊಡ್ಡ ಕಟ್ಟದೊಳಕ್ಕೆ ಓಡಾಡುವಾಗ ಯಾವುದಾದರೂ ಅಂಗಡಿಯ ಜಾಗ ಕಂಡುಹಿಡಿಯಬೇಕಾದರೆ ಬ್ಲೂಟೂಥ್ ಸಂವಹನವಿದ್ದರೆ ಅತ್ಯಂತ ನಿಖರವಾಗಿ ಜಾಗಗಳನ್ನು ತಲುಪಹುದು. ಬ್ಲೂಟೂಥಿನ ಸುಲಭ ಜೋಡಣೆ ಮತ್ತು ಸರಳ ಸಂವಹನ ತಂತ್ರಜ್ಞಾನವೇ ಅದರ ಈ ಜನಪ್ರಿಯತೆಗೆ ಮೂಲ ಕಾರಣ. ಈ ಬ್ಲೂಟೂಥ್ ಚಾಲ್ತಿಗೆ ಬಂದದ್ದು ಹೇಗೆ? ಅದ್ಯಾಕೆ ಬ್ಕೂಟೂಥಿಗೆ ನೀಲಿಬಣ್ಣದ ಹಲ್ಲು? ಅದಕ್ಕೆ ಬ್ಲೂಟೂಥ್ ಅಂತಾ ಯಾಕೆ ಕರೆಯುತ್ತಾರೆ? ರೆಡ್-ಟೂಥ್ ಅಥವಾ ಬ್ರೌನ್ ಲೆಗ್ ಯಾಕಲ್ಲ? ಅದರ ಚಿಹ್ನೆಯ ಹಿಂದಿನ ಅರ್ಥ? ಯಾವತ್ತಾದ್ರೂ ತಲೆಕೆಡಿಸಿಕೊಂಡಿದ್ದೀರಾ?

ಎಂಜಿನಿಯರ್ರುಗಳದ್ದೊಂದು ತೊಂದರೆ ಇದೆ. ಒಂದುರೀತಿ ವೈರಿಂಗ್ ಪ್ರಾಬ್ಲಂ ಅನ್ನಿ. ಅದೇನಂದ್ರೆ ಅವರು ಏನಾದರೂ ಒಂದು ಉಪಕರಣವನ್ನು ಅಥವಾ ತಂತ್ರಜ್ಞಾನವನ್ನು ಕಂಡುಹಿಡಿದು ಅದನ್ನಲ್ಲಿಗೇ ನಿಲ್ಲಿಸೋದಿಲ್ಲ. ಅದನ್ನ ಇನ್ನೂ ಹೆಚ್ಚು ಉತ್ತಮಗೊಳಿಸೋದು ಹೇಗೆ, ಬೇರೆ ಬೇರೆ ರೀತಿಯ ಬಳಕೆದಾರರು ಮತ್ತು ಗ್ರಾಹಕರು ಅದನ್ನು ಮೆಚ್ಚುವ ಹಾಗೆ ಮಾಡೋದು ಹೇಗೆ? ಅದರೆಡೆಗೆ ಬೇರೆ ಬೇರೆ ದೇಶದ ಜನರನ್ನು ಆಕರ್ಷಿಸೋದು ಹೇಗೆ ಅಂತಾ ಯೋಚಿಸ್ತಾನೇ ಇರ್ತಾರೆ. ಸುಮ್ಮನೇ ಕೂರಲಾಗದ ಈ ಪ್ರಭೃತ್ತಿಗಳ ಈ ಪ್ರತಿಭೆ ಒಂದುರೀತಿಯ ತೊಂದರೆಯೇನೋ ಹೌದು. ಆದರೆ ತೊಂದರೆಗಿಂತಾ ಹೆಚ್ಚಿನ ಪ್ರಯೋಜನವೂ ಇದರಿಂದ ಇದೆ. ಈಗನೋಡಿ, ಈ ವಿಜ್ಞಾನಿಗಳು ಸಂವಹನ ತಂತ್ರಜ್ಞಾನದ ಮೊದಲ ಮೆಟ್ಟಿಲುಗಳಾದ ರೇಡಿಯೋ, ಟೆಲಿಗ್ರಾಮು, ಫೋನುಗಳನ್ನು ಕಂಡುಹಿಡಿದು ಅಲ್ಲಿಗೇ ಮುಗಿಸಲಿಲ್ಲ. ಮುಂದುವರೆದು ಟೆಲೆಕ್ಸ್, ಟೀವಿ ಮತ್ತು ಪೇಜರುಗಳನ್ನು ಸೃಷ್ಟಿಸಿದರು. ಅದಾದನಂತರ ಮೊಬೈಲುಗಳನ್ನೂ ಕಂಡುಹಿಡಿದರು. ಅವರ ಮುಂದಿನ ತಲೆಬಿಸಿ “ಮೊಬೈಲುಗಳೇನೋ ಜನರನ್ನು ಜೋಡಿಸುತ್ತವೆ, ಆದರೆ ಮೊಬೈಲುಗಳನ್ನ ಒಂದಕ್ಕೊಂದು ಹೇಗೆ ಸಂಪರ್ಕಿಸುವುದು ಹೇಗೆ?” ಅನ್ನೋದಾಗಿತ್ತು. ಬರೇ ಮೊಬೈಲುಗಳೇ ಯಾಕೆ! ಫೋನು, ಟೀವಿ, ರೇಡಿಯೋ ಮುಂತಾದ ಎಲ್ಲಾ ವಿದ್ಯುನ್ಮಾನ ಯಂತ್ರಗಳೂ ಒಂದಕ್ಕೊಂದು ಮಾತನಾಡುವಂತಾದರೆ ಎಷ್ಟು ಚೆಂದ!? ಎಂಬ ಕನಸುಗಳನ್ನೂ ಕಟ್ಟಿಕೊಂಡರು.

ಆಗ ಶುರುವಾಗಿದ್ದೇ ಪರ್ಸನಲ್ ಏರಿಯಾ ನೆಟ್ವರ್ಕ್ (PAN) ಅನ್ನೋ ಪರಿಕಲ್ಪನೆ. ಇದರನ್ವಯ ಎಂಜಿನಿಯರ್ರುಗಳು ಸುಮಾರು ಐದು ಮೀಟರ್ ಸುತ್ತಳತೆಯಲ್ಲಿ ಮೊಬೈಲುಗಳು ಒಂದರ ಜೊತೆಗೊಂದು ಸಂವಹಿಸಬಲ್ಲುದರ ಬಗ್ಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ತೊಡಗಿದರು. 1989ರಲ್ಲಿ ಈ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದು ಮತ್ತದನ್ನು ಜನಪ್ರಿಯಗೊಳಿಸಿದ್ದು ಎರಿಕ್ಸನ್ ಅನ್ನೋ ಸ್ವೀಡಿಶ್ ಕಂಪನಿ. ಎರಿಕ್ಸನ್ ಕಂಪನಿಯ ಮುಖ್ಯ ತಂತ್ರಜ್ಞನಾಗಿದ್ದ ನಿಲ್ಸ್ ರೈಡ್ಬೆಕ್ ತನ್ನ ಅತ್ಯುತ್ತಮ ಎಂಜಿನಿಯರುಗಳನ್ನು ಈ ಕೆಲಸಕ್ಕೆ ಹಚ್ಚಿ 1990ರಲ್ಲಿ ಒಂದು ಮೂಲಕಲ್ಪನೆಯನ್ನು ಸಿದ್ದಮಾಡಿಯೇಬಿಟ್ಟ. ಅವನ ಈ ಪ್ರಾಜೆಕ್ಟು 1990ರಲ್ಲಿ ಪೇಟೆಂಟನ್ನೂ ಗಳಿಸಿಕೊಂಡಿತು. ಮುಂದಿನ ಏಳುವರ್ಷ ಕಾಲ ಎರಿಕ್ಸನ್ ಕಂಪನಿ ಈ ತಂತ್ರಜ್ಞಾನವನ್ನು ಇನ್ನಷ್ಟು ಸುಲಭಗೊಳಿಸಿ, ಪ್ರಮಾಣೀಕೃತವಾಗಿಸಿತು. 1997ರಲ್ಲಿ ಐಬಿಎಂ ತನ್ನ ಲ್ಯಾಪ್ಟುಗಳಲ್ಲಿ ಮೊಬೈಲ್ ತಂತ್ರಜ್ಞಾನವನ್ನು ಸಂಯೋಜಿಸಲು ಯೋಚಿಸಿ ಎರಿಕ್ಸನ್ ಜೊತೆಗೂಡಿ ಈ ತಂತ್ರಜ್ಞಾನವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸಿತು. ಆದರೆ ಲ್ಯಾಪ್ಟಾಪುಗಳ ಮಾರುಕಟ್ಟೆಯಲ್ಲಿ ಐಬಿಎಂ ಏನೂ ದೊಡ್ಡಹೆಸರಾಗಿರಲಿಲ್ಲ, ಮೊಬೈಲ್ ಮಾರುಕಟ್ಟೆಯಲ್ಲಿ ಎರಿಕ್ಸನ್ ಕೂಡಾ ದೊಡ್ಡ ಹೆಸರಾಗಿರಲಿಲ್ಲ. ಹಾಗಾಗಿ ಈ ತಂಡ ವಿದ್ಯುನ್ಮಾನ ಕ್ಷ್ಟೇತ್ರದ ದಿಗ್ಗಜರಾದ ನೋಕಿಯಾ, ತೋಷೀಬಾ ಮತ್ತು ಇಂಟೆಲ್ ಕಂಪನಿಗಳಿಗೂ ಆಹ್ವಾನ ನೀಡಿ ಮೊಬೈಲ್ ತಂತ್ರಜ್ಞಾನ ವಿಶೇಷಾಸಕ್ತಿ (Special Interest Group) ಗುಂಪೊಂದನ್ನು ಪ್ರಾರಂಭಿಸಿದವು. ಈ ಐದುಕಂಪನಿಗಳ ಗುಂಪು ಬ್ಲೂಟೂಥ್ ತಂತ್ರಜ್ಞಾನವನ್ನು ಹುಟ್ಟುಹಾಕುವುದರಲ್ಲಿ, ಅದನ್ನು ಏಕರೂಪವಾಗಿಸುವಲ್ಲಿ ಮತ್ತದನ್ನು ನಾವಿಂದು ಉಪಯೋಗಿಸುತ್ತಿರುವ ಮಟ್ಟಕ್ಕೆ ತಲುಪಿಸುವುದರಲ್ಲಿ ಮಹತ್ತರವಾದ ಸಾಧನೆಗಳನ್ನು ಮಾಡಿತು. ಈ ಗುಂಪಿನ ಪ್ರಯತ್ನವಾಗಿ, ಸಾಮಾನ್ಯ ಗ್ರಾಹಕರಿಗೆ ಮೊದಲ ಬ್ಲೂಟೂಥ್ ಸಾಧನವಾಗಿ 1999ರಲ್ಲಿ ಹ್ಯಾಂಡ್ಸ್-ಫ್ರೀ ಮೊಬೈಲ್ ಹೆಡ್‌ಸೆಟ್ ಒಂದನ್ನು ಬಿಡುಗಡೆ ಮಾಡಲಾಯ್ತು. ಈ ಹೆಡ್-ಸೆಟ್ ಪ್ರತಿಷ್ಟಿತ COMDEX ಪ್ರದರ್ಶನದಲ್ಲಿ “ವರ್ಷದ ಅತ್ಯುತ್ತಮ ತಂತ್ರಜ್ಞಾನ” ಪ್ರಶಸ್ತಿಯನ್ನೂ ಗಳಿಸಿತು. ಮೊಬೈಲ್ ಫೋನಿನಲ್ಲಿ ಬ್ಲೂಟೂತ್ ತಂತ್ರಜ್ಞಾನ ಎರಿಕ್ಸನ್ ಟಿ-36 ಎಂಬ ಫೋನಿನಮೂಲಕ ಜಗತ್ತಿಗೆ ಬಂತಾದರೂ,. ಇದನ್ನು ಮತ್ತಷ್ಟು ಪರಿಷ್ಕರಿಸಿ ಟಿ-39 ಎಂಬ ಮಾದರಿಯನ್ನು 2001 ರಲ್ಲಿ ಎರಿಕ್ಸನ್ ಬಿಡುಗಡೆ ಮಾಡಿ ಜನಪ್ರಿಯವಾಗಿಸಿತು. ಇದರ ಜೊತೆಗೇ, ಬ್ಲೂಟೂಥ್ ಸಂಯೋಜಿತವಾಗಿರುವ ಮೊದಲ ಲ್ಯಾಪ್ಟಾಪ್ ಆಗಿ ಐಬಿಎಂ ತನ್ನ ಥಿಂಕ್‌ಪ್ಯಾಡ್ ಎ-30 ಅನ್ನು ಅಕ್ಟೋಬರ್ 2001ರಲ್ಲಿ ಪರಿಚಯಿಸಿತು. ಹೀಗೆ ಜಗತ್ತಿಗೊಂದು ಹೊಸಾ ಸಂವಹನ ತಂತ್ರಜ್ಞಾನ ಕಾಲಿಟ್ಟಿತು.

ಈ SIG ತಂಡದಲ್ಲಿ, ಬೇರೆ ಬೇರೆ ಕಂಪನಿಗಳ ಮಧ್ಯೆ ಸಂಧಾನಕಾರನ ಪಾತ್ರವಹಿಸಿದ್ದ ಇಂಟೆಲ್ ಉದ್ಯೋಗಿ ಜಿಮ್ ಕರ್ಡಾಷ್ (Jim Kardach), ಈ ಪ್ರಾಜೆಕ್ಟ್ ಪ್ರಾರಂಭವಾದ ಸಮಯದಲ್ಲಿ ಅಂದರೆ 1997ರಲ್ಲಿ ‘ವೈಕಿಂಗ್ಸ್’ ಎಂಬ ಸ್ಕ್ಯಾಂಡಿನೇವಿಯನ್ ಯೋಧರ ಕಥೆಯಿರುವ ‘ದ ಲಾಂಗ್ ಶಿಪ್ಸ್’ ಎಂಬ ಪುಸ್ತಕವೊಂದನ್ನು ಓದುತ್ತಿದ್ದ. ಅದರಲ್ಲಿ ಉಲ್ಲೇಖಿಸಿದ್ದ ಹೆರಾಲ್ಡ್ ಗ್ರಾಮ್ಸನ್ ಎಂಬ ರಾಜನ ಬಗ್ಗೆ ಉತ್ಸುಕನಾಗಿ, ಅವನ ಬಗ್ಗೆ ಹೆಚ್ಚಿನ ವಿಷಯ ಓದಿದಾಗ ಜಿಮ್’ಗೆ ತಿಳಿದದ್ದೇನೆಂದರೆ, ಈ ಹೆರಾಲ್ಡ್ ಗ್ರಾಮ್ಸನ್ ಕ್ರಿ.ಶ.958ರಿಂದ ಕ್ರಿ.ಶ.970ರವರೆಗೆ ‘ವೈಕಿಂಗ್’ಗಳ ರಾಜನಾಗಿದ್ದ ಮತ್ತು ಆತ ಬಹಳಷ್ಟು ಬುಡಕಟ್ಟು ಗುಂಪುಗಳ ನಡುವೆ ಹರಿದು ಹಂಚಿಹೋಗಿದ್ದ ಸ್ಕ್ಯಾಂಡಿನೇವಿಯನ್ ದೇಶಗಳನ್ನು ಅಂದರೆ ನಾರ್ವೆ, ಸ್ವೀಡನ್ ಮತ್ತು ಡೆನ್ಮಾರ್ಕ್’ಗಳನ್ನು ಅಹಿಂಸಾತತ್ವದಿಂದ ಒಗ್ಗೂಡಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡಿದ. ಅವನ ಉತ್ತಮ ಸಂವಹನ ವೈಖರಿ ಜನರನ್ನು ಆರ್ಕಷಿಸುವಲ್ಲಿ ಸಫಲವಾಗಿತ್ತು. ಹಲವು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಡೆನ್ಮಾರ್ಕಿನ ಜನರನ್ನು ಒಗ್ಗೂಡಿಸಿದ್ದೂ ಅಲ್ಲದೇ, ಹಲವಾರು ಪೇಗನ್ ಧರ್ಮಗಳನ್ನು ಆಚರಿಸುತ್ತಿದ್ದ ಜನರನ್ನು ಒಂದೇ ಕ್ರಿಶ್ಚಿಯನ್ ಧರ್ಮದ ಅಡಿಯಲ್ಲಿ ತಂದದ್ದೂ ಇದೇ ಹೆರಾಲ್ಡ್. ವೈಕಿಂಗರು ಸದಾ ಯುದ್ಧ ಮತ್ತು ರಕ್ತಪಾತದಲ್ಲೇ ನಿರತರಾಗಿದ್ದರಿಂದ, ಅಹಿಂಸೆಯ ಮಾತನಾಡಿದ ಹಾಗೂ ಅದನ್ನು ಆಚರಿಸಿ ತೋರಿಸಿದ ಹೆರಾಲ್ಡ್ ಸಹಜವಾಗಿಯೇ ವಿಶೇಷವಾಗಿ ಪರಿಗಣಿಸಲ್ಪಟ್ಟ ಹಾಗೂ ಚರಿತ್ರಾಕಾರರು ಅವನ ಬಗ್ಗೆ ಸ್ವಲ್ಪ ಹೆಚ್ಚಾಗಿಯೇ ಬರೆದರು.

King Harald Gramson Blatand

ಈ ಹೆರಾಲ್ಡನಿಗೆ ಬ್ಲೂಬೆರ್ರಿ ಹಣ್ಣೆಂದರೆ ಬಹಳ ಇಷ್ಟವಿತ್ತಂತೆ. ಎಷ್ಟು ಇಷ್ಟವೆಂದರೆ, ದಿನವಿಡೀ ಬ್ಲೂಬೆರ್ರಿ ಹಣ್ಣನ್ನೇ ತಿಂದು ಅವನ ಹಲ್ಲುಗಳು ನೀಲಿಬಣ್ಣಕ್ಕೆ ತಿರುಗಿದ್ದವಂತೆ! ಇದರಿಂದಾಗಿ, ಒಂದು ದಂತಕಥೆಯ ಪ್ರಕಾರ (pun intended), ಅವನ ಪೂರ್ತಿಹೆಸರಾದ ಹೆರಾಲ್ಡ್ ಗ್ರಾಮ್ಸನ್ ಬ್ಲಾಟಂಡ್ (King Harald Gramson Blatand) ಎನ್ನುವುದು ಹೆರಾಲ್ಡ್ ಗ್ರಾಮ್ಸನ್ ಬ್ಲೂಟೂಥ್ ಎಂದೇ ಅನ್ವರ್ಥವಾಗಿತ್ತಂತೆ.

ಈ ಕಥೆ ಕೇಳಿದ ಜಿಮ್ ಕರ್ಡಾಷ್, ಈ ಮೊಬೈಲುಗಳನ್ನು ತಂತಿರಹಿತವಾಗಿ ‘ಒಗ್ಗೂಡಿಸುವ’ ಪ್ರಾಜೆಕ್ಟಿಗೂ ಬ್ಲೂಟೂಥ್ ಎಂಬ ಹೆಸರೇ ಸೂಕ್ತವಾದದ್ದೆಂದು ನಿರ್ಧರಿಸಿದ. ಈ ಕಾರಣದಿಂದ, ಮೊಬೈಲುಗಳನ್ನು (ಅಹಿಂಸಾರೀತಿಯಲ್ಲಿ) ಜೋಡಿಸುವ ಈ ತಂತ್ರಜ್ಞಾನಕ್ಕೆ ಬ್ಲೂಟೂಥ್ ಎಂಬ ಹೆಸರೇ ಅಂಟಿಕೊಂಡಿತು. ಮೊಬೈಲಿಗೂ, ಮತ್ತವುಗಳ ಸಂವಹನಕ್ಕೂ, ನೀಲಿಬಣ್ಣಕ್ಕೂ ಯಾವ ಸಂಬಂಧವೂ ಇಲ್ಲದಿದ್ದರೂ ಬ್ಲೂಟೂಥ್ ಎಂಬುದು ಅಸ್ತಿತ್ವಕ್ಕೆ ಬಂತು.

ಇನ್ನು ಬ್ಲೂಟೂಥ್ ತಂತ್ರಜ್ಞಾನದ ಚಿಹ್ನೆಗೆ ಬಂದರೆ, ಅಲ್ಲೂ ಒಂದು ಕುತೂಹಲಕಾರಿ ವಿಷಯವಿದೆ. ಬ್ಲೂಟೂಥ್ ತಂತ್ರಜ್ಞಾನಕ್ಕೆ ಸ್ಪೂರ್ತಿಯಾದ ಹೆರಾಲ್ಡ್ ಬ್ಲಾಟಂಡ್(ಅಥವಾ ಹೆರಾಲ್ಡ್ ಬ್ಲೂಟೂಥ್) ನ ಹೆಸರನ್ನು ಉತ್ತರ ಜರ್ಮಾನಿಕ್ ಬಾಷೆಗಳಲ್ಲೊಂದಾದ ಹಳೆಯ ನಾರ್ಸ್ (Old Norse)ನಲ್ಲಿ ಬರೆದಾಗ ಸಿಗುವ ಮೊದಲಕ್ಷರಗಳನ್ನು (H(Hagall) and B(Bjarknan) ಒಂದುಗೂಡಿಸಿದಾಗ ಸಿಗುವ ಚಿತ್ರಣವನ್ನೇ, ಬ್ಲೂಟೂಥಿನ ಲೋಗೋವಾಗಿ ಬಳಸಲಾರಂಭಿಸಲಾಯಿತು.

ಹೀಗೆ ತಂತ್ರಜ್ಞಾನ, ಇತಿಹಾಸ, ಭಾಷೆ ಮತ್ತು ಸಾಹಿತ್ಯಗಳೆಲ್ಲಾ ಜೊತೆಯಾಗಿ ಮೇಳೈಸುವ ಈ ಬ್ಲೂಟೂಥಿನ ಹಿನ್ನೆಲೆ, ಅದರ ಹೆಸರ ಹಿಂದಿನ ಕಥೆ ಹಾಗೂ ಅದರ ಲಾಂಛನದ ಅರ್ಥ ಒಂದುರೀತಿ ಮಜವಾಗಿದೆಯಲ್ಲವೇ?

23 ವರ್ಷಗಳ ಹಿಂದೆ ಚಾಲ್ತಿಗೆ ಬಂದ ಈ ತಂತ್ರಜ್ಞಾನ ಇವತ್ತು ತನ್ನ ಐದನೇ ಆವೃತ್ತಿಯಲ್ಲಿದೆ. ಇದನ್ನು Bluetooth 5.0 ಎನ್ನುತ್ತಾರೆ. ಪ್ರತಿಬಾರಿಯೂ ಹೆಚ್ಚೆಚ್ಚು ಅಭಿವೃದ್ಧಿಹೊಂದುತ್ತಾ, ಹೆಚ್ಚೆಚ್ಚು ಸುರಕ್ಷಿತವಾಗುತ್ತಾ, ಹೆಚ್ಚೆಚ್ಚು ಗ್ರಾಹಕಸ್ನೇಹಿಯಾಗುತ್ತಾ ಸಾಗಿದೆ. ಜೊತೆಗೇ ಇನ್ನಷ್ಟು ತಂತ್ರಜ್ಞಾನಗಳಿಗೆ ದಾರಿಮಾಡಿಕೊಟ್ಟಿದೆ. ನಮ್ಮನ್ನು ಜಗತ್ತಿನೊಂದಿಗೆ ಒಗ್ಗೂಡಿಸುವ ಬ್ಲೂಟೂಥ್’ನೊಂದಿಗೇ ನಾವೂ ಒಂದಾಗುತ್ತಾ, ವಿಜ್ಞಾನಿಗಳಿಗೆ ಧನ್ಯವಾದಗಳನ್ನು ಹೇಳುತ್ತಾ ಮುಂದುವರೆಯೋಣ.

One comment on “ಬ್ಲೂಟೂಥ್ ಎಂಬ ತಂತ್ರಜ್ಞಾನ ಮತ್ತದರ ದಂತಕಥೆ!

ಮಾಹಿತಿಯೊಂದಿಗೆ ನಿಮ್ಮ ಬರಹ ಉಪಯುಕ್ತ, ದಿನಾ ಉಪಯೋಗಿಸುವ ತಂತ್ರಜ್ಞಾನವಾದರೂ ನಮಗೆ ಅದರ ಬಗ್ಗೆ ಗೊತ್ತಿಲ್ಲದಿದ್ದರೆ ಎಂತಾ ಪ್ರಮಾದ!

ನಿಮ್ಮ ವೆಬ್ಸೈಟ್ ನಿಂದ ಓದುವುದು ತುಂಬಾ ಅನುಕೂಲಕರ.

Reply

Leave a Reply

Your email address will not be published. Required fields are marked *