Tuesday, 16 April, 2024

ಉಚಿತ ಉನ್ನತ ಶಿಕ್ಷಣದಿಂದ ಏಕಲವ್ಯರನ್ನು ತಯಾರಿಸಬಲ್ಲೆವೇ?

Share post

ವಿದ್ಯಾ ದದಾತಿ ವಿನಯಂ, ವಿನಯಾತ್ ಯಾತಿ ಪಾತ್ರತಾಂ, ಪಾತ್ರತ್ವಾತ್ ಧನಂ ಆಪ್ನೋತಿ, ಧನಾತ್ ಧರ್ಮ ತಥಃ ಸುಖಂ ಅಂದರೆ “ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಹಣ, ಹಣದಿಂದ ಧರ್ಮಕಾರ್ಯಗಳು, ಧರ್ಮ ಕಾರ್ಯಗಳಿಂದ ಸುಖ” ಅನ್ನೋದು ಭಾರತೀಯರ ಬಲವಾದ ನಂಬಿಕೆ. ಆದರೆ ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದಾಗ ನಿಜಕ್ಕೂ ಈ ಜನರು ಅಸಲು ವಿದ್ಯಾವಂತರೇ ಅನ್ನುವ ಅನುಮಾನ ಬರುವಂತಾಗಿದೆ. ಯಾಕಂದರೆ ಅವರ ವರ್ತನೆಯಲ್ಲಿ ವಿನಯವಾಗಲೀ, ಅವರನ್ನು ಗೌರವಿಸುವ ವ್ಯಕ್ತಿತ್ವವಾಗಲೀ ಕಂಡುಬರುವುದೇ ಅಪರೂಪವಾಗಿದೆ. ವಿದ್ಯಾರ್ಥಿ ಎಂದರೆ ವಿದ್ಯೆ ಅಥವಾ ಇನ್ನೂ ವಿಶಾಲ ಅರ್ಥದಲ್ಲಿ ಒಂದು ವಿಷಯದಲ್ಲಿ ಪರಿಣಿತಿ ಪಡೆಯಲು ಅಗತ್ಯವಾದ ಯಾವುದೇ ವಿಷಯದ ತೀವ್ರ ಬೌದ್ಧಿಕ ಏರ್ಪಾಟಿಗೆ ಸಮರ್ಪಿಸಿಕೊಳ್ಳುವ ಯಾರಾದರೂ ಆಗಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮರ್ಪಣಾ ಮನೋಭಾವ ಎಷ್ಟು ಜನರಲ್ಲಿ ನಿಮಗೆ ಕಾಣಸಿಗಬಹುದು ಹೇಳಿ. ಬದಲಾಗಿ ಇಂದಿನ ದಿನಗಳಲ್ಲಿ ವಿದ್ಯಾಲಯಗಳಲ್ಲೂ “ಇದು ನನ್ನದು, ಇದು ನನಗೆ ಸೇರಿದ್ದು, ನನಗೆ ಮಾತ್ರವೇ” ಎಂಬ ದಾರ್ಷ್ಟ್ಯ ಮತ್ತು ಸ್ವಾರ್ಥಗಳೇ ಹೆಚ್ಚು ಕಾಣಸಿಗುತ್ತಿದೆ. ಜೊತೆಗೆ ಇದು ನನಗೆ ಯಾವುದೇ ಖರ್ಚಿಲ್ಲದೇ ಸಿಗಬೇಕು ಎಂಬ ಹೊಸಾ ಚರ್ಚೆಗಳೂ ಕಾಣಸಿಗುತ್ತಿವೆ.

ಕಾಲಾರಂಭದಿಂದಲೂ ಸಹ ಭಾರತದಲ್ಲಿ ಸರಸ್ವತೀಪುತ್ರರಿಗೇನೂ ಕಮ್ಮಿಯಿಲ್ಲ. ಪ್ರಾಚೀನ ಗುರುಕುಲ ಪದ್ದತಿಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಗುರುಗಳಿಗೆ ಸಮರ್ಪಿಸಿಕೊಂಡು ಜ್ಞಾನಾರ್ಜನೆ ನಡೆಸುತ್ತಿದ್ದರು. ಹೆಚ್ಚಿನ ಗುರುಕುಲಗಳು ರಾಜಾಶ್ರಯದಲ್ಲಿ ನಡೆಯುತ್ತಿದ್ದವು, ಇನ್ನುಕೆಲವು ಸಮುದಾಯದ ದಾನಗಳಿಂದ ನಡೆಯುತ್ತಿತ್ತು. ವಿದ್ಯಾರ್ಜನೆಯ ಸಮಯ ಮುಗಿದಾಗ ಗುರುದಕ್ಷಿಣೆಯ ಹೆಸರಿನಲ್ಲಿ ವಿದ್ಯಾರ್ಥಿ ತನಗೆ ಸಾಧ್ಯವಾದದ್ದನ್ನು ಗುರುಕುಲಕ್ಕೆ ಕೊಡಬಹುದಾಗಿತ್ತು. ಸಮಯಕಳೆದಂತೆ ಈ ಏರ್ಪಾಟು ಬದಲಾಯಿತು. ನಿಧಾನಕ್ಕೆ ಇವು ಶುಲ್ಕಕೊಟ್ಟು ಸೇರುವ ವಿದ್ಯಾಲಯಗಳಾದವು. ಈಗಂತೂ ಅವು ಹಣಮಾಡುವ ಬಹುದೊಡ್ಡ ದಂಧೆಯಾಗಿ ಮಾರ್ಪಾಟಾಗಿದೆ. ಇದರ ಮಧ್ಯೆಯೂ ಸಹ ಸರ್ಕಾರಗಳು ಉಚಿತ ಮತ್ತು ಅನುದಾನಿತ ಶಿಕ್ಷಣಕ್ಕಾಗಿ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳನ್ನು ನಡೆಸುತ್ತಿವೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿಯೇ ಇಂತಹ ವ್ಯವಸ್ಥೆಯಿದೆಯಾದರೂ ಇದು ನೂರಕ್ಕೆ ನೂರು ಪರಿಣಾಮಕಾರಿಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಅದೇನೇ ಇದರೂ ಸಹ, ಈ ರೀತಿಯ ಅನುದಾನಿತ ವಿದ್ಯಾಲಯಗಳಲ್ಲಿ ಸರ್ಕಾರಕ್ಕೆ ಯಾವತ್ತಿದ್ದರೂ ಸಹ ಆರ್ಥಿಕ ದೃಷ್ಟಿಕೋನದಿಂದ ನಷ್ಟವೇ ಹೊರತು ಬೇರೇನಿಲ್ಲ. ಇದನ್ನು ಸರಿದೂಗಿಸಲು ಆಗಾಗ ವಿದ್ಯಾಲಯಗಳು ತಮ್ಮ ಶುಲ್ಕವನ್ನು ಹೆಚ್ಚಿಸುವುದು ಸಾಮಾನ್ಯ ಪ್ರಕ್ರಿಯೆ. ಇತ್ತೀಚಿನ ದಿನಗಳಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟನಾವಳಿಗಳು ನಮಗೆಲ್ಲರಿಗೂ ನೆನಪಿರಬಹುದು. ಈ ಲೇಖನ ಜೆಎನ್ಯೂವಿನಲ್ಲಿ ನಡೆದದ್ದು ಸರಿಯೋ ತಪ್ಪೋ ಎಂಬುದರ ಬಗ್ಗೆಯಲ್ಲ. ಬದಲಿಗೆ ಇಂತಹದ್ದೊಂದು ಘಟನಾವಳಿಗಳಿಗೆ ಕಾರಣವಾದ ಮೂಲವಿಚಾರಗಳ ಬಗ್ಗೆ.

ಮೊತ್ತಮೊದಲನೆಯದಾಗಿ, ಜಗತ್ತನ್ನು ಅವಲೋಕಿಸುವ ಒಬ್ಬ ಸಾಮಾನ್ಯಮನುಷ್ಯನಾಗಿ ನನಗೆ ಆಶ್ಚರ್ಯವೆನ್ನಿಸುವುದು ಭಾರತದಲ್ಲಿ ನಾವು ಉನ್ನತಶಿಕ್ಷಣವನ್ನು ನೋಡುವ ರೀತಿ. ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಮೂಲಭೂತ ಶಿಕ್ಷಣ, ಅಂದರೆ ಕನಿಷ್ಟ ಏಳನೇ ತರಗತಿಯಷ್ಟರವರೆಗೆ, ಉಚಿತ. ಅಂದರೆ ಸರ್ಕಾರ ಅದರ ಖರ್ಚನ್ನು ನೋಡಿಕೊಳ್ಳುತ್ತದೆ. ಸರ್ಕಾರದ ಅನುದಾನದಿಂದ ನಡೆಯುವ ಶಾಲೆಗಳ ಸೌಕರ್ಯವೂ ಅಷ್ಟಕ್ಕಷ್ಟೇ ಎನ್ನುವುದರ ಬಗ್ಗೆ ಅಮೇರಿಕಾದಿಂದ ಹಿಡಿದು ದಕ್ಷಿಣ ಸುಡಾನ್’ಬರೆಗೂ ಎರಡು ಮಾತಿಲ್ಲ. ಈ ಕಾರಣಕ್ಕಾಗಿಯೇ ಹೆಚ್ಚಿನ ಸೌಕರ್ಯ ಬೇಕೆನಿಸುವ ‘ಉಳ್ಳವರಿಗಾಗಿ’ ಖಾಸಗೀ ಶಾಲೆಗಳಿವೆ, ಅಲ್ಲಿ ಹೆಚ್ಚಿನ ಸೌಕರ್ಯಗಳೂ ಇವೆ. ಅದಿಲ್ಲದ ‘ಹೆಚ್ಚಿನವರಿಗಾಗಿ’ ಈ ಉಚಿತ ಶಿಕ್ಷಣ ಸರ್ಕಾರ ಕೊಡುತ್ತಿದೆ. ಯಾಕೆಂದರೆ ಪ್ರಜೆಗಳನ್ನು ಬದುಕಿಗೆ ಸಿದ್ಧಪಡಿಸುವುದು ಸರ್ಕಾರಗಳ ಮೂಲಉದ್ದೇಶಗಳಲ್ಲೊಂದು. ಅದಕ್ಕೆ ಬೇಕಾದ ಕನಿಷ್ಟ ಅರ್ಹತೆಗಳಾದ ಓದು, ಬರಹ, ಕೂಡು-ಕಳೆಯುವಿಕೆ, ಜಗತ್ತನ್ನು ಅವಲೋಕಿಸಲು ಸಹಾಯ ಮಾಡುವ ಚಿಂತನಾಕ್ರಮಗಳನ್ನು ಈ ಶಿಕ್ಷಣ ಒದಗಿಸುತ್ತದೆ. ಇದಾದನಂತರದ ಸೇತುಶಿಕ್ಷಣ, ಅಂದರೆ ತಮಗಿಷ್ಟದ ಶಾಖೆಯಾದ ವಿಜ್ಞಾನ, ಸಮಾಜ, ಭಾಷೆಗಳನ್ನರಿಯುವ ಬಗ್ಗೆ ಹೆಚ್ಚಿನದನ್ನು ಓದುವಇಚ್ಚೆಯಿದ್ದವರಿಗಾಗಿ ನಡೆಯುವ ಹತ್ತನೇ ತರಗತಿಯವರೆಗಿನ ಶಿಕ್ಷಣ, ಹೆಚ್ಚಿನ ದೇಶಗಳಲ್ಲಿ ಉಚಿತವಲ್ಲ. ಸರ್ಕಾರೀ ಶಾಲೆಗಳಲ್ಲೂ ಕೂಡಾ ನೆಪಮಾತ್ರದ ಹಣವನ್ನಾದರೂ ಕಟ್ಟಲೇಬೇಕು. ಈ ಹಣವನ್ನು ಶಾಲಾಭಿವೃದ್ಧಿಗಾಗಿ ಬಳಸಲಾಗುತ್ತದೆ. ಇಲ್ಲಿಂದ ಮುಂದಿನ ಎಲ್ಲಾ ರೀತಿಯ ಶಿಕ್ಷಣಕ್ಕೆ ಜಗತ್ತಿನ 196 ದೇಶಗಳಲ್ಲಿ 130 ದೇಶಗಳು ಶುಲ್ಕ ವಿಧಿಸುತ್ತವೆ. ನೆಪಮಾತ್ರದ ಶುಲ್ಕವಲ್ಲ, ಶಾಲೆಯನ್ನು ನಡೆಸಲು ಬೇಕಾದ ಮೊತ್ತದ 70%ವರೆಗಿನ ಹಣವನ್ನು ವಿದ್ಯಾರ್ಥಿಗಳಿಂದಲೇ ಕಟ್ಟಿಸಿಕೊಳ್ಳಲಾಗುತ್ತದೆ. ಉನ್ನತ ಶಿಕ್ಷಣ ಅಂದರೆ ಪದವಿ, ಸ್ನಾತಕೋತ್ತದ ಪದವಿ, ಡಾಕ್ಟರಲ್ ಮತ್ತು ಪೋಸ್ಟ್ ಡಾಕ್ಟರಲ್ ಶಿಕ್ಷಣವೆಂಬುದು ಫಿನ್ಲೆಂಡ್, ಡೆನ್ಮಾರ್ಕ್, ಜರ್ಮನಿಯಂತಕ ಯೂರೋಪಿನ ಕೆಲ ದೇಶಗಳಲ್ಲಿ ಬಿಟ್ಟರೆ ಬೇರೆಲ್ಲಾ ಕಡೆ ಸಂಪೂರ್ಣ ವಿದ್ಯಾರ್ಥಿಗಳ ಶುಲ್ಕದಿಂದಲೇ ನಡೆಯುವಂತದ್ದು. ಅಮೇರಿಕಾದ ಯಾವುದೇ ವಿವಿಯಲ್ಲಿ ಪದವಿ ಪಡೆಯಲು ವಾರ್ಷಿಕ 57,000 ಡಾಲರ್ (ಸುಮಾರು ನಲವತ್ತು ಲಕ್ಷ ರೂಪಾಯಿ) ವ್ಯಯಿಸಬೇಕು. ಯುಕೆಯಲ್ಲಿ ಪದವಿಯ ಸರಾಸರಿ ಖರ್ಚು 32000 ಪೌಂಡ್ (ಮೂವತ್ತು ಲಕ್ಷ ರೂಪಾಯಿ). ಇದು ಯಾವುದೇ ವಿಜ್ಞಾನದ ವಿಷಯಗಳಿಗಲ್ಲ, ಕಲೆ ಮತ್ತು ವಾಣಿಜ್ಯ ಪದವಿಗಳದ್ದೂ ಇದೇ ಶುಲ್ಕ. ಮತ್ತಿದು ಕೇವಲ ಭೋಧನಾ ಶುಲ್ಕವಷ್ಟೇ. ಊಟ, ವಸತಿ, ಪುಸ್ತಕದ ಖರ್ಚು ಬೇರೆ. ಉನ್ನತಶಿಕ್ಷಣ ಅಲ್ಲಿವ ವಿವಿಗಳಲ್ಲಿ ದೇಶದ ಹೆಚ್ಚಿನ ಮಕ್ಕಳಿಗೆ ಗಗನಕುಸುಮವೆನಿಸುವಷ್ಟು ದುಬಾರಿ. ಅದಕ್ಕಾಗಿಯೇ ವಿದ್ಯಾರ್ಥಿ ಸಾಲಗಳ ಪರಿಕಲ್ಪನೆ ಯೋಜನೆಗಳು ಹುಟ್ಟಿಕೊಂಡದ್ದು. ಹೀಗಿದ್ದಾಗ ಭಾರತದಲ್ಲಿ ಮಾತ್ರ ನಾವು ಈ ಉನ್ನತ ಶಿಕ್ಷಣವನ್ನು ಸರ್ಕಾರೀ ಖರ್ಚಿನಲ್ಲಿ ನಡೆಸುತ್ತಿದ್ದೇವೆ. ನಮ್ಮದೇ ಐಐಟಿಯಲ್ಲಿ ವರ್ಷಕ್ಕೆ ಒಬ್ಬ ವಿದ್ಯಾರ್ಥಿ 2.5 ಲಕ್ಷ ಖರ್ಚು ಮಾಡುತ್ತಾನೆ, ಐಐಎಂ ವಿದ್ಯಾರ್ಥಿ ಕನಿಷ್ಟ ಐದು ಲಕ್ಷ ಖರ್ಚು ಮಾಡುತ್ತಾನೆ. ಆದರೆ ಜೆಎನ್ಯೂವಿನಲ್ಲಿ ಪದವಿ ವಿದ್ಯಾರ್ಥಿಯೊಬ್ಬನ ಸರಾಸರಿ ವಾರ್ಷಿಕ ಖರ್ಚು ನಾಲ್ಕುನೂರು ರೂಪಾಯಿ! ಊಟ ವಸತಿಗೆ ಮುನ್ನೂರು ರೂಪಾಯಿ!! ಅದರಲ್ಲೂ ಈ ವಿದ್ಯಾರ್ಥಿಗಳು ಈವರೆಗೆ ಕೊಡದೇ ಉಳಿಸಿಕೊಂಡಿರುವ ಊಟದ ಬಾಕಿ ಶುಲ್ಕ ಒಂದು ಕೋಟಿ ಹದಿಮೂರು ಲಕ್ಷ!! ಹಣ ಮತ್ತು ಸಮಯದ ಯಾವುದೇ ಮೌಲ್ಯವನ್ನರಿಯದ ಸಣ್ಣಮಗುವಿಗೆ ಉಚಿತ ಶಿಕ್ಷಣ ಕೊಡುವುದಕ್ಕೂ, ಜಗತ್ತನ್ನರಿತ ಯುವಜನಾಂಗಕ್ಕೆ ಉಚಿತ ಶಿಕ್ಷಣ ಕೊಡುವುದಕ್ಕೂ ಇರುವ ವ್ಯತ್ಯಾಸವನ್ನು ನಮ್ಮ ಸೋಶಿಯಲಿಸ್ಟಿಕ್ ಸರ್ಕಾರಗಳು ಅರಿತಿವೆಯೇ ಎಂಬ ಅನುಮಾನ ನನಗೆ ಸದಾ ಬರುವುದುಂಟು. ಯಾವುದೇ ಖರ್ಚಿಲ್ಲದೇ ಉನ್ನತ ಶಿಕ್ಷಣವನ್ನು ಪಡೆಯುವ ಈ ಯುವಜನತೆ, ತನ್ನ ಐಡಿಯಾಲಜಿಗಳು, ಯೋಚನಾಲಹರಿಗಳು ಗಟ್ಟಿಗೊಳ್ಳುತ್ತಿರುವ ಹರೆಯದಲ್ಲಿ, ಉಚಿತ ಪದವಿಯ ಶಿಕ್ಷಣ ಪಡೆಯುತ್ತಾ ಹೋದಂತೆ ಆತನಿಗೆ “ಓಹೋ ಇದನ್ನೆಲ್ಲಾ ನಾನು ಉಚಿತವಾಗಿ ಪಡೆಯಲು ಅರ್ಹ” ಎಂಬುದೊಂದು ಅಭಿಪ್ರಾಯ ಗಟ್ಟಿಯಾಗತೊಡಗುತ್ತದೆ. ಜೊತೆಗೇ ಉಚಿತವಾಗಿ ಸರ್ಕಾರದಿಂದ ಏನನ್ನೂ ಪಡೆಯಬಹುದು, ಹಾಗೂ ಪಡೆಯಬೇಕು ಅನ್ನುವುದೊಂದು ಮನಸ್ಸಿನಲ್ಲಿ ಮೂಡುತ್ತದೆ. ಜೆಎನ್ಯೂ ದೇಶದೆಲ್ಲಾ ವಿವಿಗಳಿಗಿಂತಾ ಅಗ್ಗದ ಖರ್ಚಿನ ಶಿಕ್ಷಣಕ್ಕೆ ಹೆಸರಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ರಾಜಕಾರಣಿಗಳು ತಮ್ಮ ಸ್ವಾರ್ಥಸಾಧನೆಗಾಗಿ ಸರ್ಕಾರೀ ಖರ್ಚಿನಲ್ಲಿ ಅಗ್ಗಗೊಳಿಸಿದ್ದು ಎಂಬುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಕಾರಣಗಳಿಗಾಗಿಯೇ ಜೆಎನ್ಯೂ ಪುಗಸಟ್ಟೆ ಜೀವನಪ್ರಿಯರಾದ ಎಡಪಂಥೀಯರ ಗೂಡಾಗಿರುವುದು.

ಎರಡನೆಯದಾಗಿ, ಸರ್ಕಾರ ಶುಲ್ಕ ಹೆಚ್ಚಿಸುವ ಇಂತಹದ್ದೊಂದು ನಿರ್ಧಾರವನ್ನು ಕೇವಲ ಜೆಎನ್ಯೂವಿನ ಮೇಲೆ ಮಾತ್ರ ಹೇರುತ್ತಿರುವುದು ಇನ್ನೂ ಆಶ್ಚರ್ಯಕರ. ವಿಶ್ವವಿದ್ಯಾನಿಯಲಗಳು ಸರ್ಕಾರದ ಅಧೀನದಲ್ಲಿದ್ದಮೇಲೆ ಎಲ್ಲಾ ವಿವಿಗಳಲ್ಲಿಯೂ ಸಹ ಏಕರೂಪದ ಶುಲ್ಕಗಳಿರಬೇಕು. ಊಟದ ಶುಲ್ಕಗಳು ಆಯಾ ಊರಿನ ಹಣದುಬ್ಬರವಿಳಿತಗಳಿಗನುಗುಣವಾಗಿ ಹೆಚ್ಚುಕಮ್ಮಿಯಾಗಬಹುದು. ಆದರೆ ಅದು ಬಿಟ್ಟಿ ವಿವಿಯೊಂದನ್ನು ನಡೆಸಲು ತಗಲುವ ಖರ್ಚುಗಳು ಏಕರೂಪದ್ದಾಗಿರಬೇಕು. ಹಾಗೂ ಅವುಗಳ ಏರಿಕೆ ಇಳಿಕೆಗಳು ಏಕರೂಪದ್ದಾಗಿರಬೇಕು. ಅದಿಲ್ಲದೇ ಬರೇ ಒಂದು ವಿವಿಯ ಶುಲ್ಕಪರಿಷ್ಕರಣೆ ಸೇಡಿನ ರಾಜಕಾರಣದಂತೆ ಕಾಣುವುದರಲ್ಲಿ ಯಾವ ಅನುಮಾನವೂ ಇಲ್ಲ.

ಮೂರನೆಯದಾಗಿ, ಸರ್ಕಾರ ಎಲ್ಲೆಲ್ಲಿ ಹಣವನ್ನು ಖರ್ಚು ಮಾಡುತ್ತಿದೆಯೋ ಅದನ್ನು ಹೂಡಿಕೆ ಎಂದು ನೋಡುವಂತೆ ತನ್ನ ದೃಷ್ಟಿಕೋನವನ್ನು ಬದಲಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಈ ರೀತಿಯ ಪುಗಸಟ್ಟೆ ತಿನ್ನುವವರ ಸಂಖ್ಯೆಯೂ ಇಳಿಯುವುದಿಲ್ಲ. ಹೌದು, ಶಿಕ್ಷಣಕ್ಕೆ ಕೊಡುವ ಸಹಾಯಧನವೂ ಸಹ ಸರ್ಕಾರದ ಹೂಡಿಕೆಯೇ. ಮೂಲಭೂತ ಶಿಕ್ಷಣ ಸರ್ಕಾರದ ಕರ್ತ್ಯವ್ಯ, ಉನ್ನತಶಿಕ್ಷಣವಲ್ಲ. ವಿವಿಗೆ ದಾಖಲಾಗುವ ಪ್ರತಿವಿದ್ಯಾರ್ಥಿಯೂ ತನ್ನ ಕನಸೊಂದನ್ನು ನನಸಾಗಿಸಿಕೊಳ್ಳಲು ಅಲ್ಲಿಗೆ ಬರಬೇಕು, ಸರ್ಕಾರ ಅದಕ್ಕೆ ಹೂಡಿಕೆ ಮಾಡಬೇಕು. ಆ ವಿದ್ಯಾರ್ಥಿ ತನ್ನ ಕನಸನ್ನು ನನಸಾಗಿಸಿಕೊಂಡು ತನಗೂ, ವಿವಿಗೂ, ಸರ್ಕಾರ ನಡೆಸುವ ದೇಶಕ್ಕೂ ಹೆಸರು ತರುವಂತಾಗಬೇಕು. ಆದರೆ ಈ ಸಹಾಯಧನ ಪಡೆದ ವಿದ್ಯಾರ್ಥಿಗಳು ಓದುತ್ತಿರುವಾದದರೂ ಏನನ್ನು. 201-18ರ ಸಾಲಿನಲ್ಲಿ ಜೆಎನ್ಯೂವಿನಲ್ಲಿ ಎಂಫಿಲ್ ಹಾಗೂ ಪಿಎಚ್ಡಿ ಮಾಡುತ್ತಿರುವ 4000 ವಿದ್ಯಾರ್ಥಿಗಳಲ್ಲಿ ಕೇವಲ 1000 ಜನ ಮಾತ್ರ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಯುಜಿಸಿ ನಿಯಮಗಳ ಪ್ರಕಾರ ಪ್ರತಿಯೊಬ್ಬ ಸಂಶೋಧನಾ ವಿದ್ಯಾರ್ಥಿಯೂ ಆರುತಿಂಗಳಿಗೊಂದು ಲೇಖನಗಳನ್ನು ಪ್ರಕಟಿಸಬೇಕು. ವರ್ಷಕ್ಕೆ ಒಂದಾದರೂ ತನ್ನ ಸಂಶೋಧನೆ ಪ್ರಸ್ತುತವಾದ ಸಮ್ಮೇಳನನದಲ್ಲಿ ಭಾಗವಹಿಸಬೇಕು. ಕಳೆದ ವರ್ಷ 2000 ಜನ ವಿದ್ಯಾರ್ಥಿಗಳು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಇಷ್ಟಾದರೂ ಈ ಲೇಖನಗಳಿಂದ ಸಮ್ಮೇಳನಗಳಿಂದ ಯಾವ ಲಾಭವೂ, ಮಹತ್ತರವಾದ ಬೆಳವಣಿಗೆಗಳೂ ಕಂಡುಬಂದಿಲ್ಲ. ಕಳೆದ ವರ್ಷ ಮಾತ್ರವಲ್ಲ, ಕಳೆದ ಹತ್ತುವರ್ಷಗಳಲ್ಲಿ ಜೆಎನ್ಯೂವಿನಿಂದ ಜಗತ್ತಿನ ಅಥವಾ ದೇಶದ ಕಣ್ಸೆಳೆಯುವ ಯಾವ ಸಂಶೋಧನೆಯಾಗಲೀ, ಸೈದ್ಧಾಂತಿಕ ಸಂಶೋಧನಾ ಪ್ರಬಂಧವಾಗಲೀ ಹೊರಬಂದಿಲ್ಲ. ಬದಲಿಗೆ ಜೆಎನ್ಯೂ ಸದಾ ಸುದ್ಧಿಯಲ್ಲಿದೆ. ಯಾವ ವಿಷಯಗಳಿಗೆ? ಅಫ್ಝಲ್ ಗುರು ಎಂಬ ಭಯೋತ್ಪಾದಕನಿಗೆ ಗಲ್ಲುಶಿಕ್ಷೆಯಾದಾಗ ನಡೆದ ಆತನ ಸಮರ್ಥನಾ ಸಭೆಗೆ, ಕಾರಣವೇ ಇಲ್ಲದೇ ಆಗಾಗ ಕಂಡುಬರುವ LGBT ರ್ಯಾಲಿಗಳಿಗೆ, ಅಸಮರ್ಪಕ ಕಾರಣಗಳ ಸರ್ಕಾರೀವಿರೋಧಿ ಘೋಷಣೆಗಳಿಗೆ, ಹಿಂದೂವಿರೋಧಿ ಘೋಷಣೆಗಳಿಗೆ, ಗಾಂಜಾ ಮತ್ತು ಸೆಕ್ಸ್ ರ್ಯಾಕೆಟ್’ಗಳಿಗೆ. ದೇಶದ ಅತ್ಯುನ್ನತ ವಿವಿಯೊಂದು ಮೌಲ್ಯಯುತವಾದ ಏನನ್ನೂ ಸಾಧಿಸದೇ ಕೇವಲ ಇಂತಹುದಕ್ಕೇ ಹೆಸರಾದರೆ, ಕೇವಲ ವಿದ್ಯಾರ್ಥಿ ರಾಜಕಾರಣದ ಅಖಾಡವಾಗಿ ಕಂಡುಬಂದರೆ ಅದರ ಮೇಲೆ ವಿನಿಯೋಗವಾಗುವ ಖರ್ಚನ್ನು ತೆರೆಗೆ ಕಟ್ಟುವವರು ಪ್ರಶ್ನಿಸಿಯೇ ಪ್ರಶ್ನಿಸುತ್ತಾರೆ. ಸರ್ದಾರ್ ಪಟೇಲ್ ಪ್ರತಿಮೆಗೆ ತಗಲಿವ ಖರ್ಚನ್ನು ಪ್ರಶ್ನಿಸುವ ನಾವು, ಜೆಎನ್ಯೂ ಖರ್ಚನ್ನು ಪ್ರಶ್ನಿಸುವುದರಲ್ಲಿ ಯಾವುದೇ ತಪಿಲ್ಲ.

ಇಂತಹ ಪ್ರಶ್ನೆ ಬಂದ ಕೂಡಲೇ ನಮ್ಮ ಬುದ್ಧಿಜೀವಿಗಳು ಅಭಿಜಿತ್ ಬ್ಯಾನರ್ಜೀ, ನಿರ್ಮಲಾ ಸೀತಾರಾಮನ್ ಕಡೆ ಬೆಟ್ಟುತೋರಿಸಿ, ಅವರೂ ಜೆಎನ್ಯೂ ವಿದ್ಯಾರ್ಥಿಗಳೇ ಎಂಬ ಗಿಣಿಪಾಠ ಒಪ್ಪಿಸುತ್ತಾರೆ. ಬ್ಯಾನರ್ಜಿಯ ನೋಬೆಲ್ ಪ್ರಶಸ್ತಿ ಪಡೆಯುವಲ್ಲಿ ಜೆಎನ್ಯೂವಿನ ಪಾತ್ರ ಎಳ್ಳಷ್ಟೂ ಇಲ್ಲ. ಅದನ್ನು ಆತ ವಿವಿಯ ಸ್ಟಡಿ-ಸೆಂಟರಿನಲ್ಲೋ ಅಥವಾ ಅಲ್ಲಿನ ಪ್ರಯೋಗಾಲಯದಲ್ಲೋ ಕೂತು ಮಾಡಿ ಸಂಶೋಧನೆಗೆ ಸಿಕ್ಕಿದ್ದಲ್ಲ. ಅದು ಆತನ ವೈಯುಕ್ತಿಕ ಸಾಧನೆ, ಅದೂ ಸಹ ಆತ ಜೆಎನ್ಯೂ ಬಿಟ್ಟು ಎಷ್ಟೋವರ್ಷಗಳ ನಂತರ ಪಡೆದದ್ದು. ನಿರ್ಮಲಾ ಸೀತಾರಾಮನ್’ರ ಯಾವ ಸಾಧನೆ ಹಿಡಿದುಕೊಂಡು ನೀವವರನ್ನು ಗುರಾಣಿಯಾಗಿಸಿಕೊಳ್ಳುತ್ತೀರಿ? ಆಕೆ ಮಂತ್ರಿಯಾಗಿದ್ದನ್ನೇ? ಆಕೆ ತಮ್ಮ ಪದವಿಯಕಾಲದಲ್ಲಿ ಎಬಿವಿಪಿಯ ಸದಸ್ಯೆಯಾಗಿದ್ದರು ಎಂಬುದೊಂದು ಬಿಟ್ಟರೆ, ಆಕೆ ಮಂತ್ರಿಯಾಗಿದ್ದರಲ್ಲಿ ಜೆಎನ್ಯೂ ಪಾತ್ರವೇನು? ಪ್ರಾರಂಭವಾದಾಗಲಿಂದ ಇಲ್ಲಿಯವರೆಗೆ ಎಷ್ಟು ಪೇಟೆಂಟುಗಳಿಗೆ ಜೆಎನ್ಯೂ ಅರ್ಜಿ ಸಲ್ಲಿಸಿದೆ? ಇಲ್ಲಿಯವರೆಗೆ ಎಷ್ಟು ಸಮಾಜೋದ್ದಾರದ ಯಾವ ಸಾಮಾಜಿಕ ಚಳಿವಳಿಗೆ ಜೆಎನ್ಯೂ ಬೀಜ ಬಿತ್ತಿದೆ? ತನ್ನ ಮೇಲೆ ಸುರಿದ ಹಣಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ಆರ್ಥಿಕವಾಗಿ ಬೇಡ ಬಿಡಿ, ಸೈದ್ಧಾಂತಿಕವಾಗಿ ಅಥವಾ ಮೌಲ್ಯಯುತವಾಗಿ ಎಷ್ಟು ಪ್ರತಿಫಲ ನೀಡಿದೆ?

ಏಕಲವ್ಯನಷ್ಟು ಗುರುನಿಷ್ಠೆ ನಾವು ಕೇಳುತ್ತಿಲ್ಲ. ಪರಶುರಾಮನನ್ನು ಎಚ್ಚರಿಸದಿರಲು ನೋವು ತಿಂದ ಕರ್ಣನ ಕ್ಷಾತ್ರವನ್ನೂ ನಾವು ಕೇಳುತ್ತಿಲ್ಲ. ಅದಿವತ್ತಿಗೆ ಉಚಿತವೂ ಅಲ್ಲ. ಆದರೆ ಶಿಕ್ಷಣವನ್ನು ಉಚಿತವಾಗಿ ಪಡೆದದ್ದೂ ಅಲ್ಲದೇ, ಅದವರಿಗೆ ಉಚಿತವಾಗಿ ಸಿಗಲು ಕಾರಣರಾದ ಜನರ ವಿರುದ್ಧವೇ ಕತ್ತಿಮಸೆಯುವ ಉಗ್ರರಿಗೆ ಬೆಂಬಲ ನೀಡುವುದು, ದೇಶವನ್ನೇ ಚೂರುಚೂರಾಗಿಸುತ್ತೇವೆ ಎಂಬ ದಾರ್ಷ್ಟ್ಯ, ಯಾವುದೋ ಒಂದು ಸಮುದಾಯದ ವಿರುದ್ದ ಆಮ್ಲಕಾರಿಕೆ ಇದನ್ನಾದರೂ ನಿಲ್ಲಿಸಿ ಎಂದು ನಾವು ಕೇಳಿಕೊಳ್ಳಬಹುದಲ್ಲವೇ? ಸರ್ಕಾರದ ಯಾವುದೋ ನೀತಿಗೆ ಅನಗತ್ಯವಾಗಿ ಬ್ರಾಹ್ಮಣರನ್ನೂ, ಆರೆಸ್ಸೆಸ್ ಅನ್ನೂ ಗಂಟುಹಾಕುವ ಮುನ್ನ ತಾರ್ಕಿಕವಾಗಿ ಒಮ್ಮೆ ಆಲೋಚಿಸಿ ಎಂದು ಕೇಳಿಕೊಳ್ಳುವುದು ಸಿಂಧುವಲ್ಲವೇ?

0 comments on “ಉಚಿತ ಉನ್ನತ ಶಿಕ್ಷಣದಿಂದ ಏಕಲವ್ಯರನ್ನು ತಯಾರಿಸಬಲ್ಲೆವೇ?

Leave a Reply

Your email address will not be published. Required fields are marked *