Wednesday, 17 April, 2024

ದೇವರು ಸತ್ತ….ಮುಂದಿನ ದೇವರು ಯಾರು?

Share post

ಮನುಷ್ಯ ಮೂಲತಃ ಗರ್ವಿ. ಆದರೆ ಭಯಾನಕ ಹೆದರುಪುಕ್ಕಲ. “ಎಲ್ಲವೂ ನನ್ನಿಂದಲೇ, ನಾನೆಲ್ಲವನ್ನೂ ಮೀರಬಲ್ಲೆ, ಎಲ್ಲಕಡೆಯೂ ಹೋಗಬಲ್ಲೆ” ಎಂದು ಎದೆಯುಬ್ಬಿಸುತ್ತಲೇ, “ದೇವರೇ ಕಾಪಾಡಪ್ಪ….ಇದೊಂದನ್ನು ಸರಿಮಾಡಪ್ಪಾ” ಅಂತಾ ಬೇಡಿಕೊಳ್ತಾನೆ. ದೇವರಿದ್ದಾನೋ ಇಲ್ಲವೋ ಎಂದು ನಿರೂಪಿಸಲಾಗದಿದ್ದರೂ, ನನ್ನನ್ನು ಕಾಪಾಡುವ/ಮಣ್ಣುಮುಕ್ಕಿಸಬಲ್ಲ ಇನ್ನೊಬ್ಬನಿದ್ದಾನೆ(ಳೆ) ಅನ್ನುವ ಮನೋಸ್ಥಿತಿಯಿಂದ ಸಾವಿರಾರು ವರ್ಷವಾದರೂ ನಾವು ಹೊರಬಂದಿಲ್ಲ. ಸರ್ವಶಕ್ತನಾದ ದೇವರೆಂಬ ಕಲ್ಪನೆಯನ್ನು ಅಪ್ಪಿ ಮುದ್ದಾಡಿದವರು ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಜನ. ಅದನ್ನು ಧಿಕ್ಕರಿಸಿದವರ ಸಂಖ್ಯೆಯೂ ಅಷ್ಟೇ ದೊಡ್ಡದಲ್ಲದಿದ್ದರೂ, ಆ ಗುಂಪನ್ನು ನಿರ್ಲಕ್ಷಿಸುವಂತೆಯೇನೂ ಇಲ್ಲ. ಕುವೆಂಪು ಕೂಡಾ “ನೂರು ದೇವರನು ನೂಕಾಚೆ ದೂರ” ಅಂದವರು. ಹಾಗಂತಾ ಕುವೆಂಪು ತಮ್ಮ ಮನೆಯೊಳಗಿದ್ದ ದೇವರನ್ನೇನೂ ತೆಗೆದು ಹೊರಗೆಸೆಯಲಿಲ್ಲ. ದೇವರಬಗ್ಗೆ ಸಣ್ಣದೊಂದು ಭಕ್ತಿ, ಭಯ, ಪ್ರೀತಿ ಮನುಷ್ಯಸಂಕುಲಕ್ಕಿದ್ದೇ ಇದೆ.

ಕಳೆದೈದು ಶತಮಾನಗಳಿಂದೀಚೆಗೆ ಪಶ್ಚಿಮದಲ್ಲಿ ನಿರೀಶ್ವರವಾದ ಅಥವಾ ನಾಸ್ತಿಕತೆಯೆಂಬುದು ನಿಧಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಾರಂಭಿಸಿತು. ವಿಜ್ಞಾನ ಬೆಳೆದಂತೆಲ್ಲಾ ಈ ಜಗತ್ತಿನ ಬಗ್ಗೆ ಮನುಷ್ಯನ ಅರಿವು ಹೆಚ್ಚಾಗತೊಡಗಿತು. ಈ ಮೊದಲು ದೈವತ್ವವನ್ನು ಆರೋಪಿಸಿದ್ದ ಸೂರ್ಯ ಚಂದ್ರರ ಬಗ್ಗೆ ಹೆಚ್ಚೆಚ್ಚು ತಿಳಿದಂತೆಲ್ಲಾ ಮನುಷ್ಯನಿಗೆ ತನ್ನ ದೇವರ ಕಲ್ಪನೆಯ ಮೂಲ ಸಡಿಲವಾಗಿದೆ ಎಂದೆನಿಸತೊಡಗಿತು. ಭಾರತದಲ್ಲಿ ನಾವು ಚಾರ್ವಾಕರನ್ನು ನಾಸ್ತಿಕರನ್ನು ಮೊದಲಿಂದಲೇ ಕಂಡುಬಂದವರು. ಆದ್ದರಿಂದ ನಮಗೆ ಇದೇನೂ ಹೊಸವಿಷಯವಾಗಿರಲಿಲ್ಲ. ನಾಸ್ತಿಕನಾಗಿಯೂ ಹಿಂದೂವಾಗುಳಿಯುವ ಆಯ್ಕೆ ನಮಗೆ ಅಂದರೆ ಹಿಂದೂಗಳಿಗಿದೆ. ಆದರೆ ಬುದ್ಧನನ್ನು ನಂಬದವ, ಅವನ ಪಾಠಗಳನ್ನು ಉಪೇಕ್ಷಿಸಿದವ ಬೌದ್ಧನಾಗಲು ಸಾಧ್ಯವಿಲ್ಲ. ಕ್ರಿಸ್ತನ ಇರುವಿಕೆಯನ್ನು ಅಲ್ಲಗಳೆದು ನೀವು ಕ್ರಿಶ್ಚಿಯನ್ನನಾಗಿರಲು ಸಾಧ್ಯವಿಲ್ಲ. ಹದಿನೈದನೆಯ ಶತಮಾನದವರೆಗೂ ಪಶ್ಚಿಮದ ದೇಶಗಳಲ್ಲಿ ಚರ್ಚ್ ಎಂಬುದು ಬಹಳ ಶಕ್ತಿಶಾಲಿಯಾಗಿದ್ದ ಸಂಸ್ಥೆ. ಅದರ ಮತ್ತದರ ನಿರ್ಣಯಗಳ ವಿರುದ್ಧ ಯಾರೂ ಮಾತನಾಡುವಂತಿರಲಿಲ್ಲ. ಮಧ್ಯಪ್ರಾಚ್ಯದಲ್ಲಂತೂ ದೇವರ ಇರುವಿಕೆಯನ್ನು ಪ್ರಶ್ನಿಸುವುದೇ ಅಕ್ಷಮ್ಯ ಅಪರಾಧವಾಗಿತ್ತು. ರಿಲೀಜಿಯನ್ನಿನ ದೊಡ್ಡಗೋಡೆಯೇ ಆ ದೇವರು, ದೇವರ ಅಸ್ತಿತ್ವ, ದೇವರ ಪವಾಡಗಳ ಮೇಲಿನ ನಂಬಿಕೆ. ಅದನ್ನು ಪ್ರಶ್ನಿಸಿದಮೇಲೆ, ಅದನ್ನು ಹಾರಿದಮೇಲೆ ನೀವಲ್ಲಿಗೆ ಪುನಃ ಸೇರಲಾರಿರಿ.

ಆದರೆ ಎಲ್ಲಾ ವಿಷಯಗಳಂತೇ ನಾಸ್ತಿಕತೆಯೂ ಮುನ್ನೆಲೆಗೆ ಬಂದೇಬಂತು. ಹದಿನೆಂಟನೆಯ ಶತಮಾನವನ್ನಂತೂ ಪಶ್ಚಿಮದವರು ಜ್ಞಾನೋದಯದ ಯುಗ (Age of Enlightenment)ವೆಂದು ಕರೆದರು. ಫ್ರೆಂಚ್ ಕ್ರಾಂತಿಯಂತೂ ಮಾನವ ಇತಿಹಾಸದಲ್ಲೇ ಅಭೂತಪೂರ್ವ ಮಟ್ಟದಲ್ಲಿ ನಾಸ್ತಿಕತೆಯನ್ನು ಮುನ್ನೆಲೆಗೆ ತಂದು, ತರ್ಕ ಮತ್ತು ಕಾರಣದ ಪ್ರಾಬಲ್ಯವನ್ನು ಪ್ರತಿಪಾದಿಸಿದ ಇತಿಹಾಸದ ಮೊದಲ ಪ್ರಮುಖ ರಾಜಕೀಯ ಚಳುವಳಿ ಎಂದೆನಿಸಿಕೊಂಡಿತು. ವಿಜ್ಞಾನವೆಂಬುದು ದೇವರ ಅಸ್ತಿತ್ವವನ್ನು ನಿರಾಕರಿಲು ಹಲವಾರು ಕಾರಣಗಳನ್ನು ನೀಡಿದೆ ಎಂದು ಎಲ್ಲೆಡೆ ಕೂಗಲಾಯ್ತು. ಇಂದಿನ ಬಹಳಷ್ಟು ಜನರು ತತ್ವಜ್ಞಾನಿ ಫ್ರೆಡೆರಿಕ್ ನೀತ್ಝ (Friedrich Nietzsche)ಯನ್ನು ಈ ವಿಚಾರದಲ್ಲಿ ಮುಂದಿಟ್ಟುಕೊಂಡು ವಾದಿಸುತ್ತಾರೆ. “ದೇವರು ಸತ್ತ” ಎಂಬ ಕಡುಧೈರ್ಯದ ಮಾತನ್ನಾಡಿದ ನೀತ್ಝ ಅಂದಿನ ಕಾಲಕ್ಕೆ ಮಾತ್ರವಲ್ಲ ಮುಂದಿನ ನೂರುವರ್ಷಗಳ ಕಾಲ ಲಿಬರಲ್ಲುಗಳೆಂದು ಕರೆದುಕೊಂಡವರ ಮುದ್ದಿನ ಗೊಂಬೆಯಾಗಿದ್ದ. ನಮ್ಮ ಕುವೆಂಪು, ತೇಜಸ್ವಿ, ದ್ಯಾವನೂರರನ್ನೂ ನೀತ್ಝಯ ಪ್ರಭಾವಳಿ ಬಿಡಲಿಲ್ಲ.

ಆದರೆ ಎಲ್ಲಾ ತತ್ವಜ್ಞಾನಿಗಳಂತೆಯೇ ಜಗತ್ತು ನೀತ್ಝಯನ್ನೂ ಸಂಪೂರ್ಣವಾಗಿ ಅರ್ಥೈಸಿಕೊಳ್ಳಲಿಲ್ಲ. ಅವನಂದ ಸಾವಿರ ಮಾತುಗಳು ಅನುವಾದಲ್ಲೋ, ಪ್ರಸರಣದಲ್ಲೋ ಕಳೆದುಹೋಗಿ ಇನ್ನೇನೋ ಅರ್ಥಗಳನ್ನು ಪಡೆದುಕೊಂಡವು. ದೇವರ ಅಗತ್ಯವನ್ನು ಪ್ರಶ್ನಿಸಿದ ನೀತ್ಝಯನ್ನು ಕೆಲವು ನಿರೀಶ್ವರವಾದಿಗಳು ದೇವರ ಕಲ್ಪನೆಯ ಮೇಲೆ ವಿಜ್ಞಾನದ ವಿಜಯವೆಂಬಂತೆ ಬರೆದು, ನೀತ್ಝಯನ್ನು ನಾಸ್ತಿಕರ ದೇವರನ್ನಾಗಿ ಮಾಡಿದರು. ನೀತ್ಝಯ ದೇವರು, ಹಾಗೂ ಆ ದೇವರ ಸಾವನ್ನು ಅಷ್ಟೂ ಸುಲಭದಲ್ಲಿ ಅರ್ಥೈಸಿಕೊಳ್ಳಲಾಗುವುದಿಲ್ಲ. ಹಾಗೂ ನೀತ್ಝ ಯಾವತ್ತೂ ವಿಜ್ಞಾನ ಮತ್ತದರ ಕಾರಣದ ಶಕ್ತಿಯನ್ನು ದೇವರು ಅಥವಾ ರಿಲೀಜಿಯನ್ ಮೇಲಿನ ವಿಜಯವೆಂದು ಬಿಂಬಿಸಲಿಲ್ಲ. ನೀತ್ಝ “ವಿಜ್ಞಾನ ಜಗತ್ತನ್ನು ವಿವರಿಸಬಹುದೇ ಹೊರತು, ಜಗತ್ತನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುವುದಿಲ್ಲ” (Science can describe the world, but cannot explain it) ಎಂದಿದ್ದ. ಅದೆಷ್ಟು ನಿಜ ನೋಡಿ!

ಉದಾಹರಣೆಗೆ ವಿಜ್ಞಾನಿಯೊಬ್ಬನನ್ನ “ಬೆಂಕಿ ಎಂದರೇನು?” ಅಂತಾ ಕೇಳಿ. ಅವ ತಕ್ಷಣ “This is an exothermic reaction of a combustible substance with oxygen” ಅಂತಾನೆ. ಸರಿಯಾಗೇ ಹೇಳಿದ್ದಾನೆ ಅವ. ಆದರೆ, ಇದು “ಹೇಗೆ?” ಅಥವಾ “ಏನು?” ಅನ್ನೋದನ್ನ ವಿವರಿಸಬಲ್ಲುದೇ ಹೊರತು, “ಯಾಕೆ?” ಅನ್ನೋದನ್ನ ಅರ್ಥಸಿಕೊಳ್ಳಲು ಸಹಾಯವಾಗಬಹುದಾದ ಯಾವುದೇ ವಿವರಣೆ ವಿಜ್ಞಾನದ ಬಳಿಯಿಲ್ಲ. “ಬೆಂಕಿ ಯಾಕೆ ಹೀಗಿದೆ? ಬೆಂಕಿ ಯಾಕೆ ‘ಇದೆ’? ಇದರ ಅಸ್ತಿತ್ವಕ್ಕೆ ಕಾರಣವೇನು? ಬೆಂಕಿಯ ಅಸ್ತಿತ್ವಕ್ಕೆ, ಅದರಲ್ಲೂ ಇದೇ ರೀತಿಯ ಅಸ್ತಿತ್ವಕ್ಕೆ ಕಾರಣವೇನು?” ಅನ್ನೋ ಪ್ರಶ್ನೆ ಹಾಕಿದರೆ ವಿಜ್ಞಾನಿಯೂ ‘ಬ್ಬೆಬ್ಬೆಬ್ಬೆ’ ಅಂದಾನು.

“ಭೂಮಿ ಅಂದರೇನು? ಅದು ಯಾಕೆ ಹೀಗಿದೆ? ಗೋಲಾಕಾರದಲ್ಲೇ ಯಾಕಿದೆ? ಸಮುದ್ರದ ನೀರು ಎಲ್ಲಿಂದ ಬಂತು? ಅದು ಯಾಕೆ ಉಪ್ಪು? ಅಲೆಗಳೆಲ್ಲಿಂದ ಬರುತ್ತಿವೆ? ಚಂದ್ರ ಯಾರು? ಎಲ್ಲಿಂದ ಬಂದ? ಆಕಾಶ ನೀಲಿ ಯಾಕೆ? ನಕ್ಷತ್ರಗಳೇಕೆ ಮಿನುಗುತ್ತವೆ?” ಈ ಎಲ್ಲದಕ್ಕೂ ವಿಜ್ಞಾನ ‘ಯಾಕೆ?’ ಮತ್ತು ‘ಹೇಗೆ?’ ಎಂದು ಉತ್ತರಿಸಬಲ್ಲುದು. ಆದರೆ “ಭೂಮಿ ಯಾಕಿದೆ? ಸಮುದ್ರದ ನೀರಿನ ಅಸ್ತಿತ್ವದ ಮಹತ್ವವೇನು? ನಮ್ಮ ನಾಲಿಗೆಯಲ್ಲಿ ಅದರ ಉಪ್ಪನ್ನೇ ಹೆಚ್ಚಾಗಿ ಗ್ರಹಿಸುವ ಶಕ್ತಿಯಾಕಿದೆ? ಅದರ ಒಗರೇಕೆ ನಮಗೆ ಸಣ್ಣದೆನಿಸುತ್ತದೆ? ಅಲೆಗಳು ಯಾಕೆ ಈ ಜಗತ್ತಿನಲ್ಲಿವೆ? ಚಂದ್ರನ ಅಗತ್ಯ ಇದೆಯೇ? ಸೂರ್ಯನೊಬ್ಬನನ್ನು ಬಿಟ್ಟು ಬೇರೆ ಯಾವ ನಕ್ಷತ್ರಗಳೂ ನಮ್ಮ ಮೇಲೆ ನೇರವಾಗಿ ಪ್ರಭಾವ ಬೀರುತ್ತಿಲ್ಲವೆಂದ ಮೇಲೆ ಈ ಜಗತ್ತಿನಲ್ಲಿ ಅವುಗಳ ಅಸ್ತಿತ್ವದ ಅಗತ್ಯವೇನು? ಎನ್ನುವ ಪ್ರಶ್ನೆಗಳಿಗೆ ವಿಜ್ಞಾನಿಯೂ ಉತ್ತರಿಸಲು ತಡವುತ್ತಾನೆ. ಈಗಷ್ಟೇ ಕಾಲೇಜು ಮುಗಿಸಿದ ಯುವವಿಜ್ಞಾನಿಯಾದರೆ ಇದೆಂತಹಾ ಮೂರ್ಖತನದ ಪ್ರಶ್ನೆ? “ನಕ್ಷತ್ರ ಯಾಕಿದೆ ಅಂದರೆ ಬಿಗ್-ಬ್ಯಾಂಗ್ ಆಗಿದೆ ಅದಕ್ಕೇ ಇದೆ” ಎಂದು ನಗುತ್ತಾನೆ. ಎರಡು ವರ್ಷ ವಿಜ್ಞಾನದ ಲ್ಯಾಬಿನಲ್ಲಿ ಕೂತು ಟೆಲಿಸ್ಕೋಪಿನ ಮೂಲಕ ನಕ್ಷತ್ರಗಳ ಕೆನ್ನೆ ತಡವಿದವನಾದರೆ ಸ್ವಲ್ಪ ತಡವರಿಸುತ್ತಾನೆ. ವರ್ಷಾನುಗಟ್ಟಲೇ ವಿಜ್ಞಾನದಂಗಳದಲ್ಲಿ ವಿಹರಿಸಿದವ ಸ್ವಲ್ಪವಾದರೂ ಉತ್ತರಿಸಬಲ್ಲನೇನೋ. ಅವನ ವಿವರಣೆಯೂ ಫಿಸಿಕ್ಸಿನಿಂದ ಮೆಟಾಫಿಸಿಕ್ಸಿನೆಡೆಗೆ ವಾಲುತ್ತದೆಯೇ ಹೊರತು ನೂರಕ್ಕೆ ನೂರು ವೈಜ್ಞಾನಿಕವಾಗಿರುವುದಿಲ್ಲ.

ರಿಲೀಜಿಯನ್ (ಹಾಗೂ ಧರ್ಮ) ಜೀವನದ ಕೆಲ “ಯಾಕೆ” ಪ್ರಶ್ನೆಗಳಿಗೆ ಉತ್ತರಿಸಬಲ್ಲುದಾದರೂ, ಎಷ್ಟೋ ಬಾರಿ ವಿಜ್ಞಾನದ ಕೆಲ ಅನ್ವೇಷಣೆಗಳು ಆ ಉತ್ತರಗಳ ಮೇಲೆ ಅನುಮಾನದ ನೆರಳನ್ನು ಹರಡುತ್ತವೆ. ವಿಜ್ಞಾನ ಸಹಸ್ರ ವರ್ಷಗಳ ಹಿಂದೆ ಚರ್ಚನ್ನು ಹಿಂದಿಕ್ಕಿ, ಜನಪ್ರಿಯವಾಗಿದ್ದೇ ತನ್ನ ತಾರ್ಕಿಕ ಉತ್ತರಗಳ ಮೂಲಕ. ಹಾಗಂತ ಪ್ರಶ್ನೆಯೊಂದಕ್ಕೆ ರಿಲೀಜಿಯನಿನ್ನ ಉತ್ತರವನ್ನು ತಲೆಕೆಳಗು ಮಾಡಿದ ವಿಜ್ಞಾನ, ಈಗ ಸ್ವತಃ ತಾನೇ ಆ ಅನುಮಾನಗಳನ್ನ ಪರಿಹರಿಸುತ್ತದಾ? ಅದೂ ಇಲ್ಲ. ವಿಜ್ಞಾನ ರಿಲೀಜಿಯನ್ನಿನ ಪವಾಡಗಳನ್ನು ಅತಾರ್ಕಿಕ ಮತ್ತು ಅಸಂಭವವೆಂದು ನಿರೂಪಿಸಿ ಬದಿಗೆದೂಡಿ ಅಲ್ಲೊಂದು ದೊಡ್ಡ “ಏನೂ ಇಲ್ಲ” ಅಥವಾ “ಗೊತ್ತಿಲ್ಲ”ದ ನಿರರ್ಥಕ ಖಾಲಿ ಜಾಗ (void) ಸೃಷ್ಟಿಮಾಡುತ್ತದೆ, ಅಷ್ಟೇ. ಹಾಗೂ ಮನುಷ್ಯ ವಿಜ್ಞಾನದ ಉತ್ತುಂಗ ತಲುಪಿದಷ್ಟೂ ಈ ಕೆಲ ಅನುಮಾನಗಳ void ದೊಡ್ಡದಾಗುತ್ತಲೇ ಹೋಗುತ್ತದೆ. ವಿಜ್ಞಾನ, ನಿಮ್ಮ ಪ್ರಸಕ್ತ ನಂಬಿಕೆಯನ್ನ ಸುಳ್ಳು ಅಂತಾ ನಿರೂಪಿಸುತ್ತದೆಯೇ ಹೊರತು, ‘ಅದು ಸುಳ್ಳಾದರೆ ಸತ್ಯ ಯಾವುದು?’ ಎಂಬುದನ್ನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಯಾಕೆಂದರೆ (ಮತ್ತೊಮ್ಮೆ) ನೀತ್ಝ ಹೇಳಿದಂತೆ “ವಿಜ್ಞಾನದಲ್ಲಿ ಅಂತಿಮ ಉದ್ದೇಶ ಅನ್ನೋ ಯಾವ ಪರಿಕಲ್ಪನೆಯೂ ಇಲ್ಲ, ಹಾಗೂ ವಿಜ್ಞಾನಕ್ಕೆ ಅದರ ಉಸಾಬರಿಯೂ ಇಲ್ಲ. Science, has no consideration for ultimate purposes”. ನಮ್ಮ ಸಮಾಜದ ಇಂದಿನ ಪ್ರಮುಖ ಸಮಸ್ಯೆಯೆಂದರೆ, ಎಷ್ಟೋ ಜನರಿಗೆ ವಿಜ್ಞಾನದ ಈ ಒಂದು ಮಿತಿಯ ಅನುಭವವಾಗಲೀ, ಅನುಭಾವವಾಗಲೀ ಇಲ್ಲ. ಅದನ್ನವರು ಗುರುತಿಸಿಯೇ ಇಲ್ಲ. ಬದಲಿಗೆ ಇಂತವರ ಪಾಲಿಗೆ ವಿಜ್ಞಾನವೆಂದರೆ ಹೊಸದೊಂದು ರಿಲೀಜಿಯನ್ನೇ ಆಗಿಬಿಟ್ಟಿದೆ. ಹಾಗೂ ಇಂತವರ ಸಂಖ್ಯೆ ಜಗತ್ತಿನಲ್ಲಿ ಸಹಸ್ರ-ಸಹಸ್ರಗಳಲ್ಲಿದೆ.

ಬೇಕಾದರೆ ಕೆಲ ‘ವಿಜ್ಞಾನ ಬರಹಗಾರರ’ ಹಾಗೂ ಪ್ರಗತಿಪರರ ಬರಹ ಅಥವಾ ಚಿಂತನಾಲಹರಿಯನ್ನು ಗಮನಿಸಿ. ಯಾವುದೋ ಒಂದು ವಿಜ್ಞಾನ ಪತ್ರಿಕೆಯಲ್ಲೋ, ಯಾವುದೋ ಒಂದು ವಿಶ್ವವಿದ್ಯಾಲಯವೋ ಒಂದು ವಿಷಯದ ಬಗ್ಗೆ ಒಂದು ಫರ್ಮಾನು ಹೊರಡಿಸಿಬಿಟ್ಟರೆ ಮುಗೀತು. ಅದೇ ಅಂತಿಮ ಸತ್ಯವೆಂಬಂತೆ ಅಂಟಿಕೊಳ್ಳುತ್ತಾರೆ. ಅದಕ್ಕೆ ತಮ್ಮನ್ನೇ ಒತ್ತೆಯಿಟ್ಟುಕೊಳ್ಳುತ್ತಾರೆ. “Proven by real science” ಅಥವಾ “this is a scientific fact” ತರಹದ ಮಾತುಗಳು ಎಲ್ಲೆಲ್ಲೂ ಕೇಳಿಬರುತ್ತವೆ. ಅದನ್ನ ಪ್ರಶ್ನಿಸಿದವರಿಗೆ ರಿಗ್ರೆಸಿವ್ ಎಂಬ ಹಣೆಪಟ್ಟಿ ಕಟ್ಟಲಾಗುತ್ತೆ. “ಇದನ್ನ ಮೊದಲೇ ಇಲ್ಲಿಲ್ಲಿ ಇಂತವರು ಶತಮಾನಗಳ ಹಿಂದೆಯೇ ಹೇಳಿದ್ದಾರೆ, ನಿರೂಪಿಸಿದ್ದಾರೆ” ಎಂದರಂತೂ “ಹೋಗಿ ಗೋಮೂತ್ರ ಕುಡಿ, ನೀನೊಬ್ಬ ವಾಟ್ಸ್ಯಾಪ್ ಯೂನಿವರ್ಸಿಟಿಯ ವಿದ್ಯಾರ್ಥಿ, ಆರೆಸ್ಸೆಸ್ ಭಕ್ತ” ಎಂಬ ಬಿರುದುಗಳನ್ನು ದಯಪಾಲಿಸಲಾಗುತ್ತೆ. So called ವೈಜ್ಞಾನಿಕ ಮನೋಭಾವದವರ ಇಂತಹ ವರ್ತನೆ, ಪ್ರಶ್ನೆಗಳಿಗೆ “….because our holy book says so” ಅಥವಾ “this is just because of god’s will” ಅನ್ನುವಂತಾ ಉತ್ತರಗಳನ್ನೆಸೆಯುವ ರಿಲೀಜಿಯನ್ನಿನ ನಂಬಿಕಸ್ತನ ಮಾತುಗಳಿಗಿಂತಾ ಹೇಗೆ ಭಿನ್ನ ಹೇಳಿ?

.

.
‘ದೇವರು ಸತ್ತ’ ಎಂದ ನೀತ್ಝ, ಅದೇ ಉಸಿರಿನಲ್ಲಿ ‘ವಿಜ್ಞಾನವೆಂದರೆ ದೇವರಿಲ್ಲದ ಜಗತ್ತಿನ (ಏಕೈಕ) ಮೌಲ್ಯವಾಗಿಬಿಡುವ ಅಪಾಯವಿದೆ’ ಎಂದೂ ಎಚ್ಚರಿಸಿದ್ದ. ಯಾರೂ ಕೇಳಿಸಿಕೊಂಡಿಲ್ಲ ಅಷ್ಟೇ. ಆತ ನಮಗೆ ರಿಲಿಜೀಯನ್ನನ್ನು ಎಷ್ಟು ವಿಮರ್ಶಿಸಲು ಹೇಳಿದ್ದನೋ, ಜ್ಞಾನ ಮತ್ತು ವಿಜ್ಞಾನಗಳನ್ನೂ ಅಷ್ಟೇ ವಿಮರ್ಷಾತ್ಮಕವಾಗಿ ನೋಡುವಂತೆ ಹೇಳಿ ಸವಾಲೆಸಿದಿದ್ದ. Knowledge ಅಥವಾ ಜ್ಞಾನವನ್ನು ಬರೇ ಜ್ಞಾನದ ಸಲುವಾಗಿ ಪೂಜಿಸುವುದಕ್ಕೂ, ದೇವರನ್ನು ಬರೇ ‘ದೇವ್ರು ಹೇಳಿದ್ದಾನೆ’ ಅನ್ನೋ ಕಾರಣಕ್ಕಾಗಿ ಪೂಜಿಸುವುದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ನಮಗೆ ನೀತ್ಝಯ “God is dead. God remains dead. And we have killed him” ಮಾತು ಚುಚ್ಚಿದಷ್ಟೇ, ಅವನ “Man shouldn’t be the servant of knowledge. Knowledge should be the servant of man” ಮಾತುಗಳೂ ಚುಚ್ಚಬೇಕು. ಪ್ರೇರೇಪಿಸಬೇಕು.

 

ವಿಜ್ಞಾನವೇ ಸರ್ವಸ್ವ, ವಿಜ್ಞಾನದಲ್ಲಿ ಎಲ್ಲದಕ್ಕೂ ಉತ್ತರವಿದೆ, ವಿಜ್ಞಾನ ಸದಾ ಹೊಸದನ್ನೇ ಕಂಡುಹಿಡಿದಿದೆ, ವಿಜ್ಞಾನವೇ ಭವಿಷ್ಯ, ವಿಜ್ಞಾನವೇ ಜ್ಞಾನ ಎಂದುಕೊಂಡವರಿಗೆ ಈ ಲೇಖನವನ್ನು ಅರ್ಪಿಸಲಾಗಿದೆ.

0 comments on “ದೇವರು ಸತ್ತ….ಮುಂದಿನ ದೇವರು ಯಾರು?

Leave a Reply

Your email address will not be published. Required fields are marked *