Tuesday, 16 April, 2024

“ಆತ್ಮಸಾಕ್ಷಾತ್ಕಾರದ ಅಂಗಳಕ್ಕೆ ಹಾರುವ ಮುನ್ನ, ಜೋಹಾರಿಯ ಕಿಟಕಿಯನ್ನು ದಾಟೋಣ”

Share post

ಹಿಂದೂ ನಂಬಿಕೆಗಳ ಪ್ರಕಾರ ಮನುಷ್ಯನ ಜೀವನ ಎಂಬುದು ಒಂದು ಚಕ್ರವಿದ್ದಂತೆ. ಪೂರ್ವಜನ್ಮದ ಪಾಪ-ಪುಣ್ಯಗಳಿಗನುಗುಣವಾಗಿ ಸಿಕ್ಕ ಹುಟ್ಟು, ಕರ್ಮ ಅವಕಾಶಗಳಿಂದ ತುಂಬಿರುವ ಬದುಕು, ಕೊನೆಗೆ ಸಾವು. ಪಾಪಕರ್ಮಗಳ ಲೆಕ್ಕ ಹೆಚ್ಚಿದ್ದಲ್ಲಿ ಮತ್ತೆ ಇನ್ನೊಂದು ಜನ್ಮ, ಮತ್ತದೇ ಹುಟ್ಟು ಹಾಗೂ ಕರ್ಮದ ವಿಫುಲ ಅವಕಾಶವಿರುವ ಬದುಕು. ಒಳ್ಳೆಯ ಕರ್ಮಗಳ ಲೆಕ್ಕದ ಮೇಲಾದ ದಿನ ಸತ್ಯದ ಸಾಕ್ಷಾತ್ಕಾರವಾಗಿ ನಂಬಿದ ದೇವರ ಚರಣಗಳಲ್ಲಿ ಮುಕ್ತಿ. ಬೇರೆ ಬೇರೆ ಮತ ಮತ್ತು ಧರ್ಮಗಳಲ್ಲಿ ಆತ್ಮಸಾಕ್ಷಾತ್ಕಾರಕ್ಕೆ, ಮೋಕ್ಷಕ್ಕೆ ಹೀಗೇ ಬೇರೆ ಬೇರೆ ದಾರಿಗಳಿವೆ. ಪುರಂದರರು ತಮ್ಮ “ಅನುಭವದಡಿಗೆಯ ಮಾಡಿ…” ಎಂಬ ಪದದಲ್ಲಿ ಕರ್ಮಕ್ಕೆ ಮತ್ತು ಮೋಕ್ಷಕ್ಕೆ ಸುಲಭದ ದಾರಿಯನ್ನು ಅದೆಷ್ಟು ಚೆನ್ನಾಗಿ ವಿವರಿಸಿದ್ದಾರೆ. ಅದನ್ನು ಕೇಳಿಯೇ ಅನುಭವಿಸಬೇಕು.

 

ಮೋಕ್ಷವೆಂಬುದು ಎಲ್ಲರಿಗೂ ಸಿದ್ದಿಸುವಂತದ್ದಲ್ಲ. ಹಾಗೂ ಎಲ್ಲರೂ ನಂಬುವ ಕಲ್ಪನೆಯೂ ಅಲ್ಲ. ಪುನರ್ಜನ್ಮದಲ್ಲಿ ನಂಬಿಕೆಯಿಲ್ಲದವರು, ಮುಂದಿನ ಜನ್ಮದಲ್ಲಿ ಮೋಕ್ಷಪಡೆಯುವಷ್ಟು ತಾಳ್ಮೆಯಿಲ್ಲದವರು, ಮೋಕ್ಷಪಡೆದು ಬೇರೆಲ್ಲೋ ತಲುಪುವುದಕ್ಕಿಂತಾ ಇಲ್ಲೇ ಇದ್ದು ಸಾಧಿಸಿ ಸಾವನ್ನಪ್ಪಬೇಕೆಂಬ ಬಯಕೆಯಿರುವವರಿಗೇನೂ ಕಡಿಮೆಯಿಲ್ಲ. ಇಂತವರಿಗೆ ಆತ್ಮಸಾಕ್ಷಾತ್ಕಾರವಾಗುವುದು ಹೇಗೆ? ಆತ್ಮನ್ ಎಂದರೆ ‘ನಾನು’ ಎನ್ನುವುದಾದರೆ, ತನ್ನನ್ನು ತಾನು ತಿಳಿಯುವುದೂ ಒಂದು ರೀತಿಯ ಸಾಕ್ಷಾತ್ಕಾರವೇ ಅಲ್ಲವೇ? ನಾನೆಂದರೆ ಯಾರು? ನನ್ನ ಪಯಣವೇನು? ಎಲ್ಲಿಗೆ ಹೋಗುತ್ತಿದ್ದೇನೆ? ಎಲ್ಲಿಗಾದರೂ ಹೋಗುವ ಅಗತ್ಯವೇನು? ಎಲ್ಲಿಗೂ ಹೋಗುತ್ತಿಲ್ಲ ಎಂದಾದ ಮೇಲೆ ನಾನಿಲ್ಲಿ ಯಾಕಿದ್ದೇನೆ? ಇದ್ದಾಗ ಮಾಡಬಹುದಾದ ಕರ್ಮಗಳೇನು? ಹೇಗೆ ನಾನು ಭೂಮಿಗೆ ತೂಕವಾಗದೇ ಭೂಮಿತೂಕದ ಮನುಷ್ಯನಾಗಲು ಸಾಧ್ಯ? ಎಂಬುದರ ಅರಿವೂ ಬಹಳಷ್ಟು ಸಹಾಯಕವಾಗಬಲ್ಲದು. ಭಗವತ್ಪಾದರು ಭಾರತದೆಲ್ಲೆಡೆ ಸಂಚರಿಸಿ ಇಂತಹ ನೂರಾರು ಚರ್ಚೆಗಳನ್ನು ಮಾಡಿ ಅರಿವುಮೂಡಿಸಲು ಸಹಾಯಮಾಡಿದರಂತೆ.

 

ಈ ರೀತಿಯ ತಾತ್ವಿಕ ಚರ್ಚೆ ಒಂದೆರಡು ಘಳಿಗೆಗಳಲ್ಲಿ ಮುಗಿಯುವುದಲ್ಲ. ಆದ್ದರಿಂದ ನಾವು ಸರಳಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸೋಣ. ನಾನು ಎಂದರೆ ಯಾರು? ಇದನ್ನು ತಿಳಿಯುವುದು ಹೇಗೆ? ನಮ್ಮ ಜೀವನದಲ್ಲಿ ನಾವೇ ನಮ್ಮನ್ನು ತಿಳಿಯುವುದು ಸುಲಭವಲ್ಲ. ಯಾಕೆಂದರೆ ನಾವು ಸದಾ ನಮ್ಮನ್ನು ಸಮರ್ಥಿಸಿಕೊಳ್ಳುತ್ತಲೇ ಇರುವ ಪ್ರಾಣಿಗಳು. ನಮ್ಮ ಸ್ವಟೀಕೆ ಯಾವತ್ತೂ ವಸ್ತುನಿಷ್ಟವಾಗಿರಲು ಸಾಧ್ಯವೇ ಇಲ್ಲ. ಯಾವುದಾದರೊಂದು ನೆಪ ಹೇಳಿ ಇದು ಹೀಗಿತ್ತು, ಅದಕ್ಕೆ ನಾನು ಹಾಗೆ ಮಾಡಿದೆ ಅಂತಲೋ, ಅವ ಹಾಗೆ ಮಾಡಿದ ಅದಕ್ಕೇ ನಾನು ಹೀಗೆ ಮಾಡಿದೆ ಅಂತಾ ಕೊನೆಯಿಲ್ಲದಂತೆ ಸಮರ್ಥಿಸಿಕೊಳ್ಳುತ್ತೇವೆ. ಅದಕ್ಕೇ ವ್ಯವಹಾರ ವಲಯದಲ್ಲಿ ನಿಮ್ಮನ್ನು ನಿಮ್ಮ ಮೇಲಧಿಕಾರಿ ಅಥವಾ ಮ್ಯಾನೇಜರು ವಿಮರ್ಶಿಸುತ್ತಾನೆ. ಆದರೆ ಈ ವಿಮರ್ಶೆ ನಿಮ್ಮ ಕೆಲಸದ ಬಗ್ಗೆ ಆಗಿರುತ್ತದೆಯೇ ಹೊರತು, ನಿಮ್ಮ ವ್ಯಕ್ತಿತ್ವದ ಬಗ್ಗೆ ಆಗಿರುವ ಸಾಧ್ಯತೆ ತೀರಾ ಕಡಿಮೆ. ಈ ಕ್ಯಾಪಿಟಲಿಸ್ಟ್ ಪ್ರಪಂಚದ ಮ್ಯಾನೇಜರುಗಳಿಗೆ ತಮ್ಮ ಟೀಮಿನ ಉಪಯುಕ್ತತೆಯ ಬಗ್ಗೆ ತಲೆಬಿಸಿ ಇದ್ದೀತೇ ಹೊರತು, ಆ ಜನರ ವ್ಯಕ್ತಿತ್ವ ವಿಕಸನದಲ್ಲಿ ಯಾವ ಆಸಕ್ತಿಯೂ ಇರುವುದಿಲ್ಲ. ಅದೇ ವ್ಯಕ್ತಿತ್ವವನ್ನು ಕೆಲಸದ ಉಪಯುಕ್ತತೆಯ ಜೊತೆ ಗಂಟು ಹಾಕಿ ಕೊಟ್ಟು, ನಿಮ್ಮನ್ನ ಟೀಮಿನ ಸದಸ್ಯರ ವ್ಯಕ್ತಿತ್ವ ವಿಕಸನವಾದಷ್ಟೂ ಅವರಿಂದ ಹೆಚ್ಚು ಕೆಲಸ ತೆಗೆಯಬಹುದು, ಹಾಗೂ ಕಂಪನಿಗೆ ಹೆಚ್ಚಿನ ಲಾಭವುಂಟು ಅಂತಾ ಹೇಳಿ ನೋಡಿ. ಮ್ಯಾನೇಜರುಗಳು ಮೆಂಟರುಗಳಾಗಲು ಮುಗಿಬೀಳುತ್ತಾರೆ. ಇಂದಿನ ಮ್ಯಾನೇಜ್ಮೆಂಟ್ ವಲಯದಲ್ಲಿ ಕೇವಲ ಮ್ಯಾನೇಜರು ತನ್ನೊಂದಿಗೆ ಕೆಲಸಮಾಡುವುದನ್ನು ವಿಮರ್ಶಿಸುವ ಪರ್ಫಾರ್ಮೆನ್ಸ್ ಅಪ್ರೈಸಲ್ ಅಲ್ಲದೇ, ಟೀಮಿನ ಸದಸ್ಯರು ಮ್ಯಾನೇಜರಿಗೇ ಪ್ರತ್ಯಾದಾನ ಕೊಡುವ ಅಪ್-ವರ್ಡ್ ಫೀಡ್-ಬ್ಯಾಕ್ ಎಂಬ ಕಲ್ಪನೆಯೂ ಇದೆ. ಕೆಲಸದಲ್ಲಿ ಬಡ್ತಿ ಕೊಡುವಾಗ ಆ ವ್ಯಕ್ತಿಯ 360 ಡಿಗ್ರೀ ಫೀಡ್-ಬ್ಯಾಕ್, (ಅಂದರೆ ಆತನಿಗೆ ಅಥವಾ ಆಕೆಗೆ ವರದಿ ಮಾಡುವ ಸದಸ್ಯರಿಂದಲೂ, ಆತನ ಮ್ಯಾನೇಜರಿನಿಂದಲೂ, ಜೊತೆಗೆ ಆತನ ಹಂತದಲ್ಲೇ ಕೆಲಸ ಮಾಡುವ ಸಹೋದ್ಯೋಗಿ (peers)ಗಳಿಂದಲೂ, ಆತ ಅಥವಾ ಆಕೆಯ ಬಗ್ಗೆ ವರದಿ) ಪಡೆಯುವುದು ಸಾಮಾನ್ಯವಾಗಿದೆ.

 

ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಅರಿಯಲು ಈ ರೀತಿಯ ವಿಮರ್ಶೆಗಳು ಅಗತ್ಯ. ಹೀಗೆ ನಮ್ಮನ್ನು ನಾವು ಅರಿಯಲು, ಕೇವಲ ಉಳಿದವರು ನಮ್ಮ ಬಗ್ಗೆ ಮಾತನಾಡಿದರಷ್ಟೇ ಸಾಕಾಗದು. ನಾವೂ ನಮ್ಮನ್ನು ವಿಮರ್ಶೆಗೊಳಿಸಿಕೊಳ್ಳಬೇಕು. ನಮ್ಮ ಅನುಭವ, ಸಾಮರ್ಥ್ಯ, ಅಸಾಮರ್ಥ್ಯಗಳಲ್ಲೇ, ನಮ್ಮ ಸುಪ್ತ ವಿಚಾರ ಮತ್ತು ವರ್ತನೆಗಳ ಬಗ್ಗೆಯೂ ನಾವು ತಿಳಿದುಕೊಳ್ಳಬೇಕು. ಈ ರೀತಿಯ ವಿಮರ್ಶೆಗಳಿಂದಲೇ ಮನುಷ್ಯ ಬೆಳೆಯಲು ಸಾಧ್ಯ. ಮ್ಯಾನೇಜ್ಮೆಂಟ್ ವಲಯದಲ್ಲಿ ಈ ರೀತಿಯ self-awareness ಅಂದರೆ ಸ್ವಪ್ರಜ್ಞೆಯಿದ್ದವರಿಗೆ ಹೆಚ್ಚು ಬೇಡಿಕೆ. ಯಾಕೆಂದರೆ ಇವರು ತಮ್ಮನ್ನೂ ಎದುರಿಗಿರುವವರನ್ನೂ ಸುಲಭವಾಗಿ ನಿಭಾಯಿಸಿಕೊಂಡು ಡೀಲುಗಳನ್ನು ಕುದುರಿಸುವಲ್ಲಿ ಉಪಯುಕ್ತ ಸಂಪನ್ಮೂಲಗಳಾಗುತ್ತಾರೆ. ಬೇರೆ ಬೇರೆ ಸಂಸ್ಕೃತಿ ಮತ್ತು ಭಾಷೆಗಳ ಹಿನ್ನೆಲೆಯ ಜನರೆಲ್ಲಾ ಒಟ್ಟಿಗೆ ಕೆಲಸಮಾಡುವ, ಹಣ ಸಮಯ ಮತ್ತು ಸಂಪನ್ಮೂಲಗಳ ತ್ರಿಕೋನವನ್ನು ಏಕರೀತಿಯಲ್ಲಿ ನಿಭಾಯಿಸಬೇಕಾದ ಸಂಕೀರ್ಣವಾದ ಪ್ರಾಜೆಕ್ಟುಗಳನ್ನು ಸರಾಗವಾಗಿ ಮುಗಿಸುತ್ತಾರೆ. ಕ್ಲಿಷ್ಟಪರಿಸ್ಥಿತಿಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಮಹತ್ವದ ಮಾತ್ರವನ್ನು ವಹಿಸುತ್ತಾರೆ. ನಿಮಗೂ ನಿಮ್ಮ ಬಗ್ಗೆ ಹೆಚ್ಚು ಅರಿಯಲು ಕುತೂಹಲವಿದ್ದರೆ ಲೇಖನದ ಮುಂದಿನ ಭಾಗ ನಿಮಗೆ ಸಹಾಯಕವಾಗಬಲ್ಲುದು.

 

ಮನುಷ್ಯರನ್ನು ಹೆಚ್ಚು ಹೆಚ್ಚು ಅರಿಯಲು ಮತ್ತು ಈ ರೀತಿಯ ಸ್ವಪ್ರಜ್ಞೆ ಬೆಳೆಸಿಕೊಳ್ಳಲು ಮನಃಶಾಸ್ತ್ರದಲ್ಲಿ ಕೆಲ ಒಳ್ಳೆಯ ಸಲಹರಣೆಗಳಿವೆ. ಅದರಲ್ಲೊಂದು ಕುತೂಹಲಕಾರಿ ಸಾಧನವೆಂದರೆ ಜೋ-ಹಾರಿ ಕಿಟಕಿ (Johari Window). 1955ರಲ್ಲಿ ಜೋಸೆಪ್ಜ್ ಲುಫ್ಟ್ ಮತ್ತು ಹ್ಯಾರಿಂಗ್ಟನ್ ಇಂಗಮ್ ಎಂಬಿಬ್ಬರು ಅಮೇರಿಕನ್ ಮನಃಶಾಸ್ತ್ರಜ್ಞರು ನಿರೂಪಿಸಿದ ಈ ತಂತ್ರ ಅವರಿಬ್ಬರ ಮೊದಲ ಹೆಸರುಗಳನ್ನು ಜೋಡಿಸಿ (ಅಮೇರಿಕಾದಲ್ಲಿ ಜೋಸೆಫ್’ಗಳನ್ನು ಜೋ ಅಂತಲೂ, ಹ್ಯಾರಿಂಗ್ಟನ್ ಹೆರಾಲ್ಡ್ ಹೆನ್ರಿ ಮುಂತಾದ ಹೆಸರುಗಳನ್ನು ಹ್ಯಾರಿ ಅಂತಲೂ ಸಣ್ಣದಾಗಿಸುವುದು ಸಾಮಾನ್ಯ) ಜೋಸೆಫ್-ಹ್ಯಾರಿಂಗ್ಟನ್ ಅನ್ನೋದು ‘ಜೋಹಾರಿ’ಯಾಗಿ, ಜೋಹಾರಿ ಕಿಟಕಿಯಾಯ್ತು. ಜೋಹಾರಿಯೇನೋ ಸರಿ, ಕಿಟಕಿ ಎಲ್ಲಿಂದ ಬಂತಿ ಅಂತೀರಾ? ಹೇಳೋಣ ಇರಿ.

 

ಜೋಹಾರಿ ಜೋಡಿ ಮನುಷ್ಯನ ವರ್ತನೆ ಅಥವಾ ಕಲಿಕೆಯನ್ನ 2×2 ಚೌಕವಾಗಿ ವಿಭಾಗಿಸುತ್ತಾರೆ. ಹಾಗಾಗಿ ಇದೊಂದು ಕಿಟಕಿಯ ರೀತಿ ಕಾಣುತ್ತೆ. ಮಾತ್ರವಲ್ಲದೇ ವ್ಯಕ್ತಿತ್ವ ವಿಕಸನದ ಈ ಮಾದರಿ, ಮನುಷ್ಯನಿಗೆ ತನ್ನ ಬಗ್ಗೆಯೇ ಒಂದು ಗವಾಕ್ಷಿಯ ಒಳನೋಟವನ್ನು ಒದಗಿಸುವುದರಿಂದ, ಹಾಗೂ ಈ ಜೊಹಾರಿ ಮಾದರಿಯ ಮೂಲಕ ನಮಗೆ ನಮ್ಮನ್ನೇ ನೋಡಿಕೊಳ್ಳುವ ಒಂದು ಸಾಧನ ಸಿಗುವುದರಿಂದ, ಈ ಮಾದರಿಗೆ ಕಿಟಕಿಯ ರೂಪಕ ಅಲಂಕಾರ ಅಂದರೆ metaphor ಅನ್ನು ಕೊಟ್ಟು, ಇದಕ್ಕೆ ಜೊಹಾರಿ ಕಿಟಕಿ ಎಂದೇ ಕರೆಯಲಾಗುತ್ತದೆ. ಜೊಹಾರಿ ಕಿಟಕಿಯ ಈ 2×2 ಮಾದರಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ತುಂಬಾ ಸುಲಭ. ಒಂದು ಚೌಕಬರೆದು ಅದರಲ್ಲಿ ನಮ್ಮ ಬಗ್ಗೆ ನಾವು ಕೆಲ ವಿಷಯಗಳನ್ನು ಬರೆಯಬೇಕು. ಇದನ್ನು ಪ್ರಾರಂಭಿಸುವ ಮುನ್ನ ನಿಮ್ಮ ಕೆಲ ಸ್ನೇಹಿತರನ್ನೂ ಈ ಚಟುವಟಿಕೆಗೆ ಸೇರಿಸಿಕೊಳ್ಳಿ. ಆಗಲೇ ಇದಕ್ಕೆ ಹೆಚ್ಚು ಪ್ರಸ್ತುತತೆ ಬರಲು ಸಾಧ್ಯ. ಮೊದಲಿಗೆ ಈ ಚೌಕವನ್ನು ನಾಲ್ಕುಭಾಗಗಳಾಗಿ ವಿಭಾಗಿಸುವ. ಅದರ ‍‍X ಅಕ್ಷದಲ್ಲಿ “ನಮ್ಮ ಬಗ್ಗೆ ನಮಗೆ ತಿಳಿದಿರುವ” ಹಾಗೂ “ನಮ್ಮ ಬಗ್ಗೆ ನಮಗೆ ತಿಳಿಯದಿರುವ” ವಿಷಯಗಳನ್ನಾಗಿ ವಿಂಗಡಿಸೋಣ. Y ಅಕ್ಷದಲ್ಲಿ “ನಮ್ಮ ಬಗ್ಗೆ ಬೇರೆಯವರಿಗೆ ತಿಳಿದಿರುವ” ಹಾಗೂ “ನಮ್ಮ ಬಗ್ಗೆ ಬೇರೆಯವರಿಗೆ ತಿಳಿಯದಿರುವ” ವಿಷಯಗಳನ್ನಾಗಿ ವಿಂಗಡಿಸೋಣ. ಈಗ ನಮಗೆ ಇಲ್ಲಿ ನಾಲ್ಕು ಸಣ್ಣ ಸಣ್ಣ ಚೌಕಗಳು ಸಿಗುತ್ತವೆ. ಈಗ ಈ ನಾಲ್ಕು ಚೌಕಗಳನ್ನು ಸೂಕ್ಷ್ಮವಾಗಿ ಗಮನಿಸೋಣ.

ಮೊದಲ ಚೌಕ ಅಂದರೆ ಮೇಲಿನ ಎಡ ಚೌಕದಲ್ಲಿ ನಾವು “ನಮ್ಮ ಬಗ್ಗೆ ನಮಗೂ ಹಾಗೂ ಉಳಿದವರಿಗೂ ತಿಳಿದಿರುವ” ವಿಚಾರಗಳನ್ನು ಬರೆಯಬೇಕು. ಜೋಹಾರಿ ಮಾದರಿಯಲ್ಲಿ ಈ ಜಾಗಕ್ಕೆ “ತೆರೆದ ಅಂಕಣ” (Arena, Open Area) ಎಂದು ಕರೆಯಲಾಗುತ್ತದೆ. ಕೆಲ ಶಾಸ್ತ್ರಜ್ಞರು ಇದಕ್ಕೆ “I know, you know” ಜಾಗ ಎಂದೂ ಕರೆಯುತ್ತಾರೆ. ಯಾಕೆಂದರೆ ಇಲ್ಲಿರುವ ವಿಚಾರಗಳು ಎಲ್ಲರಿಗೂ ತಿಳಿದಿರುವಂತದ್ದು. ನಿಮ್ಮ ಹುಟ್ಟಿದ ದಿನ, ನಿಮ್ಮಿಷ್ಟದ ಬಣ್ಣ, ನಿಮಗೆ ಯಾವ ಹೀರೋ ಇಷ್ಟ, ನೀವೆಲ್ಲೆಲ್ಲಿಗೆ ಪ್ರಯಾಣಿಸಿದ್ದೀರಿ, ನೀವು ಧನಾತ್ಮಕ ಚಿಂತನೆಯ ವ್ಯಕ್ತಿ, ನಿಮ್ಮ ಕುಟುಂಬವೆಂದರೆ ನಿಮಗಿಷ್ಟ, ಜನರೊಂದಿಗೆ ನೀವು ಸುಲಭವಾಗಿ ಬೆರೆಯಬಲ್ಲಿರಿ, ಸಂತಸದಲ್ಲಿದ್ದಾಗ ಆಶಾ ಭೋಸ್ಲೆಯನ್ನೂ ಬೇಸರವಾದಾಗ ಮೊಹಮ್ಮದ್ ರಫಿಯನ್ನೂ ಕೇಳುತ್ತೀರಿ…ಮುಂತಾದ ಎಲ್ಲಾ ವಿಚಾರಗಳೂ ಇಲ್ಲಿ ಬರುತ್ತವೆ. ಇಲ್ಲಿ ಯಾವ ರಹಸ್ಯಗಳೂ ಇಲ್ಲ. ಇಲ್ಲಿರುವ ವಿಷಯಗಳು ನಮಗೂ ಗೊತ್ತಿದೆ ಹಾಗೂ ನಾವಿದನ್ನು ಉಳಿದವರೊಂದಿಗೂ ಹಂಚಿಕೊಳ್ಳಬಯಸುತ್ತೇವೆ.

 

ಎರಡನೇ ಚೌಕ ಅಂದರೆ ಕೆಳಗಿನ ಎಡ ಚೌಕದಲ್ಲಿ ನಾವು “ನಮ್ಮ ಬಗ್ಗೆ ನನಗೆ ಗೊತ್ತಿದ್ದು, ಉಳಿದವರಿಗೆ ತಿಳಿಯದಿರುವ” ವಿಚಾರಗಳನ್ನು ಬರೆಯಬೇಕು. ಈ ಜಾಗಕ್ಕೆ “ಮುಖವಾಡ ಅಥವಾ ಮರೆಮಾಚಿದ ಅಂಕಣ” (Façade, Hidden Area) ಎಂದು ಕರೆಯಲಾಗುತ್ತದೆ. ಕೆಲ ಶಾಸ್ತ್ರಜ್ಞರು ಇದಕ್ಕೆ “I know, but you don’t know” ಜಾಗ ಎಂದೂ ಕರೆಯುತ್ತಾರೆ. ಯಾಕೆಂದರೆ ಇಲ್ಲಿರುವ ವಿಚಾರಗಳು ನಿಮಗೆ ಗೊತ್ತು ಆದರೆ ಉಳಿದೆಲ್ಲರಿಗೂ ತಿಳಿದಿಲ್ಲದಂತದ್ದು. ನಮ್ಮೆಲ್ಲಾ ಅಸುರಕ್ಷತಾ ಭಾವ (insecurity)ಗಳು ಇಲ್ಲಿ ಬರುತ್ತವೆ. ಇದನ್ನು ಹಂಚಿಕೊಂಡರೆ ಎಲ್ಲಿ ನಿಮ್ಮನ್ನು ಜನ ಜಡ್ಜ್ ಮಾಡಿಬಿಡುತ್ತಾರೋ ಎಂಬ ಭಯ ನಿಮಗಿದೆ. ನಿಮಗೆ ಕಳೆದ ವರ್ಷವಷ್ಟೇ ವಿಚ್ಛೇದನವಾಗಿದೆ. ವಿಷಯ ತಿಳಿದರೆ ಜನ ನನ್ನನು ಸಂಸಾರ ನಡೆಸಲಾಗದವನು ಎಂದುಕೊಂಡರೇ ಎಂಬ ಭಯ. ನಿಮಗೆ ನಾಯಿ ಅಥವಾ ನೀರು ಕಂಡರೆ ಭಯವಿದೆ. ಆದರೆ ಜನ ನಿಮ್ಮನ್ನು “ಏನಮ್ಮಾ! ಮೂವತ್ತೈದು ವರ್ಷದ ವಯಸ್ಕಳಾಗಿ ನಾಯಿ ಕಂಡರೆ ಹೆದರ್ತೀಯಾ?” ಅಂತಾ ಆಡಿಕೊಂಡರೆ ಅನ್ನುವ ಕಸಿವಿಸಿ. ಆಲ್ಕೋಹಾಲ್ ಅಂದರೆ ನಿಮಗಿಷ್ಟ. ಬೇರೆಯವರಿಗೆ ತಿಳಿದರೆ ಕುಡುಕನೆಂದು ಬಿಡುತ್ತಾರೆ, ಅಥವಾ ಎರಡು ಡ್ರಿಂಕಿನ ನಂತರ ನಾನೇನಾದರೂ ಒದರಿಬಿಟ್ಟರೆ ಎಂಬ ಭಯದಿಂದ ಎಲ್ಲರಿಂದ ದೂರವಿದ್ದು ಮನೆಯಲ್ಲೇ ಕೂತು ಕುಡಿಯುತ್ತೀರ. ಸುಪ್ತ ಮನಸ್ಸಿನ ಕೆಲ ಮಜಲುಗಳು ಇಲ್ಲಿ ಕಂಡುಬರುತ್ತವೆ. ಈ ಚೌಕ ನಿಧಾನಕ್ಕೆ ಬದಲಾಗುತ್ತದೆ ಕೂಡಾ. ವಯಸ್ಸಾದಂತೆ ಇಲ್ಲಿನ ವಿಚಾರಗಳನ್ನು ಜನ ಬೇರೆಯವರೊಂದಿಗೆ ಹಂಚಿಕೊಳ್ಳಬಯಸುತ್ತಾರೆ. ತಮ್ಮ ಕಷ್ಟಗಳಿಗೆ, ಅಸುರಕ್ಷತೆಗಳಿಗೆ ಸಹಾಯ ಕೇಳುತ್ತಾರೆ. ಆಗೆಲ್ಲಾ ಆ ವಿಚಾರಗಳು ಈ ಚೌಕದಿಂದ ಹಿಂದಿನ Arena ಚೌಕಕ್ಕೆ ವರ್ಗವಾಗುತ್ತವೆ. ಈ ಚೌಕದಲ್ಲಿ ಕಡಿಮೆ ವಿಷಯಗಳಿದ್ದು, ಮೇಲಿನ ಚೌಕದಲ್ಲಿ ಹೆಚ್ಚಿನ ವಿಷಯಗಳಿದ್ದಷ್ಟೂ ಮನುಷ್ಯ ತನ್ನನ್ನು ತಾನು ಜಗತ್ತಿಗೆ ತೆರೆದುಕೊಂಡಿದ್ದಾನೆ, ಆತನಿಗೆ ತನ್ನ ಬಗ್ಗೆ ಯಾವ ಭಯವಾಗಲೀ, ಜನ ತನ್ನನ್ನು ಏನಂದುಕೊಳ್ಳುತ್ತಾರೋ ಎಂಬ ಭಯವಾಗಲೀ ಇಲ್ಲ ಎಂದರ್ಥ, ಎಂದು ಸ್ಥೂಲವಾಗಿ ಹೇಳಬಹುದು. ಈ ಜನರು ಹೆಚ್ಚೆಚ್ಚು authentic ಆಗಿ ಜನರೊಂದಿಗೆ ಬೆರೆಯುತ್ತಾರೆ, ವ್ಯವಹರಿಸುತ್ತಾರೆ. ಜೊತೆಗೇ ಅವರೊಂದಿಗೆ ವ್ಯವಹರಿಸುವ ಬೇರೆಯವರೂ ತಮ್ಮ ಬಗ್ಗೆ ತಾವೇ ಆತ್ಮವಿಶ್ವಾಸ ಮೂಡಿಸಿಕೊಳ್ಳುವಂತೆ ಬೆಳೆಸುತ್ತಾರೆ.

 

ಮೂರನೆಯ ಚೌಕಕ್ಕೆ ಹೋಗೋಣ. ಇದು ಮೇಲಿನ ಬಲ ಚೌಕ. ಅಂದರೆ “ನನ್ನ ಬಗ್ಗೆ ನನಗೆ ಗೊತ್ತಿಲ್ಲ ಆದರೆ ಬೇರೆಯವರಿಗೆ ಗೊತ್ತು” ಎಂಬ ಚೌಕ. ಈ ಜಾಗಕ್ಕೆ “ಕುರುಡು ಜಾಗ” (Blind Area) ಅಥವಾ “I don’t know, but you know” ಎಂದೂ ಕರೆಯುತ್ತಾರೆ. ಇದು ನಮ್ಮ ಉಪಪ್ರಜ್ಞೆ ಅಂದರೆ subconscious ಮನಸ್ಸಿನ ಪ್ರತಿರೂಪ. ಇಲ್ಲಿನ ಹಲವು ವಿಚಾರಗಳು ನಮಗೇ ಗೊತ್ತಿರುವುದಿಲ್ಲ, ಆದರೆ ಉಳಿದವರಿಗೆ ಸುಲಭವಾಗಿ ಗೊತ್ತಿರುತ್ತದೆ. ಒತ್ತಡದಲ್ಲಿದ್ದಾಗ ಉಗುರು ಕಚ್ಚುವುದು, ಏನೋ ಓದುವಾಗ ಮೂಗೊಳಗೆ ಬೆರಳು ಹಾಕಿ ನಂತರ ಬಾಯಿಗಿಡುವುದು, ಕೈಯಲ್ಲಿದ್ದ ಪೆನ್ನನ್ನು ಒತ್ತುತ್ತಿರುವುದು ಮುಂತಾದ ಸಣ್ಣ ವಿಚಾರಗಳಿಂದ ಹಿಡಿದು ನಮಗೇ ಗೊತ್ತಿಲ್ಲದೇ ನಾವು ಮಕ್ಕಳನ್ನೆತ್ತಿಕೊಳ್ಳುವ ಅವಕಾಶದಿಂದ ನುಣುಚಿಕೊಳ್ಳುವುದು ಅಥವಾ ನಾವು ಸ್ವಾರ್ಥಿಗಳಾಗಿ ವರ್ತಿಸಿದ ವಿಚಾರಗಳು ಈ ಚೌಕದಲ್ಲಿ ಬರುತ್ತವೆ. ಇಲ್ಲಿಯ ವಿಷಯಗಳನ್ನು ನಾವೇ ತುಂಬಲು ಅಥವಾ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಬೇರೆಯವರ ಸಹಾಯ ಬೇಕು. ಅದಕ್ಕಿಂತಲೂ ಹೆಚ್ಚಾಗಿ ಬೇರೆಯವರು ಇಲ್ಲಿ ಬರೆದದ್ದನ್ನ ಸಿಟ್ಟಾಗದೇ, ಕಹಿಯಾಗಿದ್ದರೂ ತಿಂದು ಒಂಚೂರು ಉಪ್ಪಿನಕಾಯಿಯೊಂದಿಗೆ ಲೊಟ್ಟೆಹೊಡೆದು ಸ್ವೀಕರಿಸುವ ಮನಸ್ಥಿತಿ ನಮಗಿರಬೇಕು. ಈ ಚೌಕದ ವಿಚಾರಗಳು ನಮ್ಮನ್ನು ಬೆಳೆಯಲು ಸಹಾಯ ಮಾಡುವಂತವು.

 

ಕೊನೆಯ ಚೌಕ “ನನಗೂ ಗೊತ್ತಿಲ್ಲ, ಬೇರೆಯವರಿಗೂ ಗೊತ್ತಿಲ್ಲ” ಎಂಬ unknown ಜಾಗ. ಇಲ್ಲಿ I don’t you, you too don’t know. ನಮಗೂ ನಮ್ಮ ಜೊತೆಯಿರುವವರಿಗೂ ನನ್ನ ಬಗ್ಗೆ ತಿಳಿಯದ, ಬದುಕನ್ನು ನಾವು ಅನುಭವಿಸುತ್ತಾ ಹೋದಂತೆ ತಿಳಿದುಬರುವ ವಿಚಾರಗಳು ಬರುತ್ತವೆ. ಯಾರಾದರೂ ನಿಮಗೆ “ಪೈನ್ ಮರದ ವಾಸನೆ ಇಷ್ಟವಾ?” ಅಂತಲೋ “ಅರ್ಮೇನಿಯನ್ ವೋಡ್ಕಾ ಇಷ್ಟವಾಗುತ್ತಾ” ಅಂತಲೋ ಕೇಳಿದರೆ, ಜೀವನದಲ್ಲೇ ಪೈನ್ ಮರದ ವಾಸನೆ ನೋಡದ, ಅರ್ಮೇನಿಯಾಕ್ಕೆ ಹೋಗದ ನೀವು ಏನು ಹೇಳಬಲ್ಲಿರಿ? “ಗೊತ್ತಿಲ್ಲ ಆ ಮರವನ್ನು ಮೂಸಿದ, ವೋಡ್ಕಾವನ್ನು ಕುಡಿದ ನಂತರವಷ್ಟೇ ಹೇಳಬಲ್ಲೆ” ಎನ್ನುತ್ತೀರಿ. ಈ ನಾಲ್ಕನೇ ಚೌಕದ ಈ ಮಾಹಿತಿ ಮುಂದೆಂದೋ ಪೈನ್ ಮರವನ್ನು ಮೂಸಿದಾಗ ಅದನ್ನು ಇಷ್ಟಪಟ್ಟಾಗ “ಓಹೋ ಪೈನ್ ಮರದ ವಾಸನಗೆ ನನಗಿಷ್ಟ” ಅಥವಾ ಅರ್ಮೇನಿಯನ್ ವೋಡ್ಕಾ ನನಗಾಗಲ್ಲಪ್ಪ, ತೀರಾ ಸ್ಟ್ರಾಂಗ್” ಎಂಬ ಮಾಹಿತಿಗಳು ಮೊದಲನೇ ಚೌಕಕ್ಕೆ ವರ್ಗಾವಣೆಯಾಗುತ್ತವೆ. ಮಾತ್ರವಲ್ಲದೇ ಹೊಸಹೊಸ ಜೀವನಾನುಭವಗಳು ನಮ್ಮ ಬಗ್ಗೆಯೇ ನಮಗೆ ಹೆಚ್ಚೆಚ್ಚು ವಿಚಾರಗಳನ್ನು ತಿಳಿಸುತ್ತವೆ. ಹಿಮಾಚಲಕ್ಕೆ ಮೊದಲ ಪ್ರವಾಸ ಹೋದದಿನ ನನಗೂ ಚಳಿಗೂ ಆಗಿಬರಲ್ಲ ಎಂಬ ವಿಚಾರವೂ, ರಾಕ್ ಸಂಗೀತ ಕೇಳಿದ ದಿನ ವಾಹ್! ಹೀಗೂ ಒಂದು ಸಂಗೀತಪ್ರಕಾರವಿದೆಯೇ. ಇದನ್ನೇ ನಾನು ಇಷ್ಟು ದಿನ ಹುಡುಕುತ್ತಿದ್ದದ್ದು ಎಂಬ ಅಚ್ಚರಿಯೂ ಗಮನಕ್ಕೆ ಬರುತ್ತದೆ.

 

ಮೊದಲ ಪ್ರೀತಿ, ಮದುವೆ, ಮೊತ್ತಮೊದಲ ಬಾರಿಗೆ ಅಪ್ಪ ಅಥವ ಅಮ್ಮನಾದಾಗ, ಮೊದಲ ಬಾರಿಗೆ ಇನ್ನೊಬ್ಬರ ಕೆಲಸಕ್ಕೆ ನಾನು ಜವಾಬ್ದಾರನಾಗುವ ಸೂಪರ್ವೈಸರ್ ಅಥವಾ ಮ್ಯಾನೇಜರ್ ಆದಾಗ, ನನಗೂ ಮತ್ತು ಬೇರೆಯವರಿಗೂ ನನ್ನಬಗ್ಗೆ ಈವರೆಗೂ ತಿಳಿಯದಿದ್ದ ನನ್ನದೇ ವ್ಯಕ್ತಿತ್ವದ ಕೆಲ ಮಜಲುಗಳು ವೇದ್ಯವಾಗುತ್ತಾ ಹೋಗುತ್ತವೆ. ಕೆಲವು ಸ್ವವೇದ್ಯವಾಗಬಹುದು, ಕೆಲವು ಆಗದಿರಬಹುದು. ಆಗಾಗ ಬೇರೆಯವರನ್ನು ಕೇಳಿ ನಮ್ಮ ಬಗ್ಗೆಯೇ ತಿಳಿದುಕೊಂಡಷ್ಟೂ, ತೆರೆದುಕೊಂಡಷ್ಟೂ ನಮಗೆ ನಾವೇ ಸ್ಪುಟವಾಗುತ್ತಾ ಹೋಗುತ್ತೇವೆ. ಹೀಗೆ ಜೀವನ ಬೆಳೆದಂತೆಲ್ಲಾ ನಾವು ನಮ್ಮ unknownಗಳನ್ನು ತಿಳಿಯತ್ತಾ ಹೋಗುತ್ತೇವೆ. ಒಂದು ದಿನ ಈ ಎಲ್ಲಾ unknownಗಳು ತಿಳಿದುಬಂದ ದಿನ ಆತ್ಮಸಾಕ್ಷಾತ್ಕಾರವಾಗುತ್ತದೆ.

 

ಈ ಲೇಖನ ಓದಿದ ನಂತರ ನಿಮ್ಮ ವ್ಯಕ್ತಿತ್ವದ ಮೌಲ್ಯಮಾಪನಕ್ಕೆ ನೀವು ತಯಾರಿದ್ದೀರೇನು? ಜೊತೆಗೊಂದಷ್ಟು ನಿಮ್ಮ ಒಳ್ಳೆಯ ಗೆಳೆಯರನ್ನು ಕೂರಿಸಿಕೊಂಡು ಪರಸ್ಪರರ ವ್ಯಕ್ತಿತ್ವಕ್ಕೊಂದು ಕಿಟಕಿ ಬರೆಯಿರಿ ಹಾಗೂ ಆ ಜೊಹಾರಿ ಕಿಟಕಿಗಳಿಂದ ಹೆಚ್ಚೆಚ್ಚು ಒಳನೋಟಗಳನ್ನು ಪಡೆಯಿರಿ. ನಮ್ಮ ಬಗ್ಗೆ ನಾವು ತಿಳಿಯುವುದೆಷ್ಟು ಮುಖ್ಯವೋ, ನಮ್ಮ ಬಗ್ಗೆ ಬೇರೆಯವರು ತಿಳಿಯುವುದೂ ನಮ್ಮನ್ನು ಒಳ್ಳೆಯ ವ್ಯಕ್ತಿಗಳನ್ನಾಗಿಸಲು ಸಹಾಯ ಮಾಡಬಹುದು. ನಿಮ್ಮ ಸಂತಸ, ದುಃಖ, ಅಸುರಕ್ಷತೆಗಳನ್ನು ನಿಮಗೆ ತೀರಾ ಹತ್ತಿರವಿರುವವರೊಡನೆ ಹಂಚಿಕೊಳ್ಳಿ, ಚರ್ಚಿಸಿ, ತಿದ್ದಿಕೊಳ್ಳಿ, ಪರಿಹಾರ ಕಂಡುಕೊಳ್ಳಿ. ಅವನ್ನು ಗೆಲ್ಲಿ, ಅವುಗಳೆಡೆಗೆ ಮಾತ್ರವಲ್ಲದೇ ಅಂತಹುದೊಂದು ಕ್ಷುಲ್ಲಕ ಅಸುರಕ್ಷತಾಭಾವವಿದ್ದ ನಿಮ್ಮೆಡೆಗೂ ನಕ್ಕು, ಆತ್ಮವಿಶ್ವಾಸದೊಂದಿಗೆ ಮುಂದುವರೆಯಿರಿ.

2 comments on ““ಆತ್ಮಸಾಕ್ಷಾತ್ಕಾರದ ಅಂಗಳಕ್ಕೆ ಹಾರುವ ಮುನ್ನ, ಜೋಹಾರಿಯ ಕಿಟಕಿಯನ್ನು ದಾಟೋಣ”

Karthik Kote

Super Raganna ❤️

Reply
ವೆಂಕಟೇಶ್

ತುಂಬಾ ಉಪಯುಕ್ತ ಮಾಹಿತಿ. ಇಂಥದ್ದೊಂದು ಕಿಟಕಿ ಮೂಲಕ ಬಿಂಬ, ಪ್ರತಿಬಿಂಬಗಳನ್ನು ನೋಡಿ/ತೋರಿ ಚೇತೋಹಾರಿಯಾಗಿ ಮಾತಾಡಬಲ್ಲ ಮನಸ್ಸೂ, ಅವಕಾಶವೂ ಇರುವ ಸ್ನೇಹಿತರು ದಕ್ಕಿದವರೇ ಅದೃಷ್ಟವಂತರು, ಭಾಗ್ಯಶಾಲಿಗಳು.

Reply

Leave a Reply

Your email address will not be published. Required fields are marked *